ಭಕ್ತಿ ಜ್ಞಾನ ಸಮನ್ವಯ

ಧಾರ್ಮಿಕ - 3 Comments
Issue Date : 23.09.2014

ಆಧ್ಯಾತ್ಮಿಕತೆಯೇ ಭಾರತದ  ಆದರ್ಶವೆಂದು ವಿಶ‍್ವವಿಖ್ಯಾತ  ಸ್ವಾಮಿ ವಿವೇಕಾನಂದರು ಹೇಳಿದ್ದರು.  ಆ ಆದರ್ಶವನ್ನು ಭಾರತೀಯರು ಮರೆತಾಗಲ್ಲೆಲ್ಲ ಆಧ್ಯಾತ್ಮಿಕತೆಯ ಪತಾಕೆಯನ್ನು ಬಾರಿ ಬಾರಿಗೂ ಎತ್ತರವಾಗಿ  ಎತ್ತಿ ಹಿಡಿಯಲು ಅವತಾರಪುರುಷರು ಬಹು ಬಾರಿ ಜನ್ಮವೆತ್ತಿದ್ದಾರೆ. ಆದ್ದರಿಂದ  ಭಾರತವು  ಆಧ್ಯಾತ್ಮಿಕತೆಯ ಒಂದು ವಿಗ್ರಹ ಸ್ವರೂಪವೇ ಆಗಿದೆ.  ಈ ಆಧ್ಯಾತ್ಮಿಕತೆಯ ಆಧಾರವೇ  ಜ್ಞಾನ ಮತ್ತು ಭಕ್ತಿ. ಜ್ಞಾನ ಭಕ್ತಿಗಳ ಪ್ರಚಾರಕ್ಕಾಗಿಯೇ ಶ್ರೀ ಪರಮಾತ್ಮನು ಸ್ವತಃ ಗುರುರೂಪವನ್ನು  ತಾಳಿ ಬರುತ್ತಾನೆ. ಆತನೇ ಆಧ್ಯಾತ್ಮಿಕತೆಯ ಅಧಿಪತಿ. ಆತನ ಉಪದೇಶವನ್ನು  ಜೀವನದಲ್ಲಿ ಅನುಸರಿಸಿ  ಜನರು  ಈ ಭವಬಂಧನದಿಂದ  ಮುಕ್ತರಾಗುತ್ತಾರೆ.

ಪರಮಾತ್ಮನ ವೈವಿಧ‍್ಯ

ಒಂದು  ದೃಷ್ಟಿಯಿಂದ ಈ ಜಗತ್ತಿನ  ಸರ್ವ ಪ್ರಾಣಿಗಳೂ  ಶ್ರೀ ಪರಮಾತ್ಮನ ಸ್ವರೂಪಗಳೇ. ಗೀತೆಯಲ್ಲಿ ‘ವಿಷ್ಟಭ್ಯಾಮಿದಂ ಕೃತ್ಸ್ನಮೇಕಾಂಶೇನ ಸ್ಥಿತೋ ಜಗತ್’ ಎಂದು ಹೇಳಿದಂತೆ, ಆತನೇ  ಈ ಸಮಸ್ತ ಪ್ರಪಂಚವನ್ನು ಆತನ ಒಂದೇ ಒಂದು ಅಂಶದಿಂದ  ಧಾರಣೆ ಮಾಡಿ ನೆಲಸಿದ್ದಾನೆ. ಮತ್ತೊಂದು  ದೃಷ್ಟಿಯಿಂದ ‘ಸರ್ವಸ್ಯ ಚಾಹಂಹೃದಿಸನ್ನಿವಿಷ್ಟಃ’ ಆತನೇ  ಅಂತರ್ಯಾಮಿಯಾಗಿ  ಸರ್ವಪ್ರಾಣಿಗಳ ಹೃದಯದಲ್ಲಿ  ನೆಲಸಿದ್ದಾನೆ. ಅದೂ ಅಲ್ಲದೆ , ಧರ್ಮ ಮತ್ತು ಶಾಂತಿಯನ್ನು  ಸ್ಥಾಪಿಸುವುದಕ್ಕಾಗಿ ಆತನೇ  ಗುರುರೂಪವನ್ನು  ತಾಳಿ ಬರುತ್ತಾನೆ. ಅಂತಹ ಗುರುರೂಪವನ್ನು ಧರಿಸಿ ಮಾಯಾಧೀಶನಾಗಿ ಮಾಯೆಗೊಳಪಟ್ಟ ಜೀವಾತ್ಮನಿಗೆ ಪಥಪ್ರದರ್ಶಕನಾಗುತ‍್ತಾನೆ. ಈಶ್ವರನು  ಯುಗ ಯುಗದಲ್ಲೂ ವಿವಿಧ ರೂಪಗಳನ್ನು  ತಾಳಿ ಬಂದರೂ  ಆತನು ಒಬ್ಬನೇ. ಬೇರೆ ಬೇರೆ  ಯುಗಗಳಿಗೆ  ತಕ್ಕ ಉಪದೇಶಗಳನ್ನು ಕೊಡುವುದಕ್ಕಾಗಿಯೇ  ಆತನು  ಬೇರೆ ಬೇರೆ   ರೂಪಗಳನ್ನು  ಧರಿಸುತ್ತಾನೆ, ಅಷ್ಟೆ.

ಹಲವರು ಭಕ್ತಿಗೇ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಏಕೆಂದರೆ  ಅವರ   ಪ್ರಕೃತಿಯ ಮಟ್ಟಕ್ಕೆ ಅದೇ ಸುಲಭ ಮಾರ್ಗವೆಂದು  ತೋರುತ್ತದೆ.  ಅಂತಹವರಿಗೆ ಜ್ಞಾನ ಮಾರ್ಗವೆಂಬುದೊಂದು ಶುಷ್ಕಮಾರ್ಗವಾಗಿದೆ. ನಾಸ್ತಿಕರಾದವರೇ  ಆ ಮಾರ್ಗವನ್ನು  ಅವಲಂಬಿಸುತ್ತಾರೆಂದು  ಅವರು ಹೇಳುತ್ತಾರೆ.  ಜ್ಞಾನಮಾರ್ಗದ ಪಥಿಕರ ಸಂಖ್ಯೆ ಅತ್ಯಂತ ಕಡಿಮೆ. ಏಕೆಂದರೆ , ಅದು  ಬಹಳ  ಕಠಿಣವಾದ ಮಾರ್ಗ. ಗೀತೆಯಲ್ಲಿ  ಶ್ರೀಕೃಷ್ಣನು ಕೂಡ ಹಾಗೆಯೇ  ಹೇಳಿದ್ದಾನೆ.

ಕ್ಲೇಶೋಧಿಕರಸ್ತೇಷಾಮವ್ಯಕ್ತಾಸಕ್ತ ಚೇತಸಾಮ್ |

ಅವ್ಯಕ್ತಾ ಹಿ ಗತಿರ್ದುಖಂ ದೇಹವದ್ಭಿರವಾಪ್ಯತೇ||

“ಅವ್ಯಕ್ತ ಅಂದರೆ  ಇಂದ್ರಿಯಾತೀತ  ನಿರಾಕಾರ ಪರಬ್ರಹ್ಮನ ಉಪಾಸನೆ   ಮಾಡುವ ಯೋಗಿಗಳಿಗೆ  ಕಷ್ಟವು  ಹೆಚ್ಚಾಗಿವೆ. ಏಕೆಂದರೆ, ದೇಹಾತ್ಮವಾದಿಗಳಿಂದ ಅವ್ಯಕ್ತ   ಪರಬ್ರಹ್ಮನ ವಿಷಯಕವಾದ ಮಾರ್ಗವು  ಬಹಳ ಕಷ್ಟದಿಂದ ಹೊಂದಲ್ಪಡುತ್ತದೆ.’’

ಎರಡು ಮಾರ್ಗಗಳು

ಹೀಗಾದರೂ ಭಕ್ತಿ ಮತ್ತು ಜ್ಞಾನ ಮಾರ್ಗಗಳಿಗೆ  ವಿರೋಧವಿಲ್ಲ. ಭಕ್ತಿಗ್ರಂಥಗಳಲ್ಲಿ ನಾವು ಜ್ಞಾನದ   ವಿಷಯವನ್ನು  ಕಾಣಬಹುದು. ಭಕ್ತಿ ಪ್ರಧಾನವಾದ  ಗ್ರಂಥವಾದ ಆ ಭಾಗವತದಲ್ಲಿ  ಪದೇ ಪದೇ ಜ್ಞಾನದ ಮತ್ತು ಅದ್ವೈತದ ವಿಷಯ ಹೇಳಿದುದನ್ನು ಕಾಣಬಹುದು. ಭಕ್ತ ನಾರದ ಮೊದಲಾದವರು ಬ್ರಹ್ಮಜ್ಞಾನವನ್ನು ಖಂಡಿಸುವ  ಬದಲಾಗಿ, ಆ ಜ್ಞಾನವನ್ನೇ  ಹೊಂದುವುದಕ್ಕಾಗಿ ಬಹಳ ತಪಸ್ಸು ಮಾಡಿದ್ದರು.  ಪೂರ್ಣ ‍ಪ್ರೇಮಾವತಾರನಾದ ಶ್ರೀಕೃಷ್ಣನು ಕೂಡ ಆ ಬ್ರಹ್ಮಜ್ಞಾನವನ್ನು ಪಡೆಯುವುದಕ್ಕಾಗಿ ಪ್ರಯತ್ನಿಸಿದ್ದನು. ಅಲ್ಲದೆ ತನ್ನ  ಭಕ್ತ  ಶಿರೋಮಣಿಯಾದ ಉದ್ಧವನನ್ನು  ಕೂಡ ಜ್ಞಾನಾರ್ಜನೆಗಾಗಿ  ಬದರಿಕಾಶ್ರಮಕ್ಕೆ  ಕಳಿಸಿಕೊಟ್ಟಿದ್ದನು.   ಭಕ್ತಿಮತಿಗಳಾದ ಗೋಪಸ್ತ್ರೀಯರಿಗೆ  ಆ ಜ್ಞಾನವನ್ನೀಯುವ   ಸಲುವಾಗಿ  ಶ್ರೀಕೃಷ್ಣನು ಅವರೊಡನೆ ರಾಸಲೀಲೆಯನ್ನಾಡುತ್ತ ಆಡುತ್ತ ಅವರ ಕಣ್ಮರೆಯಾದನು.  ಗೋಪಸ್ತ್ರೀಯರು ಆತನನ್ನು  ಹುಡುಕುತ್ತ ಹುಡುಕುತ್ತ ಕಾಣದೆ  ಶ್ರೀಕೃಷ್ಣನಂತೆ  ಉಡಿಗೆ ತೊಡಿಗೆಗಳನ್ನು  ತೊಟ್ಟು  ತಾವೇ  ಶ್ರೀಕೃಷ್ಣನೆಂದು ಭಾವಿಸುತ್ತ ಕುಣಿದಾಡಿದರು, ಆತನಲ್ಲೇ  ಏಕೀಭವಿಸಿದರು.

ಮಾಯಾರಹಿತ ಪರಮಹಂಸ ಜ್ಞಾನಿಗಳಲ್ಲಿ ಶ್ರೇಷ್ಠನಾದ   ಶುಕಮುನಿಯು  ಶ್ರೀಕೃಷ್ಣಭಕ್ತನಾಗಿದ್ದನು. ಸನಕ ಸನಂದನರು ಪರಮ ಜ್ಞಾನಿಗಳಾಗಿದ್ದರೂ ಶ್ರೀ ಪರಮಾತ್ಮನ ಭಕ್ತರಾಗಿದ್ದರು. ಮಹಾಜ್ಞಾನಿ ಕೃಷ್ಣ ದ್ವೈಪಾಯನ ಮುನಿ  ಭಕ್ತಿ ಗ್ರಂಥವನ್ನು ರಚಿಸಿ  ತಾನು ಶಾಂತಿ ಹೊಂದಿದನು ! ಜ್ಞಾನಸಾಗರನಾದ  ಜಗದ್ಗುರು ಸ್ವಯಂ ಮಹಾದೇವನೇ ಭಕ್ತಿ ಮಾರ್ಗದ ಪ್ರಧಾನ ಪ್ರಚಾರಕನಾಗಿದ್ದನು. ಭಾರತದ ಮೂಲೆ ಮೂಲೆಗೂ ಅದ್ವೈತವನ್ನು  ಪ್ರಚಾರಿಸಿದ ಜ್ಞಾನ ಮತ್ತು  ತ್ಯಾಗದ ಮೂರ್ತಿಮಂತರಾದ   ಸನ್ಯಾಸಿ ಶ್ರೀ ಶಂಕರಾಚಾರ್ಯರು  ಕೂಡ ಶ್ರೀ ದೇವ ದೇವಿಯರ ಭಕ್ತಿಪೂರ್ಣವಾದ ಸ್ತೋತ್ರಗಳನ್ನು ರಚಿಸಿದ್ದರು. ಶ್ರೀ ಮಧ್ವಾಚಾರ್ಯರು ಭಕ್ತಿಮಾರ್ಗವನ್ನು ಪ್ರಚಾರಿಸಿದ್ದರೂ, ಆತನ ಜ್ಞಾನವು  ಅಮೋಘವಾದುದು. ಆತನು ಜ್ಞಾನಮಾರ್ಗವನ್ನು  ದ್ವೇಷಿಸುತ್ತಿದ್ದರೆ ಜ್ಞಾನಮಾರ್ಗವಲಂಬಿಯಾದ ಅಚ್ಯುತಪ್ರೇಕ್ಷರಿಂದ  ಸನ್ಯಾಸ ದೀಕ್ಷೆಯನ್ನು ತೆಗೆದುಕೊಳ್ಳುತ್ತಿರಲಿಲ್ಲ. ಅದೇ ರೀತಿಯಲ್ಲಿ  ಭಕ್ತಿಮಾರ್ಗ ಪ್ರದರ್ಶಕರಾದ ಶ್ರೀ ರಾಮಾನುಜಾಚಾರ್ಯರ ಗುರು ಅದ್ವೈತ ಸನ್ಯಾಸಿ ಜ್ಞಾನಮಾರ್ಗಾವಲಂಬಿಯಾದ  ಯಾದವ ಪ್ರಕಾಶರಾಗಿದ್ದರು. ವಂಗದೇಶದ ಪ್ರೇಮಾವತಾರ ಶ್ರೀ ಗೌರಾಂಗದೇವನ  ಜೀವನವನ್ನು ಪರಿಶೀಲಿಸಿದರೆ ಆತನು ಭಕ್ತಿ ಮಾರ್ಗಪ್ರದರ್ಶಕನಾಗಿದ್ದರೂ, ಮಹಾಜ್ಞಾನಿಯಾಗಿದ್ದನು. ಆತನು ಕೂಡ ಅದ್ವೈತ ಸನ್ಯಾಸಿ  ಕೇಶವ  ಭಾರತಿಯಿಂದ ಸಂನ್ಯಾಸ ದೀಕ್ಷೆಯನ್ನು ತೆಗೆದುಕೊಂಡಿದ್ದನು. ಈ  ಎಲ್ಲ ಮಹಾಪುರುಷರ  ಜೀವನದಿಂದ  ಭಕ್ತಿಜ್ಞಾನಗಳಿರುವ  ಸಮನ್ವಯ ಸ್ಪಷ್ಟವಾಗಿ  ತಿಳಿದುಬರುತ್ತದೆ.

ಆತ್ಮನೆಂಬ ಹಕ್ಕಿಗೆ ಚಿದಾಕಾಶದಲ್ಲಿ ಹಾರಾಡುವುದಕ್ಕೆ ಭಕ್ತಿ ಮತ್ತು ಜ್ಞಾನಗಳೆಂಬ  ಎರಡು ಗರಿಗಳೂ, ಅವುಗಳೊಡನೆ ಯೋಗವೆಂಬ ಬಾಲವೂ ಬೇಕಾಗಿವೆ. ಬಾಲದಿಂದಲೇ  ಹಕ್ಕಿಯು ತನ್ನ ಹಾರಾಟವನ್ನು ಹತೋಟಿಗಿಡುತ್ತದೆ.  ಬಾಲವಿಲ್ಲದಿದ್ದರೆ  ಅದರ ಗುರಿ ತಪ್ಪಿಹೋಗುವುದು. ಹಾಗೆಯೇ  ಆಧ್ಯಾತ್ಮಿಕತೆಯ ಉನ್ನತಿಗೆ  ಜ್ಞಾನ, ಭಕ್ತಿ ಮತ್ತು ಯೋಗ – ಈ ಮೂರೂ ಬೇಕಾಗಿವೆ. ಹಾಗಾದರೆ ಆತ್ಮನು  ಚಿದಾಕಾಶದಲ್ಲಿ  ಎಲ್ಲಿ ಬೇಕೋ  ಅಲ್ಲಿ ಹಾರಾಡಬಹುದು. ಅದರ ಗುರಿಯು  ತಪ್ಪಿಹೋಗಲಾರದು.

ಆಧ್ಯಾತ್ಮಿಕ ಇತಿಹಾಸದಲ್ಲಿ  ಜಗತ್ತನ್ನೇ ಪವಿತ್ರೀಕರಿಸಿದ ಅವತಾರಪುರುಷರಲ್ಲಿ  ಜ್ಞಾನ, ಭಕ್ತಿ  ಮತ್ತು ಯೋಗಗಳ ಸಮನ್ವಯವನ್ನು  ಕಾಣಬಹುದು ! ಆದ್ದರಿಂದಲೇ  ಅವರು ತಮ್ಮ ಅದ್ಭುತವಾದ  ಜೀವನದಿಂದ  ಕಾಮಕಾಂಚನಮಯವಾದ  ಈ ಸಂಸಾರದಲ್ಲಿ  ಹತಾಶೆಗೊಂಡ ಪತಿತ  ಜನರನ್ನು ಉದ್ಧರಿಸಿದರು. ಅಲ್ಲದೆ ವಸಂತಕಾಲದಲ್ಲಿ  ತರುಲತೆಗಳು ಹೊಸ ಜೀವಕಳೆಯನ್ನು  ಹೊಂದುವಂತೆ   ಮೃತಪ್ರಾಯರಾದ  ಜನರಿಗೆ  ಈ ಮಹಾಪುರುಷರು  ಹೊಸ ಜೀವನವನ್ನು ದಾನ ಮಾಡಿದರು. ಈ ಸೊಗಸಾದ ಭಕ್ತಿ ಜ್ಞಾನ ಸಮನ್ವಯವೆಂಬ  ಉದಾರತೆಯಿಂದ  ಈ ಅವತಾರಪುರುಷರು ಜಗತ್ತಿನಲ್ಲಿ ಅತಿ ಅದ್ಭುತವಾದ ಕಾರ್ಯಕಲಾಪಗಳನ್ನು ಮಾಡಿ  ಹೋಗಿದ್ದಾರೆ. ಉದಾಹರಣೆಗಾಗಿ – ಶ್ರೀ ಚೈತನ್ಯದೇವನು  ಹರಿದಾಸನೆಂಬೊಬ್ಬ ಮುಸಲ್ಮಾನ ವ್ಯಕ್ತಿಯನ್ನೂ,  ಹಲವು ಕೀಳು ಜನರನ್ನೂ ತಬ್ಬಿಕೊಂಡು  ತನ್ನ ಶಿಷ್ಯ  ಸಂಪ್ರದಾಯಕ್ಕೆ  ಸೇರಿಕೊಂಡನು. ಏಸುಕ್ರಿಸ್ತನು ಇಂತಹ ಉದಾರತೆಯಿಂದ  ಸಮ್ಯಾರಿಟನ್ ಮಹಿಳೆಯ ಕೈಯಿಂದ  ಆಗಿನ ಸಾಮಾಜಿಕ ರೀತಿನೀತಿಗಳಿಗೆ ವಿರೋಧವಾಗಿ ನೀರನ್ನು  ಕುಡಿದನು. ಅಲ್ಲದೆ  ವ್ಯಭಿಚಾರಿ ಮೇರಿ ಎಂಬವಳ  ಸೇವೆಯನ್ನು ಗ್ರಹಿಸಿದನು.  ಈ ಜ್ಞಾನಭಕ್ತಿಗಳಿಂದ  ಪ್ರೇರಿತನಾಗಿ ಜಾತಿಭೇದ ನಿರ್ವಿಶೇಷವಾಗಿ  ಎಲ್ಲರಿಗೂ ಪರಮ ಸತ್ಯವನ್ನು  ತಿಳಿಸಿಕೊಟ್ಟನು.  ಆ ಸಾಖ್ಯಸಿಂಹನಾದ  ಬುದ್ಧದೇವನು  ಜ್ಞಾನ ಪ್ರೇಮಗಳಿಂದ  ಉದ್ದೀಪಿತನಾಗಿ  ಅದು ಬಿಂಬಸಾರನ  ಯಜ್ಞಕ್ಕೆ  ಬಲಿ  ಕೊಡುವುದಕ್ಕಾಗಿ  ತೆಗೆದುಕೊಂಡು  ಹೋಗುವ  ಆಡಿನ  ಮರಿಗಳ ಪ್ರಾಣವನ್ನು ಉಳಿಸುವುದಕ್ಕಾಗಿ  ತನ್ನ ಜೀವನವನ್ನೇ ಅರ್ಪಿಸಲು ಅಣಿಯಾದನು. ಪೂರ್ಣಾವತಾರ ಗೃಹಸ್ಥ ಸನ್ಯಾಸಿಗಳಿಗೆ  ಆದರ್ಶಸ್ವರೂಪನಾದ, ಜ್ಞಾನ ಭಕ್ತಿ ಪ್ರೇಮಗಳ ಮೂರ್ತಿಮಂತನಾದ ಶ್ರೀಕೃಷ್ಣನು  ಅರ್ಜುನನಿಗೆ  ಈ ರೀತಿ ಉಪದೇಶ ಮಾಡಿದನು.

ಯೇ ಯಥಾ ಮಾಂ ಪ್ರಪದ್ಯಂತೇ ತಾಮ್‍ಸ್ತಥೈವ ಭಜಾಮ್ಯಹಮ್‍|

ಮಮ ವರ್ತ್ಮಾನು ವರ್ತಂತೆ ಮನುಷ್ಯಾಃ ಪಾರ್ಥ ಸರ್ವಶಃ ||

ಗೀತಾ-4-11

“ಮನುಷ್ಯರು ತಮಗೆ  ಬೇಕಾದ  ಮಾರ್ಗವನ್ನು ಅವಲಂಬಿಸಿ ನನ್ನನ್ನು  ಭಜಿಸಲಿ, ಆ ಮಾರ್ಗದಿಂದಲೇ  ಅವರ ಇಚ್ಛೆಯನ್ನು  ನಾನು ಪೂರೈಸುವೆನು.  ಅಂದರೆ  ಆ ಮಾರ್ಗದಿಂದಲೇ ನಾನು ಅವರನ್ನು  ನನ್ನ ಕಡೆಗೆ ಆಕರ್ಷಿಸುವೆನು. ಮನುಷ್ಯರು ಪೂರ್ತಿಯಾಗಿ  ನನ್ನ ಮಾರ್ಗವನ್ನೇ ಅವಲಂಬಿಸುತ್ತಾರೆ.” ಆದ್ದರಿಂದ  ಶ್ರೀಕೃಷ್ಣನು ಭಕ್ತಿ ಮಾರ್ಗಕ್ಕೆ  ಎಷ್ಟು ಪ್ರಾಮುಖ್ಯತೆಯನ್ನು  ಕೊಟ್ಟಿರುತ್ತಾನೋ ಅಷ್ಟೇ ಪ್ರಾಮುಖ್ಯತೆ ಜ್ಞಾನಮಾರ್ಗಕ್ಕೂ  ಕೊಟ್ಟಿರುತ್ತಾನೆಂದು  ಇದರಿಂದ ಸ್ಪಷ್ಟವಾಗುತ್ತದೆ.  ಶ್ರೀರಾಮಕೃಷ್ಣನ ವಿಷಯವಂತೂ ಬೇರೆ ಹೇಳಬೇಕಾಗಿಯೇ ಇಲ್ಲ.  ಆತನು ಅತ್ಯಂತ ಉದಾರತೆಯಿಂದ  ‘ಮತಗಳೆಷ್ಟಿವೆಯೋ ಅಷ್ಟೇ ಪಥಗಳೆಂ’ ಮಹಾ ಸತ್ಯವನ್ನು  ಪ್ರಚಾರಿಸಿ  ಎಲ್ಲ ಮಾರ್ಗಗಳನ್ನೂ ಸಮನ್ವಯಿಸಿದ್ದಾನೆ.

ಭಕ್ತಿ ಮತ್ತು ಜ್ಞಾನ ಉಭಯ  ಪಥಗಳ ಗಮ್ಯಸ್ಥಾನ ಒಂದೇ. ಅವುಗಳ ಉದ್ದೇಶವೂ ಒಂದೇ. ಸಾಧಕರ ಕ್ಷುದ್ರವಾದ ಅಹಂಭಾವವನ್ನು  ನಾಶಗೊಳಿಸುವುದೇ  ಅವುಗಳ ಉದ್ದೇಶ.  ಹಾಗಾದರೆ  ಅವುಗಳ  ನಡುವೆ ವ್ಯತ್ಯಾಸವೆಲ್ಲಿ? ಅವುಗಳನ್ನು  ಬೇರೆ ಬೇರೆ ಮಾರ್ಗಗಳೆಂದು  ಭಾವಿಸುವುದರಲ್ಲಿ ಅಲ್ಲದೆ ಅವುಗಳ ಶಬ್ದಾರ್ಥವನ್ನು  ವಿಕೃತಗೊಳಿಸುವುದರಲ್ಲಿ ವ್ಯತ್ಯಾಸವಿದೆ. ನಾವು ನಮ್ಮ ಮನೋಭಾವನೆಗಳಿಗೆ  ಅನುಗುಣವಾಗಿ ಒಂದೇ ಶಬ್ದದ ಅರ್ಥವನ್ನು  ವಿವಿಧ ತರವಾಗಿ ಮಾಡುತ್ತೇವೆ. ನಮ್ಮ ಪ್ರತಿಪಕ್ಷದವರ ದೃಷ್ಟಿಕೋನವನ್ನು  ತಿಳಿಯಲು ಪ್ರಯಾಸಪಡದಿರುವುದೇ  ನಮ್ಮ  ನಡುವೆ ವಿವಾದಕ್ಕೆ ಕಾರಣ.  ನಾವು ವಿಜಯದ ಪ್ರೇಮಕ್ಕಿಂತ  ಸತ್ಯದ ಪ್ರೇಮಕ್ಕೆ  ಪ್ರಾಮುಖ್ಯತೆಯನ್ನು ಕೊಟ್ಟರೆ, ಪ್ರತಿಪಕ್ಷದವರು  ತಮ್ಮ ದೃಷ್ಟಿಕೋನವನ್ನು  ನಮ್ಮ ಮೇಲೆ ಏತಕ್ಕೆ  ಹೊರಿಸುತ್ತಾರೆಂದು  ತಿಳಿಯಬಹುದು. ಅವರು  ಅದರಲ್ಲಿ  ನಾವು  ಕಾಣದೊಂದು  ಬೇರೆ ಪ್ರಕಾಶವನ್ನು ಕಂಡಿದ್ದಾರೆಂದು ನಮಗೆ ಸ್ಪಷ್ಟವಾಗಿ ತಿಳಿಯುವುದು. ಇದನ್ನೇ ತಿಳಿದುಕೊಂಡರೆ ಉಭಯ ದೃಷ್ಟಿಕೋನಗಳನ್ನು  ಸರಿಹೊಂದಿಸುವಂತೆ  ನಾವಿಬ್ಬರೂ ಪ್ರಯತ್ನಿಸುವೆವು. ಶ್ರೀರಾಮಕೃಷ್ಣನು  ಹೀಗೆನ್ನುತ್ತಿದ್ದನು. “ಶ್ರೀ ಭಗವಾನನ ವಿಷಯವಂತೂ ಇರಲಿ, ಯಾವ ವಸ್ತುವಿನ ವಿಷಯದಲ್ಲೇ ಆಗಲಿ, ನಾವು  ‘ಇತಿಮಿತಿ’ ಮಾಡಬಾರದು. ಹಾಗೆ ‘ಇತಿಮಿತಿ’  ಮಾಡುವುದು ಹೀನಬುದ್ಧಿಯ ಕೆಲಸ.”

‘ಅನಂತ’ ದರ್ಶನ

ಈ ವಿಶ‍್ವ ಬ್ರಹ್ಮಾಂಡವೆಂಬುದು ಅನಂತ ಈಶ್ವರನ ಲೀಲೆ. ಅದರಲ್ಲಿನ ಒಂದು ಅಣುವಿನಲ್ಲಿ ಕೂಡ ಅನಂತ ಈಶ್ವರನ ಮುದ್ರೆಯನ್ನೊತ್ತಿದೆ. ನಿಜವಾಗಿ ಹೇಳುವುದಾರೆ ಒಂದು ಪುಟ್ಟ ತೃಣದ  ಎಸಳಿನ ರಹಸ್ಯವನ್ನು ಯಾರು ತಾನೆ ಹಿಡಿಯಬಲ್ಲರು? ಒಂದು  ಸಣ್ಣ ಬೀಜದಲ್ಲಿ ಒಂದು ದೊಡ್ಡ ಮರದ   ಶಕ್ತಿ ಅಡಕವಾಗಿರುವ ರಹಸ್ಯವನ್ನು ಯಾರು ತಿಳಿಯಬಲ್ಲರು?  ಆದ್ದರಿಂದ  ನಮ್ಮ ವೇದಗಳು ಈ ರೀತಿ ಘೋಷಿಸುತ್ತವೆ:

ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ|

ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ||

“ಈಶ‍್ವರನು ಪೂರ್ಣನಾಗಿದ್ದಾನೆ. ವಿಶ್ವಬ್ರಹ್ಮಾಂಡವು  ಕೂಡ ಪೂರ್ಣವಾಗಿದೆ. ಪೂರ್ಣನಾದ ಈಶ್ವರನಿಂದ ಈ ಪೂರ್ಣವಾದ  ವಿಶ್ವ ಬ್ರಹ್ಮಾಂಡವು ಬಂದಿರುತ್ತದೆ. ಪೂರ್ಣದಿಂದ ಪೂರ್ಣವನ್ನು ಕಳೆದರೆ ಪೂರ್ಣವೇ ಉಳಿಯುತ್ತದೆ. ”

ಪ್ರಕೃತ ಪಕ್ಷಕ್ಕೆ ಮಾನವನು ಅನಂತನಾಗಿದ್ದಾನೆ.  ಆತನು ಅನಂತನೊಡನೆ ನಿರಂತರವೂ ಲೀಲೆಯನ್ನಾಡುತ್ತಾನೆ.  ಅಂಗೈ ಮೇಲಿದ್ದ ನೆಲ್ಲಿಕಾಯಿಯಂತೆ ಆತನು ಅನಂತವನ್ನು ಹಿಡಿದುಕೊಂಡು  ಸ್ಪರ್ಶಿಸುತ್ತಾನೆ, ಕಾಣುತ್ತಾನೆ, ಆತನ ವಿಷಯವಾಗಿ ಕೇಳುತ್ತಾನೆ ಇತ್ಯಾದಿ. ಯಾವುದೋ ಒಂದು ದೋಷದಿಂದ ಅನಂತವಾದ ಆತನು ಸಾಂತನೆಂದು ಭಾವಿಸುತ್ತಾನೆ.  ಆ ದೋಷವನ್ನು ಹೋಗಲಾಡಿಸಬೇಕಾದರೆ ಆತನು ಆ ಅನಂತನ ಸಾಧನೆ ಮಾಡಬೇಕು; ಎಲ್ಲರಲ್ಲಿಯೂ  ಅನಂತನನ್ನೇ ಕಾಣುವ ಅಭ್ಯಾಸದಲ್ಲಿ ತೊಡಗಬೇಕು. ಆತನು ತನ್ನ ತಾಯಿತಂದೆಗಳಲ್ಲಿ, ಹೆಂಡತಿ ಮಕ್ಕಳಲ್ಲಿ , ನೆಂಟರಿಷ್ಟರಲ್ಲಿ, ಉಚ್ಚ ನೀಚರಲ್ಲಿ, ಕಿರಿಯ ಹಿರಿಯರಲ್ಲಿ, ಸ್ಥೂಲ ಸೂಕ್ಷ್ಮ ಸರ್ವ ವಸ್ತುಗಳಲ್ಲಿ, ಸರ್ವಾವಸ್ಥೆಗಳಲ್ಲಿ  ಅನಂತನನ್ನೇ ಕಾಣಬೇಕು. ಹಾಗಾದರೆ ಈ ಜಗತ್ತೇ ಆತನಿಗೆ ಸ್ವರ್ಗವೆಂದು ತೋರುವುದು. ದುಃಖ, ಮೋಹ, ಜನನ-ಮರಣಗಳ ಭಯ ತೊಲಗುವುದು. ಧರ್ಮ, ಭಕ್ತಿ, ಜ್ಞಾನ, ಮುಕ್ತಿ ಇತ್ಯಾದಿ ಶಬ್ದಗಳ ಕಾಲ್ಪನಿಕ ಅರ್ಥವು  ಆತನನ್ನು ತಪ್ಪುದಾರಿಗೆ  ಸೆಳೆಯದು. ಆತನು ಎಲ್ಲರಲ್ಲಿಯೂ ಅನಂತನನ್ನೇ  ಕಾಣುವನು  ಆ ಅನಂತನ ಸರ್ವಾಂಗಸುಂದರವಾದ ಮುಖವನ್ನೇ ಕಾಣುವನು.  ‘ಇತಿಮಿತಿ’ ಮಾಡದಿರುವುದೇ ಈ ಅನಂತನ ದರ್ಶನದ  ಮೊದಲ ಸೋಪಾನ.

‘ನಾನು’ ಮತ್ತು ‘ನೀನು’ ಎಂಬ ಈ ಎರಡು ಶಬ್ದಗಳನ್ನು  ಬಾರಿ ಬಾರಿಗೂ ಉಚ್ಚರಿಸುವಂತೆ  ಬೇರೆ ಯಾವ ಶಬ್ದಗಳನ್ನಾದರೂ ಉಚ್ಚರಿಸುವುದಿಲ್ಲ. ಈ ಶಬ್ದಗಳಲ್ಲಿರುವ  ವ್ಯತ್ಯಾಸ ಸಾಧರಣವಾಗಿ ಎಲ್ಲರಿಗೂ ತಿಳಿದ ವಿಷಯ. ಈ ಶಬ್ದಗಳು  ಬೇರೆ ಬೇರೆ ಮನೋಭಾವಗಳನ್ನು ವ್ಯಕ್ತಪಡಿಸುತ್ತವೆ ಎಂದು ತಿಳಿಯುವುದಕ್ಕೆ  ಯಾರಿಗೂ ಅಸಾಧ‍್ಯವಲ್ಲ. ಆದರೆ ಈ ಶಬ್ದಗಳ ಮೂಲಕ ಭಕ್ತಿಗೂ ಜ್ಞಾನಕ್ಕೂ ಇರುವ  ವ್ಯತ್ಯಾಸ ವ್ಯಕ್ತವಾಗುವಷ್ಟು ಬೇರೆ ಯಾವ ಶಬ್ದಗಳಿಂದಲೂ ವ್ಯಕ್ತವಾಗದು.

ಪರಮಾತ್ಮ –ಭಕ್ತ

‘ನೀನು’ ಮತ್ತು ಭಕ್ತಿ- ಭಕ್ತನು “ದೇವರೇ, ನಾನಲ್ಲ, ಎಲ್ಲವೂ ನೀನೇ ಆಗಿದ್ದಿ. ನಾನು ಕಾಮಕಾಂಚನದಲ್ಲಿ ಮುಳುಗಿದ್ದೇನೆ; ರೋಗ ಭೋಗಗಳಲ್ಲಿ, ದುಃಖ ತಾಪತ್ರಯಗಳಲ್ಲಿ  ಮಗ್ನನಾಗಿದ್ದೇನೆ, ಕಾಮಕ್ರೋಧಗಳು ನನ್ನನ್ನು ಸದಾ ಕಾಡುತ್ತಿವೆ; ಇವುಗಳಿಂದ ಉದ್ಧಾರವಾಗಲು  ನಾನು ದಾರಿ ಕಾಣದಾಗಿದ್ದೇನೆ; ನನ್ನ ಮನಸ್ಸು ನಾಮ ಖ್ಯಾತಿಗಳನ್ನು  ಪಡೆಯಲು  ಧಾವಿಸುತ್ತದೆ; ನಾನು ಬಲು ಶಕ್ತಿಹೀನನಾಗಿದ್ದೇನೆ. ಭಕ್ತಿಯಿಲ್ಲದೆ, ಸಾಧನೆಯಿಲ್ಲದೆ ನಿನ್ನನ್ನು  ಸಾಕ್ಷಾತ್ಕರಿಸುವುದೆಂದರೆ ಹೇಗೆ? ನನಗದು ಆಕಾಶ ಕುಸುಮದಂತೆ  ಅಸಾಧ್ಯವಾಗಿದೆ.  ಆದರೆ ನೀನು ನನಗೆ  ಅತ್ಯಂತ ಪ್ರಿಯನು ! ನನ್ನ ಸರ್ವಸ್ವವೂ ನೀನೇ ಆಗಿದ್ದೀಯೇ; ನಿನ್ನ ಇಚ್ಛೆಯಂತಾಗಲಿ!” ಎಂದು ಪ್ರಾರ್ಥಿಸುತ್ತಾನೆ. ಈ ರೀತಿಯಾಗಿ ಭಕ್ತನು ಶ್ರೀ ಪರಮಾತ್ಮನನ್ನು ಎಲ್ಲೆಲ್ಲಿಯೂ ಕಾಣುತ್ತಾನೆ. ಆತನ ಇಚ್ಛೆಯಿಂದಲೇ ಚಂದ್ರ, ಸೂರ್ಯ, ಗ್ರಹ, ನಕ್ಷತ್ರಗಳು ಉರುಳುತ್ತಿವೆ; ಬೆಂಕಿಯು  ಪ್ರಕಾಶವವನ್ನೀಯುತ್ತದೆ; ಯಮನು  ಎಲ್ಲವನ್ನೂ  ಧ್ವಂಸಿಸುತ್ತಾನೆ. ಭಕ್ತನಿಗೆ ಶ‍್ರೀ ಪರಮಾತ್ಮನು  ಪ್ರಿಯರಲ್ಲಿ ಪ್ರಿಯನು, ಆತನ ಕಣ್ಣಿಗೆ ಬೆಳಕು, ಆತನ ಬಾಹುಗಳ ಬಲ; ಆತನು ಪ್ರೇಮ ಸ್ವರೂಪನೂ ಆಗಿದ್ದಾನೆ. ಆತನ ಸೌಂದರ್ಯ ಎಲ್ಲ ಸೌಂದರ್ಯಕ್ಕೂ ಮಿಗಿಲಾಗಿದೆ ; ಆತನ ಶಕ್ತಿ ಅಪಾರವಾದುದು. ಆತನು  ಶ್ರೇಷ್ಠರಲ್ಲಿ ಶ್ರೇಷ್ಠನು. ಆ ರೀತಿಯಾಗಿ  ಭಕ್ತನು ತನ್ನ ಪರಮಾತ್ಮನನ್ನು  ಅತ್ಯಂತ  ಪೂಜ್ಯ ಭಾವನೆಯಿಂದ ‘ನೀನು’  ಎಂಬ ಶಬ್ದದ ಮೂಲಕ  ಭಜಿಸುತ್ತಾನೆ.  ನಾರದನು ತನ್ನ ಭಕ್ತಿ ಸೂತ್ರದಲ್ಲಿ  ‘ಸಾ ಕಸ್ಮೈ ಪರಮ ಪ್ರೇಮರೂಪಾ’ ಎಂದು ಹೇಳಿದಂತೆ ಭಕ್ತನ ಪ್ರೇಮ ಅಪಾರವಾದುದು.

 ನಾಲ್ಕು ಪ್ರಕಾರದ  ಭಕ್ತರು

ಶ್ರೀಕೃಷ್ಣನು ಗೀತೆಯಲ್ಲಿ ಹೇಳಿದಂತೆ  ನಾಲ್ಕು ಬಗೆಯ ಭಕ್ತರಿದ್ದಾರೆ. ಆರ್ತೋಜಿಜ್ಞಾಸುರರ್ಥಾರ್ಥೀ ಜ್ಞಾನೀ ಚ  ಭರತರ್ಷಭ-ಆರ್ತಭಕ್ತ, ಜಿಜ್ಞಾಸು ಭಕ್ತ, ಅರ್ಥಾರ್ಥಿ ಭಕ್ತ, ಜ್ಞಾನೀಭಕ್ತ. ಆರ್ತಭಕ್ತರು  ಸಂಸಾರ ತಾಪತ್ರಯಗಳಿಂದ  ಬೆಂದು ಬಳಲಿ ದಿಕ್ಕು ತೋಚದೆ ಕಟ್ಟಕಡೆಗೆ ‘ನೀನೇ ಗತಿ’ ಎಂದು ಶ್ರೀ ದೇವರಿಗೆ ಮೊರೆಯಿಟ್ಟು  ಕಂಬನಿಗರೆಯುತ್ತಾರೆ.  ಶ್ರೀ ದೇವರು ಕೂಡ ಅವರ ದುಃಖ  ಕಷ್ಟಗಳನ್ನು  ಅಪಹರಿಸುತ್ತಾನೆ. ಜಿಜ್ಞಾಸು ಭಕ್ತರು ತತ್ವವನ್ನು ತಿಳಿಯಲು ಪ್ರಯತ್ನಿಸುತ್ತಾರೆ. ಈ ವಿಶ್ವಕ್ಕೊಬ್ಬ ಸೃಷ್ಟಿಕರ್ತನಿದ್ದಾನೋ ಇಲ್ಲವೋ ಎಂದು ವಿಚಾರಿಸುತ್ತಾರೆ.  ಆತನನ್ನು ಕಾಣಬೇಕೆಂದು  ಇಹಪರ ಸಂಸಾರ ಸುಖವನ್ನೆಲ್ಲ ತೊರೆಯುತ್ತಾರೆ. ನಿರ್ಜನಸ್ಥಾನಕ್ಕೆ  ಹೋಗಿ ಧ್ಯಾನ ಮಗ್ನರಾಗುತ್ತಾರೆ. ಸಾಧುಪುರುಷರ  ಸಹವಾಸದಲ್ಲಿದ್ದು ಅವರಿಂದ ಶ್ರೀ ಪರಮಾತ್ಮನನ್ನು  ಕುರಿತು ತಿಳಿದುಕೊಳ್ಳುತ್ತಾರೆ.  ಇಂತಹವರೇ ಜಿಜ್ಞಾಸು ಭಕ್ತರು. ಅರ್ಥಾರ್ಥೀ ಭಕ್ತರು ತಮ್ಮ ಸಾಂಸಾರಿಕ ಇಚ್ಛೆಗಳನ್ನು  ಪೂರೈಸುವುದಕ್ಕಾಗಿ ಶ್ರೀ ಪರಮಾತ್ಮನನ್ನು ಪ್ರಾರ್ಥಿಸುತ್ತಾರೆ.  ಜ್ಞಾನೀಭಕ್ತರು ಎಲ್ಲ ಭಕ್ತರಿಗಿಂತಲೂ  ಶ್ರೇಷ್ಠ ಭಕ್ತರು.

ತೇಷಾಂ ಜ್ಞಾನೀ ನಿತ್ಯಯುಕ್ತಃ ಏಕಭಕ್ತಿರ್ವಿಶಿಷ್ಯತೆ|

ಪ್ರಿಯೋಹಿ ಜ್ಞಾನಿನೋsತ್ಯರ್ಥ ಮಹಂ  ಸ ಚ ಮಮ ಪ್ರಿಯಃ ||

ಎಂದು ಶ್ರೀಕೃಷ್ಣನೇ ಹೇಳಿದ್ದಾನೆ. ಜ್ಞಾನೀಭಕ್ತರು ನಿತ್ಯಯುಕ್ತರೂ ಅನನ್ಯ  ಭಕ್ತಿ ಪರಾಯಣರೂ ಆಗಿರುವುದರಿಂದ ಅವರೇ ಭಕ್ತರಲ್ಲಿ ಶ್ರೇಷ್ಠರು. ಏಕೆಂದರೆ  ದೇವರು  ಅವರಿಗೆ   ಅತ್ಯಂತ ಪ್ರಿಯರಾಗಿದ್ದಾರೆ.  ಜ್ಞಾನೀಭಕ್ತರ ಆಂತರ್ಯವು  ಪರಿಶುದ್ಧವಾಗಿದೆ. ಅವರಲ್ಲಿ ಕಾಮಕಾಂಚನಾಸಕ್ತಿ ಲೇಶವಾದರೂ ಇಲ್ಲ. ಆದ್ದರಿಂದ ಜ್ಞಾನೀಭಕ್ತರ ಪ್ರೇಮವು  ಅನನ್ಯವಾದುದು.  ಅವರ ಪ್ರೇಮಕ್ಕೆ  ಎಲ್ಲೆಯೇ ಇಲ್ಲ. ನೀರಿನ ಪ್ರವಾಹದಂತೆ ಆ ಪ್ರೇಮವು ಅಂತಹ ಭಕ್ತರನ್ನು  ನಿರಂತರವೂ ಶ್ರೀ ಪರಮಾತ್ಮನ ಪಾದಾರವಿಂದಕ್ಕೊಯ್ಯುತ್ತದೆ. ನಮ್ಮ ಗ್ರಂಥದಲ್ಲಿ ಆ ಪ್ರೇಮವನ್ನು  ತೈಲ ಪ್ರವಾಹಕ್ಕೆ  ಸರಿಹೊಂದಿಸಿದ್ದಾರೆ. ಹೇಗೆಂದರೆ, ಎಣ್ಣೆ ಒಂದು ಪಾತ್ರದಿಂದ ಇನ್ನೊಂದು ಪಾತ್ರಕ್ಕೆ  ಹೊಯ್ಯುತ್ತಿರುವಾಗ ಅದು ಎಡೆಬಿಡದೆ ಒಂದೇ ಪ್ರವಾಹದಿಂದ ಹೇಗೆ ಬೀಳುತ್ತದೋ ಹಾಗೆಯೇ ಈ ಅನನ್ಯ ಪ್ರೇಮದಿಂದ ಅಂತಹ ಭಕ್ತರು  ಶ್ರೀ ಪರಮಾತ್ಮನನ್ನೇ  ನಿರಂತರವೂ ಸ್ಮರಿಸುತ್ತಾರೆ. ‘ವಾಸುದೇವ  ಸರ್ವಮಿತಿ ಸ ಮಹಾತ್ಮಾ ಸುದುರ್ಲಭಃ’ ಎಂದು ಗೀತೆಯಲ್ಲಿ ಹೇಳಿದಂತೆ ಸರ್ವತ್ರವೂ ಶ್ರೀ ಪರಮಾತ್ಮನನ್ನು ಕಾಣುವ  ಮಹಾತ್ಮನು ದುರ್ಲಭನು. ಅಂತಹ ಜ್ಞಾನೀಭಕ್ತರು ಅಪೂರ್ವ ಪುರುಷರು.  ಅವರಿಗೆ ಅಹಂಭಾವ   ಲೇಶವಾದರೂ ಇಲ್ಲ. ಅವರ ಅಹಂಭಾವವು ಕೂಡ  ಚಿರಕಾಲ  ವಾಸುದೇವಮಯವಾಗಿದೆ. ಜ್ಞಾನೀಭಕ್ತನು ತಾನು ಸಾಕ್ಷಿಸ್ವರೂಪನೆಂದೂ,  ಎಲ್ಲ ಜೀವರಾಶಿಯಲ್ಲಿ  ತಾನು ಇದ್ದಾನೆಂದೂ ಅನುಭವಿಸುತ್ತಾನೆ.   ಮನೋಬುದ್ಧಿಗಳು  ತನ್ನ ಶಕ್ತಿಯಿಂದಲೇ  ಚಲಿಸುತ್ತವೆ ಎಂದು ಆತನು ಪ್ರತ್ಯಕ್ಷೀಕರಿಸುತ್ತಾನೆ.  ಜಾಗ್ರತ , ಸ್ವಪ್ನ ಮತ್ತು ಸುಷುಪ್ತಿ ಎಂಬ ಅವಸ್ಥಾತ್ರಯಗಳಲ್ಲೂ, ಎಲ್ಲ ಪ್ರಾಣಿಗಳಲ್ಲೂ ತಾನು ಇದ್ದಾನೆಂದೂ, ಎಲ್ಲ ಪ್ರಾಣಿಗಳೂ  ತನ್ನಲ್ಲಿ ಇದ್ದಾವೆ ಎಂದೂ ತಿಳಿಯುತ್ತಾನೆ.  ಇಂತಹ ಜ್ಞಾನ ಮಾನವನಿಗೆ  ಬಹುಕಾಲದ ಸಾಧನೆಯ ಶಕ್ತಿಯಿಂದ ಹುಟ್ಟುತ್ತದೆ.  ಶ್ರೀ ಪರಮಾತ್ಮನ  ಪ್ರೇಮ ಭಕ್ತಿಯಿಂದಲೇ ಇಂತಹ ಜ್ಞಾನವನ್ನು  ಪಡೆಯಬಹುದು.  ಕಾಮುಕನಿಗೆ  ಭೋಗಸುಖದಲ್ಲಿರುವ ಪ್ರೀತಿ, ಸತಿಗೆ ತನ್ನ ಪತಿಯಲ್ಲಿರುವ  ಪ್ರೀತಿ, ಕೃಪಣನಿಗೆ  ತನ್ನ  ಧನಸಂಪತ್ತಿನ  ಮೇಲಿರುವ ಪ್ರೀತಿ- ಈ ಮೂರು ಪ್ರೀತಿಗಳನ್ನು  ಒಟ್ಟುಗೂಡಿಸಿ ಜ್ಞಾನೀಭಕ್ತನು  ಶ್ರೀದೇವರಿಗೆ ಅರ್ಪಿಸುತ್ತಾನೆ.  ಅಂತಹ ಪ್ರೀತಿ ಪ್ರಹ್ಲಾದನಿಗಿತ್ತು.  ಆತನು ಈ ರೀತಿ ಪಾರ್ಥಿಸುತ್ತಿದ್ದನು.

ಯಾ ಪ್ರೀತಿರವಿವೇಕೀನಾಂ ವಿಷಯೆಷ್ವನಪಾಯಿನಿ |

ತ್ವಾಮನುಸ್ಮರತಃ ಸಾ ಮೇ ಹೃದಯಾನ್ಮಾಪಸರ್ಪತು ||

“ಓ ಪರಮಾತ್ಮನೇ, ವಿಷಯಾಸಕ್ತರು ಯಾವ  ಪ್ರೀತ್ಯಾದರಗಳಿಂದ  ಭೋಗ ಸುಖವನ್ನು  ಅನುಭವಿಸುತ್ತಾರೋ, ಅಂತಹ ಪ್ರೀತ್ಯಾದರಗಳೇ ನಿನ್ನನ್ನು  ಸ್ಮರಿಸುತ್ತಿದ್ದಾಗ ನನ್ನ ಹೃದಯದಲ್ಲಿ  ತುಂಬಿ   ಹೋಗಲಿ, ಅರ್ಥಾತ್ ನನ್ನ ಪ್ರೇಮವು  ನಿನ್ನ ಮೇಲೆಯೇ  ಆವರಿಸಿ ಇರಲಿ.”

ಭಕ್ತಿಯ ವಿವಿಧ ರೂಪಗಳು

ವೈಷ್ಣವಗ್ರಂಥಕಾರರು ಈ ಪ್ರೇಮಭಕ್ತಿಯನ್ನು ಶಾಂತ, ಹಾಸ್ಯ, ಸಖ್ಯ, ವಾತ್ಸಲ್ಯ ಮತ್ತು ಮಧುರ ಎಂದು  ಐದು ವಿಭಾಗಗಳನ್ನಾಗಿ  ಮಾಡಿದ್ದಾರೆ . ಸಾಧಾರಣವಾಗಿ ಮನುಷ್ಯನು  ತನ್ನ ನೆಂಟರಿಷ್ಟರನ್ನು  ಬಗೆ ಬಗೆಯಾಗಿ ಪ್ರೀತಿಸಿ ಅವರೊಡನೆ ಬೇರೆ ಬೇರೆ  ಸಂಬಂಧವನ್ನು  ಇಟ್ಟುಕೊಳ್ಳುವಂತೆ ಶ್ರೀ ದೇವರಲ್ಲಿ  ಕೂಡ ಅಂತಹ  ಸಂಬಂಧವನ್ನು ಇಟ್ಟುಕೊಂಡು  ಅದರಂತೆ ನಡೆದು ಕೊಂಡರೆ  ಆತನನ್ನು ಹೊಂದಬಹುದೆಂದು ಅವರು ಹೇಳಿದ್ದಾರೆ. ಋಷಿಗಳು ಧ್ಯಾನದ ಮೂಲಕ  ಶ್ರೀ ಪರಮಾತ್ಮನನ್ನು  ಶಾಂತಭಕ್ತಿಯಿಂದ  ಕಾಣುತ್ತಾರೆ ; ಶ್ರೀರಾಮಚಂದ್ರನಲ್ಲಿ  ಹನುಮಂತನಿಗಿರುವ   ಭಕ್ತಿಯೇ ದಾಸ್ಯ  ಪ್ರೇಮ, ಶ್ರೀಕೃಷ್ಣನಲ್ಲಿ  ಅರ್ಜುನನಿಗಿರುವ  ಭಕ್ತಿಯೇ ದಾಸ್ಯ ಪ್ರೇಮ, ಬಾಲಕೃಷ್ಣನಲ್ಲಿ ಯಶೋಧೆಗಿರುವ ಭಕ್ತಿಯೇ ವಾತ್ಸಲ್ಯ ಪ್ರೇಮ; ಅಲ್ಲದೆ ಶ್ರೀಕೃಷ್ಣನಲ್ಲಿ ರಾಧಾ ರಾಣಿಗಿರುವ ಭಕ್ತಿಯೇ ಮಧುರ ಪ್ರೇಮ. ಮಹಾಭಾರತದಲ್ಲಿ ಒಬ್ಬ ಶ್ರೀಕೃಷ್ಣನಲ್ಲಿ  ಬೇರೆ ಬೇರೆ ಸಂಬಂಧವನ್ನಿಟ್ಟುಕೊಂಡು  ಆತನು ಪ್ರೀತಿಸುತ್ತಿದ್ದುದನ್ನು  ಕಾಣಬಹುದು. ವಿದುರನು ಸೇವಕನ ಭಾವದಿಂದ  ಶ‍್ರೀಕೃಷ್ಣನನ್ನು ಪೂಜಿಸುತ್ತಿದ್ದನು, ಅರ್ಜುನನು ಸಖ್ಯಭಾವದಿಂದಲೂ, ಉದ್ದವನು  ಜ್ಞಾನೀಭಕ್ತನ ಭಾವದಿಂದಲೂ , ಗೋಪಸ್ತ್ರೀಯರು ಮಧುರ  ಭಾವದಿಂದಲೂ  ಆತನನ್ನು ಭಜಿಸುತ್ತಿದ್ದರು. ಮಧುರಭಾವವೇ ಪ್ರೇಮದ ಪರಾಕಾಷ್ಠೆ. ರಾಸಲೀಲೆಯಲ್ಲಿ  ಶ್ರೀಕೃಷ್ಣನ ವೇಣುನಾದವನ್ನು  ಕೇಳಿದೊಡನೆ  ಗೋಪಸ್ತ್ರೀಯರು ತಂತಮ್ಮ  ಗೃಹಕೃತ್ಯವನ್ನು  ತೊರೆದು ಆತನ ಬಳಿ ಧಾವಿಸಿ ಬಂದರು. ಆಗ ಅವರು  ತಮ್ಮ ಪತಿಪುತ್ರರನ್ನೂ ತಮ್ಮನ್ನೂ  ಮರೆತು ಶ್ರೀಕೃಷ್ಣಧ್ಯಾನಮಗ್ನರಾಗಿ  ಬಂದರು.  ಅವರಲ್ಲೊಬ್ಬಳನ್ನು ಮನೆಯಲ್ಲೇ  ಬಂಧನದಲ್ಲಿಟ್ಟಿದ್ದರಿಂದ ಅವಳಿಗೆ  ಶ್ರೀಕೃಷ್ಣನ ಬಳಿ ಹೋಗಲಾಗಲ್ಲಿಲ್ಲ. ಆದರೆ ಅವಳು ಶ್ರೀಕೃಷ್ಣಧ್ಯಾನಮಗ್ನಳಾಗಿ ತನ್ನ ಕೋಣೆಯಲ್ಲೇ ದೇಹತ್ಯಾಗ ಮಾಡಿ ಆತನನ್ನು  ಸೇರಿದಳೆಂದು  ಹೇಳಿಕೆ ಇದೆ.  ಗೋಪಸ್ತ್ರೀಯರ ಪ್ರೇಮ ಅಷ್ಟು ಅಪೂರ್ವವಾಗಿತ್ತು. ಇಂತಹ ಪ್ರೇಮದಿಂದ ಭಕ್ತನು ಪರಮಾತ್ಮನಲ್ಲಿ  ಏಕೀಭವಿಸುತ್ತಾನೆ. ರಾಧಾರಾಣಿಯ  ಪ್ರೇಮ ಹೀಗಿತ್ತು. ಅವಳ ಸಖಿ ಒಂದು ದಿನ ಅವಳನ್ನು ‘ನಿನಗೂ ಶ್ರೀಕೃಷ್ಣನಿಗೂ ಇರುವ  ಸಂಬಂಧವೇನು?’ ಎಂದು ಕೇಳಿದಾಗ ‘ನಾಸೌ ರಮಣ , ನಾಹಂ ರಮಣೀ’ ಎಂದು ಉತ್ತರವನ್ನಿತ್ತಳು- ಅರ್ಥಾತ್ ‘ಶ್ರೀಕೃಷ್ಣನೊಬ್ಬ ಪರಪುರುಷನೆಂದೂ ನಾನೊಬ್ಬ ಸ್ತ್ರೀ ಶರೀರಧಾರಿ ಎಂದೂ ಮರೆತೇಬಿಟ್ಟಿದ್ದೇನೆ. ನನ್ನ ಪ್ರೇಮ ದೇಹಕ್ಕೆ ಸಂಬಂಧಪಟ್ಟಿದ್ದಲ್ಲ. ಅದು ಆಧ್ಯಾತ್ಮಿಕ ಪ್ರೇಮವಾಗಿದೆ.’ ಭಕ್ತಿಯ ಪರಾಕಾಷ್ಠೆಯಲ್ಲಿ  ಭಕ್ತನು  ತನ್ನ  ವ್ಯಕ್ತಿತ್ವವನ್ನು ಮರೆತುಬಿಡುತ್ತಾನೆ.  ಅಂದರೆ  ತನ್ನ ಕ್ಷುದ್ರವಾದ ಅಹಂಭಾವವನ್ನು  ತೊರೆಯುತ್ತಾನೆ. ಇದೇ ಭಕ್ತಿ ಸಾಧನೆಯ ಕೊನೆಯ ಪರಿಣಾಮ. ಜ್ಞಾನ ಸಾಧನೆಯ ಪರಿಣಾಮವೂ ಕೂಡ  ಇದೇ. ಜ್ಞಾನಸಾಧಕನು ತನ್ನ ಕ್ಷುದ್ರವಾದ ಅಹಂಭಾವವನ್ನು ಆ ಮಹತ್ತಾದ ಅಹಂಭಾವದಲ್ಲಿ  ಮುಳುಗಿಸುತ್ತಾನೆ.

 ‘ನಾನು ಮತ್ತು ಜ್ಞಾನಿ’ ಅಂದರೆ  ಜ್ಞಾನಿಯು  ತನ್ನ ದೇಹ ಮನಸ್ಸುಗಳೆಂಬುದು  ನಿತ್ಯಪರಿವರ್ತನಶೀಲವೆಂದು ಅನುಭವಿಸುತ್ತಾನೆ. ಅವುಗಳಿಗೆ ಜನನ ಮರಣಾದಿ ಷಡ್ವಿಕಾರಗಳಿವೆ, ಏರಿಳಿತಗಳಿವೆ.  ದೇಹಕ್ಕೆ ಕೌಮಾರ್ಯ, ಯೌವ್ವನ, ವಾರ್ಧಿಕ್ಯಗಳೆಂಬ ಅವಸ್ಥೆಗಳಿವೆ.  ಆದರೆ ಇವೆಲ್ಲ ಅವಸ್ಥೆಗಳಲ್ಲಿಯೂ; ವರ್ತಮಾನ , ಭೂತ, ಭವಿಷ್ಯಕಾಲಗಳಲ್ಲಿಯೂ ; ಜಾಗೃತ , ಸ್ವಪ್ನ, ಸುಷುಪ್ತಿಗಳಲ್ಲಿಯೂ; ಈ ದೇಹ ಮನಸ್ಸುಗಳಲ್ಲಿಯೂ  ನಿತ್ಯನಿರಂತರವಾಗಿ  ಶುದ್ಧ ‘ನಾನು, ನಾನು’ ಎಂಬ  ಪ್ರವಾಹವು  ಹರಿಯುತ್ತಿದೆ; ಪ್ರಾಣಗಳ ಮೂಲಕ ಇಂದ್ರಿಯಗಳು ತಂತಮ್ಮ ಕ್ರಿಯೆಗಳಲ್ಲಿ ವಿರತವಾಗುವಂತೆ ಮಾಡುತ್ತದೆ.  ಜ್ಞಾನಿಯು  ಅನಿತ್ಯಪರಿವರ್ತನದ ನಡುವೆ  ನಿತ್ಯ  ವಸ್ತುವನ್ನೂ , ಜಡಜಗತ್ತಿನ ನಡುವೆ  ನಿತ್ಯ ಚೈತನ್ಯವನ್ನೂ ಕಂಡು ಆಶ್ಚರ್ಯಚಕಿತನಾಗಿ ಬ್ರಹ್ಮಧ್ಯಾನದಲ್ಲಿ ಮಗ್ನನಾಗುತ್ತಾನೆ. ಆ ಸನಾತನ  ಬ್ರಹ್ಮವಸ್ತುವಿನಲ್ಲಿ  ನರನಾರಿಯರನ್ನೂ, ಇತರ ಜೀವಜಂತುಗಳನ್ನೂ ನಕ್ಷತ್ರಗ್ರಹಗಳನ್ನೂ, ಚರಾಚರ ಸರ್ವವಸ್ತುಗಳನ್ನೂ ಕಾಣುತ್ತಾನೆ. ‘ನಾನು’ ಎಂಬುದರಲ್ಲಿ ಆ ಸನಾತನ  ಬ್ರಹ್ಮನನ್ನೇ ಕಾಣುತ್ತಾನೆ. ಪರಮಾನಂದದಿಂದ ‘ನನ್ನಲ್ಲೇ  ಈ ವಿಶ್ವ ಬ್ರಹ್ಮಾಂಡವು ಏಳುತ್ತದೆ, ತೇಲಾಡುತ್ತದೆ ಮತ್ತು ಲೋಪವಾಗುತ್ತದೆ.  ನಾನೇ ಜ್ಞಾನಶಕ್ತಿಗಳ ಆಧಾರಭೂತನಾಗಿದ್ದೇನೆ. ನಾನೇ ಬ್ರಹ್ಮ, ನಾನೇ ಆ ಪುರಾಣಪುರುಷನು-ಜನನ, ಮರಣ, ವಾರ್ಧಿಕ್ಯಗಳಿಗೆ ಅತೀತನು. ನನಗೆ ಜಾತಿಭೇದವಿಲ್ಲ, ಮಾತಾಪಿತರಿಲ್ಲ, ನೆಂಟರಿಷ್ಟರಿಲ್ಲ.  ಮಿತ್ರಬಾಂಧವರಿಲ್ಲ, ನಾನು ಗುರುವೂ ಅಲ್ಲ, ಶಿಷ್ಯನೂ ಅಲ್ಲ- ಆ ಸಚ್ಚಿದಾನಂದ ಶಿವನೇ ನಾನಾಗಿದ್ದೇನೆ’ ಎಂದು  ಜ್ಞಾನೀ ಸಾಧಕನು  ಅನುಭವಿಸುತ್ತಾನೆ.

‍‍ಧರ್ಮವು ಒಂದೇ

ಜ್ಞಾನಿಯ ‘ನಾನು’ ಎಂಬುದಕ್ಕೂ, ಭಕ್ತನ ‘ನೀನು’ ಎಂಬುದಕ್ಕೂ, ವ್ಯತ್ಯಾಸವೇನೂ ಇಲ್ಲ. ಶಬ್ದ ವ್ಯತ್ಯಾಸವಿದೆ ಅಷ್ಟೇ. ಉಭಯ ಶಬ್ದಗಳೂ ಏಕವನ್ನೇ ಬೇರೆ ಬೇರೆಯಾಗಿ ನಿರ್ದೇಶಿಸುತ್ತದೆ.  ಜ್ಞಾನಿಭಕ್ತರಿಬ್ಬರೂ ಇಂದ್ರಿಯಗಳನ್ನು ನಿಗ್ರಹಿಸಬೇಕು, ಸನಾತನದಲ್ಲಿ ನೆಚ್ಚಿಕೆಯನ್ನಿಡಬೇಕು. ಬಂಧನಕ್ಕೆ ಕಾರಣಭೂತವಾದ ಅಹಂಭಾವವನ್ನು  ತೊರೆಯಬೇಕು. ವಿವೇಕ  ವೈರಾಗ್ಯಗಳ ಮೂಲಕ ಅಹಂಭಾವವನ್ನು ಸುಟ್ಟುಬಿಟ್ಟು ಮಹತ್ತಾದ ‘ನಾನು’ ಮತ್ತು ‘ನೀನು’ ಎಂಬುದರ ಸಂಬಂಧವನ್ನು ಕಂಡುಹಿಡಿಯಬೇಕು. ‘ನಾನು ಮತ್ತು ನೀನು’ ಎಂಬ ಶಬ್ದಗಳನ್ನು  ಸರಿಹೊಂದಿಸಬಹುದು, ಅವುಗಳ ವಿವಾದವನ್ನು ಪ್ರೇಮ ಮತ್ತು  ಸಹಕಾರದ ಮೂಲಕ  ಬಗೆಹರಿಸಬಹುದು. ಧರ್ಮದಲ್ಲಾಗಲಿ, ಭಾಷೆಯಲ್ಲಾಗಲಿ, ಮನೋಭಾವಗಳಲ್ಲಾಗಲಿ, ಪ್ರತಿಪಕ್ಷದವರ ದೃಷ್ಟಿಕೋನವನ್ನು  ಅಂಗೀಕರಿಸುವುದೇ ಅದಕ್ಕೊಂದು ಉಪಾಯ. ವಿವಿಧ ಮತಸ್ಥರು ಅನುಸರಿಸುವ ಪಥಗಳನ್ನು ಕೂಡ ಸರಿಹೊಂದಿಸುವುದಕ್ಕೆ ಉಪಾಯವಿದೆ. ಯಾರೂ ತಮ್ಮ  ಧರ್ಮವನ್ನು  ತೊರೆಯಬೇಕಾಗಿಲ್ಲ. ತೊರೆದರೆ ಕಷ್ಟಕ್ಕೆ ಗುರಿಯಾಗಬೇಕಾದೀತು. ಯಾವ ಧರ್ಮ ಮತವಾದರೂ ಮಿಥ್ಯ ಅಲ್ಲ. ಒಂದು ಧರ್ಮ ಮತವು ಮಿಥ್ಯವಾದರೆ, ಬೇರೆ ಧರ್ಮ ಮತಗಳು ಸತ್ಯವೆಂಬುದಕ್ಕೆ ಪ್ರಮಾಣವೆಲ್ಲಿ? ನಮ್ಮ ಋಷಿಗಳು ಆ ಉಪಾಯವನ್ನು  ಮೊದಲೇ ಅತಿ ಪ್ರಾಚೀನಕಾಲದಲ್ಲಿ ಈ ರೀತಿ ಹೇಳಿಹೋಗಿದ್ದಾರೆ- ‘ಏಕಂ ಸದ್ವಿಪ್ರಾ ಬಹುಧಾ ವದಂತಿ’- ಸತ್ಯವೆಂಬುದು ಒಂದೇ, ಆದರೆ ಪ್ರಾಜ್ಞರು ಅದನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ.

ಗಂಗಾನದಿಯು ಹಿಮಾಲಯದ ತುಷಾರವನ್ನು ಭೇದಿಸಿ ಪರ್ವತಶ್ರೇಣಿಗಳನ್ನು  ದಾಟಿ, ಹಲವರ  ಹಿತಕ್ಕಾಗಿ ಬಹುಜನರ  ಪ್ರಯೋಜನಕ್ಕಾಗಿ  ನಿತ್ಯ ಹಸುರಾದ ಬಯಲುಸೀಮೆಯನ್ನು ಪ್ರವೇಶಿಸಿ ಕಟ್ಟಕಡೆಗೆ  ಸಮುದ್ರವನ್ನು  ಸೇರುತ್ತದೆ. ಸಾವಿರಾರು ಜನರು ಬೇರೆ ಬೇರೆ ಸ್ಥಳಗಳಿಂದ ಅದರ ನೀರನ್ನು ಕುಡಿಯುತ್ತಾರೆ, ಎಲ್ಲರೂ ತಮ್ಮ ಪಕ್ಕದ ತೀರ್ಥ ಸ್ಥಾನಗಳಿಗೆ  ಹೋಗಿ ಅದರಲ್ಲಿ ಸ್ನಾನ ಮಾಡುತ್ತಾರೆ. ತೀರ್ಥಸ್ಥಾನಗಳು ಅಸಂಖ್ಯವಾದರೂ, ಒಂದೇ ಶುದ್ಧ ಗಂಗಾವಾರಿ ಅವರನ್ನೆಲ್ಲ ಪವಿತ್ರೀಕರಿಸುತ್ತದೆ.  ತೀರ್ಥಸ್ಥಾನಗಳು ಬೇರೆ ಬೇರೆ ಎಂದು  ಅದಕ್ಕಾಗಿ  ನಮ್ಮ ನಡುವೆ ವಿವಾದವಿಲ್ಲ. ಹಾಗಾದರೆ  ಬೇರೆ ಬೇರೆ  ಧರ್ಮಮತಗಳನ್ನು  ಕುರಿತು ನಾವು ವಿವಾದಿಸುವುದೇತಕ್ಕೆ? ಎಲ್ಲ ನದಿಗಳ ನೀರು ಒಂದೇ  ಸಮುದ್ರಕ್ಕೆ ಸೇರುವಂತೆ, ಎಲ್ಲ ಧರ್ಮಮತಗಳು ಒಂದೇ ಸಚ್ಚಿದಾನಂದ ಸಾಗರಕ್ಕೆ ತಲ್ಪಿಸುತ್ತವೆ. ಆದ ಕಾರಣವೇ ನಮ್ಮ ಋಷಿಗಳು (ನಮ್ಮ) ಸ್ವಕೀಯ ಆದರ್ಶದಲ್ಲಿ ಅಂದರೆ ನಮ್ಮ ಇಷ್ಟದಲ್ಲಿ  ನಿಷ್ಠೆಯನ್ನಿಡಬೇಕೆಂದು  ಹೇಳಿದ್ದಾರೆ.

ಋಷಿಗಳ ಮಾರ್ಗದರ್ಶನ

ಮಾನವನ ಮನಸ್ಸು ಪ್ರಕೃತಿಗಳಲ್ಲಿ ವ್ಯತ್ಯಾಸವಿದೆ. ಮರದ ಎಲೆಗಳಲ್ಲಿ ಹೇಗೆ ಭೇದವಿದೆಯೋ, ಕೈಬೆರಳುಗಳು  ಹೇಗೆ  ಒಂದೇ  ಪರಿಮಾಣದ್ದಾಗಿಲ್ಲವೋ ಹಾಗೆಯೇ ಮಾನವ ಮನಸ್ಸು ಪ್ರಕೃತಿಗಳಲ್ಲಿಯೂ ಭೇದವಿದೆ.  ಅಸಂಖ್ಯ ಜನ್ಮ ಜನ್ಮಾಂತರಗಳ ಅನುಭವ ಮತ್ತು ಕರ್ಮಗಳ ಸಂಸ್ಕಾರಗಳಿಂದ  ಪ್ರತಿಯೊಬ್ಬನ ಮನಸ್ಸು ನಿರ್ಮಾಣವಾಗಿದೆ. ಕೆಲವರಲ್ಲಿ ಸಾಂಸಾರಿಕ ಸಂಸ್ಕಾರಗಳು ಪ್ರಬಲವಾಗಿರಬಹುದು. ಕೆಲವರು  ತಮ್ಮ ಆದರ್ಶವನ್ನು  ಕಳೆದುಕೊಂಡು  ಪತಿತ  ನಕ್ಷತ್ರಗಳಂತಿರಬಹುದು. ಅವರು ಈ ಕಾಮಕಾಂಚನ  ಸಂಸಾರಸಾಗರದಿಂದ  ಎದ್ದೇಳಲು  ಪ್ರಯತ್ನಿಸುತ್ತಿರಬಹುದು.  ಇನ್ನು ಕೆಲವರು  ಸಮುದ್ರಗರ್ಭದಿಂದ  ಎದ್ದುನಿಂತ  ಪರ್ವತಗಳಂತೆ  ಈ ಕಾಮಕಾಂಚನವೆಂಬ   ತೆರೆಗಳ  ಬಡಿದಾಟವನ್ನು  ಸಹಿಸಿಕೊಂಡು ಶಾಂತರಾಗಿರಬಹುದು.  ಒಂದೇ ಧರ್ಮ ಮತವು ಇವೆಲ್ಲ ಮಾನವ ವರ್ಗದ  ವಿವಿಧ ತೃಷೆಗಳನ್ನು  ಸಮಾಧಾನಗೊಳಿಸಬಹುದಲ್ಲದೇ? ತಾಯಿ ತನ್ನ ಸಬಲ  ಮತ್ತು  ದುರ್ಬಲ ಮಕ್ಕಳಿಗೆ ಒಂದೇ ತರದ   ಆಹಾರವನ್ನು  ಕೊಡುವಳೇ? ಒಂದೇ ಅಳತೆಯ  ಬಟ್ಟೆಯು ಮಕ್ಕಳಿಗೂ  ಯುವಕರಿಗೂ ಸರಿಬೀಳುವುದೇ? ಆದಾಗ್ಯೂ ಧರ್ಮರಾಜ್ಯದಲ್ಲಿ ಈ ಬಗೆಯ  ಒಂದು ಪ್ರಯತ್ನವು  ನಡೆಯುತ್ತದೆ. ‘ಕ್ರೈಸ್ತಧರ್ಮವು ನಿನ್ನ ಪ್ರಕೃತಿಗೆ ಒಪ್ಪದಿದ್ದರೂ, ನೀನು  ಅದನ್ನು  ಅನುಸರಿಸದಿದ್ದರೆ ನಿನಗೆ ಶಾಶ್ವತವಾದ ನರಕಪ್ರಾಪ್ತಿಯಾಗುವುದೆಂ’ದು ಕ್ರೈಸ್ತಪಾದ್ರಿ ಸಾರುತ್ತಾನೆ. ‘ನೀನು ನಿರಾಕಾರ ಅಲ್ಲಾ’ ದೇವರನ್ನು  ಸೇವಕಭಾವದಿಂದ ಭಜಿಸದಿದ್ದರೆ ಸತ್ತಮೇಲೆ  ನಿನಗೆ ಸ್ವರ್ಗಪ್ರಾಪ್ತಿಯಾಗದು, ನೀನು ಇಹಲೋಕದಲ್ಲಿ  ಜೀವಿಸಿರಲೂ ಕೂಡ ಅರ್ಹನಲ್ಲ’ವೆಂದು  ಮುಸಲ್ಮಾನ ಮುಲ್ಲನು  ಹೇಳುತ್ತಾನೆ.  ಜೈನರು , ಬೌದ್ಧರು, ವೈಷ್ಣವರು, ಶೈವರು, ಶಾಕ್ತರು ಮೊದಲಾದವರು ಹಾಗೆಯೇ  ವಾದಿಸುತ್ತಾರೆ. ಪ್ರತಿಯೊಬ್ಬನೂ ತನ್ನ  ಧರ್ಮ ಮತದ  ಶ್ರೇಷ್ಠತೆಯನ್ನೇ  ಹಾಡುತ್ತಾನೆ. ಧರ್ಮಮತಗಳ ನಡುವೆ ಪರಸ್ಪರ ಅಂತ್ಯವಿಲ್ಲದ ವಾಗ್ವಾದವನ್ನು  ಸಮಾಧಾನಗೊಳಿಸಲು  ನಮ್ಮ ಋಷಿಗಳು  ಈ ರೀತಿ ಉಪದೇಶಿಸಿದ್ದಾರೆ ; “ನಿನ್ನ ಧರ್ಮವನ್ನು  ತೊರೆಯಬೇಡ, ನಿನ್ನ ಪ್ರಕೃತಿಗೆ ಅನುಗುಣವಾದ ಧರ್ಮವನ್ನು  ದೋಷಯುಕ್ತವಾದರೂ ನೀನು ತೊರೆಯಬೇಡ, ಏಕೆಂದರೆ ಈ ಜಗತ್ತಿನಲ್ಲಿ  ದೋಷರಹಿತವಾದುದೆಂಬುದು ಏನೂ ಇಲ್ಲ. ನಿನ್ನ  ಮನೋವಾಕ್ಕುಗಳನ್ನು  ಸರಿಹೊಂದಿಸು . ಹಾಗಾದರೆ ನೀನು ಶಾಂತಿ  ಮತ್ತು ಆನಂದಮಯವಾದ  ಧ್ಯೇಯವನ್ನು  ಮುಟ್ಟುವುದು ಖಂಡಿತ. ನೀವೆಲ್ಲರೂ ಅಮೃತದ  ಮಕ್ಕಳಾಗಿದ್ದೀರಿ.” ಎಲ್ಲರೂ ಈ ಅಮೃತೋಪಮವಾದ  ಸಂದೇಶವನ್ನು ಕೇಳುತ್ತಾರೆ,  ಆದರೆ  ಮರುಕ್ಷಣವೇ  ಅದನ್ನು  ಮರೆತು ಸ್ವಮತಭ್ರಾಂತರಾಗಿ ತಮ್ಮ ಧರ್ಮ ಮತವೇ  ಶ್ರೇಷ್ಠವೆಂದು  ಕಾದಾಡುತ್ತಾರೆ.

ನಿಸ್ವಾರ್ಥತೆ ಮತ್ತು ಧರ್ಮನಿಷ್ಠೆ  ಈ ಧರ್ಮವಿವಾದವನ್ನು ತೀರಿಸಿಕೊಳ್ಳುವುದಕ್ಕೆ ಉಪಾಯಗಳು . ಏಕ ಅಖಂಡ ಸತ್ಯವು ಅಸಂಖ್ಯ ಮಾರ್ಗಗಳಿಂದ ವ್ಯಕ್ತವಾಗುತ್ತದೆ. ಈ ಮಾರ್ಗಗಳೆಲ್ಲ ವಿವಿಧ ಪ್ರಕೃತಿಯುಕ್ತ ಜನರಿಗೆ  ಸಹಾಯಕವಾಗಿವೆ. ಆ ಸತ್ಯದ ಅನಂತಭಾವಗಳು  ಒಬ್ಬ ಮಾನವನಿಗೆ  ತಿಳಿಯಲು ಸಾಧ್ಯವಲ್ಲ. ಆ ಅನಂತ  ಭಾವಗಳಲ್ಲಿ  ಒಂದನ್ನಾದರೂ ಹಿಡಿದು ತನ್ನ ತೃಷೆಯನ್ನು ತೀರಿಸಿಕೊಳ್ಳಲಾರದೆ ಇದ್ದುದರಿಂದ  ಮನುಷ್ಯನು ನಾಸ್ತಿಕನಾಗುತ್ತಾನೆ. ಆದ್ದರಿಂದ  ಮತಗಳು  ಎಷ್ಟಾದರೂ ಇರಬಹುದು, ಅದರಿಂದ ಶ್ರೇಯಸ್ಸೇ  ಉಂಟಾಗುವುದು. ನಾಸ್ತಿಕರೂ ಕೂಡ ಅವುಗಳಿಂದ ತಮ್ಮ ಪ್ರಕೃತಿಗೊಪ್ಪುವ  ಧರ್ಮವನ್ನು  ಆಯ್ದು ಅಂಗೀಕರಿಸಬಹುದು. ಪ್ರತಿಯೊಬ್ಬನೂ ತನ್ನ ತನ್ನ  ಪ್ರಕೃತಿಗೆ  ಅನುಗುಣವಾದ ಧರ್ಮಮತವನ್ನು ಅವಲಂಬಿಸಿದರೆ ವಿಶ್ವಶಾಂತಿ ಸಾಧ್ಯವಾಗುವುದು.  ನಿಸ್ವಾರ್ಥತೆಯೇ ಧರ್ಮಾಧರ್ಮಗಳ ಒರೆಗಲ್ಲು. ಎಲ್ಲಿ  ಸ್ವಾರ್ಥವೋ,  ಪರರನ್ನು ಹಿಂಸಿಸಿ ತನ್ನ ದೇಹಸುಖವನ್ನು  ಬಯಸುತ್ತಾರೋ ಅಲ್ಲಿಯೇ  ಅಧರ್ಮ. ಎಲ್ಲಿ  ಸ್ವಾರ್ಥಸುಖವನ್ನು  ಮರೆತು ಪರರ ಸುಖಕ್ಕಾಗಿ  ದುಡಿಯುತ್ತಾರೋ ಅಲ್ಲಿಯೇ ಧರ್ಮ. ಈ ನಿಸ್ವಾರ್ಥತೆಯೇ ಎಲ್ಲ ನೀತಿಶಾಸ್ತ್ರದ ಆಧಾರ.

ಶ್ರೀರಾಮದೂತನ ಆದರ್ಶ

ಜ್ಞಾನಮಾರ್ಗದ ಮೂಲಕ ಸಾಧಕನು ‘ಸೋಹಂ’. ಸೋಹಂ ಅಂದರೆ ‘ಅವನು ನಾನೇ’, ‘ನಾನೇ ಅವನು’ ಅಂದರೆ ಶ್ರೀ ಪರಮಾತ್ಮನು  ತಾನೇ  ಎಂದು ಅನುಭವಿಸಲು  ಪ್ರಯತ್ನಿಸುತ್ತಾನೆ. ಭಕ್ತಿಮಾರ್ಗದ ಮೂಲಕ ಸಾಧಕನು ನಾಹಂ, ನಾಹಂ’ ಅಂದರೆ ‘ನಾನಲ್ಲ, ನಾನಲ್ಲ’ ಎಂದು, ಶ್ರೀ ಪರಮಾತ್ಮನನ್ನು ಸಾಕ್ಷಾತ್ಕರಿಸಲು ಪ್ರಯತ್ನಿಸುತ್ತಾನೆ. ಧ್ಯೇಯವನ್ನು ಮುಟ್ಟದೆ ಇರುವವರೆಗೆ ಅದು ಬೇರೆ ಬೇರೆ ಎಂದು ತೋರುತ್ತದೆ.  ಆದರೆ ಧ್ಯೇಯವನ್ನು ತಲುಪಿದ ಬಳಿಕ ಅದರಲ್ಲಿ ವ್ಯತ್ಯಾಸವೇನೂ ಕಾಣದು. ವೇದಗಳ ‘ತತ್ವಮಸಿ’, ಮುಸಲ್ಮಾನ ಸೂಫಿ ಸಂಪ್ರದಾಯದ ‘ಅನಲ್ ಹಕ್’, ಕ್ರೈಸ್ತರ ‘ನಾನೂ ನನ್ನ ಪಿತನೂ ಒಂದೇ’ ಇತ್ಯಾದಿ ವಚನಗಳೇ ಇದಕ್ಕೆ ಪ್ರಮಾಣವಾಗಿವೆ.  ರಾಸಲೀಲೆಯಲ್ಲಿ ಗೋಪಸ್ತ್ರೀಯರು ಶ್ರೀಕೃಷ್ಣನೊಂದಿಗೆ ಏಕೀಭವಿಸಿದುದು.  ಭಕ್ತಿಯ  ಪರಾಕಾಷ್ಠೆಯಲ್ಲಿ  ಭಕ್ತನು ಜ್ಞಾನಿಯಂತೆ  ಒಂದೇ ರೂಪಕ್ಕೆ ತಲಪುತ್ತಾನೆಂಬುದಕ್ಕೆ ಒಂದು ಅಪೂರ್ವವಾದ ದೃಷ್ಟಾಂತ. ಸ್ವಾಮಿ ವಿವೇಕಾನಂದರು ಹೀಗೆನ್ನುತ್ತಿದ್ದರು-“ತನ್ನ ಹೃದಯದಲ್ಲಿ  ಅಗಾಧತಮ ಪ್ರೇಮವಿದ್ದವನೇ, ಅದರೊಂದಿಗೆ ತನ್ನ ಬಾಹ್ಯ ಸಂಬಂಧದಲ್ಲಿ  ಕಾರ್ಯತಃ  ಅದ್ವೈತವನ್ನು ಕಾಣುವಾತನೇ ಯಥಾರ್ಥ ಜ್ಞಾನಿ. ವಿಶ್ವಾತ್ಮದೊಡನೆ ತಾದಾತ್ಮ್ಯವನ್ನೂ ಅನನ್ಯತೆಯನ್ನೂ ಸ್ಥಾಪಿಸಿಕೊಂಡು  ಯಥಾರ್ಥ ಜ್ಞಾನವನ್ನು  ಹೊಂದಿ ಎಲ್ಲರಿಗೂ  ಸಹಾನುಭೂತಿಯನ್ನು ತೋರಿ ಎಲ್ಲರನ್ನೂ ಪ್ರೀತಿಸುವಾತನೇ ಯಥಾರ್ಥ ಭಕ್ತನು. ಒಂದನ್ನು  ಪ್ರಶಂಸಿಸಿ ಮತ್ತೊಂದನ್ನು ದೂಷಿಸುವಾತನು ಜ್ಞಾನಿಯೂ ಅಲ್ಲ, ಭಕ್ತನೂ ಅಲ್ಲ.” ಆದರೆ ಸಾಧಕನು  ತನ್ನ ಇಷ್ಟದಲ್ಲಿ  ನಿಷ್ಠೆಯನ್ನಿಡಬೇಕು. ವೀರರಲ್ಲಿ ಅಗ್ರಗಣ್ಯನಾದ ಶ‍್ರೀರಾಮದೂತ ಮುಖ್ಯಪ್ರಾಣನು ಹೇಳಿದಂತೆ.

‘ಶ್ರೀ ನಾಥೇ ಜಾನಕಿನಾಥೇ ಅಭೇದಃ ಪರಮಾತ್ಮನಿ |

ತಥಾಪಿ ಮಮ  ಸರ್ವಸ್ವಃ ರಾಮಃ ಕಮಲಲೋಚನಃ ||

“ಒಬ್ಬ ಪರಮಾತ್ಮನೇ ವಿಷ್ಣು ಮತ್ತು ರಾಮ  ರೂಪಗಳಲ್ಲಿ ಪ್ರಕಟಿಸಿರುತ್ತಾನೆ. ಆದಾಗ್ಯೂ ಕಮಲಲೋಚನ ರಾಮನೇ ನನಗೆ  ಸರ್ವಸ್ವನಾಗಿದ್ದಾನೆ” ಎಂಬ  ನಿಷ್ಠೆಯನ್ನಿಡಬೇಕು.  ಶ್ರೀರಾಮಕೃಷ್ಣದೇವರು ತಮ್ಮ  ಮಧುರವಾಣಿಯಿಂದ  ಹೀಗೆನ್ನುತ್ತಿದ್ದರು : “ಇಷ್ಟನಿಷ್ಠೆಯೆಂಬುದು ಸಣ್ಣ ಗಿಡಗಳ ಸುತ್ತಮುತ್ತಲೂ ಹಾಕಿದ ಬೇಲಿಯಂತಿದೆ. ಬೇಲಿ ಹಾಕದಿದ್ದರೆ ಜನರು ಅವುಗಳನ್ನು  ತುಳಿದು ಹಾಕಬಹುದು. ಅಥವಾ ದನಕರುಗಳು  ತಿನ್ನಬಹುದು. ಆದ್ದರಿಂದಲೇ  ಬೇಲಿ ಅತ್ಯಾವಶ್ಯಕವಾಗಿದೆ. ಆದರೆ  ಗಿಡಗಳು   ಬೆಳೆದು ಮರದ ತಾಳು ಶಕ್ತವಾದರೆ ಅವುಗಳ ಸುತ್ತಮುತ್ತಲೂ ಬೇಲಿ ಹಾಕಬೇಕಾಗಿಲ್ಲ. ಅಂತಹ ಮರದ ತಾಳೆಗೆ ಆನೆಯನ್ನು  ಕಟ್ಟಿದರೂ  ಆ ಮರಕ್ಕೇ ಕೇಡಾಗದು.

ಭಕ್ತಿಯೂ ಜ್ಞಾನವೂ ಏಕಾಧಾರದಲ್ಲಿರಬಹುದೆಂದು ಮುಖ್ಯಪ್ರಾಣನ ದೃಷ್ಟಾಂತದಿಂದಲೇ ಗೊತ್ತಾಗುವುದು. ಒಂದು ದಿನ ಶ್ರೀರಾಮಚಂದ್ರನು  ಮುಖ್ಯಪ್ರಾಣನನ್ನು ಕುರಿತು – ‘ನೀನು ನನ್ನನ್ನು ಯಾವ ಭಾವದಿಂದ ಪೂಜಿಸುತ್ತಿಯೇ?’  ಎಂದು ಕೇಳಿದಾಗ ಆತನು ಈ ರೀತಿ ಉತ್ತರ ಕೊಟ್ಟನು :

ದೇಹಬುದ್ಧ್ಯಾದಾಸೋಹಂ ಜೀವಬುದ್ಧ್ಯಾತ್ವದಂಶಕಃ|

ಆತ್ಮಬುದ್ಧ್ಯಾ ತುತ್ವಮೇ ವಾಹಂ ಇತಿ ಮೇ ನಿಶ್ಚಲಾಮತಿಃ ||

ಅಂದರೆ “ದೇಹಾಭಿಮಾನವಿರುವವರೆಗೆ ನಾನು ನಿನ್ನ ದಾಸನಾಗಿದ್ದೇನೆ. ಜೀವಬುದ್ಧಿಯಿಂದ ನಾನು ನಿನ್ನ ಅಂಶನಾಗಿದ್ದೇನೆ, ಆತ್ಮಬುದ್ಧಿಯಿಂದ ನೀನೂ ನಾನೂ ಒಂದೇ ಎಂದು ನನ್ನ ದೃಢ ನಂಬಿಕೆ.”

ಈ ಯುಗದ ಸರ್ವಧರ್ಮ ಸಮನ್ವಯಾಚಾರ್ಯರಾದ ಶ್ರೀರಾಮಕೃಷ್ಣದೇವರು ಹೀಗೆನ್ನುತ್ತಿದ್ದರು :

“ಭಕ್ತನು ಸ್ವಮತ ಭ್ರಾಂತ ಅಥವಾ ಏಕಪಕ್ಷದವನಾಗಬಾರದು. ಹಾಗಾಗುವುದು ಹೀನಬುದ್ಧಿಯ ಕಾರ್ಯ.”

“ಮತಗಳೆಷ್ಟಿವೆಯೋ ಅಷ್ಟೇ ಪಂಥಗಳು. ನಿನ್ನ ಮತದಲ್ಲಿ ನೀನು ಅನನ್ಯ ಭಕ್ತಿಯನ್ನಿಡು. ಆದರೆ ಬೇರೆ ಮತಗಳನ್ನು  ದ್ವೇಷಿಸಬೇಡ. ಅವುಗಳನ್ನು ದೂಷಿಸಲೂ ಬೇಡ.”

– ಶ್ರೀ ಸ್ವಾಮಿ ಪ್ರಣವೇಶಾನಂದಜೀ, ಶ್ರೀರಾಮಕೃಷ್ಣಾಶ‍್ರಮ, ಮೈಸೂರು

   

3 Responses to ಭಕ್ತಿ ಜ್ಞಾನ ಸಮನ್ವಯ

 1. rathnamsjcc

  ನಾನು ಯಾರು?
  ತಿಳಿದಿರುವುದೇ ಸರ್ವಸ್ವ, ತಿಳಿಯದಿರುವುದು ನಾನು ಸರ್ವಸ್ವವೋ? ಸರ್ವಸ್ವವೂ ನಾನೋ ಎಂದರಿಯದೆ ನಾನೇ ಶ್ರೇಷ್ಠ ಎಂಬ ಅಹಂಕಾರದಿಂದ, ತಿಳಿಯಬೇಕಾದ್ದನ್ನು ತಿಳಿಯದಿರುವುದು, ತಿಳಿಯಬಾರದ್ದನ್ನು ತಿಳಿಯುವುದು, ಇಂತಹ ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದ ನಮಗೆ ಜಿಜ್ಞಾಸೆ ಮೂಡಿಸಿ, ಸರಿ ಹೆಜ್ಜೆಯನ್ನಿಡಲು ಭಗವಾನ್ ಶ್ರೀ ರಮಣ ಮಹರ್ಷಿಯವರ ಉಪದೇಶಸಾರದ ಸಿಂಚನ ಮಾರ್ಗದರ್ಶನವಾಗಿದೆ.

 2. rathnamsjcc

  ನಾನು ನಾನಾಗೆ ಇದ್ದು, ನಾನು ಮಾತ್ರ ನನ್ನನ್ನು ಗುರುತಿಸಬೇಕು. ಅಂತಃಕರಣದಲ್ಲಿ ವೃತ್ತಿ ಬದಲಾದರೂ, ಅಂತಃಕರಣ ಬದಲಾಗದೆ ಸ್ಥಿರವಾಗಿ ಇರುತ್ತದೆ. ಎಲ್ಲಕ್ಕೂ ನಾನು ಸಾಕ್ಷಿ ಮಾತ್ರ. ಧ್ಯಾನ ಮಾಡುತ್ತದೆ, ಮನಸ್ಸು ಜಪ ಮಾಡುತ್ತದೆ, ನಾನು ಸಾಕ್ಷಿ ಮಾತ್ರ. ನಾನು ಎಚ್ಚರ. ಶಾಂತಿ ಸ್ಥಿತಿಯಲ್ಲಿ ನಾನು. ಅಂತಃಕರಣ ಶಾಂತ ಸ್ಥಿತಿ ಗುರುತಿಸುವಾಗ ನನ್ನ ಸ್ವಭಾವ ಏನು? ನನ್ನ ಸ್ವಭಾವ ಶಾಂತಿ ಇದ್ದರೆ ನಾನು ಶಾಂತಿ ಗುರುತಿಸುತ್ತೇನೆ.

  ನಾನು ಸಾಕ್ಷಿ – ಇದು ಸತ್, ನಾನು ಎಚ್ಚರ – ಇದು ಚಿತ್, ನಾನು ಶಾಂತ – ಇದು ಆನಂದ. ಸತ್, ಚಿತ್, ಆನಂದದ ಸಂಗಮವೇ ಸಚ್ಚಿದಾನಂದ, ಇದು ನಾನೇ, ಸಚ್ಚಿದಾನಂದವು ನನ್ನ ಸ್ವರೂಪವೇ ಆಗಿದೆ. ಎಚ್ಚರದ ಇರುವಿಕೆ ಸತ್ ನಿಂದ ಕೂಡಿದೆ. ಶಾಂತವಾಗಿದೆ. ಸಚ್ಚಿದಾನಂದನಾಗಿದ್ದೇನೆ ಸ್ಥಿತಪ್ರಜ್ನನಾಗಿದ್ದೇನೆ.

 3. rathnamsjcc

  ಗುರು,ಶಿಷ್ಯನೆಂದು ಬೇದಿಸುವ ,ಗೆಳೆಯ .. ಆತ್ಮ ಸಾಕ್ಷಿಯಾಗಿರುತ್ತೆ. ಸಮಾಧಿಯಲ್ಲಿ

Leave a Reply