ಭಾರತಕ್ಕೆ ಸಾಂಸ್ಕೃತಿಕ, ಧಾರ್ಮಿಕ ಸ್ವಾತಂತ್ರ್ಯ ತಂದುಕೊಟ್ಟವರು ನವಯುಗಾಚಾರ್ಯ ಸ್ವಾಮಿ ವಿವೇಕಾನಂದ

ಲೇಖನಗಳು - 0 Comment
Issue Date :

-ಜಗದೀಶ ಮಾನೆ

ಗುಲಾಮತನದಲ್ಲಿದ್ದಂತಹ ಭಾರತವನ್ನು ವಿಶ್ವ ವೇದಿಕೆಯ ಮೇಲೆ ತಲೆ ಎತ್ತುವಂತೆ ಮಾಡಿ 1893 ಸಪ್ಟೆಂಬರ್ 11 ಭಾರತಕ್ಕೆಸ್ವಾತಂತ್ರ್ಯ ಬಂದಿರುವುದು. ನಾವು 1947 ಅಂತ ಹೇಳಬಹುದು. ಆದರೆ ಅದು ರಾಜಕೀಯ ಸ್ವಾತಂತ್ರ್ಯ. ಆದರೆ ಸಾಂಸ್ಕೃತಿಕ, ಆಧ್ಯಾತ್ಮಿಕ, ಧಾರ್ಮಿಕ ಸ್ವಾತಂತ್ರ್ಯ ಭಾರತಕ್ಕೆ ಬಂದಿರುವದು ಅದು ಚಿಕಾಗೊ ವಿಶ್ವ ವೇದಿಕೆ ಮೇಲೆ. ಅದನ್ನು ತಂದು ಕೊಟ್ಟವರು ಸ್ವಾಮಿ ವಿವೇಕಾನಂದರು. ಹಾಗಾಗಿ ಅವರು ನವಯುಗಾಚಾರ್ಯ.

ಭಾರತದ ಉದ್ಧಾರಕ್ಕಾಗಿ ಪಣತೊಟ್ಟ ವಿವೇಕಾನಂದರು ಇಡೀ ದೇಶಾದ್ಯಂತ ಬಡವರ ಊರುಗಳಿಗೆ ತೆರಳಿ ಅವರೊಂದಿಗೆ ಕಾಲ ಕಳೆದರು. ಅವರ ನೋವುಗಳನ್ನು ಆಲಿಸಿದರು. ಇದು ವಿವೇಕಾನಂದರು ಪರಿವ್ರಾಜಕರಾಗಿ ದೇಶಾದ್ಯಂತ ಮಾಡಿದ ಕೆಲಸ. ವಿವೇಕಾನಂದರ ಎದೆಯಲ್ಲಿ ಎದ್ದಂತಹ ಅಲೆಗಳು ಹಿಂದೂ ಮಹಾಸಾಗರದ ಅಲೆಗಳಿಗಿಂತ ಪ್ರಬಲವಾಗಿದ್ದವು. ಸಾಗರದ ಅಲೆಗಳು ಕೇವಲ ಸಮುದ್ರ ದಡದಲ್ಲಿ ಅಪ್ಪಳಿಸಬಹುದು. ವಿವೇಕಾನಂದರ ಎದೆಯ ಅಲೆಗಳು ಇಡೀ ಜಗತ್ತನ್ನೇ ಅಪ್ಪಳಿಸಿವೆ ಮತ್ತು ಅಲ್ಲಿನ ಪಾಪನ್ನು ತೊಳೆದಿವೆ, ಅಧರ್ಮವನ್ನು ತೊಳದಿವೆ, ಶಕ್ತಿಯನ್ನು ತುಂಬಿವೆ. ಹಾಗಾಗಿ ವಿವೇಕಾನಂದರು ವೀರ ವೇದಾಂತಿ, ನವಯುಗಾಚಾರ್ಯ. ನಾವು ವಿವೇಕಾನಂದರನ್ನು ನವಯುಗಾಚಾರ್ಯ ಎಂದು ಏಕೆ ಆರಾಧನೆ ಮಾಡಬೇಕೆಂದರೆ ರಾಜಕೀಯ ಗುಲಾಮತನದಲ್ಲಿದ್ದ, ಆರ್ಥಿಕವಾಗಿ ಗುಲಾಮತನದಲ್ಲಿದ್ದ, ಶೈಕ್ಷಣಿಕವಾಗಿ ಗುಲಾಮತನದಲ್ಲಿದ್ದ, ಮಹಿಳೆಯರನ್ನು ಕೇವಲ ಅಡುಗೆ ಮನೆಯಲ್ಲಿ ಕೂಡಿಟ್ಟಂತಹ, ಅಸ್ಪಶ್ಯರನ್ನು ಕಡೆಯಾಗಿ ನಡೆಸಿಕೊಂಡಿದ್ದಂತಹ ಭಾರತವನ್ನು ಸ್ವಾಭಿಮಾನಿ, ಶಕ್ತಿಶಾಲಿ ಭಾರತವನ್ನಾಗಿ ಮಾಡಿದ ಯುವಕ ಸ್ವಾಮಿ ವಿವೇಕಾನಂದ. ಹಾಗಾಗಿ ಅವರು ನವಯುಗಾಚಾರ್ಯ.

 ವಿವೇಕಾನಂದರು ತಪ್ಪಿತಸ್ಥ ಸನ್ಯಾಸಿಗಳನ್ನು ಬಿಟ್ಟಿಲ್ಲ. ಸನ್ಯಾಸಿಗಳನ್ನೂ ಕುರಿತು ಹೇಳುತ್ತಾರೆ ‘ಸನ್ಯಾಸಿಗಳಾದ ನಾವು ಏನು ಮಾಡಿದ್ದೇವೆ? ಭಾರತಮಾತೆಯ ಮಡಿಲಲ್ಲಿ ಚಕ್ಕಂದವಾಡುತ್ತ ಕುಳಿತಿರುವ ಸನ್ಯಾಸಿಗಳು ನಾವೇನು ಮಾಡಿದ್ದೇವೆ! ಕಾಶಾಯ ವಸ್ತ್ರಧಾರಿಗಳಾಗಿ, ಮೂರ್ಖ ಜನರ ತಾಮಸ ಆತಿಥ್ಯದಿಂದ ಉದರಪೋಷಣೆ ಮಾಡಿಕೊಳ್ಳುತ್ತಾ ಅಲೆಯುತ್ತಿರುವ ಲಕ್ಷಾಂತರ ಸನ್ಯಾಸಿಗಳು ನಾವೇನು ಮಾಡಿದ್ದೇವೆ! ತತ್ವಬೋಧನೆ, ತತ್ವಬೋಧನೆ ಛೀಛಿ ವೈರಾಗಿಗಳೇ, ನಿಮ್ಮ ತತ್ವಬೋಧನೆಗೆ ಬೆಂಕಿ ಬೀಳಲಿ. ಹೊಟ್ಟೆಗಿಲ್ಲದೇ ಕಂಗೆಟ್ಟಿರುವ ದೇಶದಲ್ಲಿ ನಿಮ್ಮ ತತ್ವಬೋಧನೆ! ಅಯ್ಯೋ ಕಪಟವ್ಯಕ್ತಿತ್ವವೇ, ನಾವೇನು ಮಾಡುತ್ತಿದ್ದೇವೆ. ಆಹಾ ವೇದಮಾತೆ ನಿನ್ನ ಸನ್ಯಾಸಿಗಳ ಲೀಲೆಯನ್ನು ನೋಡು, ನೋಡಿ ನಲಿ. ಕಾಲಡಿ ಭೂಮಿಯನ್ನು ಹಿಡಿಯಲಾಗದ ಅಶಕ್ತರಿಗೆ ಅನಂತ ಆಕಾಶವನ್ನು ತೋರಿಸಿದ್ದೇವೆ’ ಎಂದು ನೊಂದು ನುಡಿಯುತ್ತಾರೆ. ವಿವೇಕಾನಂದರು ಹೇಳುತ್ತಾರೆ,

 ಭಾರತಕ್ಕೆ ಶಕ್ತಿಬೇಕು, ಹಣ ಬೇಕು, ತಂತ್ರಜ್ಞಾನಬೇಕು. ಪಾಶ್ಚಿಮಾತ್ಯದ ತಂತ್ರಜ್ಞಾನ ಹಾಗೂ ಭಾರತದ ಆಧ್ಯಾತ್ಮದಿಂದ ಎರಡನ್ನೂ ಕೂಡಿಸಿ ಹೊಸ ಜಗತ್ತನ್ನು ಕಟ್ಟಬೇಕು ಎನ್ನುವಂತಹ ಮಹಾನ್ ಕನಸನ್ನು ಕಂಡು ಅದನ್ನು ನನಸು ಮಾಡಿದ ವ್ಯಕ್ತಿ ನವಯುಗಾಚಾರ್ಯ ವಿವೇಕಾನಂದ. ಈ ರೀತಿಯ ವಿಚಾರಗಳು ವಿವೇಕಾನಂದರಿಗೆ ಬಂದಿದ್ದು ಅವರು ಸಮುದ್ರವನ್ನು ಈಜಿ ಕನ್ಯಾಕುಮಾರಿಯ ಬಂಡೆಯ ಮೇಲೆ ಕುಳಿತುಕೊಂಡಾಗ.

 ವಿವೇಕಾನಂದರ ತುಡಿತ ಹೇಗಿತ್ತೆಂದರೆ – ಬರಿ ತತ್ವಗಳಿಂದ ನಮಗೆ ಮುಕ್ತಿ ದೊರಕುವುದಿಲ್ಲ. ಅನ್ನ ಬೇಕು, ವಸ್ತ್ರ ಬೇಕು, ಧನ ಬೇಕು. ಅದಕ್ಕಾಗಿ ನಾನು ವಿದೇಶಗಳಿಗೆ ಹೋಗುತ್ತೇನೆ. ಅಲ್ಲಿ ಉಪನ್ಯಾಸಗಳನ್ನು ಕೊಡುತ್ತೇನೆ. ಅಲ್ಲಿಯ ಸಂಪತ್ತನ್ನು ಭಾರತಕ್ಕೆ ತರುತ್ತೇನೆ. ಭಾರತದ ಗುಡಿಸಲುಗಳಲ್ಲಿರುವ ಬಡ, ದೀನ, ದಲಿತರಿಗೆ ಅದನ್ನು ಹಂಚುತ್ತೇನೆ. ಆ ಮೂಲಕ ಒಂದು ಹೊಸಯುಗ ನಿರ್ಮಾಣವಾಗಬೇಕು- ಇದು ವಿವೇಕಾನಂದರ ಕನಸು. ಆದರೆ ಅನೇಕರು ವಿವೇಕಾನಂದರಿಗೆ ಕೇಳಿದ್ದು ‘ನೀವ್ಯಾಕೆ ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಡಬಾರದು?’ ಅದಕ್ಕೆ ವಿವೇಕಾನಂದರು ‘ನಾಳೆ ಬೆಳಕು ಮೂಡುವುದರೊಳಗಾಗಿ ನಾನು ನಿಮಗೆ ಸ್ವಾತಂತ್ರ್ಯ ತಂದು ಕೊಡಬಲ್ಲೆ. ಆದರೆ ಅದನ್ನು ಉಳಿಸಿ, ಬೆಳೆಸುವರಾರಿದ್ದಾರೆ? ಯಾರೂ ಇಲ್ಲ. ಹಾಗಾಗಿ ನನಗೆ ಉಕ್ಕಿನ ನರವುಳ್ಳಂತಹ ಮನುಷ್ಯರು ಬೇಕು’ ಎಂದಿದ್ದರು. ಇಂದು  ವಿವೇಕಾನಂದರ ಪ್ರೇರಣೆಯಿಂದ ಸಾಕಷ್ಟು ಜನ ದೊಡ್ಡ ದೊಡ್ಡ ಶಕ್ತಿಗಳಾಗಿ ದೇಶದ ಮೂಲೆಮೂಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

 ಉದಾ: ಒಬ್ಬ 12 ವರ್ಷದ ಹುಡುಗ ವಿವೇಕಾನಂದರ ಪುಸ್ತಕ ಓದಿದ ನಂತರ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಳ್ಳುತ್ತಾನೆ. ಗಾಂಧೀಜಿಯ ಜೊತೆಗೆ ವಿರೋಧ ಬರುತ್ತದೆ. ಗಾಂಧೀಜಿಗೆ ಧಕ್ಕೆಯಾಗಬಾರದೆಂದು ತೀರ್ಮಾನ ಮಾಡಿ ಭಾರತದಿಂದ ಹೊರದೇಶಕ್ಕೆ ಹೋಗಿ ಅಲ್ಲಿ Indian National Army ಕಟ್ಟಿ ಬ್ರಿಟೀಷರ ವಿರುದ್ಧ ಹೋರಾಟ ಮಾಡುತ್ತಾರೆ. ಆ ವ್ಯಕ್ತಿ ನೇತಾಜಿ ಸುಭಾಷಚಂದ್ರ ಬೋಸ್.

 ಮಿಲಿಟರಿಯಲ್ಲಿ ಟ್ರಕ್ ಡ್ರೈವರ್ ಆಗಿದ್ದಂತಹ 24 ವರ್ಷದ ಯುವಕ ತನ್ನ ಜೊತೆಯಲ್ಲಿದ್ದವರೆಲ್ಲ ಸತ್ತುಹೋದಾಗ ತಾನೂ ಕೂಡಾ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ಯೋಚನೆ ಮಾಡಿ ರೇಲ್ವೆ ಸ್ಟೇಷನ್‌ನಲ್ಲಿ ಕುಳಿತಿರುವಾಗ ಅಲ್ಲಿರುವ ಒಂದು ಸಣ್ಣ ಪುಸ್ತಕ ಅಂಗಡಿಯೊಳಗಿದ್ದ ವಿವೇಕಾನಂದರ ಪುಸ್ತಕವನ್ನು ಆಕಸ್ಮಿಕವಾಗಿ ನೋಡಿ ತೆಗೆದುಕೊಳ್ಳುತ್ತಾರೆ.  ಓದಿದ ನಂತರ ಅವರಿಗನಿಸಿದ್ದು, ಸುಮ್ಮಸುಮ್ಮನೆ ನಾನ್ಯಾಕೆ ಸಾಯಬೇಕು. ಇಲ್ಲ ನಾನು ನನ್ನ ದೇಶಕ್ಕಾಗಿ, ನನ್ನ ಹಳ್ಳಿಗಾಗಿ ಬದುಕುತ್ತೇನೆ. 24 ವರ್ಷದ ಆ ಹುಡುಗ ವಿವೇಕಾನಂದರ ಪುಸ್ತಕ ಓದಿದ್ದರ ಪರಿಣಾಮ ಇಂದು ಎರಡನೆಯ ಗಾಂಧಿ ಎಂದು ಖ್ಯಾತರಾದ ಅಣ್ಣಾ ಹಜಾರೆಯಾಗಿ ರೂಪುಗೊಂಡರು.

 1985, ಮೈಸೂರಿನಲ್ಲಿ ಎಂ.ಬಿ.ಬಿ.ಎಸ್. ಓದುವಂತಹ ಒಬ್ಬ ಯುವಕ ಶಿಕ್ಷಣ ಮುಗಿದ ನಂತರ ಹೊರಬರುತ್ತಾನೆೆ. ನಾನೂ ವಿವೇಕಾನಂದರ ಹಾಗೆ ಏನಾದರೂ ಈ ಸಮಾಜಕ್ಕೋಸ್ಕರ ಮಾಡಬೇಕೆಂಬ ತುಡಿತ ಹೆಚ್ಚಾದಾಗ ಅವರು ವಿವೇಕಾನಂದ ಯೂಥ್  ಮೂವ್‌ಮೆಂಟ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಸೇವೆಗೆ ತೊಡಗುತ್ತಾರೆ. ಕಾಡುಗಳ ಜಿಲ್ಲೆ ಚಾಮರಾಜನಗರದ ಸರಗೂರು ಎಂಬ ಹಳ್ಳಿಗೆ ತೆರಳಿ ಅಲ್ಲಿ ಒಂದು ಸಣ್ಣ ಗುಡಿಸಲಿನಲ್ಲಿ ಮೆಡಿಕಲ್ ಶಾಪ್‌ನ್ನು ತೆಗೆದು, ಬಡ ರೋಗಿಗಳ ಸೇವೆಯಲ್ಲಿ ತೊಡಗುತ್ತಾರೆ.

ಅವರೇ, ಡಾ. ಬಾಲಸುಬ್ರಹ್ಮಣ್ಯಂ. ಇಂದು ಆ ವ್ಯಕ್ತಿ ಇಡೀ ದೇಶದ ಹಾಗೂ ವಿಶ್ವದ ಮೂಲೆ ಮೂಲೆಯಲ್ಲಿ ಹೋಗಿ ಉಪನ್ಯಾಸಗಳನ್ನು ಕೊಡುತ್ತಾರೆ. ಅವರ ಒಳಗಡೆ ಇರೋದು ಸ್ವಾಮಿ ವಿವೇಕಾನಂದರು.

 ಆತ ಹದಿಮೂರು ವರ್ಷದ ಹುಡುಗ. ಮನೆಯಲ್ಲಿ ಅತ್ಯಂತ ಬಡತನ, ತಂದೆ ಆರೋಗ್ಯ ಹದಗೆಟ್ಟು ಔಷಧಿ ಸಿಗದೇ ತೀರಿಕೊಳ್ಳುತ್ತಾರೆ.  ಆಗ ಆ ಹುಡುಗನಿಗೆ ಅನಿಸಿದ್ದು, ಮುಂದೆ ತಾನು ಓದಿ ಡಾಕ್ಟರಾಗಬೇಕೆಂದು, ಇನ್ನಾರೂ ಕೂಡಾ ಔಷಧಿ ಇಲ್ಲದೇ ಸಾಯಬಾರದೆಂಬ ನಿಶ್ಚಯ ಮಾಡಿದ ಆ ಹುಡುಗ ಮುಂದೆ ರಾಮಕೃಷ್ಣ ಆಶ್ರಮದ ಸಂಪರ್ಕಕ್ಕೆ ಬಂದು ಎಂ.ಬಿ.ಬಿ.ಎಸ್. ಮಾಡಿ ಡಾಕ್ಟರಾದ ಮೇಲೆ ಅವರು ಹಣ ಸಂಪಾದಿಸಲಿಕ್ಕೆ ಅಮೇರಿಕಕ್ಕೆ ಹೋಗಲಿಲ್ಲ. ಅವರು ಹೋಗಿದ್ದು ಮೈಸೂರು ಜಿಲ್ಲೆಯ ಬಿಳಿಗಿರಿರಂಗನಬೆಟ್ಟಕ್ಕೆ. ಆ ವ್ಯಕ್ತಿಯೇ ಡಾ. ಸುದರ್ಶನ.

 ವಿವೇಕಾನಂದರು ಅಮೇರಿಕಾದ ಚಿಕಾಗೋದಲ್ಲಿದ್ದಾಗಲೇ ಮೈಸೂರಿನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್‌ರಿಗೊಂದು ಪತ್ರ ಬರೆಯುತ್ತಾರೆ- ಬಡವರ ಉದ್ಧಾರಕ್ಕಾಗಿ, ಅವರ ಕಲ್ಯಾಣಕ್ಕಾಗಿ ಏನನ್ನಾದರೂ ನೀವು ಮಾಡಿ. ಆಗ ಅದನ್ನು ನೋಡೋದಕ್ಕೆ ನಾನು ಬರುತ್ತೇನೆಂದು, ವಿವೇಕಾನಂದರು ಬರೆದ ಆ ಪತ್ರದ ಪ್ರಭಾವದಿಂದ ಕೆ.ಆರ್.ಎಸ್. ನಿರ್ಮಾಣವಾಗಿದೆ, ಮೈಸೂರು ವಿಶ್ವವಿದ್ಯಾಲಯ ಪ್ರಾರಂಭವಾಗಿದೆ, ಭದ್ರಾವತಿಯಲ್ಲಿ ಉಕ್ಕಿನ ಕಾರ್ಖಾನೆ ಪ್ರಾರಂಭವಾಗಿದೆ, ಜೋಗದಲ್ಲಿ ವಿದ್ಯುತ್ ಸ್ಥಾವರ ಸ್ಥಾಪನೆ, ಕರ್ನಾಟಕದಲ್ಲಿ ಮೊದಲು ಮೀಸಲಾತಿ ಕೊಟ್ಟ ಕೀರ್ತಿ ಮೈಸೂರಿನ ಒಡೆಯರಿಗೆ ಸಲ್ಲುತ್ತದೆ.  ಈ ಎಲ್ಲ ಕಾರ್ಯಗಳಿಗೆ ಪ್ರೇರಣೆ ಸ್ವಾಮಿ ವಿವೇಕಾನಂದರು. ರತನ್ ಟಾಟಾಗೆ ವಿವೇಕಾನಂದರು ಹೇಳಿದ ಒಂದೇ ಒಂದು ಮಾತಿನ ಮಹತ್ವದ ಪರಿಣಾಮವಾಗಿ ಬೆಂಗಳೂರಿನಲ್ಲಿ Indian Institute of Science ಪ್ರಾರಂಭವಾಯಿತು.

 ಹೀಗೆ ಅನೇಕ ವ್ಯಕ್ತಿಗಳ ಪ್ರೇರಣಾಶಕ್ತಿಯಾಗಿರುವುದು ಸ್ವಾಮಿ ವಿವೇಕಾನಂದರ ಚಿಂತನೆಗಳು. ಇವು ನಿಜವಾದ ಭಾರತದ ಚರಿತ್ರೆಯ ಪುಟಗಳು. ಆದರೆ ಚರಿತ್ರೆಯನ್ನು ಬರೆಯುವವರು ಇವುಗಳನ್ನು ಸೇರಿಸಲಿಲ್ಲ ಮತ್ತು ಹೇಳುತ್ತಿಲ್ಲ. ಆ ಕಾರಣಕ್ಕಾಗಿ ಪ್ರತಿಯೊಬ್ಬ ಮಕ್ಕಳಿಗೂ ವಿವೇಕಾನಂದರನ್ನು ತಿಳಿಸುವ ಪ್ರಯತ್ನವಾಗಬೇಕು. ಮತ್ತು ಸಮಾಜದ ಅಂಧಕಾರ, ವಿಷಮತೆಯನ್ನು ಹೊಡೆದೋಡಿಸಲು ಎಲ್ಲರೂ ಶಿಕ್ಷಿತರಾಗಬೇಕು. ಅದು ವಿವೇಕಾನಂದರ ತ್ಯಾಗ ಮತ್ತು ಸೇವೆಯ ಪರಿಕಲ್ಪನೆ ಮೈಗೂಡಿಸಿಕೊಂಡಾಗ ಮಾತ್ರ ಸಾಧ್ಯವಾಗುವುದು. ವಿವೇಕಾನಂದರ ದರಿದ್ರ ನಾರಾಯಣ ದೇವೋಭವದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದಕ್ಕಾಗಿ ವಿವೇಕಾನಂದ ಜಯಂತಿಯ ಅಂಗವಾಗಿ ಭಾರತದ ಲಕ್ಷಾಂತರ ಯುವಕರು ಪ್ರತಿ ನಗರ, ಗ್ರಾಮಗಳ ಮೂಲೆ ಮೂಲೆಗೆ ತೆರಳಿ ವಿವೇಕಾನಂದರ ಸೇವೆಯ ಪರಿಕಲ್ಪನೆಯನ್ನು ಸಾಕಾರಗೊಳಿಸುತ್ತಿದ್ದಾರೆ.

 

   

Leave a Reply