ಭಾರತ-ಟಿಬೆಟ್ ಸಂಬಂಧ ಮತ್ತಷ್ಟು ಬಲಗೊಳ್ಳಲಿ

ಜಿಲ್ಲೆಗಳು - 0 Comment
Issue Date : 10.09.2014

ಹುಬ್ಬಳ್ಳಿ: ಭಾರತ ಮತ್ತು ಟಿಬೆಟ್ ಎರಡು ಪ್ರತ್ಯೇಕ ದೇಶಗಳಾದರೂ ಕೂಡ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಒಂದೇ ದೇಶಗಳಂತಿವೆ.
ಸಹಸ್ರಾರು ವರ್ಷಗಳಿಂದ ನಮ್ಮ ನಡುವೆ ಇರುವ ಮಧುರವಾದ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಮುಂಡಗೋಡ ಟಿಬೇಟಿಯನ್ ಪುನರ್ವಸತಿ ಕೇಂದ್ರದ ಆಡಳಿತಾಧಿಕಾರಿ ಪುನತ್ಸೋಕ್ ತ್ಸೆರಿಂಗ್ ಹೇಳಿದರು.
ಇಲ್ಲಿಯ ಪುನೀತ್ ನಿವಾಸದಲ್ಲಿ ನಡೆದ ಭಾರತ ಟಿಬೆಟ್ ಸಹಯೋಗ ಮಂಚ್ ಇದರ ಹುಬ್ಬಳ್ಳಿ ಘಟಕದ ಉದ್ಘಾಟನಾ ಸಮಾರಂಭ ಹಾಗೂ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಭಾರತ ಎಂದೆಂದಿಗೂ ಟಿಬೆಟ್ ಪಾಲಿಗೆ ಗುರುವಿನ ಸ್ಥಾನವನ್ನು ಹೊಂದಿದೆ. ಆ ಕಾರಣದಿಂದಾಗಿ ಟಿಬೆಟ್ ಚೀನಾವನ್ನು ಕಬಳಿಸಿದಾಗ ದಲಾಯಿ ಲಾಮಾ ಆವರ ನೇತೃತ್ವದಲ್ಲಿ ಸಹಸ್ರಾರು ಟಿಬೇಟಿಯನ್ನರು ಭಾರತಕ್ಕೆ ರಾಜಕೀಯ ಶರಣು ಕೋರಿ ಆಗಮಿಸಿದ್ದರು. ನಮ್ಮ ಧರ್ಮ, ಸಂಸ್ಕೃತಿ ಹಾಗೂ ಜನಾಂಗ ಇಲ್ಲಿ ಸುರಕ್ಷಿತಾಗಿ ರಕ್ಷಿಸಲ್ಪಡುತ್ತದೆ ಎಂಬ ದೃಡ ವಿಶ್ವಾಸವೇ ನಮ್ಮನ್ನು ಭಾರತಕ್ಕೆ ಬರುವಂತೆ ಮಾಡಿತು. ಭಾರತೀಯ ಜನ ಹಾಗೂ ಇಲ್ಲಿನ ಸರ್ಕಾರಗಳು ನಮಗೆ ತೋರಿದ ಪ್ರೀತಿ ಗೌರವಾದರಗಳಿಗೆ ಟಿಬೇಟಿಯನ್ನರು ಸದಾ ಚಿರಋಣಿ ಎಂದು ತ್ಸೆರಿಂಗ್ ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಭಾರತ ಟಿಬೆಟ್ ಸಹಯೋಗ ಮಂಚ್‌ನ ದಕ್ಷಿಣ ಭಾರತ ಸಂಚಾಲಕ ಅಮೃತ್ ಜೋಶಿ, ಭಾರತೀಯ ಸಮಾಜ ಟಿಬೆಟಿಯನ್ನರನ್ನು ಕೇವಲ ನಿರಾಶ್ರಿತರನ್ನಾಗಿ ನೋಡಬಾರದು. ನಮ್ಮ ಭವ್ಯ ಆಧ್ಯಾತ್ಮಿಕ ಪರಂಪರೆ ಹಾಗೂ ಸಂಸ್ಕೃತಿಯ ಸಮಾನ ಪ್ರತಿಪಾದಕರಾಗಿರುವ ಟಿಬೇಟಿಯನ್ನರು ನಮ್ಮ ಈ ಪರಂಪರೆಯ ರಕ್ಷಕರು ಕೂಡ ಆಗಿದ್ದಾರೆ. ನಮ್ಮ ಅನೇಕ ಅಳಿದು ಹೋದ ಆಧ್ಯಾತ್ಮಿಕ ಹಾಗೂ ಸಾಂಸ್ಕೃತಿಕ ಸಂಪತ್ತನ್ನು ಇಂದಿಗೂ ಟಿಬೇಟಿಯನ್ನರು ಬಹಳ ಶ್ರದ್ಧೆಯಿಂದ ಕಾಪಾಡಿಕೊಂಡು ಬಂದಿದ್ದಾರೆ. ಅದಕ್ಕಾಗಿ ನಾವು ಅವರಿಗೆ ಚಿರಋಣಿಗಳಾಗಬೇಕು ಎಂದರು.
ಭಾರತ ಟಿಬೆಟ್ ಸಹಯೋಗ ಮಂಚ್‌ನ ಹುಬ್ಬಳ್ಳಿ ಘಟಕದ ಸಂಯೋಜಕರಾಗಿ ಜಿತೇಂದ್ರ ನಾಯಕ್ ಪದಗ್ರಹಣ ಮಾಡಿದರು.
ಈ ಸಂದರ್ಭದಲ್ಲಿ ಟಿಬೆಟಿಯನ್ ವುಮೆನ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪ್ರೂಭೋ, ಆರೆಸ್ಸೆಸ್ ವಿಭಾಗ ಸಹ ಕಾರ್ಯವಾಹ ಕಿರಣ ಗುಡ್ಡದಕೇರಿ, ಲೇಖಕ ಪ್ರಶಾಂತ ಆಡೂರ್, ಸಹಯೋಗ ಮಂಚದ ರಾಜೇಶ ರಾವ್, ತಾಶಿ ಸಂಡೂಪ್, ಆಶಾ ನಾಯಕ್ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಭಾರತೀಯರ ಹಾಗೂ ಟಿಬೇಟಿಯನ್ ಪ್ರತಿನಿಧಿಗಳ ಜೊತೆಯಲ್ಲಿ ರಕ್ಷಾ ಬಂಧನ ಆಚರಿಸಲಾಯಿತು.

   

Leave a Reply