ಭಾರತ ಪರಿಕ್ರಮ ಯಾತ್ರೆಗೆ 1000 ದಿನ

ರಾಜ್ಯಗಳು - 0 Comment
Issue Date : 20.05.2015

ತೇಜಪುರ (ಅಸ್ಸಾಂ): ಭಾರತ ಪರಿಕ್ರಮ ಯಾತ್ರೆ 1000 ದಿನಗಳನ್ನು ಪೂರೈಸಿದೆ. ಸಂಘದ ಹಿರಿಯ ಪ್ರಚಾರಕರಾದ ಸೀತಾರಾಮ ಕೆದಿಲಾಯ ಅವರ ನೇತೃತ್ವದ ಈ ಯಾತ್ರೆ ಇದೀಗ ಅಸ್ಸಾಂ ರಾಜ್ಯದ ಗುವಾಹಟಿ ಸಮೀಪದ ತೇಜಪುರ ಜಿಲ್ಲೆಯನ್ನು ಪ್ರವೇಶಿಸಿದೆ. 67ರ ಹರೆಯದ ಕೆದಿಲಾಯರು ಇದುವರೆಗೆ 12,150 ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಸಂಚರಿಸಿ ದಾಖಲೆ ಮಾಡಿದ್ದಾರೆ.
ಭಾರತ ಪರಿಕ್ರಮ ಯಾತ್ರೆಯು 2012ರ ಆಗಸ್ಟ್ 9ರಂದು ಕನ್ಯಾಕುಮಾರಿಯಿಂದ ಆರಂಭಗೊಂಡಿತ್ತು. ಆರೆಸ್ಸೆಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು 1000 ದಿನಗಳನ್ನು ಪೂರೈಸಿದ ಯಾತ್ರೆಯ ಈ ಸಂದರ್ಭದಲ್ಲಿ ಸೀತಾರಾಮ ಕೆದಿಲಾಯ ಅವರನ್ನು ಅಭಿನಂದಿಸಿ, ಸಂದೇಶ ಕಳುಹಿಸಿದ್ದಾರೆ. ಸಂಘದ ಅನೇಕ ಹಿರಿಯ ಕಾರ್ಯಕರ್ತರು ಸೀತಾರಾಮ ಕೆದಿಲಾಯ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಿದ್ದಾರೆ. ಸರಸಂಘಚಾಲಕರ ಸಂದೇಶವನ್ನು ಕೆಳಗೆ ಕೊಡಲಾಗಿದೆ.

ಸರಸಂಘಚಾಲಕರ  ಶುಭಹಾರೈಕೆ     

ಸ್ವದೇಶವನ್ನು ಆರಾಧ್ಯದೈವವೆಂದು ಭಾವಿಸಿ ಸಮಾಜ ನಿರೀಕ್ಷಣ  ಹಾಗೂ ಸಮಾಜ ಜಾಗೃತಿ ಮಾಡುವ ಉದ್ದೇಶದಿಂದ ಪರಿವ್ರಾಜಕ ಪರಂಪರೆಯು ಭಾರತದಲ್ಲಿ ಪ್ರಾಚೀನ ಕಾಲದಿಂದ ನಡೆದು ಬಂದಿದೆ. ಅದರಿಂದಲೇ ಪ್ರೇರಣೆ ಪಡೆದು ಸಂಘದ ಸೇವಾ ವಿಭಾಗದ ಹೊಣೆಯಿಂದ ಮುಕ್ತರಾದ ಬಳಿಕ ಶ್ರೀ ಸೀತಾರಾಮ ಕೆದಿಲಾಯರು ಭಾರತ ಪರಿಕ್ರಮದ ಸಂಕಲ್ಪ ತೊಟ್ಟರು. ಕನ್ಯಾಕುಮಾರಿಯಲ್ಲಿ ಶ್ರೀಪಾದ ಶಿಲೆಯ ದರ್ಶನದಿಂದ ಪ್ರಾರಂಭಿಸಿ ನಿತ್ಯವೂ ಕಾಲ್ನಡಿಗೆಯಿಂದ ಪಶ್ಚಿಮ ಘಟ್ಟ, ಪಶ್ಚಿಮ ಸಮುದ್ರ ಸೀಮೆ ಮತ್ತು ಕಾಶ್ಮೀರದವರೆಗಿನ ಪಶ್ಚಿಮ ಪ್ರದೇಶ ಗಡಿಯಿಂದ ಉತ್ತರ ಗಡಿಭಾಗದಲ್ಲಿ ಹಿಮಾಲಯದ ತರಾಯೀಯಲ್ಲಿರುವ ಗ್ರಾಮಗಳ ಮೂಲಕ ಹಾದು ಹೋಗಿ ಒಂದು ಸಹಸ್ರ ದಿನಗಳನ್ನು ಪೂರೈಸಿ ಈಗ ಅವರು ಪೂರ್ವದ ಅಸ್ಸಾಂ ಪ್ರದೇಶಕ್ಕೆ ಕಾಲಿಟ್ಟಿದ್ದಾರೆ. ಒಂದು ಸಹಸ್ರ ದಿನಗಳ ಈ ದುರ್ಗಮ ಯಾತ್ರೆಯು ತನ್ನ ನಿರ್ದಿಷ್ಟ ಉದ್ದೇಶಕ್ಕೆ ಅನುಸಾರವಾಗಿ ಪೂರ್ಣಗೊಳಿಸಲು ಪರಿಶ್ರಮ ಪಡುವುದು ಒಂದು ಅಭಿನಂದನೀಯ ಕಾರ್ಯವಾಗಿದೆ. ಈಗ ಅವರು ಭಾರತದ ಪೂರ್ವ ಮತ್ತು ನೈಋತ್ಯ ಪ್ರದೇಶಗಳಲ್ಲಿ ಸಂಚರಿಸುತ್ತ ಈ ಪ್ರದಕ್ಷಿಣೆಯನ್ನು ಯಶಸ್ವಿಯಾಗಿ ಪೂರೈಸುವುದರಲ್ಲಿ ಯಾರಿಗೂ ಸಂಶಯವಿಲ್ಲ.
 ಸೀತಾರಾಮರ ಈ ಪ್ರಯತ್ನವು ಕೇವಲ ಕಾಲ್ನಡಿಗೆಯಲ್ಲಿ ಸಾಗುವ ಮತ್ತೊಂದು ವಿಕ್ರಮ ಸಾಧಿಸುವ ಉದ್ದೇಶ ಹೊಂದಿಲ್ಲ. ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ.’ ಈ ಯಾತ್ರೆಯಲ್ಲಿ ಅವರು ಗ್ರಾಮಸ್ಥರೊಂದಿಗೆ ಬೆರೆತು ಭಾರತದ ಪುಣ್ಯ ಸನಾತನ ಮತ್ತು ನಿತ್ಯನೂತನ ಸಂಸ್ಕೃತಿಯ ಪ್ರಕಾರ ಇಂದಿನ ಪರಿಸ್ಥಿತಿಯಲ್ಲಿ ಗೋವು, ಗ್ರಾಮ ಮತ್ತು ಪ್ರಕೃತಿ ಆಧಾರಿತ ಜೀವನ ನಡೆಸುವ ಬಗೆ ಹೇಗೆಂದು ಇದರ ಉಪದೇಶ ನೀಡದೆ, ಅನೇಕ ಗ್ರಾಮಗಳಲ್ಲಿ ಆ ಸತ್ಯಾಧಾರಿತ ಹಾಗೂ ಸಾತ್ವಿಕ ಧರ್ಮ – ಜೀವನದ ಆಚರಣೆಗೆ ಚಾಲನೆಯನ್ನೂ ನೀಡಿದ್ದಾರೆ. ಭಾರತೀಯ ಸಮಾಜ ಮತ್ತು ಸ್ವನಿರ್ಮಿತ ಸಮಸ್ಯೆಗಳಿಗೆ ಸಿಲುಕಿರುವ ಮಾನವತೆಗೆ ಇದೊಂದು ಬಹು ಸಮಯೋಚಿತ ಮತ್ತು ಉಪಯುಕ್ತ ಕಾರ್ಯವಾಗಿದೆ. ಶ್ರೀ ಸೀತಾರಾಮಜಿಯವರು ಯಾತ್ರೆಯ ಉಳಿದ ಭಾಗವನ್ನು ದೃಢಸಂಕಲ್ಪದಿಂದ ಯಶಸ್ವಿಯಾಗಿ ಪೂರ್ಣಗೊಳಿಸುವರು ಎಂಬ ಶುಭಹಾರೈಕೆ ಮತ್ತು ವಿಶ್ವಾಸವಂತೂ ಇದೆ; ಅವರ ಈ ಯಾತ್ರೆಯಲ್ಲಿ ಸಹಯೋಗಿ ಮತ್ತು ಸಹಕಾರಿಗಳಾಗುತ್ತ ಯಾತ್ರೆಯ ಮಾರ್ಗದಲ್ಲಿನ ಎಲ್ಲ ಕಾರ್ಯಕರ್ತರು ಹಾಗೂ ಜನತೆ – ಸಮಾಜವು ಈ ಯಾತ್ರೆಯ ಬಹುಜನ ಹಿತಾಯದ ಸಂದೇಶವನ್ನು ಸ್ವಂತ ಆಚರಣೆಯಿಂದ ನೂರುಪಟ್ಟು ಪ್ರಚಾರ ಮತ್ತು ಪ್ರಸಾರ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಕರ್ತವ್ಯವನ್ನು ನಿರ್ವಹಿಸುವ ಸುಬುದ್ಧಿ ಮತ್ತು ಶಕ್ತಿ ನಮಗೆಲ್ಲ ಪ್ರಾಪ್ತವಾಗಲೆಂದು ಪ್ರಾರ್ಥಿಸುತ್ತ ನಾನು ಶ್ರೀ ಸೀತಾರಾಮಜಿಯವರ ಯಾತ್ರೆಗೆ ಸಂಪೂರ್ಣ, ಸುಫಲ ಮತ್ತು ಸಫಲತೆಯ ಶುಭಹಾರೈಕೆಯನ್ನು ಮತ್ತೊಮ್ಮೆ ವ್ಯಕ್ತಪಡಿಸುವೆ.
 – ಮೋಹನ್ ಭಾಗವತ್
 ನಾಗಪುರ, 30.04.2015
 

   

Leave a Reply