ಭಾಷಾಭಿಮಾನ-ದೇಶಾಭಿಮಾನ ಎರಡೂ ಇರಲಿ

ಲೇಖನಗಳು ; ಸಂದರ್ಶನಗಳು - 0 Comment
Issue Date : 30.4.2016

-ರ. ಶಿವಶಂಕರ

ಶಿಕ್ಷಣ ರಂಗದಲ್ಲಿ ವಿವಿಧ ಮುಖ ಪ್ರತಿಭಾನ್ವಿತರಾದ ಪ್ರೊ.ಜಿ. ಅಶ್ವತ್ಥನಾರಾಯಣರವರು ಕನ್ನಡ ನಾಡಿ ಒಬ್ಬ ವಿಶಿಷ್ಟ ವ್ಯಕ್ತಿ. ಇಂಜಿನಿಯರಿಂಗ್, ಸಮಾಜಶಾಸ್ತ್ರ, ಕನ್ನಡ ಎಂ.ಎ. ಭಾಷಾಶಾಸ್ತ್ರ ಇತ್ಯಾದಿ ವಿಷಯಗಳಲ್ಲಿ ಪದವಿ 

ಪ್ರಾಪ್ತರು. 30 ವರ್ಷ ಪ್ರಾಧ್ಯಾಪಕರಾಗಿದ್ದ ಇವರು ಎಂ.ಫಿಲ್.,
ಕೆಎಎಸ್, ಐಎಎಸ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕ ರಾಗಿದ್ದರು. ಸರ್ಕಾರಿ ಅಧಿಕಾರಿಗಳಿಗೆ ಆಡಳಿತ ಕನ್ನಡ ಶಿಬಿರ,
ಅಮೆರಿಕ ಕನ್ನಡ ಮಕ್ಕಳಿಗೆ ಪಾಠ, ಅಕ್ಕ ಸಮ್ಮೇಳನ ವ್ಯವಸ್ಥಾಪನೆ,
ಗ್ರಂಥ ರಚನೆ ಇತ್ಯಾದಿ ಮೂಲಕ ಕನ್ನಡ ಸೇವೆ ಸಲ್ಲಿಸಿದ್ದಾರೆ. ಕಸಾಪ ಗೌರವ ಕಾರ್ಯದರ್ಶಿಯಾಗಿ, ಸಮಗ್ರ ದಾಸಸಾಹಿತ್ಯ
50 ಸಂಪುಟಗಳ ಸಹಸಂಪಾದಕರಾಗಿ, ಆಕಾಶವಾಣಿ- ದೂರದರ್ಶನ-ಎಫ್.ಎಂ. ವಾಹಿನಿ ಮೂಲಕ ಭಾಷೆ-ಸಂಸ್ಕೃತಿ ಪ್ರಸಾರಕರಾಗಿ, ಜೀವನ ಚರಿತ್ರೆಗಳು-ವಿವಿಧ ಗ್ರಂಥಗಳ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಷ್ಟೇ ಅಲ್ಲದೆ ನಾಡು-ನುಡಿಗೆ ಶ್ರಮಿಸುತ್ತಿರುವ ಹತ್ತಾರು ಸಂಘ-
ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

ಸಾಹಿತ್ಯದ ಉದ್ದೇಶವೇನು ? 

ಲೋಕಾನುಭವವನ್ನು ಸಾಹಿತ್ಯಾನುಭವವಾಗಿಸಿ ಮುಂದಿನವರಿಗೆ ನೀಡುವುದು. ಪ್ರಾಣಿಗಳಿಗೂ ಮನುಷ್ಯನಿಗೂ ಅದೇ ವ್ಯತ್ಯಾಸ. ಅವು ತಮ್ಮ ಅನುಭವವನ್ನು ತಮ್ಮ ತಪ್ಪನ್ನು ಸರಿಯನ್ನು ಬೇರೆಯವರಿಗೆ ತಿಳಿಸಿಕೊಡುವಲ್ಲಿ ಅಸಮರ್ಥವಾಗಿರುವುದರಿಂದ ಅವುಗಳು ಅದದೇ ರೀತಿಯಲ್ಲಿ ಜೀವನ ನಡೆಸುತ್ತವೆ. ಅಭಿವೃದ್ದಿಯ ಮುಂದುವರಿದ ಜೀವನಕ್ಕಾಗಿ ಸಾಹಿತ್ಯ ಲೋಕಾನುಭವವನ್ನು ಕಟ್ಟಿಕೊಡುತ್ತವೆ.
ತಮ್ಮ ಬಾಲ್ಯದ ಚಟುವಟಿಕೆಗಳ ಬಗ್ಗೆ ಏನು ಹೇಳುವಿರಿ?
ನಾನು ಹುಟ್ಟಿ ಬೆಳೆದದ್ದೆಲ್ಲಾ ಚಾಮರಾಜಪೇಟೆಯಲ್ಲಿ. ಓದಿದ್ದು ಸರ್ಕಾರಿ ಮಾಧ್ಯಮಿಕ ಶಾಲೆ, ಕೋಟೆ ಹೈಸ್ಕೂಲ್ ಹೀಗೆ ಸರಿ ಸುಮಾರು ಎಲ್ಲಾ ಸರ್ಕಾರಿ ಶಾಲೆ ಕಾಲೇಜುಗಳೆ. ಎಸ್.ಜೆ. ಪಾಲಿಟೆಕ್ನಿಕ್‌ನಲ್ಲಿ ವಿಶ್ವೇಶ್ವರಯ್ಯನವರ ಸ್ನೇಹ ಒಡನಾಟ ಸಿಕ್ಕಿತ್ತು. ಸಿ.ಕೆ. ಕಪನೀಪತಿ ರಾಜಪ್ಪ ಅವರಿದ್ದುದರಿಂದ ವಿಶ್ವೇಶ್ವರಯ್ಯನವರನ್ನು ಕಾಣುವ ಭಾಗ್ಯ ನಮ್ಮದಾಗಿತ್ತು. ಅವರ ಕರಾರುವಾಕ್ಕು ಸಮಯ ಪಾಲನೆ ಇತ್ಯಾದಿಗಳು ನನ್ನ ಮೇಲೆ ಹೆಚ್ಚು ಪರಿಣಾಮ ಬೀರಿತು. ಅವರಂತೆ ಅಭ್ಯಾಸ ಮಾಡಿಕೊಂಡು ತರಗತಿ ಸಮಾರಂಭಗಳಿಗೆ ಆಗಲಿ ಇನ್ನಿತರ ಚಟುವಟಿಕೆಗಳೇ ಆದರು ಶಿಸ್ತನ್ನು ರೂಪಿಸಿಕೊಂಡೆ. ಅದರಂತೆ ಪದ್ಮನಾಭ ಶರ್ಮ ಅವರು ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಿದರು. ಸಂಸ್ಕೃತದ ಅಧ್ಯಾಪಕರು ಸಂಗೀತ ಹಾಗೂ ಭಗವದ್ಗೀತೆಯನ್ನು ಹೇಳಿಕೊಟ್ಟು ಮನದಟ್ಟು ಮಾಡಿಕೊಟ್ಟರು. ಅವರ ಅಂದಿನ ಪ್ರೇರಣೆಯಂತೆ ಇಂದು ಭಗವದ್ಗೀತೆಯ ಶಬ್ದಕೋಶ ರಚಿಸುತ್ತಿದ್ದೇನೆ. ನನ್ನ ಸಹಪಾಠಿ ಚಿ. ಉದಯಶಂಕರ್ ರಿಂದಲೂ ಸಾಕಷ್ಟು ಕಲಿತಿದ್ದೇನೆ. ಬಾಲ್ಯದಲ್ಲಿ ಸಾಹಿತ್ಯ ಪರಿಷತ್ತಿನ ಅಂಗಳದಲ್ಲಿ ಹಲವಾರು ಸಾಹಿತಿಗಳ ಸಹವಾಸ ದೊರೆಯುತ್ತಿತ್ತು. ಅವರುಗಳ ಮೂಲಕ ಸಾಹಿತ್ಯದ ಪರಿಚಯವೂ ಆಯಿತು. ಕೋಟೆ ರಾಮೋತ್ಸವ ಕೂಡ ಹಲವು ದಿಗ್ಗಜರ ಪರಿಚಯ ಹಾಗೂ ಪರಿಣಾಮಕ್ಕೆ ಕಾರಣವಾಗಿದೆ.
ತಮ್ಮ ಸಾಧನೆಗಳ ಕ್ಷೇತ್ರಗಳು ಯಾವುವು?
ಸಾಹಿತ್ಯ, ಗ್ರಂಥಸಂಪಾದನೆ, ವ್ಯಕ್ತಿ ಚಿತ್ರಣಗಳು, ಸಂಶೋಧನೆ, ಕನ್ನಡ ಕಲಿಸುವುದು. ಅಮೇರಿಕಾದ ಅಕ್ಕ ಸಂಘಟನೆಯ ಹಲವು ಬಗೆ ಜವಾಬ್ದಾರಿ ನಿರ್ವಹಿಸಿದ್ದೇನೆ. ವಿದೇಶಿ ಹಾಗೂ ಪರಭಾಷಾ ಕನ್ನಡೇತರರಿಗೆ ಕನ್ನಡ ಕಲಿಸಲು ಸುಲಭ ಕನ್ನಡ ಲಿಪಿ ಕಲಿಕೆ ಎಂಬ ಕೈಪಿಡಿ ರಚಿಸಿದ್ದೇನೆ. ಅದನ್ನು ಕ್ಯಾಲಿಪೋರ್ನಿಯಾದ ಸಂಸ್ಥೆ ಪ್ರಕಟಿಸಿದೆ. ಕನ್ನಡ ಶಿಬಿರಗಳನ್ನು ಏರ್ಪಡಿಸಿದ್ದೇನೆ. ವಿದೇಶಗಳಲ್ಲೂ ಹಲವಾರು ಉಪನ್ಯಾಸಗಳನ್ನು ನೀಡಿದ್ದೇನೆ.
ತಾವು ಅಕ್ಕ ಸಂಘಟನೆಯ ಹಾಗೂ ಇನ್ನಿತರೆ ವಿದೇಶಿ ಸಂಘಟನೆಗಳೊಂದಿಗೂ ಗುರುತಿಸಿಕೊಂಡಿದ್ದೀರಿ. ಅದರ ಬಗ್ಗೆ ಹೇಳಬಹುದೆ?
ನನ್ನ ಬಂಧುಗಳು, ಸ್ನೇಹಿತರು ಹಾಗೂ ಹಲವಾರು ವಿದ್ಯಾರ್ಥಿಗಳು ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಲ್ಲಿ ಅನೇಕರನ್ನು ನಾನು ಹಲವುಬಾರಿ ಭೇಟಿಯಾಗಿದ್ದೇನೆ. ಅಮೇರಿಕಾ ಒಂಟಿಕೊಪ್ಪಲ್ ಪಂಚಾಂಗ ಪ್ರಕಟಿಸುತ್ತಿದ್ದ ಕೃಷ್ಣ ಶಾಸ್ತ್ರಿಗಳು ಹಲವಾರು ಚಟುವಟಿಕೆ ನಡೆಸುತ್ತಿದ್ದರು. ಅವರೊಂದಿಗೆ ನಾಗಲಕ್ಷ್ಮಿ ಹರಿಹರೇಶ್ವರ ಇಲ್ಲಿನ ಅನೇಕ ಸಾಹಿತಿಗಳನ್ನು ಬರಮಾಡಿಕೊಂಡು ಹಲವು ಚಟುವಟಿಕೆ ನಡೆಸುತ್ತಿದ್ದರು. ಅವರ ಪರಿಚಯದಿಂದ, ಪ್ರೇರಣೆಯಿಂದ ಅಲ್ಲಿ ಅನೇಕ ಚಟುವಟಿಕೆಗಳ ವ್ಯವಸ್ಥಾಪನೆಯಲ್ಲಿ ಪಾಲ್ಗೊಂಡೆ.
ಹಲವಾರು ಸಂಘ ಸಂಸ್ಥೆಗಳೊಂದಿಗೆ ಕೆಲಸ ಮಾಡಿರುವ ಅನುಭವಗಳೇನು?
ಅಖಿಲ ಕರ್ನಾಟಕ ಮಕ್ಕಳ ಕೂಟದಲ್ಲಿ ನಾಲ್ಕೈದು ದಶಕದಿಂದ ಕೆಲಸ ಮಾಡಿದ್ದೇನೆ. ಅವರ ಮೂಲಕ ಮಕ್ಕಳಿಗೆ ಕಥೆ ಹೇಳುವುದು, ಸಾಹಿತ್ಯ ರಚನೆಗೆ ಪ್ರೇರೇಪಿಸುವುದು ಇತ್ಯಾದಿಯೊಂದಿಗೆ ಬಾಲ ಜಗತ್ ಕಾರ್ಯಕ್ರಮ ನಡೆಸಿಕೊಟ್ಟಿದ್ದೇನೆ.
ದೇವುಡು ಪ್ರತಿಷ್ಠಾನದೊಂದಿಗೆ ಸೇರಿ ಮಕ್ಕಳ ಸಾಹಿತ್ಯ ತಯಾರಿಯಲ್ಲಿ ಇನ್ನಿತರ ಕೆಲಸಗಳಲ್ಲಿ ದುಡಿದಿದ್ದೇನೆ.
ಇಂದಿನ ಅನೇಕರು ಮಕ್ಕಳ ಸಾಹಿತ್ಯ ರಚನೆ ಹೆಸರಿನಲ್ಲಿ ಕೇವಲ ಕೃತಕ ಹಾಗೂ ಅಪ್ರಯೋಜಕ ವಿಚಾರಗಳನ್ನು ಬರೆಯುತ್ತಾರೆ.
ಅನಕೃ, ಹೊನ್ನಪ್ಪ ಭಾಗವತರ್ ಹಾಗೂ ಇನ್ನಿತರರು ರಚಿಸಿದ ಕರ್ನಾಟಕ ರಸಾಕಲಾ ಪರಿಷತ್ತಿನ ಆರಂಭದಿಂದಲೂ ಸದಸ್ಯ. ಎಂ.ಕೆ. ರಾಘವೇಂದ್ರ ರಾಯರು ರೂಪಿಸಿದ ಕರ್ನಾಟಕ ಗಮಕ ಕಲಾ ಪರಿಷತ್ತಿನ ಸ್ಥಾಪಕರಲ್ಲೊಬ್ಬನಾಗಿ ಅದರ ನೀಲನಕ್ಷೆ ತಯಾರಿಯಲ್ಲೂ ಪಾತ್ರವಹಿಸಿದ್ದೇನೆ. ಗಮಕದ ಮೂಲಕ ಹಲವು ಕಾವ್ಯಗಳನ್ನು ಜನರಿಗೆ ಮುಟ್ಟಿಸಲು ಸಾಧ್ಯವಾಗಿದೆ.
ಎಂ.ವಿ. ಸೀತಾರಾಮಯ್ಯ ಅವರು ಆರಂಭಿಸಿದ ಬಿ.ಎಂ.ಶ್ರೀ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿಯಲ್ಲಿ ಕೆಲಸ ಮಾಡಿದ್ದೇನೆ.
ಈಗ ಕನ್ನಡ ಸಾಹಿತ್ಯ ಪರಿಷತ್ತಿನ ಒಡನಾಟದ ಬಗ್ಗೆ ಏನನ್ನುವಿರಿ?
ನನ್ನ ಬಾಲ್ಯ ಪೂರ್ಣ (ಪರಿಷತ್ತಿನ ನಿಕಟದಲ್ಲೇ ಇದ್ದ ಮನೆಯಾದ ಕಾರಣ) ಪ್ರತಿದಿನ ಬಿಡುವಿನ ವೇಳೆ ಸಿಕ್ಕಾಗೆಲ್ಲಾ ಅಲ್ಲೇ ಎಡತಾಕುತ್ತಿದ್ದೆ. ವಿದ್ಯಾರ್ಥಿ ದೆಸೆಯಲ್ಲಿ ಕೈಬರಹ ಪತ್ರಿಕೆಗಳನ್ನು ಪ್ರಕಟಿಸುತ್ತಿದ್ದವರು ನನ್ನ ಮಿತ್ರರಾಗಿದ್ದರು. ಅದರಲ್ಲಿ ಕೆಲವರು ಜೀವನ ಪೂರ್ತಿ ಸಾಹಿತ್ಯ ಪರಿಚಾರಿಕೆಯಲ್ಲೇ ಜೀವನ ಸವೆಸಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಅಲ್ಲಿನ ಒಡನಾಡಿಯಾಗಿ, ಸದಸ್ಯನಾಗಿ ಕಡೆಗೆ ಪರಿಷತ್ತಿನ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ಎಂ.ಆರ್.ಶ್ರೀ ಅವರ ಕಾಲದಿಂದ ನಿಕಟ ಸಂಬಂಧ ಹೊಂದಿದ್ದೆ. ಇತ್ತೀಚೆಗೆ ನಿಧನರಾದ ಪುಂಡಲೀಕ ಹಾಲಂಬಿಯವರ ಅವಧಿಯಲ್ಲಿ ಪ್ರಕಟಣೆಗೊಂಡ ‘ಪರಿಷತ್ತು 100’ ಎಂಬ ಸಮಗ್ರ ಪರಿಷತ್ತಿನ 1000 ಪುಟಗಳ ದಾಖಲೆ ಯೋಗ್ಯ ಇತಿಹಾಸ ರಚನೆಯಲ್ಲಿ ವೌಲಿಕ ಕಾರ್ಯಮಾಡಿದೆ. ಈ. ನಾರಾಯಣ ಅವರ ನೇತೃತ್ವದಲ್ಲಿ ‘ಮನೆ ಮನೆಗೆ ಪುಸ್ತಕ’ ಕಾರ್ಯಕ್ರಮದಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದೆ. ಗುಂಡೂರಾಯರ ಜೊತೆ ಪರಿಷತ್ತಿನ ಪುಸ್ತಕ ಭಂಡಾರವನ್ನು ವ್ಯವಸ್ಥೆಗೊಳಿಸುವಲ್ಲಿ ಸಹಕರಿಸಿರುವೆ. 50ಕ್ಕೂ ಹೆಚ್ಚು ವರ್ಷ ಬಳಿಯಲ್ಲಿರುವುದರಿಂದ ಅಲ್ಲಿನ ಪುಸ್ತಕ ಭಂಡಾರ ವಿಭಾಗಕ್ಕೆ ಸುಲಭವಾಗಿ ಮತ್ತು ಹೆಚ್ಚು ಹತ್ತಿರವಾಗಿದ್ದೇನೆ.
ತಮಗೆ ಬಂದಿರುವ ಪ್ರಶಸ್ತಿಗಳ ಬಗ್ಗೆ ವಿವರಿಸಬಹುದೆ?
ನನಗೆ ಪ್ರಶಸ್ತಿಗಳ ಬಗ್ಗೆಯೇನೂ ಹೆಚ್ಚು ಆಸಕ್ತಿಯಿಲ್ಲ. ಆದರೂ ಕೆಲವು ಪ್ರಶಸ್ತಿಗಳು ಬಂದಿವೆ.
ಅ. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮಹಾಲಿಂಗನ ರಂಗನ
ಅನುಭವಾಮೃತ ಗ್ರಂಥ ಸಂಪಾದನೆಗಾಗಿ ಪ್ರಶಸ್ತಿ ನೀಡಿದೆ.
ಆ. 50 ಸಂಪುಟಗಳಲ್ಲಿ ಸಮಗ್ರ ದಾಸ ಸಾಹಿತ್ಯ ರಚನೆಯಲ್ಲಿ ಶ್ರೀನಿವಾಸ
ಹಾವನೂರು ಅವರ ಜೊತೆ ಸಂಚಾಲಕನಾಗಿ ಸೇವೆ ಸಲ್ಲಿಸಿದ್ದಕ್ಕಾಗಿ
ಗುರುಗೋವಿಂದ ವಿಠ್ಠಲ ಪ್ರಶಸ್ತಿ ಸಂದಿದೆ.
ಇ. ಕೆ.ಎಸ್.ಆರ್.ಟಿ.ಸಿ.ಯವರಿಂದ ಚಂಪಾ ಅವರ ನೇತೃತ್ವದ ಸಮಿತಿ
ಕುವೆಂಪು ಪ್ರಶಸ್ತಿ ನೀಡಿದೆ.
ತಮ್ಮ ಕೃತಿಗಳು ಹಾಗೂ ಅವುಗಳ ವೈಶಿಷ್ಯತೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಬಹುದೆ?
ಕನ್ನಡ ಕಲಿಕೆಗಾಗಿ ಸುಲಭ ಕನ್ನಡ ಲಿಪಿ ಕಲಿಕೆ, ದಾಸ ಸಾಹಿತ್ಯ, ವಿಜಯದಾಸರ ಉಗಾಬೋಗಗಳು ಕೀರ್ತನೆಗಳ 3 ಪುಸ್ತಕಗಳು ಹೊರತರುವಲ್ಲಿ ಶ್ರಮಿಸಿದ್ದೇನೆ. ನಿಘಂಟುಗಳಲ್ಲಿದ್ದ ಆಸಕ್ತಿಯಿಂದಾಗಿ ಬುಕ್ಕಾಂಬುದಿ ಪ್ರಾದೇಶಿಕ ಶಬ್ದಕೋಶ ಕೃಷ್ಣಮೂರ್ತಿ ಜೊತೆ ಸಹ ಸಂಪಾದನೆಯಲ್ಲಿ ರಚಿಸಿದ್ದೇನೆ. ಇದು ಬೆಟಗೇರಿ ಶಬ್ದಕೋಶವನ್ನು ಬಿಟ್ಟರೆ ಮತ್ತೊಂದು ಪ್ರಾದೇಶಿಕ ಶಬ್ದಕೋಶವಾಗಿದೆ. ಇದೀಗ ಭಗವದ್ಗೀತಾ ಶಬ್ದಕೋಶವನ್ನು ಕನ್ನಡದಲ್ಲಿ ಪ್ರಕಟಿಸಲು ಸಿದ್ಧಪಡಿಸಿದ್ದೇನೆ. ಹಿರಿಯ ಕನ್ನಡ ಸಾಹಿತಿಗಳ ವ್ಯಕ್ತಿ ಚಿತ್ರಣದಲ್ಲಿ 50 ಜನ ಕನ್ನಡದ ಹಿರಿಯ ಸಾಹಿತಿಗಳ ಬಗ್ಗೆ ಭಾಷಣ, ಲೇಖನ ಬರೆದು ಕನ್ನಡ ನಾಡಿನ ದಿಗ್ಗಜರಾದ ಅನೇಕ ಸಾಹಿತಿಗಳನ್ನು ಪರಿಚಯಿಸಿ ದಾಖಲಿಸಿರುವ ಸಂತಸ ನನಗಿದೆ.
ಸಂಸ್ಕೃತಿ ಮತ್ತು ಭಾಷೆಯ ಸಂಬಂಧ ನಿಮ್ಮ ಅಭಿಪ್ರಾಯವೇನು?
ಸಂಸ್ಕೃತಿ ಮೊದಲು ಮನೆಯಲ್ಲಿ ಉಳಿಯಬೇಕು. ಆನಂತರ ಮನದಲ್ಲಿ ಜನದಲ್ಲಿ ಉಳಿಯುತ್ತದೆ. ಈ ಹೊತ್ತು ಮನೆಯಲ್ಲಿ ಸಂಸ್ಕೃತಿಯನ್ನು ಕೈಬಿಟ್ಟಿರುವುದೇ ಅನಾಹುತಗಳಿಗೆ ಕಾರಣ. ಶಾಲೆಗಳಲ್ಲಿ ಕನ್ನಡ ಸಂಸ್ಕೃತಿ ಇಲ್ಲ. ಉದಾ: ನೋಟೀಸ್ ಬೋರ್ಡ್ ಪಠ್ಯಗಳಲ್ಲಿ ಕನ್ನಡ ಇಲ್ಲ. ಇಂಗ್ಲೀಷನ್ನೂ ಕನ್ನಡದಲ್ಲಿ ಕಲಿಸಲಾಗುತ್ತಿದೆ. ಕಾಲ ಬದಲಾಗಿ ಕನ್ನಡವನ್ನೂ ಇಂಗ್ಲಿಷ್‌ನಲ್ಲೇ ಕಲಿಸುವ ಸ್ಥಿತಿ ಬಂದಿದೆ!
ಕನ್ನಡ ಪತ್ರಿಕೆಗಳನ್ನು ನಿತ್ಯ ತರಿಸಿಕೊಳ್ಳಬೇಕು. ಅದರ ಜೊತೆಗೆ ಬೇರೆ ಭಾಷೆಯ ಪತ್ರಿಕೆಗಳನ್ನು ತರಿಸಿಕೊಂಡರೆ ತಪ್ಪಲ್ಲ. ಆದರೆ ಕನ್ನಡವನ್ನೇ ಬಿಡುವುದು ಸರಿಯಲ್ಲ. ಮನೆಯಲ್ಲಿ ಕನ್ನಡ ಕಲಿಯಬೇಕು, ಬೆಳಸಬೇಕು, ಉಳಿಸಬೇಕು. ಟಿ.ವಿ.ಗಳಲ್ಲೂ ಕನ್ನಡ ಚಾನಲ್‌ಗೆ ಮಹತ್ವ ನೀಡಬೇಕು. ಹಿಂದೆ ಶಾಲೆ, ಮನೆ, ಆಟದ ಮೈದಾನ ಈ ಮೂರು ಬಿಟ್ಟು ಚಟುವಟಿಕೆ ಇರಲಿಲ್ಲ. ಅಜ್ಜಿ ಮನೆ, ಜಾತ್ರೆ, ರಥೋತ್ಸವಗಳಲ್ಲೂ ಕನ್ನಡ ಸಂಸ್ಕೃತಿ ಇತ್ತು ಈಗ ಎಲ್ಲೆಡೆ ಕನ್ನಡ ವಾತಾವರಣ ಮಾಯವಾಗುತ್ತಿದೆ. ಇದೊಂದು ದುರಂತ. ಎಲ್ಲರೂ ಗಮನಿಸಿ ಸರಿಪಡಿಸಬೇಕು.
ರಾಷ್ಟ್ರ ಹಾಗೂ ಭಾಷಾ ಚಳುವಳಿಗಳ ಸಂಬಂಧದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ದೇಶಾಭಿಮಾನ, ಭಾಷಾಭಿಮಾನ ಎನ್ನುವುದು ನಮ್ಮ ಜೀವನದಲ್ಲಿ ಬಹುಮುಖ್ಯ ವಿದ್ಯಮಾನ ಅದನ್ನು ಮರೆಯಬಾರದು. ಭಾಷಾಭಿಮಾನ ಇಲ್ಲದಿದ್ದಲ್ಲಿ ನಮ್ಮ ಸಂಸ್ಕೃತಿ ಉಳಿಯುವುದಿಲ್ಲ. ನಮ್ಮ ಭಾಷೆ ಉಳಿದರೆ ಮಾತ್ರ ಎಲ್ಲಾ ಉಳಿಯುತ್ತದೆ. ಆದ್ದರಿಂದ ಕನ್ನಡಿಗರು ಕನ್ನಡಾಭಿಮಾನ ಬೆಳೆಸಿಕೊಳ್ಳುವುದು ಅಗತ್ಯ. ಎರಡನೆಯದಾಗಿ ದೇಶಾಭಿಮಾನ ಇದ್ದೇ ಇರಬೇಕಾದ ವಿಷಯ. ಜಯಭಾರತ ಜನನಿಯ ತನುಜಾತೆ ಎನ್ನುವಾಗ ಜಯ ಕರ್ನಾಟಕ ಮಾತೆ ಎನ್ನುತ್ತೇವೆ. ಕರ್ನಾಟಕ ನಮ್ಮ ಮಾತೆಯಾಗಬೇಕು. ಆದರೆ ಅವಳು ಭಾರತಮಾತೆಯ ತನುಜಾತೆ ಎಂಬುದನ್ನು ಮರೆಯಬಾರದು. ಆದ್ದರಿಂದ ಆಲೂರು ವೆಂಕಟರಾಯರ ಮಾತನ್ನು ನೆನಪಿಸಿಕೊಳ್ಳುತ್ತೇನೆ. ಭಾರತಾಂತರ್ಗತ ಕನ್ನಡಿಗರು, ಕರ್ನಾಟಕಾಂತರ್ಗತ ಉಳಿದ ಭಾರತೀಯರು ಆ ಭಾವನೆಯನ್ನು ಇಟ್ಟುಕೊಳ್ಳಬೇಕು. ಭಾರತವನ್ನು ಮರೆಯಬಾರದು ಕರ್ನಾಟಕವನ್ನು ಬಿಡಬಾರದು.
ಸ್ವಾತಂತ್ರ್ಯ ಚಳುವಳಿ ಹಾಗೂ ಕರ್ನಾಟಕ ಏಕೀಕರಣ ಚಳುವಳಿಗಳು ವಿರೋಧವಾಗಿ ನಡೆದಿಲ್ಲ. ಎರಡೂ ಚಳುವಳಿಗಳಲ್ಲೂ ಒಂದೇ ಜನ ಹೋರಾಡಿದ್ದಾರೆ. ಆಲೂರು ವೆಂಕರಾಯರು ತಿಲಕರ ಗೀತಾ ರಹಸ್ಯವನ್ನು ಕನ್ನಡಕ್ಕೆ ತಂದರು. ಡಿವಿಜಿಯವರು ಗೋಖಲೆಯವರ ಪರಮ ಭಕ್ತರು, ಗೋಖಲೆ ಸಾರ್ವಜನಿಕ ಸಂಸ್ಥೆ ಮಾಡಿ ಶ್ರಮಿಸಿದವರು ಹಾಗೆ ಕನ್ನಡದಲ್ಲಿಯೂ ಅಷ್ಟೇ ಕೆಲಸಮಾಡಿದರು. ಆರ್. ವ್ಯಾಸರಾವ್ ರವರು ಬಂಗಾಳಿ ಕಲಿತವರು. ಪ್ರಾಕೃತಿಕ ಭಾಷೆ ಕಲಿತ ಬಿಡದಿ ಅಶ್ವತ್ಥನಾರಾಯಣ ಶಾಸ್ತ್ರಿಯವರ ಬ್ರಹ್ಮಜ್ಞಾನವನ್ನು ಕನ್ನಡಕ್ಕೆ ತಂದವರು. ಎ.ಆರ್. ಕೃಷ್ಣ ಶಾಸ್ತ್ರಿಗಳು ಜರ್ಮನ್, ಪ್ರೆಂಚ್, ಬಂಗಾಳಿ ಕಲಿತರು. ಬಂಗಾಳಿಯಲ್ಲೇ ಇಲ್ಲದಂತ ಬಂಕಿಮ ಚಂದ್ರರನ್ನು ಕನ್ನಡಕ್ಕೆ ತಂದವರು. ಗಳಗನಾಥರು ದೇಶದ ಕಥೆಯನ್ನು ಕನ್ನಡದಲ್ಲಿ ಬರೆದರು. ಸಂಸ್ಕೃತ ಸಾಹಿತ್ಯ ಕಲಿತವರೆಲ್ಲ ಕನ್ನಡಕ್ಕೆ ಸೇವೆ ಸಲ್ಲಿಸಿದ್ದಾರೆ. ಯಾರೂ ಬರೀ ಸಂಸ್ಕೃತದಲ್ಲೇ ಉಳಿದುಕೊಂಡಿಲ್ಲ. ಆದ್ದರಿಂದ ಭಾಷೆ ಅನ್ನೋದು ಸಾಮರಸ್ಯದ ಮಾಧ್ಯಮವೇ. ಹಾಗೇ ದೇಶಾಭಿಮಾನ ಎನ್ನುವುದು ಅನಿವಾರ್ಯ ಸಂಗತಿ ಆಗಿದೆ ಅನ್ನೋದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಅದರ ಹಿನ್ನೆಲೆಯಲ್ಲಿ ಶಿಕ್ಷಣ ರೂಪಿಸಿಕೊಳ್ಳಬೇಕು.
ಶಿಕ್ಷಣ ಸುಧಾರಣೆಗೆ ನಿಮ್ಮ ಸಲಹೆಗಳೇನು?
ಇವತ್ತು ಪಠ್ಯಪುಸ್ತಕಗಳಲ್ಲಿ ಸ್ಥಳೀಯವಾದ ಭಾಷಾಭಿಮಾನ ದೇಶಾಭಿಮಾನ ಬರೋಹಾಗೆ ಪಠ್ಯ ರಚಿಸಬೇಕು. ಆದರೆ ರಾಜಕೀಯ ತುಂಬಿರೋ ವ್ಯವಸ್ಥೆಯಲ್ಲಿ ಯಾವುದೇ ಪಾಠದಲ್ಲೂ ಯಾವುದೋ ಒಂದು ಪದ ಬರೆದ್ರೆ ಅದು ಅಕ್ಷರ ಕಲಿಸೋಕೆ ಬಳಸಿರೋ ಪದ ಎಂದು ಭಾವಿಸದೆ ಅದರ ಜಾತಿ ಮೂಲಗಳನ್ನು ದೊಡ್ಡದು ಮಾಡ್ಕೊಂಡು ಬಡಬಡಾಯಿಸುತ್ತಾರೆ. ಯಾವುದೋ ಹೆಣ್ಣುಮಗಳು ಲೋಟ ತೊಳೆದಳು ಮತ್ತೊಂದು ಮಾಡಿದಳು ಎಂದು ಬರೆದರೆ ಲಿಂಗತಾರತಮ್ಯ ಎಂದು ಶುರು ಮಾಡಿದ್ರೆ ಶಿಕ್ಷಣವೇ ಅರ್ಥವಿಲ್ಲದುದು? ಪಾಶ್ಚಾತ್ಯ ಮಾದರಿ ಶಿಕ್ಷಣ ಕೊಡಲು ಹೊರಟದ್ದೇ ನಮ್ಮ ವ್ಯವಸ್ಥೆಯ ದುರವಸ್ಥೆಗೆ ಮೂಲ ಕಾರಣ, ಉದಾ: ಕನ್ನಡದಲ್ಲಿ ಶೀಘ್ರಲಿಪಿ ಇದೆ, ಕಂಪ್ಯೂಟರ್ ಶಿಕ್ಷಣ ಎಲ್ಲಾ ಇವೆ ಆದ್ರೆ ಅವೆಲ್ಲಾ ವಿದೇಶಿ ಅನುಕರಣೆಯಲ್ಲೇ ಸಾಗಿರೋದ್ರಿಂದ ಕನ್ನಡ ಸೊರಗುತ್ತಿದೆ. ಪಿಟ್‌ಮನ್ ಶಾರ್ಟ್‌ಹ್ಯಾಂಡನ್ನ ಅಳವಡಿಸಿಕೊಂಡು ಕನ್ನಡಕ್ಕೆ ತಂದ್ರು, ಆದ್ರೆ ಅದು ಕನ್ನಡದ ಜಾಯಮಾನಕ್ಕೆ ಅಂಟಲಿಲ್ಲ. ಹಾಗೇ ರೆಮಿಂಗ್ಟನ್ ಟೈಪರೈಟಿಂಗ್ ಪದ್ದತಿಯನ್ನ ಕನ್ನಡಕ್ಕೆ ಅಳವಡಿಸಿಕೊಳ್ಳೋಕೆ ಹೋದ್ರು, ನಮ್ಮ ಹಿತದೃಷ್ಠಿಯಿಂದ ಅದನ್ನು ಮಾಡಲಿಲ್ಲ. ಕೀ ಬೋರ್ಡ್ ಮಾಡುವಾಗ ನಮ್ಮ ರೀತಿಯಲ್ಲಿ ಮಾಡಬೇಕು. (ಉದಾ: ಬರಹ ಮಾಡೋ ಕಾಲಕ್ಕೆ ನನ್ನ ಪರಿಶೀಲನೆಗೆ ಬಂದಿತ್ತು.) ನಮ್ಮಲ್ಲಿ ಶಕಟರೇಖಾ ಹಳಗನ್ನಡದ ಅಕ್ಷರಗಳೂ ಇವೆ, ಅವನ್ನು ಅಳವಡಿಸದೆ ಇದ್ರೆ ಪಂಪನ ಸಾಹಿತ್ಯ ನೇರವಾಗಿ ಶುದ್ಧವಾಗಿ ಬಳಸಲು ಆಗೋಲ್ಲ ಎಂದಿದ್ದೆ. ಸಂಗೀತದ ಪರಿಭಾಷೆಗೆ ಚಿನ್ಹೆಗಳಿವೆ ಅವನ್ನು ಅಳವಡಿಸಿಕೊಳ್ಳಬೇಕು. ವೇದದಮಂತ್ರಗಳನ್ನು ಬರೆವಾಗ ಅದರ ವಿಶೇಷ ಚಿನ್ಹೆಗಳನ್ನು ಬಳಸಿಕೊಳ್ಳಬೇಕು ಎಂದಿದ್ದೆ. ಸಂಶೋಧನೆಗಳೆಲ್ಲಾ ಪಾಶ್ಚಾತ್ಯರದ್ದು, ಅದರ ಅಳವಡಿಕೆ ಮಾತ್ರ ನಮ್ಮದು ಆಗುತ್ತಿರುವುದರಿಂದ ಗೊಂದಲವಿದೆ. ನಮ್ಮ ಸಂಸ್ಕೃತಿ ತಿಳಿದವರು ಆಧುನಿಕ ತಂತ್ರಜ್ಞಾನ ಅಳವಡಿಸುವ ಕೆಲಸ ಮಾಡಿದ್ರೆ ಕನ್ನಡ ಸಂಸ್ಕೃತಿ ಉಳಿಯುತ್ತೆ, ಚೀನಾ ಮತ್ತು ಜಪಾನ್ ಈ ರೀತಿ ಮಾಡಿದ್ದಾರೆ.
ಮುಂಬರುವ ಸಾಹಿತ್ಯಪ್ರೇಮಿಗಳಿಗೂ ಸಾಹಿತ್ಯಕಾರರಿಗೂ ತಮ್ಮ ಸಂದೇಶವೇನು ?
ಇದೀಗ ನೂರಾರು ಪಿ.ಹೆಚ್.ಡಿ.ಗಳು ಬರುತ್ತಿದ್ದಾರೆ. ನಾನೂ ಹತ್ತಾರು ಜನಕ್ಕೆ ಅನಧಿಕೃತ ಮಾರ್ಗದರ್ಶನ ಮಾಡಿದ್ದೇನೆ. ಅದಕ್ಕೆ ಕಾರಣ ಕೇಂದ್ರ ಸರ್ಕಾರದ ಯು.ಜಿ.ಸಿ. ನಿಯಮಗಳು. ಅವರು ಸೇವೆಯಲ್ಲಿರುವ
ಪಿ.ಹೆಚ್.ಡಿ. ಆಗಿರುವ ಶಿಕ್ಷಕರೇ ಮಾರ್ಗದರ್ಶನ ಮಾಡಬೇಕೆಂಬ ಮೂರ್ಖತನದ ನಿಯಮ ಮಾಡಿದ್ದಾರೆ. ಆದ್ದರಿಂದ ಇಂದು ಚಿದಾನಂದಮೂರ್ತಿ, ವೆಂಕಟಾಚಲ ಶಾಸ್ತ್ರಿ, ಅರ್ಚಕ ಜಯಕೃಷ್ಣ ಭಟ್‌ರವರಂಥ ಅನೇಕ ಹಿರಿಯರ ಅನುಭವದ ತಿಳುವಳಿಕೆ ಆಧಾರದ ಮಾರ್ಗದರ್ಶನದಿಂದ ಪಿ.ಹೆಚ್.ಡಿ. ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ. ಒಂದು ಟಿಪ್ಪಣಿ ಬರೆಯಲು ಬಾರದವರೂ ಪದವಿಗಳನ್ನು ಪಡೆದಿದ್ದಾರೆ. ದೊಡ್ಡ ದೊಡ್ಡ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅಂಥವರಿಂದ ಏನು ನಿರೀಕ್ಷೆ ಮಾಡಬಹುದು? ನಿಜ, ಪಾಂಡಿತ್ಯ ಇರುವವರಿಗೆ ಅವಕಾಶ ಸಿಗಬೇಕಾದ್ದು ಮುಖ್ಯ. ಈಗ ಸಂಖ್ಯೆ ಹೆಚ್ಚಾಗುತ್ತಿದೆ ಆದ್ರೆ ಗುಣಮಟ್ಟ ಸಿಗುತ್ತಿಲ್ಲ. ಅಭ್ಯಾಸ ಹೆಚ್ಚಾಗಬೇಕು. ಪ್ರತಿಪಲಾಪೇಕ್ಷೆಯಿಂದ ಸಂಶೋಧನೆ ಮಾಡಿದ್ರೆ ಉಪಯೋಗವಿಲ್ಲ, ವಿಷಯದ ಸಂಗ್ರಹಣೆಗೆ ಕಾಲದ ಮಿತಿ ಸಲ್ಲದು. ಒಂದೂ ಲೇಖನ, ಪುಸ್ತಕ ಬರೆಯದವರು ಇಂದು ಪಿ.ಹೆಚ್.ಡಿ. ಮಾಡುತ್ತಿದ್ದಾರೆ. ಶಿಕ್ಷಣ ಕೇಂದ್ರ ಹಾಗೂ ರಾಜ್ಯ ಎರಡಕ್ಕೂ ಸೇರಿದ ವಿಷಯವಾಗಿದೆ. ಇಂದಿನ ಚಳುವಳಿಗಳು ಕೇವಲ ಪ್ರದರ್ಶನದ ವಿಚಾರಗಳಾಗಿವೆ. ಕನ್ನಡವನ್ನು ಚೆನ್ನಾಗಿ ಬಲ್ಲವರು ಇಂದು ಕನ್ನಡದ ಚಳುವಳಿಗಾರರಾಗಿಲ್ಲ, ಇಂದು ಚಳುವಳಿಗಳು ಜ್ಞಾನಕ್ಕೆ ಸಂಬಂಧಿಸಿಲ್ಲ, ರಾಮೋತ್ಸವಗಳಲ್ಲಿ ಕನ್ನಡದ ಸಂಗೀತ ಇಲ್ಲ ಎಂದು ಬೊಬ್ಬೆ ಹಾಕಲಾಯಿತು. ಆದರೆ ತ್ಯಾಗರಾಜರ, ಇನ್ನೂ ಮಹಾನ್ ಸಂಗೀತಕಾರರ ರಚನೆಗಳನು ಕನ್ನಡಕ್ಕೆ ಅಳವಡಿಸುವ ಕೆಲಸ ಮಾತ್ರ ಮಾಡುತ್ತಿಲ್ಲ. ವಿದ್ವಾಂಸರು ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅದೂ ಇರಬೇಕು ಜೊತೆಗೆ ಕನ್ನಡವನ್ನೂ ಅಳವಡಿಸಬೇಕು. ಬೇರೆ ಭಾಷೆ ಬೇಡ ಎನ್ನೋದು ಅಪಾಯಕಾರಿ ಚಿಂತನೆ. ನಾವು ಕಾರಂತರ ಬಾಲಜಗತ್ತಿನಂತೆ ಸ್ವತಂತ್ರ ವಿಶ್ವಕೋಶ ರಚಿಸಿಕೊಳ್ಳಬೇಕೆ ಹೊರತು ಭಾಷಾಂತರಿತ ಕೋಶದಿಂದ ಇಲ್ಲಿನ ಸೊಗಡು ನಿರೀಕ್ಷಿಸುವುದು ಮೂರ್ಖತನವಾಗುತ್ತದೆ. ಜಪಾನಿಯರಲ್ಲಿ ಪಾಮೆರ್ ಇಂಗ್ಲೀಷ್ ಅನ್ನೋ ಪುಸ್ತಕ ಇದೆ. ಜಪಾನಲ್ಲಿದ್ದವರಿಗೆ ಇಂಗ್ಲೀಷ್ ಕಲಿಸೋಕೆ ಹೋದಾಗ ಅದು ಅವರಿಗೆ ಒಗ್ಗಲಿಲ್ಲ. ಆಗ ಜಪಾನಿ ಭಾಷೆ ಕಲಿತು ಅವರ ವಿಚಾರವನ್ನೇ ಇಂಗ್ಲೀಷಿನಲ್ಲಿ ಕಲಿಸೋಕೆ ಪ್ರಯತ್ನಿಸಿದ್ದರಿಂದ ಆ ಪುಸ್ತಕ ಬಂತು. ಅದು ಜಗತ್ ಪ್ರಸಿದ್ದ ಪದ್ದತಿ ಆಯಿತು.
ಓದುಗರಿಗೆ ನಿಮ್ಮ ಸಂದೇಶವೇನು?
ಕನ್ನಡ ಪತ್ರಿಕೆ ಓದಿ, ಕನ್ನಡ ಸಾಹಿತ್ಯ ಓದಿ, ಆಯ್ಕೆ ಮಾಡಿದ ಭಾಗಗಳ ಸಾಹಿತ್ಯ ಎಲ್ಲರಿಗೂ ಸಿಗುವಂತೆ ಮಾಡಬೇಕು, ಉದಾಹರಣೆಗೆ ಅಮೆರಿಕಾದಲ್ಲಿ ಲೈಂಗಿಕ ಸಾಹಿತ್ಯ ಬೇಕಾದವರಿಗೆ ಅಲ್ಲಿನ ಭಂಡಾರಗಳಲ್ಲಿ ಕವರ್ ಇಟ್ಟಿರುತ್ತಾರೆ, ಆದರೆ ಅದರಲ್ಲಿ ಪುಸ್ತಕ ಇರೋದಿಲ್ಲ. ಅದು ಬೇಕಿದ್ದರೆ ಭಂಡಾರದವರನ್ನು ಕೇಳಿ ಪಡೆಯಬಹುದು, ಆಗ ಅದು ಮಕ್ಕಳಿಗೆ ದೊರೆಯುವುದಿಲ್ಲ. ಈ ರೀತಿಯ ವ್ಯವಸ್ಥೆ ಆಗಬೇಕು. ಪ್ರತಿ ಪ್ರದೇಶದಲ್ಲಿ ಪುಸ್ತಕ ಭಂಡಾರಗಳು ಸುಲಭವಾಗಿ ದೊರೆಯುವಂತೆ ಆಗಬೇಕು. ನಮ್ಮ ಮಕ್ಕಳನ್ನು ಸ್ಥಳೀಯ ಶಾಲೆಗಳಿಗೆ ಸೇರಿಸುವಂತಿರಬೇಕು, ಅಮೇರಿಕೆಯಲ್ಲಿ ಬೇರೆ ಯಾವುದೋ ಬಡಾವಣೆಯ ಶಾಲೆಗೆ ಮಗು ಸೇರಬೇಕಾದರೆ ಅವರು ತಮ್ಮ ಬಡಾವಣೆ ಬದಲಾಯಿಸಬೇಕಾಗುತ್ತದೆ ಎಂದಾಗ ಎಲ್ಲರೂ ಸ್ಥಳೀಯ ಶಾಲೆಗೆ ಮಕ್ಕಳನ್ನು ಸೇರಿಸುತ್ತಾರೆ. ಅದರಿಂದ ಹಲವಾರು ಪ್ರಯೋಜನಗಳಿವೆ, ಸಮಯ ವ್ಯರ್ಥವಾಗಿ ಸಂಚಾರದಲ್ಲಿ ವ್ಯಯ ಆಗುವುದಿಲ್ಲ. ಮಕ್ಕಳಿಗೆ ಆಟ ಆಡಲೂ ಸಾಕಷ್ಟು ಸಮಯ ದೊರೆಯುತ್ತದೆ.

   

Leave a Reply