ಭಾಷೆ-ಸಂಸ್ಕೃತಿಯದು ಅವಿನಾಭಾವ ಸಂಬಂಧ

ಲೇಖನಗಳು ; ಸಂದರ್ಶನಗಳು - 0 Comment
Issue Date : 30.05.2016

-ಡಾ. ಹೆಚ್‍.ಪಾಂಡುರಂಗ ವಿಠಲ

ಹರನ್ ಅವರೆೀ, ನಿಮ್ಮ ಕವನ ಸಂಕಲನ, ಕಥಾ ಸಂಕಲನ, ಕಾದಂಬರಿ, ಭಾಷಣ ಲೇಖನಗಳ ಸಂಗ್ರಹ ಗುಂಭ, ಚಿಂತನ, ವ್ಯಕ್ತಿಚಿತ್ರಗಳ ಸಂಗ್ರಹ ರಾಷ್ಟ್ರಕ, ಅನುವಾದ ದೈವವಾಣಿ ಇವೆಲ್ಲ ಒಂದೊಂದೇ ಪ್ರಕಟವಾಗಿವೆ. ಈ ಹಾದಿಗಳಲ್ಲಿ ನೀವು ಮುಂದುವರೆದಿಲ್ಲ ಏಕೆ?
ಎಲ್ಲರಂತೆ ನಾನೂ ವಿದ್ಯಾರ್ಥಿ ದೆಸೆಯಲ್ಲಿ ಕವನಗಳಿಂದ ನನ್ನ ಬರಹ ಆರಂಭಿಸಿದೆ. ಆಮೇಲೆ, ಸಂದರ್ಭವಶಾತ್ ಕತೆಗಳು, ಕಾದಂಬರಿಯನ್ನೂ ಬರೆದೆ. ಇವೆಲ್ಲ ಸಣ್ಣವು. ಸಂಶೋಧನೆಗೆ ತೊಡಗಿದ ಮೇಲೆ ನನ್ನ ಹಾದಿ ಇದೇ ಎಂದು ನಿರ್ಧರಿಸಿದೆ. ಮುಂದೆ ಬಂದ ಇತರ ಸಾಹಿತ್ಯವೆಲ್ಲ ಸಂದರ್ಭವಶಾತ್ ಬಂದವು, ಅಷ್ಟೆ.
ನಿಮ್ಮ ಪ್ರವಾಸ ಕಥನಗಳು ಹೊಸರೀತಿಯವಾಗಿವೆ. ಅಮೇರಿಕಾ ಬಗೆಗೆ ಎರಡು ಪುಸ್ತಕಗಳಲ್ಲೂ ಹೊಸತೇ ಕೊಟ್ಟಿದ್ದೀರಿ. ವಸ್ತು ಕೂಡ ಪ್ರವಾಸವನ್ನು ಆಗಾಗ ಬಿಟ್ಟು ಬೇರೆಡೆ ಚಲಿಸುತ್ತದೆ. ಪ್ರವಾಸ ಕಥನ ಬರೆಯುವವರಿಗೆ ನಿಮ್ಮ ಸಲಹೆ ಏನು?
ನಾನು ಯಾವ ಸಿದ್ಧತೆಯೂ ಇಲ್ಲದೆ ಮಾನವನ ಮೂಲಭೂತ ಸ್ವಭಾವಗಳು ಎಷ್ಟೊಂದು ಬಗೆಯಲ್ಲಿ ಪ್ರಕಟವಾಗುತ್ತವೆ ಎಂದು ಕುತೂಹಲದಿಂದ ನೋಡಿದ್ದನ್ನು ಬರೆದೆ. ಎಲ್ಲಿ ಹೇಗೆ ಸುತ್ತಿದೆ, ಏನು ನೋಡಿದೆ ಎಂದು ಬರೆಯುವುದಕ್ಕಿಂತ ಇದೇ ನನಗೆ ಮುಖ್ಯ ಎನ್ನಿಸಿತು. ಸ್ಯಾನ್ ರಮೋನಿನಿಂದ ಕರೋನಾ ದಲ್ಮಾರ್ ವರೆಗೆ ಮಾಡಿದ 500 ಮೈಲು ದೀರ್ಘ ಪ್ರಯಾಣದಲ್ಲಿ ಎರಡು ದೃಶ್ಯಗಳನ್ನು ಕಂಡೆ. ನ್ಯೂಯಾರ್ಕಿನ ಅನೇಕ ಚದುರ ಮೈಲು ದೊಡ್ಡದಾದ ಸುಂದರ ಸ್ಮಶಾನ, ವಸತಿ ಪ್ರದೇಶದಂತೆಯೇ ಲೈನುಗಳು, ನಂಬರುಗಳು ಹೊಂದಿದ ಒಂದೇ ಅಳತೆ, ವಿನ್ಯಾಸದ ಅಲ್ಲಿನ ಸಮಾಧಿಗಳು, ಅವುಗಳ ಮೇಲಿನ ಹೊಗಳಿಕೆಯ ಮಾತುಗಳು, ಅಲ್ಲಿಯಂತೆಯೇ ಇಲ್ಲೂ ಸ್ಥಳ ಕಾದಿರಿಸಿ, ಅಲ್ಲಿನ ಜೀವನ ಮುಗಿದ ಮೇಲೆ ಇಲ್ಲಿಗೆ ಬರುವ ವ್ಯವಸ್ಥೆ ಇವುಗಳು ಬೆರಗು ತಂದವು. ಇದರಂತೆಯೇ ಕಟುಕರ ಕಾರ್ಖಾನೆಯ ಮುಂದೆ ಹುಲ್ಲು ಮೇಯುತ್ತಾ ಮೈಮರೆತು ಮಲಗಿದ್ದ ಇಪ್ಪತ್ತೋ ಮುವ್ವತ್ತೋ ಸಾವಿರ ದನಗಳ ಹಿಂಡನ್ನೂ ಕಂಡೆ. ಇವುಗಳ ನಡುವೆ ವಿಚಿತ್ರವಾದ ಸಂಬಂಧವೊಂದು ಕಂಡು ನನಗೆ ಹುಟ್ಟಿದ ಭಾವನೆಯನ್ನು ಬರೆದೆ. ಹೀಗೆಯೇ ಇತರ ಪ್ರಸಂಗಗಳನ್ನು ಬರೆದಿದ್ದು.
ವಿಮರ್ಶೆಗೆ ನೀವು ಬಳಸುವ ಮಾರ್ಗ?
ಸರಳತೆ, ಒಳ್ಳೆಯದನ್ನೆ ಗಮನಿಸುವ ಮಾಸ್ತಿಯವರ ಸಾಧನೆ ನನ್ನದಾದ ದಿನ ಧನ್ಯ ಎಂದುಕೊಳ್ಳುತ್ತೇನೆ. ವಿಮರ್ಶೆ ಎಲ್ಲರಿಗೂ ಅರ್ಥವಾಗುವಂತೆ ಸರಳ ಭಾಷೆ, ಶೈಲಿಯಲ್ಲಿರಬೇಕು. ರಾಷ್ಟ್ರಕವು ವಸ್ತುವಿನ ದೃಷ್ಟಿಯಿಂದ ಪ್ರಕೀರ್ಣಕವಾದರೂ, ಸಾರ್ಥಕ ಪ್ರಜೆಗಳ ನಿರ್ಮಾಣದ ಆಶಯವೇ ಇಡೀ ಪುಸ್ತಕದಲ್ಲಿದೆ. ಅವರವರ ಅಭಿರುಚಿ ಮತ್ತು ಸಿದ್ಧತೆಗೆ ತಕ್ಕಂತೆ ಓದುಗರು ವಸ್ತುನಿರ್ವಹಣೆಯನ್ನು ಸ್ವೀಕರಿಸುತ್ತಾರೆ.
ಕನ್ನಡ ಅಪಾಯದಲ್ಲಿದೆ ಎಂದು ನೀವೂ ಹೇಳುತ್ತ ಹೆದರಿಸುತ್ತೀರಲ್ಲ! ಆರು ಕೋಟಿ ಕನ್ನಡಿಗರು, 1500 ವರ್ಷಗಳ ಸಮೃದ್ಧ ಸಾಹಿತ್ಯದ ಇತಿಹಾಸವುಳ್ಳ ಕನ್ನಡ ತನ್ನನ್ನು ಉಳಿಸಿಕೊಳ್ಳಲಾರದೆ?
ಆರು ಕೋಟಿ ಎಂದಿರಲ್ಲಾ ಅವರು ಸೈನಿಕರೆ? ಖಂಡಿತ ಅಲ್ಲ, ಅವು ಕನ್ನಡವನ್ನು ತಳ್ಳಿ ಇಂಗ್ಲಿಷ್ ಮನೆಯತ್ತ ಉಸಿರುಗಟ್ಟಿಕೊಂಡು ಓಡುತ್ತಿರುವ ಆರು ಕೋಟಿ ಘಟಕಗಳು. ಕನ್ನಡ ಶಾಲೆ ಮುಚ್ಚುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರ ಕಣ್ಣು ಕನ್ನಡಕ್ಕೆ ಒಗ್ಗಿಕೊಳ್ಳುವುದಿಲ್ಲ. ಅವರಿಗೆ ಸಲೀಸಾಗಿ ಕನ್ನಡ ಓದಲು ಬರುವುದಿಲ್ಲ. ಹೀಗೆ ಕ್ರಮವಾಗಿ ಇಂಗ್ಲಿಷಿಗೆ ಒಗ್ಗಿಹೋಗುತ್ತಾರೆ. ಟಿವಿಯಲ್ಲಿ ಗಣ್ಯರ ಮಕ್ಕಳು ಯಾವ ಭಾಷೆಯಲ್ಲಿ ಮಾತನಾಡುತ್ತಾರೆ ನೋಡಿದ್ದೀರಾ? ಮುಂದೆ ನಮ್ಮ ಮಕ್ಕಳೂ ಆಗುವುದೂ ಅವರಂತೆಯೇ.
ಪರಿಹಾರ ಏನು ?
ಪರಿಹಾರವಿಲ್ಲ. ಇಂಗ್ಲಿಷ್ ಮಾಧ್ಯಮಕ್ಕೂ ಹೊಟ್ಟೆಯಪಾಡಿಗೂ ಸಂಬಂಧವಿದೆ. ಕನ್ನಡಕ್ಕೂ ಹೊಟ್ಟೆಯಪಾಡಿಗೂ ಸಂಬಂಧ ಕಲ್ಪಿಸಿದರೆ ಆದೀತು. ಅದು ಸಾಧ್ಯವೆ? ಜನರಲ್ಲಿ ಅಭಿಮಾನವಿಲ್ಲ; ಅವರ ಪ್ರೀತಿ ಇಂಗ್ಲಿಷ್ ಕಡೆಗಿದೆ. ಸದ್ಯಕ್ಕೆ ಮಾಡಬಹುದಾದುದೆಂದರೆ ಟಿವಿಗಳನ್ನು ತಿದ್ದುವುದು. ಆಡುಗನ್ನಡದ ನಿಘಂಟನ್ನು ಕೊಟ್ಟು ಅದನ್ನೇ ಬಳಸಬೇಕೆಂದು ನಿಯಮಿಸಬೇಕು. ಆಡುಗನ್ನಡ ಮೊದಲು ಸರಿಯಾಗಲಿ. ಆಮೇಲೆ ಅಭಿಮಾನ ಬೆಳೆದೀತು.
ನೀವು ನಿಮ್ಮ ಮೊಮ್ಮಗುವಿಗಾಗಿ ಅಮೇರಿಕೆಗೆ ಹಿಂದೂಧರ್ಮದ ಪುಸ್ತಕಗಳನ್ನು ಒಯ್ದಿರಿ. ಅಲ್ಲಿ ಚಿನ್ಮಯ ಮಿಶನ್ನಿನವರು ಹಿಂದೂ ಮಕ್ಕಳಿಗಾಗಿ ನಡೆಸುತ್ತಿರುವ ಶಾಲೆಯ ಬಗ್ಗೆ ಬರೆದಿದ್ದೀರಿ. ಅಲ್ಲಿನ ಕನ್ನಡಿಗರ ಮಕ್ಕಳು ಎಷ್ಟು ಮಟ್ಟಿಗೆ ಕನ್ನಡವನ್ನು ಉಳಿಸಿಕೊಂಡಿದ್ದಾರೆ? ಎಷ್ಟು ಕಾಲ ಹಿಂದೂಗಳಾಗಿ ಉಳಿಯುತ್ತಾರೆ?
ಈಗ ಅಮೆರಿಕಾದ ಕೆಲವು ಸಣ್ಣ ಪ್ರದೇಶಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದು ತಮ್ಮ ಕನ್ನಡವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಅಮೆರಿಕಾದಲ್ಲಿ ಈಗ 700 ದೇವಸ್ಥಾನಗಳಿದ್ದು, ಅಲ್ಲಿ ಹಿಂದೂ ಸಂಸ್ಕಾರಗಳನ್ನು ನೀಡುತ್ತಾರೆ. ಅಲ್ಲಿ ನೆಲೆಸಿರುವ ಎಲ್ಲ ದೇಶಗಳ ಮಕ್ಕಳೂ ತಮ್ಮ ಭಾಷೆ ಮತ್ತು ಧರ್ಮವನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದಲ್ಲದೆ, ಯಾವ ಭಾಷೆ ಧರ್ಮಗಳಿರಲಿ, ಪ್ರತಿಯೊಬ್ಬರೂ ರಾಷ್ಟ್ರಧರ್ಮಕ್ಕೆ ಆದ್ಯತೆ ನೀಡುತ್ತಾರೆ. ಈ ಉದಾತ್ತ ನಡೆವಳಿಕೆಗೆ ಹಿಂದೂಧರ್ಮದ ತಿಳುವಳಿಕೆ ಪೂರಕವೆಂದು ಎಲ್ಲರೂ ತಿಳಿದಿದ್ದಾರೆ.
ದೀರ್ಘಕಾಲದಿಂದ ನೀವು ಸಾಂಸ್ಕೃತಿಕ ಸಂಶೋಧನೆಯಲ್ಲಿ ತೊಡಗಿದ್ದೀರಿ. ಪ್ರಾರಂಭದಲ್ಲಿ ನೀವು ಎದುರಿಸಿ ಪರಿಹರಿಸಿಕೊಂಡ ತೊಡಕುಗಳನ್ನು ವಿವರಿಸಿದರೆ ಹೊಸಬರಿಗೆ ಅನುಕೂಲವಾದೀತು.
ಕಾಲೇಜಿನಲ್ಲಿ ಜನಪದಗೀತೆಗಳ ಮೂಲ ಮಟ್ಟುಗಳನ್ನು ತೋರಿಸಿ ಕೊಡಬೇಕಾದ ಸಂದರ್ಭ ಬಂತು. ಸಂಶೋಧನೆಯ ಉದ್ದೇಶವೇ ಇಲ್ಲದೆ ನಾನು ಕ್ಷೇತ್ರಕಾರ್ಯಕ್ಕೆ ತೊಡಗಿದೆ. ಅದರ ಶಾಸ್ತ್ರೀಯ ವಿಧಿವಿಧಾನಗಳು ತಿಳಿದಿರಲಿಲ್ಲ. ಕ್ಷೇತ್ರದ ಗ್ರಹಿಕೆಯಾಗಲಿ, ಒಂದು ಕ್ರಮವಾಗಲಿ ಇಲ್ಲದೆ ನಾನು ಕಷ್ಟಪಟ್ಟೆ. ಸಾಂಸ್ಕೃತಿಕ ಸಂಶೋಧನೆಯೇ ನನ್ನ ಕ್ಷೇತ್ರವೆಂದು ಗುರುತಿಸಿಕೊಳ್ಳುವ ಹೊತ್ತಿಗೆ ಸಾವಿರಾರು ಪುಟಗಳ ಸಾಮಗ್ರಿಯನ್ನು ಸಂಗ್ರಹಿಸಿ ಆಗಿತ್ತು. ಸಮುದಾಯ ಅಧ್ಯಯನಕ್ಕೆ ತೊಡಗುವವರಿಗೆ ಇನ್ನೊಂದು ತೊಡಕಿದೆ. ಅದಕ್ಕೆ ಸಂಬಂಧಪಡದ ಜ್ಞಾನಕ್ಷೇತ್ರವೇ ಇಲ್ಲ ಎನ್ನಬಹುದು. ಇಡೀ ಸಮುದಾಯದ ಸಮಗ್ರ ಅಧ್ಯಯನ, ನಿರೂಪಣೆಯಲ್ಲಿ ಸಾಕ್ಷ್ಯಾಧಾರಗಳನ್ನು ಹೊಂದಿಸುತ್ತ ಹೋದರೆ ಕೆಲವು ಬೃಹತ್ ಸಂಪುಟಗಳಾದರೂ ಅದು ಮುಗಿಯುವುದಿಲ್ಲ. ಸಣ್ಣಕ್ಷೇತ್ರ ಮತ್ತು ಆಳವಾದ ಅಧ್ಯಯನ ಎನ್ನುವುದು ಸಂಶೋಧಕನ ಸುವರ್ಣ ಸೂತ್ರ. ಇದು ಸಮುದಾಯದ ಅಧ್ಯಯನಕ್ಕೆ ಸೂಕ್ತ. ಕ್ಷೇತ್ರಕಾರ್ಯದ ಹೆಜ್ಜೆಹೆಜ್ಜೆಯ ವಿವರಗಳು ದಾಖಲಾದರೆ ಅದೇ ಒಂದು ಒಳ್ಳೆಯ ಸಂಶೋಧನ ವರದಿಯಾಗುತ್ತದೆ. ಈ ಮಾಹಿತಿ ಕಣಜದ ಆಧಾರದಿಂದ ನಿಬಂಧವನ್ನು ಮಂಡಿಸಿದರೆ ಹೆಚ್ಚು ವಿಶ್ವಸನೀಯವಾಗುತ್ತದೆ. ‘ಸಂಕೇತಿ ಒಂದು ಅಧ್ಯಯನ’ ಎಂಬುದು ನನ್ನ ಪಿಎಚ್.ಡಿ ವಿಷಯ. ಇಡೀ ಸಮುದಾಯದ ಸಾಂಸ್ಕೃತಿಕ ಅಧ್ಯಯನ ನನ್ನ ಸಂಶೋಧನೆಯಾದುದರಿಂದ, ಮೂವತ್ತು ವರ್ಷವಾದರೂ ಮುಂದುವರಿದಿದೆ. ಆಕರ ವಸ್ತುಗಳ ಬಗ್ಗೆ 25 ಪುಸ್ತಕಗಳನ್ನೂ, ಸಂಶೋಧನೆಯ ಬಗ್ಗೆ 10 ಸಂಪುಟಗಳನ್ನೂ ಸಮುದಾಯ ಅಧ್ಯಯನ ಕೇಂದ್ರದ ಮೂಲಕ ಪ್ರಕಟಿಸಿದ್ದೇನೆ. ಕ್ಷೇತ್ರಕಾರ್ಯದ ಬಗ್ಗೆ ಈ ವರ್ಷ ಮಾನಿಷಾದ, ಸಂಚರ, ಸಂಭತಿ ಎಂಬ ಮೂರು ಪುಸ್ತಕಗಳನ್ನು ಹೊರತರುತ್ತಿದ್ದೇನೆ. ಸಾಂಸ್ಕೃತಿಕ ಅಧ್ಯಯನ ಮಾಡುವ ಹೊಸಬರಿಗೆ ನನ್ನ ಸಲಹೆ ಸಣ್ಣ ಕ್ಷೇತ್ರವನ್ನು ಆಯ್ದುಕೊಂಡು, ಆಳವಾದ ಸಂಶೋಧನೆ ನಡೆಸಿ ಎಂದು.
ಇನ್ನೂ ಮುಂದುರಿಸುವ ಅಗತ್ಯವಿದೆಯೆ?
ಯಾವುದೇ ಕ್ಷೇತ್ರದಲ್ಲಾದರೂ ಸಂಶೋಧನೆಯ ಲಕ್ಷಣವೇ ನಿರಂತರತೆ. ಸಮುದಾಯ ಅಧ್ಯಯನದಲ್ಲಿ ಇದು ಹೆಚ್ಚು ನಿಜ. ಇಷ್ಟು ಮಾಡಿದಮೇಲೂ, ಪ್ರಾರಂಭದಿಂದ ಕ್ಷೇತ್ರಕಾರ್ಯದ ವಿವರಗಳನ್ನು ಕ್ರಮಬದ್ಧವಾಗಿ, ಸಮಗ್ರವಾಗಿ ದಾಖಲಿಸಿ ಇಡದೇ ಇದ್ದುದು ದೊಡ್ಡ ನಷ್ಟವೆಂಬ ಭಾವ ಇದ್ದೇ ಇದೆ. ಬೇಕಾದ ಮಾಹಿತಿಯನ್ನು ಉಳಿಸಿಕೊಂಡು ಉಳಿದ ಸಾಮಗ್ರಿಯನ್ನೂ ಅನುಭವವನ್ನೂ ಹಿನ್ನೆಲೆಯನ್ನೂ ಕೈಬಿಡುವುದು ಈ ಕ್ಷೇತ್ರಕ್ಕಂತೂ ಸಲ್ಲದು. ಸಮುದಾಯದ ಯಾವುದೋ ಸಣ್ಣ ಭಾಗವನ್ನು ಅಧ್ಯಯನಕ್ಕೆ ಆರಿಸಿದರೆ ಈ ಪರ್ವತ ಸದೃಶ ಕೆಲಸವನ್ನು ಸ್ವಲ್ಪ ಇಳಿಸಿಕೊಳ್ಳಬಹುದಷ್ಟೆ.
ನೀವು ಸಾಹಿತ್ಯ ಕ್ಷೇತ್ರಕ್ಕೆ ಬಂದದ್ದು ಯಾವಾಗ? ನಿಮ್ಮ ಪ್ರವಾಸ ಕಥನ ಮೊದಲಾದ ಪುಸ್ತಕಗಳಲ್ಲಿ ಸಮುದಾಯ ಅಧ್ಯಯನದ ಪ್ರಭಾವ ಇರಬಹುದೆ?
2001ರಲ್ಲಿ ನಾನು ಸಾಹಿತ್ಯದ ಕಡೆ ಹೊರಳಿದ್ದು. ಸುಮ್ಮನೆ ಬ್ರಾಹ್ಮಣರನ್ನು ಬಯ್ಯೋದು, ಬರೆಯೋದು ನೋಡಿ, ಇದರಲ್ಲಿ ಏನಾದರೂ ನಿಜವಿದೆಯೇ ಎಂದು ನನ್ನ ಸಮುದಾಯದ ಅಧ್ಯಯನಕ್ಕೆ ತೊಡಗಿದೆ. ಜೊತೆಗೇ ಪಿಯು ಪಠ್ಯಗಳಿಗೆ ಸಂಬಂಧಿಸಿದಂತೆ ಲೇಖನಗಳನ್ನು ಬರೆದೆ. ಓದುವ ಹುಚ್ಚಿನ ಪ್ರೊ. ಜಿ.ಅಶ್ವತ್ಠನಾರಾಯಣ ನನ್ನ ರೂಂಮೇಟ್. ಪುಸ್ತಕದ ಆಯ್ಕೆ, ಮಾತು, ಕೊಳ್ಳೋದರಿಂದ ಹಿಡಿದು ವಿಮರ್ಶೆಯ ವರೆಗೆ ಮಾತನಾಡುತ್ತ, ಪ್ರಚೋದಿಸಿದ್ದರಿಂದ ಪಿಎಚ್.ಡಿ ಕಡೆ ಗಮನ ಹೋಯಿತು. ಮಾರ್ಗದರ್ಶಕ ಅಂಬಳಿಕೆ ಹಿರಿಯಣ್ಣ ನನಗೆ ಪದ್ಯ ಬರೆಯೋದನ್ನು ನಿಲ್ಲಿಸಿ ಅಂದರು. ಅದು ಸರಿ. ಪದ್ಯದ ಗುಂಗು ವಾರದವರೆಗೆ ಇರುತ್ತೆ. ಸಂಶೋಧನೆಗೆ ಅಡ್ಡಿ. ಪದ್ಯ ಬರೆಯೋದು ನಿಂತೇ ಹೋಯಿತು. ಸಂಶೋಧನೆಯ ಬಗೆಗೆ ಪುಸ್ತಕ ಪಿಎಚ್.ಡಿ ಪದವಿ ಸಿಕ್ಕ ಅನಂತರ ಎಂದರು ಮಿತ್ರ ಅಶ್ವತ್ಥನಾರಾಯಣ. ಮುಗಿದ ಮೇಲೆ ಮೂಲ ಪಠ್ಯಗಳನ್ನು ಪರಿಷ್ಕಾರ ಮಾಡಲೂ, ಪ್ರಕಟಿಸಲೂ ಅವರೇ ಪ್ರೇರಿಸಿದರು. ಇದು ಇಂದೂ ಮುಂದುವರೆದಿದೆ. ಇನ್ನು ಬರವಣಿಗೆಯಲ್ಲಿ ಅಗತ್ಯವಾಗಿ ನನ್ನ ಅಧ್ಯಯನ ನನ್ನ ದೃಷ್ಟಿಧೋರಣೆಗಳನ್ನೂ ನಿರ್ಧರಿಸುತ್ತದೆ. ಒಬ್ಬ ವಿಮರ್ಶಕರು ಗುರುತಿಸಿದಂತೆ ಆಯಾ ಹೊತ್ತಿನ ಸಮಗ್ರ ವಿವೇಕವೇ ನನ್ನ ಸಾಹಿತ್ಯವನ್ನು ನಡೆಸಿದೆ, ಯಾವುದೋ ಒಂದು ಸಿದ್ಧಾಂತವಲ್ಲ.
ನೀವು ಭೈರಪ್ಪನವರ ಸಾರ್ಥವನ್ನು ಸಂಕೇತಿ ಭಾಷೆಗೆ ಅನುವಾದಿಸಿದ್ದೀರಲ್ಲ? ಏಕೆ?
ಇದೂ ನನ್ನ ಸಂಶೋಧನೆಯ ಒಂದು ಭಾಗವೇ. ಸಂಕೇತಿಗಳು 8ನೇ ಶತಮಾನದಲ್ಲಿ ಉತ್ತರದೇಶದಿಂದ ಕೇರಳ, ತಮಿಳ್ನಾಡು ಅಕ್ಕಪಕ್ಕದ, ತಾಮ್ರಪರ್ಣಿ ತೀರದ ಶೆಂಗೊಟ್ಟೈ ಪ್ರಾಂತಕ್ಕೆ ವಲಸೆ ಬಂದರು. ಮುಂದೆ ಜನಸಂಖ್ಯೆ ಹೆಚ್ಚಾಗಿ, ಕೇರಳದ ಒಳನಾಡಿಗೆ ಕೆಲವರು ಹೋದರು. ತ್ರಿವೇಂದ್ರಂ ಕಡೆ ಹೋದವರು ನಂಬೂದಿರಿಗಳಾದರು, ಪಾಲ್ಘಾಟ್ ಕಡೆ ಹೋದವರು ಅಯ್ಯರ್‌ಗಳಾದರು. ಅನಂತರ ಕರ್ನಾಟಕಕ್ಕೆ ಹಾಸನ, ಶಿವಮೊಗ್ಗ, ಬಳ್ಳಾರಿ ಕಡೆ ವಲಸೆ ಬಂದರು. ಇದಕ್ಕೆ ಹಿನ್ನೆಲೆಯಾಗಿ ನಾಚಾರಮ್ಮನ ಶಾಪದ ಕತೆಯೂ ಇದೆ. ವಲಸೆ ಬಂದವರು ಮತ್ತೆ ಶಾಪದ ಹೆದರಿಕೆಯಿಂದ ತಮಿಳ್ನಾಡಿಗೆ ಹಿಂದಿರುಗಲೂ ಇಲ್ಲ, ಸಂಪರ್ಕ ಇಟ್ಟುಕೊಳ್ಳಲೂ ಇಲ್ಲ. ನಾಚಾರಮ್ಮನ ಹೆಸರಿಡುವ ಸಂಪ್ರದಾಯ ಎಲ್ಲ ಭಾಗದವರಲ್ಲೂ ಇದೆ. ಶಾಂತಿಗ್ರಾಮದ ಕೇಶವ ದೇವಾಲಯದ ಶಾಸನದಲ್ಲಿ ತಲೆ ಮೇಲೆ ಕೇಶವನನ್ನು ಹೊತ್ತು ತಂದ ಉಲ್ಲೇಖ ಇದೆ. ಹರಪನಹಳ್ಳಿ ತಾಮ್ರಶಾಸನದಲ್ಲಿ ಮೊದಲು ತಮಿಳು ಬ್ರಾಹ್ಮಣರು 300 ಜನ ಅನಂತರ 700 ಜನ ವಲಸೆ ಬಂದು, ರಾಜ ಉಂಬಳಿ ಕಲ್ಪಿಸಿದ ಬಗ್ಗೆ ಉಲ್ಲೇಖವಿದೆ. ವಲಸೆ ಹೋದ ಮೊದಲ ತಮಿಳು ಬ್ರಾಹ್ಮಣರು ಸಂಕೇತಿಗಳೇ. ಆದರೆ ಎಲ್ಲೆಡೆ ಮೌಖಿಕ ಪರಂಪರೆ, ಆಚರಣೆಗಳೆಲ್ಲ ಒಂದೇ. ಸಾರ್ಥದ ವಸ್ತು ಹೀಗೇ ಇದೆ. ಅಲ್ಲದೆ, ಸಂಕೇತಿ ಭಾಷೆ ಉಳಿಸಲು ಸಾಹಿತ್ಯಸೃಷ್ಟಿ ಅಗತ್ಯವೆನ್ನಿಸಿ ಅನುವಾದಿಸಿದೆ. ಅನುವಾದದ ಬಗ್ಗೆ ನನಗೆ ಸಮಾಧಾನವಿದೆ.
ಅಯ್ಯಂಗಾರರು, ಅಯ್ಯರ್‌ಗಳು ತಮಿಳನ್ನು ಬಿಟ್ಟಿಲ್ಲವಲ್ಲ? ತಮಿಳು, ತೆಲಗು ಮೂಲದವರಿಗೆ ಭಾಷಾಭಿಮಾನ ಹೆಚ್ಚಲ್ಲವೆ?
ಸಂಕೇತಿ ಭಾಷೆ ಲಿಪಿ ಇಲ್ಲದ್ದು. ನಮ್ಮ ಸಮುದಾಯದ ಎರಡು ಮಾಸಪತ್ರಿಕೆಗಳು ಹೊರಬರುತ್ತಿದ್ದರೂ, ಯಶಸ್ವಿಗಳ ಕತೆ, ವರದಿ, ಸಮಾರಂಭಗಳ ವಿವರಗಳು ಮೊದಲಾದುವನ್ನೆ ಮುದ್ರಿಸುತ್ತಾರೆ. ನಮ್ಮ ಭಾಷೆಯ ಬರಹ ಇಲ್ಲ. ನಮ್ಮವರು ವಿದೇಶ ಸೇರುವುದು ಹೆಚ್ಚಾದುದರಿಂದ, ಭಾಷೆಯ ಬಗ್ಗೆ ಗಮನ ಕಡಿಮೆ. ವಲಸೆ ಬಂದವರಾದ್ದರಿಂದ ತಮ್ಮ ಭಾಷೆಯ ಬಗ್ಗೆ ಕೀಳರಿಮೆ. ನನ್ನ ಕ್ಷೇತ್ರಕಾರ್ಯದಲ್ಲಿ ಹಳಬರು ಮಾತ್ರ ಸಂಕೇತಿ ಭಾಷೆ ಉಪಯೋಗಿಸುವುದು, ಉಳಿದವರು ಕನ್ನಡ ಬಳಸುವುದು ಗಮನಕ್ಕೆ ಬಂದು, ವೇದನೆಯಾಯಿತು. ಭಾಷೆಗೂ ಸಂಸ್ಕೃತಿಗೂ ಅವಿನಾಭಾವ ಸಂಬಂಧವಿದೆ.
ನಿಮಗೆ ಸಾರ್ಥಕ ಭಾವ ತಂದ ಅನುವಗಳು ಯಾವುವು?
ನಾನು ನಿವೃತ್ತನಾದ ಮೇಲೆ ಕನ್ನಡದ ಮೇರು ವಿದ್ವಾಂಸರಾದ ಪ್ರೊ. ಟಿ.ವಿ.ವೆಂಕಟಾಚಲ ಶಾಸ್ತ್ರಿಗಳು ತಮ್ಮ ಮುಲಕನಾಡು ಮಹನೀಯರು ಪುಸ್ತಕ ಮಾಲಿಕೆಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಅಣ್ಣ ಕ್ಷೀರಸಾಗರರ ಬಗೆಗೆ ಪುಸ್ತಕ ಬರೆಯಲು ಕೊಟ್ಟರು. ಅವರ ಜೊತೆ ಕೆಲಸ ಮಾಡುವುದೇ ಒಂದು ಅನುಭವ. ಇದೇ ರೀತಿ, ಇನ್ನೊಬ್ಬ ವಿದ್ವಾಂಸರಾದ ಪ್ರೊ. ಎ.ವಿ. ನರಸಿಂಹಮೂರ್ತಿಯವರಿಗೆ 75 ವರ್ಷವಾದ ಸಂದರ್ಭದಲ್ಲಿ, ಅವರ ಜೀವನ ಚರಿತ್ರೆ ‘ನರಸಿಂಹ ಪಥ’ ಹೊರತಂದು, ಸಂತೋಷ ಪಟ್ಟೆ.

   

Leave a Reply