ಭೂಗೋಳ ಬದಲಾಯಿಸುತ್ತಿದೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 06.06.2016

-ರಮೇಶ್‍ ಪತಂಗೆ

ನರೇಂದ್ರ ಮೋದಿ ಪ್ರಧಾನಿಯಾಗಿ ಎರಡು ವರ್ಷಗಳು ಸಂದಿವೆ. ಒಂದು ವಿಚಾರಧಾರೆಯ ಪಕ್ಷದ ಪ್ರಧಾನಿಯೆಂದು, ಈ ವಿಚಾರಧಾರೆಯ ಪ್ರತಿಬಿಂಬವು ಆಡಳಿತದ ಧೋರಣೆಗಳ ಮೇಲೆ ಬೀಳುವುದು ಸ್ವಾಭಾವಿಕವೇ ಆಗಿದೆ. ದೇಶದ ಪ್ರಧಾನಿಯು ಎರಡು ರಂಗಗಳನ್ನು ಬಹು ಸಮರ್ಥವಾಗಿ ನಿರ್ವಹಿಸಬೇಕಾಗುತ್ತದೆ. ಮೊದಲ ರಂಗವು ದೇಶಾಂತರ್ಗತವಾಗಿದ್ದರೆ, ಎರಡನೆ ರಂಗವು ಜಗತ್ತಿನ ನಾನಾ ದೇಶಗಳೊಂದಿಗೆ ಸಂಬಂಧವಿಟ್ಟುಕೊಳ್ಳುವುದು. ಮೊದಲ ರಂಗದ ಮುಖ್ಯ ವಿಷಯವು ಆರ್ಥಿಕ ಅಭಿವೃದ್ಧಿ ಹಾಗೂ ದೇಶದ ಶಾಂತಿ ಮತ್ತು ಸುವ್ಯವಸ್ಥೆ, ಇನ್ನೊಂದು ರಂಗದ ವಿಷಯವು ವಿದೇಶಾಂಗ ಧೋರಣೆಯದ್ದು. ಇವೆರಡು ರಂಗಗಳಲ್ಲಿ ಎರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಕಾರ್ಯವು ಭಾರತದ ಪ್ರತಿಮೆಯನ್ನು ಕೆಲ ವರ್ಷಗಳಲ್ಲಿ ಪೂರ್ಣವಾಗಿ ಬದಲಾಯಿಸುವಂತಹದ್ದು. ಈ ಲೇಖನದಲ್ಲಿ ಇತ್ತೀಚೆಗೆ ಅವರು ಇರಾನಿಗೆ ಭೇಟಿ ನೀಡಿ, ಆ ದೇಶದೊಂದಿಗೆ ಮಾಡಿಕೊಂಡ ಒಪ್ಪಂದದ ಮಹತ್ವವೇನು ? ಎಂದಷ್ಟೇ ನೋಡುವುದಾಗಿದೆ.
ವಿದೇಶಾಂಗ ಧೋರಣೆಯ ಕುರಿತು ಜಾನ್ ಎಫ್. ಕೆನೆಡಿ ಹೇಳುತ್ತಾರೆ, ‘‘ಆಂತರಿಕ ಧೋರಣೆಗಳು ನಮ್ಮನ್ನು ಕೇವಲ ಪರಾಭವಗೊಳಿಸಬಲ್ಲವು, ಆದರೆ ವಿದೇಶಾಂಗ ಧೋರಣೆಯು ನಮ್ಮನ್ನು ನಾಶಗೊಳಿಸಬಲ್ಲದು.’’ ರಿಚರ್ಡ್ ಲುಗರ್ ಹೇಳುತ್ತಾರೆ, ‘‘ವಿಜಯಕ್ಕೆ ಯಾವುದೇ ಶಾರ್ಟ್‌ಕಟ್ ಇಲ್ಲ, ಪ್ರತಿಯೊಂದು ದಿವಸ ಮತ್ತು ವರ್ಷದಲ್ಲೂ ನಿಧಾನಗತಿಯಿಂದ ಮತ್ತು ಎಚ್ಚರಿಕೆಯಿಂದ ನಡೆಯುವ ಹಾದಿಯನ್ನು ವಿದೇಶಾಂಗ ಧೋರಣೆಯ ಸಂದರ್ಭದಲ್ಲಿ ನಾವು ಅವಲಂಬಿಸಬೇಕಾಗುತ್ತದೆ.’’ ಪ್ರಧಾನಿ ನರೇಂದ್ರ ಮೋದಿಯವರು ಮೇಲೆ ನೀಡಿದ ಎರಡೂ ಅವತರಣಿಕೆಗಳನ್ನು ಪಾಲಿಸುತ್ತಿರುವಂತೆ ತೋರುತ್ತದೆ. ಭಾರತದ ವಿದೇಶಾಂಗ ಧೋರಣೆಯ ವಿಷಯದಲ್ಲಿ ನೆರೆಯ ಪಾಕಿಸ್ತಾನಕ್ಕೆ ಬಹು ಮಹತ್ವದ ಸ್ಥಾನವಿದೆ. ಪಾಕಿಸ್ತಾನವು ಭಾರತ ದೇಶದಿಂದ ನಿರ್ಮಾಣಗೊಂಡಿದ್ದು, ಇದುವರೆಗೆ ಅದು ಭಾರತದ ಮೇಲೆ ನಾಲ್ಕು ರೀತಿಯ ಯುದ್ಧಗಳನ್ನು ಹೇರಿದೆ. ಈ ಯುದ್ಧಗಳಲ್ಲದೆ ಮುಸುಕಿನ ಭಯೋತ್ಪಾದನೆ ಯುದ್ಧ ನಡೆಯುತ್ತಲೇ ಇದೆ. ಇತ್ತೀಚೆಗೆ ಪಾಕಿಸ್ತಾನಿ ಭಯೋತ್ಪಾದಕರು ಪಠಾಣಕೋಟ್ ವಿಮಾನನೆಲೆಯ ಮೇಲೆ ಮಾಡಿದ ದಾಳಿಯು ತೀರಾ ತಾಜಾ ಉದಾಹರಣೆ. ಕಳೆದ ಕೆಲ ವರ್ಷಗಳಲ್ಲಿ ಪಾಕಿಸ್ತಾನಿ ಭಯೋತ್ಪಾದಕ ಘಟನೆಗಳು ಓದುಗರಿಗೆ ಗೊತ್ತಿರುವುದರಿಂದ ಅವನ್ನು ಇಲ್ಲಿ ಉಲ್ಲೇಖಿಸಿ ಉಪಯೋಗವಿಲ್ಲ. ಪಾಕಿಸ್ತಾನದೊಂದಿಗೆ ಯುದ್ಧ ಮಾಡಿ ಅದನ್ನು ನಾಶಗೊಳಿಸಬೇಕು ಎಂದು ಸಾಮಾನ್ಯ ವ್ಯಕ್ತಿಗೆ ಅನಿಸುವುದುಂಟು, ಆದರೆ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಈ ವಿಚಾರ ಅಶಕ್ಯವೇ. ಪಾಕಿಸ್ತಾನವನ್ನು ಬಗ್ಗುಬಡಿಯುವ ಬಗೆ ಹೇಗೆಂದು ಯೋಚಿಸಬೇಕಾಗುತ್ತದೆ. ಈ ಕೆಲಸ ಭಾರತದ ವಿದೇಶಾಂಗ ಧೋರಣೆಯದ್ದು. ವಿದೇಶಾಂಗ ಮಂತ್ರಿ ಸುಷ್ಮಾ ಸ್ವರಾಜ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಲಹೆಗಾರ ಡೋವಲ್ ಅವರು ಈ ಕೆಲಸವನ್ನು ಬಹು ಕುಶಲತೆಯಿಂದ ಮಾಡುತ್ತಿದ್ದಾರೆ. ಪಾಕಿಸ್ತಾನವನ್ನು ಏಕಾಕಿಯಾಗಿಸುವಲ್ಲಿ ಮೆಲ್ಲಮೆಲ್ಲಗೆ ಹೆಜ್ಜೆ ಮುಂದಿಡುತ್ತಿದ್ದಾರೆ. ಮೇ 13ರಂದು ಟೆಹರಾನಿನಲ್ಲಿ ಅಂತಹ ಮಹತ್ವದ ಹೆಜ್ಜೆಯಿಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇರಾನ್ ಭೇಟಿಗೆ ಹೋಗಿದ್ದಾಗ ಅಲ್ಲಿಯ ಚಬಾಹಾರ್ ಬಂದರು ಅಭಿವೃದ್ಧಿಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಬಂದರಿನ ನಿರ್ಮಾಣ ಹಾಗೂ ಉಸ್ತುವಾರಿಯ ಹೊಣೆಯನ್ನು ಭಾರತವು ವಹಿಸಿಕೊಂಡಿತು. ಅದಕ್ಕಾಗಿ ಭಾರತವು ಒಂದು ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ. ಇರಾನಿನ ಈ ಬಂದರು ಪರ್ಶಿಯನ್ ಕೊಲ್ಲಿಯ ಒಂದು ತುದಿಯಲ್ಲಿ , ಅಫ್ಘಾನಿಸ್ತಾನದ ಸಮೀಪವಿದೆ. ಅಫಘಾನಿಸ್ತಾನಕ್ಕೆ ಸಮುದ್ರತೀರವಿಲ್ಲ. ಇಂತಹ ದೇಶವನ್ನು ಭೂವಲಯಾಂಕಿತ (ಲ್ಯಾಂಡ್‌ಲಾಕ್ಡ್) ದೇಶವೆನ್ನುತ್ತಾರೆ. ಭಾರತ ಮತ್ತು ಅಫಘಾನಿಸ್ತಾನದ ಸಂಬಂಧವು ಚೆನ್ನಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಆಗಿನ ಅಫ್ಘಾನದ ರಾಷ್ಟ್ರಪ್ರಮುಖ ಹಮೀದ್ ಕರ್ಜಾಯಿ ಭಾರತಕ್ಕೆ ಬಂದಿದ್ದರು. ಭೂಮಾರ್ಗವಾಗಿ ಅಫಘಾನಿಸ್ತಾನದೊಂದಿಗೆ ವ್ಯಾಪಾರ ಮಾಡುವುದು ಬಹು ಅಡಚಣೆಯದ್ದಾಗಿತ್ತು. ಪಾಕಿಸ್ತಾನವು ಅದಕ್ಕಾಗಿ ತನ್ನ ಭೂಮಿಯನ್ನು ಬಳಸಲು ಬಿಡುತ್ತಿಲ್ಲ. ಅನೇಕ ರೀತಿಯ ಅಡಚಣೆಯೊಡ್ಡುತ್ತಿದೆ. ಈ ಬಂದರು ನಿರ್ಮಿಸಿದ ಬಳಿಕ ಭಾರತಕ್ಕೆ ಅಫಘಾನಿಸ್ತಾನದೊಂದಿಗೆ ನೇರವಾಗಿ ವ್ಯಾಪಾರ ಮಾಡುವ ಮಾರ್ಗ ತೆರೆದುಕೊಳ್ಳಲಿದೆ. ಬಂದರು ಅಭಿವೃದ್ಧಿಯ ಒಪ್ಪಂದವು ನರೇಂದ್ರ ಮೋದಿ, ಇರಾನಿನ ರಾಷ್ಟ್ರಾಧ್ಯಕ್ಷ ಹಸನ್ ರೊಹಾನೀ ಮತ್ತು ಅಫಘಾನಿಸ್ತಾನದ ರಾಷ್ಟ್ರಪ್ರಮುಖ ಅಶ್ರಫ್ ಘನೀ ಈ ಮೂವರಲ್ಲಿ ನಡೆಯಿತು. ಎಂದರೆ ಭಾರತ, ಇರಾನ್ ಮತ್ತು ಅಫಘಾನಿಸ್ತಾನ ಈ ಮೂರು ದೇಶಗಳ ನಡುವೆ ಈ ಒಪ್ಪಂದವುಂಟಾಯಿತು. ಪಾಕಿಸ್ತಾನವನ್ನು ಬದಿಗಿಡಲಾಯಿತು.
ಚಬಾಹಾರ್ ಬಂದರಿನ ಇತಿಹಾಸ ತಿಳಿದುಕೊಳ್ಳದೆ ಹಾಗೂ ಇಂದಿನ ಭೂರಾಜಕೀಯ ಸ್ಥಿತಿಯನ್ನು ತಿಳಿದುಕೊಳ್ಳದೆ ಈ ಮಹತ್ವದ ಅರಿವಾಗದು. ಚೀನವು ಬಲುಚಿಸ್ತಾನದ ಗಡಿಭಾಗದ ಗ್ವಡಾರ್ ಬಂದರನ್ನು ಅಭಿವೃದ್ಧಿಪಡಿಸುವ ಕಾರ್ಯ ಆರಂಭಿಸಿದೆ. ಈ ಬಂದರಿನಲ್ಲಿ ಚೀನವು ತನ್ನ ಯುದ್ಧಹಡಗು ಮತ್ತು ಜಲಾಂತರ್ಗಾಮಿಗಳನ್ನಿಡಲು ಅನುಮತಿ ನೀಡಲಾಗಿದೆ. ಭಾರತದ ಸಮುದ್ರ ಸೀಮೆಗಳ ರಕ್ಷಣೆಯ ದೃಷ್ಟಿಯಿಂದ ಇದು ಬಹು ಅಪಾಯಕಾರಿಯಾಗಿದೆ. ಗ್ವಡಾರ್ ಮತ್ತು ಚಬಾಹಾರ್ ಇವೆರಡು ಬಂದರುಗಳ ನಡುವೆ 72 ಕಿಲೊಮೀಟರು ಅಂತರವಿದೆ. ಭೌಗೋಳಿಕ ದೃಷ್ಟಿಯಿಂದ ಎಲ್ಲ ಭಾಗಗಳೂ ಪ್ರಾಚೀನ ಬಲುಚಿಸ್ತಾನದ ಭಾಗಗಳಾಗುತ್ತವೆ. ಆಂಗ್ಲರು 1871ರಲ್ಲಿ ಇರಾನಿನೊಂದಿಗೆ ಒಪ್ಪಂದ ಮಾಡಿಕೊಂಡು ಇರಾನ್-ಬಲುಚ್ ಗಡಿರೇಖೆ ನಿಶ್ಚಿತಗೊಳಿಸಿದರು. ಆಂಗ್ಲರು ಬಲುಚಿಸ್ತಾನವನ್ನು ವಿಭಜಸಿ ಅರ್ಧ ಭಾಗ ಇರಾನಿಗೆ ಕೊಟ್ಟು ಬಿಟ್ಟರು. ಸಂಪೂರ್ಣ ಬಲುಚಿಸ್ತಾನವಂತೂ ಮರಳುಗಾಡು ಮತ್ತು ಬಂಜರು ಪ್ರದೇಶವಾಗಿದೆ. ಅಲೆಗ್ಸಾಂಡರ್‌ನ ಸೈನ್ಯವು ಇಲ್ಲಿ ಸೋತು ಸುಣ್ಣವಾಯಿತು, ಅದಕ್ಕೆ ಭಾರೀ ಪ್ರಾಣಹಾನಿಯಾಯಿತು. ಚಬಾಹಾರ್ ಬಂದರನ್ನು ಸಣ್ಣ ಪ್ರಮಾಣದಲ್ಲೇ ಆಗಲಿ ಕಟ್ಟಲು ಮೊಟ್ಟಮೊದಲು ಪೋರ್ಚುಗೀಸರು ಪ್ರಯತ್ನಿಸಿದರು. ಆದರೆ ಅದು ಅಷ್ಟೇನೂ ಯಶಸ್ವಿಯಾಗಲಿಲ್ಲ. ಆಂಗ್ಲರು ಮಾಡಿದ್ದ ಒಪ್ಪಂದದಿಂದಾಗಿ ಚಬಾಹಾರ್ ಬಂದರು ಇರಾನಿನ ವಶಕ್ಕೆ ಹೋಯಿತು. ಅಲ್ಲದೆ ಗ್ವಡಾರ್ ಬಂದರು ಬಲುಚ್ ರಾಜ ಖಾನ್ ಆಫ್ ಕಲಾತ್‌ನ ವಶಕ್ಕೆ ಬಂದಿತು. ಆಂಗ್ಲರು ಇರಾನಿಗೆ ಅರ್ಧ ಬಲುಚಿಸ್ತಾನ ಕೊಟ್ಟಿದ್ದೇಕೆ ? ಅದಕ್ಕೆ ‘ದಿ ಗ್ರೇಟ್ ಗೇಮ್’ ಎಂಬ ಆಂಗ್ಲರ ವಿದೇಶಾಂಗ ಧೋರಣೆ ತತ್ವದಲ್ಲಿ ಉತ್ತರ ಸಿಗುತ್ತದೆ. ಆಂಗ್ಲರಿಗೆ ರಶ್ಯನ್ ಸಾಮ್ರಾಜ್ಯದಿಂದ ಸದಾ ಭೀತಿ ಅನಿಸುತ್ತಿತ್ತು. ರಶ್ಯನ್ನರು ತಮ್ಮ ಸಾಮ್ರಾಜ್ಯದ ಮೇಲೆ ಆಕ್ರಮಣ ಮಾಡುವರು, ಅವರು ಅಫಘಾನಿಸ್ತಾನದ ಮೂಲಕ ಇರಾನಿಗೆ ಬರುವರು ಹಾಗೂ ಪರ್ಶಿಯನ್ ಗಲ್ಫ್ ವಶಪಡಿಸಿಕೊಳ್ಳುವರು, ಎಂದು ಆಂಗ್ಲರಿಗೆ ಅನಿಸುತ್ತಿತ್ತು. ಇದೇನೂ ಕವಿಕಲ್ಪನೆಯಾಗಿರಲಿಲ್ಲ. ರಶ್ಯಾದ ಧೋರಣೆಯೂ ಹಾಗೆಯೇ ಇತ್ತು. ರಶ್ಯಾವನ್ನು ಮಧ್ಯ ಏಶ್ಯಾದಲ್ಲಿ ತಡೆಗಟ್ಟಲು ಹಾಗೂ ಇರಾನನ್ನು ತಮ್ಮ ಕಡೆಗೆ ಒಲಿಸಿಕೊಳ್ಳಲು ಆಂಗ್ಲರು ಅರ್ಧ ಬಲುಚಿಸ್ತಾನವನ್ನು ಇರಾನಿಗೆ ಕೊಟ್ಟು ಬಿಟ್ಟರು. ಇವೆಲ್ಲ ಘಟನೆಗಳು ಮುನ್ನೂರು ವರ್ಷಗಳ ಹಿಂದೆ ನಡೆದಿವೆ. ಇಂದು ಮತ್ತೊಮ್ಮೆ ಚಬಾಹಾರ್ ಮತ್ತು ಗ್ವಡಾರ್ ಅಂತಾರಾಷ್ಟ್ರೀಯ ರಾಜಕಾರಣದ ಚರ್ಚೆಯ ವಿಷಯವಾಗಿವೆ.
ಇಂದು ಈ ಪ್ರದೇಶದಿಂದ ಬ್ರಿಟಿಷರು ಕಾಲ್ತೆಗೆದಿದ್ದಾರೆ. ಅವರ ಜಾಗವನ್ನು ಅಮೆರಿಕವು ವಹಿಸಿಕೊಂಡಿದೆ. ನವೀನ ಸ್ಪರ್ಧಾಳು ಚೀನವು ‘ಗ್ರೇಟ್ ಗೇಮ್’ ಸಂಘರ್ಷದಲ್ಲಿ ಇಳಿದಿದೆ. ಗ್ವಡಾರ್ ಬಂದರನ್ನು ನಿರ್ಮಿಸಲು ಚೀನವು 46 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿದೆ. ಈ ಬಂದರಿನಿಂದಾಗಿ ಪಾಕಿಸ್ತಾನದ ಅರ್ಥವ್ಯವಸ್ಥೆಯ ಮೇಲೆ ಚೀನದ ಭಾರೀ ಪ್ರಭಾವ ಬೆಳೆದೀತು. ಇದು ನಿರ್ಮಾಣಗೊಂಡ ಬಳಿಕ ಈ ಬಂದರಿನಿಂದ ಚೀನದ ಕಡೆ ಭಾರೀ ಪ್ರಮಾಣದಲ್ಲಿ ಕಂಟೇನರ್ ಸಾರಿಗೆ ಶುರುವಾದೀತು. ಅಲ್ಲದೆ ನೌಕಾಪಡೆಯ ಉಪಸ್ಥಿತಿಯಿಂದಾಗಿ ಭಾರತದ ಸಮುದ್ರ ಗಡಿಭಾಗಕ್ಕೆ ಅಪಾಯವುಂಟಾದೀತು. ಚೀನ ಮತ್ತು ಪಾಕಿಸ್ತಾನದ ಈ ಆಟಕ್ಕೆ ಸವಾಲೊಡ್ಡಬೇಕಾಗಿತ್ತು. ಚಬಾಹಾರ್ ಬಂದರು ಅಭಿವೃದ್ಧಿಯ ವಿಷಯವು ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಶುರುವಾಗಿತ್ತು. ಆದರೆ ಅದಕ್ಕೆ ಅನೇಕ ಅಡಚಣೆಗಳು ಎದುರಾದವು. ಇರಾನಿನ ಅಣುಸಂಶೋಧನೆ ಕಾರ್ಯಕ್ರಮದಿಂದ ಅಮೆರಿಕ ಮತ್ತು ಇರಾನ್‌ಗಳಲ್ಲಿ ಮನಸ್ತಾಪವುಂಟಾಗಿ, ಅಮೆರಿಕವು ಇರಾನಿನ ಮೇಲೆ ಭಾರೀ ಆರ್ಥಿಕ ನಿರ್ಬಂಧಗಳನ್ನು ಹೇರಿತು. ಇರಾನಿನೊಂದಿಗೆ ವ್ಯಾಪಾರ ಮಾಡುವುದೂ ಕಠಿಣವಾಯಿತು. ಇರಾನನ್ನು ಮೂಲೆಗುಂಪಾಗಿಸುವಲ್ಲಿ ಅಮೆರಿಕವು ಒಂದಷ್ಟು ಮಟ್ಟಿಗೆ ಯಶಸ್ವಿಯಾಯಿತು. ಆದರೆ ಇತ್ತೀಚೆಗೆ ಇರಾನ್ ಮತ್ತು ಅಮೆರಿಕಗಳ ಒಪ್ಪಂದವುಂಟಾಗಿ, ಈ ಆರ್ಥಿಕ ನಿರ್ಬಂಧಗಳನ್ನು ರದ್ದುಗೊಳಿಸಲಾಯಿತು. ಭಾರತದ ದೃಷ್ಟಿಯಿಂದ ಇದು ಅನುಕೂಲ ಕಾಲಖಂಡವೆನಿಸಿತು. ಕೊನೆಗೆ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಹಸನ್ ರೊಹಾನಿ ಮತ್ತು ರಾಷ್ಟ್ರಾಧ್ಯಕ್ಷ ಅಶ್ರಫ್ ಘನೀ ಅಲ್ಲಿ ಒಟ್ಟಿಗೆ ಕುಳಿತು, ಅವರು ಚಬಾಹಾರ್ ಬಂದರು ಅಭಿವೃದ್ಧಿಯ ಒಪ್ಪಂದಕ್ಕೆ ಸಹಿ ಮಾಡಿದರು.
ಇದು ಕೇವಲ ಬಂದರು ಅಭಿವೃದ್ಧಿಯ ಪ್ರಕಲ್ಪವಾಗಿರದೆ, ಅಫಘಾನಿಸ್ತಾನದಿಂದ ಚಬಾಹಾರ್ ಬಂದರುವರೆಗಿನ ರಸ್ತೆ ನಿರ್ಮಾಣದ ಕಾರ್ಯಕ್ರಮವೂ ಆಗಿದೆ. ಇದರಲ್ಲಿ ಇರಾನಿನ ಗಡಿಭಾಗದ ವರೆಗಿನ ರಸ್ತೆಯನ್ನು ಭಾರತೀಯ ಅಭಿಯಂತರು ನಿರ್ಮಿಸಿ ಪೂರ್ಣಗೊಳಿಸಿದ್ದಾರೆ. ರಸ್ತೆಯೊಂದಿಗೇ ಅಫಘಾನಿಸ್ತಾನ ಮತ್ತು ಕ್ಯಾಸ್ಪಿಯನ್ ಸಮುದ್ರದವರೆಗಿನ ರೈಲುಮಾರ್ಗವನ್ನು ನಿರ್ಮಿಸುವ ಕಾರ್ಯವನ್ನೂ ಆರಂಭಿಸಲಾಗುವುದು. ಈ ನಿರ್ಮಾಣದ ಬಳಿಕ ಮುಂಬಯಿ ಮತ್ತು ಗುಜರಾತಿನಲ್ಲಿ ಉತ್ಪಾದಿಸಲಾಗುವ ಸರಕುಗಳನ್ನು ಮಧ್ಯ ಏಶ್ಯಾಕ್ಕೆ ಚಬಾಹಾರ್ ಬಂದರಿನ ಮೂಲಕ ಸಾಗಿಸಬಹುದು. ಹಾಗೆಯೇ ಅವು ರಶ್ಯಾ ಮತ್ತು ಪೂರ್ವ ಯುರೋಪಿನ ದೇಶಗಳಿಗೂ ಹೋಗುವವು. ಮೊದಲು ಚಬಾಹಾರ್‌ನಿಂದ ಇರಾನೀ ನಗರ ಝಹೇಡನ್ ಈ 650 ಕಿಲೊಮೀಟರ್ ಮಾರ್ಗವನ್ನು ನಿರ್ಮಿಸಲಾಗುವುದು. ಮುಂದೆ ಅಲ್ಲಿಂದ ಅಫ್ಘಾನ್ ಗಡಿಭಾಗದ ಝರಾಂಜ್ ನಗರದ ವರೆಗಿನ ಮಾರ್ಗ ಸಾಗಲಿದ್ದು, ಅದು 200 ಕಿಲೊಮೀಟರ್ ಇರುವುದು. ಇವೆಲ್ಲ ಮಾರ್ಗವು ಒಮ್ಮೆ ತಯಾರಾದವೆಂದರೆ, ಮುಂಬಯಿ ಬಂದರಿನಿಂದ ಅಫಘಾನಿಸ್ತಾನದೊಂದಿಗೆ ಭಾರೀ ವ್ಯಾಪಾರ ವರ್ಧಿಸೀತು.
ಪಾಕಿಸ್ತಾನ ಮತ್ತು ಅದರ ಜೀವಭಾವದ ಮಿತ್ರ ಚೀನವು ಇಂದಂತೂ ಕೈ ಕೈ ಹಿಸುಕಿಕೊಂಡು ಕೂರದೆ ಮತ್ತೇನೂ ಮಾಡಲು ಸಾಧ್ಯವಿಲ್ಲ. ಭಾರತ, ಇರಾನ್ ಮತ್ತು ಅಫಘಾನಿಸ್ತಾನ ಈ ಮೂರೂ ದೇಶಗಳು ಮಾಡಿಕೊಂಡ ಒಪ್ಪಂದವು ಭೂರಾಜಕೀಯದ ದೃಷ್ಟಿಯಿಂದಲೂ ಬಹು ಮಹತ್ವದ್ದಾಗಿದೆ. ಬಲುಚಿಸ್ತಾನ, ಇರಾನ್ ಮತ್ತು ಅಫಘಾನ್ ಇವೆಲ್ಲ ಪ್ರದೇಶಗಳು ಭೂರಾಜಕೀಯ ದೃಷ್ಟಿಯಿಂದ ನಕಾಶೆಯಲ್ಲಿಲ್ಲದಿದ್ದರೂ ಮಧ್ಯವರ್ತಿ ಸ್ಥಾನದಲ್ಲಿವೆ. ಒಂದು ಕಡೆ ಅರಬ್ ದೇಶಗಳಿದ್ದು, ಅವುಗಳ ಬಳಿ ಇಡೀ ಜಗತ್ತಿಗೆ ಪೂರೈಸುವ ತೈಲವಿದೆ. ಇನ್ನೊಂದು ಕಡೆ ರಶ್ಯಾವಿದ್ದು, ಅದೊಂದು ಮಹಾಪ್ರಭುತ್ವವಾಗಿದೆ. ಮೂರನೆ ಕಡೆ ಚೀನವಿದ್ದು, ಅದು ಬಹು ವಿಸ್ತಾರವಾದಿಯಾಗಿದೆ. ಒಂದು ಕಡೆ ಪಾಕಿಸ್ತಾನವಿದ್ದು, ಅದು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಅಡ್ಡೆಯಾಗಿದೆ ಮತ್ತು ಇನ್ನೊಂದು ಕಡೆ ಭಾರತವಿದ್ದು, ವಿಶ್ವಶಾಂತಿ ಮತ್ತು ವಿಶ್ವಬಂಧುತ್ವವು ಅದರ ಜಾಗತಿಕ ಮಿಶನ್ ಆಗಿದೆ. ಭಾರತದ ಈ ಮಿಶನ್ ಸಾಕಾರಗೊಳ್ಳಲು ಅದು ಆರ್ಥಿಕ ದೃಷ್ಟಿಯಿಂದ ಬಹು ಸಶಕ್ತವಾಗಬೇಕಿದೆ, ಅಲ್ಲದೆ ತನ್ನ ಶತ್ರುಗಳ ಎದೆ ನಡುಗಿಸುವಂತಹ ಸೇನಾ ಸಾಮರ್ಥ್ಯವೂ ಅವಶ್ಯಕವಾಗಿದೆ. ಈ ಇವೆರಡರ ಜೊತೆಗೆ ಅಂತಾರಾಷ್ಟ್ರೀಯ ಕ್ಷೇತ್ರದಲ್ಲಿ ಮುತ್ಸದ್ದಿತನ ಬೇಕಾಗುತ್ತದೆ. ಈ ಮುತ್ಸದ್ದಿತನವು ಮಿತ್ರರನ್ನು ಜೋಡಿಸಲು ನೆರವಾಗುತ್ತದೆ, ವಿರೋಧಕರನ್ನು ಅವರ ಇತಿಮಿತಿಯಲ್ಲಿ ಬಂಧಿಸಿಡುತ್ತದೆ ಹಾಗೂ ಶತ್ರುಗಳನ್ನು ಸುತ್ತುವರಿಯುತ್ತದೆ. ವಿದೇಶಾಂಗ ಧೋರಣೆಯಲ್ಲಿ ಈ ಮುತ್ಸದ್ದಿತನವು ಮುಖ್ಯವಾಗಿ ಕೆಲಸ ಮಾಡುತ್ತದೆ.
ನರೇಂದ್ರ ಮೋದಿ ಮತ್ತು ಅವರ ಸಹಕಾರಿಗಳು ಈ ಕಾರ್ಯ ಮಾಡುತ್ತಿದ್ದು, ಈ ಬಗ್ಗೆ ಅಭಿಮಾನವೆನಿಸದಿರದು.
ಪ್ರತಿಯೊಂದು ವಿಷಯದಲ್ಲೂ ರಾಜಕಾರಣ ನೋಡುವುದು ನಮ್ಮಲ್ಲಿ ಚಪಲವೇ ಆಗಿದೆ. ಕಾಂಗ್ರೆಸ್ ಪಕ್ಷವಂತೂ ಯಾವುದರಲ್ಲೂ ಏನೂ ಒಳ್ಳೆಯದು ಕಾಣುತ್ತಿಲ್ಲ. ಮೋದಿಯವರ ವಿದೇಶಾಂಗ ಧೋರಣೆಯು ವಿಫಲತೆಯ ಮಾಲಿಕೆಯೆಂದು ಅವರು ಹೇಳುತ್ತಾರೆ. ಪಠಾಣಕೋಟ್ ಮೇಲೆ ದಾಳಿಯಾಯಿತು, ಅದರ ವೀಕ್ಷಣೆ ಮಾಡಲು ಪಾಕಿಸ್ತಾನಿ ಪಡೆಗಳಿಗೆ ಅವಕಾಶ ನೀಡಿದ್ದು ಎಂತಹ ವಿದೇಶಾಂಗ ಧೋರಣೆ ಎಂದು ಅವರು ಹೇಳುವರು. ಅಮೆರಿಕವು ಪಾಕಿಸ್ತಾನಕ್ಕೆ ಎಫ್-16 ಯುದ್ಧವಿಮಾನಗಳನ್ನು ನೀಡಿದ್ದನ್ನು ತಡೆಯಲು ಮೋದಿಯವರಿಗೆ ಸಾಧ್ಯವಾಗಲಿಲ್ಲ. ಒಬಾಮಾ ಪೊಳ್ಳು ಮುಖಸ್ತುತಿ ಮಾಡುತ್ತಾರೆ, ಆದರೆ ತುರ್ತುಸಂದರ್ಭಗಳಲ್ಲಿ ಭಾರತವನ್ನು ಬೆಂಬಲಿಸುತ್ತಿಲ್ಲ. ಇಂತಹ ಅನೇಕ ವಿಷಯಗಳನ್ನು ಹೇಳಬಹುದು. ಆದರೆ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಅಮೆರಿಕದ ವ್ಹಿಸಾ ನಿರಾಕರಿಸಿದ್ದ ಒಬಾಮಾ, ಈಗ ಅಡ್ಡಬಿದ್ದು ಮೋದಿಯವರನ್ನು ಸ್ವಾಗತಿಸುತ್ತಾರೆ. ಜಗತ್ತಿಗೆ ಶಕ್ತಿಯ ಭಾಷೆ ತಿಳಿಯುತ್ತದೆ.
ಈ ಒಪ್ಪಂದಕ್ಕೆ ಸಹಿ ಮಾಡಿದ ಬಳಿಕ ನೂರು ವರ್ಷಗಳನಂತರ ಇತಿಹಾಸಕಾರರು ಈ ದಿವಸವನ್ನು ಪ್ರಾದೇಶಿಕ ಸಹಕಾರದ ದಿವಸ ಎಂದು ಸ್ಮರಿಸುವರು, ‘‘ಭೂಗೋಳವು ನಮ್ಮ ವಿಧಿಲಿಖಿತವಾಗಿರಲು ಸಾಧ್ಯವಿಲ್ಲ. ನಮ್ಮಲ್ಲಿ ಇಚ್ಛಾಶಕ್ತಿಯಿದ್ದರೆ ನಾವು ಭೂಗೋಳವನ್ನು ಬದಲಾಯಿಸಬಲ್ಲೆವು.’’ ಇರಾನಿನ ರಾಷ್ಟ್ರಾಧ್ಯಕ್ಷರು ಹೇಳಿದರು, ‘‘ರಾಜಕೀಯ ಸಮಸ್ಯೆಗಳೊಂದಿಗೇ ಗುಪ್ತ ಮಾಹಿತಿಗಳನ್ನು ಕೊಡು-ಕೊಳ್ಳುವ ಸಹಕಾರ, ಭಯೋತ್ಪಾದನೆಯ ವಿರುದ್ಧ ಹೋರಾಡಲು ನಾವು ಪರಸ್ಪರ ಸಮೀಪಿಸುವ ಬಗೆ ಹೇಗೆ ಹಾಗೂ ಸಮಗ್ರ ಪ್ರದೇಶದಲ್ಲಿ ಶಾಂತಿ ಮತ್ತು ಸಹಕಾರ ನೆಲೆಸಲು ನಾವೇನು ನೀಡಬಲ್ಲೆವು ಎನ್ನುವ ಬಗ್ಗೆ ಎರಡೂ ದೇಶಗಳು ಚರ್ಚಿಸಿವೆ.’’ ಮೋದಿ ಹೇಳಿದರು, ‘‘ಹಗೆತನದ ದಿನಗಳು ಕಳೆದಿವೆ, ಪ್ರತೀಕ್ಷೆಯ ರಾತ್ರಿಯೂ ಕಳೆಯುತ್ತಿದೆ, ನಮ್ಮ ಮೈತ್ರಿಯು ಕಾಯಂಸ್ವರೂಪದ್ದಾಗಿರುವುದು.’’
ಇರಾನ್, ಅಫಘಾನಿಸ್ತಾನ ಮತ್ತು ಭಾರತಗಳ ಮೈತ್ರಿಯು ಕಾಯಂಸ್ವರೂಪದ್ದಾಗಿರಲು ಅಡ್ಡಿಯೇನಿಲ್ಲ. ಏಕೆಂದರೆ ಈ ಮೂರರ ಐತಿಹಾಸಿಕ ಸಂಬಂಧಗಳು ಬಹು ಬಲಿಷ್ಠ ಮತ್ತು ಗಾಢವಾಗಿವೆ. ಅಫಘಾನಿಸ್ತಾನವು ಒಂದು ಕಾಲದಲ್ಲಿ ಗಾಂಧಾರವಾಗಿತ್ತು. ಇರಾನ್ ದೀರ್ಘಕಾಲ ನಮ್ಮ ಮಿತ್ರನೇ ಆಗಿತ್ತು. ಶುಕ್ರಾಚಾರ್ಯರು ಇರಾನಿನಲ್ಲಿದ್ದರು, ಮತ್ತು ಈ ಕಾರಣಕ್ಕೆ ಅವರ ಪುತ್ರಿ ದೇವಯಾನಿಯು ಮಹಾಭಾರತದ ಒಂದು ಮಹತ್ವದ ಪಾತ್ರವಾಗಿದ್ದಾಳೆ. ಇರಾನ್ ತವರಿನವಳಾಗಿದ್ದಳು. ಇವೆಲ್ಲ ಐತಿಹಾಸಿಕ ಸಂಬಂಧಗಳು ಎರಡೂ ದೇಶಗಳ ಜನತೆಯನ್ನು ಭಾವನಾತ್ಮಕ ದೃಷ್ಟಿಯಿಂದ ಬೆಸೆಯಲು ಉಪಯುಕ್ತವಾಗಬಲ್ಲವು.

   

Leave a Reply