ಮಕ್ಕಳ ಕಥೆಗಳು

ಕಿರಿಯರ ಲೋಕ ; ಲೇಖನಗಳು - 0 Comment
Issue Date : 06.06.2016

ದೇವರು – ನಜರು

-ಶಾರದಾ ಶಾಮಣ್ಣ

ಹಿಂದೆ ನಂದಿಪುರವೆಂಬ ಊರಿನಲ್ಲಿ ಶಂಭುವೆಂಬ ತೋಟಗಾರನಿದ್ದನು. ಅವನ ತೋಟದಲ್ಲಿ ಬೆಳೆಯುವ ಅನೇಕ ಹಣ್ಣುಗಳ ಪೈಕಿ ಒಂದು ವಿಶೇಷ ದ್ರಾಕ್ಷಿ ಹಣ್ಣಿನ ಗಿಡವಿದ್ದಿತು. ಅದು ರುಚಿಯಾಗಿರುತ್ತಿದ್ದಿತು. ನಂದಿಪುರದ ರಾಜನಾದ ನರಸಿಂಹ ಒಡೆಯರ್‌ರವರಿಂದ ಶಂಭುವಿಗೆ ಬಹು ಉಪಕಾರವಾಗಿದ್ದಿತು. ಆ ಉಪಕಾರದ ಸಲುವಾಗಿ ಶಂಭುವು ಆ ಹಣ್ಣುಗಳನ್ನು ಆ ಅರಸನಿಗೆ ಕಾಣಿಕೆಯಾಗಿ ಒಪ್ಪಿಸಬೇಕೆಂದಿದ್ದನು. ಅದಕ್ಕಾಗಿ ತನ್ನ ತೋಟಕ್ಕೆ ಸುತ್ತಲೂ ಬಲವಾದ ಬೇಲಿ ಹಾಕಿಸಿದ್ದುದು ಮಾತ್ರವಲ್ಲದೆ ಅದನ್ನು ರಾತ್ರಿ ಹಗಲೂ ಜೋಪಾನವಾಗಿ ಕಾಯುವುದಕ್ಕಾಗಿ ಆಳುಗಳನ್ನಿಟ್ಟಿದ್ದನು.
ಹೀಗಿರಲು ಒಂದು ದಿನ ರಾತ್ರಿ ನರಿಗಳು ನುಗ್ಗಿದವು.
ಇದು ನೋಡುವುದಕ್ಕೆ ಸಣ್ಣ ಪ್ರಾಣಿಗಳೂ, ಅಲ್ಪ ಬಲವುಳ್ಳವುಗಳೂ ಆಗಿದ್ದರೂ ಬಹು ಯುಕ್ತಿಯುಳ್ಳದ್ದಾಗಿದ್ದವು. ಆದುದರಿಂದ ಇವು ಬೇಲಿಯಲ್ಲಿ ಒಂದು ಕಡೆ ಸಂದು ಮಾಡಿಕೊಂಡು ಒಳಗೆ ನುಗ್ಗಿ ಗಿಡಗಳಲ್ಲಿದ್ದ ಹಣ್ಣು, ಕಾಯಿ ಮೊದಲಾದವುಗಳಲ್ಲಿ ಕೆಲವನ್ನು ತಿಂದು ಹಾಕಿ ಕೆಲವನ್ನು ಅರ್ಧರ್ಧವಾಗಿ ಕಚ್ಚಿ ಹಾಕಿದವು. ಈ ರೀತಿ ಅವು ತೋಟವನ್ನೆಲ್ಲಾ ಧ್ವಂಸಮಾಡಿ ಪಲಾಯನ ಮಾಡಿದವು.
ಮರುದಿನ ಯಜಮಾನನು ತಾನು ರಾಜನಿಗೆ ಕಾಣಿಕೆಯಾಗಿ ಕೊಡಬೇಕೆಂದಿದ್ದ ಹಣ್ಣುಗಳು ಪಕ್ವವಾಗಿರುವುದೆಂದೆಣಿಸಿ ತೋಟಕ್ಕೆ ಬಂದು ಅಲ್ಲಿಯ ಸ್ಥಿತಿಯನ್ನು ನೋಡಲಾಗಿ ಪ್ರತಿಯೊಂದು ಗೊಂಚಲೂ ವಿಕಾರವಾಗಿದ್ದಿತು. ಅದನ್ನು ಕಂಡು ಅವನಿಗೆ ಬಹು ಸಂಕಟವಾಗಿ – ಅಯ್ಯೋ ಗಣನೆಗೆ ಬಾರದ ಈ ಅಲ್ಪ ಜಂತುಗಳು ಬಂದು ಎಷ್ಟು ನಷ್ಟ ಮಾಡಿದವು, ಎಂದರಿತನು.
ಈ ಚಿಕ್ಕ ಕಥೆಯಿಂದ ನಮಗೆ ಗೊತ್ತಾಗುವ ನೀತಿಯೆಂದರೆ – ನಮ್ಮ ಹೃದಯವೆಂಬ ದ್ರಾಕ್ಷಾವನದಲ್ಲಿ ಸದ್ಗುಣಗಳೆಂಬ ಫಲಗಳನ್ನು ಬೆಳೆಸಿ ರಾಜಾಧಿರಾಜನೂ ಪರೋಪಕಾರಿಯೂ ಸರ್ವಾಂತರ‌್ಯಾಮಿಯೂ, ಲೋಕ ರಕ್ಷಕನಾದ ಭಗವಂತನಿಗೆ ನಜರೊಪ್ಪಿಸಬೇಕಾಗಿದೆ. ಆದರೆ ಇಂಥ ಫಲವು ಅನೇಕ ವೇಳೆ ಅಲ್ಪ ಸಂಗತಿಗಳೆಂದು ನಾವು ಅಲಕ್ಷ್ಯವೆಂದು ಎಣಿಸಿರುವ ಸುಳ್ಳು,
ಅವಿಧೇಯತೆ, ದುರಾಸೆ, ನಿರ್ದಯ, ಮೋಸ, ಕೃತಘ್ನತೆಗಳೆಂಬ ಕ್ಷುದ್ರ ಗುಣಗಳೆಂಬ ನರಿ ಮೊದಲಾದವುಗಳಿಂದ ಮಾಲಿನ್ಯ ಹೊಂದುತ್ತವೆ. ನಾವು ಅಂತಹ ಕೇಡಿಗೆ ಒಳಗಾಗದಂತೆ ನಮ್ಮ ಹೃದಯದ ದೌರ್ಬಲ್ಯವನ್ನು ಹೋಗಲಾಡಿಸತಕ್ಕ ಶಕ್ತಿಯನ್ನು ಕೊಟ್ಟು ರಕ್ಷಿಸಬೇಕೆಂದು ಭಗವಂತನಲ್ಲಿ ಬೇಡಿಕೊಳ್ಳೋಣ.

 

ಗೋಪಾಲಕೃಷ್ಣಗೋಖಲೆ

-ಎ.ಕೆ. ಪಟ್ಟಾಭಿ

ಮಹಾರಾಷ್ಟ್ರದ ಹಳ್ಳಿಯೊಂದರ ಬಡ ಕುಟುಂಬ ಒಂದರಲ್ಲಿ ಗೋಖಲೆಯವರ ಜನನವಾಯಿತು. ಬಹಳ ಕಷ್ಟದಿಂದ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದರು. ಸತ್ಯವೇ ದೇವರು ಎಂದು ನಂಬಿ ಸದಾ ಸದ್ವಿಚಾರಗಳ ಕಡೆಗೆ ಗಮನ ನೀಡುತ್ತಿದ್ದರು. ಬಾಲಕನಿಗೆ ತುಂಬಾ ನಾಚಿಕೆ ಸ್ವಭಾವ, ಸುಳ್ಳು ಹೇಳುತ್ತಿರಲಿಲ್ಲ, ಶಾಲೆಯಲ್ಲಿ ಸ್ನೇಹಿತರೆಲ್ಲರೂ ಈತನನ್ನು ಗೌರವಿಸಿ, ಪ್ರೀತಿಸುತ್ತಿದ್ದರು. ಸದಾ ಮೌನಿಯಾಗಿರುತ್ತಿದ್ದ.
ಒಂದು ದಿನ ಶಾಲೆಯಲ್ಲಿ ಗುರುಗಳು ಮನೆ ಕೆಲಸವೆಂದು ಗಣಿತವನ್ನು ಎಲ್ಲರೂ ಮಾಡಿಕೊಂಡು ಬಂದು ಮಾರನೆಯ ದಿನ ತಮಗೆ ಒಪ್ಪಿಸಬೇಕೆಂದು ಆದೇಶಿಸಿದರು. ಅದರಂತೆ ಎಲ್ಲ ವಿದ್ಯಾರ್ಥಿಗಳೂ ಮನೆಯಲ್ಲಿ ಗಣಿತ ಮಾಡಲು ಪ್ರಯತ್ನಿಸಿದರು. ಗಣಿತ ಬಹಳ ಕಠಿಣವಾಗಿತ್ತು. ಬಾಲಕ ಗೋಖಲೆಗೂ ಮಾಡಲು ಆಗಲಿಲ್ಲ. ಗುರುಗಳು ಏನು ಶಿಕ್ಷೆ ಕೊಟ್ಟಾರೆಯೋ ಎಂಬ ಭಯದಿಂದ ಯಾರಿಂದಲೋ ಗಣಿತವನ್ನು ಮಾಡಿಸಿಕೊಂಡು ಮಾರನೆಯ ದಿನ ಶಾಲೆಯಲ್ಲಿ ಗುರುಗಳಿಗೆ ಒಪ್ಪಿಸಿದ. ಇತರ ಯಾವ ವಿದ್ಯಾರ್ಥಿಯೂ ಗಣಿತ ಮಾಡಿರಲಿಲ್ಲ. ಗುರುಗಳಿಗೆ ಆಶ್ಚರ್ಯವಾಯಿತು. ‘‘ಭಲೇ, ನೀನೇ ಮಾಡಿರುತ್ತೀಯಾ, ಅಲ್ಲವೇ? ಗಣಿತ ತಪ್ಪಿಲ್ಲದೆ ಸರಿಯಾಗಿರುತ್ತದೆ’’ ಎಂದರು. ಬಾಲಕನಿಗೆ ಅಳು ಬಂದಿತು. ಬಿಕ್ಕಳಿಸುತ್ತಾ ‘‘ಗುರುಗಳೇ, ಇದು ನಾನು ಮಾಡಿದ್ದಲ್ಲ, ನನ್ನ ಹಿರಿಯ ಮಿತ್ತನೊಬ್ಬನು ಮಾಡಿರುವ ಗಣಿತ, ನನ್ನನ್ನು ಕ್ಷಮಿಸಿರಿ. ಇಂತಹ ತಪ್ಪು ಮಾಡಬಾರದಿತ್ತು’’ ಎಂದೆಲ್ಲಾ ಗೋಳಾಡಿದ.
ಶಾಲೆಯಲ್ಲಿ ಬಾಲಕನ ಬಗ್ಗೆ ಖ್ಯಾತಿ ಹೆಚ್ಚಿತು, ಮುಂದೆ ಪದವೀಧರನಾದ. ನಂತರ ಶಿಕ್ಷಣ ತಜ್ಞನಾದ, ಸಮಾಜ ಸುಧಾರಕನಾದ. ಕೊನೆಗೆ ದೇಶ ಸೇವಕರ ತಂಡವೊಂದನ್ನು ರಚಿಸಿದ. ಇವರ ಪ್ರತಿಭೆಗೆ ಮೆಚ್ಚಿ ಬಾಲಗಂಗಾಧರ ತಿಲಕರು ಅವರನ್ನು ‘ಭಾರತದ ವಜ್ರ’ ಎಂದು ಹರಸಿ ಹೊಗಳಿದ್ದಾರೆ. ಗಾಂಧೀಜಿಯವರು ಗೋಪಾಲಕೃಷ್ಣ ಗೋಖಲೆಯವರು ತಮ್ಮ ರಾಜಕೀಯ ಗುರು ಎಂದು ಪ್ರಶಂಸಿಸಿರುತ್ತಾರೆ.

   

Leave a Reply