ಮನೆಯೊಳಗಿನ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 20.04.2015

ಚೆನ್ನಮಣೆ ಆಟ
ಮನೆಯೊಳಗಿನ ಆಟಗಳಲ್ಲಿ ಈಗಲೂ ಆಡುತ್ತಿರುವ ಆಟ ಅಳಗುಳಿ ಮನೆ ಆಟ. ಇದನ್ನು ಚೆನ್ನಮಣೆ ಆಟವೆಂತಲೂ ಕರೆಯುತ್ತಾರೆ. ಮರ, ಕಲ್ಲಿನಿಂದ ಈ ಮಣೆಯನ್ನು ಮಾಡುತ್ತಾರೆ. ಯೋಜನೆಯ ರೀತಿಗಳನ್ನು ಈ ಆಟದಿಂದ ಮಕ್ಕಳು, ದೊಡ್ಡವರು ಕಲಿಯಬಹುದು.
ಸಾಮಾನ್ಯವಾಗಿ ಹುಣಿಸೆ ಬೀಜಗಳನ್ನು ಆಡುವ ಕಾಯಿಗಳಾಗಿ ಇದಕ್ಕೆ ಉಪಯೋಗಿಸುತ್ತಾರೆ. ಇದರ ಮಣೆಯಲ್ಲಿ 14 ಕುಳಿಗಳಿರುತ್ತವೆ. ಪ್ರತಿಯೊಂದು ಕುಳಿಗೆ ನಾಲ್ಕರಂತೆ ಕಾಯಿಗಳನ್ನು ಉಪಯೋಗಿಸಿದರೆ 56 ಕಾಯಿಗಳು ಬೇಕು. ಬೇರೆ ಬೇರೆ ರೀತಿಯ ಆಟಗಳಲ್ಲಿ ಆಡುವ ಕಾಯಿಗಳ ಸಂಖ್ಯೆ ಹೆಚ್ಚಾಗಬಹುದು. ಈ ಕಾಯಿಗಳನ್ನು ಹರಳುಗಳು ಎಂದು ಕರೆಯುತ್ತಾರೆ. ಆಟದಲ್ಲಿ ಹರಳುಗಳನ್ನು ಎಡದಿಂದ ಬಲಕ್ಕಿಡುತ್ತ ಹೋಗಬೇಕು. ಒಂದು ಬದಿಯ ಏಳು ಮನೆಗಳು ಒಂದು ಪಕ್ಷಕ್ಕೆ, ಇನ್ನೊಂದು ಬದಿಯ ಏಳು ಮನೆಗಳು ಮತ್ತೊಂದು ಪಕ್ಷಕ್ಕೆ ಸೇರಬೇಕು. ಆಡುವ ವಿಧಾನದ ಆಧಾರದ ಮೇಲೆ ಆಟಕ್ಕೆ ಬೇರೆ ಬೇರೆ ಹೆಸರುಗಳನ್ನು ಇಡುತ್ತಾರೆ.
ಕರು ಬರುವ ಆಟ
ತನ್ನ ಯಾವುದೇ ಮನೆಯ ಹರಳೆತ್ತಿ (ಮುರಿದು) ಒಂದೊಂದನ್ನೆ ಒಂದೊಂದು ಕುಳಿಯೊಳಗೆ ಇಡುತ್ತ ಎಡದಿಂದ ಬಲಕ್ಕೆ (ಅಪ್ರದಕ್ಷಿಣವಾಗಿ) ಸಾಗಬೇಕು. ಹೀಗೆ ಆಡುತ್ತ ಖಾಲಿ ಮನೆಗೆ ಹೋದಾಗ ಒಂದೇ ಹರಳು ಕೈಯಲ್ಲಿದ್ದರೆ ಖಾಲಿ ಮನೆಯಲ್ಲಿ ಆ ಹರಳಿಟ್ಟು ಆಟ ಬಿಡಬೇಕು. ಆಡುವಾಗ ಮೂರು ಹರಳಿದ್ದಲ್ಲಿ ನಾಲ್ಕನೆಯ ಹರಳು ಹಾಕಿದರೆ ಅದಕ್ಕೆ ‘ಕರು’ ಎನ್ನುವರು. ಕರು ಯಾರ ಮನೆಯಲ್ಲಿದ್ದರೂ ಎತ್ತಿಕೊಳ್ಳಬಹುದು. ಆದರೆ ಕರು ಆದಾಗ ಕೈಯಲ್ಲಿ ಹರಳಿಲ್ಲದಿದ್ದರೆ ಕರುವನ್ನೆತ್ತಿಕೊಂಡು ಮುಂದಿನವನಿಗೆ ಆಟ ಕೊಡಬೇಕು. ಒಂದೇ ಸಮನೆ ಹರಳ ಹಾಕುವ ಗಡಿಬಿಡಿಯಲ್ಲಿ ಕರು ಆದದ್ದನ್ನು ಎತ್ತಿಕೊಳ್ಳದೆ ಇನ್ನೊಂದು ಹರಳು ಹಾಕಿಬಿಟ್ಟರೆ ‘ಕರು’ ಕೊಳೆತುಹೋಗುತ್ತದೆ. ಅದನ್ನು ಯಾರೂ ಎತ್ತಿಕೊಳ್ಳಬಾರದು. ಕರು ಆದದ್ದನ್ನು ನೋಡಿಯೂ ಎದುರಾಳಿ ಸುಮ್ಮನಿದ್ದುಬಿಡುವನು. ಎಲ್ಲ ಹರಳು ಮುಗಿದ ಮೇಲೆ ತಮ್ಮ ತಮ್ಮ ಮನೆಗಳಿಗೆ ಹರಳು ತುಂಬುವರು. ಕಡಿಮೆ ಕರುವನ್ನು ಪಡೆದವನ ಮನೆ ಹಾಗೆಯೇ ಉಳಿಯುವುದು. ಮುಂದಿನ ಆಟದಲ್ಲಿ ಹೆಚ್ಚು ಕರು ಪಡೆದರೆ ಬಿಟ್ಟ ಮನೆಗಳನ್ನು ಸೇರಿಸಿಕೊಳ್ಳಬಹುದು.
ಈ ರೀತಿ ಸಮಯದ ಪರಿವೆಯನ್ನು ಮರೆತು ಅಳಗುಳಿ ಆಟಗಳನ್ನು ಆಡಬಹುದು.
ಹಿಂದಿನ ವಾರದ ಒಗಟುಗಳಿಗೆ ಉತ್ತರ
(1) ಬಾಳೆಮೂತಿ – ಕಾಯಿ (2) ಜಿಲೇಬಿ
ಈ ವಾರದ ಒಗಟುಗಳು
(1) ಅಂಗಿ ಬಿಚ್ಚಿದ, ಬಾವಿಗೆ ಹಾರಿದ
(2) ಅಕ್ಷರಗಳದ್ದರೂ ಪುಸ್ತಕವಲ್ಲ, ಸಿಂಹವಿದ್ದರೂ ಅರಣ್ಯವಲ್ಲ, ದುಂಡಾಗಿದ್ದರೂ ಚಕ್ರವಲ್ಲ, ನಾನ್ಯಾರು?

ಕಟ್ಟೆ ಆಟ
ಮೂಲೆಯ ನಾಲ್ಕು ಮನೆಗಳಿಗೆ ಕಟ್ಟೆ ಎನ್ನುವರು. ಪ್ರತಿ ಮನೆಯಲ್ಲಿಯೂ ನಾಲ್ಕು ನಾಲ್ಕು ಹರಳು ಹಾಕುವರು. ಕಟ್ಟೆಯಿಂದಲೇ ಆಟ ಆರಂಭಿಸುವುದು ಹೆಚ್ಚು ರೂಢಿ. ಹರಳು ಎತ್ತಿ ಇಡುತ್ತಾ ಹೋದಂತೆ ಎತ್ತಿದ ಮೂಲೆ ಮನೆಯಲ್ಲಿ ನಾಲ್ಕು ಹರಳಾದಾಗ ಕಟ್ಟೆ ಕಟ್ಟಿದಂತಾಯ್ತು. ಇನ್ನೊಬ್ಬನ ಮೂಲೆ ಮನೆಯಲ್ಲೂ ಕಟ್ಟೆಯನ್ನು ಕಟ್ಟಬಹುದು. ಕೈಯಲ್ಲಿ ಹರಳಿದ್ದರೆ ಮಾತ್ರ ಆಟ ಮುಂದುವರಿಸಿಕೊಂಡು ಹೋಗಬೇಕು. ಹರಳು ಮುಗಿದ ಮನೆಯ ಹರಳನ್ನೇ ಎತ್ತಬೇಕು. ನಡುವೆ ಕರುವಾದರೆ ಎತ್ತಿಕೊಳ್ಳಬಾರದು. ಆಡುವವನು ತಾನು ಕಟ್ಟಿದ ಕಟ್ಟೆಗೂ ಹರಳು ಹಾಕುವನು. ಎದುರಾಳಿ ಹಾಕುವುದಿಲ್ಲ. ತಪ್ಪಿ ಹಾಕಿದರೆ ಪ್ರತಿ ಸುತ್ತಿನಲ್ಲಿಯೂ ಆ ಕಟ್ಟೇ ಮನೆಗೆ ಹರಳು ಹಾಕಬೇಕು. ಹರಳುಗಳೆಲ್ಲ ಕಟ್ಟೆ ರಾಶಿಯಾಗುವುವು. ತಮ್ಮ ತಮ್ಮ ರಾಶಿಗಳಿಂದ ಹರಳು ತೆಗೆದು ತಮ್ಮ ಮನೆಗೆ ಹಾಕುವರು. ಇಬ್ಬರ ಹರಳು ಅವರ ಎಲ್ಲ ಮನೆಗೂ ಸರಿಯಾದರೆ ಆಟ ಮೊದಲಿನಂತೆ ಮುಂದುವರೆಯುತ್ತದೆ.
ಒಬ್ಬನಿಗೆ ಕೆಲವು ಮನೆಗೆ ಹರಳುಗಳು ಕಡಿಮೆಯಾದರೆ ಆ ಮನೆಗಳನ್ನು ಬಿಟ್ಟು ಆಡುವರು. ಒಬ್ಬನ ಹತ್ತಿರ ಎರಡು ಹರಳು ಹೆಚ್ಚಿದ್ದರೆ ಇನ್ನೊಬ್ಬನ ಹತ್ತಿರವೂ ಎರಡು ಹೆಚ್ಚಿರಬೇಕಾಯಿತಷ್ಟೆ! ಆ ನಾಲ್ಕು ಹರಳುಗಳನ್ನು ತೆಗೆದುಕೊಂಡು ಒಂದರಲ್ಲಿ ಮೂರು, ಇನ್ನೊಂದರಲ್ಲಿ ಒಂದು ಹಿಡಿದು ಕತ್ತರಿಯಾಗಿ ಕೈ ಹಿಡಿದು, ಇನ್ನೊಬ್ಬನ ಹತ್ತಿರ ಯಾವುದು ಬೇಕು ಎಂದು ಕೇಳುವುದು. ಆಗ ಒಂದು ಇದ್ದ ಕೈಯನ್ನು ಆರಿಸಿಕೊಂಡವನು ಸೀನ್ಯಾ; ಮತ್ತೊಬ್ಬ ಮುಕ್ಯಾ ಆಗುತ್ತಾನೆ. ಮೊದಲೇ ಒಬ್ಬನಿಗೆ ಒಂದು, ಇನ್ನೊಬ್ಬನಿಗೆ ಮೂರು ಬರುವುದು ಇದೆ. ಮುಕ್ಯಾ ಬಂದವನು ತನ್ನ ಒಂದು ಮನೆಯಲ್ಲಿ ಅದನ್ನಿಟ್ಟುಕೊಳ್ಳುತ್ತಾನೆ. ಮುಕ್ಯಾ ಇಡಲು ಸ್ಥಳವಿಲ್ಲದಿದ್ದರೆ ಒಂದು ಮನೆಯ ಹರಳನ್ನು ತೆಗೆದು ಬದಿಯಲ್ಲಿ ಕಾದಿರಿಸಿಕೊಳ್ಳುತ್ತಾನೆ. ಮುಕ್ಯಾನನ್ನು ಕಟ್ಟೆಯಲ್ಲಿಡಬಾರದು. ಮನೆಯ ಮಧ್ಯದಲ್ಲಿದ್ದರೂ ‘ಮುಕ್ಯಾ’ ಅವನ ಪಾಲಿಗೆ ಒಂದು ಕಟ್ಟೆಯಿದ್ದಂತೆ. ಎದುರಿನವ ‘ಮುಕ್ಯಾ’ನಿಗೆ ಹರಳು ಹಾಕಬಾರದು. ಒಂದು ವೇಳೆ ಹಾಕಿದರೆ ಪ್ರತಿ ಸುತ್ತಿನಲ್ಲಿಯೂ ಹರಳು ಹಾಕಬೇಕು. ಸೀನ್ಯಾ ಇದ್ದವನು ಹರಳನ್ನು ತನ್ನ ಎಡಗೈಯಲ್ಲಿಟ್ಟುಕೊಳ್ಳುತ್ತಾನೆ. ಪ್ರತಿ ಸಾರಿ ಒಂದೊಂದು ಮನೆಯ ಹರಳು ಎತ್ತಿಕೊಳ್ಳುವಾಗ (ಮುರಿಯುವಾಗ) ಒಂದು ಹರಳನ್ನು ತನ್ನಲ್ಲಿಟ್ಟುಕೊಳ್ಳುತ್ತಾನೆ. ಹೀಗಾಗಿ ಸೀನ್ಯಾ ಇದ್ದವನಿಗೆ ಬೇಗನೆ ಹರಳು ಸಂಗ್ರಹ ಬೆಳೆಯುತ್ತದೆ. ಕರು ಬರುವ ಆಟದಂತೆಯೇ ಇಲ್ಲಿಯೂ ಆಟ ಬಿಡುವ ನಿಯಮವಿರುತ್ತದೆ.

– ಶಿ.ನಾ. ಚಂದ್ರಶೇಖರ

   

Leave a Reply