ಮಹಿಳೆಯರ ವಿಷಯದಲ್ಲೇಕೆ ಹಿಂದೆ?

ಮಹಿಳೆ ; ಲೇಖನಗಳು - 0 Comment
Issue Date : 23.07.2016

ಜೂನ್ ತಿಂಗಳ 7 ರಂದು ಹಿಲರಿ ಕ್ಲಿಂಟನ್ ರನ್ನು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುತ್ತಿದ್ದಂತೆಯೇ ಇಡೀ ಅಮೆರಿಕದ ಇತಿಹಾಸದಲ್ಲೇ ಹೊಸ ಅಧ್ಯಾಯವೊಂದು ತೆರೆದುಕೊಂಡಿತ್ತು. ಅದುವರೆಗೂ ಕ್ಲಿಂಟನ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಎಂಬುದು ಬಹುತೇಕ ಖಚಿತವಾಗಿದ್ದರೂ ಅಧಿಕೃತವಾಗಿ ಘೋಷಣೆಯಾಗಿರಲಿಲ್ಲ. ಹೀಗೆ ಡೆಮಾಕ್ರೆಟಿಕ್ ಪಕ್ಷದಿಂದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ಆಯ್ಕೆಯಾದ ಮೊದಲ ಮಹಿಳೆ ಎಂಬ ಖ್ಯಾತಿಗೂ, ನವೆಂಬರ್‌ನಲ್ಲಿ ಫಲಿತಾಂಶ ಪಡೆಯುವ ಈ ಚುನಾವಣೆಯಲ್ಲಿ ಗೆದ್ದರೆ ವಿಶ್ವದ ದೊಡ್ಡಣ್ಣನ ಪ್ರಪ್ರಥಮ ಮಹಿಳಾ ಅಧ್ಯಕ್ಷೆಯಾಗಿಯೂ ಹಿಲರಿ ದಾಖಲೆ ಬರೆಯಲಿದ್ದಾರೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಕುರಿತ ಸುದ್ದಿಯತ್ತ ಕಣ್ಣು ಹಾಯಿಸುವಾಗ ಹಲವು ಯೋಚನೆಗಳು ಎದುರಾಗುತ್ತವೆ. ವಿಶ್ವದ ದೊಡ್ಡಣ್ಣನಾಗಿ, ಜಗತ್ತಿನ ಯಾವುದೇ ದೇಶದಲ್ಲಿ ಅಹಿತಕರ ಘಟನೆ ನಡೆದರೂ ಅನಪೇಕ್ಷಿತವಾಗಿ ಮೂಗುತೂರಿಸುವ ಅಧಿಕ ಪ್ರಸಂಗಿಯೂ ಆಗಿ, ಭಾರತದ ಹೆಗಲ ಮೇಲೆ ಕೈಹಾಕಿಕೊಂಡರೂ ಬಗಲಲ್ಲಿ ಪಾಕಿಸ್ಥಾನವನ್ನು ಸಾಕಿಟ್ಟುಕೊಳ್ಳುವ ಅಮೆರಿಕ ಎಂದಿಗೂ ಅಪಾಯಕಾರಿ ರಾಷ್ಟ್ರವೇ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿಶ್ವದ ಪ್ರತಿಯೊಂದು ರಾಷ್ಟ್ರಕ್ಕೂ ತಾನೇ ಆದರ್ಶ ಎಂದುಕೊಂಡಿರುವ ಅಮೆರಿಕ ಮಹಿಳೆಯರ ವಿಷಯದಲ್ಲೇಕೆ ಇಷ್ಟೆಲ್ಲ ಹಿಂದಿದೆ ಎಂಬುದನ್ನು ಯೋಚಿಸಿದರೆ ಅಚ್ಚರಿಯಾದೀತು.
ಇಲ್ಲಿನ ಮಹಿಳೆಯರಿಗೆ ಸಾಕಷ್ಟು ಸ್ವಾತಂತ್ರ್ಯವಿದ್ದಿರಬಹುದು. ಬಯಸಿದಂತೆ ಬದುಕುವ, ಇಷ್ಟಪಟ್ಟ ಬಟ್ಟೆತೊಡುವ, ಮನಸ್ಸಿಗೆ ಸಮಾಧಾನವಾಗುವಷ್ಟು ಓದುವ, ತನ್ನ ಸಂಗಾತಿಯನ್ನೂ ತಾನೇ ಆರಿಸಿಕೊಳ್ಳುವ ಎಲ್ಲಾ ಸ್ವಾತಂತ್ರ್ಯವೂ ಇದ್ದಿರಬಹುದು. ವೈಜ್ಞಾನಿಕವಾಗಿ, ಔದ್ಯೋಗಿಕವಾಗಿ ಅಲ್ಲಿನ ಮಹಿಳೆ ಬೇರೆಲ್ಲ ದೇಶದ ಮಹಿಳೆಯರೆದುರಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳಬಹುದು. ಆದರೆ ರಾಜಕೀಯದ ವಿಷಯಕ್ಕೆ ಬಂದರೆ ಅಮೆರಿಕದ ಮಹಿಳೆಯರು ವಿಶ್ವದ ಹಲವಾರು ರಾಷ್ಟ್ರಗಳಿಗಿಂತ ಹಿಂದುಳಿದಿದ್ದಾರೆ. 2014ರಲ್ಲಿ ನಡೆದ ಸಮೀಕ್ಷೆಯೊಂದರ ಪ್ರಕಾರ ಮಹಿಳೆಯರಿಗೆ ರಾಜಕೀಯ ಪ್ರಾತಿನಿಧಿತ್ವ ನೀಡುವ ರಾಷ್ಟ್ರಗಳ ಪೈಕಿ ಅಮೆರಿಕ 98ನೇ ಸ್ಥಾನದಲ್ಲಿದೆಯೆಂದರೆ ನಂಬಲು ಕಷ್ಟವಾಗಬಹುದು! ಅಲ್ಲಿನ 100 ಬೃಹತ್ ನಗರಗಳ ಪೈಕಿ 15 ನಗರಗಳಲ್ಲಿ ಮಹಿಳಾ ಮೇಯರ್‌ಗಳಿದ್ದರೆ ಅದೇ ಸಾಧನೆ!
ಮಹಿಳಾ ಸಬಲೀಕರಣ, ಸಮಾನತೆ ಎಂದೆಲ್ಲ ಭಾರತದ ಹಲವು ಸ್ತ್ರೀವಾದಿಗಳು ಮಾತನಾಡುವಾಗ ನಿದರ್ಶನವಾಗಿ ಅಮೆರಿಕವೇ ಕಾಣುತ್ತದೆ. ಆದರೆ ಅಭಿವೃದ್ಧಿ ಹೊಂದಿದ ರಾಷ್ಟ್ರವೆಂದು ಬೀಗುವ ಅಮೆರಿಕದ ರಾಜಕೀಯದಲ್ಲಿ ಸ್ತ್ರೀಯರ ಪ್ರಾತಿನಿಧಿತ್ವ ಎಷ್ಟು ಎಂಬ ಬಗ್ಗೆ ಅವರಿಗೆ ತಿಳಿದಿರಲಿಕ್ಕಿಲ್ಲ! 1966ರಲ್ಲೇ ಭಾರತ ಮಹಿಳಾ ಪ್ರಧಾನಿಯನ್ನು ಪಡೆದಿದ್ದರೆ, ಅಮೆರಿಕ 21ನೇ ಶತಮಾನದಲ್ಲೂ ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧಿತ್ವವನ್ನು ನೆಲೆಗೊಳಿಸಲು ಹರಸಾಹಸ ಪಡುತ್ತಿದೆ ಎಂಬುದು ವಾಸ್ತವ!
ಬಳೆ ತೊಡುವ ಕೈಯಿಗೆ ರಾಷ್ಟ್ರದ ಚುಕ್ಕಾಣಿ ಹಿಡಿಯೋಕೂ ಗೊತ್ತು ಎಂಬುದನ್ನು ಭಾರತ ಎಂದೋ ತೋರಿಸಿಕೊಟ್ಟಿತ್ತು. ಬೇರೆ ರಾಷ್ಟ್ರಗಳಿಗೆ ಹೋಲಿಸಿದರೆ ಪಂಚಾಯತ್‌ನಿಂದ ಹಿಡಿದು ರಾಷ್ಟ್ರ ರಾಜಕಾರಣದವರೆಗೂ ಮಹಿಳೆಯರ ಪ್ರಾತಿನಿಧಿತ್ವ ಭಾರತದಲ್ಲಿ ಯಥೇಚ್ಛವಾಗಿದೆ.
ವಾಷಿಂಗ್ಟನ್ನಿನ ಸಭೆಯೊಂದರಲ್ಲಿ ಭಾಷಣ ಮಾಡುತ್ತಿದ್ದ ಹಿಲೆರಿ ಕ್ಲಿಂಟನ್ ತಾನು ಅಮೆರಿಕದ ಅಧ್ಯಕ್ಷೆಯಾದರೆ ತನ್ನ ಸಂಪುಟದಲ್ಲಿ ಶೇ.50ರಷ್ಟು ಮಹಿಳೆಯರಿಗೇ ಪ್ರಾತಿನಿಧಿತ್ವ ನೀಡುತ್ತೇನೆ ಎಂದಿದ್ದರು. ಅದರರ್ಥ ಇಷ್ಟು ದಿನ ಮಹಿಳೆಯರಿಗೆ ಪ್ರಾತಿನಿಧಿತ್ವ ಇದ್ದಿರಲಿಲ್ಲವೆಂದೇ ಅಲ್ಲವೇ? ಭಾರತದಲ್ಲಿ ಹಲವು ರಾಜ್ಯಗಳು ಮಹಿಳಾ ಮುಖ್ಯಮಂತ್ರಿಗಳನ್ನು ಕಂಡಿವೆ. ಹಾಗೆಯೇ ಸಚಿವಾಲಯದ ಹಲವು ಉನ್ನತ ಹುದ್ದೆಗಳನ್ನು ಭಾರತದಲ್ಲಿ ಇಂದಿಗೂ ಮಹಿಳೆಯರೇ ನಿರ್ವಹಿಸುತ್ತಿದ್ದಾರೆ. ಅಷ್ಟೇಕೆ 2007ರಲ್ಲಿ ಭಾರತದ ಅಧ್ಯಕ್ಷೆಯ ಸ್ಥಾನವನ್ನೂ ಮಹಿಳೆಯೇ ಅಲಂಕರಿಸಿದ್ದರು!
ಅಮೆರಿಕದಲ್ಲಿ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಗುರುತು ಮೂಡಿಸಿದ್ದರೂ ರಾಜಕೀಯದ ವಿಷಯ ಬಂದಾಗ ದೂರವೇ ಉಳಿಯುವುದಕ್ಕೆ ಏನಾದರೂ ನಿರ್ದಿಷ್ಟ ಕಾರಣಗಳಿವೆಯೇ ಎಂಬುದನ್ನು ಸ್ವತಃ ಅಮೆರಿಕದ ಮಹಿಳೆಯರೇ ಹೇಳಬೇಕು. ರಾಜಕೀಯಕ್ಕೆ ಅತ್ಯಗತ್ಯವಾಗಿ ಬೇಕಾದ ನಾಯಕತ್ವದ ಗುಣ, ದಕ್ಷತೆ, ನಿರ್ವಹಣೆಯ ಕಲೆ, ಮಾತುಗಾರಿಕೆ, ಜ್ಞಾನ ಈ ಎಲ್ಲವೂ ಅಲ್ಲಿನ ಮಹಿಳೆಯರಲ್ಲಿ ಕಡಿಮೆ ಇದೆಯೇ ಎಂದರೆ ಖಂಡಿತ ಇಲ್ಲ. ಏಕೆಂದರೆ ಅಲ್ಲಿನ ಸಮಾಜ ಮಹಿಳೆಯರಿಗೆ ನೀಡುತ್ತಿರುವ ಸ್ವಾತಂತ್ರ್ಯದಿಂದಾಗಿ ಪುರುಷರಿಗೆ ಯಾವ ವಿಷಯದಲ್ಲೂ ಕಡಿಮೆ ಇಲ್ಲವೆಂಬಂತೆ ಎಲ್ಲ ಕ್ಷೇತ್ರಗಳಲ್ಲೂ ಅಲ್ಲಿನ ಮಹಿಳೆಯರು ಮುಂದಿದ್ದಾರೆ. ಆದರೆ ರಾಜಕೀಯವೆಂದೊಡನೆ ಇಲ್ಲಿನ ಮಹಿಳೆಯರ ಮುಖಭಾವವೇ ಬದಲಾಗುತ್ತದೆ!
ನಂಬುತ್ತೀರೋ ಬಿಡುತ್ತಿರೋ, ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧಿತ್ವವನ್ನು ಹೆಚ್ಚಿಸಬೇಕೆಂಬ ಕಾರಣದಿಂದ ಅಮೆರಿಕದಲ್ಲಿ ಹಲವು ಸಂಸ್ಥೆಗಳು ಮಹಿಳೆಯರಿಗೆ ರಾಜಕೀಯದ ಕುರಿತು ತರಬೇತಿ ನೀಡುತ್ತಿವೆಯಂತೆ! ರಾಜಕೀಯದಲ್ಲಿ ಮಹಿಳಾ ಪ್ರತಿನಿಧಿತ್ವ ಹೆಚ್ಚುವುದು ರಾಷ್ಟ್ರದ ಹಿತದೃಷ್ಟಿಯಿಂದ ಉತ್ತಮ ಮತ್ತು ಲಾಭದಾಯಕ ಎಂಬುದನ್ನು ಮನಗಂಡ ಕೆಲ ಸಂಸ್ಥೆಗಳು ರಾಜಕೀಯ ಕ್ಷೇತ್ರದ ಕುರಿತು, ಅಲ್ಲಿನ ಸ್ಪರ್ಧೆಗಳನ್ನು ಎದುರಿಸುವ ಕುರಿತು, ಭಾಷಣ ಮಾಡುವ ಕಲೆಯ ಕುರಿತು, ರಾಜಕೀಯ ಕ್ಷೇತ್ರದ ಮಹತ್ವ ಮತ್ತು ಅದು ನಮ್ಮ ವ್ಯಕ್ತಿತ್ವ ವಿಕಸನಕ್ಕೆ ಹೇಗೆ ಪೂರಕ ಎಂಬುದನ್ನು ಕುರಿತು ತರಬೇತಿ ನೀಡುತ್ತಿವೆ. ಒಟ್ಟಿನಲ್ಲಿ ರಾಜಕೀಯದಲ್ಲಿ ಮಹಿಳೆಯರ ಹೆಜ್ಜೆಗುರುತನ್ನು ಹೆಚ್ಚಿಸುವುದಕ್ಕಾಗಿ ಅಮೆರಿಕ ಶತಾಯಗತಾಯ ಪ್ರಯತ್ನಿಸುತ್ತಿದೆ.
ಆದರೆ ಭಾರತದ ವಿಷಯಕ್ಕೆ ಬಂದರೆ ಇಂಥದೊಂದು ಅಗತ್ಯವೇ ನಮಗಿಲ್ಲ. ಏಕೆಂದರೆ ಭಾರತೀಯ ಮಹಿಳೆಯರು ರಾಜಕೀಯ ಕ್ಷೇತ್ರದಲ್ಲಿ ಈಗಾಗಲೇ ಮಿಂಚುತ್ತಿದ್ದಾರೆ. ಅಷ್ಟೇ ಅಲ್ಲ, ಹಲವು ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳು ದಕ್ಷವಾಗಿ ಆಡಳಿತ ನಡೆಸಿದ್ದನ್ನು ಕಂಡ ಜನರೂ ಮಹಿಳೆಯರನ್ನೇ ಮುಖಂಡರನ್ನಾಗಿ ಆರಿಸಲು ಉತ್ಸುಕರಾಗುತ್ತಿದ್ದಾರೆ.
ಪುರಾಣ ಇತಿಹಾಸ ಕಾಲದಿಂದಲೂ ಮಹಿಳೆಯೊಳಗೆ ರಾಷ್ಟ್ರವನ್ನು ಆಳಬಲ್ಲ ಮುಖಂಡನೊಬ್ಬನಿರುವುದನ್ನು ಕಂಡುಕೊಂಡಿದ್ದು ಭಾರತ ಮಾತ್ರ. ಅದಕ್ಕೆಂದೇ ರಾಜಕೀಯದಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುವ, ತನ್ನ ಹಕ್ಕಿಗಾಗಿ ಹುಯಿಲೆಬ್ಬಿಸುವ ಅಗತ್ಯ ಭಾರತದ ಯಾವ ಮಹಿಳೆಗೂ ಬರಲಿಲ್ಲ. ಮತದಾನದ ಹಕ್ಕನ್ನು ಪಡೆಯುವಾಗ ಭಾರತೀಯರ‌್ಯಾರ ಮನಸ್ಸಿನಲ್ಲೂ ಮಹಿಳೆಯರಿಗೂ ಈ ಹಕ್ಕನ್ನು ನೀಡಬೇಕೇ ಎಂಬ ಪ್ರಶ್ನೆ ಏಳಲೇ ಇಲ್ಲ. ಏಕೆಂದರೆ ತನ್ನ ನಾಯಕನನ್ನು ಆರಿಸುವ ಸಮಾನ ಹಕ್ಕು ಮಹಿಳೆಯರಿಗೂ ಇದೆ ಎಂಬುದನ್ನು ನಂಬಿದ್ದವರು ನಾವು. ರಾಜಕೀಯ ಕ್ಷೇತ್ರದಲ್ಲಿರುವ ಕೆಲವು ಮಹಿಳೆಯರು ಇಂದು ದೌರ್ಜನ್ಯಕ್ಕೊಳಗಾಗುತ್ತಿರುವುದು ಸತ್ಯವಿರಬಹುದು. ಆದರೆ ಆ ಸಂಖ್ಯೆ ತೀರಾ ಕಡಿಮೆ. ಬೇರೆ ದೇಶಗಳಿಗೆ ಅದರಲ್ಲೂ ಅಮೆರಿಕದಂಥ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾತಿನಿಧಿತ್ವ ನೀಡುವ ವಿಷಯದಲ್ಲಿ ಭಾರತ ಸಾಕಷ್ಟು ಮುಂದಿದೆ ಎಂಬುದು ಸಂತಸದ ಸಂಗತಿಯೇ ಸರಿ.
ಅಭಿವೃದ್ಧಿ ಎಂಬುದು ಕೇವಲ ಆರ್ಥಿಕ ಕ್ಷೇತ್ರಕ್ಕಷ್ಟೇ ಸೀಮಿತವಾಗಿರುವುದಲ್ಲ. ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಬೇಕು, ಸರ್ವತೋಮುಖ ಬೆಳವಣಿಗೆಯ ಮೊದಲ ಮೆಟ್ಟಿಲು ಆ ಸಮಾಜ ಮಹಿಳೆಯರಿಗೆ ನೀಡುವ ಗೌರವದ ಮೇಲೆ ನಿಂತಿದೆ. ಈ ನಿಟ್ಟಿನಲ್ಲಿ ಯೋಚಿಸಿದರೆ ಭಾರತ ಅಮೆರಿಕಕ್ಕಿಂತ ಅಭಿವೃದ್ಧಿ ಹೊಂದಿದೆ ಎಂಬುದನ್ನು ಒಪ್ಪಿಕೊಳ್ಳಲೇಬೇಕು ಅಲ್ಲವೇ?

   

Leave a Reply