ಮಾಂಸ ಭಕ್ಷಣೆ: ಆಹಾರವಲ್ಲ , ಪರಿಸರ ಸಮತೋಲನ ವಿಷಯ

ಯುವ - 0 Comment
Issue Date : 24.08.2015

ಮಾನವ ಶಿಲಾಯುಗದ ಕಾಲಕ್ಕೂ ಮೊದಲಿಂದಲೂ ಮಾಂಸಾಹಾರ ಮಾಡುತ್ತಾ ಬಂದಿದ್ದಾನೆ. ಕೆಲವೊಮ್ಮೆ ಹೊಟ್ಟೆಗಾಗಿ ಮತ್ತೊಮ್ಮೆ ತನ್ನ ಬಾಯಿ ಚಪಲ ತೀರಿಸಲು. ಅದನ್ನೇ ನಾಗರಿಕತೆಯ ಬೆಳವಣಿಗೆಯ ಕಾಲದಲ್ಲಿ ಹಿಂಸೆ-ಅಹಿಂಸೆಯ ರೂಪವನ್ನು ಕೊಡಲಾಗಿದೆ. ನಮ್ಮ ದೇಶದಲ್ಲಿ ಸಾಮಾಜಿಕ ಶಿಷ್ಟಾಚಾರಗಳು ಬೆಳೆದಂತೆ ಜಾತಿ ವ್ಯವಸ್ಥೆ ಪ್ರಬಲವಾಗಿ ಮೇಲು-ಕೀಳುವರ್ಗದವರ ಆಹಾರ ಪದ್ದತಿಯಾಗಿ ಕಂಡುಕೊಳ್ಳಲಾಗಿದೆ. ಮಾಂಸಾಹಾರ ಸೇವಿಸುವವರು ಕೆಳವರ್ಗದವರು, ಆಚಾರ ಬಿಟ್ಟವರು ಎಂದು ಕೂಡ ಬಿಂಬಿಸಲಾಗಿತ್ತು. ಅದನ್ನೇ ಈಗ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸಿ ಶೋಷಣೆ ಮಾಡಲಾಗುತ್ತಿದೆ ಎಂದು ವಾದಿಸುತ್ತಿದ್ದಾರೆ. ಆದರೇ ಮಾಂಸಾಹಾರ ಎಂಬುದು ಸದ್ಯದ ಸಂದರ್ಭದಲ್ಲಿ ಹಲವು ಪರಿಸರಾತ್ಮಕ ಪರಿಣಾಮ ಉಂಟು ಮಾಡುವದನ್ನೂ ನಾವು ಚರ್ಚಿಸಬೇಕಿದೆ.
 ಹಿಂದೆ ಕಾಡು-ಮೇಡು ಯಥೇಚ್ಚ ಇದ್ದ ಸಂದರ್ಭಕ್ಕೂ ಮತ್ತು ಈಗಿನ ಪರಿಸರ ವಿನಾಶದ ಸಂದರ್ಭದಲ್ಲಿಯೂ ಮಾಂಸಾಹಾರ ಪ್ರಿಯರು ಹೇಳುವಂತೆ ಬಾಡು ತಿನ್ನುವದು ನಮ್ಮ ಹಕ್ಕು ಎಂದು ಬಹುಜನರ ಅಭಿಪ್ರಾಯವಾಗಿ ರೂಪಗೊಂಡಿದೆ. ಕೆಲವೊಮ್ಮೆ ಮಾಂಸಾಹಾರ ಮುಸ್ಲಿಂ, ದಲಿತರ ಜೀವನಪದ್ದತಿ ಎಂದು ಬಿಂಬಿಸಲಾಗುತ್ತಿದೆ ಅಥವಾ ಶೋಷಣೆಯ ವಿರುದ್ಧದ ಅಸ್ತ್ರ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ನಶಿಸುತ್ತಿರುವ ಪ್ರಾಣಿ, ಪರಿಸರ ಸಂರಕ್ಷಣೆ ವಿಷಯದಲ್ಲಿ ಮಾಂಸಾಹಾರವು ಮಾರಕ ಹೌದೊ? ಅಲ್ಲವೋ? ಎಂಬುದು ಗಂಭೀರ ವಿಷಯ.
 ನಾಗರಿಕ ಇತಿಹಾಸ ಮತ್ತು ಧರ್ಮದಲ್ಲಿ ಸಹ ಮಾಂಸಾಹಾರದ ಬಗ್ಗೆ ಬಹಳಷ್ಟು ನಿದರ್ಶನಗಳು ಸಿಗುತ್ತವೆ. ಹಿಂದೆ ಹಸಿಮಾಂಸ ತಿಂದು ಅನಾಗರಿಕನಾಗಿ ಮನುಷ್ಯ ಬದುಕುತ್ತಿದ್ದ.  ಭಾರತದ ಪುರಾಣಗಳಲ್ಲಿ ಕೇವಲ ಕ್ಷುದ್ರ ದೇವತೆಗಳ ಒಲಿಕೆಗೆ ಪ್ರಾಣಿಬಲಿ ಮಾಡಲಾಗುತ್ತಿತ್ತು. ಆದರೂ, ಅಹಿಂಸೆಯೇ ಪರಮಧರ್ಮ ಎಂದು ಹೆಚ್ಚುಬಾರಿ ಹೇಳಲಾಗಿದೆ. ಸಕಲ ಜೀವಿಗಳಲ್ಲಿ ದೇವರು ಇರುವದರಿಂದ ಹಿಂಸೆ, ಮಾಂಸಭಕ್ಷಣೆಯನ್ನು ಮಾಡಬಾರದು ಎಂದು ಧರ್ಮಸಮ್ಮತವಾಗಿ ಉಲ್ಲೇಖಿಸಲಾಗಿದೆ. ಆದರೆ ಸೆಮೆಟಿಕ್ ಧರ್ಮಗಳಾದ ಇಸ್ಲಾಂ, ಕ್ರೈಸ್ತ, ಯಹೂದಿ ಧರ್ಮಗ್ರಂಥಗಳಲ್ಲಿ ಮಾನವನಿಗಾಗಿ ಪ್ರಾಣಿಗಳನ್ನು ಸೃಷ್ಟಿಸಲಾಗಿದ್ದು ಯಾವ ಪ್ರಾಣಿಯನ್ನು ಮಾಂಸಕ್ಕಾಗಿ ಬಳಸಬೇಕು, ಹೇಗೆ ಬಲಿ ಕೊಡಬೇಕು ಎಂದು ಸ್ಪಷ್ಟವಾದ ಉಲ್ಲೇಖಗಳನ್ನು ಮಾಡಿರುವದು ಕಂಡುಬರುತ್ತದೆ.
 ಕೆಲವರು ಮಾಂಸಾಹಾರ ಮಾಡುತ್ತಾರೆ ಎಂಬ ಕಾರಣಕ್ಕಾಗಿ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಿ, ಮಡಿ-ಮೈಲಿಗೆ ಎಂದು ವಿಂಗಡಿಸಿ ಸಮಾಜದಿಂದ ಹೊರಗಿಡುವ ಪದ್ಧ್ದತಿ ಭಾರತದಲ್ಲಿ ಇತ್ತು. ಆದರೆ ಇತರರು ಮಾಂಸಾಹಾರ ಮಾಡುವದಿಲ್ಲವೇನೋ ಎನ್ನುವಂತೆ ಚಿತ್ರಿಸಿಕೊಂಡು ಬರಲಾಗುತ್ತಿದೆ. ಇಂದು ಎಲ್ಲ ಸಾಮಾಜಿಕ ವರ್ಗಗಳ ಶೇ. 73ರಷ್ಟು ಜನರ ಜೀವನ ಪದ್ಧತಿ ಬದಲಾವಣೆ ಹೊಂದಿದ್ದು ಇಂಥವರೆ ಮಾಂಸಾಹಾರ ಮಾಡುತ್ತಾರೆ, ಇಂಥವರು ಮಾಡುವದಿಲ್ಲ ಎಂದು ಹೇಳಲು ಬರಲಾರದ ಪರಿಸ್ಥಿತಿಗೆ ಸಮಾಜ ಬಂದು ತಲುಪಿದೆ. ಒಂದು ಕಡೆ ಬೆಳೆಯುತ್ತಿರುವ ಜನಸಂಖ್ಯೆ ಇನ್ನೊಂದು ಕಡೆ ಪರಿಸರ ವಿನಾಶ ಜೈವಿಕ ಅಸಮತೋಲನವನ್ನು ಉಂಟು ಮಾಡಿದ್ದು ಕುರಿ-ಕೋಳಿಗಳನ್ನು ಬಿಟ್ಟರೆ ಇತರೆಲ್ಲ ಮಾಂಸಾಹಾರದ ಮೂಲಗಳನ್ನು ಸರ್ವನಾಶದ ಸ್ಥಿತಿಗೆ ತಂದು ನಿಲ್ಲಿಸಿದೆ. ಅಂದರೆ ಮೊಲ, ನರಿ, ಜಿಂಕೆಯಂತಹ ಪ್ರಾಣಿಗಳು ಮತ್ತು ಕೌಜುಗ, ಬುರಲಿ, ನವಿಲು ಮುಂತಾದ ಪ್ರಾಣಿಗಳ ಸಂತತಿ ಸತತ ಬೇಟೆ ಮಾಡುವುದರಿಂದಾಗಿ ವಿನಾಶದ ಅಂಚಿಗೆ ಬಂದು ತಲುಪಿದೆ. ಮಾನವ ಸಾಕು ಪ್ರಾಣಿಗಳಾದ ಕುರಿ, ಕೋಳಿ, ಮೇಕೆ ಹೊರತುಪಡಿಸಿದರೆ ಅತೀ ಹೆಚ್ಚು ಮಾಂಸಾಹಾರಕ್ಕೆ ಬಳಸುವ ಗೋಮಾಂಸವು ಇಂದು ಆಹಾರ ಪದ್ದತಿಯ ಹೆಸರಿನಲ್ಲಿ ತಿಂದು ತೇಗುವ ವಿಚಾರದಲ್ಲಿ ಮಾನವ ಸಮಾಜ ಬಂದು ನಿಂತಿದೆ. ಹಾಗಾದರೆ ಜೀವ ಪರಿಸರದ ಸಮತೋಲನ, ಪ್ರಾಕೃತಿಕ ವೈವಿಧ್ಯತೆ ವಿಷಯದಲ್ಲಿ ವಿಚಾರವಂತರು ಎನಿಸಿಕೊಂಡವರ ಮೊಂಡುವಾದ ಪರಿಸರ ಅಸಮತೋಲನಕ್ಕೆ ಇನ್ನಷ್ಟು ಬೆಂಕಿ ಹಚ್ಚುವ ಒಳಮನಸ್ಸನ್ನು ಹೊಂದಿದೆ ಎನ್ನಿಸದಿರದು.!
   ಭಾರತೀಯ ಸಮಾಜದಲ್ಲಿ ಪ್ರಕೃತಿ, ಪ್ರಾಣಿ, ಪಕ್ಷಿಗಳನ್ನು ಅಷ್ಟೇ ಏಕೆ ಮರ ಗಿಡಗಳನ್ನು ಮನುಷ್ಯನಂತೆ ಜೀವ ಇರುವ ಮತ್ತು ಮಾನವನಂತೆ ಜೀವಿಸುವ ಹಕ್ಕನ್ನು ಹೊಂದಿರುವವು ಎಂದು ತಿಳಿಯಲಾಗಿದೆ. ಅದರಲ್ಲೂ ಗೋವನ್ನು ಮಾತೆ, ಎಂಬತ್ನಾಲ್ಕು ಲಕ್ಷ ದೇವತೆಗಳ ವಾಸಸ್ಥಾನ ಎಂದು ತಿಳಿಯಲಾಗಿದೆ. ಆದರೆ ಗೋಮಾಂಸ ರಪ್ತಿನಲ್ಲಿ ಭಾರತ ಜಗತ್ತಿಗೆ ಮೊದಲಾಗಿರುವದನ್ನು ನೋಡಿದಾಗ ಮಾನವನಿಗೆ ಬೇಕಾದ ಆಹಾರವನ್ನು ಒದಗಿಸಿ, ಕೃಷಿಯ ಆಧಾರ ಸ್ತಂಭವಾಗಿ, ಸುಸ್ಥಿರ ಕೃಷಿಯ ಮೂಲವಾಗಿರುವ ಹಸುವನ್ನು ಮಾಂಸಾಹಾರ ಪ್ರಿಯರು ದಲಿತರ ಆಹಾರ ಪದ್ದತಿ ಎಂದು ವಾದಿಸುತ್ತ ಮನೆಯಲ್ಲಿ ತಿನ್ನುವದಲ್ಲದೆ ರಸ್ತೆಯಲ್ಲಿ ಗೋಮಾಂಸ ಸೇವಿಸಲು ಮುಂದಾಗಿರುವದು ಪರಿಸರ ಪ್ರಜ್ಞೆಗೆ ನಮ್ಮ ಸಮಾಜ ಕೊಟ್ಟಿರುವ ಮಹತ್ವಕ್ಕೆ ವಿರುದ್ದವಾದದ್ದು. ಚಿಂತಕರು, ಪ್ರಗತಿಪರರು ಎಂದು ವಾದಿಸುವ ಕೆಲವರು ರಾಜಾರೋಷವಾಗಿ ಬೆಂಬಲಿಸಿರುವದು ವೈಚಾರಿಕ ಮತ್ತು ಕ್ರಿಯಾತ್ಮಕ ದಿವಾಳಿತನವನ್ನು ತೋರಿಸುತ್ತದೆ ಎಂಬುದು ಸತ್ಯ. ಪರಿಸರ ಮತ್ತು ಜೈವಿಕ ಸಮಾನತೆ ಇಲ್ಲದೇ ಈ ಸ್ವಯಂಘೋಷಿತ ಬುದ್ದಿಜೀವಿಗಳು ಜೀವಿಸಬಲ್ಲರೆ? ಅಜ್ಞಾನ ಪ್ರದರ್ಶನಕ್ಕೆ ಒಂದು ಮಿತಿಯಿರಲಿ.

   

Leave a Reply