ಮಾತೃಭಾಷಾ ಶಿಕ್ಷಣದಿಂದಲೇ ಬೌದ್ಧಿಕ ವಿಕಾಸ ಸಾಧ್ಯ

ಮೈಸೂರು - 0 Comment
Issue Date : 01.05.2015

ಮೈಸೂರು: ಪೋಷಕರು ತಮ್ಮ ಮಕ್ಕಳು ಸಾಫ್ಟ್‌ವೇರ್ ಇಂಜಿನಿಯರ್ ಆಗಬೇಕೆಂಬ ಏಕಮಾತ್ರ ಉದ್ದೇಶದಿಂದ ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸಲು ಬಯಸುತ್ತಾರೆ. ಒಂದು ವರ್ಗದ ಜನ ಇಂಗ್ಲಿಷ್ ಮಾಧ್ಯಮದಲ್ಲಿ ಓದಿಕೊಂಡು ಮುಂದುವರೆಯುತ್ತಿದ್ದರೆ ಮಿಕ್ಕವರು ಏಕೆ ತಮ್ಮ ಮಕ್ಕಳು ಹಿಂದುಳಿಯಬೇಕು ಎಂಬ ಸಹಜ ಅನಿಸಿಕೆಯ ಕಾರಣ ತಮ್ಮ ಮಕ್ಕಳನ್ನೂ
ಇಂಗ್ಲೀಷ್ ಮಾಧ್ಯಮದಲ್ಲಿ ಓದಿಸಲು ಆಸಕ್ತಿವಹಿಸುತ್ತಾರೆ. ಅದರೆ ಅವರಿಗೆ ಗೊತ್ತಿರಲಿ, ಇಂದಿನ ಯುಗದ ತಾಂತ್ರಿಕ ಮಹತ್ವದ ಮೊಬೈಲ್, ಲ್ಯಾಪ್‌ಟಾಪ್ ರಿಪೇರಿ ಮಾಡುವವರಿಗೆ ಇಂಗ್ಲೀಷ್ ಗೊತ್ತಿರದಿದ್ದರೂ ಅದರ ಸಂಪೂರ್ಣ ಕಾರ್ಯವಿಧಾನ ಗೊತ್ತಿರುತ್ತದೆ. ಅಂದರೆ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವುದಕ್ಕೂ ಈ ಬ್ರಹ್ಮವಿದ್ಯೆಯನ್ನು ಒಲಿಸಿಕೊಳ್ಳುವುದಕ್ಕೂ ಯಾವುದೇ ಸಂಬಂಧವಿಲ್ಲ. ಹೀಗಾಗಿ ಕೆಲವರು ಅಂದುಕೊಂಡಂತೆ ಇಂಗ್ಲೀಷಿದ್ರೆ ಮಾತ್ರ ತಾಂತ್ರಿಕ ವಿದ್ಯೆ ಕಲಿಯಲು ಸಾಧ್ಯ, ಮಿಕ್ಕವರಿಗಿಲ್ಲ ಎಂಬ ವಾದ ಸರಿಯಲ್ಲ ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ವಿಜೇತ ಡಾ ಎಸ್ ಎಲ್ ಭೈರಪ್ಪನವರು, ಏ. 19ರಂದು ಮೈಸೂರಿನ ಮಂಥನ ವೇದಿಕೆ (ಲೇಖಕ ಚಿಂತಕರ ಬಳಗ) ಆಯೋಜಿಸಿದ್ದ ‘ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮದ ಪ್ರಶ್ನೆ; ಹೊಸ ಪೀಳಿಗೆಯ ಪೋಷಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ಸಂವಾದಿಸುತ್ತಾ ತಿಳಿಸಿದರು.
ಪ್ರಾರಂಭಿಕ ಶಿಕ್ಷಣವನ್ನು ಮಗುವಿಗೆ ಅರ್ಥವಾಗುವ ತನ್ನ ಮನೆಯಲಿ,್ಲ ನೆರೆಹೊರೆಯಲ್ಲಿ ಮಾತನಾಡುವ ಸಾಮಾಜಿಕ ಭಾಷೆಯಲ್ಲಿಯೇ ಕಲಿಸಬೇಕು. ಆ ಮೂಲಕ ವಿಷಯವನ್ನು ಅರ್ಥಮಾಡಿಸಬೇಕು. ಇದರಿಂದ ಮಕ್ಕಳ ಸರ್ವತೋಮುಖ ವಿಕಾಸಕ್ಕೆ ಅನುಕೂಲವಾಗುತ್ತದೆ. ಕಲಿತಿದ್ದನ್ನು ಜೀವನದಲ್ಲಿ ಉಪಯೋಗಿಸಿದಾಗ ಅದು ವಿದ್ಯಾಭ್ಯಾಸವಾಗುತ್ತದೆ. ಹಾಗಾಗಬೇಕಾದರೆ ಶಾಲೆಗಳಲ್ಲಿ ಕಲಿಸುವುದನ್ನು ಮಕ್ಕಳಿಗೆ ಅರ್ಥವಾಗುವಂತೆ ಸಮಾಜ ಭಾಷಾ (ಮಾತೃ ಭಾಷಾ) ಮಾಧ್ಯಮದಲ್ಲೇ ಕಲಿಸಬೇಕೆಂದು ಅವರು ಆಗ್ರಹಿಸಿದರು.
ಮಾತೃಭಾಷಾ ಶಿಕ್ಷಣ ಕೇವಲ ಪ್ರಾಥಮಿಕ ಹಂತದ ತನಕ ಮಾತ್ರವಲ್ಲ , ಅದು ಪ್ರೌಢ ಶಾಲೆಯವರೆಗೂ ಮುಂದುವರೆಯಬೇಕು. ಅಲ್ಲದೆ ಈ ಮಾತೃಭಾಷೆ ಎಂಬ ಪದವನ್ನು ಸ್ವಲ್ಪ ವಿಸ್ತರಿಸಿ, ಇದನ್ನು ಸಾಮಾಜಿಕ ಭಾಷೆ, ರಾಜ್ಯ ಭಾಷೆ ಎಂದು ತಿಳಿಸಿದರಲ್ಲದೆ ಮಕ್ಕಳ ಬೌದ್ಧಿಕ ವಿಕಾಸಕ್ಕೆ ಪ್ರೌಢಶಾಲೆಯವರೆಗಿನ ಶಿಕ್ಷಣ ಆಯಾ ರಾಜ್ಯದ ಸಾಮಾಜಿಕ ಭಾಷೆಯಲ್ಲಿಯೇ ನಡೆಯಬೇಕೆಂದು ಹೇಳಿದರು.
ಹಾಗೆಂದ ಮಾತ್ರಕ್ಕೆ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಯುವುದಕ್ಕೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಕನ್ನಡ ಭಾಷಾ ಮಡಿವಂತಿಕೆಯನ್ನು ಪ್ರದರ್ಶಿಸಬಾರದು. ಕಲಿಕೆಯ ಹಂತದಲ್ಲಿ ಇಂಗ್ಲಿಷ್ ಭಾಷೆಯ ಪದಬಳಕೆಗೆ ಮುಕ್ತವಾದ ಅವಕಾಶ ಕಲ್ಪಿಸಬೇಕು. ಮಕ್ಕಳು ಎಲ್ಲಾ ಭಾಷೆಗಳನ್ನೂ ಕಲಿಯಲಿ. ಆದರೆ ಪರೀಕ್ಷೆಗಳನ್ನು ಕನ್ನಡದಲ್ಲಿಯೇ ಬರೆಯಲಿ ಎಂದು ಅವರು ವಿವರಿಸಿದರು.
ಜರ್ಮನಿ, ಜಪಾನ್, ಪ್ರಾನ್ಸ್ ಮೊದಲಾದ ದೊಡ್ಡ ದೊಡ್ಡ ದೇಶಗಳು ಹಾಗೂ ಜಗತ್ತಿನ ಅನೇಕ ಸಣ್ಣಸಣ್ಣ ದೇಶಗಳು ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪಾರ ಸಾಧನೆ ತೋರಲು ಸಾಧ್ಯವಾಗಿರುವುದು ಅಲ್ಲೆಲ್ಲಾ ಮಾತೃಭಾಷೆಯ ಶಿಕ್ಷಣದಿಂದಲೇ. ಭಾರತೀಯನೊಬ್ಬ ಸಂಶೋಧನೆಗಾಗಿ ಜರ್ಮನಿಗೆ ಹೋಗಬೇಕಾದರೆ ಮುಂಚಿತವಾಗಿ ಜರ್ಮನ್ ಭಾಷೆಯನ್ನು ಅರಿತಿರಬೇಕು ಎಂಬುದು ನಮ್ಮ ದೇಶದ ಇಲ್ಲಿನ ತಂದೆ-ತಾಯಿಗಳ ಅರಿವಿಗೆ ಬಾರದ ವಿಷಯ ಎಂದು ತಿಳಿಸಿದ ಅವರು, ಬಟ್ಟೆ ಕೊಳೆ ಮಾಡಿಕೊಳ್ಳಬಾರದೆಂದು ಬೋಧಿಸುವ ಶಾಲೆಯಲ್ಲಿ ಗೊತ್ತಿಲ್ಲದ ಭಾಷೆಯಲ್ಲಿ ಗೊತ್ತಿಲ್ಲದ ವಿಷಯವನ್ನು ಓದಿದ ರೈತನ ಮಗ ಒಕ್ಕಲುತನದಿಂದಲೇ ದೂರಹೋಗುವ ಮಾನಸಿಕತೆ ಬೆಳೆಸಿಕೊಳ್ಳುತ್ತಾನೆಂಬ ಆತಂಕದ ಸಂಗತಿಯನ್ನು ಅವರು ಹೊರಹಾಕಿದರು.
ಸಭಿಕರಿಂದ ಬಂದ ಅನೇಕ ಪ್ರಶ್ನೆಗಳಿಗೆ ತಮ್ಮದೇ ಆದ ಮನೋಜ್ಞ ರೀತಿಯಲ್ಲಿ ಉತ್ತರಿಸಿದ ಭೈರಪ್ಪನವರು, ಶಿಕ್ಷಣ ಕ್ಷೇತ್ರ ಈಗ ರಾಜಕಾರಣಿಗಳು, ಉದ್ಯಮಿಗಳ ಪ್ರವೇಶದಿಂದ ವ್ಯವಹಾರ ಕ್ಷೇತ್ರವಾಗಿ ಮಾರ್ಪಟ್ಟಿದೆ. ನಿರಂತರ ಅಧ್ಯಯನ ಮಾಡದ ಗುಣಮಟ್ಟದ ಶಿಕ್ಷಕರ ಕೊರತೆಯನ್ನು ಶಿಕ್ಷಣ ಕ್ಷೇತ್ರ ಎದುರಿಸುತ್ತಿದೆ. ಇದಕ್ಕೆ ಕಾರಣ ಸರಕಾರದ ನೇಮಕಾತಿ ನೀತಿ. ಶಿಕ್ಷಕರಲ್ಲಿನ ಕಲಿಸುವ ಆಸಕ್ತಿ, ವಿಷಯದ ಸಂಗ್ರಹಣೆ, ಉದಾಹರಣೆಗಳ ಮೂಲಕ ಅರ್ಥಮಾಡಿಸುವ ಜಾಣ್ಮೆ ಇವುಗಳು ಅರ್ಹತೆಯಾಗುವ ಬದಲು, ಇಂದು ಮೀಸಲಾತಿಯೊಂದೇ ಮಾನದಂಡವಾಗಿರುವುದು. ಇಂತಿಂತಹ ಜಾತಿಯವರನ್ನು ನೇಮಕ ಮಾಡಿಕೊಂಡರೇ ನಿಮಗೆ ಸರಕಾರದ ಗ್ರಾಂಟ್ ಸಿಗುತ್ತದೆ ಎಂಬ ಅಸಂಬದ್ಧ ನಿಯಮಗಳನ್ನು ವಿಶ್ಲೇಷಿಸಿ ಇಂದಿನ ಶಿಕ್ಷಣ ವ್ಯವಸ್ಥೆ ಕುರಿತು ವಿಷಾದ ವ್ಯಕ್ತಪಡಿಸಿದರು.
ಇದೇ ಸಂದಭರ್ದಲ್ಲಿ ಸರಕಾರದ ಸಿದ್ಧಪಡಿಸಿದ ಮಾದರಿಯ ಪಠ್ಯಕ್ರಮದ ಹೊರತಾಗಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಅನೇಕ ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಹರಿಹರಪುರದ ಪ್ರಬೋಧಿನಿ ಗುರುಕುಲದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡ ಡಾ. ಭೈರಪ್ಪನವರು, ಕನ್ನಡದೊಂದಿಗೆ ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳನ್ನು ಕಲಿಸುತ್ತಿರುವ ಈ ಶಾಲೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಯಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಕಲಿಕಾ ಚಳುವಳಿಯಲ್ಲಿ ತನ್ನನ್ನು ಅರ್ಪಿಸಿಕೊಂಡಿದೆ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಾಷಾತಜ್ಞ ಡಾ ಪ್ರಧಾನ ಗುರುದತ್ತ ಅವರು ಭಾಷೆಯ ಅಧ್ಯಯನವಿಲ್ಲದ ಕಾರಣದಿಂದ ಭಾಷಾಂತರದಲ್ಲಾಗುವ ಅನೇಕ ಪ್ರಮಾದಗಳ ಕುರಿತು ಉದಾಹರಣೆಗಳ ಮೂಲಕ ವಿವರಿಸಿದರು.
ಮಂಥನ ಅಧ್ಯಕ್ಷ ಎ.ಎಸ್ ನಾಗರಾಜ್ ಸ್ವಾಗತಿಸಿದರು. ಸಂಚಾಲಕ ಮಲ್ಲರಾಜ ಅರಸ್ ವಂದಿಸಿದರು. ಸುದರ್ಶನ ನಿರೂಪಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಮ. ವೆಂಕಟರಾಂ, ಪ್ರಮಥಿ ಶಿಕ್ಷಣ ಸಂಸ್ಥೆಯ ರಾಜೀವ್, ಕೌಟಿಲ್ಯ ವಿದ್ಯಾಸಂಸ್ಥೆಯ ರಘು ಹಾಗೂ ಗಣನೀಯ ಸಂಖ್ಯೆಯಲ್ಲಿ ತಾಯಂದಿರು ಉಪಸ್ಥಿತರಿದ್ದರು.

– ಕೆ.ಪಿ. ಪ್ರದ್ಯುಮ್ನ

   

Leave a Reply