ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯಕರ್ತರು

ಚಂದ್ರಶೇಖರ ಭಂಡಾರಿ - 0 Comment
Issue Date : 16.5.2016

(ಕಳೆದ ಸಂಚಿಕೆಯಿಂದ…)

– ಚಂದ್ರಶೇಖರ ಭಂಡಾರಿ

ಗಾಂಧೀಜಿಯವರ ಹತ್ಯೆಯ ನಂತರ ದೇಶಾದ್ಯಂತ ಆರಂಭಿಸಲಾಗಿದ್ದ ಅಪಪ್ರಚಾರದ ವಿರುದ್ಧ ಸಮರ್ಥವಾಗಿ ಸಂಘದ ಭೂಮಿಕೆಯನ್ನು ಪ್ರತಿಪಾದಿಸಲು ಪ್ರತಿಯೊಂದು ಪ್ರಾಂತದಲ್ಲೂ ಸ್ವತಂತ್ರವಾದ ಪತ್ರಿಕೆಗಳನ್ನು ಆರಂಭಿಸಲು ಸಂಘದ ವತಿಯಿಂದ ಯೋಜನೆ ಮಾಡಲಾಗಿತ್ತು. (ಕರ್ನಾಟಕದಲ್ಲಿ ಬೆಂಗಳೂರಿನಿಂದ ‘ವಿಕ್ರಮ’ ಸಾಪ್ತಾಹಿಕ ಮತ್ತು ಮಂಗಳೂರಿನಿಂದ ‘‘ಸಾರಥಿ’’ ಮಾಸಿಕವನ್ನು ಆರಂಭಿಸಲಾಗಿದ್ದುದು ಈ ಹಿನ್ನೆಲೆಯಲ್ಲಿ) ಇದಲ್ಲದೆಯೂ ಸಂಘದ ಜತೆ ಸಹಾನುಭೂತಿ ಹೊಂದಿರುವ ಕೆಲವು ಅನ್ಯ ಪತ್ರಿಕೆಗಳೂ ಆಗ ಇದ್ದವು. ಅಂತಹ ಪತ್ರಿಕೆಗಳಿಗೆ ಬರವಣಿಗೆಯಲ್ಲಿ ಆಸಕ್ತಿಯುಳ್ಳ ಮತ್ತು ಪತ್ರಕರ್ತರಾಗಲು ಬಯಸುವ ಕೆಲವು ಆಯ್ದ ಕಾರ್ಯಕರ್ತರನ್ನು ಕಳುಹಿಸುವ ಯೋಜನೆ ತಯಾರಾಯಿತು. ಅಂತಹವರಲ್ಲಿ ಆ ದಿನಗಳಲ್ಲಿ ಗ್ವಾಲಿಯರ್‌ನಲ್ಲಿ ಪ್ರಚಾರಕರಾಗಿದ್ದ ಶ್ರೀ ಗಿರೀಶಚಂದ್ರ ಮಿಶ್ರಾ ಒಬ್ಬರು. ಅವರ ಅನುಭವ ಅವರ ಮಾತುಗಳಲ್ಲೇ ಕೇಳಿ :
‘‘ಸಂಘದ ಮೇಲೆ ನಿಷೇಧ ವಿಧಿಸಿದ ನಂತರ 1948ರ ಮೇಯಲ್ಲಿ ನನಗೆ ಆಗಿನ ಪ್ರಾಂತ ಪ್ರಚಾರಕ ಶ್ರೀ ಭಯ್ಯಾಜಿ ಸಹಸ್ರಬುದ್ಧೆಯವರು ಗ್ವಾಲಿಯರ್‌ನಿಂದ ಪ್ರಯಾಗಕ್ಕೆ ಹೋಗಲು ಸೂಚಿಸಿದರು. ಈ ಸೂಚನೆಯ ಹಿಂದೆ ಶ್ರೀ ಅಟಲಬಿಹಾರಿ ವಾಜಪೇಯಿ ಅವರು ಅಪೇಕ್ಷೆಪಟ್ಟು ನೀಡಿದ್ದ ಆಹ್ವಾನವೂ ಇತ್ತು. ಆ ದಿನಗಳಲ್ಲಿ ಶ್ರೀ ರಾಮರಖ ಸಿಂಹ ಸೆಹಗಲ್ ಅವರು ಆರಂಭಿಸಿದ ‘ಕರ್ಮಯೋಗಿ’ ಎಂಬ ಮಾಸಿಕದಲ್ಲಿ ಶ್ರೀ ಅಟಲಬಿಹಾರಿಯವರು ಸಂಘದ ಯೋಜನೆಯಂತೆ ಕಾರ್ಯನಿರತರಾಗಿದ್ದರು. ಅವರೇ ನನಗೆ ಶ್ರೀ ಸೆಹಗಲ್ ಅವರು ನಡೆಸುತ್ತಿದ್ದ ಆಂಗ್ಲ ಸಾಪ್ತಾಹಿಕ ‘ಕ್ರೈಸಿಸ್’ನಲ್ಲಿ ಕೆಲಸ ಮಾಡುವ ಸಲುವಾಗಿ ಕರೆಸಿದ್ದರು. ಅದರಂತೆ ನಾನು ಆ ಕೆಲಸದಲ್ಲಿ ಸೇರಿಕೊಂಡೆ. ಆ ದಿನಗಳಲ್ಲಿ ದೇಶಾದ್ಯಂತ ಸಂಘದ ವಿರುದ್ಧ ಸರಕಾರ ಮತ್ತು ಸರಕಾರೇತರ ವ್ಯಕ್ತಿ ಹಾಗೂ ಸಂಸ್ಥೆಗಳು ನಡೆಸುತ್ತಿದ್ದ ಎಲ್ಲ ಅಪಪ್ರಚಾರಗಳಿಗೆ ಬಾಯಿ
ಮುಚ್ಚಿಸುವಂತೆ ಕಟುವಾದ ಭಾಷೆಯಲ್ಲಿ ಉತ್ತರ ನೀಡುತ್ತಿದ್ದ ಪತ್ರಿಕೆ ಅದು. ಸ್ವಯಂಸೇವಕರ ಮನೋಬಲವನ್ನು ದೃಢವಾಗಿ ಉಳಿಸುವುದಷ್ಟೇ ಅಲ್ಲ ಬೆಳೆಸುತ್ತಲೂ ಇದ್ದ ಉತ್ತರ ಪ್ರದೇಶದ ಏಕಮಾತ್ರ ನಿರ್ಭೀತ ಪತ್ರಿಕೆಯಾಗಿತ್ತು. ಕ್ರೈಸಿಸ್‌ನಲ್ಲಿ ಪ್ರಕಟವಾಗುತ್ತಿದ್ದ ಎಲ್ಲ ಸರಕು ಅದರಲ್ಲಿನ ವ್ಯಂಗ್ಯ ಸಹ, ಇಂಗ್ಲಿಷ್ ಭಾಷೆಯಲ್ಲಿದ್ದ ಕಾರಣದಿಂದಾಗಿ ಬಹುಬೇಗನೆ ಜನಪ್ರಿಯವಾಗತೊಡಗಿತು. ಅದರಲ್ಲಿನ ‘ಐ ಜಿಠಿ ್ಛಚ್ಚಠಿ?’ ಎಂಬ ಅಂಕಣ ಓದಲು ಜನರು ಕಾತುರರಾಗಿದ್ದರು. ಸರಕಾರದ ಅನ್ಯಾಯವೆಲ್ಲ ಬಯಲಾಗುತ್ತಿದ್ದುದು ಈ ಅಂಕಣದಲ್ಲಿ. ಅದರಲ್ಲಿ ಸರಕಾರದ ಅನೈತಿಕ ಕ್ರಮಗಳೆಲ್ಲ ಬೆತ್ತಲಾಗುತಿದ್ದವು. ಸ್ವತಃ ರಾಮರಖ ಸೆಹಗಲ್ ಅಲ್ಲದೆ, ಅವರ ಸುಪುತ್ರ ಮತ್ತು ಸುಪುತ್ರಿ ಸಹ ಉತ್ತಮ ಬರಹಗಾರರಾಗಿದ್ದರು. ಹೀಗಾಗಿ ಸರಕಾರಕ್ಕೂ ಅವರನ್ನು ಸ್ಪರ್ಶಿಸಲಾಗುತ್ತಿರಲಿಲ್ಲ. ಆ ದಿನಗಳಲ್ಲಿ ಸೆಹಗಲ್ ಅವರು ಸಂಘದ ನಿಲುವನ್ನು ಸಮರ್ಥಿಸಿ ಬರೆದಿದ್ದ ಎಲ್ಲ ಸಂಪಾದಕೀಯಗಳನ್ನು ಸಂಕಲಿಸಿ ಮುಂದೆ ಛಿ ಇ್ಟ್ಠ್ಚಜ್ಛಿಜ್ಚಿಠಿಜಿಟ್ಞ ಚ್ಞ ಚ್ಛಠಿಛ್ಟಿ ಎಂಬ ಒಂದು ಆಂಗ್ಲ ಪುಸ್ತಕವನ್ನು ಸಹ ಪ್ರಕಟಿಸಲಾಯಿತು. ಈ ಪುಸ್ತಕ ಉತ್ತರ ಪ್ರದೇಶದಲ್ಲಷ್ಟೇ ಅಲ್ಲ, ದೇಶಾದ್ಯಂತ ತುಂಬ ಜನಪ್ರಿಯವಾಯಿತು.
‘‘ಪ್ರಯಾಗದಿಂದ ಕೆಲವು ದಿನಗಳ ನಂತರ ಕಾನಪುರಕ್ಕೆ ಹೋದೆ. ಸಂಘದ ಹಿರಿಯರ ಯೋಜನೆಯಂತೆ ಅಲ್ಲಿಂದ ‘ಉತ್ಥಾನ’ ಎಂಬ ಸಾಪ್ತಾಹಿಕದ ಪ್ರಕಟಣೆ ಆರಂಭವಾಯಿತು. ನಾನದರ ಸಂಪಾದಕನಾಗಿದ್ದೆ. ನನಗೆ ಸಹಕಾರಿಗಳಾಗಿದ್ದವರು ನಾ. ಗಂ. ವಝೆ ಮತ್ತು ರಜನಿಕಾಂತ ಲಹರಿ ಅವರು. ಶ್ರೀ ಲಹರಿ ಅವರು ಕಾನಪುರದವರೇ. ಶ್ರೀ ವಝೆ ಅವರು ಗ್ವಾಲಿಯರ್‌ನಿಂದ ನನ್ನ ಜತೆ ಬಂದವರು. 1948 ಅಕ್ಟೋಬರ್ 2 ರಂದು ಗಾಂಧಿ ಜಯಂತಿಯ ದಿನ ‘ಉತ್ಥಾನ’ದ ಪ್ರಕಟಣೆ ಆರಂಭವಾಯಿತು. ಸತ್ಯಾಗ್ರಹ ಆರಂಭವಾದ ಮೇಲೆ ಅದರ ಬಗ್ಗೆ ಸುದ್ದಿಗಳನ್ನು ಪ್ರಕಟಿಸಿದುದಕ್ಕಾಗಿ ಪತ್ರಿಕೆಯ ಪ್ರಕಾಶಕ ಶ್ರೀ ಭಾರ್ಗವ ಅವರನ್ನು ಪೊಲೀಸರು ಬಂಧಿಸಿದರು. ನಾನು ಹೇಗೋ ಗುಟ್ಟಾಗಿ ತಪ್ಪಿಸಿಕೊಂಡೆ. ಬಿರಹಾನಾ ರಸ್ತೆಯಲ್ಲಿದ್ದ ಪತ್ರಿಕೆಯ ಕಚೇರಿಯ ಮೇಲೆ ಪೊಲೀಸರು ದಾಳಿಯೆಸಗಿ, ತಲಾಶ್ ನಡೆಸಿ ಅದಕ್ಕೆ ಬೀಗಮುದ್ರೆ ಜಡಿದರು. ಹೀಗಾಗಿ ‘ಉತ್ಥಾನ’ದ ಪ್ರಕಟಣೆ ನಿಂತುಹೋಯಿತು. ಅದರ ನಂತರ ನಾನು ದೀನದಯಾಳಜಿ ಮತ್ತು ಅಟಲಜಿಯವರ ಜತೆಯಲ್ಲಿ ಗ್ವಾಲಿಯರ್‌ಗೆ ಹೋದೆ. ಅಲ್ಲಿಂದ ‘ಸುದರ್ಶನ’ಎಂಬ ಹೊಸ ಸಾಪ್ತಾಹಿಕ ಹೊರಡಿಸಲಾಯಿತು. ಅದರ ಸಂಪಾದಕತ್ವದ ಹೊಣೆ ನನ್ನ ಹೆಗಲಿಗೇರಿತು. ಇದರಲ್ಲಿ ನನ್ನೊಂದಿಗೆ ಸಹಕರಿಸಲು ಕಾನಪುರದಿಂದ ನವಲ ಕಿಶೋರ ವಾಜಪೇಯಿ ಅವರು ಬಂದಿದ್ದರು. ಈ ಪತ್ರಿಕೆಯ ಮೇಲೂ ಕೆಲವೇ ದಿನಗಳಲ್ಲಿ ಸರಕಾರ ತನ್ನ ಕೆಂಗಣ್ಣು ಬೀರಿತು. ಹೀಗಾಗಿ ಆ ಕಾಲದಲ್ಲಿ ಅದೂ ಅವಸಾನ ಕಂಡಿತು. ನವಲಕಿಶೋರ ಕಾನಪುರಕ್ಕೆ ಮರಳಿದರು. ನಾನು ಸಂಘದ ಹಿರಿಯರ ಆದೇಶದಂತೆ ನಾಗಪುರಕ್ಕೆ ಬಂದು ಅಲ್ಲಿಂದ ಪ್ರಕಟಿತವಾಗುತ್ತಿದ್ದ ‘ಯುಗಧರ್ಮದ’ ಸಂಪಾದಕತ್ವ ವಹಿಸಿದೆ. ಇದು 1949ರ ಮೇಯಲ್ಲಿ’’.
‘ಉತ್ಥಾನ’ ನಿಂತುಹೋದ ಮೇಲೆ ಗಿರೀಶಚಂದ್ರ ಮಿಶ್ರಾ ಗ್ವಾಲಿಯರ್‌ಗೆ ಮರಳಿದರು. ಅದರ ನಂತರ ಕಾಶಿಯಿಂದ ‘ಚೇತನಾ’ ಎಂಬ ಪತ್ರಿಕೆ ಶ್ರೀ ಯಾದವರಾವ್ ದೇಶಮುಖ ಅವರ ಸಂಪಾದಕತ್ವದಲ್ಲಿ ಹೊರಟಿತು. ‘ಚೇತನಾ’ ಸಹ ಬಹುಬೇಗನೆ ಜನಪ್ರಿಯವಾಯಿತು. ಅದರಲ್ಲಿನ ಸುದ್ದಿಗಳಲ್ಲಿ ಆಳವಾದ ಸಂಶೋಧನೆಯಿದ್ದುದರಿಂದಾಗಿ ಅನ್ಯ ಪ್ರಾಂತಗಳ ಪತ್ರಿಕೆಗಳೂ ಅವುಗಳನ್ನು ಬಳಸಲಾರಂಭಿಸಿದವು. ಅಂತಹ ಪತ್ರಿಕೆಯ ಮೇಲೆ ಸರಕಾರದ ಉರಿಗಣ್ಣು ಬೀಳದೆ ಇರುವುದು ಸಾಧ್ಯವೇ? ಹೀಗಾಗಿ ಕೆಲವೇ ದಿನಗಳಲ್ಲಿ ಅದು ಸಹ ಸರಕಾರದ ದಮನ ನೀತಿಗೆ ಬಲಿಯಾಯಿತು.
ವಾಸ್ತವಿಕವಾಗಿ ನಿಷೇಧಕ್ಕಿಂತ ಮೊದಲೇ ಲಖ್ನೋದಿಂದ ‘ಪಾಂಚಜನ’್ಯ ಮತ್ತು ‘ರಾಷ್ಟ್ರಧರ್ಮ’ ಸಾಪ್ತಾಹಿಕ ಮತ್ತು ಮಾಸಿಕ – ಇವುಗಳ ಪ್ರಕಾಶನ ಆರಂಭವಾಗಿತ್ತು. ಅವುಗಳನ್ನು ನೋಡಿಕೊಳ್ಳುತ್ತಿದ್ದವರು ಅಟಲಜಿ ಮತ್ತು ದೀನದಯಾಳಜಿ ಅವರೇ, ನಿಷೇಧ ಬಂದಾಗ ‘ರಾಷ್ಟ್ರಧರ್ಮ’ ಮುದ್ರಣಾಲಯ ಬೀಗಮುದ್ರೆಗೊಳಗಾಯಿತು. ಆಗ ಲಖ್ನೋದಿಂದ ದೈನಿಕವಾಗಿ ‘ಸ್ವದೇಶ’ವೂ ಪ್ರಕಟವಾಗುತ್ತಿತ್ತು. ಇದಕ್ಕೆ ಸಂಪಾದಕರಾಗಿದ್ದವರು ಅಟಲಜಿಯವರು. ಅದು ಸಹ ಸರಕಾರದ ಕೋಪಕ್ಕೆ ಒಳಗಾಗಬಹುದೆಂಬ ನಿರೀಕ್ಷೆ ಮೊದಲೇ ಇತ್ತು. ಅದಕ್ಕಾಗಿ ಇನ್ನೂ ಬೇರೆ ಬೇರೆ ಹೆಸರುಗಳಲ್ಲಿ ಪತ್ರಿಕೆಗಳನ್ನು ನೋಂದಾಯಿಸಿ ಇಡಲಾಗಿತ್ತು. ಹೀಗಾಗಿ ‘ಸ್ವದೇಶ’ನಿಂತು ಹೋದಂತೆಯೇ ‘ಹಿಮಾಲಯ’ ಎಂಬ ಹೆಸರಲ್ಲಿ ಬೇರೊಂದು ಪತ್ರಿಕೆ ಹುಟ್ಟಿಕೊಂಡಿತು. ಅದು ಸಹ ತನ್ನ ಭಾಷೆ, ಶೈಲಿ ಇತ್ಯಾದಿ ಯಾವುದರಲ್ಲೂ ‘ಸ್ವದೇಶ’ಕ್ಕಿಂತ ಕಡಿಮೆಯಿರಲಿಲ್ಲ. ಒಂದು ತೂಕ ಹೆಚ್ಚೆಂದರೂ ತಪ್ಪಲ್ಲ. ಪರಿಣಾಮ ಕಲವೇ ದಿನಗಳಲ್ಲಿ ‘ಹಿಮಾಲಯ’ ಸಹ ‘ಸ್ವದೇಶ’ಗತಿಯನ್ನು ಹೊಂದಿತು. ಕೂಡಲೇ ತಲೆ ಎತ್ತಿತ್ತು, ‘ದೇಶಭಕ್ತ’. ಅದು ಕೂಡ ಕೆಲವು ದಿನಗಳ ಕಾಲ ಅಬ್ಬರದಿಂದ ಗುಡುಗಿ, ನಂತರ ನಿರೀಕ್ಷೆಯಂತೆ ಸರಕಾರದ ‘ಕೃಪೆ’ಗೊಳಗಾಗಿ ತನ್ನ ಅವತಾರ ಕಾರ್ಯ ಪೂರೈಸಿತು. ಈ ರೀತಿಯಲ್ಲಿ ಒಂದಾದ ಮೇಲೊಂದರಂತೆ ಮಾಧ್ಯಮ ಕ್ಷೇತ್ರದಲ್ಲಿ ಪತ್ರಿಕೆಗಳು ಹುಟ್ಟಿಕೊಂಡು, ಸರಕಾರದ ಮುಂದೆ ತೊಡೆತಟ್ಟಿಕೊಂಡು ನಿಂತವು. ಅವು ಪ್ರತಿಯೊಂದು ಸಹ ನಿಂತುಹೋದವು ಎಂಬುದು ಬೇರೆ ಮಾತು. ಅದು ನಿರೀಕ್ಷಿತವೇ ಆಗಿದ್ದ ಸಂಗತಿ. ಆದರೆ ಇರುವಷ್ಟೂ ಕಾಲ ಮಿಂಚಿದವು ಎಂಬುದು ಸಹ ಅಷ್ಟೇ ಸತ್ಯ.
ಈ ನಡುವೆ ಅಟಲಜಿಯವರೇ ಬಂಧಿತರಾಗಿ ಸೆರೆಮನೆ ಸೇರಿದರು. ಅದರ ನಂತರ ಪ್ರಚಾರ ಕಾರ್ಯದ ಕೇಂದ್ರ ಕಾನಪುರಕ್ಕೆ ಸ್ಥಾನಾಂತರವಾಯಿತು.
±Ü£ÅPæWÜÙÜ ¨ÜÊÜá®Ü
ಸಂಘದ ನ್ಯಾಯಸಮ್ಮತ ಭೂಮಿಕೆ ಯನ್ನು ಸಮರ್ಥಿಸುವಂತಹ ಹಲವು ಪತ್ರಿಕೆಗಳು ಆಗ ಇದ್ದವು. ಅವು ತಮಗೆದುರಾಗಬಹುದಾದ ಅಪಾಯವನ್ನು ಲೆಕ್ಕಿಸದೆ ಸತ್ಯಾಗ್ರಹವನ್ನು ಬೆಂಬಲಿಸುವ ಪಾತ್ರ ನಿರ್ವಹಿಸಿ ಹೋರಾಟಕ್ಕಿಳಿದವು. ಸಹಜವಾಗಿ ಅವು ಸರಕಾರದ ದಮನ ಕ್ರಮಗಳಿಗೆ ಬಲಿಯಾಗಬೇಕಾಯಿತು. ಅಷ್ಟಾದರೂ ಅವು ಪತ್ರಿಕಾಧರ್ಮಕ್ಕೆ ಅಂಟಿಕೊಂಡು ನಿಂತವು. ಪ್ರಯಾಗದ ‘ಕ್ರೈಸಿಸ್’ ಮತ್ತು ‘ಕರ್ಮಯೋಗಿ’, ಪುಣೆಯ ‘ದೈನಿಕ’ ಭಾರತ ಅಂತಹವು. ಸರಕಾರ ಅವುಗಳಿಗೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಅವುಗಳು ತಮ್ಮ ನಿಲುವನ್ನು ಬದಲಿಸಲಿಲ್ಲ.
ಮಧ್ಯಪ್ರದೇಶ ಮತ್ತು ಬರಾರ್‌ನ ರಾಜ್ಯಪಾಲರಂತೂ ಸಾರ್ವಜನಿಕ ಸುರಕ್ಷಾ ಕಾನೂನಿನ ಅಂತರ್ಗತ ಒಂದು ವಿಶೇಷ ಆದೇಶವನ್ನು ಹೊರಡಿಸಿದ್ದರು. ಅದರಲ್ಲಿ ಸಂಘದ ಕುರಿತ ಯಾವುದೇ ಮಾಹಿತಿಯನ್ನಾಗಲಿ, ಸಂಘದ ಯಾವನೇ ಸದಸ್ಯನ ಯಾವುದೇ ಹೇಳಿಕೆಯನ್ನು ಪತ್ರಿಕೆಗಳು ಪ್ರಕಟಿಸಬಾರದು ಎಂದು ತಿಳಿಸಲಾಗಿತ್ತು. ಆದರೆ ಪ್ರಾಂತದ ಎಲ್ಲ ಪತ್ರಿಕೆಗಳು ಈ ಆದೇಶವನ್ನು ತೀವ್ರವಾಗಿ ವಿರೋಧಿಸಿ, ಅದನ್ನು ಪೂರಾ ವಿಫಲಗೊಳಿಸಿದವು.
ಸಂಘವು ಕಾಂಗ್ರೆಸ್‌ನಲ್ಲಿ ವಿಲೀನಗೊಳ್ಳಬೇಕು ಎಂಬ ಉಪದೇಶವನ್ನು ಸರದಾರ ಪಟೇಲರು ನೀಡಿದಾಗ ನಾಗಪುರದ ಮರಾಠಿ ದೈನಿಕ ‘ತರುಣ ಭಾರತ’ ತನ್ನ 14.12.1948ರ ಸಂಚಿಕೆಯಲ್ಲಿ ಮಾಡಿದ್ದ ಖಾರವಾದ ಟಿಪ್ಪಣಿ ಹೀಗಿತ್ತು. ‘‘….ಎಂದರೆ ಸರದಾರ ಪಟೇಲರ ದೃಷ್ಟಿಯಲ್ಲಿ ಸಂಘ ಮಾಡಿದ ದೊಡ್ಡ ಅಪರಾಧವೇನು? ತನ್ನ ‘ಪ್ರಾಮಾಣಿಕ ಸಲಹೆ’ಯನ್ನು ಸ್ವೀಕರಿಸದೆ ಇದ್ದುದು, ಅಲ್ಲವೇ?… ಅದರರ್ಥ ಎಲ್ಲ ಅಧಿಕಾರಗಳನ್ನು ತಾನೇ ಹೊಂದಿರುವ ಕಾಂಗ್ರೆಸ್ ಬಿಟ್ಟಲ್ಲಿ ಇನ್ನಾವುದೇ ಸಂಸ್ಥೆ ಅಥವಾ ಸಂಘಟನೆಗಳಿಗೆ ಅಸ್ತಿತ್ವದಲ್ಲಿರಲು ಕಾಂಗ್ರೆಸ್‌ನ ನಾಯಕರು ಬಿಡುವುದಿಲ್ಲ ಎಂದಾಗುವುದಿಲ್ಲವೇ?…. ಇಂತಹ ನೀತಿ ಸರ್ವಾಧಿಕಾರಿ ಫ್ಯಾಸಿಸ್ಟ್ ಮನೋವೃತ್ತಿಯದಲ್ಲದೆ ಇನ್ನೇನು? ’’
ಮಧ್ಯಪ್ರದೇಶದ ಗೃಹಮಂತ್ರಿ ಪಂ. ದ್ವಾರಿಕಾ ಪ್ರಸಾದ ಮಿಶ್ರ ಅವರು ಸಂಘದ ನಿಧಿ ವ್ಯವಸ್ಥೆಯ ಬಗ್ಗೆ ಸಂದೇಹ ಪ್ರಕಟಿಸಿದಾಗ ನಾಗಪುರದ ಆಂಗ್ಲ ದೈನಿಕ ‘ಹಿತವಾದ’ವು ದಿ. 12.12.1948ರ ತನ್ನ ಸಂಚಿಕೆಯಲ್ಲಿ ಪಂ. ಮಿಶ್ರ ಅವರಿಗೆ ತಾನೊಂದು ಪ್ರಶ್ನೆಯನ್ನು ಎಸೆಯಿತು. ಮಿಶ್ರಾ ಅವರ ಅಪೇಕ್ಷೆಯನ್ನು ಅನುಚಿತ ಎನ್ನಲಾಗುವುದಿಲ್ಲ. ಅದು ಸರಿಯೇ, ಆದರೆ ಇದೇ ರೀತಿಯಲ್ಲಿ ಯಾರಾದರೂ ಕಾಂಗ್ರೆಸ್‌ನಿಂದಲೂ ‘ತಿಲಕ ಸ್ವರಾಜ್ಯ ಫಂಡ್’ಗೆ ಸಂಬಂಧಿಸಿದ ಲೆಕ್ಕಪತ್ರಗಳನ್ನೂ ಕೇಳಬಹುದಲ್ಲವೇ?
ಸಂಘದ ಸತ್ಯಾಗ್ರಹಿಗಳನ್ನು ಮಟ್ಟ ಹಾಕುವಂತಹ ಬೆದರಿಕೆಯನ್ನು ಸರದಾರ ಪಟೇಲರು ಗ್ವಾಲಿಯರ್‌ನಲ್ಲಿ ಹೇಳಿದಾಗ ಕಾಶಿಯ ‘ಚೇತನಾ’ ತನ್ನ 12.12.1948 ರ ಸಂಚಿಕೆಯಲ್ಲಿ ಸರದಾರ ಪಟೇಲರು ಒಡ್ಡಿರುವಂತಹ ಬೆದರಿಕೆ ಓರ್ವ ಸರ್ವಾಧಿಕಾರಿಗೆ ತನ್ನ ದರ್ಪದ ತೋರಿಕೆಗೆ ಶೋಭಿಸುವಂತಹದಾಗಿರಬಹುದು. ಆದರೆ ಸ್ವತಂತ್ರ ಭಾರತದ ಉಪಪ್ರಧಾನಿಗೆ ಖಂಡಿತಕ್ಕೂ ಶೋಭೆ ನೀಡುವಂತಹದಲ್ಲ.’
‘ಈ ಎಲ್ಲ ಪತ್ರಿಕೆಗಳಿಗೆ ತಮ್ಮ ಟಿಪ್ಪಣಿ ನ್ಯಾಯಸಮ್ಮತವಾಗಿದ್ದರೂ, ಅದಕ್ಕೆ ತಾವು ಭಾರೀ ಬೆಲೆ ಕೊಡಬೇಕಾಗಬಹುದೆಂಬ ಅರಿವು ಇರಲಿಲ್ಲವೆಂದಲ್ಲ. ಕಾರಣವೆಂದರೆ ಯಾವುದೇ ಪತ್ರಿಕೆಯಾದರೂ ಸಂಘದ ಪರವಾಗಿ ಲೇಶಮಾತ್ರವಾದರೂ ಒಲವು ತೋರಿದಲ್ಲಿ, ಆ ಕ್ಷಣವೇ ಅದರ ವಿರುದ್ಧ ಸಾರ್ವಜನಿಕ ಸುರಕ್ಷಾ ಕಾನೂನಿನನ್ವಯ ಕ್ರಮ ತೆಗೆದುಕೊಳ್ಳುವಂತಹ ಸಂಗತಿ ಆಗ ಎಲ್ಲರಿಗೂ ಗೊತ್ತಿದ್ದುದೇ. ಈ ರೀತಿಯಲ್ಲಿ ಸರಕಾರದ ದಮನ ನೀತಿಗೆ ಬಲಿಯಾಗಿ ಶಿಕ್ಷೆ ಅನುಭವಿಸಬೇಕಾಗಿ ಬಂದ ಪತ್ರಿಕೆಗಳಿಗೆ ಭಯ ಹುಟ್ಟಿಸಲು ಸರಕಾರ ಕಠಿಣ ಕ್ರಮಗಳನ್ನು ಅನುಸರಿಸತೊಡಗಿತ್ತು. ಅಂತಹ ಕ್ರಮದಲ್ಲಿ ಇದ್ದ ಇನ್ನೊಂದು ಉದ್ದೇಶವೆಂದರೆ ಇತರ ಪತ್ರಿಕೆಗಳು ಅಂತಹ ಸಾಹಸಕ್ಕೆ ಕೈ ಹಾಕದಿರಲಿ ಎಂಬುದೇ….
ಅಮೃತಸರದ ಉರ್ದು ದೈನಿಕ ‘ಪ್ರಭಾತ’ದ ಸಂಪಾದಕರನ್ನು ಬಂಧಿಸಿ, ಪತ್ರಿಕೆಯ ಪ್ರಕಟಣೆಯ ಮೇಲೆ ನಿಷೇಧ ಹೇರಲಾಗಿತ್ತು.

   

Leave a Reply