ಮಿಲಿಟರಿಯ ಗನ್ ಶಿಪ್ ಕಗ್ಗತ್ತಲಲ್ಲೂ ಮೊರೆಯುವ ಅಪಾಚಿ

ಲೇಖನಗಳು - 0 Comment
Issue Date :

-ಸಂತೋಷ್ ತಮ್ಮಯ್ಯ

1971ರ ಭಾರತ-ಪಾಕ್ ಕದನವನ್ನು ಸಾಮರಿಕ ತಜ್ಞರು ಚತುರ ಮತ್ತು ಇತಿಹಾಸ ನಿರ್ಮಿಸಿದ ಹೋರಾಟ ಎಂದು ಬಣ್ಣಿಸುತ್ತಾರೆ. ದಾಖಲೆ ಸಂಖ್ಯೆಯ ಯುದ್ಧ ಖೈದಿಗಳು, ಚಾಣಾಕ್ಷ ರಣತಂತ್ರ ಮತ್ತು ಕೇವಲ ಹದಿಮೂರೇ ದಿನಗಳಲ್ಲಿ ಪ್ರತ್ಯೇಕ ದೇಶವೊಂದನ್ನು ನಿರ್ಮಿಸಿದ ಭಾರತದ ನಡೆಯನ್ನು ವಿಶ್ವದ ರಾಜಕೀಯ ಮತ್ತು ಸಾಮರಿಕ ತಜ್ಞರು ಬೆರಗಿನಿಂದ ನೋಡಿದರು. ಈ ಯುದ್ಧ ಮುಂದೆ ಭಾರತೀಯ ಸೈನ್ಯದಲ್ಲಿ ಹಲವು ಬದಲಾವಣೆಗೂ ಕಾರಣವಾಯಿತು.

71ರ ಈ ಯುದ್ಧದಲ್ಲಿ ಭಾರತ ತನ್ನ ಮೂರೂ ಪಡೆಗಳನ್ನು ರಂಗಕ್ಕಿಳಿಸಿತ್ತು. ಭೂಸೇನೆ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ವಾಯುಪಡೆ ಮತ್ತು ನೌಕಾ ಪಡೆಗಳ ಸಹಯೋಗ ಕೂಡಾ ಮುಖ್ಯವಾಗಿತ್ತು. ಭೂಸೇನೆಯೇನೋ ತನ್ನ ಪ್ಯಾರಾ ಟ್ರೂಪರ್‌ಗಳನ್ನು ಬಳಸಿ ಢಾಕಾ ಡ್ರಾಪ್ ಮಾಡಿ ಯುದ್ಧಕ್ಕೆ ಅಂತ್ಯವನ್ನು ಹಾಡಿತ್ತು. ಇದರ ನಡುವೆ ಆದ ಗೊಂದಲಗಳು, ಮುಖಂಡರ ವೈಮನಸುಗಳನ್ನು ವಿಜಯದ ಅಬ್ಬರದಲ್ಲಿ ದೇಶ ಮರೆತಿತು. ನಿರ್ಣಾಯಕ ಢಾಕಾ ಡ್ರಾಪ್ ಯಶಸ್ವಿ ಕಾರ್ಯಾಚರಣೆಯಾದರೂ ಹಿಂದೆಂದೂ ಮಾಡದ ಧೈರ್ಯವನ್ನು ಸೇನೆ ಮಾಡಬೇಕಿತ್ತು. ಅಗಾಧವಾದ ರಿಸ್ಕನ್ನು ತೆಗೆದುಕೊಳ್ಳಬೇಕಿತ್ತು. ಆಗ ಜನರಲ್ ಮಾಣಿಕ್ ಷಾ ಅಂದಿನ ಏರ್ ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್ ಅವರನ್ನು ಭೇಟಿಯಾಗಿ ಢಾಕಾ ಡ್ರಾಪಿಗಿದು ಸಕಾಲವಲ್ಲ. ನಮ್ಮ ಟ್ರೂಪರ್‌ಗಳು ಪರಾಕ್ರಮಿಗಳಾದರೂ ಇದು ಅಪಾಯಕಾರಿ ಡ್ರಾಪ್ ಅಗಲಿದೆ. ಹಾಗಾಗಿ ವಾಯುಪಡೆಯ ದಾಳಿ ಹೆಲಿಕಾಪ್ಟರ್‌ಗಳನ್ನು ಬಳಸಿ ಢಾಕಾವನ್ನು ವಶಪಡಿಸಿಕೊಳ್ಳಲು ಸೇನೆಗೆ ಅವಕಾಶ ನೀಡಬೇಕೆಂದು ಮನವಿ ಮಾಡಿಕೊಂಡರು. ಪ್ರಧಾನ ಮಂತ್ರಿ ಇಂದಿರಾ ಗಾಂಧಿಯ ನಿಕಟವರ್ತಿ ಮತ್ತು ನೇರ ಪ್ರಧಾನಿಗಳಿಗೆ ವರದಿ ನೀಡುವವನೆಂಬ ದಾಡಸಿತನವೋ ಅಥವಾ ತಾಂತ್ರಿಕವಾಗಿ ಅದು ಸರಿ ಇರಲಿಲ್ಲವೋ, ಇನ್ನೇನಿತ್ತೋ ಗೊತ್ತಿಲ್ಲ, ಏರ್‌ಚೀಫ್ ಮಾರ್ಷಲ್ ಪ್ರತಾಪ್ ಚಂದ್ರ ಲಾಲ್ ಮಾಣಿಕ್ ಷಾ ಬೇಡಿಕೆಯನ್ನು ತಿರಷ್ಕರಿಸಿದರು. ಯುದ್ದೋತ್ಸಾಹದಲ್ಲಿದ್ದ ಮಾಣಿಕ್ ಷಾ ಇದರಿಂದ ಅವಮಾನಗೊಂಡರು. ಈ ಅಪಮಾನವನ್ನು ಸವಾಲಾಗಿ ತೆಗೆದುಕೊಂಡ ಮಾಣಿಕ್ ಶಾ ಹಿಂದೆ ಮುಂದೆ ನೋಡದೆ ಢಾಕಾ ಡ್ರಾಪಿಗೆ ಯೋಜನೆ ರೂಪಿಸಿಬಿಟ್ಟರು. ಭೂಸೇನೆಯ ಡಕೋಟಾ (ವಿಮಾನದ ಮಾದರಿಯ ಹೆಸರು) ಏರ್‌ಕ್ರಾಫ್ಟ್ ನಿಂದ ಢಾಕಾ ಸ್ಟೇಡಿಯಮ್ಮಿನಲ್ಲಿ ಟ್ರೂಪರುಗಳನ್ನಿಳಿಸಿ ಯುದ್ಧವನ್ನು ಅಂತ್ಯಗೊಳಿಸಿದರು. ಯುದ್ಧಾನಂತರ ಮಾಣಿಕ್ ಷಾ ಹಳೆಯ ಸಂಗತಿಯನ್ನು ಮರೆಯಲಿಲ್ಲ. ವಾಯುಪಡೆಯ ಹಂಗಿಲ್ಲದೆ ಭೂಸೇನೆ ಆಕಾಶದಲ್ಲಿ ಹೋರಾಡಬಲ್ಲ ಪಡೆಯನ್ನು ಕಟ್ಟಲು ಸಿದ್ಧತೆ ನಡೆಸಿದರು. ಈ ಯೋಜನೆ ಕಾರ್ಯರೂಪದಲ್ಲಿದ್ದಾಗಲೇ ಮಾಣಿಕ್ ಷಾ ನಿವೃತ್ತರಾದರು.

 ನಂತರ ಬಂದ ಭೂಸೇನಾ ಪ್ರಮುಖರಿಗೂ ಕೂಡಾ ತಮ್ಮ ಪಡೆಗೆ ಸುಸಜ್ಜಿತವಾದ ವಾಯು ತುಕಡಿಯೊಂದರ ಅಗತ್ಯತೆ ಅಡಿಗಡಿಗೆ ಕಂಡುಬಂತು. ಅದರ ಪರಿಣಾಮ 1986ರ ನವೆಂಬರ್ 1ರಂದು ಲೆಫ್ಟಿನೆಂಟ್ ಜನರಲ್ ರ‌್ಯಾಂಕಿನ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಏರ್ ಏವಿಯೇಶನ್ ಕಾರ್ಪ್ಸ್ ಎಂಬ ತುಕಡಿ ಅಸ್ತಿತ್ವಕ್ಕೆ ಬಂತು. ಹಿಮಾಲಯ ವಲಯಗಳಿಗೆ ಸರಕು ಮತ್ತು ಯೋಧರನ್ನು ಸರಬರಾಜುಗೊಳಿಸಲು, ವಿಕೋಪ ಪರಿಹಾರಗಳಿಗೆ ಭೂಸೇನೆ ಸ್ವತಂತ್ರವಾಗುವತ್ತ ಹೆಜ್ಜೆ ಇಟ್ಟಿತು. ಆರಂಭದಲ್ಲಿ ಹೆಚ್‌ಎಎಲ್ ನಿರ್ಮಿತ ಚೀತಾ, ಚೇತಕ್ ಮತ್ತು ಧ್ರುವ್ ಹೆಲಿಕಾಪ್ಟರ್‌ಗಳನ್ನು ಭೂಸೇನೆ ಅಳವಡಿಸಿಕೊಂಡಿತು. ಸಿಯಾಚಿನ್ ಬಲಗೊಂಡಿದ್ದು ಈ ಹೆಲಿಕಾಪ್ಟರುಗಳ ಬಲದಿಂದಲೇ. ಏರ್ ಏವಿಯೇಶನ್ ಕಾರ್ಪ್ಸ್‌ಗಳು ನಿರ್ಮಾಣವಾದರೂ ಭೂಸೇನೆ ತನ್ನ ಕಾಲ ಮೇಲೆ ನಿಲ್ಲುವಷ್ಟು ಶಕ್ತಿಶಾಲಿಯಾಗಲಿಲ್ಲ. ಏಕೆಂದರೆ, ಏರ್ ಏವಿಯೇಶನ್ ಕಾರ್ಪ್ಸ್‌ಗಳ ಸ್ಕ್ವಾಡ್ರನ್‌ಗಳ ಸಂಖ್ಯೆ ಹೆಚ್ಚಿರಲಿಲ್ಲ. ಅಲ್ಲದೆ ವಿವಿಧ ವಾತಾವರಣಗಳಿಗೆ ಒಗ್ಗಿಕೊಳ್ಳುವ ತಂತ್ರಜ್ಞಾನ ಇದರಲ್ಲಿರಲಿಲ್ಲ. ವಿಕೋಪ ನಿರ್ವಹಣೆಯಲ್ಲೇನೋ ಸರಕು ಸರಂಜಾಮುಗಳನ್ನು ಇವು ಸರಬರಾಜು ಮಾಡುತ್ತಿದ್ದವು. ಆದರೆ ವಿಕೋಪ ಸಂತ್ರಸ್ತರನ್ನು ಸಾಗಿಸುವ ವ್ಯವಸ್ಥೆ ಎಎಸಿಗಿರಲಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ಅಗಸ್ಟಾ ವೆಸ್ಟ್ ಲ್ಯಾಂಡ್ ಹೆಲಿಕಾಪ್ಟರುಗಳನ್ನು ಸೇನೆ ಖರೀದಿ ಮಾಡಿತು. ಮುಂದೆ ರಷ್ಯಾ ನಿರ್ಮಿತ ಎಂಐ ಸರಣಿಯ ಕಾಪ್ಟರುಗಳನ್ನೂ ಸೇನೆ ತರಿಸಿತು. ಆದರೆ ಸಮಸ್ಯೆ ಇನ್ನೂ ಬಾಕಿ ಉಳಿದಿದ್ದವು. ವಾಯುಪಡೆಯಂತೆ ಸೇನೆಯಲ್ಲಿ ದಾಳಿ ಹೆಲಿಕಾಪ್ಟರುಗಳೇ ಇರಲಿಲ್ಲ. ಎಂ ಐ ಸರಣಿಯ ಕೆಲವು ಕಾಪ್ಟರುಗಳು ದಾಳಿ ಹೆಲಿಕಾಪ್ಟರುಗಳೆಂಬ ಹಣೆಪಟ್ಟಿ ಹೊತ್ತಿದ್ದರೂ ಅವೆಲ್ಲವೂ ಸೂರ್ಯ ಮುಳುಗಿದ ನಂತರ ಭೂಮಿ ಬಿಟ್ಟು ಹಾರುವ ತಂತ್ರಜ್ಞಾನದವಾಗಿರಲಿಲ್ಲ.

 ಬಲಾಢ್ಯ ಮತ್ತು ಅತೀ ಹೆಚ್ಚಿನ ಸಂಖ್ಯಾಬಲವನ್ನು ಹೊಂದಿದ್ದ ಭೂಪಡೆಯಲ್ಲಿ ನೂರಾರು ಮುಚ್ಚಬೇಕಾದ ತೂತುಗಳಿದ್ದವು. ಒಂದೆಡೆ ಟ್ಯಾಂಕರುಗಳು ನಿವೃತ್ತಿಯಂಚಿಗೆ ಬರುತ್ತಿದ್ದವು, ಇನ್ನೊಂದೆಡೆ ಫಿರಂಗಿಗಳು ತುಕ್ಕು ಹಿಡಿದಿರುತ್ತಿತ್ತು. ಅವೆಲ್ಲದಕ್ಕಿಂತ ಹೆಚ್ಚಾಗಿ ಏರ್ ಏವಿಯೇಶನ್ ಕಾರ್ಪ್ಸ್ ತುಕಡಿಗೆ ಹೆಲಿಕಾಪ್ಟರುಗಳಿಗಿಂತಲೂ ಯುದ್ಧ ವಿಮಾನಗಳತ್ತ ಗಮನ ಹರಿಸಬೇಕಾದ ಅನಿವಾರ್ಯತೆಯಿತ್ತು. ಯುದ್ಧ ಸಂದರ್ಭಗಳಲ್ಲಿ ಸೇನೆಯ ಪ್ರತೀಯೊಂದು ಕೋರ್ (CORE)ಗೆ ಬೆನ್ನೆಲುಬಾಗಿ ಒಂದು ಟ್ಯಾಕ್ಟ್ (ಟ್ಯಾಕ್ಟಿಕಲ್ ಏರ್ ಸೆಂಟರ್) ಇರಬೇಕು ಎನ್ನುವ ಆಧುನಿಕ ರಣತಂತ್ರದ ನಿಯಮವನ್ನು ಸೇನೆ ಮರೆಯುವಂತಿಲ್ಲ. ಇವೆಲ್ಲದರ ನಡುವೆ ರಾತ್ರಿ ದಾಳಿ ನಡೆಸಬಲ್ಲ ಶಕ್ತಿಶಾಲಿ ಕಾಪ್ಟರುಗಳ ಖರೀದಿ ಭೂಸೇನೆಯಲ್ಲಿ ನೆನೆಗುದಿಗೆ ಬಿತ್ತು. ವಾಯುಪಡೆಯಲ್ಲಿ ರಾತ್ರಿ ದಾಳಿ ನಡೆಸಬಲ್ಲ ಕಾಪ್ಟರುಗಳಿದ್ದರೂ ವಾಯುಪಡೆಯ ಮಿತಿ ಮತ್ತು ಅದರ ರಣತಂತ್ರಗಳ ದೃಷ್ಟಿಯಿಂದ ಸೇನೆಗೆ ಅವು ಲಭ್ಯವಾಗುವಂತಿರಲಿಲ್ಲ. ಭೂಸೇನೆಯ ಕನಸು ಕನಸಾಗಿಯೇ ಉಳಿಯಿತು.

 ಇವೆಲ್ಲಕ್ಕೂ ಮತ್ತೆ ಜೀವ ಬಂದಿದ್ದು 2011ರಲ್ಲಿ. ಅಮೆರಿಕಾ ಸೇನೆ ಪಾಕಿಸ್ಥಾನದ ಅಬೋಟಾಬಾದಿನಲ್ಲಿ ಒಸಾಮ ಬಿನ್ ಲಾಡೆನ್ನನನ್ನು ಗೌಪ್ಯ ಮತ್ತು ಸಾಹಸಿ ಕಾರ್ಯಾಚರಣೆಯ ಮೂಲಕ ಕೊಂದು ಮರಳಿತ್ತು. ಎರಡೇ ಎರಡು ಕಾಪ್ಟರುಗಳನ್ನು ಅಮವಾಸ್ಯೆಯ ಕತ್ತಲಲ್ಲೂ ದುರ್ಗಮವಾದ ನೆಲದಲ್ಲಿಳಿಸಿ ಕೆಲವೇ ನಿಮಿಷಗಳಲ್ಲಿ ಕಾರ್ಯಾಚರಣೆ ಮುಗಿಸಿ ಜಗತ್ತಿನೆದುರು ಬೀಗಿತ್ತು. ಕಾರ್ಯಾಚರಣೆಯ ಬಗ್ಗೆ ಎಷ್ಟು ಚರ್ಚೆಗಳಾದವೋ ಸಾಮರಿಕ ನೆಲೆಯಿಂದಲೂ ಆ ಕಾರ್ಯಾಚರಣೆ ಚರ್ಚೆಗೊಳಗಾಯಿತು. ಅಮೆರಿಕಾದ ಸೀಲ್ ಕಮಾಂಡೋಗಳ ರಣತಂತ್ರಗಳು, ಅವು ಬಳಸಿದ ಕಾಪ್ಟರುಗಳು, ಬಳಸಿದ ಶಸ್ತ್ರಗಳಾವುವು ಎಂಬುದರ ಬಗ್ಗೆ ಭಾರೀ ಚರ್ಚೆಗಳು ನಡೆದವು. ಕೊನೆಗೊಂದು ದಿನ ಅಮೆರಿಕಾ ಸೈನ್ಯ ಕಾರ್ಯಾಚರಣೆಯ ಒಳಗುಟ್ಟನ್ನು ಜಗತ್ತಿನೆದುರು ಬಿಚ್ಚಿಟ್ಟಿತು. ಕಾರ್ಯಾಚರಣೆಯ ಯಶಸ್ಸನ್ನು ಅದು ಸೀಲ್ ಕಮಾಂಡೋ ಮತ್ತು ಅಪಾಚಿ ಕಾಪ್ಟರುಗಳಿಗೆ ಅರ್ಪಿಸಿತು. ಅದೇ ಹೊತ್ತಿಗೆ ದೇಶದಲ್ಲಿ ಸೈನ್ಯಕ್ಕೆ ಮಹತ್ವ ನೀಡುವ ಸರ್ಕಾರವೂ ಬಂದಿತ್ತು. ಮುಂದೆ ಕೆಲವೇ ತಿಂಗಳುಗಳಲ್ಲಿ ವಾರ್ ಜಂಕಿ ಎಂದೇ ಹೆಸರಾದ ಸರ್ಜಿಕಲ್ ಕಾರ್ಯಾಚರಣೆಯ ನುರಿತವರು ಸೇನಾ ಮುಖ್ಯಸ್ಥರಾದರು. ರಾತ್ರಿಯಲ್ಲೂ ದಾಳಿ ಮಾಡುವ ಕಾಪ್ಟರ್ ಖರೀದಿಗೆ ಮುಹೂರ್ತ ಬಂತು. ಪರಿಣಾಮ ಭಾರತೀಯ ಸೇನೆ ಈಗ ಗನ್‌ಶಿಪ್ ಎಂದು ಕರೆಯಲ್ಪಡುವ ಅಪಾಚಿ ಕಾಪ್ಟರ್ ಒಡೆಯ.

 ಅಮೆರಿಕಾದಲ್ಲೂ ಕೂಡಾ ಅಪಾಚಿ ಕಾಪ್ಟರ್‌ಗಳು ಗನ್‌ಶಿಪ್ ಎಂದೇ ಕರೆಸಿಕೊಳ್ಳುತ್ತವೆ. ಏಕೆಂದರೆ ಅಪಾಚಿ ರಾತ್ರಿಯಲ್ಲಿ ದಾಳಿ ಮಾಡುವುದರ ಜೊತೆಗೆ ಆಕಾಶದಿಂದ ಭೂಮಿಗೆ ದಾಳಿ ಮಾಡುವ ಚತುರ. ಇಂಗ್ಲಿಷ್ ಸಿನೆಮಾಗಳಲ್ಲಿ ಕಾಣುವಂತೆ ಯುದ್ಧ ಮಾಡಬಲ್ಲ ವಿಶ್ವದ ಕೆಲವೇ ಕೆಲವು ಕಾಪ್ಟರ್‌ಗಳಲ್ಲಿ ಅಪಾಚಿ ಒಂದು ಮತ್ತು ಅಂಥವುಗಳಲ್ಲೇ ಅತ್ಯಂತ ಹೆಚ್ಚು ಬಲಶಾಲಿ. ಸರ್ಜಿಕಲ್ ದಾಳಿಗೆ ಹೇಳಿ ಮಾಡಿಸಿದಂತಿರುವ ಅಪಾಚಿಗಳು ಜೌಗು, ಮರುಭೂಮಿ, ಹಿಮಚ್ಛಾದಿತ ಪ್ರದೇಶ, ಕಡಿದಾದ ಪರ್ವತ ಮತ್ತು ಜನನಿಬಿಡ ಪ್ರದೇಶಗಳಲ್ಲೂ ಲ್ಯಾಂಡ್ ಆಗಬಲ್ಲದು.

ಇಂತಹ ಹೆಲಿಕಾಪ್ಟರ್ ಭಾರತದ ಬತ್ತಳಿಕೆಗೆ ಸೇರಿರುವುದು ದೇಶದ ಬಲ ವರ್ಧಿಸಿದೆ.

   

Leave a Reply