ಮುಮ ‘ತಾಜ ಮಹಲ್’ ಅಲ್ಲ, ಚಂದ್ರಮೌಳೇಶ್ವರ ದೇವಸ್ಥಾನ !

ಲೇಖನಗಳು - 0 Comment
Issue Date :

-ಪಿ.ಎನ್. ಓಕ್

ಆಗ್ರಾದಲ್ಲಿನ ತಾಜಮಹಲ್ ಹಿಂದೂ ಅರಮನೆಯೆಂದು ಷಾಜಹಾನನ ಜೀವನ ವೃತ್ತಾಂತವಾದ ಬಾದಶಾಹನಾಮಾದಲ್ಲೇ (ಬಂಗಾಳದ ಏಶಿಯಾಟಿಕ್ ಸೊಸೈಟಿಯ ‘ಬಿಬ್ಲಿಯೊಥಿಕಾ ಇಂಡಿಕಾ’ದ 1ನೇ ಸಂಪುಟದ 403ನೇ ಪುಟ) ಒಪ್ಪಿಕೊಳ್ಳಲಾಗಿದ್ದರೂ, ಅದು ಪ್ರಾರಂಭದಲ್ಲಿ ಚಂದ್ರಮೌಳೇಶ್ವರ ದೇವಾಲಯವಾಗಿದ್ದ ಸಂಭವವೂ ಇದೆ.

ಕ್ರಿ.ಶ.1167ರಲ್ಲಿ ರಾಜಾ ಪರಮರ್ದಿದೇವನು ಭಗವಾನ್ ಶಿವನಿಗಾಗಿ ಕಟ್ಟಿದ್ದ ಮಂದಿರವೇ ನಂತರ ‘ತಾಜ್‌ಮಹಲ್’ ಆಗಿರಬಹುದೆಂದು ಲಖ್ನೊ ವಸ್ತುಸಂಗ್ರಹಾಲಯದಲ್ಲಿನ ಶಿಲಾಶಾಸನದಿಂದ ತಿಳಿದುಬರುತ್ತದೆ.

 ಸಂಸ್ಕೃತದಲ್ಲಿರುವ ಈ ಶಾಸನದಲ್ಲಿ 34 ಶ್ಲೋಕಗಳಿವೆ. ಅದರಲ್ಲಿನ 24, 26 ಮತ್ತು 34ನೇ ಶ್ಲೋಕಗಳನ್ನು ಈ ಕೆಳಗೆ ಕೊಡಲಾಗಿದೆ :

ಪ್ರಾಸಾದೋ ವೈಷ್ಣವಸ್ತೇನ
ನಿರ್ಮಿತೋಂತರ್ವಯಿನ್‌ಹರಿಂ
ಮೂರ್ಧ್ನಾಸೃಶತಿ ಯೋ
ನಿತ್ಯಂ ಪದಮಸ್ಮೈವ ಮಧ್ಯಮಮ್             ॥
ಆಕಾರಯಚ್ಚ ಸ್ಫಟಿಕಾವದಾತಮ
ಸಾವಿದಂಮಂದಿರಮಿಂದುಮೌಳೇಃ

ನ ಜತುಯಸ್ಮಿನ್ನಿವಸಂಸದೇವ:
ಕೈಲಾಸವಾಸಾಯ ಚಕಾರ ಚೇತಃ              ॥
ಪಕ್ಷತ್ರ್ಯಕ್ಷಮುಖಾದಿತ್ಯ ಸಂಖ್ಯೇ ವಿಕ್ರಮವತ್ಸರೇ
ಅಶ್ವಿನ್ ಶುಕ್ಲ ಮಂಚಮ್ಯಾಂ ವಾಸರೇ ವಾಸವೇಶಿತುಃ ॥

ಶ್ಲೋಕಗಳ ಸರಳಾರ್ಥ ಈ ರೀತಿಯಿದೆ :

 ‘ವಿಷ್ಣು  ಪರಮಾತ್ಮನ ವಿಗ್ರಹವಿರುವ ಮಂದಿರವನ್ನು ಆತನು (ರಾಜಾ ಪರಮರ್ದಿದೇವ) ಕಟ್ಟಿದನು. ಆ ವಿಗ್ರಹದ ಪಾದಗಳನ್ನು ಆತ ತನ್ನ ಶಿರದಿಂದ ಸದಾ ಸ್ಪರ್ಶಿಸುತ್ತಿದ್ದನು.’

 ‘ಶಿರದಲ್ಲಿ ಚಂದ್ರನನ್ನು ಧರಿಸಿದ ಪರಮಾತ್ಮನಿಗೂ, ಆತನು (ರಾಜ) ಶ್ವೇತ ಶಿಲೆಯಲ್ಲಿ ಒಂದು ಮಂದಿರ ಕಟ್ಟಿದನು. ಆ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ  ಶಿವನು ಬಹಳ ಸುಪ್ರೀತನಾಗಿ ತನ್ನ ವಾಸಸ್ಥಾನವಾದ ಕೈಲಾಸ ಪರ್ವತಕ್ಕೆ ಹಿಂತಿರುಗುವ ಯೋಚನೆಯನ್ನೇ ಮಾಡಲಿಲ್ಲ.’

 ‘ವಿಕ್ರಮ ಶಕೆಯ 1212ನೇ ವರ್ಷದ ಆಶ್ವಯುಜ ಮಾಸದ ಶುಕ್ಲ ಪಕ್ಷದ 5ನೇ ದಿನವಾದ ರವಿವಾರದಂದು ಈ ಶಾಸನ ಬರೆಯಲ್ಪಟ್ಟಿತು.’ ಮೇಲೆ ಉಲ್ಲೇಖಿಸಿದ ಶಾಸನವನ್ನು ಶ್ರೀ ಡಿ.ಜಿ.ಕಾಳೆಯವರ ‘ಖರ್ಜೂರವಾಹಕ ಅಥವ ವರ್ತಮಾನ ಖಜುರಹೊ’ ಪುಸ್ತಕದಲ್ಲಿ ಕಾಣಬಹುದು.

 ಕನ್ನಿಂಗ್‌ಹ್ಯಾಮನಿಂದ ಪತ್ತೆಯಾದ ಶಿಲಾಶಾಸನ ಈ ಪುಸ್ತಕದ 124ನೇ ಪುಟದಲ್ಲಿ ಲೇಖಕರು ಹೀಗೆನ್ನುತ್ತಾರೆ: ‘ಮೇಲಿನ ಶಾಸನ ಆಗ್ರಾ ಬಳಿಯ ಮೌಜಾ ಬಾತೇಶ್ವರದಲ್ಲಿ ದೊರೆತಿದ್ದು ಈಗ ಲಖ್ನೊ ವಸ್ತುಸಂಗ್ರಹಾಲಯದಲ್ಲಿದೆ. ಅದು ರಾಜಾ ಪರಮರ್ದಿದೇವನಿಂದ ವಿಕ್ರಮ ಶಕೆ 1212, ಅಶ್ವಿನ್ ಮಾಸ ಶುಕ್ಲ ಪಂಚಮಿ ಭಾನುವಾರದಿಂದ ಬರೆಯಲ್ಪಟ್ಟಿತು. 34 ಶ್ಲೋಕಗಳಿರುವ ಈ ಶಾಸನ ಚಾಂದ್ರತ್ರೇಯ ವಂಶದ ಮೂಲ ಹಾಗೂ ಅವರ ಪ್ರಮುಖ ರಾಜರ ಬಗ್ಗೆ ವರ್ಣಿಸುತ್ತದೆ. ಬಾತೇಶ್ರದ ಗುಡ್ಡವೊಂದರ ಬಳಿ ಸಿಕ್ಕಿದ ಈ ಶಾಸನವನ್ನು ಜನರಲ್ ಕನ್ನಿಂಗ್ ಹ್ಯಾಮನು ಲಖ್ನೊ ವಸ್ತುಸಂಗ್ರಹಾಲಯಕ್ಕೆ ಸಾಗಿಸಿದ. ಮುಸ್ಲಿಂ ಆಕ್ರಮಣಗಳ ಸಮಯದಲ್ಲಿ , ರಾಜಾ ಪರಮರ್ದಿದೇವನು ವಿಷ್ಣು ಹಾಗೂ ಈಶ್ವರರಿಗಾಗಿ ಕಟ್ಟಿದ ಸುಂದರವಾದ ಅಮೃತಶಿಲೆ ದೇವಾಲಯಗಳನ್ನು ಹಾಳುಗೆಡವಲಾಯಿತು. ಈ ಶಿಲಾಶಾಸನಗಳನ್ನು ಯಾರೋ ಚತುರ ವ್ಯಕ್ತಿ ಹೂತಿಟ್ಟಿದ್ದ. ಕ್ರಿ. ಶ. 1900 ರಲ್ಲಿ ಭೂ ಸಂಶೋಧನೆ ಮಾಡುತ್ತಿದ್ದಾಗ ಜನರಲ್ ಕನ್ನಿಂಗ್ ಹ್ಯಾಮ್ ಅದನ್ನು ಕಂಡುಹಿಡಿದನು.’

 ಈಗ ಆಗ್ರಾದ ಒಂದು ಭಾಗವಾಗಿರುವ ಬಾತೇಶ್ವರ್ ತಾಜಮಹಲಿಗೆ ಎರಡು ಮೈಲಿ ದೂರದಲ್ಲಿದೆ. ಮುಸ್ಲಿಂ ಆಕ್ರಮಣಕಾರರು ದಾಳಿ ಮಾಡಿದಾಗ ಅವರ ವಾಸಕ್ಕೆ ಅನುಕೂಲ ಮಾಡಲು ಈ ಶಿಲಾಸಾಶನ ಹಾಗೂ ಇತರ ಶಿಲೆಗಳನ್ನು ದೂರಕ್ಕೆ ಸಾಗಿಸಿದರೆಂಬ ಲೇಖಕರ ಹೇಳಿಕೆಯೂ ಸಂಭವನೀಯ.

 ಮೇಲೆ ಉಲ್ಲೇಖಿಸಿದ ವಿದ್ವಾನ್ ಲೇಖಕರು ಶಿಲಾಶಾಸನದಲ್ಲಿ ಸೂಚಿಸಲಾದ ಎರಡೂ ಕಟ್ಟಡಗಳನ್ನು ದೇವಾಲಯಗಳೆಂದು ಕರೆದಿದ್ದಾರೆ. ಆದರೆ ‘ವಿಷ್ಣೋ ಪ್ರಾಸಾದಃ’ ಎಂಬುದಕ್ಕೆ ‘ರಾಜನ ಅರಮನೆ’ಯೆಂದು ನಾವು ಅರ್ಥ ಕೊಡಬಯಸುತ್ತೇವೆ. ಏಕೆಂದರೆ ಅದು ವಿಷ್ಣು ದೇವಾಲಯವೆಂದು ಶಿಲಾಶಾಸನ ಹೇಳುವಂತಿದ್ದರೆ, ಆ ಕಟ್ಟಡದಲ್ಲಿ ವಿಷ್ಣುವಿನ ವಿಗ್ರಹವಿತ್ತು ಎಂದು ಅದು ಪುನಃ ಉಲ್ಲೇಖಿಸುವ ಅವಶ್ಯಕತೆಯಿರಲಿಲ್ಲ. ಆದರೂ ಇದು ಸಣ್ಣ ವಿಷಯ.

ಮುಸ್ಲಿಮರು ಅಮೃತಶಿಲೆಯಲ್ಲಿ ಯಾವ ಕಟ್ಟಡವನ್ನೂ ಕಟ್ಟಲಿಲ್ಲ

ವರ್ಷಗಳ ಹಿಂದೆ ಆಗ್ರಾದಲ್ಲಿ ಎರಡು ಕಟ್ಟಡಗಳನ್ನು ಕಟ್ಟಲಾಯಿತೆಂದೂ, ಅದರಲ್ಲಿ ಒಂದಾದರೂ ಅಮೃತಶಿಲೆಯದಾಗಿತ್ತೆಂದೂ ಶಿಲಾಶಾಸನ ಹೇಳುತ್ತದೆ. ಇಲ್ಲೇ ಅದರ ಮಹತ್ವವಿದೆ.

 ಜನರಲ್ ಕನ್ನಿಂಗ್‌ಹ್ಯಾಮನು ಚಾಂದ್ರತ್ರೇಯ (ಅಥವಾ ಚಾಂದೇಲ) ವಂಶದ ರಾಜರ ಎರಡು ಕಾಲಾನುಕ್ರಮಣಿಕೆಗಳನ್ನು ತಯಾರಿಸಿದ್ದಾನೆ. ಶ್ರೀ ಕಾಳೆಯವರು ಅದನ್ನು ತಮ್ಮ ಪುಸ್ತಕದ 140-141 ನೇ ಪುಟಗಳಲ್ಲಿ ಮುದ್ರಿಸಿದ್ದಾರೆ. ಅದರ ಪ್ರಕಾರ ರಾಜಾ ಪರಮರ್ದಿದೇವ ಕ್ರಿ. ಶ. 1165 ಅಥವ 1167ಕ್ಕೆ ಸೇರಿದವನು.

 ಭಾರತದಲ್ಲಿ ಮುಸ್ಲಿಮರೇ ಮೊದಲು ಅಮೃತಶಿಲೆ ಕಟ್ಟಡಗಳನ್ನು ಕಟ್ಟಿದರೆಂಬ ಕುರುಡು ಅಸಂಬದ್ಧ ವಾದವನ್ನು ಈ ಶಿಲಾಶಾಸನ ಅಲ್ಲಗಳೆಯುತ್ತದೆ. ಭಾರತದಲ್ಲಿನ ಮುಸ್ಲಿಂ ರಾಜರು ಕೆಂಪು ಶಿಲೆಯಲ್ಲಾಗಲಿ, ಅಮೃತ ಶಿಲೆಯಲ್ಲಾಗಲಿ ಒಂದಾದರೂ ಅರಮನೆ, ಕಾಲುವೆ, ಕೋಟೆ, ಗೋರಿ ಅಥವ ಮಸೀದಿಯನ್ನು ಕಟ್ಟಿಲ್ಲವೆಂದು ‘ತಾಜಮಹಲ್ ರಜಪೂತ ಅರಮನೆಯಾಗಿತ್ತು’ ಮತ್ತು ‘ಭಾರತೀಯ ಇತಿಹಾಸ ಸಂಶೋಧನೆಯ ಕೆಲವು ಭಾರಿ ತಪ್ಪುಗಳು’ ಪುಸ್ತಕದಲ್ಲಿ ಪ್ರಮಾಣಪಡಿಸಲಾಗಿದೆ. ಮುಸ್ಲಿಮರು ಹಿಂದೂ ಕಟ್ಟಡಗಳನ್ನು ವಶಪಡಿಸಿಕೊಂಡು ನಂತರ ಅವುಗಳನ್ನು ಬದಲಾಯಿಸಿದರು.

 ಬಾತೇಶ್ವರ ಶಾಸನದಲ್ಲಿ ಉಲ್ಲೇಖಿತವಾದ ಅಮೃತಶಿಲೆ ಹಾಗೂ ಕೆಂಪುಶಿಲೆಯ ಎರಡೂ ಕಟ್ಟಡಗಳು ಇನ್ನೂ ಆಗ್ರಾದಲ್ಲಿವೆಯೆಂದು ನಮ್ಮ ಅಭಿಪ್ರಾಯ. ಅವೇ ತಥಾಕಥಿತ ಎತ್ಮಾದುದ್ದೌಲ ಮತ್ತು ತಾಜಮಹಲ್ ಕಟ್ಟಡಗಳು.

 ಶಾಸನದಲ್ಲಿ ಹೇಳಿರುವ ರಾಜನ ಅರಮನೆಯೇ ಈಗಿನ ಎತ್ಮಾದುದ್ದೌಲ. ಚಂದ್ರಮೌಳೇಶ್ವರ ದೇವಸ್ಥಾನವೇ ತಾಜ್‌ಮಹಲ್.

ಮುಸ್ಲಿಮರು ವಾಸಿಸುತ್ತಿದ್ದ ಅರಮನೆಗಳೇನಾದವು ?

ಅರಮನೆಗಳಾಗಲಿ, ಇತರ ವಾಸಸ್ಥಾನಗಳಾಗಲಿ ಇಲ್ಲದೆ ಭಾರತದಲ್ಲಿ ಕೇವಲ ಅಸಂಖ್ಯಾತ ಮುಸ್ಲಿಮರ ಗೋರಿಗಳು, ಮಸೀದಿಗಳು ಇರಲು ಸಾಧ್ಯವೆಂದು ಭಾರತೀಯ ಇತಿಹಾಸಜ್ಞರನೇಕರು ನಂಬಿದ್ದಾರೆ. ಇದೇ ಒಂದು ದೊಡ್ಡ ತಪ್ಪು. ಚರಿತ್ರಕಾರರು ಎತ್ಮಾದುದ್ದೌಲನ ಗೋರಿಯ ಕಡೆ ಬೆಟ್ಟು ಮಾಡುತ್ತಾರೆ. ಆದರೆ ಈ ಸರದಾರ ಜೀವಂತವಾಗಿದ್ದಾಗ ಮಾತ್ರ ವಾಸಿಸುತ್ತಿದ್ದ ಅರಮನೆಗಳನ್ನು ತೋರಿಸದೆ, ಕೇವಲ ಆತನ ಗೋರಿಯಿದೆಯೆನ್ನುವುದು ಅರ್ಥಶೂನ್ಯ. ಎತ್ಮಾದುದ್ದೌಲನು ಮರಣಿಸಿದ ನಂತರ ಹೂಳಲ್ಪಟ್ಟನೆನ್ನಲಾದ ಕಟ್ಟಡದಲ್ಲೆ ಆತ ವಾಸಿಸುತ್ತಿದ್ದನೆಂಬುದು ನಮ್ಮ ವಿವರಣೆ. ಆ ಕಟ್ಟಡವನ್ನು ಹಿಂದುಗಳಿಂದ ಗೆದ್ದುಕೊಳ್ಳಲಾಗಿತ್ತು. ಅದೇ ಬಾತೇಶ್ವರ ಶಾಸನದಲ್ಲಿ ಸೂಚಿತವಾದ ರಾಜನ ಅರಮನೆ. ಏಕೆಂದರೆ ಅದರ ಗೋಡೆಗಳ ಮೇಲೆ ಆನಂದೋತ್ಸಾಹ ಆಚರಿಸುವ ಅನೇಕ ಚಿತ್ರಗಳನ್ನು ಕೆತ್ತಲಾಗಿದೆ.

ಮೂರ್ತಿಭಂಜಕರ ಕೃತ್ಯ

 ಈ ಎಲ್ಲ ಸಾಕ್ಷ್ಯಗಳ ಆಧಾರದ ಮೇಲೆ ಲಖ್ನೊ ವಸ್ತುಸಂಗ್ರಹಾಲಯದಲ್ಲಿನ ಶಿಲಾಶಾಸನದಲ್ಲಿ  ಉಲ್ಲೇಖಿಸಲಾದ ಚಂದ್ರಮೌಳೇಶ್ವರ ದೇವಸ್ಥಾನವೇ ಯಮುನಾ ನದಿ ತೀರದಲ್ಲಿರುವ ತಾಜಮಹಲ್ ಎಂದು ನಾವು ಹೇಳಬಹುದು. ಇಂದಿಗೆ 800 ವರ್ಷಗಳ ಹಿಂದೆ ಕ್ರಿ. ಶ. 1167 ರಾಜಾಪರಮರ್ದಿದೇವನು ಅದನ್ನು ಕಟ್ಟಿಸಿದ. ಕ್ರಿ. ಶ. 1206 ರಲ್ಲಿ ದೆಹಲಿಯಲ್ಲಿ ಮೂರ್ತಿಭಂಜಕ ಮುಸ್ಲಿಂ ಸುಲ್ತಾನರ ಆಡಳಿತ ಪ್ರಾರಂಭವಾದ ನಂತರ, ಆ ದೇವಾಲಯವನ್ನು ವಶಪಡಿಸಿಕೊಂಡು, ಅಪವಿತ್ರಗೊಳಿಸಿ ಮುಸ್ಲಿಂ ಅರಮನೆಯಾಗಿ ಮಾರ್ಪಡಿಸಲಾಯಿತು. ಸ್ವಾಭಾವಿಕವಾಗಿ ಶಿವನ ವಿಗ್ರಹವನ್ನು ನಾಶಗೊಳಿಸಿ ಬಿಸಾಡಲಾಯಿತು. ಮೊಗಲ ಬಾದಶಹ ಬಾಬರನ ಆತ್ಮಕಥೆಯನ್ನು ಓದಿದಾಗ ಈ ನಿರ್ಧಾರಕ್ಕೆ ನಾವು ಬರಬಹುದು. ತಾನು ಇಬ್ರಾಹಿಂ ಲೋದಿಯಿಂದ ವಶಪಡಿಸಿಕೊಂಡ ಆಗ್ರಾ ಅರಮನೆಯಲ್ಲಿ ವಾಸಿಸುತ್ತಿದ್ದುದಾಗಿಯೂ, ಆ ಅರಮನೆಯ ನಾಲ್ಕು ಮೂಲೆಗಳಲ್ಲಿ ಎತ್ತರವಾದ ಕಂಭಗಳಿದ್ದವೆಂದೂ, ಮಧ್ಯದಲ್ಲಿ ಗೋಪುರವಿತ್ತೆಂದೂ ಆತ ಬರೆದಿದ್ದಾನೆ. (ಆಂಗ್ಲ ಭಾಷಾಂತರ, ಸಂ. 2, ಪುಟ 251).

 1538ರಲ್ಲಿ ಬಾಬರನ ಮಗ ಹುಮಾಯೂನನು ಯುದ್ಧದಲ್ಲಿ ಸೋತು ಭಾರತವನ್ನು ಬಿಟ್ಟೋಡಿದಾಗ ಈ ಹಿಂದೂ ದೇವಾಲಯ ಪುನಃ ಹಿಂದುಗಳ ವಶವಾಯಿತು. ನಂತರ ಹುಮಾಯೂನನ ಪುತ್ರ ಅಕ್ಬರನು ಹೇಮುವನ್ನು ಸೋಲಿಸಿ ದೆಹಲಿ, ಆಗ್ರಾ, ಫತೇಪುರ ಸಿಕ್ರಿ ಹಾಗೂ ಸುತ್ತಮುತ್ತಲ ಪ್ರದೇಶವನ್ನು ಪುನರ್ವಶಪಡಿಸಿಕೊಳ್ಳ ಬೇಕಾಯಿತೆಂಬುದನ್ನು ಇಲ್ಲಿ ಜ್ಞಾಪಿಸಿಕೊಳ್ಳಬಹುದು.

 ಆ ಪ್ರದೇಶದ ಮೇಲೆ ಅಕ್ಬರನ ಅಧಿಪತ್ಯವಿದ್ದಿದ್ದರೂ, ತಾಜಮಹಲನ್ನು ಅಮರ್ (ಆಧುನಿಕ ಜಯಪುರ)ನ ರಜಪೂತ ರಾಜರ ವಶಕ್ಕೆ ಆತ ಬಿಟ್ಟುಕೊಡಬೇಕಾಯಿತು. ಕಾರಣವೆಂದರೆ ಆ ವಂಶ ಅಕ್ಬರನ ಅತ್ಯಂತ ಬಲಶಾಲಿ ಮಿತ್ರವಂಶವಾಗಿತ್ತು. ಅವರೊಡನೆ ಮೊಗಲವಂಶದ ವಿವಾಹ ಬಾಂಧವ್ಯವೂ ಇತ್ತು.

 ಕೊನೆಗೆ ಕ್ರಿ. ಶ. 1630ರಲ್ಲಿ  ಅರಮನೆಯಾಗಿ ಮಾರ್ಪಟ್ಟ ಈ ಹಿಂದು ದೇವಸ್ಥಾನವಾಗಿದ್ದ  ತಾಜಮಹಲನ್ನು ಜಯಪುರದ ರಾಜಾ ಜಯಸಿಂಗನಿಂದ ಮೊಗಲರು ವಶಪಡಿಸಿಕೊಂಡರು. ಷಾಜಹಾನನ ಜೀವನವೃತ್ತಾಂತವಾದ ಬಾದಶಹನಾಮಾ ಹೇಳುವಂತೆ, ಆ ಸಮಯದಲ್ಲಿ ಅದನ್ನು ಮಾನಸಿಂಗನ ಅರಮನೆಯೆಂದು ಕರೆಯುತ್ತಿದ್ದರು. ಆತನೇ ಅದರ ಕೊನೆಯ ಪ್ರಮುಖ ಮಾಲಿಕನಾಗಿದ್ದ. ಅದನ್ನು ‘ಇಮಾರತೆ ಆಲಿಶಾನ್(ಅತುಲ ವೈಭವದ ಕಟ್ಟಡ)ವ ಗುಂಬಜ್ (ಗೋಪುರದಿಂದ ಕೂಡಿತ್ತು)’ ಎಂದು ಬಾದಶಹನಾಮಾ ವರ್ಣಿಸುತ್ತದೆ. ಇದೇ ರೀತಿಯ ವರ್ಣನೆ ಬಾತೇಶ್ವರ ಶಿಲಾಶಾಸನದಲ್ಲೂ  ದೊರೆಯುತ್ತದೆ.

 ಹಿಂದೂ ಶೈವ ದೇವಸ್ಥಾನದಿಂದ ಮುಸ್ಲಿಂ ರಾಜರ ನಿವಾಸ ಸ್ಥಾನ, ನಂತರ ಹಿಂದೂ ರಾಜರ ಅರಮನೆ, ಪುನಃ ಮುಸ್ಲಿಂ ಗೋರಿ – ಇದು ತಾಜಮಹಲಿನ ಕಥೆ.

ಚಂದ್ರಮೌಳೇಶ್ವರ ದೇವಸ್ಥಾನವೇ ತಾಜಮಹಲ್ ಎನ್ನುವುದಕ್ಕೆ ಇನ್ನೂ ಅನೇಕ ಕಾರಣಗಳಿವೆ.

 1. ಶಾಸನದಲ್ಲಿ ಹೇಳಿರುವಂತೆ ಅದು ಬಿಳಿ ಅಮೃತಶಿಲೆಯಲ್ಲಿ ಕಟ್ಟಲ್ಪಟ್ಟಿದೆ.
 2. ಗೋಪುರದ ಮೇಲೆ ಚಂದ್ರಮೌಳೇಶ್ವರನ ಚಿಹ್ನೆಯಾದ ಚಂದ್ರನಿದ್ದಾನೆ. ಚಂದ್ರನನ್ನು ತಲೆಯ ಮೇಲೆ ಹೊತ್ತವನ ದೇವಾಲಯದ ತಲೆಯ ಮೇಲೂ ಚಂದ್ರನಿರುವುದು ಸೂಕ್ತ.
 3. ಕಟ್ಟಡ ಎಷ್ಟು ಸುಂದರವಾಗಿತ್ತೆಂದರೆ ಭಗವಾನ್ ಈಶ್ವರ ಕೈಲಾಸ ಪರ್ವತಕ್ಕೆ ಹಿಂದಿರುಗುವ ಯೋಚನೆಯನ್ನೇ ಮಾಡಲಿಲ್ಲವಂತೆ.
 4. ತಾಜಮಹಲ್ ತೋಟದಲ್ಲಿ ‘ಬೇಲ್’, ಹರಶೃಂಗಾರ ಮುಂತಾದ ವೃಕ್ಷಗಳಿದ್ದವೆಂದು ‘ದಿ ಟಾಜ್ ಎಂಡ್ ಇಟ್ಸ್ ಎನ್‌ವೈರನ್‌ಮೆಂಟ್ಸ್’ ಪುಸ್ತಕದಲ್ಲಿ  ಮೌಲ್ವಿ  ಮೊಹಿನುದ್ದೀನ್ ಅಹ್ಮದ್ ಬರೆದಿದ್ದಾರೆ. ಇವೆಲ್ಲ ಹಿಂದುಗಳಿಗೆ ಪವಿತ್ರವಾದ ಹಾಗೂ ಶಿವನಿಗೆ ಪ್ರಿಯವಾದ ವೃಕ್ಷಗಳು.
 5. ಷಾಜಹಾನ್ ಮತ್ತು ಅತನ ಪತ್ನಿ ಅರ್ಜುಮಂದ್ ಬಾನು ಬೇಗಂರ ಗೋರಿಗಳಿವೆಯೆಂದು ನಂಬಲಾಗುವ ತಾಜಮಹಲಿನ ಮಧ್ಯಗೃಹದ ಸುತ್ತಲೂ ಇರುವ ಎಂಟು ಚಚ್ಚೌಕದ ಕೊಠಡಿಗಳು, ಹಿಂದು ಪದ್ಧತಿಯಂತೆ ಭಕ್ತರ ಓಡಾಟಕ್ಕೆ ಅನುಕೂಲವಾಗಿ ವೃತ್ತಾಕಾರದಲ್ಲಿವೆ.
 6. ಭಕ್ತರು ಈ ಕೊಠಡಿಗಳ ಮೂಲಕ ಹಾಯ್ದಂತೆ, ಅವುಗಳ ದೊಡ್ಡದಾದ ಗಾಳಿ ಕಿಟಕಿಗಳ ಮೂಲಕ, ಚಂದ್ರಮೌಳೇಶ್ವರನ ಚಿಹ್ನೆಯಿರುವ ಅಷ್ಟಕೋನಾಕೃತಿಯ ಕೇಂದ್ರಗೃಹದ ದೃಶ್ಯ ಕಾಣಿಸುತ್ತದೆ.
 7. ತಾಜಮಹಲಿನ ಕೇಂದ್ರಗೃಹದ ಮುಖ್ಯ ಗೋಪುರದೊಳಗಿನ ಶಬ್ದಸಂಬಂಧಿ ವಿನ್ಯಾಸಗಳಿಗೆ ಒಂದು ಉದ್ದೇಶವಿದೆ. ಶಂಖಧ್ವನಿ, ಭೇರಿನಾದ, ಘಂಟಾಘೋಷಗಳ ನಡುವೆ ಶಿವನ ತಾಂಡವ-ನೃತ್ಯದ ಪೂಜೆಯ ಸಂದರ್ಭಕ್ಕೆ ಈ ವಿನ್ಯಾಸ ಅತ್ಯಂತ ಸೂಕ್ತವಾದುದು. ಮಧ್ಯಕಾಲದ ಹಿಂದೂ ಕಟ್ಟಡಗಳಲ್ಲಿ ಈ ರೀತಿಯ ರಚನೆಗಳನ್ನು ನೋಡಬಹುದು.
 1. ಈಶ್ವರನ ವಿಗ್ರಹದ ಮೇಲೆ ತೊಟ್ಟಿಕ್ಕುವಂತೆ ನೀರಿನ ಕುಂಭ ತೂಗಿಬಿಡಲು ಶಿವದೇವಾಲಯಗಳಲ್ಲಿ ಎತ್ತರದ ಗೋಪುರ ಕಟ್ಟುವುದು ವಾಡಿಕೆ.
 2. ತಾಜಮಹಲಿನಲ್ಲಿ ಮೊದಲು ಚಿನ್ನದ ಕಟಕಟೆಗಳು ಮತ್ತು ಬೆಳ್ಳಿಯ ಬಾಗಿಲುಗಳು ಇದ್ದುವೆಂದೂ ಮೌಲ್ವಿ ಮೊಯಿನದ್ದೀನರ ಪುಸ್ತಕದಲ್ಲಿದೆ. ಇವು ಈಗಿನ ಕಾಲದಲ್ಲೂ ಹಿಂದೂ ದೇವಾಲಯಗಳ ವೈಶಿಷ್ಟ್ಯಗಳು.
 3. ಕೆಳಗಿರುವ ಗೋರಿಯ ಮೇಲೆ ಮೇಲಿನ ಗೋಪುರದ ಮೂಲಕ ಮಳೆ ನೀರಿನ ಹನಿ ಬೀಳುತ್ತದೆಂದು ಹೇಳುತ್ತಾರೆ. ಶಿವಮೂರ್ತಿಯ ಮೇಲೆ ನೀರು ತೊಟ್ಟಿಕ್ಕುವ ಹಿಂದೂ ವ್ಯವಸ್ಥೆಗೆ ಈ ರೀತಿಯ ತಿರುವು ಕೊಡಲಾಗಿದೆ.
 4. ತಾಜಮಹಲ್ ಕಟ್ಟಡ ಸಮೂಹದಲ್ಲಿ 6 ಕಡೆ ‘ಬಜಾರ್’ ನಡೆಯುತ್ತಿತ್ತೆಂದು ಟಾವೆರ್ನಿಯರ್ ಬರೆಯುತ್ತಾರೆ. ದೇವಾಲಯಗಳ ಸುತ್ತಲೂ ‘ಬಜಾರ್’ ಮತ್ತು ಜಾತ್ರೆ ನಡೆಸುವುದು ಹಿಂದಿನಿಂದ ಬಂದ ಹಿಂದೂ ಪದ್ಧತಿ.
 5. ತಾಜಮಹಲ್‌ನಲ್ಲಿ ‘ನಕ್ಕರ್ ಖಾನಾ’ (ಭೇರಿಗೃಹ) ಇದೆ. ಪೂಜಾ ಸಮಯದಲ್ಲಿನ ಸಂಗೀತಕ್ಕೆ ಇದು ಹಿಂದೂ ದೇವಾಲಯಗಳಿಗೆ ಅತ್ಯಾವಶ್ಯಕ.
 6. ಕಮಾನುಗಳಿಂದ ಕೂಡಿದ ಅಸಂಖ್ಯಾತ ಮೊಗಸಾಲೆಗಳು, ಮಂಟಪಗಳು, ವಿಶಾಲ ಅಂಗಳಗಳು ಇವೆಲ್ಲವನ್ನೂ ನಾವು ತಾಜಮಹಲಿನಲ್ಲಿ ಕಾಣಬಹುದು. ಭಾರಿ ಭಕ್ತಸಮೂಹಕ್ಕೆ ಸ್ಥಳಾವಕಾಶ, ಅನ್ನ ಸಂತರ್ಪಣೆ ಮುಂತಾದ ಕಾರ್ಯಕ್ರಮಗಳು, ಧಾರ್ಮಿಕ ಪ್ರವಚನಗಳು, ಜಾತ್ರೆಗಳು ಮುಂತಾದುವನ್ನು ದೃಷ್ಟಿಯಲ್ಲಿಟ್ಟುಕೊಂಡು ಇವನ್ನು ರಚಿಸಲಾಗಿದೆ.
 7. ಕಾಶಿಯಲ್ಲಿರುವ ಪ್ರಖ್ಯಾತ ಶಿವ ದೇವಾಲಯವಾಸ ವಿಶ್ವನಾಥ ಮಂದಿರದಲ್ಲಿರುವಂತೆ ಇಲ್ಲಿಯೂ ಕೆಂಪುಕಲ್ಲಿನ ದೊಡ್ಡ ದೊಡ್ಡ ಗೋಡೆಗಳಿವೆ.
 8. ಮನೂಚಿಯ ‘ಸ್ಟೋರಿಯ ಡೋ ಮೋಗೋರ್’ ನಲ್ಲಿ ಕೊಡಲ್ಪಟ್ಟ ಹಿಂದೂ ದೇವಾಲಯಗಳ ಕಟ್ಟಡ ಯೋಜನೆ (ಸಂ. 3, ಪುಟ 8) ತಾಜಮಹಲಿಗೆ ತುಂಬ ಹೋಲುತ್ತದೆ.

 

 

 

   

Leave a Reply