ಮೃತ ಇತಿಹಾಸ ಮತ್ತು ಜೀವಂತ ಇತಿಹಾಸ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 30.4.2016

-ರಮೇಶ್‍ ಪತಂಗೆ

‘ವಿಖ್ಯಾತ’ ಇತಿಹಾಸಕಾರ ರಾಮಚಂದ್ರ ಗುಹಾ ಅವರ ಲೇಖನಗಳು ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ ದೈನಿಕದಲ್ಲಿ ಪ್ರಕಟವಾಗುತ್ತಿರುತ್ತವೆ. 21 ಏಪ್ರಿಲ್ 2016ರ ಸಂಚಿಕೆಯಲ್ಲಿ ‘ವ್ಹಿಚ್ ಅಂಬೇಡ್ಕರ್’ಎಂಬ ಲೇಖನ ಪ್ರಕಟವಾಗಿದೆ. ಈ ಲೇಖನದಲ್ಲಿ ಏಪ್ರಿಲ್ 14ರ ಆರ್ಗನೈಸರ್ ಸಂಚಿಕೆಯ ಲೇಖನಗಳ ಉಲ್ಲೇಖವಿದೆ. ಈ ಸಂಚಿಕೆಯಲ್ಲಿ ಭಾರತರತ್ನ ಡಾ. ಬಾಬಾಸಾಹೇಬ ಅಂಬೇಡ್ಕರರ ಕುರಿತು ಅನೇಕ ಲೇಖನಗಳು ಪ್ರಕಟವಾಗಿವೆ. ರಾಮಚಂದ್ರ ಗುಹಾ ಅವರು ಅದರಲ್ಲಿನ ಅನೇಕ ಲೇಖನಗಳ ಶೀರ್ಷಿಕೆಗಳನ್ನು ತಮ್ಮ ಲೇಖನದಲ್ಲಿ ನೀಡಿದ್ದಾರೆ. ಶೀರ್ಷಿಕೆ ನೀಡಿದ್ದಾರೆ ಎಂದರೆ ಲೇಖನಗಳನ್ನು ಓದಿದ್ದಾರೆಂದು ನಾವು ಅರ್ಥೈಸೋಣ, ಆದರೆ ಇದು ನಿಜವೇ ಎಂದು ರಾಮಚಂದ್ರ ಗುಹಾರಿಗೇ ಗೊತ್ತು.
ರಾಮಚಂದ್ರ ಗುಹಾ ಅವರಿಗೆ ಆರ್ಗನೈಸರ್ ಈ ರೀತಿಯಾಗಿ ಅಂಬೇಡ್ಕರರನ್ನು ಶ್ಲಾಘಿಸಿದ್ದು ಇಷ್ಟವಾಗಿಲ್ಲ. ವಿಖ್ಯಾತ ಇತಿಹಾಸಕಾರರಾಗಿದ್ದರಿಂದ ಅವರು ಇತಿಹಾಸದಲ್ಲಿ ಮುಳುಗು ಹಾಕಿ, ಮೃತ ಇತಿಹಾಸವನ್ನು ಕೆದಕಿ ತೆಗೆದರು. 1949 ಮತ್ತು 50ರಲ್ಲಿ ಆರ್ಗನೈಸರ್‌ನಲ್ಲಿ ಭಾರತದ ಸಂವಿಧಾನ ಮತ್ತು ಹಿಂದು ಕೋಡ್ ಬಿಲ್ ಬಗ್ಗೆ ಏನೇನು ಬರೆಯಲಾಗಿತ್ತೆಂಬ ತುಣುಕುಗಳನ್ನು ಅವರು ನೀಡಿದ್ದಾರೆ. ಹಾಗೆಯೇ ಆರ್ಗನೈಸರ್‌ನ ಕೆಲವು ಅವತರಣಿಕೆಗಳನ್ನೂ ಅವರು ನೀಡಿದ್ದಾರೆ. ಇದರ ಸಾಮಾನ್ಯ ಮಥಿತಾರ್ಥವೆಂದರೆ, ದೇಶದ ಸಂವಿಧಾನದಲ್ಲಿ ಭಾರತೀಯ ಏನೂ ಇಲ್ಲ, ಭಾರತೀಯ ರಾಜ್ಯಶಾಸ್ತ್ರದ ಉಲ್ಲೇಖ ಅದರಲ್ಲೇನೂ ಇಲ್ಲ, ಹಾಗೆಯೇ ಹಿಂದು ಕೋಡ್ ಬಿಲ್‌ಅನ್ನು ಅಮೆರಿಕನ್ ಮತ್ತು ಯುರೋಪಿನ ಕಾಯ್ದೆಗಳನ್ನು ನಕಲು ಮಾಡಿ ಮಾಡಲಾಗಿದೆ, ವಿಚ್ಛೇದನೆಯ ವಿಷಯವು ಭಾರತೀಯ ಕುಟುಂಬ ವ್ಯವಸ್ಥೆಯನ್ನು ನಾಶಗೊಳಿಸುವಂತಹದ್ದು, ಸಂಪತ್ತಿನ ಅಧಿಕಾರದ ವಿಷಯದಲ್ಲಿ ಸೋದರ ಮತ್ತು ಸೋದರಿಯರಲ್ಲಿ ಕಲಹವೆಬ್ಬಿಸುವಂತಹದ್ದು ಇತ್ಯಾದಿ.
ತಮ್ಮ ಅಂಶಗಳನ್ನು ಮಂಡಿಸಲು ಪುರಾವೆಗಳನ್ನು ಸಂಗ್ರಹಿಸುವುದು, ವಿಖ್ಯಾತ ಇತಿಹಾಸಕಾರರ ವೈಶಿಷ್ಟ್ಯವಾಗಿದೆ. ಆರ್ಗನೈಸರ್‌ನ ಈ ಪುರಾವೆಗಳು ನಿಜವಾಗಿಯೂ ಅಸಲಿಯೇ ಎಂದು ಪರಿಶೀಲಿಸಿ ನೋಡಬೇಕು. ಹಾಗೆಯೇ ಈ ಲೇಖನ ಬರೆದವರು ಸಂಘದಲ್ಲಿ ಯಾವ ಸ್ಥಾನ ಹೊಂದಿದ್ದರು ? ಅವರು ಸಂಘದ ವಕ್ತಾರರಾಗಿದ್ದರೇ ? ಎಂಬುದನ್ನೂ ಪರಿಶೀಲಿಸಿ ನೋಡಬೇಕು. ಸಂಘವನ್ನು ಟೀಕಿಸುವಾಗ ವಿಖ್ಯಾತ ಇತಿಹಾಸಕಾರರು ಏನು ಬರೆಯುವರೆಂಬ ನಿಯಮವೇನೂ ಇಲ್ಲ. ಸಂಘಸಂಸ್ಥಾಪಕ ಡಾ. ಹೆಡಗೇವಾರರು ಮತ್ತು ಮುಸೋಲಿನಿ ಇವರ ಭೇಟಿಯಾಗಿತ್ತು ಹಾಗೂ ಮುಸೋಲಿನಿಯವರಿಂದ ಡಾ. ಹೆಡಗೇವಾರರು ಸಂಘದ ಕಲ್ಪನೆಯನ್ನು ಪಡೆದರು, ಎಂದು ಒಬ್ಬರು ಶೋಧನೆ ಮಾಡಿದರು. ಡಾ. ಹೆಡಗೇವಾರರು ಎಂದೂ ದೇಶ ಬಿಟ್ಟು ಹೊರಗೆ ಹೋಗಿರಲಿಲ್ಲವೆಂದು ಅವರ ಚರಿತ್ರೆ ಹೇಳುತ್ತದೆ. ಪರಿಸ್ಥಿತಿ ಹೀಗಿರುವುದರಿಂದ, ರಾಮಚಂದ್ರ ಗುಹಾ ಅವರು ನೀಡಿದ ಪುರಾವೆಯು ಅಸಲಿಯೆಂದು ವಾದದ ಮಟ್ಟಿಗೆ ಇಟ್ಟುಕೊಳ್ಳೋಣ.
ಆದರೆ ಈ ಅಸಲಿ ಪುರಾವೆಯು ಮೃತ ಇತಿಹಾಸಕ್ಕೆ ಜಮೆಯಾಗುತ್ತದೆ.ಡಾ. ಬಾಬಾಸಾಹೇಬ ಅಂಬೇಡ್ಕರ್ ಮತ್ತು ಭಾರತದ ಸಂವಿಧಾನ ಇವರಿಬ್ಬರ ಬಗ್ಗೆಯೂ ಆಗ ಎಂದರೆ 1949-50ರಲ್ಲಿ ಬಹು ಕಟುವಾದ ಟೀಕೆಗಳಾಗಿವೆ. ಮೊದಲು ಸಂವಿಧಾನದ ವಿಷಯ ತೆಗೆದುಕೊಳ್ಳೋಣ. ಭಾರತದ ಸಂವಿಧಾನವು 1935ರ ವರ್ಷದ ಕಾಯ್ದೆಯ ನಕಲಾಗಿದೆ. ಅದರಲ್ಲಿ ಭಾರತೀಯತೆ ಏನೂ ಇಲ್ಲ- ಅಲ್ಲಲ್ಲಿಂದ ಅದಕ್ಕೆ ಎರವಲು ಪಡೆಯಲಾಗಿದೆ. ಸಂವಿಧಾನದ ಕುರಿತು ಇಂತಹ ಅನೇಕ ಆಕ್ಷೇಪಗಳನ್ನು ವ್ಯಕ್ತಪಡಿಸಲಾಯಿತು. ಅದಕ್ಕೆ ಬಾಬಾಸಾಹೇಬರು ಬಹು ತರ್ಕಬದ್ಧವಾಗಿ ಉತ್ತರಿಸಿದ್ದಾರೆ, ‘‘ಕಮ್ಯುನಿಸ್ಟ್ ಮತ್ತು ಸಮಾಜವಾದಿ ಪಕ್ಷ ಇವೆರಡು ಘಟಕಗಳಿಂದ ಸಂವಿಧಾನದ ಕುರಿತು ಭಾರೀ ಪ್ರಮಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗುತ್ತಿದೆ. ಅವರು ಸಂವಿಧಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದೇಕೆ ? ಸಂವಿಧಾನವು ನಿಜವಾಗಿಯೂ ಕೆಟ್ಟದ್ದೆಂದು ಅದರ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಯೇ ? ಖಂಡಿತವಾಗಿಯೂ ಹಾಗಲ್ಲವೆಂದು ನಾನು ಹೇಳುವೆ. ಕಮ್ಯುನಿಸ್ಟ್ ಪಕ್ಷಕ್ಕೆ ಕಾರ್ಮಿಕರ ಸರ್ವಾಧಿಕಾರ ತತ್ವವನ್ನು ಅವಲಂಬಿಸಿದ ಸಂವಿಧಾನ ಬೇಕು. ಈ ಸಂವಿಧಾನವು ಸಂಸದೀಯ ಪ್ರಜಾತಂತ್ರವನ್ನು ಅವಲಂಬಿಸಿರುವುದರಿಂದ ಅವರು ವಿರೋಧಿಸುತ್ತಿದ್ದಾರೆ. ಸಮಾಜವಾದಿಗಳಿಗೆ ಎರಡು ಸಂಗತಿಗಳು ಬೇಕು. ಮೊದಲನೆಯದೆಂದರೆ, ಅವರೇನಾದರೂ ಅಧಿಕಾರಕ್ಕೇರಿದರೆ ಪರಿಹಾರಧನ ನೀಡದೆಯೇ ಖಾಸಗಿ ಸಂಪತ್ತಿನ ರಾಷ್ಟ್ರೀಕರಣ ಅಥವಾ ಸಮಾಜೀಕರಣ ಮಾಡಲು ಸಂವಿಧಾನವು ಅವರಿಗೆ ಸ್ವಾತಂತ್ರ್ಯ ನೀಡಲೇಬೇಕು. ಸಮಾಜವಾದಿಗಳಿಗೆ ಬೇಕಾದ ಇನ್ನೊಂದು ಸಂಗತಿಯೆಂದರೆ, ಸಂವಿಧಾನದ ಮೂಲಭೂತ ಅಧಿಕಾರಗಳು ನಿರಪೇಕ್ಷ ಹಾಗೂ ಯಾವುದೇ ನಿರ್ಬಂಧಗಳಿಲ್ಲದೆ ಇದ್ದು, ಅವರ ಪಕ್ಷವು ಒಂದು ವೇಳೆ ಅಧಿಕಾರ ಗಳಿಸಲು ವಿಫಲವಾದಲ್ಲಿ, ಅದರಿಂದಾಗಿ ಕೇವಲ ಅನಿರ್ಬಂಧ ಟೀಕಿಸುವುದಲ್ಲದೆ, ರಾಜ್ಯ ಉರುಳಿಸುವ ಸಾತಂತ್ರ್ಯವೂ ಅವರಿಗೆ ಬೇಕಾಗಿದೆ.’’
ರಾಮಚಂದ್ರ ಗುಹಾ ಅವರು ಎಡ ವಿಚಾರಸರಣಿಯವರಾಗಿದ್ದು ಸಮಾಜವಾದಿ ಪಕ್ಷ ಮತ್ತು ಕಮ್ಯುನಿಸ್ಟರು ಸಂವಿಧಾನದ ಬಗ್ಗೆ ಆಕ್ಷೇಪವೆತ್ತಿರುವುದನ್ನು ತಮ್ಮ ಅನುಕೂಲದಂತೆ ಹೇಳುತ್ತಿಲ್ಲ. ವಿಷಯ ಓದಲು ಕಟುವೆನಿಸಿದ್ದರೂ, ಆರ್ಗನೈಸರ್ ಹಾಗೂ ಅದರಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಬಾಬಾಸಾಹೇಬರು ಗಮನಿಸಲೂ ಸಿದ್ಧರಿಲ್ಲ, ಅವುಗಳಿಗೆ ಅಷ್ಟೇನೂ ಮಹತ್ವ ನೀಡಲೂ ಸಿದ್ಧರಿಲ್ಲ. ಒಂದು ಅರ್ಥದಲ್ಲಿ ಇದೆಲ್ಲ ಮೃತ ಇತಿಹಾಸವಾಗಿದೆ. ಸತ್ತ ಶವಗಳನ್ನು ಅಗೆದು ತೆಗೆಯುವುದರಲ್ಲೇನೂ ಅರ್ಥವಿಲ್ಲ.
ಒಂದು ಕಾಲದಲ್ಲಿ ನಿಮ್ಮ ಅಭಿಪ್ರಾಯ ಹೀಗಿತ್ತು, ಈಗೇಕೆ ಬದಲಾಯಿಸಿದೆ? ಡಾ. ಅಂಬೇಡ್ಕರರ ವಿಷಯದಲ್ಲಿ ನಿಮ್ಮ ಅಭಿಪ್ರಾಯವೇಕೆ ಬದಲಾಯಿಸಿದೆ ? ಎಂದು ಕೇಳಲು ರಾಮಚಂದ್ರ ಗುಹಾ ಉದ್ದೇಶಿಸಿದ್ದಾರೆ. ಭೂತಕಾಲೀನ ಅಭಿಪ್ರಾಯಗಳು ಮತ್ತು ನಿಲುವುಗಳಿಗೆ ಅಂಟಿಕೊಳ್ಳುವುದು ಕಮ್ಯುನಿಸ್ಟರ ಕೆಲಸ. ಆದರೆ ಯಾವುದು ಕಾಲಾನುರೂಪ ಬದಲಾಯಿಸಬೇಕೋ, ಜೀವಂತ ಸಂಘಟನೆಯೆಂದು ವಿಕಾಸಗೊಳ್ಳಬೇಕೋ, ಅದು ಮೃತ ಇತಿಹಾಸವನ್ನು ಅಪ್ಪಿಕೊಂಡಿರಲು ಸಾಧ್ಯವಿಲ್ಲ; ಅದರೆದುರು ಜೀವಂತ ವರ್ತಮಾನವಿರುತ್ತದೆ, ಜೀವಂತ ವರ್ತಮಾನ ಇತಿಹಾಸವಿರುತ್ತದೆ. ರಾಷ್ಟ್ರೀಯ ಸಮಸ್ಯೆಗಳ ಬಗ್ಗೆಯೂ ಅಭಿಪ್ರಾಯಗಳು ಆಯಾ ಕಾಲಖಂಡಗಳ ಸಂತಾನವಾಗಿರುತ್ತವೆ. ಇಂತಹ ಅಭಿಪ್ರಾಯಗಳನ್ನು ಮಂಡಿಸುವವರ ಅದೆಷ್ಟು ಕಲ್ಪನಾಶಕ್ತಿಯಿದೆಯೋ, ಅದೆಷ್ಟು ತಿಳಿವಳಿಕೆಯಿದೆಯೋ ಮತ್ತು ಸಮಸ್ಯೆಗಳ ಸಾದ್ಯಂತ ಜ್ಞಾನವಿದೆಯೋ, ಎಂಬುದರ ಮೇಲೆ ಅವರ ಅಭಿಪ್ರಾಯಗಳು ಅವಲಂಬಿಸಿರುತ್ತವೆ. ಕಾಲದ ಸಂದರ್ಭದಲ್ಲಿ ಆ ಅಭಿಪ್ರಾಯಗಳು ಯೋಗ್ಯವಿರುತ್ತವೆ. ಉದಾ- ಹಿಂದು ಕೋಡ್ ಬಿಲ್‌ಅನ್ನು ಕಾಂಗ್ರೆಸ್ಸಿನ ಎಲ್ಲ ನಾಯಕರೂ ವಿರೋಧಿಸಿದ್ದರು. ಅದಕ್ಕೆ ಪಂ. ನೆಹರೂ ಮಾತ್ರ ಅಪವಾದವಾಗಿದ್ದರು. ಭಾರತದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರಪ್ರಸಾದರೂ ಆ ಬಿಲ್‌ಗೆ ವಿರುದ್ಧವಾಗಿದ್ದರು, ಅವರು ವಿರೋಧವನ್ನು ವ್ಯಕ್ತಪಡಿಸಿದ್ದರು. ಸರ್ದಾರ್ ವಲ್ಲಭಭಾಯಿ ಪಟೇಲರು ಈ ಬಿಲ್‌ಗೆ ಅನುಕೂಲವಾಗಿರಲಿಲ್ಲ. 1952ರಲ್ಲಿ ಚುನಾವಣೆಯಿತ್ತು. ಆ ಬಿಲ್‌ಅನ್ನು ಹಾಗಿದ್ದಂತೆಯೇ ಅಂಗೀಕರಿಸಿದ್ದರೆ ಹಿಂದುಗಳು ತಮಗೆ ಮತ ನೀಡಲಾರರು ಎಂಬ ಭೀತಿಯನ್ನು ಕಾಂಗ್ರೆಸ್ಸಿನ ಹಿರಿಯ ನಾಯಕರು ನೆಹರೂರೊಡನೆ ವ್ಯಕ್ತಪಡಿಸಿದರು. ಹೀಗಾಗಿ ಹಿಂದು ಕೋಡ್ ಬಿಲ್ ಬದಿಗೆ ಸರಿಯಿತು. ಇದು ಇತಿಹಾಸವಾಗಿದ್ದು , ಡಾ. ಅಂಬೇಡ್ಕರರ ಯಾವುದೇ ಅಧಿಕೃತ ಚರಿತ್ರೆಯಲ್ಲಿ ಇದನ್ನು ಓದಬಹುದು. ಆ ಕಾಲದ ಪ್ರಭಾವಕ್ಕೆ ಒಳಗಾಗಿ ಆರ್ಗನೈಸರ್‌ನ ಲೇಖಕರು ವಿರೋಧಿಸಿದ್ದರೆ ಅದು ಆ ಕಾಲದ ಮಟ್ಟಿಗೆ ಸರಿಯೆಂದೇ ಹೇಳಬಹುದು. ಇಂದು ಅದನ್ನು ಸಮರ್ಥಿಸಲು ಸಾಧ್ಯವಿಲ್ಲ, ಆ ನಿಲುವು ಸಮರ್ಪಕವೆಂದೂ ಹೇಳಲಾಗದು. ಪರಿಸ್ಥಿತಿಗೆ ಅನುಸಾರವಾಗಿ ನಿಲುವನ್ನು ಬದಲಾಯಿಸಬೇಕಾಗುತ್ತದೆ.
ಬಾಬಾಸಾಹೇಬ ಅಂಬೇಡ್ಕರರು ಈ ಕುರಿತು ಹೇಳುವುದು ಬಹು ಮಹತ್ವದ್ದಾಗಿದ್ದು, ವಿಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಅವರು ಅದನ್ನು ಗಮನಿಸಬೇಕು. 25 ನವೆಂಬರ್ 1949ರ ಸಂವಿಧಾನ ಸಮಿತಿಯೆದುರು ತಮ್ಮ ಕೊನೆಯ ಭಾಷಣದಲ್ಲಿ ಬಾಬಾಸಾಹೇಬರು ಒಂದು ಕಡೆ ಅಮೆರಿಕದ ಮುತ್ಸದ್ದಿ ಜೆಫರ್ಸನ್ ಅವರ ಮಾತನ್ನು ಉದ್ಧರಿಸಿದ್ದಾರೆ. ಜೆಫರ್ಸನ್ ಅವರ ವಾಕ್ಯ ಹೀಗಿದೆ, ‘‘ಪ್ರತಿಯೊಂದು ಪೀಳಿಗೆಯೂ, ಬಹುಸಂಖ್ಯಾತರ ಇಚ್ಛೆಯಂತೆ ಸ್ವತಃ ಬದ್ಧತೆ ಹೊಂದುವ ಅಧಿಕಾರವಿರುವ ಒಂದು ಸ್ವತಂತ್ರ ರಾಷ್ಟ್ರದಂತಿದೆ; ಮುಂದಿನ ಪೀಳಿಗೆಯನ್ನು ಯಾರೂ ಬದ್ಧತೆಗೆ ಒಳಪಡಿಸಲಾರರು, ಇತರ ರಾಷ್ಟ್ರದ ಜನರನ್ನು ಹೇಗೆ ಬದ್ಧತೆಗೆ ಒಳಪಡಿಸಲಾಗದೋ ಹಾಗೆ.’’ ಆದ್ದರಿಂದ ಮೃತ ಇತಿಹಾಸದ ಪೀಳಿಗೆಯ ಅಭಿಪ್ರಾಯಗಳು ಜೀವಂತ ಇತಿಹಾಸದ ಪೀಳಿಗೆಯನ್ನು ಬದ್ಧತೆಗೆ ಒಳಪಡಿಸಲು ಸಾಧ್ಯವಿಲ್ಲ. ಅವರ ಅಭಿಪ್ರಾಯಗಳಿದ್ದವು, ಅವರ ತಿಳಿವಳಿಕೆಯ ಇತಿಮಿತಿಯಿಂದ ಅವು ಬಾಧಿತವಾಗಿದ್ದವು, ಎಂದಷ್ಟೇ ನಾವು ಹೇಳಬಹುದು. ಇಂದು ನಮ್ಮ ಜ್ಞಾನವು ಅದನ್ನು ಮೀರಿ ವಿಸ್ತಾರಗೊಂಡಿದ್ದು, ಸ್ವಲ್ಪ ವ್ಯಾಪಕತೆ ಬಂದಿದೆ, ಹೀಗಾಗಿ ನಮ್ಮ ಅಭಿಪ್ರಾಯಗಳು ಸ್ವಲ್ಪ ಭಿನ್ನವಾಗಿವೆ. ಡಾ. ಬಾಬಾಸಾಹೇಬರ ವಾಕ್ಯವನ್ನು ಪುನಃ ಹೇಳುವುದಾದರೆ ‘‘ಭಾವೀ ಪೀಳಿಗೆಗೆ ಬದಲಾಯಿಸಲು ಶಕ್ಯವಾಗದಂತಹ ಕಾಯ್ದೆಗಳನ್ನು ಮಾಡಿ, ಅವನ್ನು ಅವುಗಳ ಮೇಲೆ ಹೇರಿದರೆ ವಾಸ್ತವಿಕವಾಗಿ ಈ ಜಗತ್ತು ಸತ್ತವರದ್ದಾದೀತು, ಜೀವಂತ ಜನರದ್ದಾಗಿರಲಾರದು.’’
ರಾಮಚಂದ್ರ ಗುಹಾ ಅವರು ಹಿಂದು ಕೋಡ್ ಬಿಲ್‌ಗೆ ಆಗ ವಿರೋಧವಾಗಿದ್ದ ಧಾರಾಳ ಅವತರಣಿಕೆಗಳನ್ನು ನೀಡಿದ್ದಾರೆ, ಎಂದರೆ ಆರ್ಗನೈಸರ್‌ನಿಂದ. ಇದನ್ನು ಇಂಗ್ಲಿಷಿನಲ್ಲಿ ಸಿಲೆಕ್ಟೆಡ್ ಕೋಟ್ಸ್ ಎನ್ನುತ್ತಾರೆ. ಅದು ಎಡಪಂಥೀಯರ ವಿಶೇಷತೆ. 1974ರಲ್ಲಿ ಬಾಳಾಸಾಹೆಬ್ ದೇವರಸ್ ಅವರಿಂದ ‘ಸಾಮಾಜಿಕ ಸಮತೆ ಮತ್ತು ಹಿಂದೂ ಸಂಘಟನೆ’ ಎಂಬ ವಿಷಯದ ಕುರಿತು ಭಾಷಣ ನಡೆಯಿತು. ಹಿಂದೂ ಎಂದು ಯಾರನ್ನು ಹೇಳಬೇಕು ? ಎಂಬ ವಾಕ್ಯದಿಂದ ಈ ಭಾಷಣ ಆರಂಭಿಸಿದರು, ಮತ್ತು ಅವರು ಹಿಂದು ಕೋಡ್ ಬಿಲ್‌ನ ಆಧಾರ ಪಡೆದರು. ಅವರ ವಾಕ್ಯಗಳು ಹೀಗಿವೆ, ‘‘ಕೆಲ ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ಒಂದು ಕೋಡ್ ರಚಿಸಲಾಯಿತು, ಅದು ಹಿಂದು ಕೋಡ್. ಸಂಸತ್ತಿನಲ್ಲಿ ಅದು ಸಮ್ಮತವಾಯಿತು. ಅದು ಸಮ್ಮತಗೊಳ್ಳಲು ಮುಂದಾಳ್ತನ ವಹಿಸಿದವರಲ್ಲಿ ಪಂ. ನೆಹರೂ ಇದ್ದರು, ಡಾ. ಅಂಬೇಡ್ಕರ್ ಇದ್ದರು. ಕೋಡ್ ರಚಿಸಿದ ಬಳಿಕ ಇಲ್ಲಿಯ ಬಹುಸಂಖ್ಯ ಸಮುದಾಯಕ್ಕೆ ಅದನ್ನು ಅನ್ವಯಿಸಬೇಕಾಗಿದ್ದು, ಅದಕ್ಕೆ ಯಾವ ಹೆಸರಿಡಬೇಕು ಎಂದು ಅವರಿಗೆ ಪ್ರಶ್ನೆಯೆದ್ದಿತು. ಆಗ ಅವರಿಗೆ ಇನ್ನಾವ ಹೆಸರೂ ಹೊಳೆಯಲಿಲ್ಲ. ಅವರು ಈ ಕೋಡ್‌ಅನ್ನು ‘ಹಿಂದೂ ಕೋಡ್’ ಎಂದೇ ಹೇಳಬೇಕಾಯಿತು.

ಈ ಕೋಡ್ ಯಾರಿಗೆ ಅನ್ವಯಿಸುವುದೆಂದು ಹೇಳುವಾಗ ಪ್ರಾರಂಭದಲ್ಲಿ ಅವರು ಹೇಳಬೇಕಾಯಿತು, ‘‘ಮುಸಲ್ಮಾನ, ಕ್ರೈಸ್ತ, ಯಹುದೀ ಮತ್ತು ಪಾರ್ಸೀ ಈ ನಾಲ್ವರನ್ನು ಬಿಟ್ಟರೆ, ಹಿಂದುಸ್ಥಾನದಲ್ಲಿ ಉಳಿದ ಸನಾತನೀ, ಲಿಂಗಾಯತ್, ಜೈನ, ಬೌದ್ಧ, ಸಿಕ್ಖ್, ಆರ್ಯಸಮಾಜ ಮುಂತಾದ ಎಲ್ಲ ಜನರಿಗೆ ಈ ಕೋಡ್ ಅನ್ವಯಿಸುವುದು.’’ ಅವರು ಈ ಕೋಡ್‌ಗೆ ಹೆಸರನ್ನೂ ನೀಡಿದರು- ‘ಹಿಂದೂ ಕೋಡ್’. ಇದರ ಅರ್ಥವಿಷ್ಟು: 1949-50ರಲ್ಲಿ ಹಿಂದು ಕೋಡ್ ಬಿಲ್ ಕುರಿತು ಆರ್ಗನೈಸರ್‌ನಲ್ಲಿ ಪ್ರಕಟವಾಗಿದ್ದ ಅಭಿಪ್ರಾಯಗಳಿಗಿಂತ ಭಿನ್ನವಾದ ಅಭಿಪ್ರಾಯವನ್ನು ಬಾಳಾಸಾಹೇಬರು ವ್ಯಕ್ತಪಡಿಸುತ್ತಾರೆ, ಇದನ್ನು ಜೀವಂತ ಇತಿಹಾಸ ಎನ್ನುತ್ತಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘವು ಒಂದು ಜೀವಂತ ಸಂಘಟನೆಯಾಗಿದೆ. ಈ ಸಂಘಟನೆಯು ಕಮ್ಯುನಿಸ್ಟರಂತೆ ಅಥವಾ ಎಡಪಂಥೀಯರಂತೆ ಗ್ರಂಥನಿಷ್ಠ ಸಂಘಟನೆಯೇನಲ್ಲ. ಅದರಲ್ಲಿ ಯಾವುದೇ ಗ್ರಂಥವನ್ನು ಪ್ರಮಾಣವೆಂದು ಮಾನ್ಯಮಾಡುತ್ತಿಲ್ಲ. ಕಾಲಾನುಗುಣವಾಗಿ ಸಂಘದ ನಿಲುವುಗಳು ಬದಲಾಯಿಸುತ್ತ ಹೋಗಿವೆ. ಕಾಲಾನುಗುಣವಾಗಿ ವಿಷಯಗಳ ಗ್ರಹಿಕೆಯಲ್ಲಿ ಪರಿವರ್ತನೆಯಾಗುತ್ತ ಹೋಗಿದೆ. ಇದು ಹಿಂದೂರಾಷ್ಟ್ರ, ಹಿಂದೂ ಸಮಾಜವು ರಾಷ್ಟ್ರೀಯ ಸಮಾಜವಾಗಿದೆ, ಅದು ಸಂಘಟಿತವಾಗಿರಬೇಕು, ಹಿಂದೂ ಸಮಾಜವು ಚಾರಿತ್ರ್ಯಸಂಪನ್ನವಾಗಿರಬೇಕು, ದೇಶಭಕ್ತಿಯು ಸಂಸ್ಕಾರಗಳಿಂದ ಸಹಜವಾಗಿಯೇ ಬೆಳೆಯುತ್ತ ಹೋಗಬೇಕು, ವ್ಯಕ್ತಿಗಿಂತ ದೇಶ ದೊಡ್ಡದು, ದೇಶದ ಸಂಸ್ಕೃತಿ ದೊಡ್ಡದು, ಸಮಸ್ತರನ್ನು ಧಾರಣ ಮಾಡುವ ಧರ್ಮ ದೊಡ್ಡದು, ಇವು ಸಂಘದ ಮೂಲತತ್ವಗಳಾಗಿದ್ದು ಅವುಗಳಲ್ಲಿ ಯಾವುದೇ ಪರಿವರ್ತನೆಯಾಗುತ್ತಿಲ್ಲ, ಪರಿಸ್ಥಿತಿಗನುಸಾರ ನಿಲುವುಗಳು ಬದಲಾಗುತ್ತವೆ. ಸಂಘದ ನಿಲುವಿನಲ್ಲೂ ಬದಲಾವಣೆಯಾಗುತ್ತ ಹೋಗಿವೆ. ರಾಮಚಂದ್ರ ಗುಹಾ ಅವರಿಗೆ ಒಂದೋ ಅವು ತಿಳಿಯದೆ ಇರಬಹುದು ಅಥವಾ ತಿಳಿದೂ ಸಹ ತಿಳಿಯದವರಂತೆ ನಿಲುವು ತಳೆಯುತ್ತಿರಬಹುದು. ಇಂಡಿಯನ್ ಎಕ್ಸ್‌ಪ್ರೆಸ್‌ನಲ್ಲಿ ಅವರ ಧ್ವನಿ ಹೇಗಿದೆಯೆಂದರೆ, ನೀವು ನಿಮ್ಮ ಹಿಂದಿನ ನಿಲುವಿಗೇ ಅಂಟಿಕೊಳ್ಳಿ, ಅಂಬೇಡ್ಕರರನ್ನು ಪ್ರಶಂಸಿಸಬೇಡಿ.
ಡಾ. ಹೆಡಗೇವಾರರು ಜೀವಂತವಿದ್ದಾಗ ಸಂಘವನ್ನು ರಾಜಕಾರಣದಿಂದ ದೂರವಿಟ್ಟರು. ಸ್ವಾತಂತ್ರ್ಯ ಬಂದ ಬಳಿಕ ಜನಸಂಘದ ಸ್ಥಾಪನೆಯಾಯಿತು. ಜನಸಂಘದ ಸ್ಥಾಪನೆಯ ಹಿಂದೆ ಶ್ರೀಗುರೂಜಿಯವರು ಮಹಾಶಕ್ತಿಯಾಗಿದ್ದರು. 1975ರಲ್ಲಿ ತುರ್ತುಪರಿಸ್ಥಿತಿ ಬಂದಿತು. ಬಾಳಾಸಾಹೆಬ್ ದೇವರಸ್ ಅವರ ನೇತೃತ್ವದಲ್ಲಿ ಸಂಘವು ತುರ್ತುಪರಿಸ್ಥಿತಿಯ ವಿರುದ್ಧ ಹೋರಾಟಕ್ಕೆ ಇಳಿಯಿತು. ಜನತಾ ಪಕ್ಷದ ಸ್ಥಾಪನೆಯ ಹಿಂದೆ ಬಾಳಾಸಾಹೆಬ್ ದೇವರಸ್ ಅವರು ಮಹಾಶಕ್ತಿಯಂತೆ ನಿಂತರು. 2014ರಲ್ಲಿ ದೇಶದಲ್ಲಿ ಅಧಿಕಾರಪರಿವರ್ತನೆಯಾಯಿತು. ಸೋನಿಯಾ ಗಾಂಧಿಯವರ ಅಧಿಕಾರ ಹೋಯಿತು. ಬಿಜೆಪಿಯು ಸ್ವಂತಬಲದಿಂದ ಅಧಿಕಾರಕ್ಕೆ ಬಂದಿತು. ಈ ಪರಿವರ್ತನೆಯ ಹಿಂದೆಯೂ ಮಹಾಶಕ್ತಿಯ ರೂಪದಲ್ಲಿ ಮೋಹನ್‌ಜಿ ಭಾಗವತ್ ಇದ್ದಾರೆ. ಇಲ್ಲಿ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಿದ್ದು ತಿಳಿದುಕೊಳ್ಳುವುದಕ್ಕಾಗಿ, ಆದರೆ ಈ ವ್ಯಕ್ತಿಗಳೆಂದರೆ ಸಂಘವೆಂದು ಅರ್ಥೈಸಬೇಕಾಗುತ್ತದೆ. ಡಾಕ್ಟರ್‌ಜಿ ಕಾಲದಲ್ಲಿ ಅಧಿಕಾರದ ರಾಜಕಾರಣದಿಂದ ಸಂಘವು ದೂರವಿತ್ತು. ಆದರೆ ಇಂದು ಅಧಿಕಾರಪರಿವರ್ತನೆಯಲ್ಲಿ ಸಂಘವೇಕೆ ಇಳಿದಿದೆ, ಎಂಬ ವಿಷಯದ ಬಗ್ಗೆಯೂ ರಾಮಚಂದ್ರ ಗುಹಾ ಅವರು 1940ರ ವರ್ಷಕ್ಕೆ ಹಿಂದಿನ ಉಲ್ಲೇಖಗಳನ್ನು ತೆಗೆದು ಲೇಖನ ಬರೆಯಬಹುದಾಗಿದೆ. ಅವರು ವಿಖ್ಯಾತ ಇತಿಹಾಸಕಾರರಾಗಿ ಈ ಕೆಲಸ ಮಾಡಲು ಅವರಿಗೆ ಅಡ್ಡಿಯೇನಿಲ್ಲ.
ರಾಮಚಂದ್ರ ಗುಹಾ ಅವರು ಶ್ರೀಗುರೂಜಿಯವರು ಹಿಂದು ಕೋಡ್ ಬಿಲ್‌ಅನ್ನು ಹೇಗೆ ವಿರೋಧಿಸಿದರೆಂಬ ವಿಷಯ ಮಂಡಿಸುವಾಗ ಶ್ರೀಗುರೂಜಿಯವರ ಕೆಲ ವಾಕ್ಯಗಳನ್ನು ನೀಡಿದ್ದಾರೆ. ಶ್ರೀಗುರೂಜಿ ಹೇಳಿದರು, ‘‘ಹಿಂದು ಕೋಡ್ ಬಿಲ್‌ನಲ್ಲಿ ಭಾರತೀಯತೆಯಿಲ್ಲ. ವಿವಾಹ ಮತ್ತು ವಿಚ್ಛೇದನೆಯ ವಿಷಯವನ್ನು ಅಮೆರಿಕನ್ ಮತ್ತು ಆಂಗ್ಲ ರೂಪುರೇಖೆಗಳಂತೆ ಪರಿಹರಿಸಲು ಸಾಧ್ಯವಿಲ್ಲ. ಹಿಂದೂ ಸಂಸ್ಕೃತಿಯ ಪ್ರಕಾರ ವಿವಾಹವು ಒಂದು ಸಂಸ್ಕಾರವಾಗಿದ್ದು, ಈ ಸಂಸ್ಕಾರವನ್ನು ಮೃತ್ಯುವಿನ ಬಳಿಕವೂ ಮುರಿಯುವಂತಿಲ್ಲ. ವಿವಾಹವೆಂದರೆ ಯಾವಾಗ ಬೇಕಾದರೂ ಮುರಿಯುವಂತಹ ಒಪ್ಪಂದವೇನಲ್ಲ.’’ ಶ್ರೀಗುರೂಜಿಯವರ ಈ ಹೇಳಿಕೆಯಲ್ಲಿ ತಪ್ಪೇನಿದೆ ? ಅಮೆರಿಕನ್ ಸಮಾಜದಲ್ಲಿ ಇಂದು 50 ಶೇಕಡಾ ವಿವಾಹಗಳು ವಿಚ್ಛೇದನೆಯಲ್ಲಿ ಕೊನೆಗೊಳ್ಳುತ್ತಿವೆ. ಕುಮಾರಿ ಮಾತೆಯರ ಗಂಭೀರ ಸಮಸ್ಯೆಯಿದೆ. ಇದರಿಂದಾಗಿ ಚಿಕ್ಕ ಮಕ್ಕಳ ಮೇಲೆ ಬಹು ಕೆಟ್ಟ ಪರಿಣಾಮಗಳಾಗುತ್ತಿವೆ. ಅವರು ಹಿಂಸಾಚಾರಿಗಳಾಗುತ್ತಿದ್ದು, ಶಾಲೆಗಳಲ್ಲೇ ಗುಂಡು ಹಾರಿಸಿ ಮಕ್ಕಳನ್ನು ಕೊಲ್ಲುತ್ತಿರುವ ಸುದ್ದಿಗಳನ್ನು ನಾವು ಕೇಳುತ್ತಿದ್ದೇವೆ. ಬಾಬಾಸಾಹೇಬರಿಗೆ ಇದರ ಕಲ್ಪನೆಯಿರಲಿಲ್ಲವೆಂದಲ್ಲ. ಅವರು ತಂದಿರುವ ವಿಚ್ಛೇದನೆಯ ವಿಷಯವು ಬೇಕಾದಾಗೆಲ್ಲ ವಿಚ್ಛೇದನೆಯೆಂದಲ್ಲ. ಅವರ ಬಿಲ್‌ಅನ್ನು ಅಧ್ಯಯನ ಮಾಡಿದರೆ ಈ ಸಂಗತಿ ಗೋಚರಿಸೀತು. ಅವರ ಸ್ವಂತ ವೈವಾಹಿಕ ಜೀವನವು ಬಹು ಆದರ್ಶ ಜೀವನವಾಗಿತ್ತು. ರಮಾಬಾಯಿಯೊಂದಿಗೆ ಅವರು ಮಾಡಿದ ಸಂಸಾರವನ್ನು ಯಾವ ಶಬ್ದಗಳಲ್ಲಿ ವರ್ಣಿಸಲಿ, ಅದಂತೂ ಭಾರತೀಯ ದಾಂಪತ್ಯ ಜೀವನದ ಆದರ್ಶವಾಗಿತ್ತು. ಇಂದಿನ ನಮ್ಮಂತಹ ಜೀವಂತ ಪೀಳಿಗೆಯ ಅಭಿಪ್ರಾಯ ಹೀಗಿದ್ದು, ರಾಷ್ಟ್ರವು ಜೀವಂತ ಪೀಳಿಗೆಯದ್ದಾಗಿದೆ. ಹಾಗೆಂದೇ ಗುಹಾ ಅವರ ಮೃತ ಇತಿಹಾಸವನ್ನು ಒಪ್ಪಲು ಸಾಧ್ಯವಿಲ್ಲ.
ಡಾ. ಬಾಬಾಸಾಹೇಬ ಅಂಬೇಡ್ಕರರಂತಹ ಯುಗಪುರುಷನನ್ನು ತಿಳಿದುಕೊಳ್ಳುವುದು ಬಹು ಕಠಿಣವೇ ಆಗಿದೆ. ಮೊದಲನೆಯದಾಗಿ ಅವರು ತಮ್ಮ ಕಾಲದ ಬಹು ಮುಂದಿನ ಆಲೋಚನೆಗೆ ತೊಡಗಿದ್ದರು. ಹೀಗಾಗಿ ತಮ್ಮ ಸಮಕಾಲೀನರಿಗೆ ಅಷ್ಟೇನೂ ಕಲ್ಪಿಸಿಕೊಳ್ಳಲೂ ಶಕ್ಯವಾಗಿಲ್ಲ. ಪ್ರತಿಯೊಬ್ಬ ಮಹಾಪುರುಷನ ಪಾಲಿನ ಪ್ರಸಂಗವೂ ಹೀಗೆಯೇ, ಅದರಲ್ಲಿ ಅಂಬೇಡ್ಕರರು ಅಪವಾದವೇನಲ್ಲ. ಡಾ. ಬಾಬಾಸಾಹೇಬರ ನಿಲುವೂ ಎಷ್ಟೋ ಬಾರಿ ಬದಲಾಗಿದ್ದುಂಟು. 1927ರ ‘ಬಹಿಷ್ಕೃತ ಭಾರತ’ದ ಒಂದು ಲೇಖನದಲ್ಲಿ, ‘‘ಇದು ಹಿಂದೂರಾಷ್ಟ್ರವೆಂಬುದು ನಿರ್ವಿವಾದ ಸತ್ಯವಾಗಿದೆ,’’ ಎಂದು ಅವರು ಹೇಳುತ್ತಾರೆ. ಅಲ್ಲದೆ 1942ರ ‘ಥಾಟ್ಸ್ ಆನ್ ಪಾಕಿಸ್ತಾನ್’ ಪುಸ್ತಕದಲ್ಲಿ ಹಿಂದುರಾಜ್ಯವು ಭಯಾನಕ ಕಲ್ಪನೆಯಾಗಿದೆ, ಎಂದು ಬರೆಯುತ್ತಾರೆ. 1936ರಲ್ಲಿ ಸ್ವತಂತ್ರ ಮಜೂರ ಪಕ್ಷ ಸ್ಥಾಪಿಸಿ, ಸರ್ವಸಮಾವೇಶಕ ನಿಲುವು ತಳೆದರೆ, 1943ರಲ್ಲಿ ಶೆಡ್ಯೂಲ್ಡ್ ಕಾಸ್ಟ್ ಫೆಡರೇಶನ್ ಎಂಬ ನೂತನ ಪಕ್ಷ ಸ್ಥಾಪಿಸುತ್ತಾರೆ, ಮತ್ತು ಅದು ಕೇವಲ ಪರಿಶಿಷ್ಟ ಜಾತಿಯವರಿಗಾಗಿಯೇ ಇರುತ್ತದೆ. ಸ್ಟೇಟ್ ಆಫ್ ಮೈನಾರಿಟಿ ಎಂಬ ಪ್ರಬಂಧದಲ್ಲಿ ಅವರು ಸಂಸದೀಯ ಪ್ರಜಾತಂತ್ರವು ತಮಗೆ ಅನುಕೂಲವಾಗಿಲ್ಲ ಎಂದು ಬರೆಯುತ್ತಾರೆ ಹಾಗೂ ಸಂವಿಧಾನ ಸಮಿತಿಯಲ್ಲಿ ಭಾಷಣ ಮಾಡುತ್ತ ಸಂಸದೀಯ ಪ್ರಜಾತಂತ್ರವೇ ಯಾಕೆ ಯೋಗ್ಯವೆಂದು ತರ್ಕಿಸುತ್ತಾರೆ. ನಿಲುವಿನಲ್ಲಿ ಹೀಗೆ ಬದಲಾಗುತ್ತಿರುತ್ತದೆ. ಸುಸಂಗತಿಯು ಕತ್ತೆಯ ಗುಣಧರ್ಮವೆಂದು ಹೇಳುತ್ತಾರೆ, ಕಾರಣ ಕತ್ತೆಯು ನಿರ್ಬುದ್ಧಿಯದ್ದಾಗಿರುತ್ತದೆ. ಮನುಷ್ಯನು ವಿಚಾರಶೀಲನೆಂದು, ವಿಕಾಸಶೀಲನಾಗಿದ್ದಾನೆ. ರಾಮಚಂದ್ರ ಗುಹಾರಿಗೆ ಈ ಸಂಗತಿ ತಿಳಿಯಲೇಬಾರದೆಂದಿದ್ದರೆ ನಾವೇನು ಮಾಡೋಣ ?

   

Leave a Reply