ಮೈಸೂರಿನಲ್ಲಿ ಅರ್ಥಪೂರ್ಣ ರಕ್ಷಾಬಂಧನ ಉತ್ಸವ

ಜಿಲ್ಲೆಗಳು - 0 Comment
Issue Date : 25.08.2014

ಮೈಸೂರು:
ಸೋದರ ಸೋದರಿಯರ ನಡುವೆ ಒಲುಮೆ, ವಾತ್ಸಲ್ಯ, ಸ್ನೇಹ, ಪ್ರೀತಿ, ತ್ಯಾಗಗಳನ್ನು ಬೆಸೆಯುವ ರಕ್ಷಾಬಂಧನ ಹಬ್ಬಕ್ಕೆ ಸಾಮಾಜಿಕ ಸ್ವರೂಪ ನೀಡುವ ಕಾರ್ಯಕ್ರಮವನ್ನು ಮೈಸೂರಿನ ಜಿಎಸ್‌ಎಸ್ ಯೋಗಿಕ್ ಪೌಂಡೇಷನ್, ಕೌಟಿಲ್ಯ ವಿದ್ಯಾಸಂಸ್ಥೆ ಹಾಗೂ ವಿಜಯ ವಿಠಲಾ ವಿದ್ಯಾಸಂಸ್ಥೆಯ ನೇತೃತ್ವದಲ್ಲಿ ಹಲವಾರು ಸಂಘ ಸಂಸ್ಥೆಗಳ ಸಹಬಾಗಿತ್ವದೊಂದಿಗೆ ಸುರಕ್ಷಾ – ಸ್ವರಕ್ಷಾ ಕಾರ್ಯಕ್ರಮದಡಿಯಲ್ಲಿ ಆಯೋಜಿಸಲಾಗಿತ್ತು. ಆರೆಸ್ಸೆಸ್‌ನ ಕರ್ನಾಟಕ ದಕ್ಷಿಣ ಪ್ರಾಂತ ಸಂಘಚಾಲಕರಾದ ಮ. ವೆಂಕಟರಾಮು ಅವರು ಭಾರತಮಾತೆಯ ಬೃಹತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಮೈಸೂರಿನ ಸ್ವಾಮಿವಿವೇಕಾನಂದ ಯುವಜನ ಕೇಂದ್ರ(ವಿ-ಲೀಡ್) ದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಆರ್. ಬಾಲಸುಬ್ರಮಣ್ಯಂ ಮಾತನಾಡಿ, ನಮ್ಮ ಭರತಖಂಡದ ಇತಿಹಾಸದಲ್ಲಿ ಚಂಡಮಾರುತ ಸನ್ಯಾಸಿ ಎಂದೇ ಹೆಸರಾಗಿರುವ ಸ್ವಾಮಿ ವಿವೇಕಾನಂದರ ವೀರವಾಣಿಯಂತೆ ಎಲ್ಲಾ ಸ್ತ್ರೀಯರನ್ನು ನಾವು ಪೂಜ್ಯ ದೃಷ್ಟಿಯಲ್ಲಿ ಕಾಣಬೇಕು. ಅವರಲ್ಲಿ ನಾವು ದುರ್ಗೆ-ದೇವಿಯ ಶಕ್ತಿಯನ್ನು ನಾವು ಪ್ರತಿ ಕ್ಷಣ ಕಂಡಾಗ ಮಾತ್ರ ಪ್ರಸ್ತುತ ಸಮಾಜದಲ್ಲಿ ಹೆಣ್ಣು ಕುಲದ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟಲು ಸಾಧ್ಯವೆಂದು ನುಡಿದರು.
ಬೆಳಗಿನಿಂದಲೂ ಹಲವಾರು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪೋಷಕರು, ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಒಂದುಗೂಡಿ ಭಾರತ ಮಾತೆಗೆ ಪೂಜೆಯನ್ನು ಸಲ್ಲಿಸಿ ಒಬ್ಬರಿಗೊಬ್ಬರು ರಕ್ಷೆಯನ್ನು ಕಟ್ಟಿ ಸಿಹಿ ಹಂಚಿ ಸಂ್ರಮಿಸಿದರು.
ಅಲ್ಲಿ ನೆರೆದಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಪೋಷಕರು, ಕಾರ್ಯಕ್ರಮದ ಸಂಘಟಕರು, ಅತಿಥಿಗಳು, ಗಣ್ಯರು, ಸಾರ್ವಜನಿಕರು ಇವರೆಲ್ಲರ ಮನಗಳಲ್ಲಿ ಯಾವುದೋ ಹೊಸ ಬಾಂಧವ್ಯ ತಮ್ಮ ನಡುವೆ ಸೃಷ್ಟಿಯಾದ ಸಂ್ರಮ ಮನೆ ಮಾಡಿತ್ತು. ಆ ಕ್ಷಣದವರೆಗೆ ಅಪರಿಚಿತರಾಗಿದ್ದ ಇವರೆಲ್ಲರೂ ಪವಿತ್ರ ಸಂಬಂಧ ಹಾಗೂ ಸುರಕ್ಷತೆಯ ಲಾಂಛನವಾದ ರಾಖಿಯನ್ನು ಪರಸ್ಪರ ತಮ್ಮ ಕೈಗಳಿಗೆ ಕಟ್ಟಿಕೊಂಡು ಸಹೋದರತ್ವದ ನವಿರಾದ ಸಿಂಚನವನ್ನು ಅನುಭವಿಸಿ ಪುಳಕಿತರಾದರು.

ಇದೇ ಸಂದರ್ದಲ್ಲಿ ಪುಟ್ಟ ಪುಟ್ಟ ಮಕ್ಕಳೂ ಸೇರಿದಂತೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರೂ ನಮ್ಮ ದೇಶವನ್ನು ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ, ನಮ್ಮ ಸಂವಿಧಾನವನ್ನು ಗೌರವಿಸುತ್ತೇನೆ, ನನ್ನ ಧರ್ಮವನ್ನು ಪ್ರೀತಿಸುವುದರೊಂದಿಗೆ ಇತರೆ ಧರ್ಮಗಳನ್ನು ಗೌರವಿಸುತ್ತೇನೆ, ದೇಶವನ್ನು ರಕ್ಷಿಸುವ ಸೇನೆ ಹಾಗೂ ಆರಕ್ಷಕರನ್ನು ಪ್ರೀತಿಸಿ ಗೌರವಿಸುತ್ತೇವೆ, ನಮ್ಮ ಸಮಾಜವನ್ನು ಶಕ್ತಿಯುತವಾಗಿ ಸುರಕ್ಷಿತವಾಗಿರುವಂತೆ ನೋಡಿಕೊಳ್ಳುತ್ತೇವೆಂದು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು. ಮೈಸೂರಿನ ಜೀವಧಾರಾ ಬ್ಲಡ್ ಬ್ಯಾಂಕ್‌ನವರು ಈ ಕಾರ್ಯಕ್ರಮದಲ್ಲಿ ರಕ್ತದಾನ ಶಿಬಿರವನ್ನು ನಡೆಸಿದರು. ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ಹಲವಾರು ಜನ ರಕ್ತದಾನ ಮಾಡಿದರು. ಜಿಎಸ್‌ಎಸ್ ಯೋಗಿಕ್ ಸಂಸ್ಥೆಯು ಶ್ರೀ ಯೋಗ ಗುರು ಶ್ರೀ ಅನಂತರವರ ಸಂಪಾದಕತ್ವದಲ್ಲಿ ಹೊರತರುತ್ತಿರುವ ಆರೋಗ್ಯಕಿರಣ ಮಾಸಪತ್ರಿಕೆಯನ್ನು ರೆವರೆಂಡ್ ಡಾ.ಥಾಮಸ್ ವಾಳಪಿಳೈರವರು ಹಾಗೂ ಶಾಸಕರಾದ ತನ್‌ವೀರ್‌ಸೇಠ್ ಬಿಡುಗಡೆಗೊಳಿಸಿದರು.

ಶಾಲಾವಿದ್ಯಾರ್ಥಿಗಳು ರಕ್ಷಾಬಂಧನ ಉತ್ಸವದ ಬಗ್ಗೆ ಪ್ರಬಂಧ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಉತ್ತಮವಾಗಿ ಪ್ರಬಂಧ ಮಂಡಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರವನ್ನು ಬಹುಮಾನದ ರೂಪದಲ್ಲಿ ನೀಡಲಾಯಿತು. ಇದೇ ಸಂದರ್ದಲ್ಲಿ ಮಾತನಾಡಿದ ಡಾ. ಥಾಮಸ್ ವಾಳಪಿಳೈರವರು ದೇಹದ ಯಾವುದೇ ಭಾಗಕ್ಕೆ ಗಾಯವಾದಾಗ ಇಡೀ ಶರೀರವೇ ಅದಕ್ಕೆ ಸ್ಪಂದಿಸುತ್ತದೆ. ಅದರಂತೆ ಸಮಾಜದ ಯಾವುದೇ ಭಾಗ ಸಂಕಟಕ್ಕೀಡಾದಾಗ ಉಳಿದ ಸಮಾಜ ಸಂರಕ್ಷಣೆಗೆ ಧಾವಿಸಬೇಕು ಎಂಬ ಭಾವನೆ ಎಲ್ಲಾ ಸಮಾಜ ಬಂಧುಗಳಲ್ಲೂ ಮೂಡಬೇಕು. ಆಗ ಸರ್ವಾಂಗ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು. ನಂತರ ಅನೇಕ ಮಹಿಳೆಯರು ಪೂಜ್ಯ ಬಿಷಪ್‌ರವರಿಗೆ ಹಾಗೂ ತನ್‌ವೀರ್‌ಸೇಠ್‌ರವರಿಗೆ ರಕ್ಷೆ ಕಟ್ಟುವ ಮೂಲಕ ಸೋದರತ್ವವನ್ನು ಸಾರಿದರು. ನಮ್ಮ ಕುಟುಂಬದ ಸದಸ್ಯರನ್ನು ರಕ್ಷಿಸುವಂತೆಯೇ ನಮ್ಮ ದೇಶವನ್ನು ಅಹರ್ನಿಶಿ ಸಂರಕ್ಷಿಸುವ ಸೈನಿಕರು ಹಾಗೂ ಸಮಾಜವನ್ನು ವಿಛ್ಛಿದ್ರಕಾರಿ ಶಕ್ತಿಗಳಿಂದ ಸದಾ ಸಂರಕ್ಷಿಸುವ ಪಣ ತೊಟ್ಟಿರುವ ಆರಕ್ಷಕರೂ ಸಹ ನಮ್ಮ ಕುಟುಂಬದ ಸದಸ್ಯರಿದ್ದಂತೆಯೇ ಸರಿ. ಆದಕಾರಣ ಅವರುಗಳೊಂದಿಗೆ ಸಹ ನಾವು ಬಾತೃತ್ವದ ಪವಿತ್ರ ಬಾವನೆಗಳೊಂದಿಗೆ ಬೆರೆಯಬೇಕೆಂಬುದು ನಗರದ ಪೊಲೀಸ್ ಮುಖ್ಯಸ್ಥರಾದ ಶ್ರೀ ಪ್ರಬಾಕರ್ ಬಾರ್ಕಿ ತಮ್ಮ ಅನಿಸಿಕೆ ತೊಡಿಕೊಂಡರು.

ವರದಿ: ಕೆ.ಪಿ ಮಧುಸೂದನ

 

   

Leave a Reply