ಮೋದಿಯ ಘೋಷಣೆ ಆಯ್ತು ಈಗ ಹೊಣೆ ನಮ್ಮದು

ಚುನಾವಣೆಗಳು - 0 Comment
Issue Date :

ರಮೇಶ ಪತಂಗೆ
 ಒಬ್ಬ ಸಾಂಸದರೊಂದಿಗೆ ಹರಟೆ ಹೊಡೆಯುತ್ತಿದ್ದಂತೆ ಅವರು ಹೇಳಿದರು, ‘‘ರಮೇಶ್‌ಜಿ, ಮಗಳಿಗೆ ಒಳ್ಳೆಯ ಗಂಡ, ಸೈನ್ಯಕ್ಕೆ ಉತ್ತಮ ಸೇನಾಪತಿ ಮತ್ತು ದೇಶಕ್ಕೆ ಒಳ್ಳೆಯ ಪ್ರಧಾನಿಯು ಭಾಗ್ಯವಿದ್ದರೇನೇ ಸಿಗುವರು. ಈ ಮೂರೂ ಸಂಗತಿಗಳು ಮಗಳ, ಸೈನ್ಯದ ಮತ್ತು ದೇಶದ ಭಾಗ್ಯವನ್ನು ಅವಲಂಬಿಸಿವೆ.’’ ಶ್ರೀಕೃಷ್ಣ ಪರಮಾತ್ಮನು ಇದೇ ವಿಷಯವನ್ನು ಭಗವದ್ಗೀತೆಯಲ್ಲಿ ಕೊಂಚ ಬೇರೆಯೇ ಮಾತಿನಲ್ಲಿ ಹೇಳಿದ್ದಾನೆ. ಶ್ರೀಕೃಷ್ಣನ ಶಬ್ದಗಳು ಹೀಗಿವೆ,
 ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್‌?
 ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಮ್‌॥
 ಎಂದರೆ ಕಾರ್ಯ ಯಶಸ್ವಿಯಾಗಲು ಕಾರ್ಯದ ಅಧಿಷ್ಠಾನ ಚೆನ್ನಾಗಿರಬೇಕು, ಕರ್ತನು ಒಳ್ಳೆಯವನಿರಬೇಕು, ಅವನಿಗೆ ವಿವಿಧ ಸಾಧನಗಳು ಬೇಕಾಗುತ್ತವೆ, ವಿವಿಧ ರೀತಿಯ ಕ್ರಿಯೆಗಳನ್ನು ಮಾಡಬೇಕಾಗುತ್ತದೆ ಹಾಗೂ ಇವೆಲ್ಲವನ್ನು ಮಾಡಿಯೂ ದೈವದ ಅನುಕೂಲತೆಯೂ ಇರಬೇಕಾಗುತ್ತದೆ. ಅದಿದ್ದರೆ ಕಾರ್ಯ ಯಶಸ್ವಿಯಾಗುತ್ತದೆ.
 ಇಷ್ಟೆಲ್ಲ ನೆನಪಿಸಲು ಕಾರಣವಿದೆ. ನಮ್ಮದು ಮಹಾನ್ ದೇಶ, ಬಹು ವಿಶಾಲವಾದ ದೇಶ, ಸಾಧನ-ಸಂಪತ್ತುಗಳಿಂದ ಸಮೃದ್ಧವಾದ ದೇಶ, ಬುದ್ಧಿವಂತ ಜನರಿಂದ ಕೂಡಿದ ದೇಶ, ಕಾರ್ಯಕುಶಲ ಜನರಿಗೆ ಇಲ್ಲಿ ಕೊರತೆಯಿಲ್ಲ, ಜನ ಪರಿಶ್ರಮದ ಪರಾಕಾಷ್ಠೆ ಮಾಡುವವರು. ಇಷ್ಟೆಲ್ಲ ಇದ್ದರೂ ನಮ್ಮ ದೇಶ ಇಂದಿಗೂ ಜಗತ್ತಿನ ಒಂದು ದುರ್ಬಲ ದೇಶ, ಅಲ್ಲದೆ ಕಳೆದ ಐದು ವರ್ಷಗಳಲ್ಲಿ ನಮ್ಮ ದೇಶದ ಪರಿಸ್ಥಿತಿಯು ದಿನೇದಿನೇ ಹದಗೆಡುತ್ತ ಹೋಗುತ್ತಿದೆ.
 ರೂಪಾಯಿ ತೀವ್ರವಾಗಿ ಅಪಮೌಲ್ಯಗೊಳ್ಳುತ್ತಿದೆ, ರೂಪಾಯಿಯ ಅಪಮೌಲ್ಯವಾಗಿದ್ದರಿಂದ ತೈಲದ ಬೆಲೆ ಏರುತ್ತ ಹೋಗುತ್ತಿದೆ, ತೈಲದ ಬೆಲೆ ಏರಿದ್ದರಿಂದ ತರಕಾರಿ, ಆಹಾರಧಾನ್ಯಗಳ ಬೆಲೆ ಏರುತ್ತಿದೆ. ಇದನ್ನೇ ನಾವು ಬೆಲೆ ಏರಿಕೆ ಎನ್ನುತ್ತೇವೆ. ವಸ್ತುಗಳ ಮೌಲ್ಯ ಏರುತ್ತಿರುವಂತೆ ಆ ಪ್ರಮಾಣದಲ್ಲಿ ಜನತೆಯ ಉತ್ಪನ್ನದಲ್ಲಿ ವೃದ್ಧಿಯಾಗುತ್ತಿಲ್ಲ. ಉತ್ಪನ್ನ ಅದೇ ಇರುತ್ತದೆ ಮತ್ತು ವಸ್ತುಗಳ ಮೌಲ್ಯ ಎರಡು ಪಟ್ಟಾಗಿದೆ, ಎಂದರೆ ವಸ್ತುಗಳ ಮೌಲ್ಯದ ಸಂದರ್ಭದಲ್ಲಿ ಉತ್ಪನ್ನ ಅರ್ಧದಷ್ಟಾಗಿದೆ ಎಂಬುದು ಇದರರ್ಥ.
 ಉತ್ಪನ್ನ ಯಾಕೆ ವೃದ್ಧಿಸುತ್ತಿಲ್ಲ? ಉತ್ಪನ್ನವು ದೇಶದಲ್ಲಾಗುವ ಒಟ್ಟು ಉತ್ಪಾದನೆಯನ್ನು ಅವಲಂಬಿಸಿದೆ. ಉತ್ಪಾದನೆಯು ಎರಡು  ರೀತಿಯದ್ದಾಗಿರುತ್ತದೆ. ಒಂದು ಕೃಷಿಯದ್ದು ಮತ್ತು ಇನ್ನೊಂದು ಕೈಗಾರಿಕಾ ಉತ್ಪಾದನೆಯದ್ದು. ಕೈಗಾರಿಕಾ ಉತ್ಪನ್ನವು ತೀವ್ರವಾಗಿ ಕುಂದುತ್ತ ಹೋಗುತ್ತಿದೆ. ಕಳೆದ ವಾರವೇ ನಾನು ಸಂಭಾಜಿನಗರಕ್ಕೆ ಹೋಗಿದ್ದೆ. ಜಾಲ್ವಾದ ಉಕ್ಕು ಉದ್ಯಮಪತಿಗಳನ್ನು ಭೇಟಿಯಾಗಬೇಕಾಗಿತ್ತು. ‘ವಿವೇಕ’ ಪತ್ರಿಕೆಯ ಒಂದು ಮಹತ್ವದ ಕೆಲಸವಿತ್ತು. ಭೇಟಿಗೆ ಮುಂಚೆ ವಿಚಾರಿಸಿದಾಗ, ಜಾಲ್ನಾದ ಉಕ್ಕಿನ ಉದ್ಯಮ ತೀರಾ ಸಂಕಟಕ್ಕೆ ಸಿಲುಕಿದೆಯೆಂದು ತಿಳಿಯಿತು. ಮೂರು ಪಾಳಿಯ ಬದಲು ಒಂದೇ ಪಾಳಿ ನಡೆಯುತ್ತಿದೆ. ಉತ್ಪಾದಿತ ವಸ್ತುಗಳಿಗೆ ಮಾರುಕಟ್ಟೆಯಿಲ್ಲ. ಉತ್ಪಾದನೆಯಿಲ್ಲವೆಂದು ಉತ್ಪನ್ನವಿಲ್ಲ. ದೇಶದ ಎಲ್ಲ ಉದ್ಯಮಗಳ ಸ್ಥಿತಿಯೂ ಇದೇ.
 ಆಮದು ಹೆಚ್ಚುತ್ತ ಹೋಗುತ್ತಿದೆ. ಆಮದು ಹೆಚ್ಚಾಯಿತೆಂದರೆ ದೇಶದ ಹಣ ಹೊರಕ್ಕೆ ಹೋಗುತ್ತದೆ. ರಫ್ತು ಕಡಿಮೆಯಾಗುತ್ತ ಹೋಗುತ್ತಿದೆ. ರಫ್ತು ಕಡಿಮೆಯಾಯಿತೆಂದರೆ ವಿದೇಶಗಳಿಂದ ಬರುವ ಹಣ ಕಡಿಮೆಯಾಗುತ್ತದೆ. ಎಂದರೆ ಬರುವ ಡಾಲರ್ ಕಡಿಮೆಯಾಗುತ್ತದೆ. ಡಾಲರ್ ಕಡಿಮೆಯಾಯಿತೆಂದರೆ ಅದರ ಮೌಲ್ಯ ಹೆಚ್ಚಾಗುತ್ತದೆ. ಡಾಲರಿನ ಮೌಲ್ಯ ಏರಿದರೆ ರೂಪಾಯಿಯ ಮೌಲ್ಯ ಕಡಿಮೆಯಾಗುತ್ತದೆ. ಇದನ್ನು ನಾವು ರೂಪಾಯಿಯ ಅಪಮೌಲ್ಯವೆನ್ನುತ್ತೇವೆ. ಈ ಅಪಮೌಲ್ಯವನ್ನು ಉದ್ದೇಶಪೂರ್ವಕ ಮಾಡಲಾಗುತ್ತಿದೆಯೇ? ಇದನ್ನು ಉದ್ದೇಶಪೂರ್ವಕ ಮಾಡಲಾಗುತ್ತಿದೆ ಎಂದು ಕೆಲವರು ಹೇಳುತ್ತಾರೆ. ಮುಂದಿನ ವರ್ಷ ಚುನಾವಣೆ ನಡೆಯುತ್ತದೆ ಮತ್ತು ಮತಗಳನ್ನು ಗಳಿಸಲು ಹಣದ ಹಂಚಿಕೆ ಮಾಡಬೇಕಾಗುತ್ತದೆ. ವಿದೇಶಗಳಲ್ಲಿ ಬಚ್ಚಿಟ್ಟಿರುವ ಲಕ್ಷಾಂತರ – ಕೋಟ್ಯಂತರ ಡಾಲರ್‌ಗಳು ರೂಪಾಯಿಗಳಾಗಿ ಪರಿವರ್ತನೆಗೊಳ್ಳುವಾಗ ಅಬ್ಜಾವಧಿ ರೂಪಾಯಿಯ ರೂಪ ತಳೆಯುವವು. ಮನೆಯಲ್ಲಿ ಕುಳಿತೇ ಶೇ.20-25ರಷ್ಟು ಲಾಭವಾದೀತು. ಹೀಗಾಗಿ ಇದನ್ನು ಉದ್ದೇಶಪೂರ್ವಕ ಮಾಡಲಾಗುತ್ತಿದೆ, ಎಂಬುದು ಹಲವರ ಅಭಿಪ್ರಾಯ.
 ದೇಶದೆಲ್ಲೆಡೆಯ ವಾತಾವರಣವನ್ನು ಅಂದಾಜಿಸಿದರೆ ಒಂದು ಸಂಗತಿ ಗಮನಕ್ಕೆ ಬಂದೀತು. ಜನತೆಯ ಆತ್ಮವಿಶ್ವಾಸವೇ ಕುಂದಿ ಹೋಗಿದೆ. ನಾಳೆ ಏನಾದೀತು ಎಂಬ ಅನಿಶ್ಚಿತತೆಯಿದೆ. ಆರ್ಥಿಕ ಕ್ಷೇತ್ರದಲ್ಲಂತೂ ಯಾವ ಸ್ಥೈರ್ಯವೂ ಇಲ್ಲ. ಆಹಾರ ಭದ್ರತಾ ಮಸೂದೆಯ ಹೆಸರಿನಲ್ಲಿ ಪ್ರತಿವರ್ಷವೂ ಲಕ್ಷಾಂತರ – ಕೋಟ್ಯಂತರ ಖರ್ಚು ಮಾಡಲಿದ್ದಾರೆ. ಈ ಕಲ್ಪನೆ ಹೊಳೆದಿದ್ದ ಆ ಅರ್ಥಶಾಸ್ತ್ರಿಗಳಿಗೆ ಅನರ್ಥಶಾಸ್ತ್ರಿಗಳೆಂಬ ಪದವಿ ನೀಡಬೇಕು. ಪುಕ್ಕಟೆ ಸಿಕ್ಕಿದರೆ ಯಾರಿಗೆ ಬೇಡ? ಪುಕ್ಕಟೆ ತಿನ್ನುವ ಅಭ್ಯಾಸಕ್ಕೆ ಬೀಳುವ ಸಮಾಜವು ಎಂದೂ ಪರಾಕ್ರಮಿಯಾಗಲಾರದು, ಪರಿಶ್ರಮಿಯಾಗಲಾರದು, ಸ್ವಾಭಿಮಾನಿಯಾಗಲಾರದು, ತೇಜಸ್ವಿಯಾಗಲಾರದು. ಹಾಗೆಂದೇ, ಯಾವ ಚತುರ ರಾಜ್ಯಕರ್ತನೂ ತಮ್ಮ ಸಮಾಜಕ್ಕೆ ಪುಕ್ಕಟೆ ತಿನ್ನಲು ಬಿಡಲಾರ.
 ಅದಷ್ಟೇ ಹಣವನ್ನು ಉತ್ಪಾದಕ ಕಾರ್ಯಗಳಿಗೆ ತೊಡಗಿಸಿದರೆ ಏನಾದೀತು? ಹತ್ತು ರೂಪಾಯಿಯನ್ನು ಉತ್ಪಾದಕ ಕಾರ್ಯಗಳಿಗೆ ತೊಡಗಿಸಿದಲ್ಲಿ ಅದರಿಂದ 100 ರೂಪಾಯಿ ಬರಬಹುದು. ಪ್ರತಿಯೊಬ್ಬ ಉದ್ಯಮಪತಿ ಮತ್ತು ವ್ಯಾಪಾರಿಯ್ಠು ಈ ಕೆಲಸವನ್ನೇ ಮಾಡುತ್ತಿರುತ್ತಾನೆ. ಹಳ್ಳಿಗಾಡಿನಲ್ಲಿ ರಸ್ತೆ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ ಮಾಡುವುದು, ಗ್ರಾಮೀಣ ಪ್ರದೇಶದಲ್ಲಿ ಗೃಹ ಪ್ರಕಲ್ಪ ಕೈಗೊಳ್ಳುವುದು, ರೈತರಿಗೆ ಬೇಕಾಗುವ ಸಲಕರಣೆಗಳನ್ನು ತಯಾರಿಸುವುದು, ವಿದ್ಯುತ್ ಉತ್ಪಾದಿಸುವ ಪ್ರಕಲ್ಪವನ್ನು ನಿರ್ಮಿಸುವುದು, ಕಾಲುವೆ ತೋಡುವುದು, ಭಾವಿ ತೋಡುವುದು, ಕೆರೆಕಟ್ಟೆ ನಿರ್ಮಿಸುವುದು, ಲಕ್ಷಾಂತರ ವೃಕ್ಷಗಳನ್ನು ಬೆಳೆಸುವುದು ಇಂತಹ ಒಂದಲ್ಲ ಸಹಸ್ರಾರು ಕಾರ್ಯಗಳನ್ನು ಈ ಹಣದಿಂದ ಮಾಡಬಹುದು. ಅದರಿಂದ ಜನರಿಗೆ ಉದ್ಯೋಗ ಲಭಿಸುತ್ತದೆ, ಪ್ರತಿಫಲ ಸಿಗುತ್ತದೆ ಹಾಗೂ ಅವರು ಸ್ವಾಭಿಮಾನದಿಂದ ಜೀವಿಸಬಹುದು. ಜನರನ್ನು ಭಿಕ್ಷುಕರಾಗಿಟ್ಟು ಅವರ ಜೋಳಿಗೆಗೆ ಅನ್ನ ಹಾಕುವ ಪುಣ್ಯ ಕಾರ್ಯ ಮಾಡುವ ಸೋಗಂತೂ ಪಾಪವೇ. ನಮ್ಮ ರಾಜ್ಯಕರ್ತರು ನಿರ್ಲಜ್ಜವಾಗಿ ಇದನ್ನು ಮಾಡುತ್ತಿದ್ದಾರೆ.
 ಪಶ್ಚಿಮ ಮತ್ತು ಉತ್ತರ ಗಡಿಭಾಗದಲ್ಲಿ ನಿತ್ಯವೂ ಉದ್ಧಟತನ ನಡೆಯುತ್ತಿರುತ್ತದೆ. ಒಂದು ಕಡೆಯಿಂದ ಪಾಕಿಸ್ಥಾನ ಮತ್ತು ಇನ್ನೊಂದು ಕಡೆಯಿಂದ ಚೀನವು ನಮ್ಮ ಭೂಪ್ರದೇಶದ ಮೇಲೆ ಆಕ್ರಮಣ ಮಾಡುತ್ತಿರುವುದು. ಅವುಗಳಿಗೆ ಭಾರತದ ಭೀತಿ ಅನಿಸುತ್ತಿಲ್ಲ. ಭಾರತೀಯ ಸೈನ್ಯಕ್ಕೆ ಕೆಚ್ಚಿಲ್ಲದ ಸ್ಥಿತಿಯೇನಿಲ್ಲ. ಕೆಚ್ಚಿಲ್ಲದಿರುವುದು ದಿಲ್ಲಿಯ ರಾಜ್ಯಕರ್ತರಲ್ಲಿ. ಈ ವಿಷಯ ಚೀನ ಮತ್ತು ಪಾಕಿಸ್ಥಾನಕ್ಕೆ ಗೊತ್ತಿದೆ.
 ಮುಸ್ಲಿಂ ತುಷ್ಟೀಕರಣದ ಜಗ್ಗಾಟ ನಡೆದಿದೆ. ದೇಶದ ಸಾಧನ – ಸಂಪತ್ತುಗಳ ಮೇಲೆ ಮೊದಲ ಹಕ್ಕು ಅಲ್ಪಸಂಖ್ಯಾತರಿಗೆ, ಎನ್ನುತ್ತಾರೆ ಪ್ರಧಾನಿ ಮನಮೋಹನ ಸಿಂಗ್. ಮುಸಲ್ಮಾನರು ಹಿಂದುಳಿದಿರುವುದೇಕೆಂದು ಅವರು ಶೋಧನೆ ಮಾಡಿದರು, ಅವರ ಮೇಲೆ ಸವಲತ್ತುಗಳ ಸುರಿಮಳೆ ಗೈದರು. ಅವರೇನು ಮಾಡಿದರೂ ಅವರ ಮೇಲೆ ಕೈಮಾಡಬಾರದು, ಇದು ರಾಜ್ಯಕರ್ತರ ಧೋರಣೆ. ಮುಜಫ್ಫರಾಬಾದಿನ ದಂಗೆಯು ಇದಕ್ಕೆ ಮೊದಲ ಉದಾಹರಣೆ. ಜಮ್ಮೂವಿನ  ಕಿಶ್ತ್‌ವಾರ್‌ನ ದಂಗೆಯು ಇದಕ್ಕೆ ಅಂತಹದೇ ಉದಾಹರಣೆ. ಉರ್ದೂ ಪತ್ರಿಕೆಗಳಲ್ಲಿ ಬರೆಯುತ್ತಿರುವುದೇನೆಂದು ಗಮನಿಸಲು ಯಾರಿಗೂ ಸಮಯವಿಲ್ಲ. ಮನಮೋಹನ ಸಿಂಗ್, ಮುಲಾಯಂ ಸಿಂಗ್‌ರಂತಹರ ಕೈಯಲ್ಲಿ ಅಧಿಕಾರ ಮುಂದುವರಿದಲ್ಲಿ, ದೇಶದಲ್ಲಿ ಶೀಘ್ರವೇ 1946-47ರ ಪರಿಸ್ಥಿತಿಯುಂಟಾದೀತು. ದೇಶದ ಎಲ್ಲ ಹಿಂದುಗಳನ್ನೂ ಈ ಚಿಂತೆ ಕಾಡುತ್ತಿದೆ.
 ರೊಟ್ಟಿಯೇಕೆ ಸೀದು ಹೋಯಿತು, ಕುದುರೆಯೇಕೆ ಅಡ್ಡಾದಿಡ್ಡಿ ಓಡುತ್ತಿದೆ, ವೀಳ್ಯದೆಲೆಯೇಕೆ ಕೊಳೆಯಿತು – ಈ ಮೂರೂ ಪ್ರಶ್ನೆಗಳಿಗೆ ಉತ್ತರ ಒಂದೇ. ಅದೆಂದರೆ ತಿರುವಿ ಹಾಕಿಲ್ಲ. ಅಕ್ಬರ್ – ಬೀರಬಲ್‌ರ ಈ ಕಥೆ ಎಲ್ಲರಿಗೂ ಗೊತ್ತಿದೆ. ದೇಶದಲ್ಲೇಕೆ ಬೆಲೆ ಏರಿಕೆ? ರೂಪಾಯಿಯೇಕೆ ಕುಸಿದಿದೆ? ಪಾಕಿಸ್ಥಾನ ಭಯೋತ್ಪಾದಕ ಹಲ್ಲೆ ಮಾಡುತ್ತಿರುವುದೇಕೆ? ಚೀನ ಭಾರತೀಯ ನೆಲದ ಮೇಲೇಕೆ ನುಸುಳುತ್ತಿದೆ? ಬಡವರ ಸಂಖ್ಯೆಯೇಕೆ ಬೆಳೆಯುತ್ತಿದೆ? ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ? ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳೇಕೆ ಹೆಚ್ಚಾಗುತ್ತಿವೆ? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಒಂದೇ. ಅದೆಂದರೆ, ದೇಶದಲ್ಲಿ ಸೋನಿಯಾ ಗಾಂಧಿ ಮತ್ತು ಮನಮೋಹನ ಸಿಂಗ್‌ರ ಸರ್ಕಾರವಿದೆ. ಪ್ರಧಾನಿ ಮನಮೋಹನ ಸಿಂಗ್‌ರನ್ನು ಒಂದು ವಾಕ್ಯದಲ್ಲಿ ವರ್ಣಿಸುವುದಾದರೆ, ಬೆನ್ನುಮೂಳೆಯಿಲ್ಲದ, ನಿರ್ಣಯಸಾಮರ್ಥ್ಯವಿಲ್ಲದ, ದೇಶದ ರಾಜಕೀಯ – ಸಾಮಾಜಿಕ ಪರಿಸ್ಥಿತಿಯ ಏನೂ ಕಲ್ಪನೆಯಿಲ್ಲದ, ಸೋನಿಯಾ ಗಾಂಧಿಯ ಅಡಿಯಾಳು ನಾಯಕ ಎಂದು ಹೇಳಬೇಕಾಗುತ್ತದೆ. ಇಂತಹ ರಾಷ್ಟ್ರನಾಯಕ ದೇಶದ ಭಾಗ್ಯಕ್ಕೆ ಬಂದಿರುವುದರಿಂದ, ನಮ್ಮ ನಿಮ್ಮೆಲ್ಲರ ಪರಿಸ್ಥಿತಿಯು ಇದಕ್ಕಿಂತಲೂ ಕೀಳಾದರೆ ಅಚ್ಚರಿಯೇನಿಲ್ಲ.
 ರಾಷ್ಟ್ರನಾಯಕ ಅಯೋಗ್ಯನಾಗಿದ್ದರೆ ದೇಶದ ಪರಿಸ್ಥಿತಿ ಏನಾದೀತೆಂಬ ಕಥೆ ಹೇಳಿದ್ದಾನೆ ಗೌತಮ ಬುದ್ಧ. ಕಥೆ ತುಂಬ ದೊಡ್ಡದಿದೆ. ಅದರ ಸಾರಾಂಶ ಹೀಗಿದೆ – ಪಾಂಚಾಲ ನರೇಶನು ರಾಜ್ಯಾಡಳಿತ ನೋಡಿಕೊಳ್ಳುವ ಬದಲು ಭ್ರಷ್ಟಾಚಾರ ಮಾಡುವುದರಲ್ಲಿ, ತುಷ್ಟೀಕರಣ ಮಾಡುವುದರಲ್ಲಿ, ಮೋಜುಮಜಾ ಮಾಡುವುದರಲ್ಲಿ ಮಗ್ನನಾಗಿದ್ದ. ಅವನ ಕುಲದೇವತೆ ಕನಸಿನಲ್ಲಿ ಬಂದು, ಅವನಿಗೆ ಎಚ್ಚರಿಕೆ ನೀಡುತ್ತಾಳೆ, ‘‘ನೀನು ದಕ್ಷತೆಯಿಂದ ರಾಜ್ಯವಾಳದಿದ್ದಲ್ಲಿ ಪ್ರಜೆಗಳು ನಿನ್ನನ್ನು ನಾಶಗೊಳಿಸುವರು. ಆದ್ದರಿಂದ ನೀನು ರಾಜ್ಯದಲ್ಲಿ ಸಂಚರಿಸಿ ಪರಿಸ್ಥಿತಿಯನ್ನು ಕಣ್ಣಾರೆ ನೋಡು.’’ ರಾಜನು ತನ್ನ ಪುರೋಹಿತನನ್ನು ಜೊತೆಗೂಡಿಸಿಕೊಂಡು, ವೇಷಾಂತರ ಮಾಡಿ ವೀಕ್ಷಣೆಗೆ ಹೊರಡುತ್ತಾನೆ. ಅವನು ಮೊದಲು ಒಂದು ಗ್ರಾಮಕ್ಕೆ ಹೋಗುತ್ತಾನೆ. ಗ್ರಾಮದಲ್ಲಿ ಬರದ ಛಾಯೆಯಿತ್ತು. ಮುದುಕನೊಬ್ಬ ಮನೆಯೆದುರು ಕುಳಿತು ಕಾಲಿಗೆ ಚುಚ್ಚಿದ್ದ ಜಾಲಿಯ ಮುಳ್ಳು ತೆಗೆಯುತ್ತಿದ್ದ. ಮುಳ್ಳು ತೆಗೆಯುವಾಗ ಆತ ರಾಜನಿಗೆ ಬಯ್ಯುತ್ತಿದ್ದ. ಆತ ಹೇಳುತ್ತಾನೆ, ‘‘ನನ್ನ ಕಾಲಿಗೆ ಮುಳ್ಳು ಚುಚ್ಚಿದಂತೆಯೇ, ಬಾಣವು ರಾಜನ ಶರೀರಕ್ಕೆ ನಾಟಲಿ, ಆತ ಗಾಯಗೊಂಡು ನರಳುತ್ತಿರಲಿ.’’ ಪುರೋಹಿತ ಹೇಳುತ್ತಾನೆ, ‘‘ನಿನ್ನ ಕಾಲಿಗೆ ಮುಳ್ಳು ಚುಚ್ಚಿದರೆ ಇದರಲ್ಲಿ ರಾಜನ ಅಪರಾಧವೇನು?’’ ಮುದುಕ ಹೇಳುತ್ತಾನೆ, ‘‘ರಾಜನ ದುರಾಡಳಿತದಿಂದಾಗಿ ಅವನ ಅಧಿಕಾರಿಗಳು ನಮ್ಮನ್ನು ಸುಲಿಗೆ ಮಾಡಲು ಬರುತ್ತಾರೆ.
 ಅವರು ಬರುವುದು ತಿಳಿಯುತ್ತಲೇ ನಾವು ಕಾಡಿಗೆ ಓಡಿ ಹೋಗುತ್ತೇವೆ. ಗ್ರಾಮದಲ್ಲಿ ಜನರಿಲ್ಲವೆಂದು ತೋರ್ಪಡಿಸುತ್ತೇವೆ. ಅವರು ಹೋದ ಬಳಿಕ ಹಿಂತಿರುತ್ತೇವೆ. ಅವರು ಮುಳ್ಳುಕಂಟಿ ಹಾಕಿಟ್ಟಿರುತ್ತಾರೆ, ಅದರ ಮುಳ್ಳು ನನ್ನ ಕಾಲಿಗೆ ಚುಚ್ಚಿದೆ. ರಾಜನ ಆಡಳಿತ ಚೆನ್ನಾಗಿದ್ದರೆ ಈ ರೀತಿ ಮಾಡಬೇಕಾಗಿರಲಿಲ್ಲ. ಎಂದೇ, ರಾಜನ ಶರೀರಕ್ಕೆ ಇಂತಹ ಬಾಣ ಚುಚ್ಚಬೇಕು.’’ ರಾಜನು ಇನ್ನೊಂದು ಗ್ರಾಮಕ್ಕೆ ಹೋಗುತ್ತಾನೆ. ಮುದುಕಿಯೊಬ್ಬಳು ಜೋರಾಗಿ ರಾಜನನ್ನು ಬಯ್ಯುತ್ತಿದ್ದಳು. ಅವಳ ಮಗಳಿಗೆ ಲಗ್ನವಾಗುತ್ತಿರಲಿಲ್ಲ. ಪುರೋಹಿತ ಅವಳಿಗೆ ಕೇಳುತ್ತಾನೆ, ‘‘ನಿನ್ನ ಮಗಳಿಗೆ ಲಗ್ನವಾಗದಿದ್ದರೆ ರಾಜನ ಅಪರಾಧವೇನು?’’ ಮುದುಕಿ ಹೇಳುತ್ತಾಳೆ, ‘‘ಜನರಿಗೇ ಊಟಕ್ಕಿಲ್ಲ. (ಇಂದಿನ ಭಾಷೆಯಲ್ಲಿ ಎಲ್ಲರೂ ಬಡತನ ರೇಖೆಗಿಂತ ಕೆಳಕ್ಕೆ ಹೋಗಿದ್ದಾರೆ) ಲಗ್ನ ಮಾಡಿ ಉಣ್ಣುವ ಇನ್ನೂ ಒಂದು ಬಾಯಿ ತಂದುಕೊಂಡು ನಮ್ಮ ಪರಿಸ್ಥಿತಿಯೇಕೆ ಕೆಡಿಸಿಕೊಳ್ಳಬೇಕು, ಎಂದು ಎಲ್ಲರೂ ಯೋಚಿಸುತ್ತಾರೆ. ಜನರ ಆರ್ಥಿಕ ದುಃಸ್ಥಿತಿಗೆ ರಾಜನೇ ಹೊಣೆಗಾರ.’’ ರಾಜನು ಮೂರನೇ ಗ್ರಾಮಕ್ಕೆ ಹೋಗುತ್ತಾನೆ. ಗೋಪಾಲಕನೊಬ್ಬ ರಾಜನನ್ನು ಶಪಿಸುತ್ತ ಹೇಳುತ್ತಿದ್ದ, ‘‘ಶತ್ರುವು ಹೀಗೆಯೇ ರಾಜನಿಗೆ ಒದೆಯಬೇಕು.’’ ಅವನ ಹಾಲಿನ ಬಿಂದಿಗೆಯನ್ನು ತುಂಟ ಹಸುವು ಒದ್ದು ಕೆಡವಿತ್ತು. ಪುರೋಹಿತ ಹೇಳುತ್ತಾನೆ, ‘‘ನಿನ್ನ ಹಾಲು ಚೆಲ್ಲಿದ್ದರಲ್ಲಿ ರಾಜನ ಸಿಪಾಯಿಗಳು, ಅಧಿಕಾರಿಗಳು ಪುಕ್ಕಟೆ ಪಡೆದುಕೊಂಡು ಹೋಗುತ್ತಾರೆ. (ಈಗಿನ ಭಾಷೆಯಲ್ಲಿ ತಲಾಟಿ, ಗ್ರಾಮಾಭಿವೃದ್ಧಿ ಅಧಿಕಾರಿ, ಪೊಲೀಸ್ ಪಾಟೀಲ, ಕೊತ್ವಾಲ). ನಮ್ಮ ಸಂಸಾರ ಸಾಗಿಸಲು ಈ ಹಸುವಿನ ಹಾಲು ಕರೆಯಬೇಕಾಗುತ್ತದೆ, ಅದು ಒದ್ದು ಎಲ್ಲಾ ಹಾಲು ಚೆಲ್ಲಿ ಬಿಟ್ಟಿದೆ. ರಾಜ್ಯದ ಬೊಕ್ಕಸಕ್ಕೂ ಹೀಗೆಯೇ ಒದೆ ಬೀಳಲಿ.’’ ರಾಜನು ತಿಳಿಯಬೇಕಾದ್ದನ್ನು ತಿಳಿದುಕೊಂಡ. ಅವನ ಕಣ್ಣು ತೆರೆಯಿತು, ತನ್ನ ಆಡಳಿತವನ್ನು ಸುಧಾರಿಸಿದ. ಮನಮೋಹನ ಸಿಂಗ್‌ರ ಕಣ್ಣೇನೂ ತೆರೆಯಲಿಲ್ಲ , ಬದಲಾಗಿ ದಿನೇದಿನೇ ಅವು ಮಂಜಾಗುತ್ತ ಹೋಗುತ್ತಿವೆ. ಅವರಿಗೆ ರೈತರ ಆತ್ಮಹತ್ಯೆ ಕಾಣಲು ಸಾಧ್ಯವಾಗುತ್ತಿಲ್ಲ, ಮಹಿಳೆಯರ ಮೇಲಿನ ಅತ್ಯಾಚಾರ ಕಾಣಲು ಸಾಧ್ಯವಾಗುತ್ತಿಲ್ಲ, ಹಸಿವಿನಿಂದ ಕಂಗೆಟ್ಟ ಮುಖಗಳನ್ನು ಕಾಣಲು ಸಾಧ್ಯವಾಗುತ್ತಿಲ್ಲ.
 ಈ ಪರಿಸ್ಥಿತಿಯಿಂದ ದೇಶವನ್ನು ಉದ್ಧಾರ ಮಾಡಲು ಸಮರ್ಥ ನಾಯಕನ ಅವಶ್ಯಕತೆಯಿದೆ. ಆರಂಭದಲ್ಲೇ ಹೇಳಿದಂತೆ ಸಾಮಾನ್ಯ ಜನರಲ್ಲಿ ದೇಶದ ಕಾಯಕಲ್ಪ ಮಾಡುವ ಪ್ರಚಂಡ ಶಕ್ತಿಯಿದೆ. ಅವರಿಗೆ ಕುಶಲ ನಾಯಕ ಬೇಕು. ನಾಯಕನು ಜನರ ಶಕ್ತಿಯನ್ನು ಕೇಂದ್ರೀಕರಿಸುತ್ತಾನೆ, ಈ ಶಕ್ತಿಗೆ ವಿಧಾಯಕ ತಿರುವು ನೀಡುತ್ತಾನೆ, ಜನರಲ್ಲಿನ ಶಕ್ತಿಯನ್ನು ಬಡಿದೆಬ್ಬಿಸುತ್ತಾನೆ, ಅಲ್ಲದೆ ಪ್ರೇರೇಪಿಸುತ್ತಾನೆ. ಮಹಾತ್ಮ ಗಾಂಧಿಯವರಲ್ಲಿ ಇಂತಹ ಶಕ್ತಿಯಿತ್ತು. ತೀರಾ ದೀನಹೀನನಾಗಿದ್ದ, ತನ್ನನ್ನು ತೀರಾ ದುರ್ಬಲನೆಂದು ಭಾವಿಸುತ್ತಿದ್ದ ಸಾಮಾನ್ಯ ವ್ಯಕ್ತಿಯ ಸುಪ್ತಶಕ್ತಿಯನ್ನು ಮಹಾತ್ಮ ಗಾಂಧೀಜಿ ಬಡಿದೆಬ್ಬಿಸಿದರು. ಇದಕ್ಕೆ ಮುಂಚೆ ಇಂತಹದೇ ಅಗಾಧ ಕಾರ್ಯವನ್ನು ಶಿವಾಜಿ ಮಹಾರಾಜರು ಮಾಡಿದ್ದರು. ಮುಂದಿನ ದಿನಗಳಲ್ಲಿ ಇದೇ ಕಾರ್ಯವನ್ನು ದೇಶದ ಉದಯೋನ್ಮುಖ ನವ ನೇತೃತ್ವವು ಮಾಡಬೇಕಾಗಿದೆ.
 ನರೇಂದ್ರ ಮೋದಿಯವರ ರೂಪದಲ್ಲಿ ದೇಶಕ್ಕೆ ಅಂತಹ ನಾಯಕ ಲಭಿಸಿದ್ದಾನೆ. ಪ್ರಜಾತಂತ್ರೀಯ ಪ್ರಕ್ರಿಯೆಯಲ್ಲಿ ಜನನಾಯಕನು ಎದ್ದು ಬರಬೇಕಾಗುತ್ತದೆ. ಜನನಾಯಕನು ವಂಶವಾದದಿಂದ ಬರುತ್ತಿಲ್ಲ. ವಂಶವಾದದಿಂದ ಬರುವ ನಾಯಕನು ತನ್ನೊಂದಿಗೆ ಹೊಗಳುಭಟ್ಟರು ಮತ್ತು ತುಷ್ಟೀಕರಣ ಮಾಡುವವರ ಪಡೆ ಕಟ್ಟಿಕೊಂಡು ಬರುತ್ತಾನೆ. ಅವರಿಗೆ ಕೇವಲ ಗೊತ್ತಿರುವುದು ಇಷ್ಟೇ, ‘ಯಸ್ ಸಾರ್,’ ‘ಯಸ್ ಬಾಸ್’ ಎಂದಷ್ಟೇ ಹೇಳುವುದು. ವಂಶವಾದದ ನಾಯಕನು ಕುದುರೆಯನ್ನು ಕತ್ತೆ ಎಂದರೂ ಅದು ಭಟ್ಟಂಗಿತನದಿಂದ ಹೇಳೀತು, ಯಸ್ ಬಾಸ್. ಇಂದು ಹೀಗನ್ನುತ್ತಾರೆ ದಿಗ್ವಿಜಯ ಸಿಂಗ್, ಕಪಿಲ್ ಸಿಬ್ಬಲ್. ಪ್ರಜಾತಂತ್ರದಿಂದ ಎದ್ದು ಬರುವ ನಾಯಕನು ಜನಶಕ್ತಿಯನ್ನು ಪ್ರತಿನಿಧಿಸುತ್ತಾನೆ. ಜನರಿಗೆ ಬೇಕಾಗಿದ್ದೇನು ಎಂದು ಆತ ಚೆನ್ನಾಗಿ ಗುರುತಿಸುತ್ತಾನೆ, ಅದನ್ನು ತನ್ನ ಮಾತುಗಳಿಂದ ವ್ಯಕ್ತಪಡಿಸುತ್ತಾನೆ.
 ನರೇಂದ್ರ ಮೋದಿಯವರ ಹೆಸರನ್ನು ಬಿಜೆಪಿ ಘೋಷಿಸಿತು. ಸ್ವಲ್ಪ ಪ್ರತಿಕ್ರಿಯೆಯೆದ್ದಿತು, ಅದು ಅಪೇಕ್ಷಿತವೇ ಆಗಿತ್ತು. ಈ ಪ್ರತಿಕ್ರಿಯೆಯೂ ಜೀವಂತ ಪ್ರಜಾತಂತ್ರದ ಲಕ್ಷಣ. ಬಿಜೆಪಿ ನಾಯಕರಿಗೆ ನರೇಂದ್ರ ಮೋದಿಯವರ ಹೆಸರು ಘೋಷಿಸದೆ ಬೇರೆ ಪರ್ಯಾಯವಿರಲಿಲ್ಲ. ಕಾರಣ, ಈ ವಿಷಯ ಅವರ ಕೈಯಲ್ಲಿರಲಿಲ್ಲ. ಭಾರತದ ಸಮಸ್ತ ಯುವ ಜನಾಂಗದ ಬೇಡಿಕೆಯಾಗಿತ್ತು ಅದು. ಬಹುಸಂಖ್ಯ ಉದ್ಯಮ ಜಗತ್ತಿನ ಬೇಡಿಕೆಯಾಗಿತ್ತು, ಬಹುಸಂಖ್ಯ ಮಹಿಳಾ ವರ್ಗದ ಬೇಡಿಕೆಯಾಗಿತ್ತು. ಬಹುಸಂಖ್ಯ ವ್ಯಾಪಾರಿ ವರ್ಗದ ಬೇಡಿಕೆಯಾಗಿತ್ತು ಅದು.  ಒಟ್ಟಿನಲ್ಲಿ ಅದು ಸಮಗ್ರ ಭಾರತದ ಬೇಡಿಕೆಯಾಗಿತ್ತು. ಅಲ್ಲದೆ ಯಾವುದರ ಹೆಸರಿನಲ್ಲೇ ‘ಭಾರತೀಯ’ ಎಂಬ ಶಬ್ದವಿದೆಯೋ ಆ ಪಕ್ಷವು ಭಾರತ ಹೇಳುವುದನ್ನು ಅದೆಂತು ತಿರಸ್ಕರಿಸೀತು?
 ಮೋದಿಯವರ ಪ್ರಧಾನಿ ಸ್ಥಾನದ ಸಂಭಾವ್ಯ ಉಮೇದುವಾರಿಕೆಯನ್ನು ಘೋಷಿಸಿದ್ದರಿಂದ ದೇಶದೆಲ್ಲೆಡೆ ಚೈತನ್ಯದ ಅಲೆಯೆದ್ದಿದೆ. ಕಳೆದ ಹಲವು ದಶಕಗಳಲ್ಲಿ ಹೀಗಾಗಿರಲಿಲ್ಲ. ಕುಂದಿ ಹೋಗುತ್ತಿದ್ದ ಆತ್ಮವಿಶ್ವಾಸವು ಮತ್ತೆ ಮೇಲೆದ್ದು ಗೋಚರಿಸುತ್ತಿದೆ. ಪ್ರಧಾನಿ ಸ್ಥಾನದ ಉಮೇದುವಾರಿಕೆ ಘೋಷಿಸಿದ್ದರಿಂದ ಪರಿಸ್ಥಿತಿಯಲ್ಲೇನೂ ಶೀಘ್ರ ಆಮೂಲಾಗ್ರ ಪರಿವರ್ತನೆಯ ಶಕ್ಯತೆಯಿಲ್ಲ. ಆದರೆ ಯಾರನ್ನು ನಂಬಿಕೊಳ್ಳಬೇಕು, ಯಾರ ನೇತೃತ್ವದ ಮೇಲೆ ಮುದ್ರೆಯೊತ್ತಬೇಕು ಎಂಬ ಒಂದು ಚಹರೆ ದೇಶದೆದುರು ಬಂದಿದೆ.
ಮೋದಿಯವರು ಈ ರೀತಿ ಜನರ ವಿಶ್ವಾಸ ಗಳಿಸಿದ್ದು ಹೇಗೆ? ಈ ಹಿಂದೆ ವಿವಿಧ ಲೇಖನಗಳಲ್ಲಿ ಅದನ್ನು ವಿವರಿಸಲಾಗಿದೆ. ಆದರೆ ಸಂಕ್ಷಿಪ್ತವಾಗಿ ಅದು ಹಿಗಿದೆ –

  •  ನರೇಂದ್ರ ಮೋದಿ ಬಹು ಪ್ರಾಮಾಣಿಕರು.
  1.  ಅವರು ಭ್ರಷ್ಟಾಚಾರದಿಂದ ಮುಕ್ತರು.
  •  ಅವರು ಅಭಿವೃದ್ಧಿ ಪುರುಷರು.
  • ಅವರು ನ್ಯಾಯದಿಂದ ಆಡಳಿತ ನಡೆಸುವವರು.
  • ಅವರು ಸಮರ್ಪಿತ ರಾಷ್ಟ್ರಭಕ್ತರು. ತಮ್ಮೆಲ್ಲ ಜೀವನವನ್ನು ಭಾರತಮಾತೆಯ ಚರಣಗಳಿಗೆ ಅರ್ಪಿಸಿದ್ದಾರೆ.
  • ಅವರಿಗೆ ವ್ಯಕ್ತಿಗತ ಮಹತ್ವಾಕಾಂಕ್ಷೆಯಿಲ್ಲ, ವೈಚಾರಿಕ ಮಹತ್ವಾಕಾಂಕ್ಷೆಯಿದೆ. ಸಂಘಟನಾತ್ಮಕ ಮಹತ್ವಾಕಾಂಕ್ಷೆಯಿದೆ.

 
 ಮಹಾನ್ ನಾಯಕರಲ್ಲಿ ಮೂರು ಗುಣಗಳಿರಬೇಕಾಗುತ್ತದೆ.
 

  1.      ವಿಶ್ವಾಸಾರ್ಹತೆ: ಈ ವ್ಯಕ್ತಿ ಪ್ರಾಮಾಣಿಕನು, ಈತನ ಮಾತು –  ಕೃತಿ ಮತ್ತು ನಡವಳಿಕೆಗಳಲ್ಲಿ ಯಾವ ಅಂತರವೂ ಇಲ್ಲ.
  2.     ಆತ ಸಮರ್ಪಿತನಾಗಿರಬೇಕು: ಈ ನಾಯಕ ಜನತೆಗೆ ಸಮರ್ಪಿತನಾಗಿದ್ದಾನೆಂದು ಜನರಿಗೆ ಕಾಣಬೇಕು.  ಭೀಷ್ಮಾಚಾರ್ಯರು ಹೇಳಿದ್ದರು, ಕರ್ತವ್ಯವನ್ನು ಪಾಲಿಸುವಾಗ ತನ್ನ ಪ್ರಾಣಹಾನಿಯನ್ನು ಲೆಕ್ಕಿಸದಿರುವುದು ಎಲ್ಲಕ್ಕೂ ಶ್ರೇಷ್ಠ ಯಜ್ಞ ಮತ್ತು ಕ್ಷಾತ್ರಧರ್ಮವಾಗಿದೆ.
  3. ಆತ ಧರ್ಮದಂತೆ ನಡೆಯುವವನಾಗಿರಬೇಕು: ಧರ್ಮ, ಎಂದರೆ ನ್ಯಾಯ ಮತ್ತು ನೀತಿಗಳನ್ನೆಂದೂ ಬಿಡದವನಾಗಿರಬೇಕು. ನ್ಯಾಯ ಎಂದರೆ ಯಾವುದೇ ರೀತಿಯ ಭೇದಭಾವ ಮಾಡದೆ ಎಲ್ಲರ ಬಗ್ಗೆಯೂ ಸಮಭಾವ ಹಾಗೂ ನೀತಿ ಎಂದರೆ ಮನುಷ್ಯನ ವ್ಯಕ್ತಿಗತ ಮತ್ತು ಸಾಮೂಹಿಕ ಜೀವನವನ್ನು ಸುಖಿಗೊಳಿಸುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವವನಾಗಿರಬೇಕು.  ನರೇಂದ್ರ ಮೋದಿಯವರು ತಮ್ಮ ಮಾತು ಮತ್ತು ಕೃತಿಯಿಂದ ಈ ಮೂರೂ ಗುಣಗಳನ್ನು ದೇಶಕ್ಕೆ ಪರಿಚಯಿಸಿದ್ದಾರೆ. ಧರ್ಮವು ನಮ್ಮ ದೇಶದ ಆತ್ಮವಾಗಿದ್ದು, ಅಧರ್ಮಿ ಆಂಗ್ಲ ಮಾಧ್ಯಮಗಳು ಹಾಗೂ ಅಧರ್ಮಿ ಮತ್ತು ಅಸುರೀ ಸಂಘಟನೆ ಮತ್ತು ವ್ಯಕ್ತಿಗಳು, ನರೇಂದ್ರ ಮೋದಿಯವರ ಬಗ್ಗೆ ಏನೇ ಬರೆಯಲಿ, ಮಾತನಾಡಲಿ ಅದರಿಂದ ಧರ್ಮವನ್ನು ತಿಳಿದಿರುವ ಸಾಮಾನ್ಯ ಜನತೆಯ ಮೇಲೇನೂ ಪರಿಣಾಮವಾಗದು. ಆಗುವ ಪರಿಣಾಮವಾದರೂ ಏನು? ಕೃಷ್ಣನು, ರಾಮನು ಅಥವಾ ಇಂದು ತೋರಿಸುತ್ತಿರುವ ಮಹಾದೇವ ಸರಣಿಯ ಭಗವಾನ್ ಶಂಕರನು ಎಲ್ಲ ದಾನವ ಪ್ರವೃತ್ತಿಗಳನ್ನು ಹಿಮ್ಮೆಟ್ಟಿಸಿದಂತೆ, ನರೇಂದ್ರ ಮೋದಿಯವರ ಕೈಯಿಂದ ಎಲ್ಲರೂ ನಾಶ ಹೊಂದಬೇಕು, ಎಂದು ಎಲ್ಲರಿಗೂ ಅನಿಸುತ್ತದೆ. ಈ ಅಪೇಕ್ಷೆಯನ್ನು ಪೂರ್ಣಗೊಳಿಸುವ ಶಕ್ತಿಯನ್ನು ಪ್ರಜಾತಂತ್ರವು ನಮ್ಮ ಕೈಗಳಿಗೆ ನೀಡಿದೆ. ನಮ್ಮ ಹೊಣೆಯನ್ನರಿತು ನಾವು ಅದನ್ನೆಂತು ಪೂರೈಸುವೆವು ಎಂಬುದನ್ನು ನಮ್ಮ ಭವಿಷ್ಯ ಅವಲಂಬಿಸಿದೆ.
   

Leave a Reply