ಮೋದಿ ವಿರೋಧಿಗಳಿಗೆ ದೊರಕಿದ ಬ್ರಹ್ಮಾಸ್ತ್ರ: ಹಾರ್ದಿಕ್ ಪಟೇಲ್ ಎಂಬ ಹೈದ!

ದು ಗು ಲಕ್ಷ್ಮಣ್ - 0 Comment
Issue Date : 31.08.2015

ಗಾಂಧೀಜಿ, ಸರದಾರ್ ಪಟೇಲ್ ಹುಟ್ಟಿದ ಗುಜರಾತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಕಳೆದ 13 ವರ್ಷಗಳ ಕಾಲ ನರೇಂದ್ರ ಮೋದಿ ಅಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಭಾರೀ ಸುದ್ದಿಯಲ್ಲಿತ್ತು. ಈಗಲೂ ಅದು ಸುದ್ದಿ ಮಾಡಿದೆ. ಆದರೆ ಈಗ ಸುದ್ದಿಯಾಗಿರುವುದು ಒಂದು ಆಶ್ಚರ್ಯಕರ ಬೆಳವಣಿಗೆಯ ಮೂಲಕ. ಹಾರ್ದಿಕ್ ಪಟೇಲ್ ಎಂಬ ಇದುವರೆಗೆ ಯಾರೂ ಹೆಸರು ಕೇಳರಿಯದ, ನೆಟ್ಟಗೆ ಮೀಸೆ ಕೂಡ ಮೂಡದ ಹೈದನೊಬ್ಬ ಇದ್ದಕ್ಕಿದಂತೆ 15 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶ ನಡೆಸಿ, ಗುಜರಾತ್ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎಡರನ್ನೂ ಇಕ್ಕಟ್ಟಿಗೆ ಸಿಲುಕಿದ್ದಾನೆ. ಅತ್ಯಂತ ಶ್ರೀಮಂತ, ಪ್ರಭಾವಿ ಹಾಗೂ ಬಲಿಷ್ಠ ಸಮುದಾಯವಾಗಿರುವ ಪಟೇಲರಿಗೂ ಮೀಸಲಾತಿ ನೀಡಬೇಕೆಂಬುದು ಹಾರ್ದಿಕ್ ಪಟೇಲ್ ಹುಟ್ಟು ಹಾಕಿರುವ ‘ಪಾಟಿದಾರ್ ಅನಾಮತ್ ಆಂದೋಲನ್ ಸಮಿತಿ’ (ಪಾಸ್ – ಪಿಎಎಸ್)ಯ ಹಕ್ಕೊತ್ತಾಯ. ಆ. 25ರಂದು ಅಹಮದಾಬಾದಿನ ಗುಜರಾತ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಮೈದಾನದಲ್ಲಿ ಜಮಾಯಿಸಿದ 15 ಲಕ್ಷಕ್ಕೂ ಹೆಚ್ಚು ಪಾಟಿದಾರ್ ಸಮೂಹದ ಜನರನ್ನುದ್ದೇಶಿಸಿ ಹಾರ್ದಿಕ್ ಪಟೇಲ್  ‘ಶಿಕ್ಷಣ ಹಾಗೂ ಉದ್ಯೋಗದಲ್ಲಿ ನಮ್ಮ ಹಕ್ಕನ್ನು (ಮೀಸಲು) ಕೊಡದೆ ಹೋದರೆ  ಅದನ್ನು ಬಲವಂತವಾಗಿ ಕಿತ್ತುಕೊಳ್ಳಬೇಕಾಗುತ್ತದೆ. 1985ರಲ್ಲಿ ಗುಜರಾತ್‌ನಿಂದ ಕಾಂಗ್ರೆಸ್ ಪಕ್ಷವನ್ನು ಉಚ್ಚಾಟಿಸಿದ್ದೇವೆ. ಪಟೇಲರಿಗೆ ಮೀಸಲು ಕೊಡದಿದ್ದರೆ 2017ರ ವಿಧಾನಸಭೆ ಚುನಾವಣೆಯಲ್ಲಿ ಕೆಸರಿನಲ್ಲಿ ಕಮಲ ಅರಳದು’ ಎಂದು ಗುಜರಾತ್‌ನ ಬಿಜೆಪಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾನೆ.
 ಹಾರ್ದಿಕ್ ಪಟೇಲ್ ಕೇಳುತ್ತಿರುವುದು ಗುಜರಾತಿನ ಪಟೇಲ್ ಸಮುದಾಯಕ್ಕೆ ಮೀಸಲಾತಿಯನ್ನು. ಆದರೆ ಪಟೇಲ್ ಸಮುದಾಯ ವಜ್ರ, ಬಟ್ಟೆ, ಹೊಟೇಲ್ ಉದ್ಯಮ, ಗಣಿಗಾರಿಕೆ ಹಾಗೂ ದೊಡ್ಡ ಪ್ರಮಾಣದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಗುಜರಾತಿನ ಅತ್ಯಂತ ಮುಂದುವರಿದ ಸಮುದಾಯ. ಮೀಸಲಾತಿ ಸೌಲಭ್ಯ ಇರುವುದು ಹಿಂದುಳಿದವರನ್ನು ಮುಂದೆ ತರುವ ಉದ್ದೇಶಕ್ಕಾಗಿ. ಅದನ್ನು ಮುಂದುವರಿದ ವರ್ಗಕ್ಕೂ ನೀಡಬೇಕೆಂದು ಒತ್ತಾಯಿಸುವುದು ಅವೈಜ್ಞಾನಿಕ ಹಾಗೂ ಕಾನೂನುಬಾಹಿರ. ಆದರೆ ಹಾರ್ದಿಕ್ ಪಟೇಲ್ ಮಾತಿಗೆ ಗುಜರಾತಿನಲ್ಲಿ ಏಕೆ ಅಷ್ಟು ದೊಡ್ಡ ಪ್ರಮಾಣದ ಬೆಂಬಲ ವ್ಯಕ್ತವಾಗುತ್ತಿದೆಯೆಂದರೆ, ದೇಶದಾದ್ಯಂತ ಜಾತಿ ಆಧರಿತ ಮೀಸಲನ್ನು ವಿರೋಧಿಸುತ್ತಿರುವ ಒಂದು ದೊಡ್ಡ ವರ್ಗದ ವಾದವನ್ನೇ ಆತ ಮುಂದಿಡುತ್ತಿದ್ದಾನೆ. ಆ ವಾದ ಸರಳ. ‘ಮೇಲ್ಜಾತಿಗಳಲ್ಲೂ ಹಿಂದುಳಿದವರಿದ್ದಾರೆ. ಅವರಿಗೆ ಈಗಿರುವ ಮೀಸಲು ವ್ಯವಸ್ಥೆಯಿಂದ ಅನ್ಯಾಯವಾಗುತ್ತಿದೆ. ಇದನ್ನು ಸರಿಪಡಿಸಬೇಕೆಂದರೆ, ಒಂದೋ ಮೇಲ್ಜಾತಿಯಲ್ಲಿರುವ ಬಡವರಿಗೂ  ಮೀಸಲು ವ್ಯವಸ್ಥೆ ತನ್ನಿ. ಇಲ್ಲವಾದರೆ ಮೀಸಲು ವ್ಯವಸ್ಥೆಯನ್ನೇ ರದ್ದುಪಡಿಸಿ. ಪ್ರತಿಭೆ ಇದ್ದವರು ಮುಂದೆ ಬರುತ್ತಾರೆ.’
  ಈ ವಾದ ಗಮನಿಸಿದರೆ ಹಾರ್ದಿಕ್ ಪಟೇಲ್ ಅಂತಿಮವಾಗಿ ಮೀಸಲು ವ್ಯವಸ್ಥೆಯನ್ನೇ ಅಲುಗಾಡಿಸುವ ಗುರಿ ಹೊಂದಿದ್ದಾನಾ ಎಂಬ ಅನುಮಾನ ಉಂಟಾಗುತ್ತದೆ. ಪಟೇಲ್ ಸಮುದಾಯಕ್ಕೆ ಮೀಸಲು ನೀಡಿದರೆ ದೇಶದಾದ್ಯಂತ ಇತರ ಮುಂದುವರಿದ ವರ್ಗಗಳೂ ಮೀಸಲಿಗಾಗಿ ಹೋರಾಟ ಆರಂಭಿಸುತ್ತವೆ. ಈಗಾಗಲೇ ಅದರ ಲಕ್ಷಣಗಳೂ ಗೋಚರಿಸಿವೆ. ಹರಿಯಾಣದಲ್ಲಿ ಪ್ರಬಲ ಸಮುದಾಯವಾಗಿರುವ ಜಾಟರು ತಮಗೂ ಮೀಸಲಾತಿ ಬೇಕೆಂದು ಬೀದಿಗಿಳಿಯಲು ಹುನ್ನಾರ ನಡೆಸಿದ್ದಾರೆ. ಆಲ್ ಇಂಡಿಯಾ ಜಾಟ್ ಆರಕ್ಷಣ್ ಸಂಘರ್ಷ ಸಮಿತಿಯ ಹರ‌್ಯಾಣ ಅಧ್ಯಕ್ಷ ಹವಾಸಿಂಗ್ ಸಂಗ್ವಾನ್ ಸೆ. 13ರಿಂದ ಆಂದೋಲನ ಆರಂಭಿಸುವುದಾಗಿ ಘೋಷಿಸಿದ್ದಾರೆ. ಗುಜರಾತಿನಲ್ಲಿ ಮೀಸಲು ಆಗ್ರಹಿಸಿ ಹೋರಾಟ ಹಮ್ಮಿಕೊಂಡಿರುವ ಪಟೇಲ್ ಸಮುದಾಯಕ್ಕೆ ತಮ್ಮ ಬೆಂಬಲವನ್ನೂ ಅವರು ಘೋಷಿಸಿದ್ದಾರೆ. ಇದು ಇಲ್ಲಿಗೆ ನಿಲ್ಲದೆ ರಾಜಸ್ಥಾನದಲ್ಲಿ ಗುಜ್ಜರ್, ಮಹಾರಾಷ್ಟ್ರದಲ್ಲಿ ಮರಾಠರು, ಆಂಧ್ರ, ತೆಲಂಗಾಣಗಳಲ್ಲಿ ಕಮ್ಮ, ರೆಡ್ಡಿ, ನಾಯ್ಡು ಜನಾಂಗದವರು, ಕೇರಳದಲ್ಲಿ ನಾಯರ್ ಸಮುದಾಯ, ಕರ್ನಾಟಕದಲ್ಲಿ ವೀರಶೈವ, ಒಕ್ಕಲಿಗರು ಮೀಸಲಾತಿಗೆ ಆಗ್ರಹಿಸದೆ ಇರಲಾರರು. ಇವರೆಲ್ಲ ಆಗ್ರಹಿಸಿದ ಬಳಿಕ ಬ್ರಾಹ್ಮಣರು ನಾವೇಕೆ ಸುಮ್ಮನಿರಬೇಕೆಂದು ತಮ್ಮ ಸ್ವರವನ್ನೂ ಸೇರಿಸದೆ ಇರಲಾರರು. ಹೀಗೆ ಇದೊಂದು ಪ್ರಬಲ ರಾಷ್ಟ್ರೀಯ ಆಂದೋಲನವೇ ಆಗಿ, ಸಾಮರಸ್ಯ ಹದಗೆಟ್ಟು ಇಡೀ ಸಮಾಜದಲ್ಲಿ ಅರಾಜಕ ಸ್ಥಿತಿ ಹರಡಿ ಅಲ್ಲೋಲಕಲ್ಲೋಲವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ.
  ಇಷ್ಟಕ್ಕೂ ಪಟೇಲರಿಗೆ ಮೀಸಲಾತಿ ಬೇಕೆಂಬ ಆಂದೋಲನ ಹಮ್ಮಿಕೊಳ್ಳಬೇಕೆಂದು ಹಾರ್ದಿಕ್ ಪಟೇಲ್ ತಲೆಯೊಳಗೆ ಹುಳ ಬಿಟ್ಟವರು ಯಾರು? ಕಳೆದ ಲೋಕಸಭಾ ಚುನಾವಣೆಯಲ್ಲಿ ಆತ ಅರವಿಂದ ಕೇಜ್ರಿವಾಲರ ಆಮ್ ಆದ್ಮಿ ಪಕ್ಷಕ್ಕೆ ಮರುಳಾಗಿ ಗುಜರಾತಿನಲ್ಲಿ ಆ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದ. ಆದರೆ ಆಮ್‌ಆದ್ಮಿ ಪಕ್ಷದ ಎಲ್ಲ ಅಭ್ಯರ್ಥಿಗಳೂ ಅಲ್ಲಿ ಠೇವಣಿ ಕಳೆದುಕೊಂಡಾಗ ನಿರಾಶನಾಗಿದ್ದ. ಅದೇ ವೇಳೆ ಗುಜರಾತ್ ಕಾಂಗ್ರೆಸ್ ಪಕ್ಷ ಬಿಜೆಪಿಯ ಪರಿತ್ಯಕ್ತ ನಾಯಕ ಕೇಶುಭಾಯ್ ಪಟೇಲ್‌ಗೆ ಗಾಳಿ ಹಾಕಿ, ಅವರಿಂದ ಗುಜರಾತ್ ಪರಿವರ್ತನ್ ಪಾರ್ಟಿಯನ್ನು ಹುಟ್ಟುಹಾಕಿಸಿ, ಆ ಪಕ್ಷದೊಂದಿಗೆ ತಾನೂ ಕೈಜೋಡಿಸಿತ್ತು. ಆದರೆ ಬಿಜೆಪಿಯನ್ನು ಅಲುಗಾಡಿಸುವ, ಮೋದಿ ಆಡಳಿತಕ್ಕೆ ಅಂತ್ಯ ಹಾಡುವ ಕಾಂಗ್ರೆಸ್‌ನ ಈ ರಣತಂತ್ರ ವಿಫಲವಾಗಿತ್ತು. ಕಾಂಗ್ರೆಸ್ ಸೋತು ಸುಣ್ಣವಾಗಿತ್ತು. ಗುಜರಾತಿನ ವ್ಯಕ್ತಿ ನರೇಂದ್ರ ಮೋದಿಯೇ ದೇಶದ ಪ್ರಧಾನಿಯಾದಾಗ ವ್ಯಥೆಪಟ್ಟವರಲ್ಲಿ ಗುಜರಾತ್ ಕಾಂಗ್ರೆಸ್ಸಿಗರೂ ಸೇರಿದ್ದರು.
  ಆಗಿನಿಂದಲೂ ಪ್ರಧಾನಿ ಮೋದಿಗೆ ತಲೆನೋವಾಗುವ ರಣತಂತ್ರ ಹೆಣೆಯುವಲ್ಲಿ ಕಾಂಗ್ರೆಸ್ ನಿರತವಾಗಿತ್ತು. ಅವರಿಗೆ ಇಂಥ ಸಂದರ್ಭದಲ್ಲಿ ಆಶಾಕಿರಣವಾಗಿ ಗೋಚರಿಸಿದವನೇ ಹಾರ್ದಿಕ್ ಪಟೇಲ್ ಎಂಬ ಅತೃಪ್ತ ಯುವ ರಾಜಕಾರಣಿ. ಪಟೇಲರಿಗೆ ಮೀಸಲು ಆಗ್ರಹಿಸುವ ಹಾರ್ದಿಕ್ ಹುಟ್ಟುಹಾಕಿದ ‘ಪಾಸ್’ ಸಂಘಟನೆಯ ಹಿಂದೆ ಕಾಂಗ್ರೆಸ್‌ನ ‘ಕೊಡುಗೆ’ ಸಾಕಷ್ಟಿದೆ. ಬಿಹಾರದ ನಿತೀಶ್‌ಕುಮಾರ್, ಲಾಲೂಪ್ರಸಾದ್ ಯಾದವ್, ದೆಹಲಿಯ ಅರವಿಂದ ಕೇಜ್ರಿವಾಲ್ ಕೂಡ ಈಗ ಹಾರ್ದಿಕ್ ಬೆಂಬಲಕ್ಕೆ ನಿಂತಿದ್ದಾರೆ. ಬಿಹಾರದಲ್ಲಿ ನಡೆಯಲಿರುವ ಚುನಾವಣಾ ರ‌್ಯಾಲಿ ಉದ್ದೇಶಿಸಿ ಜೆಡಿಯು ಮೈತ್ರಿಕೂಟದ ಪರ ಪ್ರಚಾರ ಮಾಡುವಂತೆ ಆತನಿಗೆ ಆಹ್ವಾನ ಬಂದಿದೆ. ಮೇಲ್ನೋಟಕ್ಕೆ ಇದೊಂದು 22ರ ಹರೆಯದ ಪಡ್ಡೆ ಹುಡುಗ ಹುಟ್ಟುಹಾಕಿರುವ ಆಂದೋಲನ ಎನಿಸಬಹುದು. ಆದರೆ ಇದರ ಆಳದಲ್ಲಿ ಬಿಜೆಪಿಯೇತರ ಪಕ್ಷಗಳ ಪ್ರಬಲ ಹುನ್ನಾರವಿದೆ. ಪ್ರಧಾನಿ ಮೋದಿಯನ್ನು ಅವರ ತವರು ನೆಲದಲ್ಲೇ ಬಗ್ಗುಬಡಿಯುವ ಷಡ್ಯಂತ್ರ ಇದಾಗಿದೆ. ಹಾರ್ದಿಕ್ ಪಟೇಲ್ ಈಗ ಅವರಿಗೆಲ್ಲ ಅಯಾಚಿತವಾಗಿ ದೊರೆತಿರುವ ಒಂದು ಬ್ರಹ್ಮಾಸ್ತ್ರ, ಅಷ್ಟೆ.
  ತನ್ನ ಮಾತಿಗೆ ಮರುಳಾಗಿ ಲಕ್ಷಲಕ್ಷ ಜನ ಪಟೇಲರು ಸೇರಿದ್ದನ್ನು ನೋಡಿ ಹಾರ್ದಿಕ್ ಪಟೇಲನ ತಲೆ ಕೂಡ ತಿರುಗಿದೆ. ತಾನೊಬ್ಬ ರಾಷ್ಟ್ರಮಟ್ಟದ ಜನಪ್ರಿಯ ನಾಯಕನಾಗಿಬಿಟ್ಟೆ ಎಂದು ಆತ ಬೀಗುತ್ತಿದ್ದಾನೆ. ‘ಚಹಾ ಮಾರುವ ವ್ಯಕ್ತಿಯನ್ನು ಪ್ರಧಾನಿಯನ್ನಾಗಿ ಮಾಡಿದ ನಾವು, ಮತ್ತೆ ಆ ಪ್ರಧಾನಿಯನ್ನು ಚಹಾ ಮಾರಲು ಕಳಿಸುತ್ತೇವೆ’ ಎಂದು ಸಾರ್ವಜನಿಕ ಸಭೆಯಲ್ಲಿ ಪ್ರಧಾನಿಯ ಬಗೆ ಹಗುರವಾಗಿ ಮಾತನಾಡಿದ್ದಾನೆ. ಆತನ ಇಂತಹ ಮಾತು ಸ್ವತಃ  ಪಟೇಲ್ ಸಮುದಾಯದ ಹಲವು ಪ್ರಮುಖರಿಗೇ ಇಷ್ಟವಾಗಿಲ್ಲ.
  ಹಾರ್ದಿಕ್ ಪಟೇಲ್ ಸಂಘಟಿಸಿದ ರ‌್ಯಾಲಿಗೆ 15 ಲಕ್ಷ ಮಂದಿ ಪಟೇಲರು ಹಾಜರಾಗಿರಬಹುದು. ಆದರೆ ಇಡೀ ಪಟೇಲ್ ಸಮೂಹವೇನೂ ಆತನ ಹಿಂದಿಲ್ಲ. ‘ಸರ್ದಾರ್ ಪಟೇಲ್ ಗ್ರೂಪ್’ ಎಂಬುದು ಪಟೇಲರ ಬಲಿಷ್ಠ ಸಂಘಟನೆ ಅದರ ಅಧ್ಯಕ್ಷ ಲಾಲ್‌ಜೀ ಪಟೇಲ್ ಹಾರ್ದಿಕ್ ಪಟೇಲನದು ಬಾಲಿಶ ನಿರ್ಧಾರವೆಂದು ಖಂಡಿಸಿದ್ದಾರೆ. ಇತ್ತ ಗುಜರಾತ್ ಕ್ಷತ್ರಿಯ ಸಮಾಜದ ಅಧ್ಯಕ್ಷರಾದ ಅಲ್ಪೇಶ್‌ಠಾಕೂರ್ ‘ಪಟೇಲ್ ಸಮುದಾಯವನ್ನು ಓಬಿಸಿ ವರ್ಗಕ್ಕೆ ಸೇರಿಸಿದರೆ ನಾವು ಸುಮ್ಮನಿರುವುದಿಲ್ಲ’ ಎಂದು ಗುಡುಗಿದ್ದಾರೆ. ಗುಜರಾತಿನಲ್ಲಿರುವ 1.8 ಕೋಟಿ ಪಟೇಲ್ ಸಮುದಾಯಕ್ಕೆ ಮೀಸಲು ಸೌಲಭ್ಯ ಕಲ್ಪಿಸಿದರೆ, ಅಲ್ಲಿನ ಉಳಿದ ಸಮುದಾಯ ಇದನ್ನು ಪ್ರಬಲವಾಗಿ ವಿರೋಧಿಸುವುದು ಖಂಡಿತ.
  ‘ಆರ್ಥಿಕ ಮಟ್ಟವನ್ನು ಆಧರಿಸಿದ ಮೀಸಲು ವ್ಯವಸ್ಥೆ ಜಾರಿಗೆ ತನ್ನಿ. ಇಲ್ಲವೇ ಮೀಸಲು ವ್ಯವಸ್ಥೆಯನ್ನೇ ರದ್ದುಪಡಿಸಿ’ ಎಂಬುದು ಹಾರ್ದಿಕ್ ಪಟೇಲ್ ಆಗ್ರಹ. ಜಾತಿ ಆಧರಿತ ಮೀಸಲು ಸೌಲಭ್ಯ ತೆಗೆದುಹಾಕಿ ಎಲ್ಲ ಜಾತಿಯಲ್ಲಿರುವ ಬಡವರಿಗೆ ಮೀಸಲು ಸೌಲಭ್ಯ ಕೊಡಿ ಎನ್ನುವ ವಾದಕ್ಕೆ ಬಹುಶಃ ಎಲ್ಲರ ಬೆಂಬಲವೂ ಇದೆ. ಇವರನ್ನೆಲ್ಲ ಸಂಘಟಿಸುವ ಕೆಲಸ ಮಾಡಿದರೆ ಅದೊಂದು ದೇಶವ್ಯಾಪಿ ಹೋರಾಟವಾಗಿ ರೂಪುಗೊಳ್ಳುವ ಸಾಧ್ಯತೆಯೂ ಇದೆ. ಹಾರ್ದಿಕ್ ಹುಟ್ಟುಹಾಕಿದ ಈ ಆಂದೋಲನದ ಕಿಡಿಗಳು ದೇಶದೆಲ್ಲೆಡೆ ಹರಡಿ ದಾವಾನಲವಾಗಿ ವ್ಯಾಪಿಸುವ ಅಪಾಯವೂ ಇಲ್ಲದಿಲ್ಲ. ಆದ್ದರಿಂದ ಸರ್ಕಾರ ಕೇವಲ ಬಲಪ್ರಯೋಗದ ಮೂಲಕ ಈ ಹೋರಾಟವನ್ನು ಹತ್ತಿಕ್ಕಲು ಹೋಗಬಾರದು. ಜಾಣತನ, ವಿವೇಚನೆಯ ಮೂಲಕ ಬಗೆಹರಿಸಬೇಕು. ಹೋರಾಟದ ಹಿಂದಿರುವ ಅತೃಪ್ತ ರಾಜಕೀಯ ಆತ್ಮಗಳಿಗೆ ವಿಕೃತ ಸಂತಸ ಸಿಗದಂತೆ ಎಚ್ಚರವಾಗಿಸಬೇಕಾದ ಅಗತ್ಯವೂ ಇದೆ.
  ಒಟ್ಟಾರೆ ಮೋದಿ ಸರ್ಕಾರಕ್ಕೆ ಇದೊಂದು ದೊಡ್ಡ ಸವಾಲು. ಅದನ್ನು ಮೋದಿ ಹೇಗೆ ಬಗೆಹರಿಸುತ್ತಾರೆಂದು ಇಡೀ ದೇಶ ಕುತೂಹಲದಿಂದ ನೋಡುತ್ತಿದೆ.­­­
 

   

Leave a Reply