ಮೋದಿ ಸಮಾವೇಶ ಮತ್ತು ಅನಂತರ…

ರಾಜ್ಯ ಚುನಾವಣೆಗಳು - 0 Comment
Issue Date : 25.11.2013

ನವೆಂಬರ್ 17 ರ ಭಾನುವಾರ, ರಾಜ್ಯದ ಬಿ.ಜೆ.ಪಿ ಕಾರ್ಯಕರ್ತರು ಹಾಗೂ ಹಿತೈಷಿಗಳೆಲ್ಲರ ಗಮನ ಹರಿದಿದ್ದು ಬೆಂಗಳೂರು ಅರಮನೆಯ ಮೈದಾನದತ್ತ. ಬಹುನಿರೀಕ್ಷಿತ ‘‘ಭಾರತ ಗೆಲ್ಲಿಸಿ’’ ಸಮಾವೇಶಕ್ಕೆ ನಿಗದಿಮಾಡಿದ ಸಮಾವೇಶದ ಕ್ಷಣ ಗಣನೆ ಪ್ರಾರಂಭವಾಗಿತ್ತು. ಸಮಾವೇಶದಲ್ಲಿ ಭಾಗವಹಿಸುವವರ ಪ್ರವಾಹ ಬೆಳಗಿನಿಂದಲೇ ಹರಿಯಲಾರಂಭಿಸಿತ್ತು. ಜೊತೆಜೊತೆಗೆ ಪ್ರಕೃತಿ ಮಾತೆಯ ಕೃಪೆಗಾಗಿ ಎಲ್ಲರೂ ಮೊರೆ ಹೊಕ್ಕಿದ್ದರು. ಮೋಡಕವಿದ ವಾತಾವರಣ. ಹಿಂದಿನ ರಾತ್ರಿ ಭರ್ಜರಿ ಮಳೆ ಆಗಿತ್ತು. ಯಾವಾಗ ಮಳೆ ಪ್ರಾರಂಭವಾಗುವುದೋ, ನಮ್ಮ ಕಾರ್ಯಕ್ರಮ ಏನಾಗುವುದೋ ಎಂಬ ಆತಂಕವು ಅಲ್ಲಿ ಕಾಣುತ್ತಿತ್ತು. ಅಂತಹ ಸಂಧರ್ಭದಲ್ಲಿ ಕಾರ್ಯಕರ್ತನೊಬ್ಬ ಧೈರ್ಯತುಂಬಲು ಹಾಸ್ಯ ಚಟಾಕಿ ಹಾರಿಸಿದ. ‘‘ಯೋಚಿಸಬೇಡಿ. ನಾನು ವರುಣ.com ಗೆ ಮೆಸೇಜ್ ಕಳುಹಿಸಿದ್ದೇನೆ. ಮಧ್ಯಾಹ್ನ 3 ಗಂಟೆವರೆಗೆ ಮಳೆರಾಯ ಬರಬಾರದೆಂದು ತಿಳಿಸಿದ್ದೇನೆ’’. ಅವನ ಮಾತು ನಗು ತಂದಂತೆಯೇ ತುಸು ಧೈರ್ಯವನ್ನೂ ತಂದಿತು.

ಸರಿಯಾದ ಸಮಯಕ್ಕೆ ಮೈದಾನಕ್ಕೆ ಬಾನಿನ ಲೋಹದ ಹಕ್ಕಿ-ಹೆಲಿಕಾಫ್ಟರ್ ಬಂದಿಳಿಯಿತು. ಲಕ್ಷಾಂತರ ಜನರ ಹರ್ಷೋದ್ಗಾರದೊಂದಿಗೆ ನರೇಂದ್ರ ಮೋದಿ ರವರು ವೇದಿಕೆಯನ್ನು ಏರಿದರು. ಜನ ಸಮೂಹದತ್ತ ಕೈಬೀಸಿದರು. ಆಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್‌ರವರು ಹೇಳಿದ್ದು ‘‘ನನ್ನ ಕಣ್ಣಮುಂದೆ ಕಾಣುತ್ತಿರುವುದು ವಿಶಾಲ ಜನಸಭೆಯಲ್ಲ ಬದಲಿಗೆ ವಿಶಾಲ ಜನಸಾಗರ’’ ಸುಮಾರು 1 ಗಂಟೆ 10 ನಿಮಿಷಗಳ ಕಾಲ ನರೇಂದ್ರ ಮೋದಿಯವರು ಬೆಂಗಳೂರು ನಗರದ-ಕರ್ನಾಟಕ ರಾಜ್ಯದ ದಾರ್ಶನಿಕರನ್ನು, ಹಿರಿಯ ನಾಯಕರನ್ನು ಸ್ಮರಿಸಿಕೊಂಡು, ಮಾಹಿತಿ ತಂತ್ರಜ್ಞಾನದ ಕುರಿತು ಮಾತನಾಡಿ, ಎನ್.ಡಿ.ಎ ಸರ್ಕಾರದ ಅವಧಿಯಲ್ಲಿ ಯೋಜಿಸಿದ್ದ ರೈಲ್ವೆ ವಿಶ್ವವಿದ್ಯಾಲಯದ ಬಗ್ಗೆ ಪ್ರಸ್ತಾಪಿಸಿ, ತಾನೊಬ್ಬ ಅಭಿವೃದ್ದಿಯ ಬಗ್ಗೆ ಸದಾ ಚರ್ಚಿಸುವ ಮುತ್ಸದ್ದಿ ನಾಯಕನೆಂದು ರುಜುವಾತು ಮಾಡಿದರು. ರಾಜ್ಯ ಕಂಡ ಅತಿದೊಡ್ಡ ರಾಜಕೀಯ ಸಮಾವೇಶಗಳಲ್ಲಿ ‘‘ಭಾರತ ಗೆಲ್ಲಿಸಿ’’ ಮುಂಚೂಣಿಯಲ್ಲಿ ನೆನಪಿಡುವ ಸಮಾವೇಶವಾಗಿತ್ತು. ‘‘ಭಾರತ ಗೆಲ್ಲಿಸಿ’’ ಸಮಾವೇಶದಲ್ಲಿ ಬಂದು ಭಾಗವಹಿಸಿದವರೆಲ್ಲರಿಗೂ ಸಮಾವೇಶದಲ್ಲಿ ಭಾಗಿಯಾದವರ ಸಂಖ್ಯೆ, ಅಚ್ಚುಕಟ್ಟಾದ ವ್ಯವಸ್ಥೆ, ಯಾವುದೇ ಅಹಿತಕರ ಘಟನೆ ಆಗದೆ ಕಾರ್ಯಕ್ರಮ ನಡೆದ ರೀತಿ ಹಾಗೂ ನರೇಂದ್ರ ಮೋದಿಯವರ ಕಸುವು ತುಂಬುವ ಮಾತುಗಳು … ಈ ಎಲ್ಲದರ ಅತ್ಯಂತ ರುಚಿಕರ ರಸಾಯನ ದೊರಕಿತು. ಮಾರನೇ ದಿನ ಎಲ್ಲಾ ಮಾಧ್ಯಮಗಳಲ್ಲಿ ಕಾರ್ಯಕ್ರಮದ ಕುರಿತು ಮೆಚ್ಚುಗೆಯ ನುಡಿಗಳೇ ಪ್ರಕಟವಾಗಿದ್ದು ಅತ್ಯಂತ ಗಮನಾರ್ಹ ಸಂಗತಿ. ‘‘ಭಾರತ ಗೆಲ್ಲಿಸಿ’’ ಸಮಾವೇಶದ ನಂತರ ಮುಂದೇನು? ಈ ಪ್ರಶ್ನೆ ರಾಜ್ಯದ ರಾಜಕೀಯದಲ್ಲಿ ಆಸಕ್ತಿ ಇರುವವರಿಗೆಲ್ಲರಿಗೂ ಸಹಜವಾಗುತ್ತಿದೆ. ಒಂದು ರ್ಯಾಲಿ, ಒಂದು ಸಮಾವೇಶ, ಒಂದು ಭಾಷಣಗಳಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂಬುದು ಸಮಾವೇಶದ ಯಶಸ್ಸನ್ನು ಕಂಡು ಕರುಬುತ್ತಿರುವವರ ರಾಗ. ಆದರೆ ಒಂದು ಸಮಾವೇಶದ ಯಶಸ್ಸಿನಿಂದ ಯಾವುದೇ ರಾಜಕೀಯ ಪಕ್ಷ ಸುಮ್ಮನೆ ಕೂರುವುದಿಲ್ಲ. ಅದೇ ಸಂತೋಷದಿಂದ ಬೀಗುತ್ತಾ ಕಾಲಕಳೆಯುವುದೂ ಇಲ್ಲ. ಸಮಾವೇಶ ಮುಗಿದ 24 ಗಂಟೆ ಒಳಗೆ ಬಿಜೆಪಿಯ ಎಲ್ಲಾ ಮೊರ್ಚಾಗಳ (ಯುವ, ಮಹಿಳಾ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ರೈತ… ಇತ್ಯಾದಿ) ಪದಾಧಿಕಾರಿಗಳ ಒಂದು ದಿನದ ಅವಲೋಕನ ಸಭೆ ನಡೆಯಿತು. ನ.21ರಂದು ಅಂದರೆ ಕಾರ್ಯಕ್ರಮ ಮುಗಿದ 4 ನೇ ದಿನ ಎಲ್ಲಾ ಲೋಕಸಭಾ ಕ್ಷೇತ್ರದ ಪ್ರಮುಖರ ಸಭೆ ನಡೆಯಿತು. ಈ ಎರಡು ಸಭೆಗಳಲ್ಲಿ ಕಾರ್ಯಕ್ರಮದ ಕುರಿತು ಮುಕ್ತ ವಿಶ್ಲೇಷಣೆ ಹಾಗೂ ನಮ್ಮ ಮುಂದಿನ ಕಾರ್ಯಕ್ರಮಗಳ ಯೋಜನೆ ಕುರಿತು ಚರ್ಚೆ ನಡೆಯಿತು. ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಮುಂದಿನ ಲೋಕಸಭಾ ಚುನಾವಣೆಗೆ ಸುಮಾರು 120 ರಿಂದ 150 ದಿನಗಳಿವೆ. ಡಿಸೆಂಬರ್‌ನಲ್ಲಿ ಉತ್ತರ ಭಾರತದ 5 ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳು ಹೊರಬೀಳಲಿದೆ. ವರದಿಗಳ ಪ್ರಕಾರ 4 ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಇದು ನಮ್ಮ ಕಾರ್ಯಕ್ಕೆ ಇನ್ನಷ್ಟು ಸ್ಫೂರ್ತಿ ನೀಡುವ ಸಂಗತಿಯಾಗುತ್ತದೆ. ನಮ್ಮ ರಾಜ್ಯದಲ್ಲಿ ಡಿಸೆಂಬರ್-ಜನವರಿ ತಿಂಗಳಲ್ಲಿ ಸುಮಾರು 8 ಕಡೆ ‘‘ಭಾರತ ಗೆಲ್ಲಿಸಿ’’ ಮಾದರಿಯಲ್ಲಿ ಸಮಾವೇಶಗಳನ್ನು ಯೋಜಿಸಲು ನಿಶ್ಚಯಿಸಲಾಗಿದೆ. ಈ 8 ಸಮಾವೇಶಗಳಿಗೆ ಸ್ವತಃ ನರೇಂದ್ರ ಮೋದಿಯವರು ಮತ್ತು ಇತರೆ ರಾಷ್ಟ್ರೀಯ ನಾಯಕರು ಬರುವವರಿದ್ದಾರೆ. ಇದರ ಜೊತೆಜೊತೆಗೆ ರಾಜ್ಯದಲ್ಲಿ ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋದ ಮತದಾರರನ್ನು ಸೇರಿಸುವ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯುತ್ತದೆ. ಯಾವರೀತಿ ‘‘ಭಾರತ ಗೆಲ್ಲಿಸಿ’’ ಸಮಾವೇಶ ಆಯೋಜನೆಯ ಬಗ್ಗೆ ರಾಜ್ಯದ ಎಲ್ಲಾ ಜಿಲ್ಲೆಗಳ ಎಲ್ಲಾ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರತಿ ಮತಗಟ್ಟೆ ಮಟ್ಟದಲ್ಲಿ ಜನ ಸಂಪರ್ಕ ಕಾರ್ಯಕ್ರಮ ನಡೆಯಿತೋ ಅದರ ಇನ್ನಷ್ಟು ವಿಸ್ತೃತ ರೂಪದಲ್ಲಿ ಮತಗಟ್ಟೆಗಳ ಸಮಾವೇಶವನ್ನು ಯೋಜಿಸಲಾಗುತ್ತಿದೆ. ಇನ್ನು ರಾಜ್ಯದ ಎಲ್ಲಾ ವಿಧಾನ ಸಭಾ ಕ್ಷೇತ್ರದ ಮಟ್ಟದಲ್ಲಿ ಕಾರ್ಯಕರ್ತರ ಸಮಾವೇಶವೂ ನಮ್ಮ ಮುಂದಿನ ಕಾರ್ಯಯೋಜನೆಯಲ್ಲಿ ಸೇರಿದೆ. ನವೆಂಬರ್ 25 ರಿಂದ ಡಿಸೆಂಬರ್ 6ರವರೆಗೆ ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನ ನಡೆಯಲಿದೆ. ಆ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಕಳೆದ 6 ತಿಂಗಳಿಂದ ತನ್ನ ಆಡಳಿತದಲ್ಲಿ ತಂದು ಕೊಂಡಿರುವ ಅನೇಕ ಅವಘಡಗಳನ್ನು ಪ್ರಸ್ತಾಪಿಸಿ ಜನಪರವಾದ ನಿಲುವನ್ನು ಬಿಜೆಪಿ ಪ್ರದರ್ಶಿಸಲಿದೆ. ಕೇವಲ 6 ತಿಂಗಳಲ್ಲಿ ಆಡಳಿತ ನಡೆಸುವ ಉತ್ಸಾಹ ಕಳೆದುಕೊಂಡಿರುವ, ಯಾವುದೇ ರೀತಿಯ ಸಂಘಟಿತ ಪ್ರಯತ್ನ ಇಲ್ಲದ, ಮಂತ್ರಿಗಳ ಅಸಹಕಾರ ಚಳುವಳಿಯನ್ನು ಅನುಭವಿಸುತ್ತಿರುವ ಸರ್ಕಾರವನ್ನು ನಾವು ಕಾಣುತ್ತ್ತಿದ್ದೇವೆ. ಈ ಎಲ್ಲದರ ವಿರುದ್ದ ವಿಧಾನ ಮಂಡಲದ ಒಳಗೆ ಮತ್ತು ಹೊರಗೆ ನಮ್ಮ ಹೋರಾಟ ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿದೆ.

 ‘‘ಭಾರತ ಗೆಲ್ಲಿಸಿ’’ ಸಮಾವೇಶ ಸಂದರ್ಭದಲ್ಲಿ ರಾಜ್ಯದೆಲ್ಲೆಡೆ ಹೋದಾಗ ಅಲ್ಲಿ ವ್ಯಕ್ತವಾಗುತ್ತಿದ್ದ ಉತ್ಸಾಹ, ಬಿಜೆಪಿಯ ಕಾಯಕರ್ತರಲ್ಲಿ ಉಂಟಾಗಿರುವ ನವೋಲ್ಲಾಸ ನಮಗೆ ಕೇವಲ 6 ತಿಂಗಳ ಹಿಂದೆ ಚುನಾವಣೆಯಲ್ಲಿ ಸೋತ ಪಕ್ಷ ನಮ್ಮದೇನಾ ಎಂದು ನಾವೇ ಪ್ರಶ್ನಿಸುವಂತಿದೆ. ನಿಜ. ಬಿಜೆಪಿ ಕರ್ನಾಟಕ ರಾಜ್ಯದಲ್ಲಿ ಮತ್ತೊಮ್ಮೆ ಪುಟಿದೆದ್ದು ನಿಂತಿದೆ. ಕಾರ್ಯಕರ್ತರು ಕಾರ್ಯಸನ್ನದ್ಧರಾಗಿದ್ದಾರೆ. ಎಲ್ಲದರ ಒಟ್ಟು ಫಲಶ್ರುತಿ ಬರುವ ಲೋಕಸಭಾ ಚುನಾವಣೆಯಲ್ಲಿ ನಾವು ನಿಶ್ಚಿತವಾಗಿ ಕಾಣಲಿದ್ದೇವೆ.

ಎಸ್.ಸುರೇಶ್‌ಕುಮಾರ್, ಮಾಜಿ ಸಚಿವರು

   

Leave a Reply