ಯತ್ರ ಶೌಚಾಲಯಾ: ನಿರ್ಮೀಯಂತೇ ರಮಂತೇ ತತ್ರ ದೇವತಾಃ!

ಲೇಖನಗಳು - 0 Comment
Issue Date :

-ದೀಪಕ್ ಹುಣಸೂರು

ಹಿಂದೂ ಧರ್ಮದಲ್ಲಿ ಎಲ್ಲಿ ಸ್ತ್ರೀಯರಿಗೆ ಪೂಜನೀಯ ಭಾವನೆಗಳಿಂದ ಕಾಣಲಾಗುತ್ತದೆಯೋ, ಎಲ್ಲಿ ಸ್ತ್ರೀಯರಿಗೆ ಗೌರವ ನೀಡಲಾಗುತ್ತದೆಯೋ ಅಲ್ಲಿ ದೇವತೆಗಳು ಇರುತ್ತಾರೆ ಎಂದು ನಂಬಲಾಗಿದೆ. ಭಾರತೀಯ ಸಂಸ್ಕೃತಿ-ಪರಂಪರೆಯಲ್ಲಿ ಹೆಣ್ಣಿಗೆ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಮನುವಿನ ಪ್ರಕಾರ ಒಂದು ಹೆಣ್ಣು ಹುಟ್ಟಿದ್ದಾಗ ತಂದೆ ತಾಯಿ ಆಶ್ರಯದಲ್ಲೂ, ಬೆಳದು ಮದುವೆಯಾದ ನಂತರ ಗಂಡನ ಆಶ್ರಯದಲ್ಲೂ, ವೃದ್ಯಾಪದಲ್ಲಿ ಮಕ್ಕಳ ಆಶ್ರಯದಲ್ಲಿರಬೇಕೆಂದು ಹೇಳಲಾಗುತ್ತದೆ. ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನ ನೀಡಿದರು ಸಹ ಪುರುಷ ಪ್ರದಾನ ಸಮಾಜ ಹೆಣ್ಣನ್ನು  ನಿಯಂತ್ರಿಸುತ್ತಿದೆ ಎಂಬ ಆರೋಪವೂ ಇದೆ. ಆಧುನಿಕ ಭಾರತದಲ್ಲಿ ಹೆಣ್ಣಿನ ಸುರಕ್ಷತೆ, ರಕ್ಷಣೆ, ಸ್ತ್ರೀ ಸಬಲೀಕರಣಕ್ಕೆ, ಸ್ತ್ರೀ ಆರೋಗ್ಯ ಸುಧಾರಣೆಗಾಗಿ ಸರಕಾರಗಳು ಹಲವು ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದೆ. ಕುಟುಂಬ ಆರೋಗ್ಯ ಸುಧಾರಣೆ, ಸ್ತ್ರೀ ಸುರಕ್ಷತೆ, ಹಾಗೂ ಬಯಲು ಮುಕ್ತ ಶೌಚಾಲಯಗಳನ್ನು ನಿರ್ಮಿಸುವ ಸಲುವಾಗಿ ಸಮಾಜದ ಪ್ರತಿ ಕುಟುಂಬವೂ ಶೌಚಾಲಯ ಹೊಂದಲಿ ಎಂಬ ದೃಷ್ಠಿಯಿಂದ ಜಾರಿಗೊಳಿಸಿದ ಸ್ವಚ್ಛ ಭಾರತ್ ಮಿಷನ್ ಯೋಜನೆ ಬಯಲು ಶೌಚಾಲಯದಿಂದ ಹೆಣ್ಮಕ್ಕಳಿಗೆ  ಆಗುತ್ತಿದ್ದ ಮಾನಸಿಕ ಕಿರಿಕಿರಿ, ಮುಜುಗರ, ಅಸುರಕ್ಷತೆ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವಿಕೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ ಎಂದರೆ ತಪ್ಪಾಗಲಾರದು. ದೇಶಾದ್ಯಂತ ಸ್ವಚ್ಛ ಭಾರತ ಮಿಷನ್ ವಿಭಿನ್ನ ಪ್ರಯೋಗಗಳಿಗೆ ನಾಂದಿಯಾಗಿದೆ. ಇದಕ್ಕೆ ರಾಜ್ಯವೂ ಹೊರತಾಗಿಲ್ಲ. ಬಯಲು ಮುಕ್ತ ಶೌಚಾಲಯವನ್ನಾಗಿಸಲು ಅಧಿಕಾರಿಗಳು, ಜನಪ್ರತಿನಿಧಿಗಳು ವಿಭಿನ್ನ ಪ್ರಯತ್ನ ನಡೆಸುತ್ತಿರುವುದು ಅಗ್ಗಾಗೆ ಪ್ರತಿಕೆಗಳಲ್ಲಿ ವರದಿಯಾಗಿರುವುದುಂಟು.

 ಮೈಸೂರು ಜಿಲ್ಲೆಯ ಹುಣಸೂರು ತಾಲೂಕನ್ನು ಬಯಲು ಮುಕ್ತ ಶೌಚಾಲಯವನ್ನಾಗಿಸಲು ಪಣತೊಟ್ಟ ಅಧಿಕಾರಿಯೊಬ್ಬರ ರೋಚಕ ಹಾಗೂ ಜನಪರ ಕಾಳಜಿಯುಳ್ಳ ಕಥೆ ನಿಮಗೆ ತಿಳಿಸಲೇ ಬೇಕು. ಹುಣಸೂರು ತಾಲೂಕಿನಲ್ಲಿ ಬಯಲು ಮುಕ್ತ ಶೌಚಾಲಯ ಕೇವಲ ಜನಜಾಗೃತಿಯಾಗದೆ ಜನಾಂದೋಲನವಾಗಿ ಮಾರ್ಪಟ್ಟು ಇನ್ನು ಎರಡು ತಿಂಗಳಲ್ಲಿ ರಾಜ್ಯ ಸರಕಾರ ಹುಣಸೂರು ತಾಲೂಕನ್ನು ಬಯಲು ಮುಕ್ತ ತಾಲೂಕನ್ನಾಗಿ ಘೋಷಿಸುವ ಕಾಲ ಸನಿಹದಲ್ಲಿದೆ. ಈ ಸಾಧನೆಯ ಹಿಂದೆ ಅ ವ್ಯಕ್ತಿಯ ಪರಿಶ್ರಮ ದೂರದೃಷ್ಠಿ, ಸಾಮಾಜಿಕ ಕಳಕಳಿ, ಹೆಣ್ಮಕ್ಕಳ ಸಮಸ್ಯೆ ಅರಿಯುವ ಹೃದಯಶಿಮಂತಿಕೆ ಹಾಗೂ ಸ್ಪಂದನೆಯಭಾವ ಬಹುಮುಖ್ಯಪ್ರಾತ್ರವಹಿಸಿದೆ.

ಶೌಚಾಲಯವೇ ಉಡುಗೊರೆ

 ಗ್ರಾಮೀಣ ಪ್ರದೇಶದ ಪ್ರತಿಯೊಂದು ಮನೆಗೂ ಶೌಚಾಲಯದ ಅಗತ್ಯ ಇದೆ. ಶೌಚಾಲಯ ನಿರ್ಮಾಣದಿಂದ ಪರಿಸರ ರಕ್ಷಣೆ, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದರ ಜೊತೆಗೆ ಮನೆಯ ಹೆಣ್ಮಕ್ಕಳ ಸುರಕ್ಷತೆ ಸಾಧ್ಯ ಎಂದು ಬಲವಾಗಿ ನಂಬಿದ ಅ ಅಧಿಕಾರಿ ಗ್ರಾಮಗಳಲ್ಲಿ ಜಾಗೃತಿ ಜಾಥಾ, ಬಯಲು ಬಹಿರ್ದೆಸೆಗೆ ಹೋಗುತ್ತಿದ್ದವರಿಗೆ ಹೂವಿನ ಹಾರ ಹಾಕಿ ಸನ್ಮಾನ, ಗುಲಾಬಿ ಹೂವುಗಳನ್ನು ಕೊಡುವುದು ಸೇರಿದಂತೆ ವಿವಿಧ ರೀತಿಯ ಜನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು. ಆದರೆ ನಿರೀಕ್ಷಿತ ಪ್ರಮಾಣದಲ್ಲಿ ಯೋಜನೆಯ ಸಫಲತೆ ದೊರೆಯುವುದಿಲ್ಲ. ಈ ಬಗ್ಗೆ ಚಿಂತಿಸುತ್ತ ಉನ್ನತ ಮಟ್ಟದ ಸಭೆಯೊಂದಲ್ಲಿ ಪಾಲ್ಗೊಂಡಿದ್ದ ಅಧಿಕಾರಿಗೆ ಅಣ್ಣ ತಂಗಿಯ ಪ್ರೀತಿ, ಬಾಂಧವ್ಯ, ಸೋದರತ್ವವನ್ನು ಸಾರುವ ರಕ್ಷಾ ದಿನದಂದು ಮುಂಬರುವ ಗೌರಿ ಹಬ್ಬಕ್ಕೆ ತನ್ನ ಸಹೋದರಿಯರಿಗೆ ಬಾಗಿನ ನೀಡುವ ಬಗ್ಗೆ ಆಲೋಚನೆ ಬಂತು. ಇದೇ ವೇಳೆ ಸಹೋದ್ಯೋಗಿಯೊಬ್ಬರು  ಕಳಿಸಿದ ಸಂದೇಶವೊಂದು ತನ್ನ ತಂಗಿಯರು ಎರಡುವರೆ ದಶಕಗಳ ಹಿಂದೆ ಅನುಭವಿಸಿದ ಮುಜುಗರ, ನೋವು, ಹಿಂಸೆಗಳು ನೆನಪಾಗಿ ಅಣ್ಣನನ್ನು ಮನಕಲಕುವಂತೆ ಮಾಡುತ್ತದೆ. ಆ ಕ್ಷಣಕ್ಕೆ ಶಪಥ ಮಾಡಿದ ಅ ಅಣ್ಣ ನಮ್ಮೂರಿನ ಅಕ್ಕ, ತಂಗಿಯರು, ತಾಯಂದಿರು, ನಾನು ಹಾಗೂ ನನ್ನ ತಂಗಿಯರು ಅನುಭವಿಸಿದ ಕಷ್ಟಗಳನ್ನು ಅನುಭವಿಸಬಾರದೆಂದು ನಿರ್ಧರಿಸಿದರು. ಹುಣಸೂರು ತಾಲೂಕನ್ನು ಶೇಕಡ 100ರಷ್ಟು ಬಯಲು ಮುಕ್ತ ತಾಲೂಕನ್ನಾಗಿಸಲು ಪಣತೊಟ್ಟು ಆ ಸಭೆಯಲ್ಲೇ ಜಾಗೃತಿ ಆಂದೋಲನಕ್ಕೆ ಮತ್ತಷ್ಟು ಕಿಚ್ಚು ತುಂಬಿ ಜನಾಂದೋಲನವಾಗಿಸಲು ಹೆಣ್ಣುಮಗಳೊಬ್ಬಳು ತನ್ನ ತವರಿಗೆ ಮಾಡುವ ಮನವಿ ರೀತಿಯಲ್ಲಿ  ಕರಪತ್ರವೊಂದನ್ನು ಸಿದ್ಧಪಡಿಸುತ್ತಾರೆ. ಆದರ ಸಾರಾಂಶ ಹೀಗಿದೆ – ಪ್ರೀತಿಯ ತವರಿಗೆ ನನ್ನದೊಂದು ಮನವಿ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೀರೆ ಬಟ್ಟೆ ಉಡುಗೂರೆ ನೀಡುವ ಬದಲು ಶೌಚಾಲಯ ನಿರ್ಮಿಸಿಕೊಡಿ, ನಮ್ಮ ಗೌರವ ಕಾಪಾಡಿ ಎಂದು ನಿವೇದನೆ. ಇದರೊಂದಿಗೆ ಭಾವನಾತ್ಮಕ ಘೋಷಣೆಗಳನ್ನು ಸಹ ಅಡಕಗೊಳಿಸಲಾಗುತ್ತದೆ ಗಣೇಶ ಬಂದ, ಶೌಚಾಲಯ ಕಟ್ಟು ಅಂದ; ಮನೆ ಗೌರಿಯ ಮಾನ ನಿಮ್ಮ ಕೈಯಲ್ಲಿ ಇದೆ, ಮಾನ ಹೋದರೆ ಲಕ್ಷ ಕೊಟ್ಟರೂ ಬಾರದು; ಮದುವೆಯಾಗಿ; ಬಯಲು ಶೌಚಕ್ಕೆ ಕಳುಹಿಸಿದರೆ ಗಂಡಸುತಕ್ಕೆ ಅವಮಾನ ಎಂಬ ಘೋಷವಾಕ್ಯವುಳ್ಳ 20 ಸಾವಿರ ಪ್ರತಿಗಳನ್ನು ಮುದ್ರಿಸಿ ಪ್ರತಿ ತಾಲೂಕಿನ ಪ್ರತಿ ಗ್ರಾಮಗಳಿಗೂ ಹಂಚಿಸಲಾಗುತ್ತದೆ. ಈ ಕರಪತ್ರದಲ್ಲಿ ಸಣ್ಣದೊಂದು ಎಚ್ಚರಿಕೆಯ ಒಕ್ಕಣೆಯನ್ನು ಸಹ ಪ್ರಕಟಿಸಲಾಗುತ್ತದೆ, ಶೌಚಾಲಯ ಕಟ್ಟದಿದ್ದಲ್ಲಿ ಪಡಿತರ ನಿಲ್ಲಿಸಲಾಗುವುದು ಎಂದು. ಈ ರೀತಿ ಕರಪತ್ರ ಸಿದ್ಧಪಡಿಸಿದವರೇ ಹುಣಸೂರು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಸಿ.ಆರ್.ಕೃಷ್ಣಕುಮಾರ್, ಮೂಲತಃ ರೈತಾಪಿ ಕುಟುಂಬದಿಂದ ಬಂದ ಸಿ.ಆರ್.ಕೃಷ್ಣಕುಮಾರ್ ಸರಕಾರಿ ಅಧಿಕಾರಿಯಾಗುವ ಮೊದಲು 7 ವರ್ಷ ಎನ್‌ಜಿಓ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸಿರುತ್ತಾರೆ. ತಾವು ಹಾಗೂ ತಮ್ಮ ಕುಟುಂಬವರ್ಗ ಶೌಚಾಲಯವಿಲ್ಲದೆ ಅನುಭವಿಸಿದ ನೋವು, ಮುಜುಗರ ಹಾಗೂ ಸಾಮಾಜಿಕ ಹಿಂಸೆಯನ್ನು ಗಮನದಲ್ಲಿಟ್ಟುಕೊಂಡು ಬಯಲು ಶೌಚಾಲಯ ಮುಕ್ತ ತಾಲೂಕನ್ನಾಗಿಸಲು ಕಾರ್ಯಪ್ರವೃತ್ತರಾಗುತ್ತ್ತಾರೆ. ಸಭೆಯೊಂದರಲ್ಲಿ ಮೂಡಿದ ಆಲೋಚನೆಯನ್ನು ತನ್ನ ಹಿಂದಿನ ದಿನಗಳಲ್ಲಿ ಅನುಭವಿಸಿದ ಮುಜುಗರ, ನೋವನ್ನು ಎರಡನ್ನು ಒಂದುಗೂಡಿಸಿ ತಮ್ಮ ಆಲೋಚನೆಯನ್ನು ತಮ್ಮ ಪತ್ನಿಯೊಂದಿಗೆ ಹಂಚಿಕೊಂಡು ಪತ್ನಿಯ ಅಭಿಪ್ರಾಯ ತಿಳಿಸುವಂತೆ ಕೋರುತ್ತಾರೆ. ಪತ್ನಿಯಿಂದ ಪತಿಗೆ ಉತ್ತೇಜನ ಹಾಗೂ ಭರವಸೆಯ ಮಾತುಗಳು ದೊರೆಯುತ್ತವೆ.

 ತಾವು ಸಿದ್ಧಪಡಿಸಿದ ಕಲ್ಪನೆಯ ಕರಪತ್ರದೊಂದಿಗೆ ಜನಜಾಗೃತಿಗೆ ಮುಂದಾಗುತ್ತಾರೆ. ತಾಲೂಕಿನ ಎಲ್ಲ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳ ಸಭೆ ಕರೆದು ಶೌಚಾಯ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಲು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ ಜನರಿಗೆ ಅರಿವು ಮೂಡಿಸಲು ಬೇಕಾದ ಜನಜಾಗೃತಿ ಸಲಕರಣೆಗಳನ್ನು, ತಂತ್ರಜ್ಞಾನವನ್ನು, ಸಾಮಾಜಿಕ ಜಾಲತಾಣಗಳನ್ನು ಬಳಸುವಂತೆ ಸೂಚಿಸಲಾಗುತ್ತದೆ. ಜನಜಾಗೃತಿಗಾಗಿ ಶಾಲಾ ಮಕ್ಕಳು, ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರನ್ನು ಬಳಸಿಕೊಂಡು ಜಾಗೃತಿ ಜಾಥಾಗಳನ್ನು ನಡೆಸಲಾಗುತ್ತದೆ.. ತಾಲೂಕಿನಾದ್ಯಂತ 100ಕ್ಕೂ ಹೆಚ್ಚು ಫ್ಲೆಕ್ಸ್‌ಗಳನ್ನು ಆಳವಡಿಸಿ ಶೌಚಾಲಯದ ಮಹತ್ವವನ್ನು ತಿಳಿಸುವ ಪ್ರಯತ್ನ ನಡೆಸಲಾಗುತ್ತದೆ.

ಅಧಿಕಾರಿಗಳ ತಂಡ ರಚನೆ

 ತಾಲೂಕಿನ 41 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿನಿತ್ಯ ನಡೆಯುವ ಜಾಗೃತಿಜಾಥಾ, ನಿರ್ಮಾಣಗೊಂಡ ಶೌಚಾಲಯಗಳ ವಿವರ, ಅಪೂರ್ಣಗೊಂಡಿರುವ ಶೌಚಾಲಯ ಕಟ್ಟಡಗಳ ಮಾಹಿತಿ ಸೇರಿದಂತೆ, ಶೌಚಾಲಯ ನಿರ್ಮಾಣಕ್ಕೆ ಸ್ಥಳ ಗುರುತಿಸುವ ಕಾರ್ಯದಿಂದ ಹಿಡಿದು ಶೌಚಾಲಯದ ಕಾಮಗಾರಿ ಪೂರ್ಣಗೊಳ್ಳುವವರೆಗೂ ದೈನಂದಿನ ಮಾಹಿತಿಗಳನ್ನು ವಾಟ್ಸಪ್ ಮೂಲಕ ಪಡೆದುಕೊಳ್ಳಲಾಗುತ್ತದೆ. ಅಲ್ಲದೇ ಪ್ರತಿದಿನ ಅಧಿಕಾರಿಗಳ ತಂಡವೊಂದ ತಾಲೂಕಿನಾದ್ಯಂತ ಸಂಚರಿಸಿ ಶೌಚಾಲಯ ನಿರ್ಮಾಣದ ಪ್ರಗತಿ ಕುರಿತು ವರದಿಗಳನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಸೂಚನೆಗಳನ್ನು ನೀಡಲಾಗಿತ್ತು. ಆ.7 ರಿಂದ ಆ.23ರವರಗೆ ನಡೆದ ಅಭಿಯಾನದಲ್ಲಿ ಸಾರ್ವಜನಿಕರು ಸಹ ಸ್ಪಂದಿಸಿ ಒಂದು ವಾರ ಕಳೆಯುವುದರೊಳಗೆ 3 ಸಾವಿರ ಶೌಚಾಲಯಗಳನ್ನು ನಿರ್ಮಿಸಿ ಸ್ಚಚ್ಛ ಭಾರತ್ ಮಿಷನ್‌ಗೆ ಕೈಜೋಡಿಸಿದ್ದಾರೆ.

ಸಾಧನೆಯತ್ತ ಹೆಜ್ಜೆ

 ತಾಲೂಕು ಪಂಚಾಯಿತಿ ಅಧಿಕಾರವಹಿಸಿಕೊಂಡ ಸಿ.ಆರ್.ಕೃಷ್ಣಕುಮಾರ್ ನೇತೃತ್ವದಲ್ಲಿ 1 ವರ್ಷ 8 ತಿಂಗಳಲ್ಲಿ ತಾಲೂಕಿನಲ್ಲಿರುವ 55225 ಕುಟುಂಬಗಳ ಪೈಕಿ 52600 ಶೌಚಾಲಯಗಳನ್ನು ನಿರ್ಮಿಸಲಾಗಿದ್ದು ಇನ್ನುಳಿದ 2625 ಶೌಚಾಲಯ ಕಾಮಗಾರಿಗಳು ಪ್ರಗತಿಯಲ್ಲಿದೆ. ಇನ್ನೊಂದು ವಾರದಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸಂಪೂರ್ಣ ಬಯಲು ಮುಕ್ತ ತಾಲೂಕನ್ನಾಗಿಸುವತ್ತ ಹೆಜ್ಜೆ ಇಡಲಾಗುತ್ತಿದೆ. ಕಳೆದೊಂದು ವಾರದಿಂದ ಶೌಚಾಲಯವೇ ಇಲ್ಲದ 33 ಗ್ರಾಮಗಳನ್ನು ಗುರುತಿಸಿ ತಾವೇ ಖದ್ದು ಗ್ರಾಮಗಳಿಗೆ ಭೇಟಿ ನೀಡಿ ಶೌಚಾಲಯಗಳ ಗುಂಡಿಗಳನ್ನು ಜೆಸಿಬಿ ಯಂತ್ರದಿಂದ ತೆಗೆಸುವ ಮೂಲಕ ಕಾಮಗಾರಿಯ ಉಸ್ತ್ತುವಾರಿಯನ್ನು ಸಹ ಖದ್ದು ವಹಿಸಿರುವುದು ವಿಶೇಷ. ಇದರಿಂದಾಗಿ ಶೌಚಾಲಯ ನಿರ್ಮಾಣ ಕಾಮಗಾರಿಯ ವೇಗ ಹೆಚ್ಚಿದೆ. ಗೌರಿ ಹಬ್ಬದ ಬಾಗಿನದ ಕಲ್ಪನೆಯಲ್ಲಿ ತೀವ್ರಗೊಂಡ ಶೌಚಾಲಯ ನಿರ್ಮಾಣ ಹಾಗೂ ಜನಜಾಗೃತಿ ಜನಾಂದೋಲನದಿಂದಾಗಿ ಈ ಬಾರಿಯ ಗೌರಿ ಹಬ್ಬದೊಳಗೆ ಎಲ್ಲ ಶೌಚಾಲಯ ಕಾಮಗಾರಿಗಳು ಮುಗಿದು ಬಯಲು ಮುಕ್ತ ತಾಲೂಕು ಅಗಲಿದೆ. ಉನ್ನತ ಮಟ್ಟದ ಅಧಿಕಾರಿಗಳ ತಂಡ ತಾಲೂಕಿಗೆ ಭೇಟಿ ನೀಡಿ ಶೌಚಾಲಯ ನಿರ್ಮಾಣ ಕಾಮಗಾರಿಗಳನ್ನು ಪರಿಶೀಲಿಸಿ ಸರಕಾರಕ್ಕೆ ವರದಿ ಸಲ್ಲಿಸಲಿದೆ. ಅ.2ರ ಗಾಂಧಿ ಜಯಂತಿಯಂದು ರಾಜ್ಯ ಸರಕಾರ ಅಧಿಕೃತವಾಗಿ ಹುಣಸೂರು ತಾಲೂಕನ್ನು ಬಯಲು ಮುಕ್ತ ತಾಲೂಕನ್ನಾಗಿ ಘೋಷಿಸಲಿದೆ. ತಾಲೂಕಿನ ತಂಗಿಯರು ಹಾಗೂ ಅಕ್ಕಂದಿರಿಗೆ ಈ ಬಾರಿ ಶೌಚಾಲಯವೇ ಗೌರಿ ಹಬ್ಬದ ಬಾಗಿನ !

 

   

Leave a Reply