ಯಾಂತ್ರಿಕ ಚಟುವಟಿಕೆಗಳಾಚೆಗಿನ ಪ್ರಕೃತಿ ದರ್ಶನ

ಪ್ರವಾಸ - 0 Comment
Issue Date : 21.05.2015

ಮಹಾನಗರದ ಗಜಿಬಿಜಿಯಿಂದಾಚೆ ಹೊರಪ್ರದೇಶಕ್ಕೆ ಸಂಚಾರಕ್ಕೆ ಹೋದರೆ ಮನಸ್ಸಿನಲ್ಲಿ ಮೂಡುವ ವಿಶುದ್ಧ ಪವಿತ್ರ ಭಾವನೆಗಳೇ ಬೇರೆ. ಅಂತಹ ಒಂದು ದಿನದ ಪ್ರವಾಸಕ್ಕೆ ವಿಕ್ರಮದ ಸಿಬ್ಬಂದಿವರ್ಗದವರು ಏಪ್ರಿಲ್ 7, 2015ರಂದು ಹೋಗಿದ್ದಾಗ ಎಲ್ಲರ ಮನಸ್ಸು ಪುಳಕಗೊಂಡಿತು.
ತುಮಕೂರು ಜಿಲ್ಲೆಯ ದೇವರಾಯನದುರ್ಗದಲ್ಲಿ ಇಂದಿಗೂ ಆ ಅರಸನ ಕೋಟೆಯ ಬುರುಜು, ಗೋಡೆಗಳು ಕಾಣಿಸುತ್ತಿವೆ. ನಮ್ಮ ವ್ಯಾನ್ ಆಚೀಚೆ ತಿರುಗಿ ಬೆಟ್ಟವನ್ನೇರಿದ ಬಳಿಕ, ಅಲ್ಲಿಂದ 162 ಮೆಟ್ಟಿಲುಗಳನ್ನು ಹತ್ತಿ ಹೋದರೆ ಅಲ್ಲಿರುವುದು ಶ್ರೀ ಯೋಗಾನರಸಿಂಹ ದೇವಸ್ಥಾನ. ಆ ಬೆಟ್ಟ ಹತ್ತುವ ಮುನ್ನವೇ ಕೆಳಭಾಗದಲ್ಲಿರುವ ಶ್ರೀ ಭೋಗಾನರಸಿಂಹ ದೇವಸ್ಥಾನದಲ್ಲಿ ದೇವರ ಮತ್ತು ಲಕ್ಷ್ಮೀ ಅಮ್ಮನವರ ದರ್ಶನ ಪಡೆದೆವು. ಬೆಟ್ಟದ ಮೇಲೆ ದೇವರ ದರ್ಶನ ಪಡೆದ ಬಳಿಕ ಅರ್ಚಕರು ಸ್ಥಳ ಪುರಾಣವನ್ನು ವಿವರಿಸಿದರು. ಈ ದೇವಸ್ಥಾನ ಸುಮಾರು 900 ವರ್ಷ ಪುರಾತನವಾದುದು. ಹಿಂದೆ ಬ್ರಹ್ಮದೇವನು ಶ್ರೀ ವಿಷ್ಣುವನ್ನು ಒಲಿಸಲು ತಪಸ್ಸಿಗೆ ಕುಳಿತಾಗ ವಿಷ್ಣುವು ಶ್ರೀ ಯೋಗಾನರಸಿಂಹನ ರೂಪದಲ್ಲಿ ಪ್ರತ್ಯಕ್ಷವಾದ ತಾಣವಿದು. ಈ ದೇವಮೂರ್ತಿಯ ಭಾಗವಾಗಿ ಎರಡು ಸಾಲಿಗ್ರಾಮದ ಶಿಲೆಗಳಿದ್ದು, ಪಕ್ಕದಲ್ಲಿ ಶ್ರೀಕೃಷ್ಣನ ಅನಂತಶಯನಮೂರ್ತಿ ಕೆಳಭಾಗದಲ್ಲಿದೆ. ಬೆಟ್ಟದ ದೇವಸ್ಥಾನದ ಒಂದು ಭಾಗದಲ್ಲಿ ಶ್ರೀಪಾದ ವಿಗ್ರಹದ ಹಿಂದೆ ಕಲ್ಯಾಣಿ, ಅಲ್ಲದೆ ಲಕ್ಷ್ಮಿಯ ಗುಡಿಯೂ ಇದೆ.
ಸಿದ್ಧರಬೆಟ್ಟವನ್ನು (ಕೊರಟಗೆರೆ ತಾಲ್ಲೂಕು) ನೋಡಲು ಹೋದಾಗ ಕಹಿಬೇವು ಅಲ್ಲದೆ ಮಲ್ಲಿಗೆ ತುಂಬಿದ ಮರಗಳು, ಬೆಳ್ಳಿಶಿಲೆಯ ಮರ ಹಾಗೂ ಇಂತಹ ನಾನಾ ರೀತಿಯ ಮರಗಳು ಗೋಚರಿಸಿದವು. ಈ ವನಸ್ಪತಿಗಳಿಗೆ ವಿಶಿಷ್ಟ ಔಷಧೀಯ ಗುಣಗಳೂ ಇವೆ. ಮೆಟ್ಟಿಲು ಹತ್ತಿ ಬೆಟ್ಟಕ್ಕೆ ಹೋದಾಗ ಬಂಡೆಗಳು, ಸಿದ್ಧರು-ಸಂತರು ತಪಸ್ಸು ಮಾಡುತ್ತಿದ್ದ ಈಗಲೂ ಮಾಡುತ್ತಿರುವ ಸ್ಥಳಗಳು ಕಂಡವು. ಒಂದು ಪ್ರಾಚೀನ ಕತ್ತಲ ಗುಹೆಯೊಳಗೆ ಚಿಲುಮೆಯಿಂದ ತಣ್ಣಗೆ ನೀರು ಬರುತ್ತಿತ್ತು. ಅಲ್ಲೂ ಒಂದು ಪ್ರಾಚೀನ ದೇವಸ್ಥಾನವಿದೆ. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಸ್ಕೃತ ಪಾಠಶಾಲೆ, ಬಡಮಕ್ಕಳ ವಸತಿಗೃಹ, ಅನ್ನದಾಸೋಹದ ಭವನ ಸಹ ಇದೆ. ಆಧುನಿಕ ನಾಗರಿಕತೆ ಬೆಳೆಯುತ್ತಿದಂತೆ ಈ ಸಸ್ಯಸಂಕುಲ, ಜೀವವೈವಿಧ್ಯಗಳು ಅಳಿಯದಂತೆ ರಕ್ಷಿಸಬೇಕಾಗಿದೆ.
ನರಸೀಪುರದ ಧರಿತ್ರಿ ಟ್ರಸ್ಟ್ ಬುದ್ಧಿಮಾಂದ್ಯ ಮಕ್ಕಳ ವಿನೂತನ ರೀತಿಯ ಶಾಲೆ, ವಸತಿಗೃಹ ನಡೆಸುತ್ತಿದೆ. ಅದಕ್ಕೆ ಹೊಂದಿಕೊಂಡು ಗೋಶಾಲೆ ಅಲ್ಲಿದೆ. ಮನಸ್ಸು-ಕೃತಿ ಇವುಗಳ ಸಂಬಂಧವಿಲ್ಲದ ಮಕ್ಕಳಿಗೆ ಅಪ್ಪ-ಅಮ್ಮ ಎಂದು ತುಟಿ ಬಿಚ್ಚಲು, ಅಕ್ಷರಾಭ್ಯಾಸ ಮಾಡಿಸಲು ವಿಶೇಷ ತಾಂತ್ರಿಕ ಕೌಶಲ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮಹಾನಗರದಲ್ಲಿ ಇದಕ್ಕೆ ಸಂಬಂಧಿಸಿದ ಇನ್ನೂ ಹಲವು ಕೇಂದ್ರಗಳಿವೆ. ಇಲ್ಲಿ ಪ್ರಶಿಕ್ಷಣ ಹೊಂದಿ ಕಾರ್ಯಕರ್ತರು ಪ್ರಾಂತದ ಉಳಿದ ತಾಲ್ಲೂಕುಗಳಲ್ಲೂ ಈ ರೀತಿಯ ಪ್ರಕಲ್ಪಗಳನ್ನು ಆರಂಭಿಸುವರೆಂಬ ಆಕಾಂಕ್ಷೆ ಹೊಂದಿದ್ದಾರೆ.
– ಕಾ.ರ. ಆಚಾರ್ಯ
ಹೊಸ ಚೈತನ್ಯ
‘ಸಹಲ್’ (ಹೊರಸಂಚಾರ, ಣ್ಠಠಿಜ್ಞಿಜ, ಉ್ಡ್ಚ್ಠ್ಟಜಿಟ್ಞ…..) ನಮ್ಮಲ್ಲಿರುವ ಏಕತಾನತೆಯನ್ನು ತೆಗೆದು ಹೊಸ ಚೈತನ್ಯ ನೀಡುವ ಒಂದು ಉಪಕ್ರಮ. ಅದರಲ್ಲೂ ‘ವಿಕ್ರಮ’ದಂಥ ಕೌಟುಂಬಿಕ ಭಾವನೆಯ ಸಂಸ್ಥೆಯ ಸದಸ್ಯರೆಲ್ಲಾ ವರ್ಷದಲ್ಲಿ ಒಂದು ದಿನ ಕಛೇರಿ-ಬೆಂಗಳೂರು ನಗರದಿಂದ ಹೊರಗಿನ ಪ್ರೇಕ್ಷಣೀಯ ಸ್ಥಳಗಳಿಗೆ ಹೋಗಿ ಬರುವುದು ಪ್ರತಿಯೊಬ್ಬರಿಗೂ ಮತ್ತಷ್ಟು ತಂಡಭಾವದಿಂದ ಕಾರ್ಯಮಾಡುವ ಪ್ರೇರಣೆ ನೀಡುತ್ತದೆ.
ಈ ಬಾರಿಯ ಯೋಜನೆಯಲ್ಲಿ ಸಿದ್ಧರಬೆಟ್ಟ ಏರುವ ಸಾಹಸವನ್ನು ಗೈದ ವಿಕ್ರಮ ಬಳಗದ ಪ್ರತಿಯೊಬ್ಬರ ಮನಃಸ್ಥಿತಿ, ಎಂಥಾ ಪರಿಸ್ಥಿತಿಯನ್ನು ಎದುರಿಸಿ ಶಿಖರವನ್ನು ಏರುವ ಪ್ರತೀಕವಾಗಿತ್ತು. ಮಾರ್ಗದಲ್ಲಿ ಉರುಡುಗೆರೆಯ ಸಂಘಕಾರ್ಯಕರ್ತರ ಆತಿಥ್ಯ-ಪ್ರೀತಿ ಆರೆಸ್ಸೆಸ್‌ನ ಬಗ್ಗೆ ಎಲ್ಲರಿಗೂ ಮತ್ತಷ್ಟು ಗೌರವ ಹೆಚ್ಚಿಸಿತು. ಸ್ವಾಮೀಜಿಯವರಂತೂ ‘ವಿಕ್ರಮ’ದ ಬಗೆಗಿನ ಅಪಾರ ನಂಬಿಕೆಯಿಂದಾಗಿ ಅತ್ಯುತ್ತಮ ವ್ಯವಸ್ಥೆ ಕಲ್ಪಿಸಿ, ಮಾರ್ಗದರ್ಶನ ಮಾಡಿದ್ದು ಸನ್ಯಾಸಿಗಳ ಸಾಮಾಜಿಕ ಕಳಕಳಿಯ ದ್ಯೋತಕವಾಗಿತ್ತು. ದೇವರಾಯನದುರ್ಗ-ಸಿದ್ಧರಬೆಟ್ಟ ಎರಡು ತಾಣಗಳಲ್ಲೂ ದೇವರು-ಸಿದ್ಧರು-ಭಕ್ತರು-ಪ್ರಕೃತಿಯ ನೇರ ಅನುಭವ ನೀಡಿದ್ದು ನಮ್ಮೆಲ್ಲರಲ್ಲೂ ನಮ್ಮ ಸಂಸ್ಕೃತಿಯ ಮಹತ್ವವನ್ನು ದೃಢಗೊಳಿಸಿತು.
ನಮ್ಮ ಪೂರ್ವಜರು ಪ್ರಕೃತಿಯ ಅಗೋಚರ ಸೌಂದರ್ಯವನ್ನು ಗುರುತಿಸಿ, ಅಲ್ಲೆಲ್ಲಾ ಧಾರ್ಮಿಕ ಶ್ರದ್ಧೆ ಬೆಳೆಯುವಂತ ಗುಡಿ-ಗೋಪುರ, ಮಠ-ಮಂದಿರ ನಿರ್ಮಿಸಿ, ಶ್ರದ್ಧಾಳುಗಳ ಆಕರ್ಷಣಾ ಕೇಂದ್ರವಾಗಿಸಿರುವ ಹಿಂದಿನ ಸದುದ್ದೇಶ ವನ್ನು ಅರಿಯುವುದು ಅತ್ಯಗತ್ಯ. ದೇವರು-ಪ್ರಕೃತಿ ಆರಾಧನೆ ಹೆಸರಲ್ಲಿ ದುರ್ಗಮ ಪ್ರದೇಶಕ್ಕೆ ಹೋಗಿ ಬರುವಾಗ ನಮ್ಮ ಶಾರೀರಿಕ ಸಾಮರ್ಥ್ಯದ ಅರಿವಾಗುತ್ತದೆ. ಸವಾಲನ್ನೆದುರಿಸಿ ಗುರಿಸೇರಬಲ್ಲೆನೆಂಬ ಮಾನಸಿಕ ದೃಢತೆ ಬೆಳೆಸುತ್ತದೆ. ನಿತ್ಯ ಜೀವನದಲ್ಲಿ ಗಮನಿಸದ ಮತ್ತನೇಕ ಸತ್ಯಸಂಗತಿಗಳು ತಿಳಿದು ಬುದ್ಧಿ ವಿಕಾಸವಾಗುತ್ತದೆ. ಇಂಥ ಸಹಲ್-ಸಾಹಸ-ತೀರ್ಥಯಾತ್ರೆಯನ್ನು ಒಬ್ಬಂಟಿಯಾಗಿ ಮಾಡದೆ ಮನೆಯವರು-ಸ್ನೇಹಿತರು-ಸಮಾನ ಮನಸ್ಕ ಗುಂಪಿನೊಡನೆಯೇ ಮಾಡುವುದರಿಂದ ಎಲ್ಲರೊಡನೆ ಹೊಂದಿಕೊಳ್ಳುವ ಪರಾನುಕಂಪದ ಸ್ವಭಾವ ಬೆಳೆಸಿಕೊಂಡು ಆತ್ಮವಿಶ್ವಾಸವನ್ನು ಪಡೆಯುತ್ತೇವೆ.
7ನೇ ತಾರೀಖು ಬೆಳಗಿನಿಂದ ಸಂಜೆಯವರೆಗೂ ಕಾಲಕಾಲಕ್ಕೆ ರುಚಿಕರ ತಿಂಡಿ-ತೀರ್ಥ, ಪರಸ್ಪರರಲ್ಲಿ ಹಂಚಿಕೊಂಡ ಪ್ರೀತಿ ವಿಶ್ವಾಸಗಳು ಆಯಾಸವನ್ನು ನೀಡಿತ್ತೆಂಬುದು ಎಲ್ಲರ ಅನಿಸಿಕೆ. ಕಡೆಗೂ, ಇಷ್ಟೆಲ್ಲ ಸಾಮರ್ಥ್ಯಶಾಲಿಗಳಾದ ನಾವು ಅವಕಾಶವಂಚಿತ ವಿಶಿಷ್ಟಚೇತನ ಮಕ್ಕಳ ಸಂಸ್ಥೆ ‘ಧರಿತ್ರಿ’ ನೋಡಿದಾಗ ಬಹುತೇಕ ಎಲ್ಲರ ಮನ ತುಂಬಿ ಬಂದಿತ್ತು. ನಾವು ‘ವಿಕ್ರಮ’ ಬಲಗೊಳಿಸುವ ಮೂಲಕ ನೊಂದವರ ದನಿಯಾಗಬೇಕು-ಸಂಪನ್ನರ ಗಮನ ಸೆಳೆದು ಸಮಾಜ ಜಾಗೃತಿಯ ಚಟುವಟಿಕೆಯಲ್ಲಿ ತೊಡಗಿಸುವ ಕಾರ್ಯಕರ್ತರಾಗಬೇಕೆಂಬ ಭಾವನೆ ಬಲಗೊಳಿಸಿ ಒಂದು ದಿನದ ಸಹಲ್ ವರ್ಷಕ್ಕಾಗುವ ಪೌಷ್ಟಿಕತೆ ನೀಡಿದೆಯೆಂದೆನಿಸುತ್ತದೆ.
– ನ. ನಾಗರಾಜ
ಸಹಲ್ ಅನುಭವ
ಮನುಷ್ಯರ ಸಹಜ ಸ್ವಭಾವ ಒಬ್ಬಂಟಿಯಾಗಿ ರುವುದಿಲ್ಲ. ಸಮೂಹದಲ್ಲಿ ಇರಲು ಇಷ್ಟ ಪಡುತ್ತೇವೆ. ಸಂಘಜೀವಿಯಾದ್ದರಿಂದ, ಎಲ್ಲರ ಜೊತೆ ಒಡನಾಡಲು ಹೆಚ್ಚು ಆಸಕ್ತಿ. ಅದರಿಂದ ಅನುಭವ ಹಂಚಿಕೆ, ಅನುಭವ ಗಳಿಕೆ ಆಗುತ್ತದೆ. ಬೇರೆಯವರ ಭಾವನೆಗಳಿಗೆ ಗೌರವ ಕೊಡಲು ಕಲಿಯುತ್ತೇವೆ. ತನ್ನ ನಿಶ್ಚಯಗಳನ್ನು ಹೇಳುವಾಗ ಯೋಚಿಸಬೇಕಾಗುತ್ತದೆ. ಗುಂಪಿನ ಜೊತೆ ಇರುವಾಗ ತನ್ನ ನಡವಳಿಕೆಗಳು ಅದಕ್ಕೆ ಪೂರಕವಾಗವುದರ ಕಡೆ ಗಮನ ಇರುತ್ತದೆ. ತನ್ನ ಕಷ್ಟದಲ್ಲೂ ಬೇರೆಯವರ ಸಂತೋಷ ನೋಡುವ ಪ್ರಯತ್ನ ಅವರದಾಗಿರುತ್ತದೆ. ಗುಂಪಿನ ಸಾಮೂಹಿಕ ನಿರ್ಣಯಗಳನ್ನು ಪಾಲಿಸುವ ಮನೋಧರ್ಮ ಬೆಳೆಸಿಕೊಳ್ಳುತ್ತೇವೆ. ವೈಯಕ್ತಿಕ ಅಹಂಭಾವ ತನ್ನಷ್ಟಕ್ಕೆ ತಾನೇ ಕಡಿಮೆ ಆಗುವ ಅವಕಾಶ ಸಾಮೂಹಿಕ ಚಟುವಟಿಕೆಗಳ ಸಮಯದಲ್ಲಿ ಆಗುತ್ತದೆ. ಇದೆಲ್ಲವೂ ಕೌಟುಂಬಿಕ ವಾತಾವರಣ ನಿರ್ಮಿಸಲು ನೆರವಾಗುತ್ತದೆ. ಕೌಟುಂಬಿಕ ವಾತಾವರಣದಲ್ಲಿ ಸಣ್ಣ ಪುಟ್ಟ ಬೇಸರಗಳು ಸಹಜವಾಗಿ ದೂರವಾಗುತ್ತದೆ. ಇದೆಲ್ಲದರ ಮೂಲಕ ಸಹಜ ಸ್ವಾಭಾವಿಕ ಸಾಂಘಿಕ ಶಕ್ತಿ ನಿರ್ಮಾಣವಾಗುತ್ತದೆ. ಈ ಶಕ್ತಿ ವ್ಯಕ್ತಿಯ ಬೆಳವಣಿಗೆಗೆ, ಕೌಟುಂಬಿಕ ಗುಂಪಿನ ಬೆಳವಣಿಗೆಗೆ ಶಕ್ತಿಯನ್ನು ತುಂಬುತ್ತದೆ. ಅಸಾಧ್ಯವಾದುದನ್ನು ಸಾಧಿಸುವ ಛಲ ನಿರ್ಮಾಣವಾಗುತ್ತದೆ.
ಇದೆಲ್ಲ ವಿಕ್ರಮ ಬಳಗದ ಸಹಲ್‌ನಲ್ಲಿ ನಾನು ಕಂಡ ಸಂಗತಿಗಳ ಶಬ್ದರೂಪ.
– ಶಿ.ನಾ. ಚಂದ್ರಶೇಖರ್
ಸಿದ್ಧರ ಬೆಟ್ಟ
ಸಿದ್ಧರಬೆಟ್ಟದ ಮೇಲೆ ಮೌನ ಆವರಿಸಿರುವ ಪೂರ್ತಿ ಕತ್ತಲು ತುಂಬಿರುವ ನೈಸರ್ಗಿಕ ಗುಹೆ ಇದ. ಆಳದಲ್ಲಿ ಸುವರ್ಣಮುಖಿ ನದಿ ಉಗಮವಾಗುತ್ತದೆ. ಈ ನೀರಿನಲ್ಲಿ ಚಿನ್ನದಲ್ಲಿರುವ ಅಂಶಗಳು ಇದೆ. ನದಿಯ ನೀರು ಯಾವತ್ತೂ ಬತ್ತಿಲ್ಲವಂತೆ. ಗಿಡಮೂಲಿಕೆಗಳ ಬೇರುಗಳಿಂದ ಝರಿಯಾಗಿ ಹರಿಯುವ ನೀರು, ಪುಷ್ಕರಣಿಯಲ್ಲಿ ಶೇಖರವಾಗುತ್ತದೆ. ಮಂಜುಗಡ್ಡೆಗಿಂತ ತಣ್ಣಗಿನ ಅನುಭವ ನೀಡುತ್ತದೆ.
ಸಿದ್ಧರಬೆಟ್ಟ , ಹೆಸರೇ ಸೂಚಿಸುವಂತೆ ಯೋಗಿ, ಮುನಿಗಳಿಗೆ, ವೈದಿಕ ಸಾಧಕರಿಗೆ ಅನಾದಿಕಾಲದಿಂದಲೂ ನೆಲೆವೀಡು. ಆಧುನಿಕತೆಯ ಗಾಳಿ ಸೋಕಿದ ಮೇಲೆ ಇದು ಪ್ರವಾಸಿಾಣ. ವಿಶೇಷವಾದ ಗುಹೆಗಳಲ್ಲಿ ಈಗಲೂ ಯೋಗಿ ಮುನಿಪರಂಪರೆಯ ಕೆಲ ಶತಾಯುಷಿ ಸಿದ್ಧರೂ ಈಗಲೂ ಇಲ್ಲಿ ತಪಸ್ಸು ಮಾಡುತ್ತಿದ್ದಾರೆ. ಅನಾದಿಕಾಲದಿಂದಲೂ ವಾಸವಿರುವುದಕ್ಕೆ ಕುರುಹು ಎಂದರೆ, ಇಲ್ಲಿ ನಡೆಯುತ್ತಿದ್ದ ಹೋಮ-ಹವನಗಳ ಭಸ್ಮ ಈಗಲೂ ಗುಹೆಯೊಳಗೆ ಸಿಗುತ್ತದೆ.
ಸಿದ್ಧರಬೆಟ್ಟ ಗಿಡಮೂಲಿಕೆಗಳ ಸಂಜೀವಿನಿ ತಾಣ. ಸಕಲ ಔಷಧಿಯುಕ್ತ ಗಿಡಮೂಲಿಕೆಗಳು ಇಲ್ಲ ಲಭ್ಯವಿದೆ. ಜನರಲ್ಲಿ ಕಾಣಿಸಿಕೊಳ್ಳುವ ಅಲರ್ಜಿ ರೋಗ ಗಳು, ಕ್ಯಾನ್ಸರ್‌ನಂತಹ ಭಯಾನಕ ಕಾಯಿಲೆಗಳು ಇಲ್ಲಿನ ವಾಯು ಸೇವನೆ ಯಿಂದ, ತೀರ್ಥಸ್ನಾನದಿಂದ ಗುಣವಾಗುತ್ತದೆ ಎಂದು ಇಲ್ಲಿನ ಸ್ವಾಮೀಜಿ ಹೇಳಿದರು. ಬೆಟ್ಟದ ಮೇಲೆ ಕಾಗೆಗಳಿಲ್ಲ ಅನ್ನುವುದು ಇಲ್ಲಿನ ವಿಶೇಷತೆ.
– ಚೈತ್ರ. ಬಿ. ಪ್ರಕಾಶ್
ಪುರಾಣಕ್ಕೆ ಸಂಬಂಧಪಟ್ಟಂತೆ ಶ್ರೀ ಆಂಜನೇಯ ಸಂಜೀವನಿ ಪರ್ವತವನ್ನು ತಂದದ್ದು ನಮಗೆಲ್ಲಾ ತಿಳಿದಿದೆ. ಆ ಪರ್ವತವನ್ನು ಮತ್ತೆ ಹಿಮಾಲಯಕ್ಕೆ ತೆಗೆದುಕೊಂಡು ಹೋಗುವಾಗ ಸಣ್ಣ ತುಣುಕು ಈ ಸಿದ್ಧರ ಬೆಟ್ಟದಲ್ಲಿ ಬಿತ್ತಂತೆ. ಇಲ್ಲಿಯೂ ಸಹ ಹಿಮಾಲಯದ ಗಿಡಮೂಲಿಕೆಗಳು ಸಿಗುತ್ತದೆಯಂತೆ ಎಂದು ಹೇಳಬಹುದು. ಹಿಮಾಲಯದಿಂದ ಋಷಿ ಮುನಿಗಳು ಇಲ್ಲಿ ಬಂದು ತಮ್ಮ ತಪಸ್ಸನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳುತ್ತಾರೆ. 62 ವಿದ್ಯೆಗಳನ್ನು ಕಲಿತವರಿಗೆ ಸಿದ್ಧರೆಂದು ಕರೆಯುತ್ತಾರೆಂದೂ ಅಂತಹ ಕೆಲವರು ಕಾಣಲು ಇಚ್ಛಿಸಿದರೆ ಕಾಣಿಸಿಕೊಳ್ಳುತ್ತಾರೆೆ ಮತ್ತೆ ಕೆಲವರು ಮಾಯವಾಗುತ್ತಾರಂತೆ ಎಂದು ನಮ್ಮೊಡನೆೆ ಇದ್ದ ಸಿದ್ದರು ಹೇಳಿದರು.
– ಶಶಿಕಲಾ. ಹೆಚ್.ಆರ್
ಮಾನವ ಸೇವೆಯೇ – ಮಾಧವ ಸೇವೆ
ಮಾನವ ಸೇವೆಯೇ ನಿಜವಾದ ಮಾಧವನ ಸೇವೆಯೆಂದು ತಿಳಿದು ಅದರಂತೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ ನೆಲಮಂಗಲ ತಾಲ್ಲೂಕಿನ ನರಸೀಪುರ ಗ್ರಾಮದಲ್ಲಿರುವ ‘ಧರಿತ್ರಿ ಸೇವಾ ಟ್ರಸ್ಟ್’.
ವಿಶೇಷ ನ್ಯೂನತೆಯುಳ್ಳ 250 ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ಗುರಿ ಇಟ್ಟುಕೊಂಡು ಅದಕ್ಕೆ ಪೂರಕವಾಗಿ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯನಿರ್ವಹಿಸುತ್ತಿದೆ.
ಇಲ್ಲಿರುವ ಮಕ್ಕಳ ವಯಸ್ಸು 7 ರಿಂದ 45 ವರ್ಷದವರೆಗೆ ಇದ್ದರೂ ಈ ಮಕ್ಕಳ ಬೌದ್ಧಿಕ ಮಟ್ಟ ಮಾತ್ರ ಪ್ರೀ ನರ್ಸರಿಯಿಂದ – 3ನೇ ತರಗತಿಯ ಮಕ್ಕಳಿಗಿರುವಷ್ಟೇ ಇರುವುದು ಈ ಮಕ್ಕಳ ಸಮಸ್ಯೆ ಏನು ಎಂಬುದನ್ನು ನಮಗೆ ಮನವರಿಕೆ ಮಾಡಿಕೊಡುತ್ತದೆ.
ವಿಶೇಷ ನ್ಯೂನತೆಯುಳ್ಳ ಬುದ್ಧಿಮಾಂದ್ಯ ಮಕ್ಕಳ ಶಿಕ್ಷಣ ಕೇಂದ್ರವಾಗಿರುವ ಈ ಸಂಸ್ಥೆ ಭಾರತೀಯ ಚಿಕಿತ್ಸಾ ಪದ್ಧತಿಯಂತೆ ಕಾರ್ಯನಿರ್ವಹಿಸುತ್ತಿದೆ. ಇಲ್ಲಿರುವ 43 ಮಕ್ಕಳಲ್ಲಿ ಪ್ರತಿಯೊಬ್ಬರಿಗೂ ವಿಶೇಷ ಗಮನಕೊಟ್ಟು ಅವರ ಕೊರೆಗಳನ್ನು ಗುರುತಿಸಿ, ಅವರಿಗೆ ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡಿ ಅವರಲ್ಲಿರುವ ಪ್ರತಿಭೆಯನ್ನು ಹೊರತೆಗೆಯುವಲ್ಲಿ ಇಲ್ಲಿನ ಶಿಕ್ಷಣ ಪದ್ಧತಿ ಸಹಾಯ ಮಾಡುತ್ತಿದೆ. ಇಲ್ಲಿರುವ ಮಕ್ಕಳಿಗಾಗಿ ಮತ್ತು ಶಿಕ್ಷಣದ ಒಂದು ಭಾಗವಾಗಿ ಇಲ್ಲಿ ಒಂದು ಗೋಶಾಲೆಯನ್ನು ಮಾಡಲಾಗಿದೆ. ಇಲ್ಲಿ ವಿದೇಶಿ ತಳಿಗಳ ಜೊತೆಯಲ್ಲಿ ಸ್ವದೇಶಿ ತಳಿಗಳಾದ ‘ಪಾವನಿ’ ಎಂಬ ಜಾತಿಯ ಹಸುಗಳನ್ನು ಸಾಕಲಾಗುತ್ತದೆ.
ಇಲ್ಲಿರುವ ಪ್ರತಿಯೊಬ್ಬ ಮಗುವೂ ಗೋಸೇವೆ ಮಾಡಬೇಕು. ಇದರಿಂದ ಈ ಮಕ್ಕಳ ಬೌದ್ಧಿಕ ಮತ್ತು ದೈಹಿಕ ಕ್ಷಮತೆ ಹೆಚ್ಚಾಗುತ್ತದೆ. ಬುದ್ಧಿಯ ಬೆಳವಣಿಗೆಗೆ ಸಹಾಯವಾಗುತ್ತದೆ.
ಇದಲ್ಲದೆ ಇಲ್ಲಿನ ಮಕ್ಕಳಿಗೆ ಅನೇಕ ರೀತಿ ಚಿಕಿತ್ಸಾ ಪದ್ಧತಿಗಳ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಅವುಗಳೆಂದರೆ ಫಿಸಿಯೋ ಥೆರಪಿ, ಸ್ಪೀಚ್ ಮತ್ತು ಹಿಯರಿಂಗ್ ಥೆರಪಿ, ಮ್ಯೂಸಿಕ್ ಥೆರಪಿ, ಕೌನ್ಸಿಲಿಂಗ್, ಪಿರಮಿಡ್ (ಧ್ಯಾನ), ವಾಟರ್ ಥೆರಪಿ, ಅಯಸ್ಕಾಂತ ಥೆರಪಿ. ಇವುಗಳಿಗೆಲ್ಲಾ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಈ ಥೆರಪಿಗಳ ಮೂಲಕ ಮಕ್ಕಳಲ್ಲಿ ಇರುವ ಬಹುಮುಖ್ಯ ಸಮಸ್ಯೆಯಾದ ದೇಹ ಮತ್ತು ಮಿದುಳಿನ ನಡುವಿನ ಸಮನ್ವಯದ ಕೊರತೆಯನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಲಾಗುತ್ತದೆ.
ಇಲ್ಲಿನ ಈ ಮಕ್ಕಳ ಮೇಲೆ ಸಂಗೀತ ಥೆರಪಿ ಮತ್ತು ಅದರ ಪರಿಣಾಮಗಳು ಎಂಬ ವಿಷಯದಲ್ಲಿ ಪಿ.ಹೆಚ್.ಡಿಯನ್ನು ಸಹ ಮಾಡಿರುವ ಸೋದರಿಯೊಬ್ಬರು ನಿಯಮಿತವಾಗಿ ಬಂದು ಮಕ್ಕಳ ಆರೋಗ್ಯ ಸುಧಾರಣೆಗೆ ಪ್ರಯತ್ನಿಸುತ್ತಿರುವುದು ಅಭಿನಂದನೀಯ. ಸ್ವಾವಲಂಬಿಗಳನ್ನಾಗಿ ಮಾಡುವ ಧರಿತ್ರಿಯ ಕಲ್ಪನೆ ಸಾಕಾರಗೊಳ್ಳಲಿ.
– ಶಂಕರ್. ಆರ್
ಧರಿತ್ರಿ ಸೇವಾ ಟ್ರಸ್ಟ್, ನರಸೀಪುರ – ಪ್ರವಾಸದ ವರದಿ

   

Leave a Reply