ಯಾದವರಾವ್ ಜೋಷಿ ಸಂಸ್ಮರಣೆ

ಯಾದವ್ ರಾವ್ ಜೋಷಿ - 0 Comment
Issue Date : 12.11.2014

ಯಾದವರಾಯರು ಪ್ರವಾಸದಲ್ಲಿದ್ದಾಗ ವಸತಿ ಹೂಡುತ್ತಿದ್ದ ಮನೆಗಳಲ್ಲಿನ ಶಿಶುಗಳು ಸಹ ಅವರ ಬಗ್ಗೆ ವಿಶೇಷ ಒಲವು ಬೆಳೆಸಿಕೊಳ್ಳುತ್ತಿದ್ದವು. ಚಿಕ್ಕ ಮಕ್ಕಳಲ್ಲೂ ಅವರು ಆಸಕ್ತಿ ವಹಿಸುತ್ತಿದ್ದುದರಿಂದಾಗಿ ಆ ಮಕ್ಕಳು ಅವರಲ್ಲಿ ತಮ್ಮ ಪ್ರೀತಿಯ ‘ಅಜ್ಜ’ನನ್ನೇ ಕಾಣುತ್ತಿದ್ದರು. ಬೆಂಗಳೂರಿನಲ್ಲಿ ಅವರು ಹೆಚ್ಚಾಗಿ ಹೋಗುತ್ತಿದ್ದ ಮನೆಗಳ ಪೈಕಿ ಪ್ರಾಧ್ಯಾಪಕ ಕೆ.ಎನ್. ಕೃಷ್ಣಮೂರ್ತಿಯವರ ಮನೆಯೂ ಒಂದು. ಈ ಕುಟುಂಬದವರೊಂದಿಗೆ ಯಾದವರಾಯರು ಒಮ್ಮೆ ಪ್ರವಾಸ ಹೊರಟಾಗ ನಡೆದ ಪ್ರಸಂಗ. ಪ್ರಾಧ್ಯಾಪಕರ ಕಿರಿ ಮಗಳು ಮಂಗಳಾ ಆಗ ಇನ್ನೂ ಆರೇಳು ವರ್ಷದ ಚಿಕ್ಕ ಹುಡುಗಿ. ತನಗೆ ಚಾಕಲೇಟು ಬೇಕು ಎಂದು ಒಂದೇ ಸಮನೆ ಹಠ ಹಿಡಿದಿದ್ದಳು. ಮುಂದಿನ ಊರು ಕುಣಿಗಲ್‌ನಲ್ಲಿ ಅದನ್ನು ಕೊಡಿಸುವುದಾಗಿ ಕೃಷ್ಣಮೂರ್ತಿಯವರು ಮಗುವಿಗೆ ಸಮಾಧಾನ ಹೇಳಿದ್ದರು. ಆದರೆ, ಊರು ಹಾದು ಹೋದಾಗ ಮಗು ನಿದ್ರಿಸಿದ್ದ ಕಾರಣ ಈ ವಿಷಯ ಯಾರಿಗೂ ನೆನಪಾಗಲಿಲ್ಲ. ಊರಿನಿಂದ ನಾಲ್ಕೈದು ಕಿ.ಮೀ.ನಷ್ಟು ದೂರ ಹೋದ ಮೇಲಷ್ಟೇ ಯಾದವರಾಯರಿಗೆ ಮಗುವಿಗೆ ಕೊಟ್ಟ ಮಾತು ನೆನಪಾಯಿತು. ಕೂಡಲೇ ಕಾರು ನಿಲ್ಲಿಸಿ ಅವರು ವಾಪಸ್ ಕುಣಿಗಲ್‌ಗೆ ಹೋಗುವಂತೆ ತಿಳಿಸಿದರು. ಮಗುವಿಗೆ ಕೊಟ್ಟ ಮಾತಿನಂತೆ ಚಾಕಲೇಟ ಕೊಡಿಸಿದ ನಂತರವೇ ಮುಂದಿನ ಪ್ರಯಾಣ ಎಂದು ಆಗ್ರಹಪಡಿಸಿದರು. ಅಕಸ್ಮಾತ್ ಮಗುವಿಗೆ ಮರೆತು ಹೋದರೂ, ಅದರ ನಂಬಿಕೆಗೆ ವಂಚನೆಯಾಗಬಾರದು ಎಂದರು ಅವರು. ಕಾರ್ ವಾಪಸ್ ತಿರುಗಿಸಿ, ಆಶ್ವಾಸನೆಯನ್ನು ಪೂರೈಸಿದ ಮೇಲಷ್ಟೇ ಪ್ರಯಾಣ ಮುಂದೆ ಸಾಗಿತು. ತನ್ನ ಬಗ್ಗೆ ಅಷ್ಟು ಕಾಳಜಿ ವಹಿಸಿದ್ದ ‘ಅಜ್ಜ’ನ ಕುರಿತಾಗಿ ಮಗುವಿಗೂ ಒಲವು ಬೆಳೆದುದರಲ್ಲಿ ಆಶ್ಚರ್ಯವೇನಿದೆ?

   

Leave a Reply