ಯಾರಿಗೂ ಸಲ್ಲದ ಅಹಂಕಾರ

ಕಥೆಗಳು - 0 Comment
Issue Date : 03.12.2015

ಹೌದು, ಅವರು ಕೇಳಿದ ಗುರುದಕ್ಷಿಣೆಯೇ ಅಂಥದ್ದು!  ಆ ಮಾತು ಕೇಳಿದ ಶಿಷ್ಯನಿಗೆ ಮಾತ್ರವಲ್ಲ ಯಾರಿಗೂ ಅಚ್ಚರಿ ಹುಟ್ಟಿಸುವಂಥದ್ದು.  ಮೇಲ್ನೋಟಕ್ಕೆ ಬಹು ಸುಲಭ ಸಾಧ್ಯ ಎನ್ನಿಸಿಬಿಡಬಹುದಾದ ಕೋರಿಕೆ ಅದು.
 ‘ಆಧ್ಯಾತ್ಮಿಕತೆಯನ್ನೇ ಉಸಿರಾಗಿಸಿಕೊಂಡವ ನೀನು. ಈವರೆಗೆ ಅಧ್ಯಯನ ಮಾಡಿದ್ದು ತೃಪ್ತಿ ತಂದಿದೆ. ಇನ್ನು ನನ್ನ ಬಳಿ ಕಲಿಯುವುದು ಏನಿಲ್ಲ. ಈಗ ನೀನು ಸ್ನಾತಕ. ಪ್ರಪಂಚ ಜ್ಞಾನ  ಸಂಗ್ರಹಿಸಲು  ಶಕ್ತ. ಸ್ವಾಧ್ಯಾಯ ಇದಕ್ಕೆ ಸಾಧನವಾಗಲಿ’ ಹೀಗೆಂದು ಗುರು ಹರಸಿದಾಗ ಶಿಷ್ಯನಲ್ಲಿ ಧನ್ಯತೆಯ ಭಾವ.
 ಗುರುವಿನಿಂದ ಪಡೆದ ವಿದ್ಯೆ ಯಶಸ್ವಿಯಾಗಬೇಕಾದರೆ ಗುರುದಕ್ಷಿಣೆ ನೀಡಲೇಬೇಕು, ಅದೂ ಗುರು ಬಯಸಿದ್ದನ್ನ; ಎಂಬುದು ಆ ಶಿಷ್ಯನ ಮನದಿಂಗಿತ. ಇದನ್ನರಿತ ಗುರು ಒಂದು ರೀತಿಯಲ್ಲಿ ಸವಾಲೆಸೆಯುವಂತೆ ಕೇಳಿದ್ದರು.
 ‘ಸರಿ’ ಎಂದ ಶಿಷ್ಯ. ಇದೇನು ದೊಡ್ಡ ಸಂಗತಿ ಎಂಬುದು ಆತ ಮುಖದಲ್ಲಿ ಗೋಚರಿಸುತ್ತಿತ್ತು. ಇದನ್ನೆಲ್ಲ ಗುರುಗಳು ಸೂಕ್ಷ್ಮವಾಗಿ ಗಮನಿಸುತ್ತಲೇ ‘ಇದಕ್ಕೇನೂ ಕಾಲಮಿತಿಯಿಲ್ಲ’ ಎಂದಿದ್ದರು.
 ‘ಇದೇನು ಮಹಾ, ಆಗಸದಿಂದ ನಕ್ಷತ್ರ ಸೆಳೆದು ತರುವುದೇ? ಮೋಡಗಳ ಮಾಲೆ ಮಾಡಿ ತರುವುದೇ? ಗಾಳಿಯನ್ನು ಕಟ್ಟಿಹಾಕುವುದೇ.. ಇದಕ್ಕೆ ಕಾಲಮಿತಿ ಇಲ್ಲವೆನ್ನುವಿರೇಕೆ.. ಇದೋ ಕ್ಷಣ ಸಾಕು’ ಎಂದು ಶಿಷ್ಯ ಆಡದಿದ್ದರೂ ಆತನ ಮನದಲ್ಲಿರುವುದನ್ನು ಗುರು ಗುರುತಿಸಿದ್ದರು.
 ಪ್ರಪಂಚ ಪಂಚಭೂತದ ಸೃಷ್ಟಿ ತಾನೇ? ಎಷ್ಟು ಸಂಗತಿಗಳು ಯಾರಿಗೂ ಉಪಯೋಗ ಇಲ್ಲದವು ಇಲ್ಲಿವೆ! ಆದರೂ ಇಷ್ಟು ಸಣ್ಣ ಕೋರಿಕೆ ಗುರು ಯಾಕೆ ಇಟ್ಟರು.. ಅದೂ ಗುರುದಕ್ಷಿಣೆಯ ರೂಪದಲ್ಲಿ ಎಂದು ಶಿಷ್ಯನು ಒಂದು ಕ್ಷಣ ಮನದಲ್ಲಿ ಸುಳಿದುಹೋದ ವಿಚಾರಕ್ಕೆ ಮೊದಲು ಗಮನ ಕೊಟ್ಟಿರಲಿಲ್ಲ.
  ಮರ, ಗಿಡ, ಬಳ್ಳಿ, ಮುಳ್ಳುಕಂಟಿ, ಕ್ರಿಮಿಕೀಟ, ಹುಳುಹುಪ್ಪಟೆ, ಕಲ್ಲುಮಣ್ಣು ಹೀಗೆ ಒಂದೊಂದರ ಕುರಿತು ಯೋಚಿಸಿದಾಗಲೂ ಅವುಗಳ ಹಲವು ಉಪಯೋಗಗಳು ಗೋಚರವಾಗತೊಡಗಿದವು. ಯಾರಿಗೂ ಉಪಯೋಗಕ್ಕೆ ಬರದ ಯಾವ ವಸ್ತುವೂ ಕಾಣಿಸದೇ ಒಮ್ಮೆ ನಿರಾಶೆ ಮೂಡತೊಡಗಿತು.
  ಉದುರಿಬಿದ್ದ ಎಲೆ, ಒಣಗಿದ ಮರಗಿಡ ಎಲ್ಲವೂ ಯಾರೂ ಒಯ್ಯದಿದ್ದರೆ ನೆಲಕ್ಕೆ ಗೊಬ್ಬರವಾಗಿ ಸೇರಿಬಿಡುವುದಲ್ಲ. ನೆಲದಿಂದ ಪಡೆದುದನ್ನು ಮತ್ತದಕ್ಕೆ ಗಿಡಗಳೂ ಕೊಡುವ ಪರಿಕಂಡು ಈತನಿಗೆ ಅಚ್ಚರಿ ಆಯಿತು. ನೆಲದಲ್ಲಿ ಹುಟ್ಟಿದ ಹುಲ್ಲು ಮಳೆಗಾಲದಲ್ಲಿ ನೀರಹರಿವಿಗೆ ಮಣ್ಣು ಸವೆಯದಂತೆ ತಡೆವ, ದನಕರುಗಳಿಗೆ ಆಹಾರವಾಗುವ, ಬೇಸಗೆಯಲ್ಲಿ ನೆಲಕ್ಕೆ ಮುಚ್ಚಿಗೆ ಆಗಿಬಿಡುವ ಸಂಗತಿ ಗಮನಕ್ಕೆ ಬಂತು.
 ಪಶುಪಕ್ಷಿಪ್ರಾಣಿಗಳ ಮಲಮೂತ್ರಗಳೂ ನೆಲವನ್ನು ಸಮೃದ್ಧಗೊಳಿಸಿ ಫಲಶಕ್ತಿಯನ್ನು ಹೆಚ್ಚಿಸುತ್ತವೆ ಎಂದು ಅರಿತು ಅಚ್ಚರಿಗೊಂಡ. ಇಲ್ಲಿರುವ ಒಂದೊಂದೂ ಒಂದಿಲ್ಲೊಂದು ರೀತಿ ಯಾರು ಯಾರಿಗೋ ಉಪಯೋಗಕ್ಕೆ ಬರುವುದೇ ಆಗಿದೆಯಲ್ಲ. ಈ ಭಗವಂತನ ಸೃಷ್ಟಿ ಎಷ್ಟು ವಿಚಿತ್ರ ಎಂದು ಅನ್ನಿಸತೊಡಗಿತು.
 ಹೀಗೆಯೇ ಹಲವು ತೆರನಾಗಿ ಯೋಚಿಸಿ ಯೋಚಿಸಿ ಹಣ್ಣಾಗಿಬಿಟ್ಟ ಶಿಷ್ಯ. ಅಂದು ಆಹಾರ ಯಾವುದೂ ರುಚಿಸಲಿಲ್ಲ. ನಿದ್ರೆ ಹತ್ತಿರ ಸುಳಿಯಲಿಲ್ಲ.
 ಮರುದಿನ ಬೆಳಗಾಯಿತು. ಶೌಚ- ಸ್ನಾನಕ್ಕೆಂದು ನದಿಯ ಸಮೀಪ ಹೋದ. ತನ್ನ ಮಲವನ್ನೇ ಕಂಡು ಇದೇ ಯಾರಿಗೂ ಉಪಯೋಗವಾಗದ ವಸ್ತುವೆಂದು ಭಾವಿಸಿದ. ‘ಇಲ್ಲ, ಇಲ್ಲ ನಿನ್ನೆ ನಾನು ಆಹಾರ ರೂಪದಲ್ಲಿದ್ದೆ. ಇಂದು ನಿನ್ನ ಮೂಲಕ ಹೊರಬಂದಾಗ ಈ ಗತಿ ನನ್ನದಾಗಿದೆ. ಆದರೂ ನಾನೂ ಈ ನೆಲಕ್ಕೆ ಗೊಬ್ಬರವಾಗಬಲ್ಲೆ’ ಎಂದ ಅದರ ಮಾತು ಕೇಳಿ ದಂಗಾದ.
 ‘ಇಷ್ಟು ಕಲಿತ ನಾನು ಏನು ಬೇಕಾದರೂ ಮಾಡಬಲ್ಲೆ, ಕೊಡಬಲ್ಲೆ ಎಂದು ಅಹಂಕಾರ ಪಟ್ಟಿದ್ದೆನಲ್ಲಾ… ಎಂಥ ಹೊಡೆತ ಬಿತ್ತು ಅದಕ್ಕೆ. ಗುರುಗಳೇ, ನನ್ನಲ್ಲಿರುವ ಅಹಂಕಾರ ಮಾತ್ರ ಯಾರಿಗೂ ಉಪಯೋಗಕ್ಕೆ ಬಾರದುದು. ಈಗದು ಕಳೆಯುವಂತೆ ಅನುಗ್ರಹಿಸಿ‘ ಎಂದು ವಿನೀತನಾಗಿ ಬೇಡಿದ.
 ‘ಎನಗಿಂತ ಕಿರಿಯರಿಲ್ಲ’ ಎಂಬ ಭಾವಮೊಳೆತ ಆ ಶಿಷ್ಯನೇ ಲೋಕಗುರು ವೇದವ್ಯಾಸರ ಮಗ ಶುಕ. ಆತನ ಗುರುವೇ, ಭವದಲ್ಲಿದ್ದೂ ಇಲ್ಲದಂತೆ ಬದುಕಿದ ಮಹಾರಾಜ ಜನಕ.   

   

Leave a Reply