ಸಮಾಜದ ನ್ಯೂನತೆ ಮತ್ತು ಪರಿಹಾರ

ಲೇಖಕರು ; ಲೇಖನಗಳು - 0 Comment
Issue Date :

ಡಾ. ಮಹಾಬಲೇಶ್ವರ ಎಸ್. ಭಟ್ಟ

ನಾವಿಂದು ವಿಶಾಲ ಸಮಾಜದಲ್ಲಿ ಬದುಕುತ್ತಿದ್ದೇವೆ. ಇದೇ ಸಮಾಜದಲ್ಲಿ ಅನೇಕ ಪ್ರೇರಣೆಯನ್ನು ನೀಡುವ ಸಂಗತಿಗಳು ನಮಗೆ ನಿತ್ಯವೂ ಸಿಗುತ್ತವೆ. ಇದೇ ಪ್ರೇರಣೆಯಿಂದಲೇ ನಾವು ನಮ್ಮ ನಿತ್ಯಜೀವನವನ್ನು ನಡೆಸುತ್ತೇವೆ. ಪ್ರತಿಯೊಬ್ಬ ವ್ಯಕ್ತಿ, ಪ್ರತಿಯೊಂದು ಸನ್ನಿವೇಶವೂ ನಮಗೆ ಜೀವನಪಾಠವನ್ನು ಕಲಿಸುತ್ತದೆ.

ಸಮಾಜದಲ್ಲಿ ಪ್ರೇರಣಾದಾಯಕ ಪ್ರಸಂಗವಿದ್ದಂತೆ ದುಃಖವನ್ನುಂಟುಮಾಡುವ ಸನ್ನಿವೇಶಗಳೂ ಕಾಣಸಿಗುತ್ತವೆ. ಅವುಗಳನ್ನು ಎರಡಾಗಿ ವಿಭಾಗಮಾಡಬಹುದು. ಸಮಾಜದ ನ್ಯೂನತೆ ಮತ್ತು ಸಮಾಜದ ವಿಕೃತಿ ಎಂಬುದಾಗಿ. ನಾವಿರುವ ಪರಿಸರದಲ್ಲಿಯೇ ಇವೆರಡನ್ನೂ ಕಾಣಬಹುದು. ನಾವು ನಮ್ಮ ಈ ಜನ್ಮದಲ್ಲಿ ಪೂರ್ವಕೃತ ಸತ್ಕರ್ಮದ ಪರಿಣಾಮವಾಗಿ ದೇಹದಿಂದ, ಮನಸ್ಸಿನಿಂದ, ಇಂದ್ರಿಯಗಳಿಂದ ಸಶಕ್ತರಾಗಿರಬಹುದು. ಆದರೆ ಕೆಲ ಮನುಷ್ಯರು ಈ ಕೆಲ ಅಂಶಗಳಿಂದ ನ್ಯೂನತೆಯನ್ನು ಹೊಂದಿರುತ್ತಾರೆ. ಕೆಲವರಿಗೆ ದೇಹದಲ್ಲಿ ದೌರ್ಬಲ್ಯವಿದ್ದರೆ ಕೆಲವರಿಗೆ ಕಣ್ಣೇ ಮೊದಲಾದ ಇಂದ್ರಿಯಗಳಲ್ಲಿ ನ್ಯೂನತೆ ಇರಬಹುದು. ಇವೆರಡಕ್ಕಿಂತ ಭಯಂಕರವಾದ ವಿಷಯವೆಂದರೆ ಮಾನಸಿಕವಾದ ದೌರ್ಬಲ್ಯ. ಇಂಥವರೂ ಕೂಡಾ ನಮ್ಮ ಸಮಾಜದ್ದೇ ಒಂದು ಭಾಗ. ನಮ್ಮ ದೇಹದಲ್ಲಿ ಯಾವುದಾದರೊಂದು ಅಂಗದಲ್ಲಿ ನ್ಯೂನತೆ ಆದರೆ, ಇತರ ಅಂಗಗಳು ಆ ಅಂಗಕ್ಕೆ ಸಹಕಾರನೀಡುವಂತೆ, ನಮ್ಮ ಸಮಾಜದ ಅಂಗದಂತಿರುವ ಕೆಲವರ ನ್ಯೂನತೆಯನ್ನು ಸಶಕ್ತವಾಗಿರುವ ಸಮಾಜದ ಇನ್ನೊಂದು ಅಂಗದ ಅರ್ಥಾತ್ ನಮ್ಮೆಲ್ಲರ ಜವಾಬ್ದಾರಿಯಲ್ಲವೇ? ಇಂತಹ ವ್ಯಕ್ತಿಗಳನ್ನು ನಾವು ಸಂಘಟನೆಯಲ್ಲಿ ವಿಶಿಷ್ಟಚೇತನವೆಂದು ಕರೆಯುತ್ತೇವೆ. ಇಂಥಹವರಿಗೂ ಸಮಾಜದಲ್ಲಿ ಗೌರವದಿಂದ ಬಾಳುವ ಅಧಿಕಾರವಿದೆ. ಅವರಿಗೆ ಪೋಷಣೆಯನ್ನು ನೀಡುವ ಸಲುವಾಗಿಯೇ ನಮ್ಮಲ್ಲಿ ಸಕ್ಷಮ ಎಂಬ ವಿವಿಧಕ್ಷೇತ್ರವಿದೆ.

ಸಮಾಜದ ನ್ಯೂನತೆ ಎಂಬುದರಲ್ಲಿ ಪ್ರಧಾನವಾಗಿ ಪರಿಗಣಿಸಬಹುದಾದ ಅಂಶವೆಂದರೆ ಅಂಗವೈಕಲ್ಯ ಮತ್ತು ಬುದ್ಧಿಮಂದತೆ. ಇದಾವುದೂ ಇಂದಿನ ಕರ್ಮಾಧೀನವಲ್ಲದ್ದರಿಂದ ನಮ್ಮ ಕೈಯಲ್ಲಿಲ್ಲ. ಆ ರೀತಿಯಿಂದ ಜನ್ಮಪಡೆದವರಿಗೆ ಸಹಯೋಗವನ್ನು ನೀಡುವ ಸಾಮರ್ಥ್ಯಮಾತ್ರ ನಮಗಿದೆ. ಕೆಲಕಡೆಗಳಲ್ಲಿ ಬುದ್ಧಿಮಾಂದ್ಯಮಕ್ಕಳ ಶಾಲೆ ಇತ್ಯಾದಿ ಇದೆ. ಅಲ್ಲಿನ ಶಿಕ್ಷಕರು, ಸಂಯೋಜಕರು ಪಡುವ ಪರಿಶ್ರಮ ಯಾವ ಮುನಿಗಳ ತಪಸ್ಸಿಗಿಂತಲೂ ಕಡಿಮೆಯೇನಲ್ಲ ದೃಢವಾದ ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಇಂತಹ ವ್ಯವಸ್ಥೆಯನ್ನು ಆರಂಭಿಸಿ ನಿರ್ವಹಣೆ ಮಾಡಬಹುದು; ಅಂತೆಯೇ ಅಂಧರಿಗೆ ಮಾಡುವ ವ್ಯವಸ್ಥೆ. ಇಂದ್ರಿಯಗಳಲ್ಲಿ ಪ್ರಧಾನವಾದದ್ದು ಕಣ್ಣು. ಉಳಿದ ಇಂದ್ರಿಯಗಳಲ್ಲಿ ನ್ಯೂನತೆ ಇದ್ದರೂ ಕಷ್ಟವೇ. ಆದರೆ ಕಣ್ಣು ಕಾಣದಿದ್ದರೆ ಕಷ್ಟವೇನೆಂದು ನಾವು ಪ್ರಾಯಃ ಊಹಿಸಲೂ ಸಾಧ್ಯವಿಲ್ಲ. ಒಂದುದಿನ ವಿದ್ಯುತ್ ಹೋಗಿ ಸುತ್ತಲೂ ಅಂಧಕಾರಕವಿದ್ದರೆ ನಮಗೆ ಏನನ್ನುಮಾಡಲೂ ಸ್ಫುರಿಸುವುದಿಲ್ಲ. ಅನೇಕರು ಜನ್ಮದಿಂದಲೇ ಅಂಧರಾಗಿರುತ್ತಾರೆ ಅವರ ಪರಿಸ್ಥಿತಿ ಹೇಗಿದ್ದೀತು. ಅನೇಕ ಮಹಾತ್ಮರು ತಮ ಕಣ್ಣುಗಳನ್ನು ದಾನಮಾಡುತ್ತಾರೆ. ಆದರೆ ಅವುಗಳು ಸರಿಯಾದ ವ್ಯಕ್ತಿಗಳಿಗೆ ಸರಿಯಾದ ಸಮಯದಲ್ಲಿಸಿಗದೇ ವ್ಯರ್ಥವಾಗುವುದು. ಉಳಿದ ಇಂದ್ರಿಯಗಳಲ್ಲಿ ಊನತೆ ಇದ್ದರೂ ಸಮಾನವಾದ ಪರಿಸ್ಥಿತಿ. ಇವೆರಡು ಸಮಾಜದ ಪ್ರಧಾನವಾದ ನ್ಯೂನತೆಗಳು.

ಇದೇ ಸಮಾಜದಲ್ಲಿ ಅನೇಕ ವಿಕೃತಿಗಳೂ ಇವೆ. ಅವುಗಳಲ್ಲಿ ಪ್ರಧಾನವಾದವುಗಳು ಅನಾಥಾಶ್ರಮ, ವೃದ್ಧಾಶ್ರಮ ಮತ್ತು ವಿವಿಧವ್ಯಸನಗಳು. ಮಕ್ಕಳು ನಮಗೆ ಬೇಕು ಎಂದು ಅಥವಾ ದೈಹಿಕವಾದ ಆಕರ್ಷಣೆಯೆಂಬ ಅವಿವೇಕದಿಂದ ಮಕ್ಕಳನ್ನು ಅನೈತಿಕವಾದ ಸಂಬಂಧದಿಂದ ಪಡೆಯುತ್ತಾರೆ. ಹುಟ್ಟಿದ ಮಗುವನ್ನು ಸಾಕುವ ಸಾಮರ್ಥ್ಯವಿಲ್ಲದೇ, ಸಮಾಜವನ್ನು ಎದುರಿಸಲಾಗದೇ ಅಥವಾ ಹೆಣ್ಣುಮಗು ಹುಟ್ಟಿತು ಎಂಬ ಕಾರಣದಿಂದ ಎಲ್ಲೆಂದರಲ್ಲಿ ಎಸೆದು ಯಾವುದೇ ಭಾವುಕತೆ ಇಲ್ಲದೆ ಹೊರಟುಹೋಗುತ್ತಾರೆ. ಕಸದ ತೊಟ್ಟಿಯಲ್ಲಿ, ಚರಂಡಿಯಲ್ಲಿ, ಪಾರ್ಕ್‌ಗಳಲ್ಲಿ ಇಂತಹ ಮಕ್ಕಳು ಸಿಗುತ್ತಾರೆ. ಇವರ ತಂದೆ ತಾಯಿಯರು ಯಾರೆಂದು ಸಮಾಜಕ್ಕೂ ಗೊತ್ತಿಲ್ಲ, ಆ ಮಗುವಿಗಂತೂ ತಿಳಿಯುವ ಸಂಭವವೇ ಇಲ್ಲ. ಯಾರು ಜನ್ಮನೀಡಿದ್ದರೋ ಅವರಂತೂ ಅನಾಮಿಕರಾಗಿರುತ್ತಾರೆ. ಇಂತಹವರನ್ನು ಸಾಕಲು ಅನಾಥಾಶ್ರಮಗಳು ಪ್ರತಿ ಪ್ರದೇಶದಲ್ಲಿಯೂ ಸಿಗುತ್ತದೆ.

ಅಂತೆಯೇ ವೃದ್ಧಾಶ್ರಮಗಳು. ಯಾವ ತಂದೆತಾಯಿಯರು ಮಕ್ಕಳನ್ನು ಪ್ರೀತಿಯಿಂದ ತಮ್ಮ ಸರ್ವಸ್ವವನ್ನೂ ಸಮರ್ಪಣೆಮಾಡಿ ಸಾಕಿರುತ್ತಾರೋ ಅಂತಹ ತಂದೆತಾಯಿಯರನ್ನು ಅದೇ ಮಕ್ಕಳಿಗೆ ಸಾಕಲು ಸಾಧ್ಯವಾಗುವುದಿಲ್ಲವೆಂದರೆ ಇದೆಷ್ಟು ಕೃತಘ್ನತೆ. ಆದರೆ ಈ ದೃಶ್ಯ ಇಂದು ಸರ್ವೇ ಸಾಮಾನ್ಯ. ವೃದ್ಧರಾದ ತಂದೆ-ತಾಯಿಯರನ್ನು ಹೆಗಲಮೇಲೆ ಹೊತ್ತು ತೀರ್ಥಾಟನೆ ಮಾಡಿದ ಶ್ರವಣಕುಮಾರನ ಕಥೆಯನ್ನು ಕೇಳಿದ ನಮ್ಮದೇ ಸಮಾಜದಲ್ಲಿ ಇಂದು ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಅಲ್ಲಿ ಒಂದೊಂದು ವೃದ್ಧರ ಪರಿಸ್ಥಿತಿಯೂ ದಯನೀಯ ಮತ್ತು ಅಸಹನೀಯ. ವಾರ್ಧ್ಯಕ್ಯದಲ್ಲಿ ಅವರು ಮಕ್ಕಳ ಪ್ರೀತಿಯೊಂದನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಅದನ್ನೂ ನೀಡಲಾಗದ ಮಕ್ಕಳಿದ್ದಾರಲ್ಲಾ ಎಂಬುದೇ ವಿಧಿಯ ವಿಲಾಸ.

ವಾರ್ಧಕ್ಯ, ಅಂಗವೈಕಲ್ಯ, ಬುದ್ಧಿಮಾಂದ್ಯ ಇತ್ಯಾದಿಗಳು ಪ್ರಕೃತಿಸಹಜ. ಹಿಂದೆ ಇತಿಹಾಸದಲ್ಲಿ ಸಮಾಜದ ನ್ಯೂನತೆಯನ್ನು ನೋಡಿ ಅರ್ಥಾತ್ ವೃದ್ಧನನ್ನು, ರೋಗಿಯನ್ನು ಮತ್ತು ಶವವನ್ನು ನೋಡಿ ಜೀವನದಲ್ಲಿ ವೈರಾಗ್ಯವನ್ನು ಪಡೆದು, ನಿತ್ಯಸುಖದ ಅನ್ವೇಷಣೆಗೆ ತೆರಳಿದ ಸಿದ್ಧಾರ್ಥ ಬುದ್ಧನಾದ. ಇಂದು ಅನೇಕರು ಇಂತವರಿಗೆ ಸಹಾಯಮಾಡಲು ಸೇವಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ. ಅವರು ಇಂದಿನ ಬುದ್ಧರೆನ್ನಬಹುದೇ? ಇನ್ನು ಸಮಾಜದ ವಿಕೃತಿಯ ಪರಿಹಾರಕ್ಕೆ ಭಾವನಾಪ್ರಧಾನ ಶಿಕ್ಷಣ ಮತ್ತು ಕೌಟುಂಬಿಕವ್ಯವಸ್ಥೆಯನ್ನು ಸರಿಪಡಿಸುವುದೇ ಪರಿಹಾರ.

   

Leave a Reply