ಯುನೆಸ್ಕೋ ವಹಿಸಿಕೊಂಡಿದೆ ಕುಂಭಮೇಳದ ಸಾಂಸ್ಕೃತಿಕ ಪರಂಪರೆಯ ರಕ್ಷಣೆ

ಲೇಖನಗಳು - 0 Comment
Issue Date :

 

-ವಿಕ್ರಮ್ ಜೋಶಿ

ಜಗತ್ತಿನಲ್ಲಿ ಮನುಜ ನಡೆದುಬಂದ ದಾರಿಯುದ್ದಕ್ಕೂ ಸಂಸ್ಕೃತಿಯ ಒಂದು ಪರಂಪರೆಯಿದೆ. ಕೆಲವೊಂದು ಸಂಸ್ಕೃತಿ ನಾಗರಿಕತೆಯ ಜೊತೆಗೆ ಅಳಿಸಿ ಹೋಗಿದೆ. ಇನ್ನು ಕೆಲವು ಸಾವಿರಾರು ವರ್ಷಗಳಿಂದ ನಡೆಯುತ್ತಲೇ ಬಂದಿವೆ. ಈ ಶ್ರೀಮಂತ ಪರಂಪರೆಯನ್ನು ಕಾಪಾಡಿಕೊಂಡು ಬರುವುದು ಮನುಷ್ಯರಾದ ನಮ್ಮ ಕರ್ತವ್ಯ. ಇದಕ್ಕಾಗಿಯೇ ಯುನೆಸ್ಕೋ 2008ರಿಂದ ಜಗತ್ತಿನ ಇಂತಹ ಅಭೂತಪೂರ್ವ ಸಾಂಸ್ಕೃತಿಕ ಪರಂಪರೆಯನ್ನು ಹುಡುಕಿ ಅದನ್ನು ರಕ್ಷಿಸುವಂತೆ ನೋಡಿಕೊಳ್ಳುತ್ತಿದೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ಯಾವತ್ತೂ ಜಗತ್ತು ಗೌರವಿಸುತ್ತದೆ. ಮೋದಿಜಿಯವರು ವಿಶ್ವಸಂಸ್ಥೆಯ ಭಾಷಣದಲ್ಲಿ ವಿಶ್ವ ಯೋಗದಿನವನ್ನು ಮಾಡಬೇಕು ಎಂದು ಸಲಹೆ ಕೊಟ್ಟ ಎರಡು ತಿಂಗಳೊಳಗೆ ಜಗತ್ತಿನ ನೂರ ಎಪ್ಪತ್ತೈದು ದೇಶಗಳು ಸ್ವ ಇಚ್ಛೆಯಿಂದ ಒಪ್ಪಿಗೆ ನೀಡಿದವು. ಇಂತಹ ದಾಖಲೆ ಮತ್ತೊಂದಿಲ್ಲ. ಜಗತ್ತಿಗೆ ಭಾರತವೆಂದರೆ ಸಾಂಸ್ಕೃತಿಕ ಕೇಂದ್ರ, ಅಧ್ಯಾತ್ಮಿಕ ತಾಣ, ಯೋಗದ ಪಾಠಶಾಲೆ. ಆದರೆ ನಮ್ಮ ದೇಶದ ಕೆಲವು ಚಿಂತಕರಿಗೆ, ಬುದ್ಧಿಜೀವಿಗಳಿಗೆ ನಮ್ಮ ಸಂಸ್ಕೃತಿಯ ಮೇಲೆ, ಆಚಾರವಿಚಾರಗಳ ಮೇಲೆ ತಾತ್ಸಾರ.

ಆದರೆ ಭಾರತದ ಸುಮಾರು ಹದಿನಾಲ್ಕು ಈ ತರಹದ ಸಂಸ್ಕೃತಿಯ ಪರಿಚಯ ಯುನೆಸ್ಕೋದ ಪಟ್ಟಿಯಲ್ಲಾಗಿದೆ. Intangible Heritage ಅಂದರೆ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ. ಅದರಲ್ಲಿ ಲಿಖಿತವಾಗಿರದ ಜ್ಞಾನದ ಭಂಡಾರವಿದೆ, ಕಲೆಗಳಿವೆ, ಕೌಶಲ್ಯಗಳಿವೆ. ಇಂತಹ ಪರಂಪರೆ ಕೇವಲ ಒಂದು ಪೀಳಿಗೆಗೆ ಸೀಮಿತವಾಗಿರುವುದಿಲ್ಲ. ತಲೆತಲಾಂತರಗಳಿಂದ ನಡೆದುಕೊಂಡು ಬಂದ ಸಂಪ್ರದಾಯ ಮುಂದಿನ ನೂರಾರು ಪೀಳಿಗೆಯ ತನಕ ಸಾಗುತ್ತದೆ. ಯುನೆಸ್ಕೋ 2003ರಲ್ಲಿ ಸಾಂಪ್ರದಾಯಿಕ ವಸ್ತುಗಳನ್ನು ರಕ್ಷಿಸುವ ಕಾರ್ಯಕ್ರಮ ಶುರುಮಾಡಿತ್ತು. ಆದರೆ ವಸ್ತುಗಳ ಜೊತೆಗೆ ಸಂಸ್ಕೃತಿಯನ್ನು ಕಾಪಾಡುವುದು ಮುಖ್ಯ ಅನಿಸಿತು. ಹೀಗಾಗಿ ಯುನೆಸ್ಕೋ ಜಗತ್ತಿನ ಸಂಸ್ಕೃತಿಯ ಉಳಿವಿಗಾಗಿ ಕೆಲಸ ಮಾಡುತ್ತಿದೆ. ಸಾಂಸ್ಕೃತಿಕ ಪರಂಪರೆಯನ್ನಾಗಿ ಸ್ವೀಕರಿಸಿದೆ.

 ಭಾರತದ ಕೆಲವು ಸಂಪ್ರದಾಯಗಳು ಅಂದರೆ ಕೇರಳದ ಕೂಟಿಯಟ್ಟಮ್, ಮುಡಿಯೆಟ್ಟು, ವೇದಘೋಷ, ರಾಮಲೀಲಾ, ರಾಮ್ಮನ್, ರಾಜಸ್ಥಾನದ ಜಾನಪದ ಸಾಹಿತ್ಯವಾದ ಕಲಬೇಲಿಯಾ, ಪಶ್ಚಿಮ ಭಾರತದ ಚ್ಚಾವ್ ನೃತ್ಯ, ಬೌದ್ಧರ ಮಂತ್ರಘೋಷ, ಮಣಿಪುರದ ಪ್ರಖ್ಯಾತ ಸಂಕೀರ್ತನ, ಪಂಜಾಬಿನ ತಾಮ್ರದ ಪಾತ್ರೆಯ ಮೇಲಿನ ಕಲೆ, ಯೋಗ ಹಾಗೂ ಇತ್ತೀಚೆಗೆ ಸೇರ್ಪಡೆಯಾದ ಕುಂಭಮೇಳ.

ಕುಂಭಮೇಳ ಹಾಗೂ ಅದರ ಪ್ರಾಮುಖ್ಯತೆ

 ಕುಂಭಮೇಳ ನಮ್ಮ ದೇಶದ ನಾಲ್ಕು ಕಡೆಗಳಲ್ಲಿ ನಡೆಯುತ್ತದೆ. ಹರಿದ್ವಾರ, ನಾಸಿಕ್, ಪ್ರಯಾಗ ಹಾಗೂ ಉಜ್ಜಯಿನಿ. ಕುಂಭಕೋಣಂನಲ್ಲಿ ನಡೆಯುವ ಮಾಹಾಮಾಹಮ್ ಹಬ್ಬವನ್ನು ಕೂಡ ಅಲ್ಲಿಯ ಜನರು ಕುಂಭಮೇಳವೆಂದೇ ಪರಿಗಣಿಸುತ್ತಾರೆ. ದೇಶದ ನಾಲ್ಕು ಕಡೆ, ನಾಲ್ಕು ನದಿಗಳ ದಡದಲ್ಲಿ ಈ ಕುಂಭಮೇಳ ನಡೆಯುತ್ತದೆ. ಎಂತಹ ವೈಶಿಷ್ಟ್ಯಗಳ ಸಮಾಗಮ ಅಲ್ಲವೇ? ಹರಿದ್ವಾರದಲ್ಲಿ ಗಂಗಾ ನದಿಯ ದಡದಲ್ಲಿ, ಅಲಹಾಬಾದಿನ ಪ್ರಯಾಗದಲ್ಲಿರುವ ತ್ರಿವೇಣಿ ಸಂಗಮದಲ್ಲಿ, ನಾಸಿಕನಲ್ಲಿರುವ ಗೋದಾವರಿ ತೀರದಲ್ಲಿ, ಹಾಗೂ ಉಜ್ಜಯಿನಿಯ ಶಿಪ್ರಾ ನದಿಯ ದಡದಲ್ಲಿ ಕುಂಭಮೇಳ ನಡೆಯುತ್ತದೆ. ಒಂದೇ ಜಾಗದಲ್ಲಿ ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ಈ ಹಬ್ಬ ಜರಗುತ್ತದೆ. ಮಹಾ ಕುಂಭಮೇಳ ಅನ್ನುವುದು ಬೇರೆ, ಅದು 144 ವರ್ಷಕ್ಕೊಮ್ಮೆ ನಡೆಯುವಂತಹದ್ದು. ಹಿಂದೂ ಪಂಚಾಂಗದ ಪ್ರಕಾರ ಯಾವಾಗ ಹಾಗೂ ಎಲ್ಲಿ ಕುಂಭ ಮೇಳ ನಡೆಯಬೇಕು ಎನ್ನುವುದು ನಿರ್ಧಾರವಾಗುತ್ತದೆ. ಯಾವಾಗಿನಿಂದ ಈ ಕುಂಭಮೇಳ ನಡೆಯುತ್ತಿದೆ ಎನ್ನುವುದಕ್ಕೆ ನಿಖರವಾದ ಮಾಹಿತಿಗಳಿಲ್ಲ. ಆದರೆ ಎಷ್ಟೋ ಶತಮಾನಗಳಿಂದ ಕುಂಭಮೇಳ ಎನ್ನುವುದು ನಮ್ಮ ಸಂಸ್ಕ್ರತಿಯ ಭಾಗವಾಗಿದೆ. ನಮ್ಮ ಸಂಸ್ಕೃತಿ ಇಷ್ಟು ಶ್ರೀಮಂತವಾಗಿದ್ದು ಇಂತಹ ಅದ್ಭುತ ಪರಂಪರೆಗಳಿಂದಲೇ.

 ಪೌರಾಣಿಕ ಕಥೆಗಳಲ್ಲಿ ಸಮುದ್ರ ಮಂಥನದ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಸಮುದ್ರ ಕಡೆದಾಗ ಅಮೃತ ಯಾವಾಗ ಸಿಕ್ಕಿತೋ ಅದನ್ನು ಭಗವಾನ್ ವಿಷ್ಣುವು ಸಾಗಿಸುವಾಗ ಅಮೃತದ ಹನಿ ಚೆಲ್ಲಿತ್ತಂತೆ. ಎಲ್ಲೆಲ್ಲಿ ಅಮೃತದ ಹನಿ ಚೆಲ್ಲಿತೋ ಅಲ್ಲೆಲ್ಲ ಕುಂಭಮೇಳ ಹಬ್ಬವನ್ನು ಆಚರಿಸಲಾಗುತ್ತದೆ. ಮತ್ತೊಂದೆಡೆ,  ಅಮೃತವನ್ನು ಶೇಖರಿಸಿಡಲು ಆಯುರ್ವೇದದ ಮಹಾಋಷಿ ಧನ್ವಂತರಿಯನ್ನು ಕೇಳಿಕೊಳ್ಳಲಾಯಿತು. ಧನ್ವಂತರಿ ಅಮೃತವನ್ನು ಮಡಿಕೆಯೊಳಗೆ ಹಾಳಾಗದಂತೆ ಈ ನಾಲ್ಕು ಕಡೆ ಇಟ್ಟಿದ್ದ ಎನ್ನುವ ಕಥೆ ಕೂಡ ಪುರಾಣದಲ್ಲಿ ಬರುತ್ತದೆ. ಹೀಗಾಗಿ ಈ ಕುಂಭಮೇಳ ಸಮುದ್ರ ಮಂಥನದ ಕಾಲದಿಂದ ನಡೆಯುತ್ತಾ ಬಂದಿದೆ  ಎನ್ನುವುದು ಎಲ್ಲರ ಭಾವನೆ.

 ಕುಂಭಮೇಳ ಜಗತ್ತಿನಲ್ಲಿ ನಡೆಯುವ ಅತೀ ದೊಡ್ಡ ಶಾಂತಿಯುತವಾದ ಕೂಟ. ಅದಲ್ಲದೆ ಇದು ಜಗತ್ತಿನಲ್ಲಿ ಅತೀ ಹೆಚ್ಚು ಸಂತರು ಒಂದುಗೂಡುವ ಸಮಾವೇಶ. ಕುಂಭಮೇಳ ಜಗತ್ತಿನೆಲ್ಲೆಡೆಯಿಂದ ಸಾಧುಸಂತರು ಬಂದು ಸೇರುವ ಇದೊಂದು ಬೃಹತ್ ತೀರ್ಥಯಾತ್ರೆ. ಕುಂಭಮೇಳಕ್ಕೆ ಬಂದು ಆ ಜಾಗದ ಪವಿತ್ರ ನದಿಯ ನೀರಿನಲ್ಲಿ ಸ್ನಾನ ಮಾಡುವುದೇ ಒಂದು ಪವಿತ್ರ ಕೆಲಸ. ಎಷ್ಟು ಕೋಟಿ ಜನರು ಕುಂಭಮೇಳಕ್ಕೆ ಬರುತ್ತಾರೆ ಎಂದು ಹೇಳುವುದು ಕಷ್ಟ. ಪವಿತ್ರವಾದ ಆ ದಿನ ನದಿಯಲ್ಲಿ ಸ್ನಾನ ಮಾಡುವವರ ಸಂಖ್ಯೆ ಲೆಕ್ಕಮಾಡಲಾಗದು. ತ್ರಿವೇಣಿ ಸಂಗಮಕ್ಕೆ ಸುಮಾರು ಹನ್ನೆರಡು ಕೋಟಿ ಜನರು ಬಂದಿದ್ದರಂತೆ! ಒಂದೇ ದಿನದಲ್ಲಿ ಮೂರು ಕೋಟಿ ಜನರು ಸೇರಿದ ದಾಖಲೆಯಿದೆ. ವಿಶೇಷವೆಂದರೆ ಯಾರಿಗೂ ವೈಯಕ್ತಿಕ ಆಮಂತ್ರಣ ಇರುವುದಿಲ್ಲ. ಸಂತರು, ಸಾಧುಗಳು, ನಾಗಾ ಸಾಧುಗಳು, ಭಕ್ತರು ಹೀಗೆ ಎಲ್ಲ ಬಗೆಯ ಜನರೂ ಬರುತ್ತಾರೆ. ವಿಶೇಷವಾಗಿ ಸಂತರು ಹಾಗೂ ಸಾಧುಗಳ ಬರುವಿಕೆಯೇ ಇಲ್ಲಿ ಮುಖ್ಯ. ಇಲ್ಲಿ ಬರುವ ಸಾಧು, ಸನ್ಯಾಸಿಗಳು ಜಗತ್ತನ್ನೇ ತೊರೆದು ಸಾಧನೆಯನ್ನು ಮಾಡುತ್ತಿರುವಂಥವರು. ಭಕ್ತರಿಗೆ ದರ್ಶನ ಕೊಡಲೆಂದೇ ಅವರು ಕುಂಭಮೇಳಕ್ಕೆ ಬರುತ್ತಾರೆ. ಅವರನ್ನು ಭೇಟಿಯಾಗಿ ಜನರು ಸಲಹೆ ಹಾಗೂ ಆಶೀರ್ವಾದ ಪಡೆಯುತ್ತಾರೆ. ಎಷ್ಟೇ ಚಳಿ ಇರಲಿ ನಾಗಾ ಸಾಧುಗಳು ಬಟ್ಟೆಯನ್ನು ತೊಡುವುದಿಲ್ಲ. ಕುಂಭಮೇಳ ಇಂತಹ ಅಚ್ಚರಿಯ ಆಧ್ಯಾತ್ಮಿಕ ಸನ್ನಿವೇಶಗಳನ್ನು ಕಣ್ಣೆದುರಿಗೆ ತಂದಿಡುತ್ತದೆ. ಇಲ್ಲಿ ಭಕ್ತಿ ಇದೆ, ಭಾವನೆಗಳಿವೆ, ಆಧ್ಯಾತ್ಮ ಇದೆ, ತಪಸ್ಸಿನ ಶಕ್ತಿ ಇದೆ, ಮುಕ್ತಿಗೆ ಮಾರ್ಗವಿದೆ, ಕಷ್ಟಕೋಟಲೆಗೆ ಪರಿಹಾರವಿದೆ. ಅದೆಷ್ಟೋ ವಿದೇಶಿ ಬರಹಗಾರರು, ಮಾಧ್ಯಮಗಳು ಕುಂಭಮೇಳಕ್ಕೆ ಬಂದು ಹಬ್ಬವನ್ನು ಬಿತ್ತರಿಸುತ್ತವೆ. ಜಗತ್ತಿನಲ್ಲಿ ನಡೆಯುವ ಅತೀ ದೊಡ್ಡ ತೀರ್ಥಯಾತ್ರೆ’ ಎಂದು ಸಿಬಿಎಸ್ ಟಿವಿ ಹೇಳಿದರೆ, ಬಿಬಿಸಿಯು ಕುಂಭಮೇಳ ಎನ್ನುವುದು ಜಗತ್ತಿನಲ್ಲೇ ಅತ್ಯಂತ ದೊಡ್ಡ ಹಬ್ಬ’ ಎಂದು ಬಣ್ಣಿಸಿದೆ. ನಾವೆಲ್ಲ ಈ ಶ್ರೀಮಂತ, ಅಪೂರ್ವ ಸಂಸ್ಕೃತಿಯ ಭಾಗ ಎನ್ನುವುದು ಎಷ್ಟು ಹೆಮ್ಮೆ ಅಲ್ಲವೇ?

 

   

Leave a Reply