ಯುವಜನಕ್ಕೆ ಮಾರ್ಗದರ್ಶನ

ಎಸ್.ಗುರುಮೂರ್ತಿ ; ಲೇಖನಗಳು - 0 Comment
Issue Date : 05.05.2015

ಯುವಜನಕ್ಕೆ ಮಾರ್ಗದರ್ಶನ – ಆಧುನಿಕತೆಯ ಸೋಲು

ಕೇವಲ ಶಿಸ್ತು ಪಾಲಿಸಬೇಕೆಂದು ಸೂಚಿಸಿದ್ದಕ್ಕಾಗಿ ತಮಿಳುನಾಡಿನ ತೂತುಕುಡಿಯ ಒಂದು ಖಾಸಗಿ ಎಂಜಿನಿಯರಿಂಗ್ ಕಾಲೇಜಿನ ಮೂವರು ವಿದ್ಯಾರ್ಥಿಗಳು ತಮ್ಮ ಪ್ರಿನ್ಸಿಪಾಲರನ್ನು ಕಡಿದು ಕೊಲೆಗೈದರೆನ್ನುವ ಸುದ್ದಿ ದೇಶವನ್ನು ಆಘಾತಕ್ಕೀಡು ಮಾಡಿದೆ. ದಶಕಗಳ ಹಿಂದೆ ಭಾರತ ಹೆಚ್ಚು ಸಂಪ್ರದಾಯನಿಷ್ಠ ಮತ್ತು ಕಡಿಮೆ ಆಧುನಿಕವಾಗಿದ್ದಾಗ ಇಂತಹ ವರ್ತನೆಯನ್ನು ಊಹಿಸುವುದಕ್ಕೂ ಸಾಧ್ಯವಿರಲಿಲ್ಲ.

ಪುರುಷರು ಮತ್ತು ಮಹಿಳೆಯರನ್ನು ಸಂಪ್ರದಾಯದಿಂದ ತಮ್ಮ ವಶಕ್ಕೆ ತೆಗೆದುಕೊಂಡು ಅವರನ್ನು ನಾಗರಿಕರನ್ನಾಗಿ ಪರಿವರ್ತಿಸುವುದಾಗಿ ಆಧುನಿಕತೆ ಉದ್ಧಟತನದಿಂದ ಹೇಳಿಕೊಂಡಿದೆ. ಆದರೆ ಮೇಲೆ ಹೇಳಿದಂತಹ ಭೀಕರವಾದ ವ್ಯತ್ಯಸ್ತ ನಡವಳಿಕೆಗಳು ಅಮೆರಿಕ ಸೇರಿದಂತೆ ಆಧುನಿಕ ಸಮಾಜಗಳಲ್ಲಿ ಸಾಮಾನ್ಯವೆಂಬಂತೆ ನಡೆಯುತ್ತದೆ. ಸಾಂಪ್ರದಾಯಿಕ ಸಮಾಜವನ್ನು ಪದಚ್ಯುತಗೊಳಿಸಿ ಪಾರಂಪರಿಕ ಕುಟುಂಬವನ್ನು ಬದಿಗೊತ್ತಿ ಅಸ್ತಿತ್ವಕ್ಕೆ ಬಂದಿರುವ ಆಧುನಿಕ ರಾಜಕೀಯ ವ್ಯವಸ್ಥೆಯ ನಿರ್ಣಾಯಕ ಪಾತ್ರಧಾರಿಗಳೆಂದರೆ ಸರ್ಕಾರ, ಕಾನೂನು, ಮಾಧ್ಯಮ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವ್ಯಕ್ತಿ. ಶಕ್ತಿಶಾಲಿಯಾದ ಈ ಆಧುನಿಕ ಸಂಸ್ಥೆಗಳು ಇದನ್ನೇಕೆ ತಡೆಯುವುದಿಲ್ಲ ಅಥವಾ ದಾರಿ ತಪ್ಪಿದ್ದನ್ನು ಸರಿಪಡಿಸುವುದಿಲ್ಲ? ಉದಾಹರಣೆಗೆ ಮಾಧ್ಯಮವನ್ನೇ ತೆಗೆದುಕೊಳ್ಳಿ. ದಾರಿ ತಪ್ಪಿದ್ದನ್ನು ಬಯಲಿಗೆಳೆಯುವ ಮೂಲಕ ತಾನದನ್ನು ಸರಿಪಡಿಸಬಲ್ಲೆನೆಂದು ಅದು ಭಾವಿಸುತ್ತದೆ. ದಾರಿ ತಪ್ಪಿದ್ದನ್ನು ಸರಿಪಡಿಸುವುದು ಅಷ್ಟೊಂದು ಸುಲಭವಾಗಿದ್ದರೆ ಶಕ್ತಿಶಾಲಿಯಾದ ಪಾಶ್ಚಾತ್ಯ ಮಾಧ್ಯಮಕ್ಕೆ ಅತ್ಯಂತ ಕ್ರೂರವಾದ ಅತ್ಯಾಚಾರದ ಅಪರಾಧಗಳನ್ನು ನಿಲ್ಲಿಸಲು ಸಾಧ್ಯವಾಗಬೇಕಿತ್ತು. ಏಕೆಂದರೆ ಅಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳಿವೆ. ಕಾನೂನು ಪಾಲನೆಯ ಗುಣಮಟ್ಟ ಉತ್ತಮವಾಗಿದೆ ಹಾಗೂ ನ್ಯಾಯಾಂಗ ವ್ಯವಸ್ಥೆ ಚುರುಕಾಗಿದೆ. ಆದರೆ ಪಾಶ್ಚಾತ್ಯ ದೇಶಗಳ ಅತ್ಯಾಚಾರದ ಅಂಕಿ-ಅಂಶಗಳು ಗಾಬರಿಗೊಳಿಸುತ್ತವೆ. ಕಳೆದ ಚಳಿಗಾಲದಲ್ಲಿ ನಡೆದ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಳಿಕ ಪಾಶ್ಚಾತ್ಯ ಮಾಧ್ಯಮವು, ಅತ್ಯಾಚಾರಿಗಳು ಮತ್ತು ಕೊಲೆಗಡುಕರ ದೇಶವಾದ ಭಾರತ ತನ್ನನ್ನು ಆಧ್ಯಾತ್ಮಿಕವೆಂದು ಹೇಗೆ ಕರೆದುಕೊಳ್ಳುತ್ತದೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟಿತ್ತು.

ಅದಕ್ಕೆ ಉತ್ತರ ನೀಡಿದವರು ಯಾವುದೇ ಭಾರತೀಯರಲ್ಲ; ಬದಲಾಗಿ ಓರ್ವ ಆಂಗ್ಲ ಮಹಿಳಾ ಪತ್ರಕರ್ತೆಯಾದ ಎಮರ್ ಓಟೂಲ್. ‘ಗಾರ್ಡಿಯನ್’ ಪತ್ರಿಕೆಯಲ್ಲಿ (ಜನವರಿ 1, 2013) ಬರೆದ ಆಕೆ ದೆಹಲಿಯಲ್ಲಿ ವರ್ಷಕ್ಕೆ ಸುಮಾರು 625 ಅತ್ಯಾಚಾರಗಳು ನಡೆದರೆ, ಅದಕ್ಕಿಂತ ಮೂರೂವರೆಯಷ್ಟು ಜನಸಂಖ್ಯೆಯಿರುವ ಇಂಗ್ಲೆಂಡಿನಲ್ಲಿ ವರ್ಷಕ್ಕೆ 9500ಕ್ಕಿಂತಲೂ ಅಧಿಕ ಅತ್ಯಾಚಾರಗಳು ನಡೆಯುತ್ತವೆ ಎಂದು ತಿಳಿಸಿದರು. ಕೆಲವೇ ದಿನಗಳಲ್ಲಿ ‘ಇಂಡಿಪೆಂಡೆಂಟ್’ ಪತ್ರಿಕೆ (ಜನವರಿ 10, 2013) ಇಂಗ್ಲೆಂಡ್ ನಲ್ಲಿ ವರ್ಷದಲ್ಲಿ ನಡೆಯುವ ಅತ್ಯಾಚಾರಗಳು ಸುಮಾರು 1 ಲಕ್ಷ. ಆದರೆ ಅದರಲ್ಲಿ ಶಿಕ್ಷೆಗೊಳಗಾಗುವ ಅತ್ಯಾಚಾರಿಗಳು ಕೇವಲ 1 ಸಾವಿರದಷ್ಟು. ಇದು ಆಘಾತಕಾರಿಯೆನಿಸುವಷ್ಟು ಕಡಿಮೆ ಎಂದು ಬರೆಯಿತು.

ಈ ವಿಷಯದಲ್ಲಿ ಅಮೆರಿಕದ ವಿದ್ಯಮಾನ ಕೂಡ ಉತ್ತಮವಾಗಿಲ್ಲ. ಅಮೆರಿಕದ ನ್ಯಾಯಾಂಗ ಇಲಾಖೆಯ ಪ್ರಕಾರ, ಆ ರಾಷ್ಟ್ರದಲ್ಲಿ 2006ರಲ್ಲಿ ಅತ್ಯಾಚಾರಕ್ಕೊಳಗಾದ ಮಹಿಳೆಯರ ಸಂಖ್ಯೆ ಸುಮಾರು 3 ಲಕ್ಷ. ಆಧುನಿಕ ಅಮೆರಿಕದಲ್ಲಿ ಮಹಿಳೆಯರು ಕೂಡ ಅತ್ಯಾಚಾರ ನಡೆಸುತ್ತಾರೆ; 2006ರಲ್ಲಿ ಸುಮಾರು 92 ಸಾವಿರ ಮಹಿಳೆಯರು ಪುರುಷರ ಮೇಲೆ ಅತ್ಯಾಚಾರ ನಡೆಸಿದ್ದರು. ಅಲ್ಲಿಗೆ ಅತ್ಯಾಚಾರ ವಿಷಯದಲ್ಲಿ ಲಿಂಗ ಸಮಾನತೆ ಬಂದಂತಾಯಿತು! ಸುಮಾರು 177 ಲಕ್ಷ ಮಹಿಳೆಯರು ಮತ್ತು 28 ಲಕ್ಷ ಪುರುಷರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಅತ್ಯಾಚಾರಕ್ಕೆ ಗುರಿಯಾಗುತ್ತಾರೆ. ಭಾರತದಲ್ಲಿ ಕನಿಷ್ಠ ಮಹಿಳೆಯರು ಗಂಡಸರ ಮೇಲೆ ಅತ್ಯಾಚಾರ ಮಾಡುವುದಿಲ್ಲ!

ರಾಷ್ಟ್ರದ ಜನಸಂಖ್ಯೆಗೆ ಅನುಗುಣವಾಗಿ ಇಂಗ್ಲೆಂಡ್ ಗೆ ಹೋಲಿಸಿದರೆ ಭಾರತದಲ್ಲಿ ವರ್ಷಕ್ಕೆ 24 ಲಕ್ಷಕ್ಕಿಂತಲೂ ಹೆಚ್ಚು ಅತ್ಯಾಚಾರಗಳಾಗಬೇಕಿತ್ತು. ಅಮೆರಿಕದ ಪ್ರಮಾಣಕ್ಕೆ ಹೋಲಿಸಿದರೆ ಕನಿಷ್ಠ 16 ಲಕ್ಷ ಅತ್ಯಾಚಾರಗಳಾಗಬೇಕಿತ್ತು. ಆದರೆ ಭಾರತದ ಕೇಂದ್ರೀಯ ಅಂಕಿಅಂಶಗಳ ಕಚೇರಿಯ ಪ್ರಕಾರ 2008ರಲ್ಲಿ ನಡೆದ ಅತ್ಯಾಚಾರಗಳು 20,771. ಇದರಿಂದ ಸಾಬೀತಾಗುವ ಅಂಶ ಸ್ಪಷ್ಟವಾಗಿಯೇ ಇದೆ. ಪಶ್ಚಿಮದ ಶಕ್ತಿಶಾಲಿ ಮಾಧ್ಯಮಕ್ಕೆ ಸಮಾಜ ದಾರಿ ತಪ್ಪಿದ್ದರ ಪ್ರತೀಕವಾಗಿ ನಡೆಯುತ್ತಿರುವ ಅತ್ಯಾಚಾರಗಳನ್ನು ತಡೆಯಲು ಸಾಧ್ಯವಾಗಿಲ್ಲ. ಆಧುನಿಕ ಶಾಸನಗಳಿಂದ ಅದನ್ನು ನಿಲ್ಲಿಸಲು ಆಗಿಲ್ಲ. ಆಧುನಿಕ ಸರ್ಕಾರಗಳು ಬಿಗಿಯಾದ ಶಿಕ್ಷೆ ವಿಧಿಸುವಲ್ಲಿ ಸೋತಿವೆ. ಒಟ್ಟಾರೆ ಆಧುನಿಕತೆಯು ತನ್ನನ್ನು ನಂಬಿದವರನ್ನು ಕೈಬಿಟ್ಟಿದೆ.

ಭಾರತೀಯರಲ್ಲಿ ಬಹಳಷ್ಟು ಜನರ ಪ್ರಕಾರ ಆಧುನಿಕತೆಯೆಂದರೆ ಫ್ಯಾಶನ್ ನ ಬಟ್ಟೆ ತೊಡುವುದು ಮತ್ತು ಪಾಶ್ಚಾತ್ಯ ನಡವಳಿಕೆ, ನಗರಜೀವನದ ಹವ್ಯಾಸ ಮತ್ತು ಇಂಗ್ಲಿಷ್ ಮಾತನಾಡುವುದು. ಆದರೆ ನಿಜವೆಂದರೆ ಅದು ಅಷ್ಟೇ ಅಲ್ಲ. ಇದು ಪಾಶ್ಚಾತ್ಯ ಜಗತ್ತು ಹೇರುತ್ತಿರುವ ಸಿದ್ಧಾಂತ. ಆರ್ಥಿಕ ಬೆಳವಣಿಗೆ ಆಗಬೇಕಿದ್ದರೆ ನಿಮ್ಮ ಪರಂಪರೆಯನ್ನು ತ್ಯಜಿಸಿ ಎಂದು ಕೂಡ ಅದು ಶೇಷ ಪ್ರಪಂಚಕ್ಕೆ ಬುದ್ಧಿ ಮಾತು ಹೇಳುತ್ತದೆ.

ಅಮೆರಿಕದ ಸಾಮಾಜಿಕ ಮತ್ತು ಆರ್ಥಿಕ ವ್ಯವಹಾರಗಳ ಇಲಾಖೆ 1951ರಲ್ಲಿ ಹಿಂದುಳಿದ ದೇಶಗಳಿಗೆ ಹೀಗೆ ಹೇಳಿತ್ತು: ‘ಕ್ಷಿಪ್ರ ಆರ್ಥಿಕ ಅಭಿವೃದ್ಧಿಗೆ ತೆರಬೇಕಾದ ಬೆಲೆ ಎಂದರೆ ಪ್ರಾಚೀನ ತತ್ತ್ವಶಾಸ್ತ್ರಗಳನ್ನು ಹರಿದು ಹಾಕಬೇಕು; ಹಳೆಯ ಸಾಮಾಜಿಕ ಸಂಸ್ಥೆಗಳನ್ನು ಬರ್ಖಾಸ್ತುಗೊಳಿಸಬೇಕು; ಜಾತಿ, ಜನಾಂಗ, ಪಂಥ-ಪಂಗಡಗಳ ಕಟ್ಟುಗಳನ್ನು ಬಿಚ್ಚಿ ಬಿಸಾಡಬೇಕು ಮತ್ತು ಯಾರು ಈ ಬೆಲೆ ತೆರಲು ತಯಾರಿಲ್ಲವೋ ಅವರು ಹಿಂದುಳಿದವರಾಗಿಯೇ ಉಳಿಯುತ್ತಾರೆ.’

ಈ ಸಿದ್ಧಾಂತವನ್ನು ಹೆಚ್ಚಾಗಿ ‘ಪಾಶ್ಚಾತ್ಯ ಮಾನವಶಾಸ್ತ್ರೀಯ ಆಧುನಿಕತೆ’ (Western anthropological modernity)Wಎಂದು ಕರೆಯುತ್ತಾರೆ; ಉಳಿದವರು ಪಾಶ್ಚಾತ್ಯ ಜಗತ್ತಿನ ನೊಣಪ್ರತಿ ಆಗಬೇಕೆಂದು ಇದು ಬಯಸುತ್ತದೆ. ಆದರೆ ವಿಷಯಗಳು 2008ರ ಬಳಿಕ ವ್ಯಾಪಕ ಬದಲಾವಣೆಯನ್ನು ಕಂಡಿವೆ; ತನ್ನ ಮಾದರಿ ಉಳಿದವರಿಗೆ ಅಷ್ಟೇನೂ ಒಳ್ಳೆಯದಿರಲಾರದೆಂದು ಅದೀಗ ಒಪ್ಪಿಕೊಳ್ಳುತ್ತಿದೆ. ಆದರೆ ಪಾಶ್ಚಾತ್ಯ ಜಗತ್ತು ಶತಮಾನಗಳ ಕಾಲ ಇತರರ ಮೇಲೆ ನಡೆಸಿದ ಮಾನಸಿಕ ದಾಳಿಯಿಂದಾದ ನಷ್ಟವನ್ನು ಸುಲಭದಲ್ಲಿ ಸರಿಪಡಿಸುವುದು ಅಸಾಧ್ಯ. ಪ್ರಗತಿ ಆಗಬೇಕಿದ್ದರೆ ಆಧುನಿಕತೆ ಅನಿವಾರ್ಯ ಎಂದು ನಡೆಸಿದ ಪ್ರಚಾರ ಈಗ ಅಭ್ಯಾಸ ಮತ್ತು ಫ್ಯಾಶನ್ ಆಗಿಬಿಟ್ಟಿದೆ.

ಆಧುನಿಕ ಪಾಶ್ಚಾತ್ಯ ಪ್ರಪಂಚವನ್ನು ‘ವಿಧಾನ ಶಾಸ್ತ್ರೀಯ (ಲಗಾಮಿಲ್ಲದ್ದು ಎಂದು ಓದಿಕೊಳ್ಳಿ) ವ್ಯಕ್ತಿತ್ವವಾದ’ ಎನ್ನುವ ತತ್ತ್ವದ ಮೇಲೆ ಕಟ್ಟಲಾಗಿದೆ. ಮ್ಯಾಕ್ಸ್ ವೆಬರ್ ಎಂಬಾತ ಇದನ್ನು ಆರಂಭಿಸಿದ್ದು, ಆತ ಕಾರ್ಲ್ ಮಾರ್ಕ್ಸ್ ನೊಂದಿಗೆ ಭಾರತೀಯ ವಿದ್ಯಾವಂತರ ಮೇಲೆ ಗರಿಷ್ಠ ಪ್ರಭಾವ ಬೀರಿದ. ವ್ಯಕ್ತಿಯು ಸಾಂಪ್ರದಾಯಿಕ ಕುಟುಂಬ ಮತ್ತು ಸಮಾಜದ ಅವಿಭಾಜ್ಯ ಅಂಗ ಎಂಬ ಅಭಿಪ್ರಾಯವನ್ನು ಅವರು ತಿರಸ್ಕರಿಸುತ್ತಾರೆ.

ಆಧುನಿಕತೆಯು ಕುಟುಂಬ ಮತ್ತು ಸಮಾಜದ ಬಗೆಗಿನ ಆತನ ಕರ್ತವ್ಯಕ್ಕಿಂತ ವ್ಯಕ್ತಿಯ ಹಕ್ಕುಗಳೇ ಮುಖ್ಯ ಎನ್ನುತ್ತದೆ. ಆಧುನಿಕ ಆರ್ಥಿಕ ಸಿದ್ಧಾಂತದ ಮೇಲ್ಮೈ ರಚನೆ ಅಂದರೆ ವಿಚಾರಶೀಲನಾದ ವ್ಯಕ್ತಿ ಮತ್ತು ದಕ್ಷ ಮಾರುಕಟ್ಟೆಯು ಈ ತಳಹದಿಯ ಮೇಲೆ ನಿಂತಿದೆ. ಕಾರ್ಲ್ ಪಾಪ್ಪರ್ ಎನ್ನುವ ಈ ತರ್ಕದ ಖ್ಯಾತ ಸಿದ್ಧಾಂತಿಯ ಪ್ರಕಾರ ಸಮಾಜವೆಂಬುದೇ ಇಲ್ಲ. ಮಾರ್ಗರೆಟ್ ಥ್ಯಾಚರ್ ಅವನನ್ನು ಬೆಂಬಲಿಸಿದರು. ಪರಿಣಾಮವೆಂದರೆ, ಆಧುನಿಕತೆ ವ್ಯಕ್ತಿಯನ್ನು ಅಟ್ಟಕ್ಕೇರಿಸಿ, ಕುಟುಂಬವನ್ನು ತುಚ್ಛೀಕರಿಸುತ್ತದೆ ಮತ್ತು ಸಮಾಜವನ್ನು ಕಾನೂನುಬಾಹಿರ ಎನ್ನುತ್ತದೆ.

ಸುಮಾರು ಒಂದು ಶತಮಾನದಲ್ಲಿ ಅದು ತೆಗೆದ ಬೆಳೆ ಹೀಗಿದೆ. ಅಮೆರಿಕದಲ್ಲಿ ಶೇ.55ರಷ್ಟು ಒಂದನೇ ಮದುವೆ, ಶೇ.67ರಷ್ಟು ಎರಡನೇ ಮದುವೆ ಮತ್ತು ಶೇ.74ರಷ್ಟು ಮೂರನೇ ಮದುವೆಗಳು ವಿಚ್ಛೇದನದಲ್ಲಿ ಪರ್ಯವಸಾನವಾಗುತ್ತಿವೆ; ಅರ್ಧಕ್ಕೂ ಹೆಚ್ಚು ಕುಟುಂಬಗಳಲ್ಲಿ ತಂದೆ-ತಾಯಿ ಜತೆಯಾಗಿ ವಾಸವಾಗಿಲ್ಲ ಮತ್ತು ವೃದ್ಧರು, ರೋಗಿಗಳು ಮತ್ತು ನಿರುದ್ಯೋಗಿಗಳ ಹೊಣೆಯನ್ನು ಸರ್ಕಾರ ವಹಿಸಿಕೊಳ್ಳಬೇಕಾಗಿದೆ. ಈ ರೀತಿಯಲ್ಲಿ ಸರ್ಕಾರ, ಕುಟುಂಬವನ್ನು ಪರಿಣಾಮಕಾರಿಯಾಗಿ ರಾಷ್ಟ್ರೀಕರಣಗೊಳಿಸಿದೆ ಮತ್ತು ಸ್ವತಃ ದಿವಾಳಿಯಾಗುತ್ತಿದೆ.

ಸಂಬಂಧಗಳ ಪಾವಿತ್ರ್ಯದ ಮೇಲೆ ಕಟ್ಟಿದ ಸಾಂಪ್ರದಾಯಿಕ ಸಮಾಜ ಮತ್ತು ಕುಟುಂಬಗಳಲ್ಲಿ ದಾರಿ ತಪ್ಪಿದ ವರ್ತನೆಗೆ ಅವಕಾಶವಿರಲಿಲ್ಲ; ಏಕೆಂದರೆ ಅಲ್ಲಿ ಹೆತ್ತವರು, ಹಿರಿಯರು, ಗುರುಗಳು ಮತ್ತು ಸ್ತ್ರೀಯರ ಬಗೆಗೆ ಕೂಡ ಗೌರವವಿತ್ತು. ಎಲ್ಲ ಭಾರತೀಯ ಭಾಷೆಗಳಲ್ಲಿರುವ ಪ್ರಾಚೀನ ಭಾರತೀಯ ಸಾಹಿತ್ಯವು ಹೆತ್ತವರು, ಗುರುಗಳು ಮತ್ತು ಸ್ತ್ರೀ (ಮಾತೆ)ಯರನ್ನು ಮಾನವರೂಪೀ ದೇವತೆಗಳೆಂದು ಬಣ್ಣಿಸಿವೆ. ಆದರೆ ಪರಂಪರೆಗೆ ಆಧಾರವಾದ ಇಂತಹ ಗೌರವವೆಂದರೆ ಆಧುನಿಕತೆಗೆ ಅಲರ್ಜಿ. ಪೌಲ್ ವುಡ್ರಫ್ ತನ್ನ ‘ರೆವರೆನ್ಸ್: ರಿನ್ಯೂಯಿಂಗ್ ಎ ಫಾರ್ಗಾಟನ್ ವರ್ಚ್ಯೂ’ ಎಂಬ ಪುಸ್ತಕದಲ್ಲಿ ಆಧುನಿಕತೆಯಲ್ಲಿ ತಪ್ಪಿಸಿಕೊಂಡಿರುವ ಅಂಶವೆಂದರೆ ಗೌರವ (reverence) ಎಂದಿದ್ದಾರೆ; ಗೌರವವಿಲ್ಲದ ಜೀವನ ಕ್ರೂರಿ ಮತ್ತು ಸ್ವಾರ್ಥಿ ಎಂದು ಆಸ್ಟಿನ್‌ನ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ತತ್ತ್ವಶಾಸ್ತ್ರದ ಪ್ರಾಧ್ಯಾಪಕರಾದ ಆತ ಹೇಳಿದ್ದಾರೆ.

ಗೌರವ ಎಂಬುದು ತುಲನಾತ್ಮಕವಾದದ್ದು. ಅದನ್ನು ಗುತ್ತಿಗೆಯ ಮೇರೆಗೆ ಪಡೆದುಕೊಳ್ಳುವಂತಿಲ್ಲ. ಸಾಂಪ್ರದಾಯಿಕ ಸಂಬಂಧಗಳಿಂದ ವಂಚಿತವಾದ ಆಧುನಿಕ ಸಮಾಜವು ಮಾನವ ಜೀವನವನ್ನು ಸರ್ಕಾರ, ಕಾನೂನು ಮತ್ತು ನ್ಯಾಯಾಲಯಗಳಿಂದ ನಿರ್ವಹಿಸಲ್ಪಡುವ ಗುತ್ತಿಗೆಗಳ ಮೊತ್ತವಾಗಿ ಪರಿವರ್ತಿಸಿದೆ. ಅದು ಹೆತ್ತವರು ಮತ್ತು ಮಕ್ಕಳನ್ನು ಸಂಬಂಧವಿಲ್ಲದ ಹಕ್ಕುಗಳನ್ನು ನೆಚ್ಚಿಕೊಂಡಿರುವ ವ್ಯಕ್ತಿಗಳನ್ನಾಗಿ ರೂಪಿಸಿದೆ; ಅಲ್ಲಿ ಕುಟುಂಬದ ಬಗೆಗಿನ ಕರ್ತವ್ಯ ಪ್ರಜ್ಞೆ ಇಲ್ಲ. ಒಟ್ಟಿನಲ್ಲಿ ಆಧುನಿಕತೆಯು ಸಂಪ್ರದಾಯನಿಷ್ಠ ಕುಟುಂಬಗಳ ಮೇಲೆ ದಾಳಿ ನಡೆಸಿದೆ; ಪರಿಣಾಮವಾಗಿ ಕುಟುಂಬಗಳು ತಮ್ಮ ಯುವಜನರನ್ನು ತಿದ್ದಿ , ಶಿಸ್ತಿಗೆ ಒಳಪಡಿಸಿ, ದಾರಿ ತಪ್ಪುವುದರಿಂದ ತಡೆಯುವ ಪ್ರಕ್ರಿಯೆ ನಿಂತು ಹೋಗಿದೆ. ಶಿಕ್ಷಕರ ಬಗ್ಗೆ ಗೌರವ, ಅವರು ಕಲಿಸಿದ್ದನ್ನು ಕಲಿಯುವುದರಲ್ಲಿ ಗೌರವ – ಶ್ರದ್ಧೆ ಇವು ಸಾಂಪ್ರದಾಯಿಕ ಶಿಕ್ಷಣದ ಆಧಾರ ಶಿಲೆಗಳಾಗಿದ್ದವು. ಆದರೆ ಈಗ ಅಮೆರಿಕದ ವಿದ್ಯಾರ್ಥಿಗಳು ಅವರ ಗುರುಗಳನ್ನು ಹೆಸರು ಹಿಡಿದೇ ಕರೆಯುತ್ತಾರೆ.

ಮಕ್ಕಳು ಹೆತ್ತವರ ಅಧಿಕಾರಕ್ಕೊಳಪಟ್ಟು ಬೆಳೆಯುವಾಗ ಅವರಲ್ಲಿ ಹೆತ್ತವರ ಬಗ್ಗೆ ಗೌರವ ರೂಪುಗೊಳ್ಳುತ್ತದೆ. ಶಾಲೆಗಳಲ್ಲಿ ದೈಹಿಕ ಶಿಕ್ಷಣ ನೀಡಿದ್ದಕ್ಕಾಗಿ ಅಧ್ಯಾಪಕರನ್ನು ಶಿಕ್ಷೆಗೆ ಗುರಿಪಡಿಸಿದರೆ ಮತ್ತು ದಾರಿ ತಪ್ಪಿದ ಮಕ್ಕಳನ್ನು ಶಿಕ್ಷಿಸಿದ ಹೆತ್ತವರಿಗೆ ಛೀಮಾರಿ ಹಾಕಿದರೆ ಶಾಲೆಗಳು ಹಾಗೂ ಕುಟುಂಬಗಳು ಹಲ್ಲು ಕಿತ್ತ ಹಾವಾಗುತ್ತವೆ. ಭಾರತೀಯ ಸಂಪ್ರದಾಯ ಹೆಣ್ಣು ಮಕ್ಕಳನ್ನು ಗೌರವದಿಂದ ಕಂಡಿವೆ; ಗಂಡು ಮಕ್ಕಳಿಗೆ ಅಂತಹ ಗೌರವ ಇರಲಿಲ್ಲ. ನವರಾತ್ರಿಯಲ್ಲಿ ನಡೆಯುವ ಕನ್ಯಾಪೂಜೆ ಅದಕ್ಕೊಂದು ಉದಾಹರಣೆ. ಹೆಣ್ಣು ಮಕ್ಕಳ ಬಗ್ಗೆ ಸಾಂಪ್ರದಾಯಿಕವಾದ ಗೌರವ ಹೆಚ್ಚಿದ್ದಾಗ 1901ರಲ್ಲಿ ದೇಶದಲ್ಲಿ ಹೆಣ್ಣು-ಗಂಡುಗಳ ಅನುಪಾತ 972:1000 ಇತ್ತು. ಆಧುನಿಕತೆಯ ಪರಿಣಾಮವಾಗಿ ಆ ಗೌರವ ಇಳಿದಂತೆ 2001ರಲ್ಲಿ ಅದು 927:1000 ಆಯಿತು. ಹೆಣ್ಣುಮಕ್ಕಳ ಬಗೆಗೆ ಗೌರವ ಕಡಿಮೆ ಇರುವ ಆಧುನಿಕ ನಗರ ಪ್ರದೇಶಗಳಲ್ಲಿರುವ ಪ್ರಸ್ತುತ ಲಿಂಗಾನುಪಾತ ಗ್ರಾಮೀಣ ಪ್ರದೇಶಕ್ಕಿಂತ ಕಡಿಮೆ ಇದೆ. ಲಿಂಗಾಧಾರಿತ ಹಕ್ಕುಗಳು ತಪ್ಪೆಂದು ಇದರ ಅರ್ಥವಲ್ಲ. ಬದಲಾಗಿ ಅದನ್ನು ಹೆಣ್ಣುಮಕ್ಕಳ ಬಗೆಗಿನ ಗೌರವಕ್ಕೆ ಪರ್ಯಾಯವೆಂದು ತಿಳಿದರೆ ಅಕ್ಷಮ್ಯ ಎನಿಸುತ್ತದೆ.

ಹಿರಿಯರು ಮತ್ತು ಗುರುಗಳಿಗೆ ಗೌರವ ಹಾಗೂ ದಾರಿ ತಪ್ಪುವವರನ್ನು ಶಿಕ್ಷಿಸುವ ಅಧಿಕಾರ ಇದ್ದಾಗ ದಾರಿ ತಪ್ಪುವವರನ್ನು ತಡೆಯಲು ಸಾಧ್ಯವಿತ್ತು. ಆದರೆ ಆಧುನಿಕ ವ್ಯವಸ್ಥೆ ದಾರಿ ತಪ್ಪುವವರನ್ನು ಶಿಕ್ಷಿಸುವಲ್ಲಿ ಹಿರಿಯರು ಮತ್ತು ಗುರುಗಳ ಅಧಿಕಾರವನ್ನು ಮಾನ್ಯ ಮಾಡುವುದಿಲ್ಲ. ಅವರಲ್ಲಿ ಗೌರವ ಬೆಳೆಸಿದಾಗ ದಾರಿ ತಪ್ಪುವುದನ್ನು ತಡೆಯಲು ಸಾಧ್ಯ. ಕಾನೂನಿನಿಂದ ದಾರಿ ತಪ್ಪುವುದನ್ನು ತಡೆಯಲು ಅಸಾಧ್ಯ. ಕುಟುಂಬ ಮತ್ತು ಸಮಾಜಗಳಿಂದ ಮಾತ್ರ ಅದು ಸಾಧ್ಯ. ಅವುಗಳನ್ನು ಬಲಪಡಿಸಬೇಕು. ಆದರೆ ಆಧುನಿಕತೆ ಅವುಗಳನ್ನು ದುರ್ಬಲಗೊಳಿಸುತ್ತದೆ.

ಭವಿಷ್ಯದ ಮುನ್ನೋಟ

ಈಗ ಕೊನೆ ಮುಟ್ಟಿದಂತಿರುವ ಅಮೆರಿಕ ಕಾನೂನಿಗೆ ಸಂಬಂಧಿಸಿ ಮಾನವಶಾಸ್ತ್ರದ ಅಧ್ಯಯನ ನಡೆಸಿ, ಪಾರಂಪರಿಕ ನಿಯಮಗಳ ಹುಡುಕಾಟ ನಡೆಸುತ್ತಿದೆ; ದಾರಿತಪ್ಪುವ ಯುವಜನರನ್ನು ನಿಯಂತ್ರಿಸುವಲ್ಲಿ ಹಳೆಯ ನಿಯಮಗಳು ಆಧುನಿಕ ಶಾಸನಕ್ಕೆ ಪರ್ಯಾಯ ಆಗಬಹುದೆನ್ನುವ ಎಚ್ಚರ ಅಲ್ಲಿ ಕಾಣಬಹುದು.

– ಎಸ್.ಗುರುಮೂರ್ತಿ

ಅನು: ಮಂಜುನಾಥ ಭಟ್ ಎಚ್.

   

Leave a Reply