ರಾಜಕೀಯ ಸಮೀಕರಣಕ್ಕೆ ಹೊಸ ವ್ಯಾಖ್ಯಾನ

ಕರ್ನಾಟಕ ; ರಾಜ್ಯ ರಾಜಕೀಯ - 0 Comment
Issue Date : 28.01.2014

ರಾಜ್ಯದಲ್ಲಿನ ಹೊಸ ರಾಜಕೀಯ ಬೆಳವಣಿಗೆ, ಮುಂಬರುವ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ನೇರವಾಗಿ ಪರಿಣಾಮ ಬೀರುವ ಸ್ಪಷ್ಟ ಸೂಚನೆಗಳು ಈಗ ಸಿಗುತ್ತಿವೆ. ಬಿಜೆಪಿಯಿಂದ ಹೊರಹೋಗಿ ತಮ್ಮದೇ ಪಕ್ಷ ಕಟ್ಟಿದ್ದ ಮಾಜಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಈಗ ವಾಪಸ್ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.ಇದರಿಂದ ಪಕ್ಷಕ್ಕೆ ಹಾಗೂ ಸ್ವತಃ ಯಡಿಯೂರಪ್ಪ ಅವರಿಗೂ ಹೆಚ್ಚಿನ ಲಾಭವಾಗುತ್ತದೆ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ. ರಾಜ್ಯದ ಮಟ್ಟಿಗೆ ಹೇಳುವುದಾದರೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿ ನಡೆಯುವುದು ನಿಶ್ಚಿತ. ಸಮರಾಂಗಣದಲ್ಲಿ ಹೇಗೆ ಒಬ್ಬೊಬ್ಬ ಸೇನಾನಿಯ ಪಾತ್ರವೂ ಮುಖ್ಯವೋ ಹಾಗೆ ರಾಜಕೀಯ ಹೋರಾಟದಲ್ಲೂ ಯಾವುದೇ ಪ್ರಮುಖ ನಾಯಕನ ಪಾತ್ರವನ್ನು ಕಡೆಗಣಿಸುವಂತಿಲ್ಲ. ಬಿಜೆಪಿ ಕೂಡಾ ಇದೇ ತಂತ್ರ ಅನುಸರಿಸಿದೆ. ತಡ ಮಾಡಿದಷ್ಟೂ ಅದರ ಲಾಭ ಕಾಂಗ್ರೆಸ್‌ಗೆ ದೊರೆಯುತ್ತದೆ ಎನ್ನುವುದು ಗೊತ್ತಾದ ಕೂಡಲೇ ಎಲ್ಲಾ ಪ್ರಮುಖ ನಾಯಕರೂ ಸ್ವಪ್ರತಿಷ್ಠೆ ಬಿಟ್ಟು ಪ್ರಮುಖ ತೀರ್ಮಾನಕ್ಕೆ ಬಂದಿರುವುದು ರಾಜ್ಯ ರಾಜಕಾರಣದ ಸಮೀಕರಣವನ್ನು ಹೊಸದಾಗಿ ವ್ಯಾಖ್ಯಾನಿಸುವಂತಾಗಿದೆ.
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ಬಿಜೆಪಿಯ ಒಗ್ಗಟ್ಟಿನ ಮಂತ್ರ ಗಾಬರಿ ಮೂಡಿಸಿದ್ದರೆ ಅಚ್ಚರಿಯೇನಿಲ್ಲ. ಬಿಜೆಪಿಯಲ್ಲೇ ಅನೇಕರು ಯಡಿಯೂರಪ್ಪ ಸೇರ್ಪಡೆಗೆ ವಿರೋಧವಿರುವುದರಿಂದ ಕಡೇಪಕ್ಷ ಲೋಕಸಭಾ ಚುನಾವಣೆಯವರೆಗಾದರೂ ಮರಳಿ ಮಾತೃಪಕ್ಷಕ್ಕೆ ಯಡಿಯೂರಪ್ಪ ಸೇರ್ಪಡೆ ವಿಳಂಬವಾಗಲಿದೆ ಎಂದು ಕಾಂಗ್ರೆಸ್ ನಂಬಿತ್ತು. ಇದಕ್ಕಾಗಿ ಆ ಪಕ್ಷದ ನಾಯಕರು ಹೂಡಿದ್ದ ತಂತ್ರ ಸಫಲವಾಗಲಿಲ್ಲ.ತಮ್ಮ ಮೇಲಿರುವ ಕೆಲವು ಪ್ರಕರಣಗಳ ಹಿನ್ನೆಲೆಯಲ್ಲಿ ಸ್ವತಃ ಯಡಿಯೂರಪ್ಪ ಅವರೂ ಬಿಜೆಪಿಗೆ ವಾಪಸ್ ಬರಲು ಹಿಂದೇಟು ಹಾಕುತ್ತಾರೆ ಎಂದು ನಂಬಲಾಗಿತ್ತು.ಆದರೆ ಕಾಂಗ್ರೆಸ್ ಲೆಕ್ಕಾಚಾರ ಈಗ ತಲೆಕೆಳಗಾಗಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತ ವಿಭಜನೆಯಿಂದ ತನಗಾದ ಲಾಭವನ್ನೇ ಮತ್ತೆ ಲೋಕಸಭಾ ಚುನಾವಣೆಯಲ್ಲಿ ಪುನರಾವರ್ತನೆಗೊಳ್ಳುವಂತೆ ಮಾಡುವುದು ಕಾಂಗ್ರೆಸ್ ತಂತ್ರವಾಗಿತ್ತು. ಮತಗಳನ್ನು ವಿಭಜನೆ ಮಾಡುವ ಸಲುವಾಗಿ ಯಡಿಯೂರಪ್ಪ ಅವರು ಪ್ರತ್ಯೇಕ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲಿ ಎಂದು ಕಾಂಗ್ರೆಸ್ ಆಶಿಸಿತ್ತು. ಆದರೆ ಕಾಂಗ್ರೆಸ್ ಪಕ್ಷದಲ್ಲಿ ಈಗ ಆರಂಭವಾಗಿರುವ ಆಂತರಿಕ ಕಚ್ಚಾಟ ಮತ್ತು ಬಿಜೆಪಿಯಲ್ಲಿನ ಒಗ್ಗಟ್ಟು ಇವೆರಡರ ನಡುವೆ ಮತದಾರರು ಯಾವುದಕ್ಕೆ ಹೆಚ್ಚಿನ ಬೆಂಬಲ ನೀಡುವ ಮನಸ್ಸು ಮಾಡಬಹುದು? ಈ ವಾಸ್ತವದ ಅರಿವು ಕಾಂಗ್ರೆಸ್ ಪಕ್ಷಕ್ಕೂ ಇದ್ದೇ ಇದೆ.ಆದರೂ ಕೇವಲ ಚುನಾವಣಾಪೂರ್ವ ಸಮೀಕ್ಷೆಯಿಂದಲೇ ಜನಮತ ತಮ್ಮ ಪರವಾಗಿದೆ ಎಂದು ಕಾಂಗ್ರೆಸ್ ನಂಬಿ ಕೂತಿರುವುದು ಕೂಡಾ ಅಷ್ಟೇ ವಾಸ್ತವ.
ಯಡಿಯೂರಪ್ಪನವರಿಂದಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನಷ್ಟವಾಗಿತ್ತು.ಆದರೆ ಕೇವಲ ಎಂಟು ತಿಂಗಳಲ್ಲಿ ಅದೇ ಯಡಿಯೂರಪ್ಪ, ಬಿಜೆಪಿಗೆ ಪ್ರಧಾನ ವಿಪಕ್ಷ ಸ್ಥಾನವನ್ನು ತಂದುಕೊಟ್ಟಿದ್ದಾರೆ. ಅಂದರೆ ಅಷ್ಟರ ಮಟ್ಟಿಗೆ ತಮ್ಮ ಮಾತೃಪಕ್ಷವಾದ ಬಿಜೆಪಿಗೆ ಅವರು ನ್ಯಾಯ ಒದಗಿಸಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ.ಅಷ್ಟೇ ಏಕೆ? ಈಗ ಯಡಿಯೂರಪ್ಪ ಅವರಲ್ಲಿ ಮತ್ತೆ ಬಿಜೆಪಿಯನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಹುಮ್ಮಸ್ಸು ಕೂಡಾ ಕಾಣಬಹುದು. ಕೇಂದ್ರದಲ್ಲಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಹುದ್ದೆಯಲ್ಲಿ ಕಾಣಬೇಕು ಎಂದು ಕೆಜೆಪಿ ಅಸ್ತಿತ್ವದಲ್ಲಿದ್ದಾಗಲೇ ಮೋದಿ ಅವರಿಗೆ ಬೇಷರತ್ ಬೆಂಬಲ ವ್ಯಕ್ತಪಡಿಸಿದ್ದ ಯಡಿಯೂರಪ್ಪನವರ ಈ ಕನಸು ನನಸಾದರೆ ಮತ್ತೆ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಅವರ ಕನಸು ಕೂಡಾ ಈಡೇರೀತು.ಯಾವುದಕ್ಕೂ ಇದಕ್ಕೆ ಸಾಕಷ್ಟು ಕಾಲಾವಕಾಶವಿದೆ.
ಇತ್ತ ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳೂ ಸ್ವಂತ ಬಲದ ಮೇಲೆ ಕೇಂದ್ರದಲ್ಲಿ ಅಧಿಕಾರ ಗಳಿಸಿದರೆ ತಮ್ಮದು ರಾಜಕೀಯ ನಿವೃತ್ತಿ ಎಂದು ಘೋಷಿಸಿದ್ದಾರೆ. ಆದರೆ ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಜೆಡಿಎಸ್‌ಗಿದ್ದ ಪ್ರಮುಖ ವಿಪಕ್ಷ ಸ್ಥಾನ ಕೈಬಿಟ್ಟಿದೆ. ದೇವೇಗೌಡರು ರಾಜಕೀಯ ನಿವೃತ್ತಿಯ ಮಾತನಾಡುತ್ತಿರುವುದು ಇದೇ ಮೊದಲ ಸಲವೇನಲ್ಲ. ಆದ್ದರಿಂದ ರಾಜ್ಯದ ಜನರೂ ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ಅವರ ಪುತ್ರ ಎಚ್.ಡಿ.ಕುಮಾರಸ್ವಾಮಿ ಅವರ ವಿಪಕ್ಷ ನಾಯಕನ ಸ್ಥಾನವನ್ನು ಕಳೆದುಕೊಂಡಿರುವುದು ಆ ಪಕ್ಷದ ಪಾಲಿಗೆ ಗಂಭೀರ ವಿದ್ಯಮಾನವೇ. ಲೋಕಸಭಾ ಚುನಾವಣೆಯಲ್ಲಿ ತೃತೀಯ ರಂಗಕ್ಕೆ ತಾನು ಪ್ರೇರಣೆಯಾಗಬೇಕು ಎಂದು ದೇವೇಗೌಡರು ತಯಾರಿ ಆರಂಭಿಸುವಷ್ಟರಲ್ಲೇ ಅವರ ಪಕ್ಷಕ್ಕೆ ಆಗಿರುವ ಸ್ಥಾನ ನಷ್ಟ , ರಾಜಕೀಯವಾಗಿ ಆಗಿರುವ ಹಿನ್ನಡೆಯೇ ಹೌದು.

ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ರಾಜ್ಯದಲ್ಲಿ ಜನತಾ ದಳದ ರಾಜ್ಯ ಕಚೇರಿ ಕಟ್ಟಡವೂ ಈಗ ಆ ಪಕ್ಷದ ಕೈತಪ್ಪುತ್ತಿದೆ. ಸುಪ್ರೀಂಕೋರ್ಟ್‌ನಲ್ಲಿ ಜೆಡಿಎಸ್ ವಾದಕ್ಕೆ ಪುಷ್ಟಿ ಸಿಕ್ಕದಿರುವುದರಿಂದ ಮುಂದಿನ ಡಿಸೆಂಬರ್ ಒಳಗೆ ರೇಸ್ ಕೋರ್ಸ್ ರಸ್ತೆಯ ಕಚೇರಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡಲೇಬೇಕಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ, ಜೆಡಿಎಸ್‌ನಲ್ಲೇ ಇದ್ದು ಅಲ್ಲಿ ಮುಖ್ಯಮಂತ್ರಿಯಾಗುವುದು ಸಾಧ್ಯವಿಲ್ಲವೆನ್ನುವ ಕಾರಣಕ್ಕೆ ಹೊರಬಂದು ಕಾಂಗ್ರೆಸ್ ಸೇರಿದ್ದ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿರುವಾಗಲೇ ಜೆಡಿಎಸ್‌ಗೆ ಒಂದಾದ ನಂತರ ಒಂದು ಹಿನ್ನಡೆಯಾಗುತ್ತಲೇ ಇದೆ.ಇದಕ್ಕೆ ಸಿದ್ದರಾಮಯ್ಯ ಅವರು ಕಾರಣರಲ್ಲದಿದ್ದರೂ ಈ ಕಾಕತಾಳೀಯ ಬೆಳವಣಿಗೆ ಅವರಿಗೂ ಖುಷಿ ತಂದಿದೆ ಎನ್ನುವುದರಲ್ಲಿ ಸಂಶಯವಿಲ್ಲ.
ಇನ್ನು ಕಾಂಗ್ರೆಸ್ ವಿದ್ಯಮಾನಗಳತ್ತ ಗಮನ ಹರಿಸಿದರೆ, ಆ ಪಕ್ಷ ಎಲ್ಲಾ ವರ್ಗದ ಮತಗಳನ್ನು ಸೆಳೆಯುವುದು ಹೇಗೆ ಎನ್ನುವುದಕ್ಕಷ್ಟೇ ಸೀಮಿತವಾಗಿ ನಿರ್ಣಯಗಳನ್ನು ಕೈಗೊಳ್ಳುತ್ತಲೇ ಸಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ನೀಡುವುದು ಅಂತಹ ಒಂದು ಯತ್ನ.ಇನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ತಾವು ಮಂತ್ರಿಯಾಗಬೇಕೆನ್ನುವ ನಿಟ್ಟಿನಲ್ಲಿ ಆರಂಭಿಸಿದ್ದ ಯತ್ನವನ್ನು ನಿರಂತರವಾಗಿ ಮುಂದುವರಿಸಿದ್ದಾರೆ.ವಿಧಾನ ಪರಿಷತ್‌ಗೆ ಪ್ರವೇಶದ ಮೂಲಕವಾದರೂ ಮಂತ್ರಿಗಿರಿ ಗಿಟ್ಟಿಸುವುದು ಅವರ ಯತ್ನದ ಹಿಂದಿರುವ ಉದ್ದೇಶ.ಕೆಪಿಸಿಸಿ ಅಧ್ಯಕ್ಷರೇ ಮಂತ್ರಿ ಸ್ಥಾನಕ್ಕಾಗಿ ಹೈಕಮಾಂಡ್ ಮುಂದೆ ಗೋಗರೆಯಬೇಕಾಗಿ ಬಂದಿರುವುದು ಆ ಪಕ್ಷದ ಶೋಚನೀಯ ಸ್ಥಿತಿಯ ಪ್ರತೀಕ.

   

Leave a Reply