ರಾಜನೀತಿ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 4.7.2016

-ಶಾರದಾ ಶಾಮಣ್ಣ

ಒಂದೂರು. ಆ ಊರಿನ ಹೊರಗಡೆ ಒಂದು ಆಶ್ರಮ. ಅದರಲ್ಲಿ ಒಬ್ಬ ಗುರುಗಳು ತಮ್ಮ ಹತ್ತಾರು ಜನ ಶಿಷ್ಯರೊಡನೆ ವಾಸವಾಗಿದ್ದರು. ಪುರಾಣ ಪುಣ್ಯಕಥೆಗಳನ್ನು ಹೇಳುತ್ತಾ ಲೋಕಕಲ್ಯಾಣಕ್ಕಾಗಿ ಹೋಮ ಹವನಾದಿಗಳನ್ನು ಮಾಡುತ್ತಾ ದುಃಖಿಗಳನ್ನು ಸಂತೈಸುತ್ತಾ ಶಾಂತ ಜೀವನ ನಡೆಸುತ್ತಿದ್ದರು.
ಆಗಾಗ್ಗೆ ಆ ಗುರುಗಳು ತಮ್ಮ ಶಿಷ್ಯರಿಗೆ ಸಾಮಾನ್ಯ ಜ್ಞಾನ, ಹಾಗೂ ಜನಗಳ ವ್ಯವಹಾರವನ್ನು ಪರಿಚಯಿಸುವುದಕ್ಕಾಗಿ ಶಿಷ್ಯರೊಡನೆ ನಗರ ಸಂಚಾರವನ್ನು ನಡೆಸುತ್ತಿದ್ದರು.
ಹೀಗೆ ಒಮ್ಮೆ ನಗರ ಸಂಚಾರದಲ್ಲಿದ್ದಾಗ ಒಂದು ಊರಿಗೆ ಬಂದರು. ಪೇಟೆ ಬೀದಿಯಲ್ಲಿ ಸಾಮಾನುಗಳನ್ನು ಮಾರುತ್ತಿದ್ದರು. ಎಲ್ಲಾ ರೀತಿಯ ಸಾಮಾನುಗಳೂ ಇದ್ದವು. ಅಲ್ಲಿ ಯಾವ ಸಾಮಾನಿನ ಬೆಲೆಯನ್ನು ಕೇಳಿದರೂ ಅಂಗಡಿಯ ಮಾಲೀಕ ಎರಡು ದಮ್ಮಡಿ (ಈಗಿನ ಪೈಸೆಯಷ್ಟು) ಎಂದು ಹೇಳುತ್ತಿದ್ದನು. ಬಟ್ಟೆ, ಅಕ್ಕಿ, ಬೇಳೆ, ಪುಸ್ತಕ, ಕಟ್ಟಿಗೆ, ಶ್ರೀಗಂಧ, ಹಾಲು, ಬೆಣ್ಣೆ, ನೀರು, ಹಿಟ್ಟು, ಬೂದಿ, ಕಬ್ಬಿಣ, ಚಿನ್ನ, ಬಾದಾಮಿ, ಕೇಸರಿ, ಒಣಬೀಜಗಳು, ಯಾವುದನ್ನು ಕೇಳಿದರೂ ಒಂದೇ ಬೆಲೆ – ಎರಡು ದಮ್ಮಡಿ.
ಗುರುಶಿಷ್ಯರಿಗೆಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಅಂಗಡಿಯ ಮಾಲೀಕನನ್ನು ಇದರ ಬಗ್ಗೆ ಕೇಳಿದಾಗ ಅವರುಗಳು ‘‘ಇದು ರಾಜಾಜ್ಞೆ, ರಾಜರು ಹೀಗೆಯೇ ಮಾರಬೇಕೆಂದು ಅಪ್ಪಣೆ ಮಾಡಿದ್ದಾರೆ. ಅದರಂತೆ ಮಾರುತ್ತಿದ್ದೇವೆ’’ ಎಂದು ಬಿಟ್ಟರು.
ಗುರುಗಳು ಹಾಗೆಯೇ ಆಲೋಚಿಸಿದರು ಇದರ ಬಗ್ಗೆ ಎಲ್ಲಾ ವಸ್ತುಗಳಿಗೂ ಅವುಗಳ ಸಹಜ ಗುಣಮಟ್ಟದ ವಸ್ತುಗಳಿಗೆ ಯೋಗ್ಯ ಬೆಲೆಯನ್ನು ನಿರ್ಧರಿಸಬೇಕು. ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು, ಈ ವಿಷಯದಲ್ಲಿ ರಾಜನಿಗೆ ತಿಳುವಳಿಕೆ ಸಾಲದು. ಒಳ್ಳೆಯ ಸಲಹೆಯನ್ನು ಕೊಡಲು ಮಂತ್ರಿಗಳೂ ಇಲ್ಲದಿರಬಹುದು, ಎಂತಹ ಅವಿವೇಕಿಗಳ ರಾಜ್ಯ ಎಂದುಕೊಂಡರು.
ಇಂತಹ ಹೊಣೆಗೇಡಿ ರಾಜನ ರಾಜ್ಯದಲ್ಲಿರುವುದು ತುಂಬಾ ಅಪಾಯವೆಂದು ತಿಳಿದು ಮುಂದಾಲೋಚನೆಯಿಂದ ಶಿಷ್ಯರನ್ನು ಕರೆದುಕೊಂಡು ಮುಂದಿನ ಊರಿಗೆ ಹೋಗಲು ಸಿದ್ಧವಾದರು.
ಆದರೆ ಆ ಶಿಷ್ಯರಲ್ಲಿ ಒಬ್ಬ ಹೊಟ್ಟೆಬಾಕನಿದ್ದನು. ಅವನು ಮಾತ್ರ ಇಲ್ಲೇ ಈ ಎಡವಟ್ಟು ರಾಜ್ಯದಲ್ಲೇ ಉಳಿಯುವೆನೆಂದು ಹಠಮಾಡಿ ಅಲ್ಲೇ ಉಳಿದುಕೊಂಡನು. ಗುರುಗಳು ಉಳಿದ ಶಿಷ್ಯರನ್ನು ಕರೆದುಕೊಂಡು ಮುಂದಿನ ಊರಿಗೆ ಪ್ರಯಾಣ ಬೆಳೆಸಿದರು.
ಈ ನಗರದಲ್ಲೇ ಉಳಿದ ಶಿಷ್ಯನು, ಅವನ ಹೆಸರು ಭೀಮನೆಂದು ಇಟ್ಟು ಕೊಳ್ಳೋಣ. ಭೀಮನಿಗೆ ಹಾಲು, ಮೊಸರು, ಬೆಣ್ಣೆಗಳೆಂದರೆ ತುಂಬಾ ಇಷ್ಟ. ದ್ರಾಕ್ಷಿ, ಬಾದಾಮಿ-ಸಕ್ಕರೆ ಎಂದರೆ ಇನ್ನೂ ಇಷ್ಟ. ಕಡಿಮೆ ಬೆಲೆಯಲ್ಲಿ ಸಿಗುವ ಅವುಗಳನ್ನು ಚೆನ್ನಾಗಿ ತಿಂದೂ ತಿಂದು ಮೈ ಬೆಳೆಸಿಕೊಂಡನು, ಗುಂಡು ಗುಂಡಾದನು.
ಒಮ್ಮೆ ಈ ರಾಜನ ಅರಮನೆಯಲ್ಲಿ ರಾಣಿಯ ಕಂಠಾಭರಣ ಕಳುವಾಯಿತು. ರಾಜಭಟರು ಕಳ್ಳನನ್ನು ಗಲ್ಲಿಗೇರಿಸಲು ಸಿದ್ಧತೆ ಮಾಡಿಕೊಳ್ಳಲಾಯಿತು. ಅಪರಾಧಿಯ ಕುತ್ತಿಗೆಗೆ ಹಾಕುವ ಕುಣಿಕೆಯ ಹಗ್ಗ ಸ್ವಲ್ಪ ದೊಡ್ಡದಾಗಿದ್ದಿತು. ಆದರೆ ಕಳ್ಳ ತುಂಬಾ ಸಣಕಲು, ಒಣಕಲು ಆಗಿದ್ದಿದುದರಿಂದ ಗಲ್ಲು ಹಗ್ಗ ಅವನ ಕುತ್ತಿಗೆಯಿಂದ ಜಾರಿ ಹೋಗುತ್ತಿದ್ದಿತು. ಅವನಿಗೆ ನೇಣು ಹಾಕಲು ಆಗಲೇ ಇಲ್ಲ.
ರಾಜಭಟರು ರಾಜನಿಗೆ ಹೋಗಿ ಸುದ್ದಿ ಮುಟ್ಟಿಸಿದರು. ಅದಕ್ಕೆ ರಾಜನು ‘‘ಓಹೋ ಹಾಗೋ ಸರಿ… ಕುತ್ತಿಗೆ ದಪ್ಪ ಇರುವವರನ್ನೇ ಕರೆತಂದು ಅವನಿಗೇ ನೇಣು ಹಾಕಿ’’ ಎಂಬ ಆಜ್ಞೆಯನ್ನು ಹೊರಡಿಸಿಯೇ ಬಿಟ್ಟನು.
ಸರಿ ದಪ್ಪ ಕುತ್ತಿಗೆಯವರನ್ನು ಹುಡುಕಲು ಭಟರು ಆರಂಭಿಸಿದರು. ಅವರ ಕಣ್ಣಿಗೆ ಬಾದಾಮಿ, ದ್ರಾಕ್ಷಿ ತಿನ್ನುತ್ತಿದ್ದ ಗುಂಡು ಶಿಷ್ಯನು ಬಿದ್ದನು. ಹಿಂದೂ ಮುಂದೂ ನೋಡದೆ ಏನೂ ವಿಚಾರಿಸದೇ ಅವನನ್ನು ವಧಾಸ್ಥಾನಕ್ಕೆ ಕರೆದುಕೊಂಡೇ ಹೋದರು. ಅವನ ಕುತ್ತಿಗೆಗೆ ಗಲ್ಲಿನ ಹಗ್ಗದ ಕುಣಿಕೆ ಸರಿಯಾಗಿ ಹೇಳಿ ಮಾಡಿಸಿದ ಹಾಗಿದ್ದಿತು.
ಗುಂಡು ಶಿಷ್ಯನು ತಾನು ರಾಣಿಯ ಕಂಠೀಹಾರವನ್ನು ಕದ್ದಿಲ್ಲವೆಂದು ಎಷ್ಟು ಹೇಳಿದರೂ ಕೇಳಲಿಲ್ಲ. ಅತ್ತು ಗೋಳಾಡಿದನು. ಏನೂ ಪ್ರಯೋಜನವಾಗಲಿಲ್ಲ. ಈ ಗಲಾಟೆಯನ್ನು ಕೇಳಿ ರಾಜನೇ ವಧಾಸ್ಥಾನಕ್ಕೆ ಬಂದನು. ಅವನಿಂದಲೂ ಏನೂ ಸಹಾಯ ಸಿಗಲಿಲ್ಲ. ನೀನು ಸಾಯುವ ಮೊದಲು ನಿನ್ನ ಕೊನೆಯ ಆಸೆ ಏನಾದರೂ ಇದ್ದರೆ ಹೇಳು, ಅದನ್ನು ತೀರಿಸುವೆ ಎಂದು ರಾಜನು ಹೇಳಿದನು.
ಆ ತಕ್ಷಣಕ್ಕೆ ಅವನಿಗೆ ತನ್ನ ಗುರುಗಳ ನೆನಪು ಬಂತು. ಅವನು ಅದನ್ನೇ ಹೇಳಿದನು. ಪ್ರವಾಸದಲ್ಲಿದ್ದ ಗುರುಗಳು ಬಂದರು. ಗುರುಗಳಿಗೆ ಎಲ್ಲವನ್ನೂ ರಾಜಭಟರು ವಿವರಿಸಿದರು.
ಆಗ ಗುರುಗಳು ಸಮಾಧಾನಚಿತ್ತರಾಗಿ ರಾಜನನ್ನು ಹತ್ತಿರಕ್ಕೆ ಕರೆದು ರಾಜನು ಅನುಸರಿಸಬೇಕಾದ ಕೆಲವು ಕಡ್ಡಾಯದ ರಾಜನೀತಿಯನ್ನು ಹೇಳಿಕೊಟ್ಟರು.
ರಾಜನು ಎಲ್ಲವನ್ನೂ ಸಾವಧಾನದಿಂದ ಆಲೈಸಿ ಇನ್ನು ಮುಂದೆ ಹಾಗೆಯೇ ರಾಜ್ಯವಾಳುವುದಾಗಿ ಒಪ್ಪಿಕೊಂಡನು.
ಗುಂಡು ಶಿಷ್ಯನು ಸಂತೋಷದಿಂದ ಬಂದು ಗುರುಗಳ ಕಾಲಿಗೆರಗಿದನು. ರಾಜನು ಯಥೋಚಿತ ಸತ್ಕಾರದೊಂದಿಗೆ ಗುರುಶಿಷ್ಯರನ್ನು ಮುಂದಿನೂರಿಗೆ ಬೀಳ್ಕೊಟ್ಟನು.

   

Leave a Reply