ರಾಷ್ಟ್ರೀಯ ಸಮಗ್ರತೆ: ಯಾವುದೇ ರಾಜಿ ಇಲ್ಲ

ಬೆಂಗಳೂರಿನ ಸುದ್ದಿಗಳು - 0 Comment
Issue Date : 20.04.2015

ಬೆಂಗಳೂರು: ಜಮ್ಮು – ಕಾಶ್ಮೀರ ರಾಜ್ಯದಲ್ಲಿ ರಚನೆಯಾಗಿರುವ ಬಿಜೆಪಿ – ಪಿಡಿಪಿ ಮೈತ್ರಿಕೂಟ ಸರ್ಕಾರವು ರಾಜ್ಯದ ಆಡಳಿತ ಹಾಗೂ ಸಂವಿಧಾನದ ಆಶಯಗಳನ್ನು ಪೂರೈಸಲು ಬದ್ಧವಾಗಿದೆ. ಬಿಜೆಪಿಯು ಆ ರಾಜ್ಯದ ಜನಾದೇಶವನ್ನು ಗೌರವಿಸಿದೆ. ಅದಕ್ಕಾಗಿಯೇ ಅದು ಈಗ ಆ ರಾಜ್ಯ ಸರ್ಕಾರದ ಮೈತ್ರಿಕೂಟದ ಅಂಗ ಪಕ್ಷವಾಗಿದೆ. ಅಭಿವೃದ್ಧಿ ಪರವಾಗಿರುವ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳ ಆಧಾರದ ಮೇಲೆ ಸರ್ಕಾರ ರಚಿತವಾಗಿದ್ದು, ಜಮ್ಮು – ಕಾಶ್ಮೀರದ ವಿಷಯ ರಾಷ್ಟ್ರೀಯ ಹಿತಾಸಕ್ತಿ ವಿಷಯದಲ್ಲಿ ಬಿಜೆಪಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸ್ಪಪ್ಟ ಪಡಿಸಿದರು.
ಮಂಥನ ಬೆಂಗಳೂರು ವಿಚಾರ ವೇದಿಕೆಯು ಏ. 5ರಂದು ಮಿಥಿಕ್ ಸೊಸೈಟಿಯಲ್ಲಿ ಆಯೋಜಿಸಿದ್ದ ‘ಜಮ್ಮು – ಕಾಶ್ಮೀರದ ಪ್ರಸ್ತುತ ಸಾಮಾಜಿಕ – ರಾಜಕೀಯ ಪರಿಸ್ಥಿತಿ’ ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, 1950ರಿಂದಲೂ ಬಿಜೆಪಿ ಜಮ್ಮು ಮತ್ತು ಕಾಶ್ಮೀರ ಚುನಾವಣೆಯಲ್ಲಿ ಸ್ಪರ್ಧಿಸುತ್ತಾ ಬಂದಿದೆ. ಮೊದಲಿಗೆ ಪ್ರಜಾ ಪರಿಷತ್ ೆಸರಿನಲ್ಲಿ , ನಂತರ ಭಾರತೀಯ ಜನಸಂಘ, ಈಗ ಬಿಜೆಪಿ ಹೆಸರಿನಲ್ಲಿ ನೇರವಾಗಿ ಸ್ಪರ್ಧೆಗಿಳಿದಿದೆ. 60 ವರ್ಷದಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದೇವೆ ಎಂದರು.
ಸೈದ್ಧಾಂತಿಕವಾಗಿ ಬಿಜೆಪಿ ಹಾಗೂ ಪಿಡಿಪಿ ಉತ್ತರ ಮತ್ತು ದಕ್ಷಿಣ ಧ್ರುವಗಳಿದ್ದಂತೆ. ಅವು ಎಂದೂ ಒಂದಾಗಲು ಸಾಧ್ಯವಿಲ್ಲ. ಒಂದಾದ ದಿನ ಪ್ರಳಯವಾಗಬಹುದು. ಆದರೆ, ಜಮ್ಮು ಜನತೆ ಬಿಜೆಪಿ ಮೇಲಿಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿಂದ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿ್ದೇವೆ. ದೇಶದ ಘನತೆಗೆ ಧಕ್ಕೆ ತರುವ ಯಾವುದೇ ವಿಚಾರಕ್ಕೂ ಬಿಜೆಪಿ ಬೆಂಬಲ ನೀಡುವುದಿಲ್ಲ. ಉಪಮುಖ್ಯಮಂತ್ರಿ, ಇಂಧನ, ವೈದ್ಯಕೀಯ ಶಿಕ್ಷಣ, ಆರೋಗ್ಯ, ಅರಣ್ಯ, ವಸತಿ ಮತ್ತು ಮೂಲಸೌಕರ್ಯ ಸೇರಿದಂತೆ ಪ್ರಬಲ ಖಾತೆಗಳನ್ನು ಬಿಜೆಪಿ ಸಚಿವರು ಹೊಂದಿದ್ದಾರೆ. 7 ವಿಧಾನ ಪರಿಷತ್ ಸದಸ್ಯರು ಹಾಗೂ ಸ್ಪೀಕರ್ ಬಿಜೆಪಿಯವರಾಗಿದ್ದಾರೆ ಎಂದು ವಿವರಿಸಿದರು.
2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 33ರಷ್ಟು ಮತ ಗಳಿಸಿತ್ತು. ಇದು ನಮ್ಮ ಪಕ್ಷದ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಾಗಿತ್ತು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಿಷನ್ 44 ಪ್ಲಸ್ ಎಂಬ ಘೋಷಣೆಯೊಂದಿಗೆ ಪ್ರಚಾರ ಆರಂಭಿಸಿದ್ದೆವು. ಬಿಜೆಪಿ ಕಾರ್ಯಕರ್ತರ ಹಾಗೂ ನಾಯಕರ ಅವಿರತ ಶ್ರಮದಿಂದ 25 ಸೀಟು ಗಳಿಸಲು ಸಾಧ್ಯವಾಯಿತು. ಬಿಜೆಪಿ ಬೆಂಬಲಿತ ಪೀಪಲ್ಸ್ ಕಾನ್ಫರೆನ್ಸ್ 2 ಸೀಟು ಗಳಿಸಿದೆ. ಬಿಜೆಪಿಯ ಬಂಡುಕೋರ ಅಭ್ಯರ್ಥಿಯೊಬ್ಬರೂ ಗೆದ್ದಿದ್ದಾರೆ. ತಾಂತ್ರಿಕವಾಗಿ ಈಗ ಬಿಜೆಪಿ ಪಿಡಿಪಿಯಷ್ಟೇ, ಅಂದರೆ ಒಟ್ಟು 28 ಸೀಟುಗಳ ಬಲ ಹೊಂದಿದೆ. ಬಿಜೆಪಿ ಇತಿಹಾಸದಲ್ಲೇ ಜಮ್ಮು – ಕಾಶ್ಮೀರದಲ್ಲಿ ಎಂದೂ ಕಾಣದ ದಿಗ್ವಿಜಯವಿದು ಎಂದು ರಾಮ್ ಮಾಧವ್ ವಿಶ್ಲೇಷಿಸಿದರು.
ಮೊದಲ ಇಂಧನ ಬಜೆಟ್
ದೇಶದಲ್ಲೇ ಮೊದಲ ಬಾರಿಗೆ ಕಾಶ್ಮೀರದಲ್ಲಿ ಪ್ರತ್ಯೇಕ ಇಂಧನ ಬಜೆಟ್ ಮಂಡಿಸಲಾಗಿದೆ. ದೇಶದಲ್ಲಿ ರೈಲು ಬಜೆಟ್ ಮಂಡಿಸಿದಂತೆ, ಕಾಶ್ಮೀರದಲ್ಲಿ ಶಕ್ತಿ ಕೇಂದ್ರಿತವಾಗಿ ಇಂಧನ ಬಜೆಟ್ ಮಂಡಿಸಲಾಗಿದ್ದು, ಈ ಮೂಲಕ ಬಿಜೆಪಿ, ಪಿಡಿಪಿ ಸರ್ಕಾರ ಜನರ ಆಶೋತ್ತರಗಳಿಗೆ ಸದಾ ಭಾಗಿಯಾಗಿರುತ್ತದೆ ಎಂದರು.
ಜಮ್ಮು – ಕಾಶ್ಮೀರದಲ್ಲಿ ಪಿಡಿಪಿಯ ಮುಖ್ಯಮಂತ್ರಿ ಇದ್ದರೂ ವಿಶ್ವ ಹಿಂದು ಪರಿಷತ್ತಿನ ನಾಯಕ ಪ್ರವೀಣ್ ತೊಗಾಡಿಯಾ ಅವರ ಭಾಷಣಕ್ಕೆ ಎಲ್ಲೂ ನಿಷೇಧ ಹೇರಲಿಲ್ಲ. ರಾಜೌರಿ, ಪೂಂಚ್ ಮೊದಲಾದ ಸೂಕ್ಷ್ಮ ಪ್ರದೇಶದಲ್ಲೂ ತೊಗಾಡಿಯಾ ಭಾಷಣ ಅನಿರ್ಬಂಧಿತವಾಗಿ ನಡೆಯಿತು. ಅದೇ ನಿಮ್ಮ ಕರ್ನಾಟಕ ಸರ್ಕಾರ ಪ್ರವೀಣ್ ತೊಗಾಡಿಯಾ ಭಾಷಣಕ್ಕೆ ಇಡೀ ರಾಜ್ಯದಲ್ಲಿ ಅವಕಾಶ ನೀಡದೆ ನಿರ್ಬಂಧ ವಿಧಿಸಿತ್ತು. ಹೀಗಾಗಿ ಕಾಶ್ಮೀರದಲ್ಲಿ ರಾಷ್ಟ್ರೀಯ ವಿಚಾರದ ಮಂಡನೆಗೆ ಸ್ವಾತಂತ್ರ್ಯವಿದೆ ಎಂಬುದು ಈ ದೃಷ್ಟಾಂತದಿಂದ ಸ್ಪಷ್ಟ ಎಂದು ರಾಮ್ ಮಾಧವ್ ಹೇಳಿದರು.
ಪ್ರತ್ಯೇಕ ಕೂಗು ಸರಿಯಲ್ಲ
ಜಮ್ಮು – ಕಾಶ್ಮೀರವನ್ನು ಭಾರತದ ಒಂದು ರಾಜ್ಯವನ್ನಾಗಿ ನೋಡಬೇಕೇ ಹೊರತು, ಅದನ್ನು ಪಾಕಿಸ್ಥಾನ ಅಥವಾ ಅಂತಾರಾಷ್ಟ್ರೀಯ ದೃಷ್ಟಿಕೋನದಿಂದ ನೋಡುವುದು ಸರಿಯಲ್ಲ. ಬಹಳ ವರ್ಷಗಳಿಂದಲೂ ಜಮ್ಮು – ಕಾಶ್ಮೀರದ ವಿಷಯ ಬಂದಾಗ ಅದನ್ನು ಪಾಕಿಸ್ಥಾನ ಇಲ್ಲವೇ ಅಂತಾರಾಷ್ಟ್ರೀಯ ದೃಷ್ಟಿಕೋನದಿಂದ ನೋಡಲಾಗುತ್ತಿದೆ. ಇದರಿಂದ ಪ್ರತ್ಯೇಕವಾದದ ಜೊತೆಗೆ ಜಮ್ಮು – ಕಾಶ್ಮೀರದ ಸಮಸ್ಯೆ ದಿನೇ ದಿನೇ ಉಲ್ಭಣವಾಗುತ್ತಿದೆ. ಪ್ರತ್ಯೇಕವಾದ ಅಥವಾ ಪ್ರತ್ಯೇಕ ರಾಜ್ಯ ಬೇಕೆಂಬ ಕೂಗು ಜಮ್ಮು – ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲೂ ಇಂತಹ ಕೂಗು ಕೇಳಿಬರುತ್ತಿದೆ. ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಮನವೊಲಿಸುವ ಪ್ರಯತ್ನ ಮಾಡಬೇಕೇ ಹೊರತು ದೇಶದಿಂದ ಹೊರದಬ್ಬಬೇಕೆಂಬುದು ಸರಿಯಲ್ಲ ಎಂದರು.
370ನೇ ವಿಧಿ ರದ್ದಾಗಲಿ
ಜಮ್ಮು- ಕಾಶ್ಮೀರಕ್ಕೆ ವಿಶೇಷ ್ಥಾನಮಾನ ನೀಡಿರುವ 370ನೇ ವಿಧಿ ರದ್ದು ಮಾಡುವ ಬೇಡಿಕೆಗೆ ಬಿಜೆಪಿ ಬದ್ಧವಾಗಿದೆ. ಆದರೆ ಸ್ವಂತ ಬಲದಿಂದ ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯ ಅದಕ್ಕೆ ಸದ್ಯಕ್ಕಿಲ್ಲ ಎಂದು ಪ್ರಶ್ನಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದರು.
ಬಿಜೆಪಿ ಅಧಿಕಾರದಲ್ಲಿರುವ ತನಕ ಜಮ್ಮು – ಕಾಶ್ಮೀರದಲ್ಲಿ ರಾಷ್ಟ್ರೀಯ ಸಮಗ್ರತೆಗೆ ಧಕ್ಕೆ ತರುವ ಯಾವುದೇ ಅಹಿತಕರ ವಿದ್ಯಮಾನ ನಡೆಯುವುದಿಲ್ಲ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಮಂಥನದ ಅಧ್ಯಕ್ಷ ಡಾ. ಗಿರಿಧರ ಉಪಾಧ್ಯಾಯ ಸ್ವಾಗತಿಸಿದರು. ರಾಜೇಶ್ ಪದ್ಮಾರ್ ವಂದಿಸಿದರು. ನಗರದ ಗಣ್ಯರು, ಬುದ್ಧಿಜೀವಿಗಳು, ಲೇಖಕರು, ಪತ್ರಕರ್ತರು ಪಾಲ್ಗೊಂಡಿದ್ದರು.

   

Leave a Reply