ಲಕ್ಷ್ಮಣರೇಖೆ

ರಮೇಶ್ ಪತಂಗೆ ; ಲೇಖನಗಳು - 0 Comment
Issue Date : 28.05.2016

– ರಮೇಶ್‍ ಪತಂಗೆ

ಕೇಂದ್ರ ಅರ್ಥಮಂತ್ರಿ ಅರುಣ್ ಜೇಟ್ಲಿಯವರು ದಿಲ್ಲಿಯ ಒಂದು ಕಾರ್ಯಕ್ರಮದಲ್ಲಿ ನ್ಯಾಯಾಂಗದ ಬಗ್ಗೆ ಈ ಹೇಳಿಕೆ ನೀಡಿದರು, ‘‘ಆಡಳಿತ ವ್ಯವಸ್ಥೆಯ ಭಾಗವಾಗಿರುವ ನಿರ್ಣಯಗಳಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದು. ನಮ್ಮ ದೇಶದಲ್ಲಿ ನ್ಯಾಯವ್ಯವಸ್ಥೆ ಸ್ವತಂತ್ರವಾಗಿದ್ದರೂ, ಸ್ವಾತಂತ್ರ್ಯದ ಹೆಸರಿನಲ್ಲಿ ಮೂಲಭೂತ ತತ್ವಗಳ ಇತರ ಮುಖಗಳೊಂದಿಗೆ ನಾವು ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನವು ನ್ಯಾಯಾಂಗದ ಕಾರ್ಯವನ್ನು ನಿಶ್ಚಿತಗೊಳಿಸಿದ್ದು ಅದಕ್ಕನುಸಾರವಾಗಿಯೇ ನ್ಯಾಯಾಲಯಗಳು ತಮ್ಮ ಕಾರ್ಯಗಳನ್ನು ಮಾಡಬೇಕು. ಸರ್ಕಾರವು ಕೈಗೊಳ್ಳುವ ನಿರ್ಣಯಗಳನ್ನು ವಿಮರ್ಶೆ ಮಾಡುವ ಅಧಿಕಾರ ನ್ಯಾಯವ್ಯವಸ್ಥೆಗಿದೆ, ಆದರೆ ಸರ್ಕಾರದ ವ್ಯಾಪ್ತಿಯಲ್ಲಿರುವ ನಿರ್ಣಯದಲ್ಲಿ ನ್ಯಾಯಾಲಯವು ಹಸ್ತಕ್ಷೇಪ ಮಾಡಬಾರದು. ಎಲ್ಲ ಸಂಸ್ಥೆಗಳೂ ತಮಗಾಗಿ ಲಕ್ಷ್ಮಣರೇಖೆಯನ್ನು ನಿಶ್ಚಿತಗೊಳಿಸಬೇಕು.’’ ನ್ಯಾಯವ್ಯವಸ್ಥೆಯು ಲಕ್ಷ್ಮಣರೇಖೆಯನ್ನು ಗುರುತಿಸಿ ಅದನ್ನು ಪಾಲಿಸಬೇಕು, ಎಂಬುದು ಜೇಟ್ಲಿಯವರ ಮಾತಿನ ಆಶಯ.
ನ್ಯಾಯಾಂಗ ಮತ್ತು ಕಾರ್ಯಾಂಗಗಳ ಅಧಿಕಾರದ ಕುರಿತು ವಿವಾದವಂತೂ ಹಳೆಯದೇ ಆಗಿದೆ. ಶ್ರೀಮತಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಅಧಿಕಾರ ಕ್ಷೇತ್ರಗಳ ಕುರಿತು ವಿವಾದ ಬಹು ಬಿರುಸಾಗಿತ್ತು. ಈ ವಿಷಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನಾಲ್ಕು ಪ್ರಕರಣಗಳು ಬಹು ಮಹತ್ವದ್ದೆನಿಸಿದವು.
1) ಗೋಲಕನಾಥ ವಾರಸಿಕೆ ಅಧಿಕಾರ ಪ್ರಕರಣ
2) ಬ್ಯಾಂಕುಗಳ ರಾಷ್ಟ್ರೀಕರಣದ ಪ್ರಕರಣ
3) ಸಂಸ್ಥಾನಿಕರ ಗೌರವಧನದ ಪ್ರಕರಣ
4) ಕೇಶವಾನಂದ ಭಾರತಿ ಪ್ರಕರಣ. ಮೂಲಭೂತ ಅಧಿಕಾರಗಳಲ್ಲಿ ಯಾವುದೇ ಬದಲಾವಣೆ ಮಾಡಲು ಸಂಸತ್ತಿಗೆ ಅಧಿಕಾರವಿಲ್ಲ, ಎಂದು ಗೋಲಕನಾಥ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿತು. ಈ ನಾಲ್ಕೂ ಪ್ರಕರಣಗಳಲ್ಲಿ ಸಂಪತ್ತಿನ ಅಧಿಕಾರವು ಒಂದು ಮಹತ್ವದ ವಿಷಯವಾಗಿತ್ತು. ಸಮಾಜವಾದಿ ಧೋರಣೆಗಳು ಜಾರಿಯಲ್ಲಿದ್ದುದರಿಂದ ಸಂಪತ್ತಿನ ಅಧಿಕಾರವನ್ನು ಸೀಮಿತಗೊಳಿಸಲು ಸರ್ಕಾರ ಉದ್ದೇಶಿಸಿತ್ತು. ಕೇಶವಾನಂದ ಭಾರತಿ ಪ್ರಕರಣದಲ್ಲಿ ಸಂವಿಧಾನದ ಮೂಲಭೂತ ಚೌಕಟ್ಟಿನ ವಿಷಯವನ್ನು ನ್ಯಾಯಾಲಯವು ಎತ್ತಿಕೊಂಡಿತು ಹಾಗೂ ಈ ಮೂಲಭೂತ ಚೌಕಟ್ಟಿನಲ್ಲಿ ಬದಲಾವಣೆ ಮಾಡುವ ಅಧಿಕಾರ ಸಂಸತ್ತಿಗಿಲ್ಲ, ಎಂದು ತೀರ್ಪು ನೀಡಿತು. ಆದರೆ ಮೂಲಭೂತ ಚೌಕಟ್ಟು ಎಂದರೇನು ? ಎಂದು ನ್ಯಾಯಾಲಯವು ವಿಶದೀಕರಿಸಲಿಲ್ಲ. ಇಂದಿರಾ ಗಾಂಧಿಯವರು 14 ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ್ದರು. ಸರ್ವೋಚ್ಚ ನ್ಯಾಯಾಲಯವು ಮೊದಲು ಅದನ್ನು ರದ್ದುಗೊಳಿಸಿತು. ಆದರೆ ಇಂದಿರಾ ಗಾಂಧಿಯವರು ಪುನಃ ಒಂದು ಸುಗ್ರೀವಾಜ್ಞೆ ಹೊರಡಿಸಿ ಅವಶ್ಯಕ ತಿದ್ದುಪಡಿಗಳನ್ನು ಮಾಡಿ 14 ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ನ್ಯಾಯಾಲಯವು ಅದರಲ್ಲಿ ಹಸ್ತಕ್ಷೇಪ ಮಾಡಲಿಲ್ಲ.
ಸಾಮಾನ್ಯ ಅನುಭವವೆಂದರೆ, ಕೇಂದ್ರ ಸರ್ಕಾರ ದುರ್ಬಲವಾಗಿದ್ದಾಗ, ನ್ಯಾಯಾಂಗವು ತನ್ನ ಅಧಿಕಾರಕ್ಷೇತ್ರವನ್ನು ವಿಸ್ತರಿಸುತ್ತ ಹೋಗುತ್ತದೆ ಹಾಗೂ ಕೇಂದ್ರ ಸರ್ಕಾರ ಸಶಕ್ತವಾಗಿದ್ದರೆ, ನ್ಯಾಯಾಂಗವು ಕಾರ್ಯಾಂಗದ ಕಾರ್ಯದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರವಿದ್ದಾಗ, ನ್ಯಾಯಾಂಗವು ಕೇಂದ್ರ ಸರ್ಕಾರದ ನಿರ್ಣಯಗಳಲ್ಲಿ ಹಸ್ತಕ್ಷೇಪ ಮಾಡಿ ಕಾರ್ಯಾಂಗದ ಕಾರ್ಯ ಮಾಡತೊಡಗುತ್ತದೆ. ಟೂಜಿ ಸ್ಪೆಕ್ಟ್ರಂ ಹರಾಜು, ಗಣಿಗಳ ನಿಷೇಧ, ಕಪ್ಪುಹಣ ಶೋಧನೆಗಾಗಿ ಸ್ಪೆಶಲ್ ಇನ್ವೆಸ್ಟಿಗೇಟಿವ್ ಟೀಂನ ಸ್ಥಾಪನೆ, ಇಂತಹ ಅನೇಕ ನಿರ್ಣಯಗಳು ಕಾರ್ಯಾಂಗದ್ದಾಗಿರುತ್ತವೆ. ಆದರೆ ಈ ನಿರ್ಣಯಗಳನ್ನು ನ್ಯಾಯಾಂಗ ಕೈಗೊಂಡಿರುತ್ತದೆ. ಈಗಲೂ ಬರ ಘೋಷಣೆ ಯಾಕೆ ಮಾಡುತ್ತಿಲ್ಲ, ಎಂಬಂತಹ ವಿಚಾರಣೆಗಳೂ ಕಾರ್ಯಾಂಗದ ಕ್ಷೇತ್ರದಲ್ಲಿ ಬರುತ್ತವೆ. ಹೀಗಾಗಿ ಸರ್ಕಾರ ನಡೆಸುವವರಿಗೆ, ಆಡಳಿತಾತ್ಮಕ ನಿರ್ಣಯ ಕೈಗೊಳ್ಳುವವರಿಗೆ, ನ್ಯಾಯಾಂಗವು ತನ್ನ ಮಿತಿ ಮೀರಿ ಕಾರ್ಯಾಂಗದ ಕ್ಷೇತ್ರದಲ್ಲಿ ಮೂಗು ತೂರಿಸುತ್ತಿದೆ, ಎಂದು ಅನಿಸುತ್ತಿದೆ.
ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗ ಇವು ಸರ್ಕಾರದ ಮೂರು ಅಂಗಗಳಾಗಿರುತ್ತವೆ. ಫ್ರೆಂಚ್ ತತ್ವಜ್ಞಾನಿ ಮಾಂಟೆಸ್ಕೂ ಹದಿನೆಂಟನೇ ಶತಮಾನದಲ್ಲಿ ‘ಅಧಿಕಾರದ ವಿಭಕ್ತೀಕರಣದ’ ಸಿದ್ಧಾಂತವನ್ನು ಮಂಡಿಸಿದ. ಇಂಗ್ಲಿಷಿನಲ್ಲಿ ಅದನ್ನು ‘ಸೆಪರೇಶನ್ ಆಫ್ ಪವರ್’ ಎನ್ನುತ್ತಾರೆ. ಮಾಂಟೆಸ್ಕೂ ಹೇಳುತ್ತಾನೆ, ಜನರ ಸ್ವಾತಂತ್ರ್ಯವನ್ನು ರಕ್ಷಿಸಲು ಶಾಸನದ ಈ ಮೂರು ಶಕ್ತಿಗಳನ್ನು ವಿಭಜಿಸಬೇಕು. ಕಾಯ್ದೆಗಳನ್ನು ಮಾಡುವುದಷ್ಟೇ ಶಾಸಕಾಂಗದ ಕೆಲಸವಾಗಿರಬೇಕು. ಕಾರ್ಯಾಂಗದ ಕೆಲಸವು ಈ ಕಾಯ್ದೆಗಳನ್ನು ಜಾರಿಗೊಳಿಸುವುದು, ಧೋರಣೆಗಳನ್ನು ರೂಪಿಸುವುದು. ನ್ಯಾಯಾಂಗದ ಕೆಲಸವು ಕೇವಲ ನ್ಯಾಯದಾನ ಮಾಡುವುದು. ಈ ರೀತಿಯಾಗಿ ಅಧಿಕಾರಗಳನ್ನು ವಿಭಜಿಸಿದಲ್ಲಿ ಜನರಿಗೆ ಸುಖಕಾರಕವಾದೀತು ಹಾಗೂ ಅಧಿಕಾರದ ಪ್ರತಿಯೊಂದು ಅಂಗವೂ ಪರಸ್ಪರ ನಿಯಂತ್ರಿಸುವ ಕಾರ್ಯ ಮಾಡುವುದು.
ಮಾಂಟೆಸ್ಕೂ ಈ ಸಿದ್ಧಾಂತವನ್ನು ಮಂಡಿಸಿದ್ದ ಕಾಲದಲ್ಲಿ ಯುರೋಪಿನ ದೇಶಗಳಲ್ಲಿ ಅರಸೊತ್ತಿಗೆ ಇತ್ತು. ರಾಜನ ಬಳಿ ಈ ಮೂರೂ ಅಧಿಕಾರಗಳು ಇರುತ್ತಿದ್ದವು. ಕಾಯ್ದೆಗಳನ್ನು ಮಾಡುವುದು, ಅವನ್ನು ಜಾರಿಗೊಳಿಸುವುದು, ಮತ್ತು ನ್ಯಾಯದಾನ ಮಾಡುವುದು, ಈ ಮೂರೂ ಅಧಿಕಾರಗಳು ಒಂದೇ ಕಡೆ ಒಟ್ಟುಗೂಡಿದ್ದರಿಂದ ಪ್ರಭುತ್ವವು ನಿರಂಕುಶಗೊಳ್ಳುವ ಸಂಭವವೇ ಅಧಿಕವಿರುತ್ತದೆ. ಅದರಲ್ಲಿ ಜನತೆಯ ಮೌಲಿಕ ಅಧಿಕಾರಗಳ ರಕ್ಷಣೆಯಾಗದು. ವ್ಯಕ್ತಿಯ ಜೀವಿಕೆಯ ಭರವಸೆಯೇನೂ ಇರುವುದಿಲ್ಲ. ಪ್ರಜಾತಾಂತ್ರಿಕ ರಾಜ್ಯದ ಕಲ್ಪನೆಯು ವಿಕಾಸಗೊಳ್ಳುತ್ತ ಹೋದಂತೆ ಮಾಂಟೆಸ್ಕೂನ ಈ ಸಿದ್ಧಾಂತವನ್ನು ಜಾರಿಗೆ ತರಲಾಯಿತು. ಪ್ರಜಾತಂತ್ರವು ಸಂವಿಧಾನದ ಪ್ರಕಾರ ನಡೆಯುತ್ತದೆ ಹಾಗೂ ಈ ಸಂವಿಧಾನದಲ್ಲಿ ಅಧಿಕಾರವನ್ನು ತ್ರಿಭಾಜಿಸಲಾಗಿದೆ. ಪ್ರತಿಯೊಂದು ಕ್ಷೇತ್ರವೂ ತನ್ನ ಇತಿಮಿತಿಯಲ್ಲೇ ಕೆಲಸ ಮಾಡಬೇಕೆಂಬ ಅಪೇಕ್ಷೆಯಿದೆ. ಶಾಸಕಾಂಗವು ಸಂವಿಧಾನಬಾಹಿರ ಕಾಯ್ದೆಗಳನ್ನು ಮಾಡುತ್ತಿಲ್ಲವೆ ? ಕಾರ್ಯಾಂಗವು ಕಾಯ್ದೆಗಳನ್ನು ಜಾರಿಗೊಳಿಸುವಾಗ ಸಂವಿಧಾನದ ಮರ್ಯಾದೆಯನ್ನು ಮೀರುತ್ತಿಲ್ಲವೆ ? ಸಂವಿಧಾನವು ಪ್ರಜೆಗಳಿಗೆ ನೀಡಿದ ಮೂಲಭೂತ ಅಧಿಕಾರಗಳು ಮೊಟಕುಗೊಳ್ಳುತ್ತಿಲ್ಲವೆ? ಅಥವಾ ಅವುಗಳ ಮೇಲೆ ಅಧಿಕ್ಷೇಪವಾಗುತ್ತಿಲ್ಲವೆ? ಈ ವಿಷಯದಲ್ಲಿ ಅನೇಕ ರೀತಿಯ ದಾವೆಗಳು ಏಳುತ್ತಿದ್ದು, ಸರ್ವೋಚ್ಚ ನ್ಯಾಯಾಲಯವು ಸಂವಿಧಾನದ ವಿಧಿಗಳಿಗೆ ಭಾಷ್ಯ ಮಾಡಿ ತೀರ್ಪು ನೀಡುತ್ತದೆ. ಪ್ರಜಾತಂತ್ರದಲ್ಲಿ ನ್ಯಾಯಾಂಗವು ಪೂರ್ಣವಾಗಿ ಸ್ವತಂತ್ರವಾಗಿರಬೇಕಾಗುತ್ತದೆ. ಕಾರ್ಯಾಂಗದ ಅಂಗವಾಗಿ ಅದು ಕೆಲಸ ಮಾಡಲು ಸಾಧ್ಯವಿಲ್ಲ ಅಥವಾ ಹಾಗೆ ಕೆಲಸ ಮಾಡಬಾರದೆಂಬ ಅಪೇಕ್ಷೆಯಿದೆ.
ಎಷ್ಟೋ ಸಲ ವಿವಿಧ ಕಾರಣಗಳಿಂದಾಗಿ ಸಂಘರ್ಷದ ವಿಷಯಬಿಂದುಗಳು ಏಳುವುದುಂಟು. ನ್ಯಾಯಾಂಗ ಸ್ವತಂತ್ರ ವಾಗಿದ್ದರೂ ನ್ಯಾಯಾಧೀಶರ ನಿಯುಕ್ತಿಯಾಗುತ್ತದೆ. ಅವರು ಚುನಾವಣೆಗೆ ಸ್ಪರ್ಧಿಸಬೇಕಾಗುವುದಿಲ್ಲ. ಜನರೆದುರು ಹೋಗಬೇಕಾಗುವುದಿಲ್ಲ. ಕಾರ್ಯಾಂಗದಲ್ಲಿರುವ ಮಂತ್ರಿಗಳು ಮತ್ತು ಶಾಸಕಾಂಗದಲ್ಲಿ ಎಂದರೆ ಸಂಸತ್ತಿನಲ್ಲಿ ಕೂರುವ ಸಾಂಸದರು ಚುನಾಯಿಸಿ ಬರಬೇಕಾಗುತ್ತದೆ. ಅವರು ತಮ್ಮ ಕಾರ್ಯಗಳಿಗಾಗಿ ಜನರಿಗೆ ಹೊಣೆಗಾರರಾಗಿರುತ್ತಾರೆ. ಅವರು ಜನಹಿತದ ಕೆಲಸಗಳನ್ನು ಮಾಡಿದರೆ ಪುನಃ ಚುನಾಯಿಸಿ ಬರುತ್ತಾರೆ. ಜನಹಿತಕ್ಕೆ ಎಳ್ಳುನೀರು ಬಿಡುವ ಕೆಲಸಗಳನ್ನು ಮಾಡಿದರೆ ಜನ ಅವರನ್ನು ಚುನಾಯಿಸುವುದಿಲ್ಲ. ಸಂಸತ್ ಮತ್ತು ಸಂಸತ್ತಿನಿಂದ ತಯಾರಾದ ಕಾರ್ಯಾಂಗವು ಜನರಿಗೆ ಹೊಣೆಗಾರರಾಗಿರುತ್ತವೆ. ಆದ್ದರಿಂದ ಜನಹಿತಕ್ಕಾಗಿ ಕಾರ್ಯಾಂಗವು ವಿವಿಧ ಧೋರಣೆಗಳನ್ನು ರೂಪಿಸಬೇಕಾಗುತ್ತದೆ. ವಿವಿಧ ನಿರ್ಣಯಗಳನ್ನು ಕೈಗೊಳ್ಳಬೇಕಾಗುತ್ತದೆ, ಆ ನಿರ್ಣಯಗಳನ್ನು ಜಾರಿಗೊಳಿಸಬೇಕಾಗುತ್ತದೆ.
ನ್ಯಾಯಾಂಗವು ಈ ರೀತಿಯಾಗಿ ಯಾರಿಗೂ ಹೊಣೆಯಲ್ಲ. ಅದು ಹೊಣೆಗೇಡಿಯೆಂದು ಇದರರ್ಥವಲ್ಲ. ನ್ಯಾಯಾಂಗವೂ ಸಂವಿಧಾನದ ಚೌಕಟ್ಟಿಗೆ ಒಳಪಟ್ಟಿರುತ್ತದೆ. ನ್ಯಾಯಾಂಗಕ್ಕೆ ಜ್ಯೂಡಿಶಿಯಲ್ ರಿವ್ಯೆ ಎಂಬ ವಿಶೇಷ ಅಧಿಕಾರವಿದೆ. ಈ ಜ್ಯೂಡಿಶಿಯಲ್ ರಿವ್ಯೆನಲ್ಲಿ ಕಾರ್ಯಾಂಗವು ಕೈಗೊಂಡ ನಿರ್ಣಯಗಳ ಸಮೀಕ್ಷೆ ಮಾಡುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಲಾಗಿದೆ. ಈ ಆಧಿಕಾರದನ್ವಯ ಶಾಸಕೀಯ ಸೇವೆಯು ಕೈಗೊಂಡ ನಿರ್ಣಯವನ್ನು ನ್ಯಾಯಾಂಗವು ಬದಲಾಯಿಸಬಹುದು. ಈ ಅಧಿಕಾರವೂ ಕಾರ್ಯಾಂಗ ಮತ್ತು ನ್ಯಾಯಾಂಗ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ. ಭಾರತದ ಮಾಜಿ ನ್ಯಾಯಾಧೀಶ ಕೆ. ಜಿ. ಬಾಲಕೃಷ್ಣನ್ ಅವರು ಈ ಕುರಿತು ಹೀಗೆ ಹೇಳಿದ್ದಾರೆ, ‘‘ಕಾಯ್ದೆಗಳ ಸಾಂವಿಧಾನಿಕ ಸಿಂಧುತ್ವ ಮತ್ತು ಕಾರ್ಯಾಂಗದ ನಿರ್ಣಯದ ಸಮೀಕ್ಷೆ ಮಾಡುವ ಜ್ಯೂಡಿಶಿಯಲ್ ರಿವ್ಯೆ ಅನ್ವಯ ನ್ಯಾಯಾಂಗಕ್ಕೆ ನೀಡಿರುವ ಅಧಿಕಾರದಿಂದಾಗಿ ನ್ಯಾಯಾಧೀಶ ಹಾಗೂ ಶಾಸಕಾಂಗ ಮತ್ತು ಕಾರ್ಯಾಂಗ ಇವುಗಳಲ್ಲಿ ವೈಷಮ್ಯ ಬೆಳೆಯುತ್ತದೆ. ಈ ವೈಷಮ್ಯ ಬೆಳೆಯುವುದು ಸ್ವಾಭಾವಿಕವೇ ಆಗಿದ್ದು, ಒಂದಷ್ಟು ಮಟ್ಟಿಗೆ ಅದು ಸಮಂಜಸವೇ ಆಗಿದೆ.’’
ನಮ್ಮಂತಹ ಸಾಮಾನ್ಯ ಜನರಿಗೆ ಕೆಲವೊಮ್ಮೆ ಪ್ರಶ್ನೆ ಏಳುವುದುಂಟು, ಕಾರ್ಯಾಂಗದ ವಿರುದ್ಧ ನ್ಯಾಯಾಲಯಕ್ಕೆ ಹೋಗಬಹುದು, ಆದರೆ ನ್ಯಾಯಾಂಗದ ವಿರುದ್ಧ ಎಲ್ಲಿಗೆ ಹೋಗಲಿ ? ಕೆಳಗಿನ ನ್ಯಾಯಾಲಯದಿಂದ ಮೇಲಿನ ನ್ಯಾಯಾಲಯಕ್ಕೂ, ಕೊನೆಗೆ ಸರ್ವೋಚ್ಚ ನ್ಯಾಯಾಲಯಕ್ಕೂ ಹೋಗಬಹುದು. ಆದರೆ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಎಲ್ಲಿಗೆ ಹೋಗಲಿ ? ಸರ್ವೋಚ್ಚ ನ್ಯಾಯಾಲಯದ ತೀರ್ಪು ಅಂತಿಮವಾಗಿದ್ದು ಅದರ ವಿರುದ್ಧ ದೂರು ನೀಡಲು, ನ್ಯಾಯ ಕೇಳಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸಾಮಾನ್ಯ ವ್ಯಕ್ತಿ ಏನೂ ಮಾಡಲು ಸಾಧ್ಯವಿಲ್ಲ, ಆಗಿದ್ದ ತೀರ್ಪನ್ನು ಮಾನ್ಯಮಾಡದೆ ಮತ್ತೇನೂ ಉಪಾಯವಿಲ್ಲ. ಆದರೆ ಸಂಸತ್ ಹಾಗೆ ಮಾಡಲು ಸಾಧ್ಯವಿಲ್ಲ. ಸಂಸತ್ ಸಾರ್ವಭೌಮವೆಂದು ಸಂಸತ್ ಹೇಳುತ್ತದೆ; ಸಾರ್ವಭೌಮ ಜನತೆಯು ಅದನ್ನು ಚುನಾಯಿಸಿದೆ. ತನ್ನ ಕಾರ್ಯಕ್ಕಾಗಿ ಅದು ಜನತೆಗೆ ಹೊಣೆಯಾಗಿದೆ. ಜನಹಿತದ ಕಾರ್ಯ ಮಾಡುವುದು, ಕಾಯ್ದೆ ಮಾಡುವುದು ಅದರ ಕೆಲಸ. ಸಂಸತ್ತಿನ ನಿಲುವು ಹೀಗಿದ್ದು, ಸಂವಿಧಾನದ ವಿಧಿಗಳ ಆಧಾರದ ಮೇಲೆ ನ್ಯಾಯಾಲಯಗಳು ತೀರ್ಪು ನೀಡುತ್ತವೆ, ಆ ವಿಧಿಗಳಲ್ಲಿ ತಿದ್ದುಪಡಿ ಮಾಡಲಾಗುತ್ತದೆ. ನಮ್ಮ ಸಂವಿಧಾನದಲ್ಲಿ 115ಕ್ಕೂ ಹೆಚ್ಚು ತಿದ್ದುಪಡಿಗಳಾಗಿವೆ. ಇದನ್ನು ಅಧ್ಯಯನ ಮಾಡಿದರೆ ಒಂದು ಸಂಗತಿ ಗೊತ್ತಾಗುತ್ತದೆ: ಇದರಲ್ಲಿ ಬಹುಪಾಲು ತಿದ್ದುಪಡಿಗಳು ನ್ಯಾಯಾಲಯಗಳು ನೀಡಿದ ತೀರ್ಪುಗಳಿಗೆ ಸಂಬಂಧಿಸಿವೆ. ಅವುಗಳಲ್ಲಿ ಅನೇಕ ತಿದ್ದುಪಡಿಗಳು ಮೀಸಲಾತಿ ಸ್ಥಾನಗಳಿಗೂ, ಸಂಪತ್ತಿನ ಮೂಲಭೂತ ಅಧಿಕಾರಗಳಿಗೂ ಸಂಬಂಧಿಸಿವೆ.
ನ್ಯಾಯಾಂಗ ಮತ್ತು ಕಾರ್ಯಾಂಗ ನಡುವಿನ ಸಂಘರ್ಷಕ್ಕೆ, ವಿಷಯಗಳ ಕಡೆ ನೋಡುವ ದೃಷ್ಟಿಕೋನವು ಕಾರಣವೆಂದು ಅನಿಸುತ್ತದೆ. ಸಂವಿಧಾನದ ವಿಧಿಗಳಿಗೆ ಕೇವಲ ಶಾಬ್ದಿಕ ಅರ್ಥ ಹಚ್ಚಿ ಏನೂ ಆಗದು, ಸಂವಿಧಾನದ ವಿಧಿಗಳಿಗೆ ಕಾಲೋಚಿತ ಅರ್ಥ ಹಚ್ಚಬೇಕಾಗುತ್ತದೆ. ಜನರ ಆಕಾಂಕ್ಷೆಗಳೇನು, ಅವರ ಅವಶ್ಯಕತೆಗಳೇನು, ಜನಮತದ ಗಾಳಿ ಯಾವ ದಿಕ್ಕಿಗೆ ಬೀಸುತ್ತಿದೆ, ಯಾವ ನವೀನ ಪರಿಕಲ್ಪನೆಗಳು ಸಮಾಜದಲ್ಲಿ ಚಿಗುರುತ್ತಿವೆ, ರಾಜಕೀಯ ರಚನೆಗಳಲ್ಲಿ ಯಾವ ಬದಲಾವಣೆಗಳಾಗುತ್ತಿವೆ ಇತ್ಯಾದಿ ಎಲ್ಲ ವಿಷಯಗಳ ಕುರಿತು ಆಮೂಲಾಗ್ರ ಆಲೋಚಿಸಿ ತೀರ್ಮಾನಿಸಬೇಕಾಗಿದೆ. ಕೇವಲ ಶಬ್ದಾರ್ಥಕ್ಕೇ ಅಂಟಿಕೊಂಡಿದ್ದರೆ ಶಬ್ದ ಪ್ರಾಮಾಣ್ಯವಾದ ಉದ್ಭವಿಸೀತು. ಅದು ಸಮಾಜಕ್ಕೆ ಹಿತಕಾರಿಯಲ್ಲ. ಹಾಗೆಂದೇ ಅರುಣ್ ಜೇಟ್ಲಿಯವರು ಹೇಳಿದ್ದರಲ್ಲೇನೋ ಅರ್ಥವಿದೆಯೆಂದು ಅನಿಸುತ್ತದೆ. ಅಧಿಕಾರದ ತ್ರಿಭಾಜನದಿಂದ ನಿರಂಕುಶ ಅಧಿಕಾರಕ್ಕೆ ಅಂಕುಶ ಬರುತ್ತದೆ ಹಾಗೂ ಈ ಅಧಿಕಾರವು ಜನರಿಗೆ ಸುಖಕಾರಕವಾಗಬೇಕಿದ್ದರೆ, ಅಧಿಕಾರದ ಮೂರೂ ಅಂಗಗಳು ಲಕ್ಷ್ಮಣರೇಖೆಯನ್ನು ಪಾಲಿಸಬೇಕಾಗಿದೆ.

   

Leave a Reply