ವಾರಕರಿ ಸಂತರ ಸಮಾವೇಶ

ಉತ್ತರ ಕನ್ನಡ - 0 Comment
Issue Date : 11.12.2013


ಶಿರಸಿ: ಧಾರ್ಮಿಕ ಮನೋಭಾವದ ಜೊತೆಗೆ ವ್ಯಕ್ತಿಯು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದರೆ ಮಾತ್ರ ಧರ್ಮದ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅಖಿಲ ಭಾರತ ಶ್ರದ್ಧಾ ಜಾಗರಣ ಪ್ರಮುಖ ದೆಹಲಿಯ ಸುರೇಶ ಕುಲಕರ್ಣಿ ಅಭಿಪ್ರಾಯಪಟ್ಟರು.
ತಾಲೂಕಿನ ಸ್ವರ್ಣವಲ್ಲಿ ಮಠದಲ್ಲಿ ಇತ್ತೀಚೆಗೆ ವನವಾಸಿ ಕಲ್ಯಾಣ ಆಶ್ರಯದಲ್ಲಿ ನಡೆದ ಪಂಢರಪುರ ವಾರಕರಿ ಸಂತರ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 
ದೇಶದಲ್ಲಿ ಅನ್ಯ ಧರ್ಮೀಯರು ಪ್ರಭುತ್ವ ಸಾಧಿಸುತ್ತಿದ್ದು, ಹಿಂದೂ ಧರ್ಮೀಯರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಧರ್ಮ ಸಂಘಟನೆ ಪ್ರತಿಯೊಬ್ಬರಿಂದ ಜಾಗೃತವಾಗಬೇಕಿದೆ ಎಂದರು. ಹಿಂದೂ ಧರ್ಮದ ಹಬ್ಬ, ಜಾತ್ರೆಗಳಲ್ಲಿ ಇತರ ಧರ್ಮೀಯರು ಪಾಲ್ಗೊಳ್ಳುವುದಿಲ್ಲ ಎಂದ ಅವರು, ಧರ್ಮ ಉಳಿಸಲು ಭಕ್ತಿ, ಯುಕ್ತಿ ಹಾಗೂ ಶಕ್ತಿ ಪ್ರಯೋಗ ಆಗಬೇಕು. ಆ ಮೂಲಕ ಸಾಧನೆ ಮಾರ್ಗದಲ್ಲಿ ಸಾಗಬೇಕು. ಪ್ರತಿಯೊಬ್ಬ ಹಿಂದುವೂ ಭಜನೆ ಮಾಡಬೇಕು ಎಂದು ಹೇಳಿದರು. ಸ್ವರ್ಣವಲ್ಲಿ ಶ್ರೀ ಸಾನಿಧ್ಯ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಸ್ವರ್ಣವಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಆಶೀರ್ವದಿಸುತ್ತಾ, ಪ್ರಸ್ತುತ ಆಧುನಿಕ ಶಿಕ್ಷಣ ಪಡೆದವರು ಹಾಗೂ ಆಧುನಿಕತೆಯ ಸೆಳೆತಕ್ಕೆ ಸಿಕ್ಕವರು ಹಿಂದೂ ಧರ್ಮ, ಜನಾಂಗದ ಪ್ರಾಚೀನ ರೂಢಿ, ಸಂಪ್ರದಾಯ ಹಾಗೂ ಹಳೆಯ ಆಚರಣೆಗಳನ್ನು ಬಿಡುತ್ತಿದ್ದಾರೆ. ಇಂದು ಮುಂದುವರಿದ ಸಮಾಜದ ಜನರೇ ಹೆಚ್ಚಾಗಿ ಧರ್ಮದ ಮಾರ್ಗದಿಂದ ದೂರವಾಗುತ್ತಿದ್ದಾರೆ. ಇಂತಹ ಬೆಳವಣಿಗೆ ನಿಲ್ಲಬೇಕು ಎಂದರು. ಆಧುನಿಕತೆಗೆ ಒಗ್ಗಿಕೊಂಡರೂ ತಮ್ಮತನ ಉಳಿಸಿಕೊಂಡು ಸಾಗುವುದು ನಿಜವಾದ ಸುಧಾರಣೆ ಎಂದು ನುಡಿದರು.ವೇದಿಕೆಯಲ್ಲಿ ವನವಾಸಿ ಕಲ್ಯಾಣದ ರಾಜ್ಯ ಪ್ರಕಲ್ಪ ಪ್ರಮುಖ ಶ್ರೀಪಾದ, ಸಂತ ವಿಠ್ಠಲ ರೋಮಣ್ಣ ಮಳಿಕ, ವನವಾಸಿ ಕಲ್ಯಾಣ ಶಿರಸಿ ಅಧ್ಯಕ್ಷ ಯಮ್ಮು ಠಕ್ಕು ವರಕ್, ವಾರಕರಿ ಸಂಪ್ರದಾಯದ ಹಿರಿಯ ಮಾರ್ಗದರ್ಶಕ ಭಾಗು ಮಾಗವಾಡ, ಸಂಚಾಲಕರಾದ ರಾಮು ಕಳ್ಳಿಕಾರೆ, ರಾಮು ಚಳಗೇರಿ ಹಾಗೂ ಅಬ್ಬು ಖಾರೇವಾಡ ಉಪಸ್ಥಿತರಿದ್ದರು.

   

Leave a Reply