ವಿಜ್ಞಾನಿಯ ವಿನೋದ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 23.07.2016

ಪುಟಾಣಿಗಳೇ, ನಿಮಗೆ ಗೊತ್ತೇ, ಲೋಕದ ಶ್ರೇಷ್ಠ ವಿಜ್ಞಾನಿಗಳ ಸ್ವಭಾವವೇ ವಿಚಿತ್ರ. ಅದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇ ಆಗಿರುತ್ತದೆ. ಐನ್‌ಸ್ಟೀನ್ ನ ಬಗೆಗಿನ ಇಂತಹ ವಿಚಿತ್ರ, ವಿನೋದದ ಪ್ರಸಂಗವೊಂದನ್ನು ನೋಡೋಣ.
ಒಮ್ಮೆ ಲಂಡನ್ ವಿಜ್ಞಾನ ಭವನದಲ್ಲಿ ಐನ್‌ಸ್ಟೀನ್‌ರವರ ಭಾಷಣವು ಇದ್ದಿತು. ಅದಕ್ಕಾಗಿ ಅವರು ಮುಂಜಾನೆಯ ನಸುಕಿನಲ್ಲೇ ಎದ್ದು ಕೊರೆಯುವ ಚಳಿಯಲ್ಲಿ ಹೊರಟರು. ಕುದುರೆ ಕೋಚ್ ಸ್ಟಾಂಡಿಗೆ ಬಂದರು. ಚಾಲಕನು ಅತ್ಯಂತ ವಿಧೇಯತೆಯಿಂದ ಬರಮಾಡಿಕೊಂಡು ಗಾಡಿಯ ಒಳಗೆ ಆಸನ ಸಿದ್ಧಪಡಿಸಿ ಕುಳಿತುಕೊಳ್ಳುವಂತೆ ಹೇಳಿದನು. ಚಾಲಕನ ಉಡುಪನ್ನು ನೋಡಿ ಐನ್‌ಸ್ಟೀನರಿಗೆ ಅದೇಕೋ ಆಸೆಯಾಯಿತು. ತಾನೇ ಕೋಚ್ ಚಾಲಕನಾದರೆ ಎಂಬ ವಿಚಿತ್ರ ಆಲೋಚನೆಯೂ ಮನಸ್ಸಿನಲ್ಲಿ ಹೊಳೆದುಹೋಯಿತು. ಕೂಡಲೇ ಅಯ್ಯಾ ಕೋಚ್‌ಮ್ಯಾನ್ ಈಗ ನಾನೇ ಕೋಚ್ ಚಲಾಯಿಸುತ್ತೇನೆ. ನಿನ್ನ ಪೋಷಾಕನ್ನು ನನಗೆ ಕೊಡು ಎಂದರು. ಏನೂ ಮಾಡಲು ತೋರದೆ ಐನ್‌ಸ್ಟೀನ್ ಹೇಳಿದಂತೆ ತಮ್ಮ ನಿಲುವಂಗಿ ಟೋಪಿಯನ್ನು ಅವರಿಗೆ ತೊಡಿಸಿದನು. ಐನ್‌ಸ್ಟೀನ್‌ರು ತಮ್ಮ ಹ್ಯಾಟ್, ಕೋಟುಗಳನ್ನು, ವಾಕಿಂಗ್ ಸ್ಟಿಕ್‌ನ್ನು ಅವನಿಗೆ ಹಾಕಿ ನೀನು ಪ್ರಯಾಣಿಕನಂತೆ ಹಿಂದಿನ ಸೀಟ್‌ನಲ್ಲಿ ಕುಳಿತುಕೋ ಎಂದು ಹೇಳುತ್ತಾ ಅವನ ಕೈಯಲ್ಲಿ ಚಾವಟಿಯನ್ನು ತೆಗೆದುಕೊಂಡು ಕೋಚ್‌ಮ್ಯಾನ್ ಜಾಗದಲ್ಲಿ ಕುಳಿತೇಬಿಟ್ಟರು. ಅಷ್ಟರಲ್ಲಿ ಮತ್ತೊಬ್ಬ ಪ್ರಯಾಣಿಕನು ಬಂದು ಕುಳಿತನು. ಪಕ್ಕದಲ್ಲಿ ಕುಳಿತಿದ್ದವರು ಐನ್‌ಸ್ಟೀನ್‌ರೆಂದೇ ಭ್ರಮಿಸಿದನು. (ಚಾಲಕನು ಐನ್‌ಸ್ಟೀನರ ಲಾಂಗ್ ಕೋಟು, ಹ್ಯಾಟ್‌ಗಳನ್ನು ವಾಕಿಂಗ್ ಸ್ಟಿಕ್ ಧರಿಸಿದ್ದರಿಂದ). ಮುಂದಿನ ಮಜಾ ನೋಡಿ…… ಸಹ ಪ್ರಯಾಣಿಕನೂ ಸಹ ಐನ್‌ಸ್ಟಿನರ ಭಾಷಣ ಕೇಳುವುದಕ್ಕಾಗಿಯೇ ಹೋಗುತ್ತಿದ್ದನು. ಐನ್‌ಸ್ಟೀನ್‌ರೇ ಪಕ್ಕದಲ್ಲಿ ಕುಳಿತಿದ್ದಕ್ಕೆ ಹೆಮ್ಮೆಯೂ ಆಯಿತು. ಗಾಡಿ ಹೊರಟಿತು.
ಸಹ ಪ್ರಯಾಣಿಕನೂ ವಿಜ್ಞಾನದ ಅದರಲ್ಲೂ ಭೌತಶಾಸ್ತ್ರದಲ್ಲಿ ಅಧಿಕ ಆಸಕ್ತಿಯುಳ್ಳವನಾಗಿದ್ದನು. ಅವನಿಗೆ ಗುರುತ್ವಾಕರ್ಷಣ ತತ್ವಕ್ಕೆ ಸಂಬಂಧಪಟ್ಟ ಅನೇಕ ಪ್ರಶ್ನೆಗಳಿಗೆ ಉತ್ತರ ಬೇಕಾಗಿದ್ದಿತು. ಇದೇ ಸುಸಂದರ್ಭವನ್ನು ಉಪಯೋಗಿಸಿಕೊಂಡು ಅವನು ಪಕ್ಕದಲ್ಲಿ ಕುಳಿತಿದ್ದ ವೇಷಧಾರಿ ಐನ್‌ಸ್ಟೀನರನ್ನೇ ಪ್ರಶ್ನೆಗಳನ್ನು ಕೆೇಳಲಾರಂಭಿಸಿದನು. ಈಗ ಪೀಕಲಾಟ ಶುರುವಾಯಿತು. ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿದೆ. ಆದರೆ ಈ ನಕಲಿ ಐನ್‌ಸ್ಟೀನ್ ಸಮಯಕ್ಕೆ ಸರಿಯಾಗಿ ಜಾಣತನದಿಂದ ‘‘ಅಯ್ಯೋ ಈ ಪ್ರಶ್ನೆಗಳಿಗೆಲ್ಲಾ ನಮ್ಮ ಕೋಚ್‌ಮ್ಯಾನ್‌ನೇ ಉತ್ತರ ಕೊಡುತ್ತಾನೆ ಕೇಳಿ ಅವನನ್ನೇ’’ ಎಂದು ಹೇಳುತ್ತಾ ಅಯ್ಯಾ ಕೋಚ್‌ಮ್ಯಾನ್ ಇವರ ಪ್ರಶ್ನೆಗಳಿಗೆ ಉತ್ತರ ಹೇಳಯ್ಯಾ….ಕೇಳಿ ಸರ್…ಎಂದು ಹೇಳಿ ಜಾರಿಕೊಂಡನು. ಸಹ ಪ್ರಯಾಣಿಕನು ಪ್ರಶ್ನೆಗಳನ್ನು ಕೇಳುತ್ತಾ ಹೋದನು. ಅದಕ್ಕೆ ಕೋಚ್‌ಮ್ಯಾನ್ ಪಟಪಟನೆ ಉತ್ತರ ಹೇಳುತ್ತಾ ಹೋದನು. ಉತ್ತರಗಳಿಂದ ಸಹಪ್ರಯಾಣಿಕನು ತೃಪ್ತಿ ಹೊಂದಿದನು. ಜೊತೆಯಲ್ಲೇ ಆಶ್ಚರ್ಯವೂ ಆಯಿತು. ಕೇವಲ ಕೋಚ್‌ಮ್ಯಾನ್‌ನ ಜ್ಞಾನ ಎಷ್ಟು ಆಳವಾಗಿದೆಯಲ್ಲಾ ಎಂದು ಯೋಚಿಸುವಷ್ಟರಲ್ಲಿ ಇಳಿಯಬೇಕಾದ ಸ್ಥಳ ಬಂದಿತು. ’’ಒಟ್ಟಿಗೆ ಹೋಗೋಣವೇ? ಬನ್ನಿ’’ ಎಂದು ಕರೆದಾಗ ಐನ್‌ಸ್ಟೀನ್ ’’ಇಲ್ಲಾ ನಾನು ನಂತರ ಬರುತ್ತೇನೆ. ನೀವು ಹೋಗಿ’’ ಎಂದು ಹೇಳಿ ಅವನನ್ನು ಬೀಳ್ಕೊಟ್ಟನು.
ದಾರಿಯಲ್ಲಿ ಮಳೆ ಬರುತ್ತಿದ್ದಿತು. ಸಹಪ್ರಯಾಣಿಕನು ತಮ್ಮ ಕೊಡೆಯನ್ನು ಕೋಚ್‌ನಲ್ಲೇ ಮರೆತು ಬಂದಿದ್ದನು. ಅದನ್ನು ತೆಗೆದುಕೊಂಡು ಬರಲು ಕೋಚ್ ಬಳಿಗೆ ಬಂದನು. ಐನ್‌ಸ್ಟೀನ್ ತಮ್ಮ ಕೋಚ್ ಚಾಲಕನಿಗೂ ವಿಜ್ಞಾನದ ವಿಷಯದಲ್ಲಿ ಎಂತಹ ರೀತಿಯಲ್ಲಿ ತರಬೇತಿ ಕೊಟ್ಟಿದ್ದಾರಲ್ಲಾ ಎಂಬ ಗುಂಗಿ ಹುಳು ಕೊರೆಯುತ್ತಲೇ ಇದ್ದಿತು. ಕೊಡೆಯನ್ನು ತೆಗೆದುಕೊಳ್ಳಲು ಕೋಚ್ ಒಳಗೆ ಬಂದಾಗ ಅವನಿಗೆ ಮಹತ್ತರವಾದ ಆಶ್ಚರ್ಯದ ದೃಶ್ಯ ಕಾದಿತ್ತು. ಅದೇನೆಂದರೆ ಕೋಚ್‌ಮ್ಯಾನ್ ಮತ್ತು ಐನ್‌ಸ್ಟೀನ್ ಇಬ್ಬರೂ ತಮ್ಮ ತಮ್ಮ ಉಡುಪುಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ….. ಇದು ಹೀಗೋ… ವಿಷಯ…. ಎಂದುಕೊಳ್ಳುತ್ತಾ ಮುಸಿ ಮುಸಿ ನಗುತ್ತಾ ‘ಬನ್ನಿ… ವಿಜ್ಞಾನದ ಭಾಷಣಕ್ಕೆ ಹೋಗೋಣ’ ಎಂದನಂತೆ.

   

Leave a Reply