ವಿದೇಶಿ ಮಹಿಳೆಯಿಂದ ಭಾರತೀಯ ಸಂಸ್ಕೃತ- ಸಂಸ್ಕೃತಿಯ ಪ್ರಚಾರ

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ.

ಹುಟ್ಟಿದ್ದು ಮೆಕ್ಸಿಕೋ, ಓದಿದ್ದು ಆರ್ಕಿಟೆಕ್. ಆದರೆ ಆರಿಸಿದ್ದು ಮಾತ್ರ ಭಾರತವನ್ನು, ಭಾರತದ ಭಾಷೆ ಸಂಸ್ಕೃತವನ್ನು ಹೌದು ನಾನು ಈಗ ಹೇಳುತ್ತಿರುವುದು ಒಬ್ಬ ವಿದೇಶಿಯ ಮಹಿಳೆಯ ಬಗ್ಗೆ. ಭಾರತದಲ್ಲಿ ಹುಟ್ಟಿ ನಮ್ಮ ಸಂಸ್ಕೃತ-ಸಂಸ್ಕೃತಿಯನ್ನು ಮರೆತಿರುವ ಜನರಿಗೆ ಈ ವಿದೇಶಿ ಮಹಿಳೆ- ‘ವಾನೇಸಾ ಅಸೆವೇದೋ’ ಮನದಾಳದ ಮಾತು ಪ್ರೇರಣೆ ಕೊಡುವುದರಲ್ಲಿ ಸಂಶಯವೇ ಇಲ್ಲ.

1980 ಜುಲೈ 5ರಂದು ಜನ್ಮ ತಾಳಿದ ವಾನೇಸಾ ಬಾಲ್ಯದಿಂದಲೇ ಓದಿನಲ್ಲಿ, ಆಟದಲ್ಲಿ ಎಲ್ಲದರಲ್ಲಿಯೂ ಮುಂದಿದ್ದಳು. ತಂದೆ-ತಾಯಿಯ ಒಬ್ಬಳೇ ಮುದ್ದಿನ ಮಗಳಾಗಿ ಇದ್ದ ವಾನೇಸಾ ತಂದೆ-ತಾಯಿಯ ಇಚ್ಛೆಯಂತೆ 2005ರಲ್ಲಿ ಆರ್ಕಿಟೆಕ್ಟರ್ ಪದವಿಯನ್ನು ಮುಗಿಸಿ ಮೆಕ್ಸಿಕೋದ ಒಂದು ಪ್ರೈವೇಟ್ ಕಂಪನಿಯಲ್ಲಿ ಆರ್ಕಿಟೆಕ್ಟ ಆಗಿ ಕೆಲಸಕ್ಕೆ ಸೇರಿದರು. ಕೆಲಸ ಆರಂಭಿಸಿದ ಕೆಲವೇ ದಿನಗಳಲ್ಲಿ ಸರ್ಕಾರಿ ಕೆಲಸ ಸಿಕ್ಕಿ, ತಂದೆ-ತಾಯಿಯರು ಆಸೆಪಟ್ಟಂತೆ ಹಣವನ್ನು ಗಳಿಸಲು ಶುರುಮಾಡಿದರು. ಆದರೆ ದೈವಿಚ್ಛೆಯೇ ಬೇರೆಯದಾಗಿತ್ತು. 2007ರಲ್ಲಿ ಮೆಕ್ಸಿಕೋ ದೇಶ ವಾನೇಸಾ ರವರನ್ನು 2 ತಿಂಗಳು ಭಾರತದ ವಾಸ್ತುಶಿಲ್ಪವನ್ನು ನೋಡಿ ಬರಲು ಭಾರತಕ್ಕೆ ಕಳುಹಿಸಿತು. ವಾನೇಸಾ ಭಾರತದ ಅಜಂತ, ಎಲ್ಲೋರಾ, ಅಮೃತಸರ್, ಹಂಪಿ, ಪಾಂಡಿಚೇರಿ, ಛಂಡೀಗಡ್ ಪ್ರದೇಶಗಳ ವಾಸ್ತುಶಿಲ್ಪವನ್ನು ನೋಡಿ ನಿಬ್ಬೆರಗಾದರು ಹಾಗೂ ಭಾರತದ ವಾಸ್ತುಶಿಲ್ಪ ಶಾಸ್ತ್ರವನ್ನು ಅಧ್ಯಯನ ಮಾಡಬೇಕೆಂದುಕೊಂಡರು. ಅಷ್ಟೇ ಅಲ್ಲ, ಭಾರತದ ಪವಿತ್ರ ಗಂಗಾನದಿ ಎಲ್ಲೆಲ್ಲಿ ಹರಿಯುತ್ತದೆಯೋ ಅಲ್ಲೆಲ್ಲಾ ಪರಿಭ್ರಮಣ ಮಾಡಿ ಭಾರತೀಯ ಸಂಸ್ಕೃತಿಗೆ ಶರಣಾದರು.

 ಭಾರತದ ಪ್ರವಾಸವನ್ನು ಮುಗಿಸಿ ಮತ್ತೆ ಮೆಕ್ಸಿಕೋಗೆ ಹೋದ ವಾನೇಸಾ ಕೆಲವು ದಿನಗಳು ಕೆಲಸಮಾಡಿ ಭಾರತದಲ್ಲೇ ನೆಲೆಸಬೇಕೆಂಬ ಇಚ್ಛೆಯಿಂದ ತನ್ನ ಸರ್ಕಾರಿ ಕೆಲಸಕ್ಕೆ ರಾಜಿನಾಮೆ ನೀಡಿ 2009 ಜನವರಿಯಲ್ಲಿ ಭಾರತಕ್ಕೆ ಬಂದು ಭಾರತ ಪ್ರವಾಸ ಕೈಗೊಂಡರು. ಹಾಗೆಯೇ ಭಾರತದಲ್ಲಿ ಕೆಲಸವನ್ನು ಹುಡುಕಲು ಪ್ರಾರಂಭಿಸಿದರು. ಆದರೆ ಭಾರತದಲ್ಲಿ ಎಲ್ಲೂ ಕೆಲಸ ಸಿಗದಿರುವ ಕಾರಣ 2010ರಲ್ಲಿ ಕೆನೆಡಾ ದೇಶಕ್ಕೆ ಹೋಗಿ ಕೆಲಸಕ್ಕೆ ಸೇರಿದರು. ಕೆನೆಡಾದಲ್ಲಿದ್ದರೂ ಭಾರತದ ವಾಸ್ತುಶಿಲ್ಪದ ಬಗ್ಗೆ ಅಧ್ಯಯನ ಮಾಡಲು ಶುರುಮಾಡಿದ್ದರು. ವಾನೇಸಾ 2013ರಲ್ಲಿ ಕೆನಡಾದ MCGell ಯುನಿರ್ವಸಿಟಿಯಲ್ಲಿ ಸಂಸ್ಕೃತ ಸಮ್ಮೇಳನ ನಡೆಯುತ್ತಿರುವ ವಿಷಯ ಗೊತ್ತಾಗಿ ಆ ಸಮ್ಮೇಳನದಲ್ಲಿ ಭಾಗವಹಿಸಿದರು. ಆದರೆ ಆ ಸಮ್ಮೇಳನ ಬರೀ ಸಂಸ್ಕೃತದಲ್ಲಿ ನಡೆದ್ದರಿಂದ ವಾನೇಸಾಗೆ ಏನೂ ಅರ್ಥವಾಗಲಿಲ್ಲ. ಸಂಸ್ಕೃತವೆಂದರೆ ಬರಿ ಶ್ಲೋಕಗಳು, ದೇವಸ್ಥಾನಗಳಲ್ಲಿ ಮಾತ್ರ ಬಳಸುತ್ತಾರೆ ಎಂದು ತಿಳಿದಿದ್ದ ವಾನೇಸಾಗೆ ಅಂದು ಆ ಸಮ್ಮೇಳನದಲ್ಲಿ ಸಂಸ್ಕೃತದಲ್ಲಿಯೂ ಮಾತನಾಡಬಹುದೆಂದು ತಿಳಿಯಿತು. ಮತ್ತೆ 2014ರಲ್ಲಿ ಕೆನೆಡಾದಲ್ಲಿ ಸಂಸ್ಕೃತ ಸಮ್ಮೇಳನ ಜರುಗಿತು, ಆ ಸಮ್ಮೇಳನದಲ್ಲಿ ‘ಸಂಸ್ಕೃತ ಭಾರತೀ’ಯ ಕಾರ್ಯಕರ್ತರ ಪರಿಚಯವಾಗಿ ನಾನೂ ಕೂಡ ಸಂಸ್ಕೃತ ಕಲಿಯಬಹುದೆಂಬ ವಿಶ್ವಾಸ ಸಿಕ್ಕಿ ಅವರುಗಳ ಸಹಾಯದಿಂದ ಸಂಸ್ಕೃತವನ್ನು ಕಲಿಯಲು ಆರಂಭಿಸಿದರು.

 2016ರಲ್ಲಿ ಕರ್ನಾಟಕದಲ್ಲಿ ನಡೆದ ಸಂಸ್ಕೃತ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿ ಸಂಸ್ಕೃತವನ್ನು ಹೊಸಬರಿಗೆ ಹೇಗೆ ಕಲಿಸಬೇಕೆಂಬ ವಿಧಾನವನ್ನು ತಿಳಿದು, ಈಗ ಕೆನೆಡಾ, ಅಮೆರಿಕಾ ಮುಂತಾದ ದೇಶಗಳಲ್ಲಿ ವಿದೇಶಿಯರಿಗೂ ಹಾಗೂ ವಿದೇಶದಲ್ಲಿರುವ ಭಾರತೀಯರಿಗೂ ಸಂಸ್ಕೃತವನ್ನು ಕಲಿಸಿಕೊಡುತ್ತಿದ್ದಾರೆ.

 ಒಟ್ಟಾರೆ ಅವರನ್ನು ‘ನೀವೇಕೆ ಸಂಸ್ಕೃತದ ಕಡೆ, ಭಾರತೀಯ ಸಂಸ್ಕೃತಿಯ ಕಡೆ ಬಂದಿರಿ?’ ಎಂದರೆ – ಅವರು ಕೊಡುವ ಉತ್ತರ : ಭಾರತದ ಪ್ರತಿಯೊಂದು ಸಂಸ್ಕೃತಿಗೂ ವೈಜ್ಞಾನಿಕ ಕಾರಣವಿದೆ. ಈ ಸಂಸ್ಕೃತಿಯ ಮೂಲ ಸಂಸ್ಕೃತ. ಸಂಸ್ಕೃತದಲ್ಲೇ ಈ ಭಾರತದ ವೈಶಿಷ್ಟ್ಯತೆ ಅಡಕವಾಗಿದೆ. ನಾನು ಭಾರತದ ಎಲ್ಲಾ ರಾಜ್ಯಗಳಿಗೂ ಹೋಗಿದ್ದೇನೆ. ಎಲ್ಲೂ ಕೂಡ ಜನ ನನ್ನನ್ನು ಬೇರೆಯವರ ತರಹ ನೋಡಿಲ್ಲ. ವಸುಧೈವ ಕುಟುಂಬಕಮ್ ಅಂತ ಕೇಳಿದ್ದೆ, ಆದರೆ ಅದರ ಅನುಭವ ಆಗಿದ್ದು ಭಾರತದಲ್ಲೇ. ನನಗೆ ಭಾರತದಲ್ಲಿ ವಾಸಿಸಲು ಬಹಳ ಇಷ್ಟ. ಈಗ ನಾನು ಸಂಸ್ಕೃತವನ್ನು ‘ಸಂಸ್ಕೃತದ ವ್ಯಾಕರಣವನ್ನು ಅಧ್ಯಯನಮಾಡಿ ಭಾರತದ ವಾಸ್ತುಶಿಲ್ಪಶಾಸ್ತ್ರವನ್ನು ತಿಳಿದುಕೊಳ್ಳಬೇಕೆಂದಿದ್ದೇನೆ’ ಎಂದು.

 ಒಟ್ಟಿನಲ್ಲಿ ಹಿತ್ತಲ ಗಿಡ ಮದ್ದಲ್ಲ ಎನ್ನುವವರು ಈ ವಿದೇಶಿ ಮಹಿಳೆಯ ಮಾತನ್ನು ಒಮ್ಮೆ ಕೇಳಿದರೆ ಸಾಕೆನಿಸುತ್ತದೆ.

 

   

Leave a Reply