ವಿದ್ಯಾವಂತರಿಂದಲೇ ಭ್ರಷ್ಟಾಚಾರ: ಮಂಗೇಶ್ ಭೇಂಡೆ

ಚಿಕ್ಕಮಂಗಳೂರು - 0 Comment
Issue Date : 28.04.2014

ಚಿಕ್ಕಮಗಳೂರು: ದೇಶದಲ್ಲಿ ಭ್ರಷ್ಟಾಚಾರದಲ್ಲಿ ನಿರತರಾಗಿರುವವರು ವಿದ್ಯಾವಂತರೇ ಹೊರತು ಅಶಿಕ್ಷಿತರಲ್ಲ. ಮಾನವೀಯ ಮೌಲ್ಯಗಳನ್ನು ಬುದ್ಧಿವಂತರು ಕಳೆದುಕೊಳ್ಳುತ್ತಿದ್ದಾರೆ. ಭೂಮಿಯನ್ನು ನಂಬಿ ಸಾಧನೆ ಮಾಡಿದವರು ಅತ್ಯಂತ ಶ್ರೇಷ್ಠರಾಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಸಹ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ತಿಳಿಸಿದರು.

ಇಲ್ಲಿನ ಆದಿಚುಂಚನಗಿರಿ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ತೀರ್ಥಹಳ್ಳಿಯ ಪುರುಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ ವತಿಯಿಂದ ಏರ್ಪಡಿಸಲಾಗಿದ್ದ ಪುರುಷೋತ್ತಮ ಸನ್ಮಾನ ಕಾರ್ಯಕ್ರಮದಲ್ಲಿ ಸಾಧಕ – ಸಾಧನೆ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಯುವಕರು ದೇಶದ ಭವಿಷ್ಯದ ಬಗ್ಗೆ ಯೋಚಿಸಬೇಕು. ದೇಶದಲ್ಲಿ ಕೃಷಿಗೆ ಆದ್ಯತೆ ಕಡಿಮೆಯಾಗಿ ರಿಯಲ್ ಎಸ್ಟೇಟ್ ಹೆಸರಿನಲ್ಲಿ ಜಮೀನು ಮಾರುತ್ತಿರುವುದು ವಿಷಾದನೀಯ ಎಂದರವರು.
ನಮ್ಮ ಪೂರ್ವಜರು ಮುಂದಿನ ಜಗತ್ತಿಗೆ ಅಗತ್ಯವಿರುವುದನ್ನು ಯೋಚಿಸಿ ನಮಗೆ ಮಾದರಿಯಾಗಿದ್ದರು. ನಮ್ಮ ಮುಂದಿನ ಪೀಳಿಗೆಗೆ ನಮ್ಮ ಕೊಡುಗೆ ಏನೆಂಬುದನ್ನು ಪ್ರತಿಯೊಬ್ಬರೂ ಪ್ರಶ್ನಿಸಿಕೊಳ್ಳಬೇಕು ಎಂದು ಮಂಗೇಶ್ ಭೇಂಡೆ ಹೇಳಿದರು.

ಶ್ರೀಕ್ಷೇತ್ರ ಹೊರನಾಡು ಧರ್ಮಕರ್ತರಾದ ಡಾ.ಭೀಮೇಶ್ವರ ಜೋಶಿ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ವಿಕಾಸವಾಗದೆ ಸಾವಯವ ಕೃಷಿಗೆ ಸರ್ಕಾರಗಳು ಹೆಚ್ಚಿನ ಒತ್ತು ನೀಡಿ ಹಸಿರು ಕ್ರಾಂತಿ ಮಾಡುವಲ್ಲಿ ಮುಂದಾಗಬೇಕು. ಕೃಷಿಯನ್ನು ನಿರ್ಲಕ್ಷಿಸಿದರೆ ಮುಂದಿನ ದಿನಗಳಲ್ಲಿ ಆಹಾರಕ್ಕೆ ಹೆಚ್ಚಿನ ಕೊರತೆ ಉಂಟಾಗುತ್ತದೆ. ಭಾರತದಲ್ಲಿ ಕೃಷಿ ಕ್ಷೇತ್ರ ಹೆಚ್ಚಿನ ಪ್ರಗತಿ ಕಾಣಬೇಕು. ನಗರ ಮತ್ತು ಗ್ರಾಮೀಣ ಭಾಗದಲ್ಲಿ ಆಧುನಿಕತೆ ಮತ್ತು ಪಾಶ್ಚಿಮಾತ್ಯ ಸಂಸ್ಕೃತಿಗೆ ಒಳಗಾಗದೆ ದೇಶೀಯ ಸಂಸ್ಕೃತಿ ಮತ್ತು ಕೃಷಿ ಉಳಿವಿಗಾಗಿ ಮುಂದಾಗಬೇಕು ಎಂದು ಕರೆ ನೀಡಿದರು.

ಪುರುಷೋತ್ತಮ ಪ್ರಶಸ್ತಿ ವಿಜೇತರಾದ ಶಿರಸಿಯ ವಿಮಲ, ಗೋಪಾಲಕೃಷ್ಣ ವೆಂಕಟರಮಣ ಹೆಗಡೆ ಮಾತನಾಡಿ, ನಮ್ಮದು ಶಿರಸಿ ತಾಲ್ಲೂಕಿನ ದೇವನಹಳ್ಳಿ ಅತ್ಯಂತ ಸಣ್ಣ ಗ್ರಾಮ. ಯಾವುದೇ ಪ್ರಶಸ್ತಿಯ ಹಿಂದೆ ಹೋಗದೆ ಅತ್ಯಂತ ಚಿಕ್ಕದಾಗಿ ಸಾವಯವ ಕೃಷಿಯನ್ನು ಮಾಡುತ್ತಾ ನಮ್ಮ ಬದುಕಿನಲ್ಲಿ ಧನ್ಯತೆ ಕಂಡಿದ್ದೆವು. ಭೂಮಿ, ಗಾಳಿ, ನೀರನ್ನು ಯಾರೂ ನಿರ್ಲಕ್ಷಿಸದೆ ಅತ್ಯಂತ ಜಾಗ್ರತೆಯಿಂದ ಬಳಸಿ ಉಳಿಸುವ ಅಗತ್ಯ ಇದೆ ಎಂದು ಕಿವಿಮಾತು ಹೇಳಿದರು.

ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಾಜ್‌ಗೋಪಾಲ್, ಪುರುಷೋತ್ತಮ ಕೃಷಿ ಸಂಶೋಧನಾ ಪ್ರತಿಷ್ಠಾನದ ಸುಬ್ಬರಾವ್, ತೀರ್ಥಹಳ್ಳಿ ಮಾಜಿ ಶಾಸಕ ಅರಗ ಜ್ಞಾನೇಂದ್ರ, ಎಐಪಿ ಕಾಲೇಜಿನ ಪ್ರಾಂಶುಪಾಲರಾದ ಸುಬ್ರಾಯ, ಶಾಸಕ ಸಿ.ಟಿ. ರವಿ, ಸಾವಯವ ಕೃಷಿ ಪರಿವಾರದ ಡಾ. ಆನಂದ್ ಉಪಸ್ಥಿತರಿದ್ದರು. ಮೂಡಿಗೆರೆಯ ಸುರೇಶ್ಚಂದ್ರ ದತ್ತ ಅವರು ಕೃಷಿಯಲ್ಲಿ ಪರಾಗಸ್ಪರ್ಶಿಗಳ ಮಹತ್ವ ಮತ್ತು ಮೈಸೂರಿನ ಸಾವಯವ ಕೃಷಿಕ ಎ.ಪಿ. ಚಂದ್ರಶೇಖರ ಸಾವಯವ ಕೃಷಿಯ ಬಗ್ಗೆ ಮಾಹಿತಿ ನೀಡಿದರು.

   

Leave a Reply