ಶಂಶುಲ್ನನ್ನು ಕೊಂದರು ನಾಳೆ ನನ್ನನ್ನೂ ಕೊಲ್ಲಬಹುದು

ಲೇಖನಗಳು - 0 Comment
Issue Date :

-ವೃಷಾಂಕ ಭಟ್ ನಿವಣೆ

2 ಲಕ್ಷ ಕೋಟಿ ರೂ.ಗಿಂತಲೂ ಅಧಿಕ ಮೊತ್ತದ ಹಗರಣವನ್ನು ಬಯಲಿಗೆಳೆದಿರುವ
ಅನ್ವರ್ ಮಾಣಿಪ್ಪಾಡಿಯವರ ವರದಿಯ ವಿಸ್ತತ ವರದಿ ವಿಕ್ರಮದಲ್ಲಿ ಪ್ರಕಟಗೊಂಡಿತ್ತು. ಹಗರಣ ಬೆಳಕಿಗೆ ಬಂದ ಬಗೆ, ತನಿಖೆಯ ಜಾಡು ಹೀಗೆ ಹಲವು ವಿಷಯಗಳನ್ನು ಮಾಣಿಪ್ಪಾಡಿಯವರು ಪತ್ರಿಕೆಯೊಂದಿಗೆ ಹಂಚಿಕೊಂಡರು.

ವಕ್ಫ್ ಮಂಡಳಿಯಲ್ಲಿ ಲಕ್ಷಾಂತರ ಕೋಟಿ ರೂ. ಹಗರಣವಾಗಿದೆ ಎಂದು ನಿಮಗೆ ಮೊದಲು ತಿಳಿದದ್ದು ಹೇಗೆ?

ನಾನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷನಾಗಿದ್ದಾಗ ಪ್ರತಿಯೊಂದು ಜಿಲ್ಲೆಗೂ ಭೇಟಿ ನೀಡುತ್ತಿದ್ದೆ. ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷನ ವ್ಯಾಪ್ತಿಯೊಳಗೆ ಎಲ್ಲಾ ಇಲಾಖೆಗಳೂ ಬರುತ್ತವೆ. ಎಲ್ಲ ಅಧಿಕಾರಗಳನ್ನು ಎಲ್ಲಾ ಅಧಿಕಾರಿಗಳನ್ನು ಒಂದೆಡೆ ಸೇರಿಸಿ ಪರಿವೀಕ್ಷಿಸುತ್ತಿದ್ದೆ.

ಬೀದರ್‌ಗೆ ಹೋಗಿದ್ದ ಸಮಯ. ಒಬ್ಬ ವ್ಯಕ್ತಿ ನನ್ನ ಬಳಿ ಬಂದು ಸಾರ್, ಏಶಿಯಾದಲ್ಲೇ ದೊಡ್ಡ ಸ್ಮಶಾನ ನಮ್ಮದು. ಅದರ ದೊಡ್ಡ ಭಾಗ ಕಬಳಿಕೆಯಾಗಿದೆ ಎಂದ. ಸರಿ ಅದನ್ನು ನೋಡೋಣ ಎಂದು ಜಿಲ್ಲಾಧಿಕಾರಿಯವರನ್ನು ಕರೆದುಕೊಂಡು ಹೋದೆ. ಆತ ಹೇಳಿದ್ದು ನಿಜವಾಗಿತ್ತು. ಖಬರಿಸ್ಥಾನದ (ಸ್ಮಶಾನದ) ಬಹಳಷ್ಟು ಭಾಗಗಳನ್ನು ಒತ್ತುವರಿ ಮಾಡಲಾಗಿತ್ತು.

ಆಸ್ತಿ ಒತ್ತುವರಿಯಾಗುವಾಗ ವಕ್ಫ್ ಮಂಡಳಿ ಸಮ್ಮನಿರುತ್ತದೆಯೇ?

ಮುತವಲ್ಲಿಗಳು, ವಕ್ಫ್ ಮಂಡಳಿಯವರು ಈ ಹಗರಣದಲ್ಲಿ ಪಾಲುದಾರರು. ಮುತವಲ್ಲಿಯ ಶಿಫಾರಸ್ಸಿನ ಮೇರೆಗೆ ವಕ್ಫ್ ಮಂಡಳಿ ನೋ ಅಬ್ಜೆಕ್ಶನ್ ಪತ್ರ ನೀಡುತ್ತಾರೆ. ಉದಾಹರಣೆಗೆ ಸರ್ವೆ ನಂ.12 ವಕ್ಫ್ ಆಸ್ತಿಯೆಂದಿಟ್ಟುಕೊಳ್ಳಿ. ಅಲ್ಲಿ ತಮಗೆ ಬೇಕಾದ ಜಾಗದ ಸುತ್ತ ಸಣ್ಣ ಕಲ್ಲುಗಳನ್ನು ಇಡುತ್ತಾರೆ. ಯಾರ ತಕರಾರೂ ಇಲ್ಲದಿದ್ದರೆ ಕಾಂಪೌಂಡ್ ಕಟ್ಟುತ್ತಾರೆ. ಆನಂತರ ವಕ್ಫ್ ಬೋರ್ಡ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೊಸ 12/1 ಎಂಬ ಹೊಸ ಸರ್ವೆ ನಂ ಸೃಷ್ಟಿಸಿಬಿಡುತ್ತಾರೆ. ಈ ಎಲ್ಲ ಪ್ರಕ್ರಿಯೆಗಳು ಕಾನೂನು ಚೌಕಟ್ಟಿನೊಳಗೆ ನಡೆಯುತ್ತಿವೆಯೇನೋ ಎಂಬ ಭ್ರಮೆ ಸಾಮಾನ್ಯರಲ್ಲಿ ಹುಟ್ಟುತ್ತದೆ. ಆದರೆ ಅವ್ಯವಹಾರ. ಏಕೆಂದರೆ ಒಮ್ಮೆ ವಕ್ಫ್ ಆದರೆ ಅದು ಯಾವಾಗಲೂ ವಕ್ಫ್.

ಬೀದರ್‌ನ ಸ್ಮಶಾನದ ಭೂಮಿ ಒತ್ತುವರಿಯಾಗಿದೆ ಎಂಬುದು ಗಮನಕ್ಕೆ ಬಂದನಂತರ ಏನು ಮಾಡಿದಿರಿ?

ಮೊದಲಿಗೆ ಒಬ್ಬ ಸರ್ವೆಯವರನ್ನು ಕರೆದುಕೊಂಡು ಹೋಗಿ ಸ್ಮಶಾನವನ್ನು ಅಳತೆ ಮಾಡಿಸಿದೆ. ಅಳತೆಯ ವರದಿಯಲ್ಲಿ ನೂರಾರು ಎಕರೆ ಭೂಮಿ ಕಬಳಿಕೆಯಾಗಿರುವುದು ಗಮನಕ್ಕೆ ಬಂತು. ವರದಿಯನ್ನು ಮುಖ್ಯಮಂತ್ರಿಗಳಿಗೆ ನೀಡಿ ಪತ್ರಿಕಾಗೋಷ್ಠಿ ಏರ್ಪಡಿಸಿದೆ. ಅದೇ ವೇಳೆ ಬೀದರಿನ ವಕ್ಫ್ ಮಂಡಳಿಯ ಕೆಲವು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿಸಿದೆ. ಈ ಎಲ್ಲ ಬೆಳವಣಿಗೆಗಳನ್ನು ಮಾಧ್ಯಮಗಳು ವಿಸ್ತತವಾಗಿ ವರದಿ ಮಾಡಿದವು. ಅದಾದ ಕೆಲವೇ ದಿನಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಜನಸಾಮಾನ್ಯರ ಪತ್ರಗಳು ಬರತೊಡಗಿತು. ಅವುಗಳೆಲ್ಲವೂ ವಕ್ಫ್ ಹಗರಣಕ್ಕೆ ಸಂಬಂಧಿಸಿದ್ದು!

 ಇದೊಂದು ಬಹುಕೋಟಿ ಹಗರಣ ಎಂಬ ಸುಳಿವು ಸಿಗುತ್ತಲೇ ಪ್ರಕರಣದ ವಿಸ್ತತ ತನಿಖೆ ನಡೆಸಲು ನಿರ್ಧರಿಸಿದೆವು. ಕೂಡಲೇ ಸಮಿತಿಯೊಂದನ್ನು ರಚಿಸಿ ವರದಿಯನ್ನು ಅಂದಿನ ಮುಖ್ಯಮಂತ್ರಿ ಸದಾನಂದ ಗೌಡರಿಗೆ ನೀಡಿದೆ. ಮುತವಲ್ಲಿಯಿಂದ ಪ್ರಾರಂಭಿಸಿ ಸಚಿವರ ತನಕ ಎಲ್ಲರೂ ಈ ಹಗರಣದಲ್ಲಿ ಭಾಗಿಗಳು. ಮಲ್ಲಿಕಾರ್ಜುನ ಖರ್ಗೆ, ಖಮರುಲ್ ಇಸ್ಲಾಂ, ವೀರಪ್ಪ ಮೊಯ್ಲಿ ಸೇರಿದಂತೆ ಬಹುತೇಕ ರಾಜಕೀಯ ನಾಯಕರು ಇದರಲ್ಲಿ ಭಾಗಿಗಳು ಎನ್ನುವ ಅಂಶ ತನಿಖೆಯ ವೇಳೆ ಬಹಿರಂಗಗೊಂಡಿದೆ.

ವರದಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿತೇ?

 ಹೌದು. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಸರ್ಕಾರ ವರದಿಯನ್ನು ಅಂಗೀಕರಿಸಿತು. ಆದರೆ ಅದಾದ ಕೆಲವೇ ಸಮಯದಲ್ಲಿ ಚುನಾವಣೆ ಎದುರಾಗಿ ಕಾಂಗ್ರೆಸ್ ಅಧಿಕಾರ ಹಿಡಿಯಿತು ಮತ್ತು ವರದಿಯನ್ನು ಬದಿಗೆ ಸರಿಸಿತು. ಬಿಜೆಪಿ ವಿಧಾನಪರಿಷತ್ ಸದಸ್ಯರು ವರದಿಯ ಬಗ್ಗೆ ಪ್ರಶ್ನೆ ಕೇಳಿದಾಗ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿಲ್ಲ ಎಂದು ಸುಳ್ಳು ಹೇಳಿದರು ಖಮರುಲ್ ಇಸ್ಲಾಂ. ಕೊನೆಗೂ ಮಣಿದ ಕಾಂಗ್ರೆಸ್ ಸರ್ಕಾರ ಗೋ.ಮಧುಸೂಧನ್ ನೇತೃತ್ವದಲ್ಲಿ ಹಕ್ಕುಬಾಧ್ಯ ಸಮಿತಿ ರಚಿಸಿತು. ಮಧುಸೂಧನ್ ಇಂಚಿಂಚೂ ಅಧ್ಯಯನ ಮಾಡಿ ವರದಿ ನೀಡಿದರು. ಈ ವರದಿಗೆ ಮೂಲ ಅನ್ವರ್ ಮಾಣಿಪ್ಪಾಡಿಯವರ ವರದಿಯಾಗಿರುವ ಕಾರಣ, ಮೂಲ ವರದಿಯನ್ನು ಮಂಡನೆ ಮಾಡಿ ಎಂದು ವಿಧಾನಪರಿಷತ್ ಸಭಾಧ್ಯಕ್ಷರು ಆದೇಶಿಸಿದರು. ಆದರೂ ಮಂಡನೆ ಮಾಡಲಿಲ್ಲ.

 ಇದನ್ನೆಲ್ಲ ಗಮನಿಸುತ್ತಿದ್ದ ಮಾಜಿ ಸಚಿವ ಎಸ್.ಕೆ.ಕಾಂತ ಅವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರು. ನ್ಯಾಯಾಲಯವು ಈ ಸಂಬಂಧ ಸರ್ಕಾರವನ್ನು ಪ್ರಶ್ನಿಸಿದಾಗ, ಮುಂದಿನ ಅಧಿವೇಶನದಲ್ಲಿ ವರದಿಯನ್ನು ಮಂಡಿಸುವುದಾಗಿ ಸಾಲಿಟೆರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದರು. ಆದರೂ ಅಧಿವೇಶನದಲ್ಲಿ ವರದಿ ಸಲ್ಲಿಕೆಯಾಗಲಿಲ್ಲ. ಕೊನೆಗೆ ಪ್ರಕರಣವನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸಲಾಯ್ತು.

ಲೋಕಾಯುಕ್ತದಿಂದ ನಿಮ್ಮ ನಿರೀಕ್ಷೆಗಳು ಈಡೇರಿದವೇ?

ನ್ಯಾ.ಭಾಸ್ಕರ್ ರಾವ್ ಅವರಿಗೆ ಪ್ರಕರಣದಲ್ಲಿ ಯಾವುದೇ ಆಸಕ್ತಿಯಿರಲಿಲ್ಲ. ಅವರೊಂದಿಗೆ ಮಾತನಾಡಲು ಅವಕಾಶ ಕೇಳಿದರೂ ಯಾವುದೇ ಉತ್ತರ ಬರುತ್ತಿರಲಿಲ್ಲ. ಕ್ರಮೇಣ ಲೋಕಾಯುಕ್ತದ ಬಗ್ಗೆ ನನಗೂ ನಂಬಿಕೆ ಕ್ಷೀಣಿಸತೊಡಗಿತು. ಒಂದು ದಿನ ಉಪಲೋಕಾಯುಕ್ತ ನ್ಯಾ.ಆನಂದ್ ಅವರು ಕರೆ ಮಾಡಿ ಭೇಟಿಯಾಗುವಂತೆ ತಿಳಿಸಿದರು. ಆ ಹೊತ್ತಿಗಾಗಲೇ ಲೋಕಾಯುಕ್ತದಲ್ಲಿ ನಿರಾಸಕ್ತಿ ತಳೆದಿದ್ದ ನನಗೆ ನ್ಯಾ.ಆನಂದ್ ಅವರನ್ನು ಭೇಟಿಯಾಗಲು ಮನಸ್ಸಿರಲಿಲ್ಲ. ಹಾಗಾಗಿ ಭೇಟಿಯಾಗಲೂ ಇಲ್ಲ. ಅದಾಗಿ ಕೆಲ ದಿನಗಳ ನಂತರ ಮತ್ತೆ ಎರಡು ಮೂರು ಬಾರಿ ಕರೆ ಮಾಡಿ ಬರುವಂತೆ ತಿಳಿಸಿದರು; ಹೋದೆ. ನ್ಯಾ.ಆನಂದ್ ಅವರನ್ನು ಭೇಟಿಯಾದ ನಂತರ ನನಗೆ ಅವರ ಮೇಲಿದ್ದ ಅಪನಂಬಿಕೆಗಳೆಲ್ಲ ದೂರವಾದವು. ಪ್ರಕರಣದ ತನಿಖೆ ನಡೆಸುವ ಆಸಕ್ತಿ ಅವರಲ್ಲಿರುವುದು ನನಗೆ ಸ್ಪಷ್ಟವಾಯಿತು. ತನಿಖೆಯಲ್ಲಿ ಸಹಕರಿಸಿದೆ; ಕೇಳಿದ ಮಾಹಿತಿಗಳನ್ನು ನೀಡಿದೆ. ಇದನ್ನೆಲ್ಲ ಗಮನಿಸುತ್ತಿದ್ದ ರಾಜ್ಯ ಸರ್ಕಾರಕ್ಕೆ ನಡುಕ ಹುಟ್ಟಿತೆಂದು ಕಾಣುತ್ತದೆ. ತನಿಖೆಯನ್ನು ಕೂಡಲೇ ನಿಲ್ಲಿಸಿ ಕಡತಗಳನ್ನು ಸರ್ಕಾರಕ್ಕೆ ಹಿಂದಿರುಗಿಸಬೇಕೆಂಬ ಆದೇಶ ಬಂತು.

 ನ್ಯಾ.ಆನಂದ್ ಅವರ ಶ್ರಮ ನೀರಲ್ಲಿ ಮಾಡಿದ ಹೋಮವಾಯ್ತೆ?

ಇಲ್ಲ, ಸರ್ಕಾರವು ಲೋಕಾಯುಕ್ತಕ್ಕೆ ಪತ್ರ ಬರೆಯುವ ಹೊತ್ತಿಗಾಗಲೇ ನ್ಯಾ.ಆನಂದ್ ತನಿಖೆ ಮುಗಿಸಿ ವರದಿ ಸಿದ್ಧಪಡಿಸಿಯಾಗಿತ್ತು. ಅಷ್ಟೇ ಅಲ್ಲ, ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿಯಾಗಿತ್ತು. ವರದಿಯನ್ನು ಪಡೆದ ಸರ್ಕಾರ ಲೋಕಾಯುಕ್ತಕ್ಕೆ

ಸ್ವೀಕೃತಿ ದೃಢೀಕರಣವನ್ನೂ ನೀಡಿತ್ತು. ಆದರೆ ಈ ಯಾವ ಅಂಶಗಳೂ ಸರ್ಕಾರದಲ್ಲಿದ್ದ ಪ್ರಭಾವಿಗಳ ಗಮನಕ್ಕೆ ಬಂದಿರಲಿಲ್ಲ!

ವರದಿಯ ಪ್ರಸ್ತುತ ಸ್ಥಿತಿಗತಿಯೇನು?

ವರದಿಯಲ್ಲಿರುವ ಅಂಶಗಳು ಸರಿಯಿಲ್ಲವೆಂದು ಸರ್ಕಾರ ಹೇಳುತ್ತಿದೆ. ಆದರೆ ನಾವಿಲ್ಲಿ ನೆನಪಿಟ್ಟುಕೊಳ್ಳಬೇಕೇನೆಂದರೆ, ವರದಿಯನ್ನು ಸದನದಲ್ಲಿ ಮಂಡಿಸುವುದಾಗಿ ಸರ್ಕಾರವೇ ನ್ಯಾಯಾಲಯಕ್ಕೆ ತಿಳಿಸಿತ್ತು. ವರದಿಯನ್ನು ಮಂಡಿಸದಿರುವುದು ನ್ಯಾಯಾಂಗ ಅಪಚಾರ. ನಾವು ಈ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ನೀವು ಕಾನೂನು ಓದಿದ್ದು ಯಾವ ಭಾಷೆಯಲ್ಲಿ? ವರದಿಯನ್ನು ಮಂಡಿಸುವಂತೆ ನಿಮಗೆ ಹೇಳಿರಲಿಲ್ಲವೇ? ಎಂದು ನ್ಯಾಯಾಲಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ನಮ್ಮ ಹೋರಾಟಕ್ಕೆ ಜಯ ಸಿಗುತ್ತದೆ ಎಂಬ ನಂಬಿಕೆಯಿದೆ.

ಪ್ರಕರಣದಿಂದ ಹಿಂದೆ ಸರಿಯಲು ಆಮಿಷಗಳು ಬಂದಿಲ್ಲವೇ?

ನನಗೆ ಒಡ್ಡಲಾಗಿದ್ದ ಆಮಿಷಗಳಿಗೆ ಬಲಿಯಾಗಿದ್ದಿದ್ದರೆ ಈ ಹೊತ್ತಿಗಾಗಲೇ ಕೋಟ್ಯಾಧಿಪತಿಯಾಗಿರುತ್ತಿದ್ದೆ. ನನಗೆ ಮೊದಲು ಲಂಚಕೊಡಲು ಬಂದವರು ಅಂದಿನ ವಕ್ಫ್ ಬೋರ್ಡ್ ಅಧ್ಯಕ್ಷ ರಿಯಾಜ್ ಅಹಮದ್. ಭ್ರಷ್ಟಾಚಾರಕ್ಕೆ ಸಿಲುಕುವ ವ್ಯಕ್ತಿ ನಾನಲ್ಲ ಎಂಬುದು ಯಾವಾಗ ತಿಳಿಯಿತೋ, ಆಗ ದುಬೈನಲ್ಲಿದ್ದ ನನ್ನ ಸ್ನೇಹಿತನನ್ನು ಛೂಬಿಟ್ಟರು. ನಿನಗೆ ಪ್ರಪಂಚವನ್ನು ಸುತ್ತುವ ಆಸೆ ಮೊದಲಿನಿಂದಲೂ ಇದೆ. ಹಾಗಿರುವಾಗ ನೀನೇಕೆ ಸಮಸ್ಯೆಯಲ್ಲಿ ಸಿಲುಕಿಕೊಳ್ತೀಯ. ನಿನಗೆಷ್ಟು ಹಣ ಬೇಕು ಹೇಳು ವ್ಯವಸ್ಥೆ ಮಾಡ್ತೀನಿ ಎಂದು ಅವನು ಹೇಳಿದ. ಆದರೆ ನನ್ನ ನಿಷ್ಠೆ ಇದ್ದದ್ದು ನನ್ನ ಸಂಘಟನೆಗೆ ಮತ್ತು ಸಂಘಟನೆ ನೀಡಿದ್ದ ಜವಾಬ್ದಾರಿಗೆ.

 

   

Leave a Reply