ಶತಕೋಟಿ ಭಾರತೀಯರಿಗೆ ನಿತ್ಯ ಹಾಳು ಕುಡಿಸಲಾಗುತ್ತಿದೆಯೇ?

ಲೇಖನಗಳು - 0 Comment
Issue Date :

-ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು
ರಾಮಚಂದ್ರಾಪುರ ಮಠ

ಹಾಲೆಂಬ ಅಮೃತವನ್ನು ವಿಷದ ಕೂಪವನ್ನಾಗಿಸುವ ಪ್ರಮಾದಗಳನ್ನು ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಲೋಕಲೇಖ ಅಂಕಣದ ಮೂಲಕ ನಮ್ಮೆದುರು ಅನುಗ್ರಹಿಸುತ್ತಿದ್ದಾರೆ. ಪ್ರಮಾದಗಳ ಸರಮಾಲೆಯ ಮೊದಲ ತುಣುಕನ್ನು ಕಳೆದ ವಾರದ ಸಂಚಿಕೆಯಲ್ಲಿ ಓದಬಹುದು.

ಗೋವೆಂಬ ಮಮತೆಯ ಮಾತೆಯನ್ನು ಮಾಂಸದ ಮುದ್ದೆಯಾಗಿಸಿ, ಮುರಿದು ಮುಕ್ಕುವ ಮಾನವ ಅಲ್ಲಿಗೆ ನಿಲ್ಲದೆ, ಆಕೆಯ ಅನುಪಮ ವಾತ್ಸಲ್ಯದ ದ್ರವರೂಪವೇ ಆದ ಹಾಲನ್ನು ಹಾಲಾಹಲವಾಗಿಸುವ ಕಥೆಯನ್ನು ಕಳೆದ ಸಂಚಿಕೆಯಿಂದ ಹೇಳತೊಡಗಿದ್ದೆವು.

ಅನಾಹುತವೊಂದು ಸಂಭವಿಸಬೇಕಾದರೆ ಮೊದಲು ಪ್ರಮಾದವು ಸಂಭವಿಸಬೇಕು. ನಮಗೆ ಆರೋಗ್ಯಆಯುಷ್ಯಗಳನ್ನು ನೀಡಬೇಕಾಗಿದ್ದ ಹಾಲು, ರೋಗವಾಗಿ ಸಾವಾಗಿ ನಮ್ಮನ್ನು ಕಾಡುವಂತಾಗಲು ಕಾರಣವಾದ ಪ್ರಮಾದಗಳ ಪರಂಪರೆಯನ್ನೇ ಎಸಗಿದ್ದಾನೆ ಆಧುನಿಕ ಮಾನವ! ಅವುಗಳಲ್ಲಿ ಕೆಲವನ್ನು ಕಳೆದ ಸಂಚಿಕೆಯಲ್ಲಿ ಅವಲೋಕಿಸಿದ್ದೆವು; ಇನ್ನು ಕೆಲವನ್ನು ಈ ಸಂಚಿಕೆಯಲ್ಲಿ ಅವಲೋಕಿಸೋಣ.

ಪ್ರಮಾದ – 6: ಹಸುಗಳಿಗೆ ಪದೇ ಪದೇ ಆಂಟಿಬಯೋಟಿಕ್ (antibiotic), ಆಂಟಿಪೈರೆಟಿಕ್ (antipyretic) ಮತ್ತಿತರ ವಿಷೌಷಧಗಳನ್ನು ನೀಡುವುದು ಮತ್ತು ಆ ಅವಧಿಯ, ವಿಷಯುಕ್ತವಾದ ಹಾಲನ್ನು ಸೇವಿಸುವುದು ಅಥವಾ ಮಾರುಕಟ್ಟೆಗೆ ಬಿಡುವುದು.

ಪರಿಣಾಮ: ಹಾಲಿನ ಮೂಲಕ ನಮ್ಮ ಶರೀರದಲ್ಲಿ ಆ ವಿಷೌಷಧಗಳ ನೇರ ಪ್ರವೇಶ.

ಸಂಕರ ತಳಿಗಳ ಸಮಸ್ಯೆಯಿದು: ಈ ತಳಿಗಳಲ್ಲಿ ಮೊದಲೇ ರೋಗನಿರೋಧಕ ಶಕ್ತಿಯು ಅತ್ಯಂತ ಕ್ಷೀಣ. ಮನುಷ್ಯನ ನಿರಂತರ ಹಸ್ತಕ್ಷೇಪ, ಸಹಜವಲ್ಲದ ಆಹಾರಜೀವನಗಳ ಪರಿಣಾಮವಾಗಿ ಅದು ಇನ್ನಷ್ಟು ಕ್ಷೀಣಗೊಂಡಿದೆ. ಅವುಗಳನ್ನು ಭಾರತಕ್ಕೆ ತಂದಿದ್ದು ಬಲು ದೊಡ್ಡ ವೈಜ್ಞಾನಿಕ ಮೂರ್ಖತೆ! ಏಕೆಂದರೆ ಶೀತವಲಯಕ್ಕೆ ಸಲ್ಲುವ ಪ್ರಾಣಿಯದು; ತಾಪಮಾನವು ಅಧಿಕವಾಗಿರುವ ಭಾರತದಲ್ಲಿ ಅದು ಹಿಂಸೆ ಪಡದೆ, ರೋಗವಿರದೆ ಬದುಕಲು ಸಾಧ್ಯವೇ ಇಲ್ಲ! ಉಷ್ಣತೆಯು ಕೊಂಚ ಹೆಚ್ಚಿದರೂ ಅದು ಉಸಿರಾಡಲು ಕಷ್ಟ ಪಡುವುದನ್ನು, ಬಾಯಲ್ಲಿ ಉಸಿರಾಡುವುದನ್ನು ಕಾಣಬಹುದು. ಆದುದರಿಂದಲೇ ಆ ತಳಿಗಳಿಗೆ ಇಲ್ಲಿ ವಿಧವಿಧದ ರೋಗಗಳು; ಸಣ್ಣ ರೋಗ ಬಂದರೂ ಆಂಟಿಬಯೋಟಿಕ್‌ಆಂಟಿಪೈರೆಟಿಕ್ ಮತ್ತಿತರ ವಿಷೌಷಧಗಳೇ ಗತಿ. ಹಾಗಾಗಿಯೇ ಔಷಧ ಬಳಸದಿರುವ ಸಮಯವೂ ಅಪರೂಪವೇ!

 ಹಸುಗಳಿಗೆ ಔಷಧ ನೀಡುತ್ತಿರುವ ಅವಧಿಯಲ್ಲಿ ಹಾಲನ್ನು ಬಳಸುವಂತಿಲ್ಲ, ಮಾತ್ರವಲ್ಲ, ಔಷಧ ನಿಲ್ಲಿಸಿ ಮೂರು ದಿನಗಳವರೆಗೂ ಅದರ ಪ್ರಭಾವವು ಉಳಿಯುವ ಕಾರಣ ಹಾಲು ಮತ್ತಿತರ ಉತ್ಪನ್ನಗಳನ್ನು ಬಳಸಕೂಡದು. ಹಾಗೆಂದು ಔಷಧದ ಮೇಲೆಯೇ ಮುದ್ರಿಸಿರುತ್ತಾರೆ. ಆದರೆ ಅದನ್ನು ಪಾಲಿಸುವವರು ಯಾರು!? ಆಂಟಿಬಯೋಟಿಕ್ ಅವಧಿಯಲ್ಲಿ ಹಾಲನ್ನು ಕರೆದು ಡೈರಿಗೆ ಕೊಡದೆ ಚೆಲ್ಲುವವರು ಯಾರು!

 ವಿದೇಶೀ ತಳಿಗಳಿಗೆ ನಾವು ನೀಡಿದ ವಿಷದ ಸಾಲವನ್ನು ಅವು ಹಾಲಿನ ರೂಪದಲ್ಲಿ ಶ್ರದ್ಧೆಯಿಂದ ತೀರಿಸುತ್ತವೆ; ಭಾರತದ ಶ್ರೇಷ್ಠ ಗೋವಂಶವನ್ನು ಹೀಗಳೆದಹಾಳುಗೈದ ಪಾಪಕ್ಕೆ ಭಾರತೀಯರಿಗೆ ನಿತ್ಯ ವಿಷಪಾನ!

 ಆದರೆ ದೇಶೀ ತಳಿಗಳಲ್ಲಿ ರೋಗನಿರೋಧಕ ಶಕ್ತಿಯು ಸಹಜವಾಗಿಯೇ ಅತ್ಯಧಿಕವಾಗಿರುವುದರಿಂದ ಅವುಗಳಿಗೆ ವಿಷೌಷಧಗಳ ಅಗತ್ಯವೇ ಇಲ್ಲ. ಹಾಲಿನಲ್ಲಿ ಔಷಧದ ವಿಷವಿರುವ ಪ್ರಶ್ನೆಯೂ ಇಲ್ಲ. ಮಾತ್ರವಲ್ಲ, ಅವುಗಳ ಹಾಲು ಸೇವಿಸಿದರೆ, ಸೇವಿಸಿದವರಲ್ಲಿಯೂ ರೋಗನಿರೋಧಕ ಶಕ್ತಿ ಹೆಚ್ಚುವುದು ನಿಶ್ಚಿತ.

 ಸರಕಾರಗಳು, ಅಧಿಕಾರಿಗಳು, ವಿಜ್ಞಾನಿಗಳು ತಲೆ ಮೇಲೆ ಹೊತ್ತು ಕುಣಿಯುವ, ಆಧುನಿಕ ಪ್ರಪಂಚವು ಶಿರಸಾ ಮಾನ್ಯಮಾಡುವ ವೈಜ್ಞಾನಿಕ ಪ್ರಕ್ರಿಯೆಯೊಂದನ್ನು ಸುಳ್ಳೆಂದು, ಸಾವೆಂದು ಸಾರಲು ಸ್ವರವೆತ್ತಬೇಕಾದ ಸಮಯವಿದು. ಅದುವೇ ಹಾಲಿನ ವಿಷಯದಲ್ಲಿ ಮಾನವನ ಅಕ್ಷಮ್ಯ ಅಪರಾಧವಾದ ಪಾಶ್ಚರೀಕರಣ.

 ಪ್ರಮಾದ 7: ಪಾಶ್ಚರೀಕರಣ (Pasteurization).

 ಹಾಲನ್ನು ವಿಪರೀತ ಕುದಿಸಿ, ಕ್ಷಣಗಳಲ್ಲಿ ವಿಪರೀತ ತಣಿಸುವ, ಸಾಮೂಹಿಕ ಜೀವನಾಶದ ಪ್ರಕ್ರಿಯೆಯಿದು!

 ಪರಿಣಾಮ: ಹಾಲಿನೊಳಗಿನ ಒಳಿತೆಲ್ಲದರ ಸರ್ವನಾಶ, ಹಾಳಾಗದಂತೆ ಕಂಡರೂ ಒಳಗೊಳಗೇ ಹಾಳಾಗಿರುವ ಹಾಲು, ಆದರೂ ಉಳಿದುಕೊಳ್ಳುವ ಕೆಲವು ಹಾನಿಕಾರಕ ಸೂಕ್ಷ ್ಮಜೀವಿಗಳು; ಅವುಗಳನ್ನು ಪ್ರತಿರೋಧಿಸಲು ರೋಗಪ್ರತಿರೋಧಕ ಜೀವಾಣುಗಳೇ ಇಲ್ಲ!

 ಬರಬಹುದಾದ ರೋಗಗಳು: ಅಲರ್ಜಿ, ವಿಶೇಷವಾಗಿ ಹಾಲು ಜೀರ್ಣವಾಗದಿರುವುದು (Lactose intolerance), ಸಣ್ಣ ಮಕ್ಕಳಲ್ಲಿ ಅದರಿಂದಲೇ ಬರುವ ಹೊಟ್ಟೆನೋವು, ಎಲುಬುಗಳು ದುರ್ಬಲಗೊಳ್ಳುವುದು (Osteoporosis), ಸಂಧಿವಾತ (Arthritis), ಹೃದ್ರೋಗ.

 ‘ಹಸುವನ್ನು ಕೊಂದಿದ್ದು ಸಾಲದೆಂಬಂತೆ ಮಾನವ ಹಾಲನ್ನೂ ಕೊಂದ!’ ಎಂದು ಹೇಳುವಾಗ ನಮ್ಮ ಮನಸ್ಸಿನಲ್ಲಿದ್ದಿದ್ದು ಇದೇ ಪಾಶ್ಚರೈಸೇಷನ್ ಪ್ರಕ್ರಿಯೆ! ಹಾಲನ್ನು ಸಹಜ ಉಷ್ಣತೆಯಿಂದ ಜೀವಿಗಳು ಬದುಕುಳಿಯಲಾರದ ಬಿಸಿಗೆ ಕುದಿಸಿ, ಬಳಿಕ ಜೀವಿಗಳು ಬದುಕುಳಿಯಲಾರದ ಶೀತಲತೆಗೆ ಕ್ಷಣಗಳಲ್ಲಿಯೇ ತಣಿಸುವ ಪ್ರಕ್ರಿಯೆಗೆ Pasteurization ಎಂದು ಹೆಸರು. ಇಷ್ಟು ಮಾಡಿದ ಮೇಲೆ ಹಾಲಿನಲ್ಲಿ ಸೂಕ್ಷ ್ಮಜೀವಿಗಳ ಅನಂತಾನಂತ ಶವಗಳ ಹೊರತು ಮತ್ತೇನೂ ಇರಲು ಸಾಧ್ಯವಿಲ್ಲ!

 ವಿಪರ್ಯಾಸವೆಂದರೆ, ಹಾನಿಕರವಾದ ಕೆಲವು ಸೂಕ್ಷ್ಮಜೀವಿಗಳ ಜೊತೆಗೆ ಹಿತಕರವಾದ ಅಸಂಖ್ಯ ಸೂಕ್ಷ ್ಮಜೀವಿಗಳ ಮಾರಣಹೋಮ! ಜೊತೆಯಲ್ಲಿ ಶರೀರಕ್ಕೆ ಉಪಯುಕ್ತವಾದ ಪ್ರೋಟೀನ್‌ಗಳು, ಹಿತಕಾರಿಯಾದ ಹಾರ್ಮೋನ್‌ಗಳು, ಆ6, ಆ12 ಮತ್ತು ಇ ವಿಟಮಿನ್‌ಗಳು, ಅನೇಕ ಬಗೆಯ ಎಂಜೈಮ್ಗಳು ಧ್ವಂಸಗೊಳ್ಳುತ್ತವೆ! ಇವುಗಳಲ್ಲಿ ಹಿತಕಾರಿಯಾದ ಸೂಕ್ಷ ್ಮಜೀವಿಗಳು ಹಾಲಿನಲ್ಲಿ ಸ್ರವಿಸುವ Lactase ಎಂಬ ಒಂದು ಎಂಜೈಮ್ ಹಾಲನ್ನು ಜೀರ್ಣಗೊಳಿಸಲೆಂದೇ ಇರುವಂಥದ್ದು. ಅದನ್ನೇ ನಾಶಪಡಿಸಿದ ಮೇಲೆ ಆ ಹಾಲು ಸರಿಯಾಗಿ ಜೀರ್ಣವಾಗುವ ಸಾಧ್ಯತೆಯೇ ಇಲ್ಲ! ಜೀರ್ಣವಾಗದೇ ಉಳಿದ ಯಾವುದೇ ಆಹಾರ ವಿಷವಾಗಿ, ಶರೀರದ ಶತ್ರುವಾಗಿ ಕೆಲಸ ಮಾಡುತ್ತದೆ! ಇದು ಪಾಶ್ಚರೈಸೇಷನ್‌‘ನ ಫಲ!

 ಒಂದು ವೇಳೆ ದಿಲ್ಲಿಯಲ್ಲಿ ಕೆಲವು ಉಗ್ರಗಾಮಿಗಳು ಸೇರಿಕೊಂಡಿದ್ದಾರೆ ಎಂದಾದರೆ ಅಣುಬಾಂಬ್ ಎಸೆದು, ದಿಲ್ಲಿಗೆ ದಿಲ್ಲಿಯನ್ನೇ ಧ್ವಂಸ ಮಾಡಬಹುದೇ? ಮಾಡಬಹುದು ಎಂದಾದರೆ ಮಾತ್ರವೇ ಹಾಲನ್ನು ಪಾಶ್ಚರೈಸ್ ಮಾಡಬಹುದು!

 ಹೋಗಲಿ, ಹಾನಿಕಾರಕವಾದ ಸೂಕ್ಷ ್ಮಜೀವಿಗಳಾದರೂ ಪೂರ್ಣವಾಗಿ ನಾಶವಾಗುತ್ತವೆಯೇ ಎಂದರೆ ಅದೂ ಇಲ್ಲ! Corralling desperados, Bacillus, Paenibacillus ಮತ್ತಿತರ ಹಾನಿಕಾರಕವಾದ ಸೂಕ್ಷ ್ಮಜೀವಿಗಳು ಪಾಶ್ಚರೀಕರಣದ ಬಳಿಕವೂ ಉಳಿದುಕೊಳ್ಳುತ್ತವೆ, ಮಾತ್ರವಲ್ಲ, ರೋಗಪ್ರತಿರೋಧಕ ಜೀವಾಣುಗಳು ನಾಶವಾಗಿರುವ ಕಾರಣ ಎಗ್ಗಿಲ್ಲದೆ ಬೆಳೆಯುತ್ತವೆ!

 ಬೊಗಸೆಯಷ್ಟು ಕೆಡುಕನ್ನು ನಾಶಮಾಡಲು ಹೋಗಿ; ಬಿಂದಿಗೆಯಷ್ಟು ಒಳಿತನ್ನು ನಾಶ ಮಾಡಿ; ಬಳಿಕವೂ ಕೆಡುಕು ಉಳಿದುಕೊಳ್ಳುವುದೇ ಪಾಶ್ಚರೀಕರಣವೆಂಬ ಆಧುನಿಕರ ಮಹಾಸಾಧನೆ!

 ಮುಖದ ಮೇಲೆ ಕುಳಿತ ನೊಣವನ್ನು ಹೊಡೆಯುವೆನೆಂದು ತಲೆಯನ್ನೇ ಒಡೆಯುವುದೇ ಪಾಶ್ಚರೀಕರಣ!

 ಹಾಲನ್ನು ಪಾಶ್ಚರೀಕರಣಕ್ಕೆ ಒಳಪಡಿಸಬೇಕು ಎಂಬುದಕ್ಕೆ ಡೈರಿ ಉದ್ಯಮವು ನೀಡುವ ಒಂದು ಕಾರಣ: ‘ಹಟ್ಟಿಗಳಲ್ಲಿ ಹೈಜೀನ್ (hygiene) ಕಡಿಮೆ. ಹಾಲಿನಲ್ಲಿ ಸಗಣಿಮೂತ್ರಗಳು ಸೇರುವ ಸಂಭವವಿರುತ್ತದೆ. ಸಗಣಿಮೂತ್ರಗಳಲ್ಲಿ ರೋಗಾಣುಗಳಿರುತ್ತವೆ. ಅವುಗಳನ್ನು ನಾಶಪಡಿಸಲು ಪಾಶ್ಚರೀಕರಣ ಅಗತ್ಯ.’

 ಸಂಕರ ತಳಿಯ ಸಗಣಿಮೂತ್ರಗಳಲ್ಲಿ ರೋಗಾಣುಗಳಿರುವುದು ಸತ್ಯ. ಅಷ್ಟು ಮಾತ್ರವಲ್ಲ, ಅವುಗಳ ಹಾಲಿನಲ್ಲಿಯೂ ರೋಗಕಾರಕತ್ವವಿದೆ ಎಂಬುದು ಮುಂದುವರಿದ ಸತ್ಯ! ಆದರೆ ದೇಶೀ ಗೋವುಗಳ ಕಥೆ ಬೇರೆ; ಅವುಗಳ ಸಗಣಿಮೂತ್ರಗಳು ಮಹೌಷಧಗಳು. ರೋಗವಿದ್ದರೆ ನಿವಾರಿಸುವ, ಇಲ್ಲದಿದ್ದರೆ ಆರೋಗ್ಯವನ್ನು ಹೆಚ್ಚಿಸುವ ಚಮತ್ಕಾರ ಅವುಗಳ ಹಾಲು-ಸಗಣಿ-ಮೂತ್ರ ಇವು ಮೂರರಲ್ಲಿಯೂ ಇವೆ! ಅಲ್ಲಿ ಪಾಶ್ಚರೀಕರಣದ ಯಾವ ಅಗತ್ಯವೂ ಇಲ್ಲ!

 ಇಂದು ವಿಶ್ವವೇ ಅಂಗೀಕರಿಸುವ ಆಯುರ್ವೇದವು, ಕ್ಷೀರವು ‘ಧಾರೋಷ್ಣ’ವಾಗಿರುವಾಗ ಸೇವಿಸುವುದು ಅತ್ಯಂತ ಪ್ರಶಸ್ತ ಎಂದು ಸಾರುತ್ತದೆ. ಕರೆಯುವಾಗ ಸಹಜವಾಗಿಯೇ ಹದವಾದ ಬಿಸಿಯಿರುವ ಹಾಲನ್ನು ‘ಧಾರೋಷ್ಣ’ ಎನ್ನುತ್ತಾರೆ. ಇಲ್ಲಿ ಪಾಶ್ಚರೀಕರಣದ ಮಾತಿರಲಿ, ಹಾಲನ್ನು ಬಿಸಿ ಮಾಡುವ ವಿಷಯವೂ ಇಲ್ಲ! ಕರುವಿನೊಂದಿಗೆ ನೇರವಾಗಿ ಹಸುವಿನ ಕೆಚ್ಚಲಿನಿಂದಲೇ ಹಾಲು ಕುಡಿಯುತ್ತಿದ್ದ ಬಾಲಕೃಷ್ಣನ ಸ್ಮರಣೆಯನ್ನು ಒಮ್ಮೆ ಇಲ್ಲಿ ಮಾಡಿಕೊಳ್ಳೋಣ. ಭಗವಂತನು ಮಾತ್ರವಲ್ಲ, ನಮ್ಮ ದೇಶದಲ್ಲಿ ಸಾಮಾನ್ಯ ಮನುಷ್ಯರಾದರೂ ಪಂಚಗವ್ಯಪಂಚಾಮೃತಗಳಿಗೆ ಬಿಸಿ ಮಾಡಿರದ ಹಾಲನ್ನೇ ಸಾವಿರಾರು ವರ್ಷಗಳಿಂದಲೂ ಬಳಸುತ್ತಿದ್ದುದು. ಅವು ಎಂದೂ ರೋಗ ಕೊಟ್ಟ ಉದಾಹರಣೆಯಿಲ್ಲ. ಬದಲಿಗೆ ಆರೋಗ್ಯವನ್ನೇ ಕೊಟ್ಟಿವೆ! ಅಂದ ಮೇಲೆ, ಈಗ ನಮಗೆ ಯಾಕಾದರೂ ಈ ಅನಿಷ್ಟ ವಿಧಾನವು ಬೇಕು?

 ಅದು ಬೇಕಾಗುವುದಿದ್ದರೆ ವಿದೇಶೀ ತಳಿಗಳಲ್ಲಿ ಮಾತ್ರ; ಅಲ್ಲಿಯೂ ಉಭಯ ಸಂಕಟವೇ! ಪಾಶ್ಚರೀಕರಣ ಮಾಡದಿದ್ದರೆ ತೊಂದರೆ; ಮಾಡಿದರೆ ಅನಾಹುತ!

 ಭಾರತಕ್ಕೆ ಸಂಕರ ತಳಿಗಳ ಜೊತೆಗೆ ಪಾಶ್ಚಿಮಾತ್ಯರ ಮತ್ತೊಂದು ಕೊಡುಗೆ ಈ ಪಿಡುಗು!

 ಪ್ರಮಾದ 8 : Homogenization – ಹಾಲನ್ನು ಅತಿಯಾದ ಒತ್ತಡದಲ್ಲಿ ಫಿಲ್ಟರ್ ಮೂಲಕ ಹಾಯಿಸಿ, ಕೊಬ್ಬಿನ ಸೂಕ್ಷ ್ಮಕೋಶಗಳನ್ನು(Fat Globules) ಒಡೆದು ಹತ್ತು ಪಾಲು ಸಣ್ಣದಾಗಿಸುವುದು; ತನ್ಮೂಲಕ ಹಾಲು ಕೆನೆಗಟ್ಟುವುದನ್ನು ತಡೆಯುವುದು.

 ಪರಿಣಾಮ: ಜೀರ್ಣಕ್ರಿಯೆಯಿಂದ ತಪ್ಪಿಸಿಕೊಂಡು ಕೊಬ್ಬು ರಕ್ತದಲ್ಲಿ ಸೇರುವುದು ಮತ್ತು ರಕ್ತನಾಳವು ಕಿರಿದಾಗಿ / ಮುಚ್ಚಿ (plaque), ತತ್ಪರಿಣಾಮವಾಗಿ ಬರಬಹುದಾದ ಹೃದಯಾಘಾತವೇ ಮೊದಲಾದ ಅನೇಕ ಸಮಸ್ಯೆಗಳು.

 ಕಾಯಿಸಿದಾಗ ಅಥವಾ ಹಾಗೆಯೇ ಇಟ್ಟಾಗ ಕೆನೆಗಟ್ಟುವುದು ಹಾಲಿನ ಸಹಜ ಸ್ವಭಾವ; ಅದಾಗದಂತೆ ಮಾಡುವುದು Homogenizationನ ಉದ್ದೇಶ. ಅತಿಯಾದ ಒತ್ತಡದಲ್ಲಿ ಹಾಲನ್ನು ಹಾಯಿಸಿ, ಕೆನೆಗಟ್ಟುವ ಕೊಬ್ಬಿನ ಸೂಕ್ಷ್ಮ ಕೋಶಗಳನ್ನು ಸಣ್ಣ ಚೂರುಗಳಾಗಿ ಒಡೆದು, ಹಾಲಿನಲ್ಲಿ ಹರಡಿದರೆ ಹಾಲು ದಪ್ಪವಾಗಿಮಂದವಾಗಿ ಕಾಣಿಸುತ್ತದೆ; ರುಚಿ ಹೆಚ್ಚುತ್ತದೆ; Shelf life ಹೆಚ್ಚಾಗುತ್ತದೆ. ಇವೆಲ್ಲದರಿಂದಾಗಿ ಬೆಲೆ ಹೆಚ್ಚು ಬರುತ್ತದೆ. ಹೆಚ್ಚು ಹಣ ಮಾಡಬಹುದು ಎಂಬುದು Hidden Agenda! ಆದರೆ ಹಣ ಮಾಡುವ ಭರದಲ್ಲಿ ಹಾಲು ಕುಡಿಯುವವರ ಆರೋಗ್ಯಆಯುಸ್ಸುಗಳಿಗೇ ಎರವಾಗುತ್ತಿರುವುದು ದುರಂತ!!

 Homogenization ತರುವ ಅನಾಹುತ: ಈ ಪ್ರಕ್ರಿಯೆಯಲ್ಲಿ ಅತ್ಯಂತ ಚಿಕ್ಕದಾಗಿ ಒಡೆಯಲ್ಪಡುವ ಕೊಬ್ಬಿನ ಕೋಶಗಳು (Fat Globules) ಜೀರ್ಣವಾಗುವ ಮೊದಲೇ, ನೇರವಾಗಿ ರಕ್ತವನ್ನು ಸೇರುತ್ತವೆ. ಹಾಲನ್ನು ಮಾತ್ರವಲ್ಲ, ರಕ್ತವನ್ನೂ ಮಂದಗೊಳಿಸುತ್ತವೆ! ರಕ್ತನಾಳಗಳನ್ನು ನಿಬಂಧಿಸಿ, ರಕ್ತಪರಿಚಲನೆಗೇ ತಡೆಯೊಡ್ಡುತ್ತವೆ; ರಕ್ತದೊತ್ತಡದಿಂದ (Blood Pressure) ಹೃದಯಾಘಾತದವರೆಗಿನ ಅನಾಹುತಗಳಿಗೆ ಕಾರಣವಾಗುತ್ತವೆ!!

 ಜೀರ್ಣವಾಗದೇ ರಕ್ತದಲ್ಲಿ ಸೇರಿಕೊಳ್ಳುವ ಕೊಬ್ಬು ಕ್ರಮವಾಗಿ ಪರಿಧಮನಿಯ, ಕೈಕಾಲುಗಳ, ಮೂತ್ರಕೋಶಗಳ ಹಾಗೂ ಮೆದುಳಿನ ಕಡೆಗಿನ ಅಪಧಮನಿಗಳಲ್ಲಿ ಶೇಖರಗೊಂಡು, ಹೃದಯಾಘಾತ, ಕೈಕಾಲುಗಳಲ್ಲಿ ನೋವು, ಮೂತ್ರಕೋಶಕ್ಕೆ ಸಂಬಂಧಿಸಿದ ತೊಂದರೆಗಳು, ಹಾಗೂ ಮೆದುಳಿನಲ್ಲಿ ಪ್ರಾಣಾಂತಕವಾದ strokeಗಳನ್ನು ಉಂಟುಮಾಡುತ್ತದೆ.

 ಹಾಲಿನಲ್ಲಿರುವ ಜೀರ್ಣಕಾರೀ ಪ್ರೊಟೀನ್‌ಗಳನ್ನು ನಾಶಗೊಳಿಸುವುದು Homogenization ಮಾಡುವ ಇನ್ನೊಂದು ಅನಾಹುತ! ಈ ಪ್ರಕ್ರಿಯೆಯನ್ನು ಮಾಡದೆ, ಹಾಲನ್ನು ಅದರ ಪಾಡಿಗೆ ಬಿಟ್ಟರೆ, ಜೀರ್ಣವಾದ ಬಳಿಕ ಶರೀರಕ್ಕೆ ಹಿತಕಾರಿಯಾದ ರೂಪದಲ್ಲಿ ಅದು ರಕ್ತವನ್ನು ಸೇರುತ್ತದೆ. ಆಗ ಅದು ನೀಡುವುದು ಪುಷ್ಟಿಯನ್ನೇ ಹೊರತು ರೋಗವನ್ನಲ್ಲ.

 ಒಟ್ಟಿನಲ್ಲಿ, Pasteurization ಹಾಲನ್ನು ಕೊಂದರೆ Homogenization ರೋಗಮೃತ್ಯುಗಳನ್ನು ನೀಡುವಕಾಡುವ ಪ್ರೇತವನ್ನಾಗಿ ಮಾರ್ಪಡಿಸುತ್ತದೆ!

 ಪರಮಾರ್ಥವನ್ನು ಅನರ್ಥವಾಗಿ ಮಾರ್ಪಡಿಸಿಕೊಳ್ಳುವುದನ್ನು ವಿಜ್ಞಾನವೆಂದೂ, ಪ್ರಗತಿಯೆಂದೂ ಕರೆಯಲು ಮನಸ್ಸು ಒಪ್ಪುತ್ತಿಲ್ಲ!

ಇದು ಅಂತಿಮವಾಗಿ ಆತ್ಮಘಾತಕವಾಗುವ ಪಾತಕ!

ಪ್ರಕೃತಿಯ ಅಮೂಲ್ಯವಾದ ಕೊಡುಗೆಯೊಂದನ್ನು ಕೆಡಿಸಿ, ಕುಡಿಸುವ ಮೂರ್ಖತೆ!

ಈಶ್ವರನು ನರನಿಗಿತ್ತ ಸ್ವಾತಂತ್ರ ್ಯಸಾಮರ್ಥ್ಯಗಳ ದುರುಪಯೋಗ ಮಾಡಿ, ಅವನ ಸಂವಿಧಾನವನ್ನು ಉಲ್ಲಂಘಿಸಿ, ಸುಮನೋಹರವೂ, ಸಮರ್ಪಕವೂ ಆದ ಅವನ ಶ್ರೇಷ್ಠ ಸೃಷ್ಟಿಯನ್ನು ಭ್ರಷ್ಟಗೊಳಿಸುವ ದೌಷ್ಟ್ಯ! ಧಾರ್ಷ್ಟ್ಯ!

 ಹಾಲು ಕುಡಿದರೆ ರೋಗ ಬರುವಂತೆ, ಜೀವ ಹೋಗುವಂತೆ ಮಾಡಿದ ಮಹಾಸಂಶೋಧಕರನ್ನು ಸ್ತುತಿಸಲು ಈ ಕಗ್ಗ:

ಮತಿವಂತರಿದ್ದರಲ ನಮ್ಮ ಹಿಂದೆಯುಮಿಲ್ಲಿ
ಹಿತಚಿಂತಕರು ಜನಕೆ, ಕೃತಪರಿಶ್ರಮರು
ಅತಿವೈದ್ಯದಿಂದ ಹೊಸರುಜಿನಕೆಡೆಯಾದೀತೊ
ಮಿತಿಯಿಂ ನವೀಕರಣ  ಮಂಕುತಿಮ್ಮ

ಶ್ರೇಷ್ಠವಾದ ವಸ್ತುಗಳನ್ನು ವ್ಯಕ್ತಿಗಳನ್ನು ಶ್ರೇಷ್ಠವಾದ ದೃಷ್ಟಿಯಿಂದಲೇ ನೋಡಬೇಕು ಮತ್ತು ಶ್ರೇಷ್ಠವಾದ ವಿಧಾನಗಳಿಂದ ನೋಡಿಕೊಳ್ಳಬೇಕು. ಆಗ ಅವು ಶ್ರೇಷ್ಠಫಲಗಳನ್ನು ಕೊಡುತ್ತವೆ. ಇಲ್ಲದಿದ್ದರೆ ಕಷ್ಟಫಲಗಳನ್ನು ನೀಡುತ್ತವೆ!

 ಕ್ಷೀರಕಂಟಕರಿಗೊಂದು ಪ್ರಶ್ನೆ: ಭೂಲೋಕದ ಅಮೃತವೇ ಆದ ಹಾಲನ್ನು, ಅದರ ಶ್ರೇಷ್ಠತೆಯಿಂದ ಭ್ರಷ್ಟಗೊಳಿಸಿದರೆ ನಷ್ಟ ಯಾರಿಗೆ!?

 ಕ್ಷೀರದ ಬರಹವಿನ್ನೂ ಮುಗಿದಿಲ್ಲ, ಬರ್ಬರತೆ ಮುಗಿಯದೇ ಬರಹ ಮುಗಿಯುವುದೆಂತು? ಭಾರತೀಯರ ಹಣೆಬರಹವೇ ಇದರಲ್ಲಿರುವುದರಿಂದ ಬರೆಯದೇ ಇರುವುದಾದರೂ ಎಂತು?

 ಕ್ಷೀರದ ಮೇಲಾಗುತ್ತಿರುವ ಕ್ರೂರ ದಾಳಿಗಳ ಮತ್ತಷ್ಟು ವಿವರಗಳು ಮುಂದಿನ ವಾರದಲ್ಲಿ… ಮುಂದುವರಿದ ಬರಹದಲ್ಲಿ…

(ಸಶೇಷ)
ಕೃಪೆ : hareraama.in

 

   

Leave a Reply