ಶಾರೀರಿಕ ಅಶಕ್ತರಿಗೆ ಆಟಗಳು

ಕ್ರೀಡೆ - 0 Comment
Issue Date :

ವಿವಿಧ ವಯೋಮಾನದವರು ಆಡುವ ಆಟಗಳು ಬೇರೆ ಬೇರೆ ರೀತಿಯ ಆಟಗಳಾಗಿರುತ್ತವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲವೊಮ್ಮೆ 35 ವರ್ಷಕ್ಕೇ ಆಟದಿಂದ ನಿವೃತ್ತರಾಗುವ ಪ್ರಸಂಗಗಳು ಅನೇಕ. ದೈಹಿಕ ಶಕ್ತಿ, ಸ್ಪರ್ಧಾತ್ಮಕತೆಯ ಕೊರತೆ ಇದರ ಹಿನ್ನೆಲೆಯಾಗಿರುತ್ತದೆ. ಅದೇ ರೀತಿ ಅಂಗವಿಕಲ ವ್ಯಕ್ತಿಗಳು ತಮ್ಮ ಮನೋಲ್ಲಾಸಕ್ಕೆ, ವ್ಯಾಯಾಮಕ್ಕೆ ಆಡುವುದು ಹೇಗೆ, ಯಾವ ಯಾವ ಸಂಗತಿಗಳನ್ನು ಗಮನಿಸಬೇಕು ಎಂಬಿತ್ಯಾದಿ ವಿಷಯಗಳನ್ನು ಈ ವಾರದ ಅಂಕಣದಲ್ಲಿ ಪರಿಚಯಿಸುವ ಪ್ರಯತ್ನ ಇದು. ಜನಸಂಖ್ಯೆಯಲ್ಲಿ ವಿವಿಧ ರೀತಿಯ ಅಂಗವಿಕಲ ವ್ಯಕ್ತಿಗಳು ಗಮನಾರ್ಹ ಪ್ರಮಾಣದಲ್ಲಿದ್ದರೆ ಅವರ ಕೊರತೆಗಳನ್ನು ಗಮನದಲ್ಲಿಟ್ಟುಕೊಂಡು ಆಡುವುದು ಒಳಿತು.
ಈ ವಿಧವಾದ ಜನರಲ್ಲಿ ತಾತ್ಕಾಲಿಕವಾಗಿ ಅಶಕ್ತತೆ ಇರುವವರು ಆಗಬಹುದು ಅಥವಾ ಖಾಯಿಲೆ ಇರುವವರು, ಚೇತರಿಸಿಕೊಳ್ಳುತ್ತಿರುವವರು, ಶಾಶ್ವತ ಅಶಕ್ತತೆಯನ್ನು ಹೊಂದಿರುವವರು, ಇಂದ್ರಿಯ ದುರ್ಬಲತೆ ಇರುವವರು ಅಂದರೆ ಕುರುಡುತನ, ಕೈಕಾಲುಗಳ ಊನತೆ, ಶರೀರದ ಬೇರೆ ಭಾಗಗಳ ದೋಷವಿರುವವರಾಗಬಹುದು. ಇಂಥವರು ಆಡುವ ಆಟಗಳು ಸಾಮಾನ್ಯವಾಗಿದ್ದರೂ ನಿಯಮಗಳಲ್ಲಿ ಬದಲಾವಣೆ ಮಾಡಿಕೊಳ್ಳಲೇಬೇಕು. ಈ ರೀತಿಯ ವ್ಯಕ್ತಿಗಳು ಆಟ ಆಡುವುದರ ಮೂಲಕ ಆರೋಗ್ಯದಲ್ಲಿ ಉತ್ತಮ ಪರಿಣಾಮಗಳು ಕಾಣಬಹುದು. ವಿಶೇಷವಾಗಿ ಮಾನಸಿಕ ಅಶಕ್ತತೆ ಇರುವ ವ್ಯಕ್ತಿಗಳು ಗುಂಪು ಆಟಗಳನ್ನು ಆಡುವುದರ ಮೂಲಕ ಜೀವನೋತ್ಸಾಹವನ್ನು ಪಡೆಯಬಹುದು. ಆಟಗಳಲ್ಲಿ ಭಾಗವಹಿಸುವುದರಿಂದ ಸಾಮಾನ್ಯ ಜನರಿಗಾಗುವ ಆಟದ ಪರಿಣಾಮಗಳು, ಪ್ರಯೋಜನಗಳು ಅಶಕ್ತತೆ ಹೊಂದಿರುವ ವ್ಯಕ್ತಿಗಳಲ್ಲೂ ಲಭಿಸುತ್ತವೆ.
ಸಾಮಾನ್ಯವಾದ ಆಟಗಳನ್ನು ಆಡುವ ರೀತಿಗೆ ಅವರನ್ನು ಹೇಗೆ ಒಗ್ಗಿಸಿಕೊಳ್ಳಬಹುದು ಎಂಬಂತಹ ವಿಚಾರಗಳನ್ನು ಗಮನಿಸಬೇಕು. ಖಾಯಿಲೆಯಿಂದ ಚೇತರಿಸಿಕೊಂಡವರಿಗೆ ಕುಳಿತು ಅಥವಾ ನಿಂತು ಆಡಬಲ್ಲವರು ಆಡುವಂಥ ಸಾಮಾನ್ಯ ಚಟುವಟಿಕೆಗಳಿಂದ ಕೂಡಿದ ಮಂಡಲದ ಒಳಗಿನ ಆಟಗಳನ್ನು ಆಡಿಸುವುದು ಒಳಿತು.
ಇಂದ್ರಿಯ ಪಟುತ್ವದ ಆಟಗಳೂ ಸಹ ಮನರಂಜಕವಾಗಿರುವುವು ಹಾಗೂ ಇತರರಿಗೆ ಇರುವಂತೆ ಇವರಿಗೂ ಅದರಿಂದ ಪ್ರಯೋಜನವಾಗುವುದು. ಉದಾಹರಣೆಗೆ ನೆನಪಿನ ಶಕ್ತಿ ಆಟಗಳು, ಕುಳಿತು ಆಡುವ ಬೌದ್ಧಿಕ ಆಟಗಳು.
ಒಮ್ಮೊಮ್ಮೆ ಇಬ್ಬರೇ ಆಟಗಾರರಿದ್ದಾಗ ಕೂಡ ‘ಮಿಠಾಯಿ ಪಟ್ಟಿ’ ಮತ್ತು ‘ಶತಾಯು’ ರೀತಿಯ ಆಟಗಳನ್ನು ಸಂತೋಷದಿಂದ ಆಡಬಹುದು.
ಕೈಕಾಲು ಅಥವಾ ಶರೀರದ ಬೇರೆ ಯಾವುದಾದರೂ ಅಂಗ ಊನವಾಗಿ ದ್ದವರಿಗೆ ಕೂಡ ಮೇಲ್ಕಂಡ ಹೆಚ್ಚು ಆಯಾಸವಿಲ್ಲದ ಆಟಗಳನ್ನು ಆಡಿಸಬೇಕು. ಇಲ್ಲಿ ಆಟ ಕೊಡುವ ಉತ್ಸಾಹಕ್ಕೆ ಒತ್ತು ಇರಬೇಕೆ ಹೊರತು ಸ್ಪರ್ಧಾತ್ಮಕತೆ ಇರಬಾರದು. ಮಾನಸಿಕ ರೋಗಿಗಳಿಗೆ ಮನೆಯೊಳಗಿನ ಹಾಗೂ ಬಯಲಿನ ಆಟಗಳು ಅವರ ಚೇತರಿಕೆಯಲ್ಲಿ ಹೆಚ್ಚಿನ ಪರಿಣಾಮ ಉಂಟು ಮಾಡಬಲ್ಲವು. ಕೆಲವರು ಆಟದಲ್ಲಿ ಭಾಗವಹಿಸಬಹುದು ಅಥವಾ ಕಡಿಮೆ ಭಾಗವಹಿಸಬಹುದು, ಆದರೂ ಆಟಗಳಲ್ಲಿ ಇತರರು ಯಾವ ರೀತಿ ಆನಂದಿಸುವವರೋ ಅದೇ ರೀತಿ ಇವರೂ ಆನಂದದಲ್ಲಿ ಭಾಗಿಗಳಾಗುತ್ತಾರೆ.
ಚಿತ್ರಗಳ ಮೂಲಕ ವಿಷಯಗಳನ್ನು ತಿಳಿಸುವುದು ಮತ್ತು ಆಟದ ನಿಯಮಗಳ ಮಾಹಿತಿ ನೀಡುವುದರಿಂದ ಸಾಮಾನ್ಯ ಜನರಂತೆಯೇ ಕಿವುಡ ಮತ್ತು ಮೂಕರೂ ಕೂಡ ಸಾಮಾನ್ಯವಾಗಿ ಎಲ್ಲ ಆಟಗಳಲ್ಲಿ ಭಾಗವಹಿಸುವುದಕ್ಕೆ ಸಾಧ್ಯವಾಗುತ್ತದೆ. ಅದೇ ರೀತಿ ಆಟಕ್ಕೆ ತಕ್ಕ ಸ್ಥಳಗಳನ್ನು ನಿರ್ಮಿಸುವುದು, ಸಣ್ಣ ಸಣ್ಣ ಗೆಜ್ಜೆಗಳನ್ನು ಚೆಂಡುಗಳಿಗೆ ಸೇರಿಸಿರುವುದು, ನಿಲ್ಲಿಸದೆ ಹೊಡೆಯುತ್ತಿರುವ ದೊಡ್ಡ ಗಂಟೆ ಅಥವಾ ಸಂಗೀತ ಹಾಡುವುದು ಅಥವಾ ಆಡಿಯೋ ಉಪಕರಣಗಳನ್ನು ಉಪಯೋಗಿಸುವುದು ಈ ರೀತಿಯ ಆಟಗಳಿಗೆ ಸಹಾಯಕವಾಗುತ್ತದೆ. ಪಟ್ಟಿ ಅಥವಾ ದಾರದಿಂದ ಚಲನ ನಿರ್ಧಾರಗಳನ್ನು ತಿಳಿಯುವಂತೆ ಮಾಡಬೇಕು. ಸಾಧನಗಳಿಂದ ಆಡುವ ಅನೇಕ ಆಟಗಳನ್ನು ಕುರುಡರೂ ಆಡಲನುಕೂಲವಾಗುವಂತೆ ಮಾಡಬಹುದು. ಇತ್ತೀಚಿನ ದಿನಗಳಲ್ಲಿ ಕುರುಡರೂ ಅಂತಾರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸುವಷ್ಟು ವಿಶ್ವಾಸವನ್ನು ಪಡೆದುಕೊಂಡಿರುವುದು ವಿಶೇಷ.
ಸಾಮಾನ್ಯವಾಗಿ ಆಟಗಳು ಎಲ್ಲವನ್ನೂ ಮರೆತು ಅದರಲ್ಲಿ ತೊಡಗಿಸಿಕೊಳ್ಳುವ ವಾತಾವರಣ ನಿರ್ಮಾಣ ಮಾಡುತ್ತದೆ. ಕೆಲವೊಮ್ಮೆ ತಮ್ಮ ನೋವು, ವಯಸ್ಸಿನ ಮಿತಿಗಳನ್ನು ಮರೆತು ಆಡುವುದಕ್ಕೆ ಆಟಗಳು ಕಾರಣವಾಗುತ್ತದೆ. ಈ ರೀತಿ ಅಂಗವಿಕಲತೆ ಇರುವ ವ್ಯಕ್ತಿಗಳು ತಮ್ಮ ನೋವುಗಳನ್ನು ಮರೆಯಲು ಆಟಗಳನ್ನು ಸೂಕ್ತ ರೀತಿಯಲ್ಲಿ ಆಡಿದಲ್ಲಿ ಅವರ ಅಶಕ್ತತೆ ಆಟ ಆಡುವ ಸಮಯದಲ್ಲಿ ಮರೆತುಹೋಗಬಹುದು. ಸೂಕ್ತ ನಿಯಮಗಳನ್ನು ಅಳವಡಿಸಿಕೊಂಡ ಆಟ ಆಡುವುದರ ಮೂಲಕ ಅಂಗವಿಕಲ ವ್ಯಕ್ತಿಗಳಲ್ಲೂ ಆರೋಗ್ಯ ಸುಧಾರಣೆ ಹಾಗೂ ತಮ್ಮ ಬಗ್ಗೆ ವಿಶ್ವಾಸ ಹೆಚ್ಚಿಸುವ ಪ್ರಯತ್ನ ಮಾಡಬಹುದು.

– ಶಿ.ನಾ.ಚಂದ್ರಶೇಖರ

 
   

Leave a Reply