ಶಿಕ್ಷಣ, ಕೃಷಿ, ಸೇವಾ ಕ್ಷೇತ್ರಗಳಲ್ಲಿ ಹೊಂಬೆಳಕು

ಜಿಲ್ಲೆಗಳು ; ಶಿವಮೊಗ್ಗ - 0 Comment
Issue Date : 08.03.2014

‘ಸಂಘ ಕಾರ್ಯ’ದ ಫಲ ಸುತ್ತಣ ಸಮಾಜದಲ್ಲಿ ಪರಿವರ್ತನೆ ಕಾಣುವಂತಾಗುವುದು ‘ಪರಂವೈಭವಂ ನೇತು ಮೇತತ್‌ಸ್ವರಾಷ್ಟ್ರಂ’ ಎಂಬ ಪ್ರಾಥನೆಯ ಕನಸು ನನಸಾಗುವುದೆಂದರೆ ಇದೇ. ಇದಕ್ಕೆ ಮಾಧ್ಯಮ ಸ್ವಯಂಸೇವಕರು ಗುರಿ ಸಮಾಜ ಜಾಗೃತಿ ಸಂಘಟನೆ ಸಂಸ್ಕಾರದ ಮೂಲಕ ಸಜ್ಜನ ಶಕ್ತಿಯ ನಿರ್ಮಿತಿ. ಇದು ಸಂಘ ಕೈಗೊಂಡ ಸೇವಾ ಕಾರ್ಯದ ಹಿಂದಿರುವ ಸಂಗತಿ. ಸಮಾಜದ ಎಲ್ಲಾ ರಂಗ ಕ್ಷೇತ್ರಗಳಲ್ಲೂ ಹಿಂದುತ್ವದ ಹೊಂಬೆಳಕು ಬೀರುವ ಯತ್ನ ಇದು. ತೀರ್ಥಹಳ್ಳಿ ಸಹ ಇದಕ್ಕೆ ಹೊರತಾಗಿಲ್ಲ. ಶಿಕ್ಷಣ, ಧರ್ಮ, ಕೃಷಿ, ಹೀಗೆ ಹಲವು ಕ್ಷೇತ್ರಗಳಲ್ಲಿ ಇಲ್ಲಿ ಸೇವಾ ಚಟುವಟಿಕೆ ನಡೆಯುತ್ತಿವೆ.

1979ರಲ್ಲಿ ಹಿಂದು ಸೇವಾ ಪ್ರತಿಷ್ಠಾನದ ರೂವಾರಿ ಅಜಿತ ಕುಮಾರರ ಒತ್ತಾಸೆಯಿಂದ ಆರಂಭವಾದ ಸೇವಾ ಭಾರತಿ ಟ್ರಸ್ಟ್ ಮರುವರ್ಷವೇ ಪುಟಾಣಿಗಳಿಗೆ ಶಿಕ್ಷಣ -ಸಂಸ್ಕಾರ ನೀಡಲು ಸೇವಾ ಭಾರತಿ ಶಿಶುವಿಹಾರ ಆರಂಭಿಸಿತು. ಮಕ್ಕಳ ಸರ್ವತೋಮುಖ ಬೆಳವಣಿಗೆಯ ಗುರಿ ಹೊಂದಿದ ಈ ಪ್ರಯತ್ನ ಇಂದು ಸೇವಾ ಭಾರತಿ ಹಿರಿಯ ಪ್ರಾಥಮಿಕ ಶಾಲೆಯಾಗಿ ಬೆಳೆದು ನಿಂತಿದೆ. ತನ್ನದೇ ಅಂದವಾದ ಕಟ್ಟಡಗಳು, ಅನುಭವಿ -ಸಮರ್ಪಿತ ಬದುಕಿನ ಅಧ್ಯಾಪಕರು, ಉತ್ತಮ ಗ್ರಂಥಾಲಯ, ಆಟ -ಪಾಠಗಳ ಪರಿಕರಗಳು, ಭಾರತೀಯ ಪದ್ಧತಿಯ ಶಿಕ್ಷಣಕ್ರಮ ಬೇರೆ ಶಿಶುಮಂದಿರ ಶಾಲೆಗಿಂತ ವಿಶಿಷ್ಟ ಎನ್ನಿಸಲು ಕಾರಣವಾಗಿವೆ.

ಪುಟಾಣಿಗಳ ಘೋಷ್‌ಪಥಕ, ಪುಟಾಣಿಗಳ ಕೈಬರಹ ಪತ್ರಿಕೆ, ವ್ಯಕ್ತಿತ್ವ ನಿರ್ಮಿತಿಯ ದ್ಯೋತಕವಾದ ಆಕರ್ಷಕ ಕ್ರೀಡಾದಿನೋತ್ಸವ, ಸಂಸ್ಕೃತಿ ಸೌರಭ ಬಿಂಬಿಸುವ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳೆಲ್ಲಾ ಪಾಲ್ಗೊಳ್ಳುವುದು ಚೇತೋಹಾರಿ ಅನುಭವ. ಹೆಮ್ಮೆಯ ಸಾಹಿತಿ ಶಿವರಾಮ ಕಾರಂತರು, ಅಂಕಣಕಾರ ಹಾ.ಮಾ.ನಾಯಕ್ ಸೇರಿದಂತೆ ಹಲವು ಕವಿ ಸಾಹಿತಿ ಶಿಕ್ಷಣ ತಜ್ಞರ ಮೆಚ್ಚುಗೆ ಗಳಿಸಿದ ಈ ಸಂಸ್ಥೆ ಖಂಡಿತ ಹತ್ತರೊಡನೆ ಮತ್ತೊಂದಲ್ಲ. ಸೇವಾಭಾರತಿ ಆರಂಭಿಸಿದ ಕೃಷ್ಣವೇಷ ಸ್ಪರ್ಧಾ ಕಾರ್ಯಕ್ರಮ ಕೃಷ್ಣ ಲೋಕವನ್ನೇ ಅನಾವರಣಗೊಳಿಸುವಲ್ಲಿ ಯಶಸ್ವಿ. ಚಲನಚಿತ್ರ,ಸಂಗೀತ ಇತ್ಯಾದಿ ಕ್ಷೇತ್ರಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಹೆಸರು ಮಾಡಿದ್ದಾರೆ. 1990ರಲ್ಲಿ ಆರಂಭವಾದ ‘ಯೋಗ ಶಿಕ್ಷಣ ಸಮಿತಿ’ ಸಾವಿರಾರು ಜನರಿಗೆ ಯೋಗ ಶಿಕ್ಷಣ ನೀಡುವ ಅಪರೂಪದ ಕೇಂದ್ರ,ಯೋಗ ಪ್ರಾಣಾಯಾಮ ಶಿಕ್ಷಣ ತರಗತಿ, ಸಾಮೂಹಿಕ ಸೂರ್ಯ ನಮಸ್ಕಾರ ಯಜ್ಞ, ಗೀತಾಪಾರಾಯಣ ಮುಂತಾದ ಚಟುವಟಿಕೆಗಳಲ್ಲದೇ ಯೋಗ, ಮನೆಮದ್ದು ಮುಂತಾದ ಅಪರೂಪದ ಕಾರ್ಯಕ್ರಮಗಳ ಕೇಂದ್ರವೆನಿಸಿದೆ.

ಕೃಷಿ ಋಷಿ ಎಂದೇ ಖ್ಯಾತರಾದ ಪುರುಷೋತ್ತಮರಾಯರು ರೂಪಿಸಿದ ಸಾವಯವ ಕೃಷಿ ಪದ್ಧತಿ ಇಂದು ವಿಶ್ವ ಕೃಷಿ ಕ್ಷೇತ್ರಕ್ಕೊಂದು ಹೊಸ ದಿಕ್ಕು ನೀಡಿದೆ. ಅವರ ನೆನಪಿನಲ್ಲಿ ಪುರುಷೋತ್ತಮ ರಾವ್ ಕೃಷಿ ಸಂಶೋಧನ ಪ್ರತಿಷ್ಠಾನವಾಗಿ ಅವರ ತೋಟ ಒಂದು ಕೃಷಿ ವಿಶ್ವವಿದ್ಯಾಲಯವೆನಿಸಿದೆ. ಸಾವಯವ ಕೃಷಿ ಪ್ರಯೋಗ ಪರಿವಾರ ಪ್ರಾಂತದೆಲ್ಲೆಡೆ ಹಬ್ಬಿದೆ. ಆಗಾಗ ನಡೆಯುವ ಕೃಷಿಕೂಟ, ಸಾವಯವ ರೈತರ ಉತ್ಪನ್ನ ಮಾರಾಟ ಮಾಡುವ ಕೇಂದ್ರ ಮುಂತಾದವು ನಾಡಿಗೆ ಹೊಸ ಬೆಳಕು ನೀಡುವಲ್ಲಿ ಯಶಸ್ವಿ. ನೂರಾರು ಕಾರ್ಯಕರ್ತರು ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಹೊಸ ಹೊಸ ಆವಿಷ್ಕಾರಗಳಿಗೆ ಕಾರಣರಾಗುತ್ತಿದ್ದಾರೆ.

ಪ್ರತಿವರ್ಷ ನಡೆವ ‘ಪುರುಷೋತ್ತಮ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮ ಸಾವಯವ ಕೃಷಿಕರ ಪ್ರಾಂತ ಸಮಾವೇಶ ಮಾತ್ರವಲ್ಲ ಹೊಸ ಸಂಗತಿ ಕಲಿಸುವ ಶಿಕ್ಷಣ ಕೇಂದ್ರ. ಪ್ರತಿ 5 ವರ್ಷಕ್ಕೆ ಒಮ್ಮೆ ಅಖಿಲ ಭಾರತ ಮಟ್ಟದ ಕಾರ್ಯಕ್ರಮವಾಗಿ ಇದು ನಡೆಯುತ್ತಿದೆ. ‘ಸಾವಯವ ಕೃಷಿ ಮಿಶನ್’ ಕರ್ನಾಟಕ ಸರ್ಕಾರ ಸ್ಥಾಪಿಸಲು ಈ ಸೇವಾ ಸಂಸ್ಥೆಯೇ ಕಾರಣ ಎಂದರೆ ತಪ್ಪಲ್ಲ.

ರಾಯರ ಕನಸಿನಂತೆ ತೀರ್ಥಹಳ್ಳಿ ಸಮೀಪದ ಚಿಟ್ಟೆಬೈಲಿನಲ್ಲಿ ಆರಂಭವಾದ ಪ್ರಜ್ಞಾಭಾರತಿ ಪ್ರೌಢಶಾಲೆ ಮೂರು ಬಾರಿ ಶೇ.100 ಫಲಿತಾಂಶ ಪಡೆದು ಸರಕಾರದಿಂದ ಪ್ರಶಸ್ತಿ ಪಡೆದುದು ಅದು ನೀಡುತ್ತಿರುವ ಸತ್ವಪೂರ್ಣ ಶಿಕ್ಷಣಕ್ಕೆ ಹೆಗ್ಗುರುತು.

ನಕ್ಸಲರ ಹಾವಳಿಯಿಂದ ಕಂಗೆಟ್ಟಿದ್ದ ಹಲವು ಪ್ರದೇಶಗಳಲ್ಲಿ (ಬೈಂದೂರಿನಿಂದ ಆರಂಭವಾಗಿ ನರಸಿಂಹರಾಜಪುರ ತಾಲೂಕಿನ ವರೆಗೆ ವಿಸ್ತಾರವಾಗಿ ಹಬ್ಬಿರುವ ಘಟ್ಟ ಪ್ರದೇಶ) ಹತ್ತಾರು ಸೇವಾವ್ರತಿನಿಯರು ಕಾರ್ಯನಿರ್ವಹಿಸುತ್ತಿದ್ದು ಆ ಭಾಗದ ಜನರ ಮನೋಸ್ಥೈರ್ಯ ಹೆಚ್ಚಿಸಿದೆ. ಶೃಂಗೇರಿ ಶ್ರೀಮಠ, ಹಿಂದು ಸೇವಾ ಪ್ರತಿಷ್ಠಾನ ಈ ಕಾರ್ಯಕ್ಕೆ ಬೆನ್ನೆಲುಬು. ಯೂಥ್ ಫಾರ್ ಸೇವಾ ಸಹಯೋಗದೊಡನೆ ಸೇವಾಭಾರತಿ ಶಿಕ್ಷಣ – ಸಂಸ್ಕಾರ- ಸಮಾಜ ಜಾಗೃತಿಯ ಹಲವು ಕೆಲಸಗಳನ್ನು ಮಾಡುತ್ತಿದೆ.

ವಿಶ್ವ ಹಿಂದು ಪರಿಷತ್ತು, ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ಕಿಸಾನ್ ಸಂಘ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು, ಭಜರಂಗದಳ ಮುಂತಾದ ಸಂಘಟನೆಗಳೂ ಇಲ್ಲಿ ಕೆಲಸ ಮಾಡುತ್ತಿವೆ. ಆರಗದ ಕೇಶವ ಶಿಶುಮಂದಿರ ತಾರಗೊಳ್ಳಿ ನಾಗರಾಜರಾಯರ ಸ್ಮಾರಕವಾಗಿ ಡಾಕ್ಟರಜೀ ಜನ್ಮಶತಾಬ್ದಿ ವೇಳೆ ಹುಟ್ಟಿದ ಸಂಸ್ಥೆ. ತಾಲೂಕಿನ ಶಿಶು ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಸ್ಥಾನಗಳಿಸಿದೆ. ಶಿಶು ಶಿಕ್ಷಣ ತಜ್ಞ ಡಾ. ಉಪೇಂದ್ರ ಶೆಣೈ ಅವರ ಕನಸಿನಂತೆ ಈ ಶಿಶುಮಂದಿರ ಮಾತೃ ಮಂಡಳಿ, ಬಾಲಗೋಕುಲ ಮುಂತಾದ ಹಲವು ಚಟುವಟಿಕೆಗಳಿಂದ ಎಲ್ಲರ ಮನೆಮಾತು.

ಕೃಷಿ, ಶಿಕ್ಷಣ ಮತ್ತು ಸಂಸ್ಕಾರ ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳು ಎಲ್ಲರ ಬೆಂಬಲ ಗಳಿಸುವಲ್ಲಿ ಯಶಸ್ವಿ ಆಗಿವೆ.

   

Leave a Reply