ಶಿವಶರಣರ ನೀತಿ ಸಂಹಿತೆ

ಲೇಖನಗಳು ; ಸಂತ ಪರಂಪರೆ - 0 Comment
Issue Date : 28.11.2014

12ನೇ ಶತಮಾನವು ಕರ್ನಾಟಕದ ಇತಿಹಾಸದಲ್ಲಿ ಸಾಮಾಜಿಕ ಪರಿವರ್ತನೆಯ ಪರ್ವಕಾಲವೆನಿಸಿದೆ. ಬಸವಣ್ಣನವರ ನೇತೃತ್ವದಲ್ಲಿ ಸಮಾಜೋಧಾರ್ಮಿಕ ಆಂದೋಲನವೊಂದು ಚಾಲನೆಗೊಂಡು ಶಿವಶರಣರು ಆತ್ಮೋನ್ನತಿಯನ್ನು ಲೋಕೋದ್ಧಾರವನ್ನು ಸಾಧಿಸಲು ನೂತನ ಜೀವನ ಶೈಲಿಯನ್ನು ಸ್ಥಾಪಿಸಿದರು. ಅದಕ್ಕಾಗಿ ಹೊಸ ನೀತಿ ಸಂಹಿತೆಯನ್ನು ರೂಪಿಸಿದರು. ಅಂದಿನ ನೀತಿ ಸಂಹಿತೆೆ ಇಂದು ಹೆಚ್ಚು ಪ್ರಸ್ತುತವಾಗಿದೆ; ಅಗತ್ಯವಾಗಿದೆ.

ಅಂದಿನ ಸಮಾಜದಲ್ಲಿ ಮನೆಮಾಡಿದ್ದ ಡಾಂಭಿಕತೆ, ಮೂಢಾಚರಣೆಗಳು, ದುರ್ವರ್ತನೆ, ದಬ್ಬಾಳಿಕೆ, ಅನೀತಿ, ಅಸಮಾನತೆ, ವರ್ಗಭೇದ, ಲಿಂಗಭೇದ ಮೊದಲಾದ ಕೆಡುಕುಗಳನ್ನು ಕಿತ್ತೆಸೆಯಲು ಶಿವಶರಣರು ಹೆಣಗಾಡಿದರು. ನೂರಾರು ಶರಣ-ಶರಣೆಯರು ತಮ್ಮ ವಚನಗಳ ಮೂಲಕ ನೂತನ ಜೀವನ ವಿಧಾನವನ್ನು ಬೋಧಿಸಿದರು. ತಾವು ಪರಿಪಾಲಿಸಿದರು. ಈ ಪ್ರಯೋಗ ಜಾಗತಿಕ ಇತಿಹಾಸದಲ್ಲಿಯೇ ಅದ್ವಿತೀಯವೆನಿಸಿದೆ. ಮೂಢ ನಂಬಿಕೆಗಳಿಗೆ ತುತ್ತಾಗಿ ಜನರು ಧರ್ಮಾಚರಣೆಯ ಹೆಸರಿನಲ್ಲಿ ಅಧರ್ಮದ ದಾರಿ ಕ್ರಮಿಸುತ್ತಿರುವುದನ್ನು ವಿವರಿಸಿ ಬಲವಾಗಿ ವಿರೋಧಿಸಿದರು. ಸಮಾಜದಲ್ಲಿಯ ಬೂಟಾಟಿಕೆ, ಡಾಂಭಿಕತೆ, ಅಸ್ಪಶ್ಯತೆ, ಅಸಮಾನತೆಗಳ ವಿರುದ್ಧ ಸಮರವನ್ನೇ ಸಾರಿದರು. ನೀರು ಕಂಡಲ್ಲಿ ಮುಳುಗುವ, ಮರನ ಕಂಡಲ್ಲಿ ಸುತ್ತುವ ಬಾಹ್ಯಾಚರಣೆಗಳು ಅಧರ್ಮವೆಂಬುದನ್ನು ಮನವರಿಕೆ ಮಾಡಿಕೊಟ್ಟರು. ಸಜ್ಜನನಲ್ಲದವನು ಭಕ್ತನಾಗಲಾರನೆಂದು ಹೇಳಿ ಸದ್ವರ್ತನೆಯನ್ನು ರೂಢಿಸಿಕೊಳ್ಳಲು ಪ್ರೋ ಸತ್ಯನಲ್ಲದವನಿಗೆ ನಿತ್ಯ ನಿಯಮವೇಕೆ ಎಂದು ಬಸವಣ್ಣನವರು ಪ್ರಶ್ನಿಸಿದರು. ಅಂತರಂಗ ಶುದ್ಧಿ ಬಹಿರಂಗ ಶುದ್ಧಿಗೆ ಪ್ರೇರಣೆ, ಪ್ರೇರಕ. ಸದಾಚಾರ, ಸದ್ವರ್ತನೆ ಸ್ವಚ್ಛ, ಶುದ್ಧ ಸಮಾಜದ ಅಡಿಗಲ್ಲುಗಳು. ದಯೆ ಧರ್ಮದ ಮೂಲ ಎಂದು ಸಾರುವುದರ ಮೂಲಕ ಧಾರ್ಮಿಕ ಜಾಗೃತಿಯನ್ನು ಮೂಡಿಸಿದರು.

ಸಮಾಜವು ಆರ್ಥಿಕವಾಗಿ ಸುಭದ್ರವಾಗಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯವೆಂಬುದನ್ನು ಮನಗಂಡ ಶರಣರು ಕಾಯಕ ಸಿದ್ಧಾಂತವನ್ನು ರೂಢಿಗೆ ತಂದರು. ಕಾಯಕವೆಂಬುದು ಸ್ವಾವಲಂಬನೆಗೆ ಹೆಬ್ಬಾಗಿಲು. ಯಾವೊಂದು ಕಾಯಕವೂ ಶ್ರೇಷ್ಠವೇ. ಕಾಯಕದಲ್ಲಿ ಮೇಲು, ಕೀಳೆಂಬುದಿಲ್ಲ. ಅಲ್ಲಿ ಕೀಳರಿಮೆಗೆ ಅವಕಾಶವಿಲ್ಲ. ಶುದ್ಧಮನದಿಂದ ನಿರ್ವಹಿಸಿದ ಪ್ರತಿಯೊಂದು ಕಾಯಕವು ದೇವಪೂಜೆಗೆ ಸಮನಾದುದೆಂದರು ಶಿವಶರಣರು. ಕಾಯಕದಲ್ಲಿ ನಿರತನಾದಾಗ ಶರಣರು ಗುರು, ಲಿಂಗ, ಜಂಗಮರನ್ನೂ ಲೆಕ್ಕಿಸಲಿಲ್ಲ. ಇದು ಕಾಯಕಕ್ಕೆ ಅವರು ನೀಡಿದ ಮಹತ್ವ. ಕಾಯಕದಲ್ಲಿ ಶ್ರದ್ಧೆ ಇರಬೇಕು. ಏಕಾಗ್ರತೆ ಇರಬೇಕು. ಲೋಕ ಕಲ್ಯಾಣದ ಉದ್ದೇಶವಿರಬೇಕು. ಇದು ಶಿವಶರಣರ ಕಾಯಕದ ಪರಿಕಲ್ಪನೆಯಾಗಿದ್ದಿತು. ಸತ್ಯ, ಶುದ್ಧ ಕಾಯಕಕ್ಕಿಂತ ಮಿಗಿಲಾದ ಆಧ್ಯಾತ್ಮಿಕ ಸಾಧನೆ ಇಲ್ಲ ಎಂಬುದು ಅವರ ನಿಲುವಾಗಿದ್ದಿತು.

ಬಹುರೂಪಿ ಚೌಡಯ್ಯನನ್ನು ಸಾಕ್ಷಾತ್ ಶಿವನು ‘ಬಾ ಕೈಲಾಸಕ್ಕೆ’ ಎಂದು ಕರೆದಾಗ ೞಬೇಡೆನಗೆ ಕೈಲಾಸ… ಶರಣರಿಗೆ ನಾಡ ಕಾಯಕವೇ ಕೈಲಾಸೞಎಂದು ಉತ್ತರಿಸುತ್ತಾನೆ. ಕಾಯಕದಲ್ಲಿಯೇ ಕೈಲಾಸವನ್ನು ಕಂಡವರು ಶಿವಶರಣರು. ಅಮ್ಮಿ ದೇವಯ್ಯನು ಒಬ್ಬ ಕ್ಷೌರಿಕ. ಆತ ಬಸವನ ಮಾರ್ಗವನ್ನು ಅನುಸರಿಸಿದ. ತನ್ನ ವಚನವೊಂದರಲ್ಲಿ ‘ಕತ್ತಿಯ ಬಸವಣ್ಣ ಕೊಟ್ಟ, ಕತ್ತರಿಯ ಚೆನ್ನಬಸವಣ್ಣ ಕೊಟ್ಟ. ಕಿತ್ತು ಹಾಕುವ ಚಿಮ್ಮಟವ ಪ್ರಭುರಾಯ ಕೊಟ್ಟ…’ ಎಂದು ಹೇಳುತ್ತಾನೆ. ಹೀಗೆ ಬಸವಾದಿ ಶರಣರು ಶೋಷಿತ ವರ್ಗವದರಿಗೆ ಹೊಸ ಸಂಸ್ಕಾರ ನೀಡಿದರು. ಧರ್ಮದ ಹೆಸರಿನಲ್ಲಿ ಹಿಂದುಳಿದ ಜನರಿಗೆ ಆಗುತ್ತಿದ್ದ ಅನ್ಯಾಯಗಳ ವಿರುದ್ಧ ಬಂಡೆದ್ದರು. ಹೊಲಸು (ಲಂಚ !) ತಿಂಬುವನೆ ಹೊಲೆಯ ಎಂದು ಬಸವಣ್ಣನವರು ಪದಗಳಿಗೆ ವ್ಯಾಪಕ ಅರ್ಥನೀಡಿದರು. ಅವರ ಆಶ್ರಯದಲ್ಲಿ ಪಂಚಮರು ಮರುಹುಟ್ಟು ಪಡೆದರು. ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಶೋಷಿತರು, ಶರಣರ ಆಶ್ರದಲ್ಲಿ ಹೊಸ ಬೆಳಕು ಕಂಡರು. ಹೆಂಡದ ಮಾರಯ್ಯ, ಮಾದಾರ ಧೂಳಯ್ಯ, ಹರಳಯ್ಯ, ಮೇದಾರ ಕೇತಯ್ಯ, ನುಲಿಯ ಚಂದಯ್ಯ, ಮಡಿವಾಳ ಮಾಚಯ್ಯ ಇವೇ ಮೊದಲಾದ ಕಸಬುದಾರರು ಹೊಸ ಜೀವನ ಪಡೆದು ನಿಜ ಧಾರ್ಮಿಕ ಪಥದ ಪಥಿಕರಾದರು. ಇದು ಶರಣರು ಮಾಡಿದ ಪವಾಡ. ಶಿವಶರಣರು ರೂಪಿಸಿದ ಸಾಮಾಜಿಕ ವ್ಯವಸ್ಥೆಯಲ್ಲಿ ಎಲ್ಲ ವರ್ಗದ, ಎಲ್ಲ ವೃತ್ತಿಯ ದುಡಿಮೆದಾರರಿಗೆ ಸಮಾನ ಸ್ಥಾನವಿದ್ದಿತು. ಇದು ಅವರ ವಿಶ್ವಭ್ರಾತೃತ್ವದ ಸಂಕೇತವಾಗಿದ್ದಿತು. ಜೇಡರ ದಾಸಿಮಯ್ಯ ನೇಕಾರ, ಶಂಕರ ದಾಸಿಮಯ್ಯ ಸಿಂಪಿಗ, ಮಾದಾರ ಚನ್ನಯ ಸಮಗಾರ, ಅಪ್ಪಣ್ಣ ಹಡಪದ, ಮಾಚಿದೇವ ಮಡಿವಾಳ, ಕಿನ್ನರಿ ಬೊಮ್ಮಯ್ಯ ಅಕ್ಕಸಾಲಿಗ, ಚೌಡಯ್ಯ ಅಂಬಿಗ ಇವೇ ಮೊದಲಾದವರು ತಮ್ಮ ತಮ್ಮ ವೃತ್ತಿಯಲ್ಲಿ ತೊಡಗಿಕೊಂಡು ಅನುಭವ ಮಂಟಪದಲ್ಲಿ ಸಮಾನ ಸ್ಥಾನ-ಮಾನ ಪಡೆದವರಾಗಿದ್ದರು. ಶರಣರು ಅಂತ್ಯಜರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅನುಭವ ಮಂಟಪದಲ್ಲಿ ಮಂತ್ರಿ ಹಿರಿಯವನಾಗಿರಲಿಲ್ಲ. ಸಮಗಾರ ಕಿರಿಯವನಾಗಿರಲಿಲ್ಲ. ಗಂಡು-ಹೆಣ್ಣು ಎಂಬ ಭೇದವಿರಲಿಲ್ಲ. ಕುಲಜ ಶ್ರೇಷ್ಠ, ಅಂತ್ಯಜ ಕನಿಷ್ಠ ಎಂಬ ತಾರತಮ್ಯ ಭಾವವಿರಲಿಲ್ಲ.

ಸಮಾಜದ ಮುಖ್ಯವಾಹಿನಿಯಿಂದ ದೂರವೇ ಉಳಿದಿದ್ದ ಸ್ತ್ರೀ ಕುಲವನ್ನು ಉದ್ಧರಿಸಿದ ಹಿರಿಮೆ ಶಿವಶರಣರದು. ಅಂದಿನ ಸಾಮಾಜಿಕ ಹಾಗೂ ಧಾರ್ಮಿಕ ಅನಿಷ್ಟ ಆಚರಣೆಗಳಿಂದಾಗಿ ಬೇರೂರಿದ್ದ ಅಸಮಾನತೆ ಶೋಷಣೆಗಳನ್ನು ವಿರೋಧಿಸಿ ಶರಣರು ನೂತನ ಕುಟುಂಬ ವ್ಯವಸ್ಥೆಯನ್ನು ರೂಪಿಸಿದರು. ಜೇಡರ ದಾಸಿಮಯ್ಯ ‘ಆತ್ಮನು ಹೆಣ್ಣೂ ಅಲ್ಲ, ಗಂಡೂ ಅಲ್ಲ’ ಎಂದು ಸಾರಿದರೆ, ಅಲ್ಲಮಪ್ರಭು ‘ಹೆಣ್ಣು ಮಾಯೆಯಲ್ಲ’ ಎಂದು ಪ್ರತಿಪಾದಿಸಿದನು. ಪುರುಷ ಪ್ರಧಾನ ಜೀವನ ಧಾನದಲ್ಲಿ ಧಾರ್ಮಿಕ ಸ್ವಾತಂತ್ರದಿಂದ ವಂಚಿತಳಾಗಿದ್ದ ಸ್ತ್ರೀಯರಿಗೆ ಧರ್ಮಾಚರಣೆಗಳಲ್ಲಿ ಸಮಾನ ಸ್ಥಾನ ಕಲ್ಪಿಸಲಾಯಿತು. ಸ್ತ್ರೀಯಲ್ಲಿ ದೈವತ್ವವನ್ನು ಕಂಡವರು ಶರಣರು. ಶರಣರ ಪ್ರೋ ಸ್ತ್ರೀ ಶಕ್ತಿ ಪುಟಿದೆದ್ದಿತು. ಕನ್ನಡದ ಶ್ರೀಮಂತ ಕವಯತ್ರಿ ಅಕ್ಕಮಹಾದೇವಿ ಉದುಸಿದ್ದುದು ಈ ವಾತಾವರಣದಿಂದಾಗಿ. ಅವಳ ಒಂದು ವಚನ ಅಲ್ಲಮನ 10 ವಚನಕ್ಕೆ ಸಮವೆಂದು ಚೆನ್ನಬಸವಣ್ಣ ಕೊಂಡಾಡಿದ್ದಾನೆ. ಇದು ಆಕೆಯ ಆಧ್ಯಾತ್ಮ ಸಾಧನೆಯನ್ನು ಪರಿಚಯಿಸುತ್ತದೆ. ಅಮ್ಮುಗೆ ರಾಯಮ್ಮ, ಆಯ್ದಕ್ಕಿ ಲಕ್ಕಮ್ಮ ಮುಕ್ತಾಯಕ್ಕ, ಮೋಳಿಗೆಯ ಮಹಾದೇವಿ, ಸತ್ಯಕ್ಕ, ಮೊದಲಾದವರು ಮಹತ್ವದ ವಚನಕಾರ್ತಿಯರಾಗಿ ಪ್ರಕಾಶಿಸಿದ್ದಾರೆ. ಲಭ್ಯವಾದ ಧಾರ್ಮಿಕ ಸ್ವಾತಂತ್ರ್ಯವನ್ನು ಬಳಸಿಕೊಂಡು ಶರಣೆಯರು ಆತ್ಮೋನ್ನತಿ ಸಾಧಿಸಿದರು. ಹೀಗೆ 12 ಶತಮಾನದ ಶಿವಶರಣರು ವರ್ಣಭೇಧ, ಜಾತಿ ಭೇದ, ಅಂತಸ್ತು ಭೇದ, ಲಿಂಗಭೇದ ಮೊದಲಾದ ಸಾಮಾಜಿಕ ಅನಿಷ್ಟಗಳನ್ನು ಕಿತ್ತುಹಾಕಿ ಹೊಸ ಸಮಾಜವನ್ನು ನಿರ್ಮಿಸಲು ಹೆಣಗಾಡಿದರು. ಅವರು ನೀಡಿದ ನೀತಿ ಸಂಹಿತೆ ಇಂದಿಗೂ ಪ್ರಸ್ತುತ ಮತ್ತು ಅಗತ್ಯ ಎಂದು ಬೇರೆ ಹೇಳಬೇಕಿಲ್ಲ.

– ಡಾ. ಶೀಲಾಕಾಂತ ಪತ್ತಾರ

 

   

Leave a Reply