ಶೆಕ್ಷಣಿಕ ಗುಣಮಟ್ಟ ಗುರುಕುಲಗಳಿಂದ ಮಾತ್ರ ಸಾಧ್ಯ

ಲೇಖನಗಳು - 0 Comment
Issue Date :

ಸಂಪಾದಕೀಯ,

ವೃಷಾಂಕ –

ದೇಶದ ಎಲ್ಲ ಮಕ್ಕಳಿಗೂ ಒಂದೇ ರೀತಿಯ ಶಿಕ್ಷಣ ದೊರೆಯಬೇಕು ಎಂಬುದು ಆಧುನಿಕ ಶಿಕ್ಷಣ ಪದ್ಧತಿಯ ಆಶಯ. ಆದರೆ ಎಲ್ಲರಿಗೂ ಒಂದೇ ರೀತಿಯ ಶಿಕ್ಷಣ ನೀಡುವುದರಿಂದ ಒಂದೇ ಗುಣಮಟ್ಟದ ಮತ್ತು ಸಾಮರ್ಥ್ಯದ ತಲೆಮಾರನ್ನು ಕಟ್ಟಿಕೊಡಬಹುದೇ ವಿನಃ ದೇಶಕ್ಕೆ ಬೇಕಾಗುವ ವಿವಿಧ ವಿದ್ಯೆಗಳನ್ನು ಕಲಿಸಲು ಸಾಧ್ಯವಿಲ್ಲ. ವಿದ್ಯಾರ್ಥಿಗೆ ಆಸಕ್ತಿಯಿದ್ದರೂ ಇಲ್ಲದಿದ್ದರೂ ನಿರ್ದಿಷ್ಟ ಪಠ್ಯಕ್ರಮವನ್ನು ಕಲಿಯುವ ಶಿಕ್ಷೆಯೂ ಸರಿಯಲ್ಲ. ಮಗುವಿನ ಗುಣಧರ್ಮಗಳಿಗೆ ಅನುಗುಣವಾಗಿ ಆತನ ಶಿಕ್ಷಣವಾಗಬೇಕು. ಕುಸ್ತಿಯಲ್ಲಿ ಆಸಕ್ತಿಹೊಂದಿದವನಿಗೆ ಸಂಗೀತ ಹೇಳಿಕೊಡಲು ಕೂರಿಸಿಕೊಂಡರೆ ಏನಾಗಬಹುದೋ, ಆಧುನಿಕ ಶಿಕ್ಷಣ ಪದ್ಧತಿಯಿಂದಾಗುತ್ತಿರುವುದು ಅದೇ!

ಇಂಜಿನಿಯರಿಂಗ್ ಎಂಬ ಭೂತ ಇದಕ್ಕೊಂದು ಉತ್ತಮ ಉದಾಹರಣೆ. ಐಟಿ ಕ್ಷೇತ್ರದಲ್ಲಿರುವ ನಮ್ಮ ಯುವಕ-ಯುವತಿಯರಲ್ಲಿ ಹಲವರು ಹವ್ಯಾಸಿ ಛಾಯಾಚಿತ್ರಗಾರರೂ, ಲೇಖಕರೂ, ನೃತ್ಯಪಟುಗಳೂ, ಸಂಗೀತಗಾರರೂ ಆಗಿರುವುದನ್ನು ನಾವು ಕಾಣಬಹುದು. ವಾಸ್ತವದಲ್ಲಿ ಇವ್ಯಾವುದೂ ಅವರ ಹವ್ಯಾಸಗಳಲ್ಲ. ಇವೆಲ್ಲವೂ ಅವರ ಮೂಲ ಆಸಕ್ತಿ. ಸಾಫ್ಟ್‌ವೇರ್ ಇಂಜಿನಿಯರಿಂಗ್ ಓದಬೇಕು ಮತ್ತು ಅದರಲ್ಲಿ ಮಾತ್ರ ಗೌರವವಿರುವುದು ಎಂಬ ಹುಚ್ಚು ಭ್ರಮೆಯಿಂದ ಉತ್ತಮ ಶಿಕ್ಷಕನಾಗಬಲ್ಲವನು ಇಂದು ಇಂಜಿನಿಯರ್ ಆಗಿದ್ದಾನೆ; ಉತ್ತಮ ಕ್ರೀಡಾಪಟು ಆಗಬಲ್ಲವನು ಇಂಜಿನಿಯರ್ ಆಗಿದ್ದಾನೆ; ಉತ್ತಮ ನೇಕಾರನಾಗಬಲ್ಲವನೂ ಇಂಜಿನಿಯರ್ ಆಗಿದ್ದಾನೆ. ಇದೊಂದು ಘೋರ ದುರಂತ! ಬಹುಮುಖದಲ್ಲಿ ಅರಳಿ ದೇಶದ ಪ್ರಗತಿಯಲ್ಲಿ ಭಾಗಿಯಾಗಬೇಕಿದ್ದ ಪ್ರತಿಭೆಗಳು ಇಂಜಿನಿಯರಿಂಗ್ ಎಂಬ ಭೂತಕ್ಕೆ

ಆಹಾರವಾಗುತ್ತಿವೆ. ಇಲ್ಲಿ ಇಂಜಿನಿಯರಿಂಗ್ ಎನ್ನುವುದು ಉದಾಹರಣೆಯಷ್ಟೇ. ನಾಳೆ ಇನ್ನೊಂದು ಉದ್ಯೋಗವು ಈ ಜಾಗವನ್ನು ಆವರಿಸಬಹುದು. ಆದರೆ ಸಮಸ್ಯೆ ಅದೇ.

 ಮಗುವಿನ ಮೂಲಗುಣವನ್ನು ಪತ್ತೆಹಚ್ಚಿ ಆ ನಿಟ್ಟಿನಲ್ಲಿ ಅದಕ್ಕೆ ಶಿಕ್ಷಣ ನೀಡುವ ವ್ಯವಸ್ಥೆ ನಮಗೀಗ ಬೇಕು. ಈ ಉದ್ದೇಶದಿಂದಲೇ ಹಿಂದಿನ ಕಾಲಗಳಲ್ಲಿ ಗುರುಕುಲಗಳು ನಮ್ಮ ದೇಶದಲ್ಲಿ ನಡೆಯುತ್ತಿದ್ದವು. ಕೃಷಿ, ಸಂಗೀತ, ಸಮರಕಲೆ, ವೇದಾಧ್ಯಯನ, ಶಿಲ್ಪಕಲೆ ಹೀಗೆ ಮಗುವಿನ ಆಸಕ್ತಿಗೆ ಅನುಸಾರವಾಗಿ ಶಿಕ್ಷಣ ನೀಡುವುದು ಮತ್ತು ಗುರುಕುಲದಿಂದ ಹೊರನಡೆದ ದಿನದಿಂದಲೇ ಸ್ವತಂತ್ರ್ಯವಾಗಿ ತನ್ನ ಕಾಲಮೇಲೆ ನಿಂತು ಬಾಳುವುದನ್ನು ಈ ಶಿಕ್ಷಣ ಪದ್ಧತಿ ಹೇಳಿಕೊಡುತ್ತದೆ. ಇಂದು ಪದವಿ ಮುಗಿಸಿದ ಯುವಕರಿಗೆ ಏನೂ ಗೊತ್ತಿರುವುದಿಲ್ಲ ಎಂಬ ಮಾತಿದೆ. ಯಾರಾದರೂ ಒಂದು ಕಂಪ್ಯೂಟರ್ ನೀಡಿ ಹೀಗೆ ಹೀಗೆ ಮಾಡು ಎಂದು ಹೇಳಿದರೆ ಮಾಡಿಯಾನೇ ಹೊರತು, ತಾನಾಗಿ ಎರಡು ಹೊತ್ತಿನ ರೊಟ್ಟಿ ಹುಟ್ಟಿಸಿಕೊಳ್ಳಲಾರ. ಇದು ವಿದ್ಯಾರ್ಥಿಗಳ ಸಮಸ್ಯೆಯಲ್ಲ; ಸಮಾಜದ್ದು. ಸ್ವಾತಂತ್ರ್ಯ ಬಂದು 70 ವರ್ಷ ಕಳೆದಿದ್ದರೂ ಭಾರತೀಯ ಶಿಕ್ಷಣ ಪದ್ದತಿಯನ್ನು ರೂಪಿಸಲಾರದ ನಾವು ಅಸಮರ್ಥರೇ? ಸ್ವಾತಂತ್ರ್ಯ ಪಡೆಯಲು ಬೇಕಾಗಿದ್ದ ಸಿದ್ಧತೆ ನಮ್ಮಲ್ಲಿರಲಿಲ್ಲವೇ?

 ಇರಲಿ, ಈಗಲೂ ನಮ್ಮ ನಡುವೆ ಸಮಾಜಮುಖಿ ಸಂಸ್ಥೆಗಳು ಗುರುಕುಲಗಳನ್ನು ನಡೆಸುತ್ತಿವೆ. ಹೋಮ್ ಸ್ಕೂಲಿಂಗ್ ಮೂಲಕ ಮಕ್ಕಳನ್ನು ಮೂಲಭೂತ ವಿಷಯಗಳನ್ನು ಹೇಳಿಕೊಡಲಾಗುತ್ತಿದೆ. ಇಂತಹ ಗುರುಕುಲಗಳು ಮತ್ತಷ್ಟು ಬರಲಿ, ಶಿಕ್ಷಣದ ಗುಣಮಟ್ಟ ಉತ್ತಮವಾಗಲಿ.

 

   

Leave a Reply