ಶ್ರೀಲಂಕಾ – ಮಲೇಷ್ಯಾ

ಜಗದ್ಗುರು ಭಾರತ - 0 Comment
Issue Date : 30.04.2015

 • ಭಾರತೀಯ ಸಂಸ್ಕೃತಿಯ ಒಂದು ಭಾಗದಂತೆಯೇ ಇರುವ ಶ್ರೀಲಂಕಾ, ಪ್ರಪ್ರಾಚೀನ ಕೃತಿ ರಾಮಾಯಣದಲ್ಲಿ ರಾವಣನ ಸ್ವರ್ಣ ಲಂಕೆಯೆಂದು ಉಲ್ಲೇಖಿತವಾಗಿದೆ.
 • ನಾಗಾಗಳು ಈ ಪುಟ್ಟ ದ್ವೀಪದ ಮೂಲ ನಿವಾಸಿಗಳು. ಇವರು ವೈದಿಕ ಪದ್ಧತಿಯ ಅನುಚರರಾಗಿದ್ದು, ಪ್ರಕೃತಿಪೂಜಕರಾಗಿದ್ದರು.
 • ಪೌರಾಣಿಕ ಯುಗದಲ್ಲಿ ಶ್ರೀಲಂಕೆಯಲ್ಲಿ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಸಂಸ್ಕೃತ, ಪಾಲಿ ಮತ್ತು ಪ್ರಾಕೃತ ಭಾಷೆಗಳು ಚಾಲ್ತಿಯಲ್ಲಿದ್ದವು.
 • ಇಲ್ಲಿನ ಬಹುತೇಕ ಪ್ರಾಚೀನ ಶಾಸನ ಹಾಗೂ ಗ್ರಂಥಗಳು ಪಾಲಿ ಭಾಷೆಯಲ್ಲಿಯೇ ಇವೆ.
 • ಬೌದ್ಧ ಧರ್ಮಕ್ಕೆ ಮುನ್ನ ಈ ದ್ವೀಪರಾಷ್ಟ್ರದಲ್ಲಿ ಶೈವ ಸಿದ್ಧಾಂತವು ಉಛ್ರಾಯದಲ್ಲಿತ್ತು.
 • ಲಂಕಾಧೀಶ ರಾವಣ ಶ್ರೇಷ್ಠ ಶಿವಭಕ್ತನಾಗಿದ್ದ. ಅಂತೆಯೇ ಇಲ್ಲಿ ಸಾವಿರಾರು ಶಿವ ದೇಗುಲಗಳು ನಿರ್ಮಾಣಗೊಂಡಿದ್ದವು.
 • ಲಂಕಾ ದ್ವೀಪವು ನಾರದರ ಇಚ್ಛೆಯಂತೆ ವಾಯುದೇವನಿಂದ ಸೃಷ್ಟಿ ಮಾಡಲ್ಪಟ್ಟಿತು.
 • ವಾಯು ದೇವನು ಮೇರು ಗಿರಿಯ ಶಿಖರವನ್ನು ಊದಿ, ಸಮುದ್ರಕ್ಕೆ ಬೀಳುವಂತೆ ಮಾಡಿದ. ಹಾಗೆ ಬಿದ್ದ ಭಾಗವೇ ಲಂಕಾದ್ವೀಪವಾಯಿತು.
 • ಈ ದ್ವೀಪದ ಮೂಲ ಅಧಿಪತಿ ಕುಬೇರ. ಆತ ಇಲ್ಲಿ ಚಿನ್ನದ ಅರಮನೆಯನ್ನು ಕಟ್ಟಿಕೊಂಡು ಯಕ್ಷರ ಅಧಿಪತಿಯಾಗಿ ಆಡಳಿತ ನಡೆಸುತ್ತಿದ್ದ.
 • ಈ ದ್ವೀಪದಲ್ಲಿ ಯಕ್ಷ ಜನಾಂಗ ಜೀವಿಸಿತ್ತೆಂಬುದನ್ನು ಶ್ರೀಲಂಕಾದ ಐತಿಹಾಸಿಕ ದಾಖಲೆ ಮಹಾವಂಶವು ಸ್ಪಷ್ಟಪಡಿಸುತ್ತವೆ.
 • ರಾಮಾಯಣದಲ್ಲಿ ರಾವಣನ ಆಳ್ವಿಕೆಯಲ್ಲಿದ್ದ ಲಂಕೆಯ ವೈಭವದ ಉಲ್ಲೇಖಗಳಿವೆ. ಇದೊಂದು ಸುಸಜ್ಜಿತ ನಗರವಾಗಿತ್ತೆಂದು ದಾಖಲಿಸಲಾಗಿದೆ.
 • ಭಾರತದ ದಕ್ಷಿಣ ತುದಿಯಿಂದ ಶ್ರೀಲಂಕೆಗೆ ವಾನರರು ಕಟ್ಟಿದ ಶ್ರೀ ರಾಮ ಸೇತು ಈಗಲೂ ಅಸ್ತಿತ್ವದಲ್ಲಿದ್ದು, ಹಿಂದೂ ಮಹಾಸಾಗರದ ಮೇಲ್ಪದರದಲ್ಲಿಯೇ ಸಿಗುವಂತಿದೆ.
 • ಶ್ರೀಲಂಕೆಯ ಸಿಂಹಳೀಯರ ಪೂರ್ವಜರು ನಮ್ಮ ವಂಗ ಪ್ರದೇಶದಲ್ಲಿದ್ದ ಲತಾರಾಷ್ಟ್ರ ಸಾಮ್ರಾಜ್ಯದ ಸಿಂಹಪುರದವರು.
 • ಕ್ರಿ.ಪೂ. 6ನೇ ಶತಮಾನದಲ್ಲಿ ಲತಾರಾಷ್ಟ್ರದ ಅರಸ ರಾಜಾ ಸಿಂಹಬಾಹು ಎಂಬುವನು ತನ್ನ ಮಗ ವಿಜಯ ಮತ್ತು ಅವನ 700 ಸಹಚರರನ್ನು ಸಾಮ್ರಾಜ್ಯದಿಂದ ಉಚ್ಛಾಟಿಸಿದ್ದ. ಹಡಗಿನಲ್ಲಿ ಹೊರಟ ಅವರು ಶ್ರೀಲಂಕೆಯನ್ನು ತಲುಪಿಕೊಂಡಿದ್ದರು.
 • ವಿಜಯ ಮತ್ತವನ ಅನುಚರರು ಶ್ರೀಲಂಕದ ಸ್ಥಳೀಯರನ್ನು ಮದುವೆಯಾಗಿ, ಸಂತಾನ ಬೆಳೆಸಿ, ರಾಜ್ಯ ಕಟ್ಟಿದರು. ತಮ್ಮ ತಾಯ್ನೆಲದ ನೆನಪಿಗಾಗಿ ಸಿಂಹಳ ಎಂದು ಹೆಸರಿಟ್ಟರು.
 • ಕ್ರಿ.ಪೂ. 2ನೇ ಶತಮಾನದಲ್ಲಿ ತಮಿಳರು ಶ್ರೀಲಂಕೆಗೆ ಬಂದು ನೆಲೆಸಿದರು. ಇವರೊಡನೆ ದಕ್ಷಿಣ ಭಾರತೀಯ ಸಂಸ್ಕೃತಿಯೂ ಲಂಕೆಯನ್ನು ತಲುಪಿ ವ್ಯಾಪ್ತಿ ವಿಸ್ತರಿಸಿಕೊಂಡಿತು.
 • ಅಶೋಕನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರೆಯು ಶ್ರೀಲಂಕೆಗೆ ತೆರಳಿ ಬೌದ್ಧ ಧರ್ಮವನ್ನು ಪ್ರಚುರಪಡಿಸಿದರು.
 • ತಾಮ್ರಪರ್ಣಿ ಮತ್ತು ಅನುರಾಧಪುರಗಳು ಐತಿಹಾಸಿಕ ಶ್ರೀಲಂಕೆಯ ರಾಜಧಾನಿಗಳಾಗಿದ್ದವು. ನಮ್ಮ ಪುರಾಣಗಳಲ್ಲಿ ಲಂಕೆ ಎಂದೇ ಖ್ಯಾತವಾಗಿರುವ ಶ್ರೀಲಂಕೆಯು ಅಲ್ಲಲ್ಲಿ ತಾಮ್ರಪರ್ಣ ದ್ವೀಪವೆಂದೂ ಉಲ್ಲೇಖಗೊಂಡಿದೆ.
 • ಲಂಕೆಯ ಜನರು ರಾಮಾಯಣದಲ್ಲಿ ವಿಶ್ವಾಸವನ್ನಿಟ್ಟಿದ್ದಾರೆ. ಆದರೆ ರಾವಣನನ್ನು ತಮ್ಮ ಕುಲಗುರುವೆಂದು ಗೌರವಿಸುತ್ತಾರೆ.
 • ಇಲ್ಲಿ ರಾಮಾಯಣದಲ್ಲಿ ಉಲ್ಲೇಖಿಸಲಾದ ಹಲವು ಸ್ಥಳಗಳನ್ನು ಗುರುತಿಸಲಾಗಿದ್ದು, ಸ್ಮಾರಕಗಳನ್ನು ಕಟ್ಟಲಾಗಿದೆ. ರಾವಣನ ಗೋಶಾಲೆ, ಸೇನಾ ನೆಲೆ, ಅಶೋಕ ವನ ಮೊದಲಾದ ಪ್ರದೇಶಗಳು ಯಾತ್ರಾ ಸ್ಥಳಗಳಾಗಿ ಪ್ರಸಿದ್ಧಿ ಪಡೆದಿವೆ.
 • ರಾವಣ, ರಾಮ, ಸೀತೆ ಹಾಗೂ ಹನುಮಂತನಿಗೆ ಮೀಸಲಾದ ಅನೇಕ ದೇಗುಲಗಳನ್ನೂ ಶ್ರೀಲಂಕೆಯಲ್ಲಿ ನೋಡಬಹುದು.
 • ಬೌದ್ಧ ಧರ್ಮವು ಶ್ರೀಲಂಕೆಯ ಮೇಲೆ ಗಾಢವಾದ ಪ್ರಭಾವ ಬೀರಿದ್ದು, ಇಂದು ಶೇಕಡಾ 70ರಷ್ಟು ಶ್ರೀಲಂಕನ್ನರು ಬೌದ್ಧ ಧರ್ಮವನ್ನು ಅನುಸರಿಸುತ್ತಿದ್ದಾರೆ.
 • ಎರಡನೆಯ ಸ್ಥಾನದಲ್ಲಿರುವ ಹಿಂದೂ ಧರ್ಮವು ಸಾಂಸ್ಕೃತಿಕವಾಗಿ ಶ್ರೀಲಂಕೆಯನ್ನು ಆವರಿಸಿಕೊಂಡು ತನ್ನ ಪ್ರಭಾವ ಬೀರಿದೆ.
 • ಆಂತರಿಕ ಘರ್ಷಣೆಗಳಲ್ಲಿ ಸಾವಿರಾರು ದೇಗುಲಗಳು ನಾಶಗೊಂಡಿದ್ದರೂ ಅವುಗಳ ಪಳೆಯುಳಿಕೆಗಳು ಹಿಂದೂ ಧರ್ಮದ ಗತವೈಭವವನ್ನು ಸಾರುವಂತಿವೆ.
 • ಬೋಧಿವೃಕ್ಷದ ರೆಂಬೆಯಿಂದ ಸಂಘಮಿತ್ರೆಯು ನೆಟ್ಟು ಬೆಳೆಸಿದ ವೃಕ್ಷವು ಅನುರಾಧಪುರದಲ್ಲಿದ್ದು, ಆ ಪ್ರದೇಶದಲ್ಲೊಂದು ಬೌದ್ಧ ಮಂದಿರವನ್ನು ನಿರ್ಮಿಸಲಾಗಿದೆ.
 • ಭಾರತದ ಬೌದ್ಧ ಪ್ರಚಾರಕರು ಶ್ರೀಲಂಕೆಗೆ ತಮ್ಮ ಧರ್ಮದ ಜೊತೆಜೊತೆಗೆ ಮಾವು ಕೃಷಿಯನ್ನೂ ಪರಿಚಯಿಸಿದರು.
 • ಶ್ರೀಲಂಕನ್ನರ ಸಂಗೀತವು ದಕ್ಷಿಣ ಭಾರತೀಯ ಸಂಗೀತದ ಪ್ರಭಾವದಿಂದ ರೂಪುಗೊಂಡಿದೆ. ಚಿತ್ರಕಲೆ ಹಾಗೂ ವಾಸ್ತುಶಿಲ್ಪಗಳಲ್ಲಿಯೂ ಭಾರತೀಯ ಪ್ರಭಾವವು ಎದ್ದು ತೋರುತ್ತದೆ.
   

Leave a Reply