ಶ್ರೀ ವಾಸವಿ ದಿವ್ಯ ದರ್ಶನ

ಕಾರ್ಯಕ್ರಮಗಳು - 0 Comment
Issue Date : 07.05.2015

ಜನಮನ ಸೂರೆಗೊಂಡ ಅನನ್ಯ ನೃತ್ಯ ರೂಪಕ

ಬೆಂಗಳೂರು: ಇಲ್ಲಿನ ಗಿರಿನಗರದಲ್ಲಿರುವ ಶ್ರೀ ವಾಸವಿ ಕ್ಷೇತ್ರ ಟ್ರಸ್ಟ್ (ರಿ) ರವರು ವಾಸವಿ ಜಯಂತಿ ಪ್ರಯುಕ್ತ ದಿನಾಂಕ 25 ಏಪ್ರಿಲ್ 2015, ಶನಿವಾರ ದಂದು ಸಂಜೆ ಬೆಂಗಳೂರು ನಗರದ ಹೊಸೂರು ರಸ್ತೆಯ ನಿಮ್ಹಾನ್ಸ್ ಕನ್ವೆಂಷನ್ ಸೆಂಟರ್‌ನಲ್ಲಿ ಶ್ರೀ ವಾಸವಿ ದಿವ್ಯದರ್ಶನ ನೃತ್ಯರೂಪಕವನ್ನು ಆಯೋಜಿಸಿದ್ದರು.
ಶ್ರೀ ವಾಸವಿ ಕನ್ಯಕಾಪರಮೇಶ್ವರಿ ಆರ್ಯವೈಶ್ಯ ಕುಲದ ದೈವವಷ್ಟೇ ಅಲ್ಲ ಆಕೆ ಆದಿಶಕ್ತಿಸ್ವರೂಪಿಣಿ, ಮಹಾ ಮಹಿಮಾನ್ವಿತಳು. ಕಲಿಯುಗದಲ್ಲಿ ಜಗನ್ಮಾತೆಯು ಧರೆಯಲ್ಲಿ ಅವತರಿಸಿ ಸ್ತ್ರೀಶೀಲ ರಕ್ಷಣಾ ಮಹತ್ವವನ್ನು, ಧರ್ಮಶ್ರೀ ರಕ್ಷಣಾ ದೀಕ್ಷೆಯನ್ನು , ಅಹಿಂಸಾಪೂರ್ವಕ ಆತ್ಮಬಲಿದಾನದ ವಿಧಾನವನ್ನು ಜಗತ್ತಿಗೆ ಸಾರಿದವಳು. ಸಮಸ್ತ ಮಾನವಜನಾಂಗವೇ ನಿತ್ಯ ಉಪಾಸಿಸಬೇಕಾದಂಥ ದಿವ್ಯ ಮಾನಿನಿ.
ಇಂತಹ ಶ್ರೀ ವಾಸವಾಂಬ ದೇವಿಯ ಅಪೂರ್ವವಾದ ದಿವ್ಯ ಪೌರಾಣಿಕ ಕಥಾನಕವನ್ನು ನಾಟಕ – ನೃತ್ಯ – ಬೆಳಕು – ನಾದ – ದೃಶ್ಯಗಳ ಶ್ರೀವಾಸವಿ ವಿಶ್ವ ರೂಪ ದರ್ಶನ ರೂಪಕವನ್ನು ಸಂಗೀತ್ ಭಾರತಿ ಇನ್ಸ್‌ಟಿಟ್ಯೂಟ್ ಆಫ್ ಆರ್ಟ್ಸ್, ವಿಜಯನಗರ ಇವರು ಪ್ರಸ್ತುತಪಡಿಸಿದರು. ಕರ್ನಾಟಕದಲ್ಲಿ ಮೊದಲಬಾರಿಗೆ ಪ್ರದರ್ಶನಗೊಂಡ ಒಂದೂವರೆ ತಾಸಿನ ಈ ಮನಮೋಹಕ ಬ್ಯಾಲೆಯ ಹಿಂದೆ ವೃತ್ತಿನಿರತ ಮೂವತ್ತು ನೃತ್ಯಪಟುಗಳು ಸತತ ಮೂರು ತಿಂಗಳು ರಂಗತಾಲೀಮು ನಡೆಸಿ ಭಕ್ತಿ ಪರವಶತೆಯಿಂದ ಅಮೋಘ ಪ್ರದರ್ಶನ ನೀಡಿದರು.
ಕೇವಲ ಧಾರ್ಮಿಕ ಕೈಂಕರ‌್ಯಗಳಿಗಷ್ಟೇ ಸೀಮಿತವಾಗದೆ ಹಲವಾರು ಜನೋಪಯೋಗಿ ಸಾಮಾಜಿಕ ಸೇವಾ ಕಾರ್ಯ ಚಟುವಟಿಕೆಗಳಾಗಿ ಆರ್ಥಿಕವಾಗಿ ಅಶಕ್ತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಬಡಜನರಿಗೆ ಉಚಿತ ವೈದ್ಯಕೀಯ ಸೌಲಭ್ಯವನ್ನು ದೇವಸ್ಥಾನ ಟ್ರಸ್ಟ್ ವತಿಯಿಂದ ನೀಡುತ್ತಿದೆ.
ಈ ವಿನೂತನ ಪ್ರಯತ್ನಕ್ಕೆ ಸಾಹಿತ್ಯ- ಸಂಭಾಷಣೆ- ಗೀತರಚನೆ- ನೃತ್ಯ ನಿರ್ದೇಶನ ಮಾಡಿರುವರು ಪದ್ಮ ಹೇಮಂತ್, ಸಂಗೀತ ಸಂಯೋಜನೆ- ಬಿ ಆರ್ ಹೇಮಂತ್ ಕುಮಾರ, ಬೆಳಕು ಮತ್ತು ರಂಗಸಜ್ಜಿಕೆ ರವಿಶಂಕರ್ ಮಾಡಿರುವರು. ಸನಾತನ ಧರ್ಮ ರಕ್ಷಣೆಯಲ್ಲಿ ಇಂತಹ ಸಾಂಸ್ಕೃತಿಕ ಕಾರ್ಯ ಅವಶ್ಯವೆಂದು ಸಹಪ್ರಾಯೋಜಕರಾದ ಹೋಲಿ ಚೈಲ್ಡ್ ಕಾನ್ವೆಂಟ್‌ನ ಪ್ರಾಂಶುಪಾಲೆ ಶೋಭಾ ಸತೀಶ್‌ರವರು ಅಭಿಪ್ರಾಯಪಡುತ್ತಾರೆ.
ಖ್ಯಾತ ಗಾಯಕರುಗಳಾದ ಶಂಕರ ಶಾನುಬೋಗ್, ಎಂ. ಡಿ. ಪಲ್ಲವಿ, ರೇಖಾ ಮೋಹನ್, ಶಿಲ್ಪ, ಆದರ್ಶ, ಆದಿತ್ಯ ಹಾಡಿರುವರು. ವಾಸವಿ ಮುಖ್ಯಪಾತ್ರದಲ್ಲಿ ಶೀತಲ, ಕೀರ್ತಿ ಕನ್ಯೆಯಾಗಿ ರಂಜನಿ, ವಾಸವಿಯ ತಮ್ಮ ವಿರೂಪಾಕ್ಷನಾಗಿ ಹರ್ಷದತ್ತ ಅಭಿನಯಿಸಿದ್ದರು ಮತ್ತು ಈ ನೃತ್ಯರೂಪಕದ ಮುಖ್ಯಪ್ರಾಯೋಜಕರಾಗಿ ಕಂದಲಾ ಜ್ಯುವೆಲರ್ಸ್‌ ರವರು ಸಹಕಾರ ನೀಡಿದರು. ಶ್ರೀ ಶಂಕರವಾಹಿನಿಯವರು ಮಾಧ್ಯಮ ಸಹಯೋಗ ನೀಡಿದ್ದರು ಎಂದು ಪ್ರಚಾರ ವಿಭಾಗದ ಸಂಚಾಲಕ ರಾದ ಡಿ. ಎಂ. ಕಿರಣ್ ತಿಳಿಸಿರುತ್ತಾರೆ.
ವಿವರಗಳಿಗೆ : 9900778866 ಸಂಪರ್ಕಿಸಬಹುದು.

   

Leave a Reply