ಸಂಘಕ್ಕೆ ತನ್ನನ್ನು ಒಪ್ಪಿಸಿಕೊಂಡು ಬೆಳೆದ ಅನಂತ

ಸ್ಮರಣೆ - 0 Comment
Issue Date : 22.02.2016

ಇತ್ತೀಚೆಗೆ ಅಂದರೆ ಫೆಬ್ರವರಿ 11ರಂದು (ಪಂ. ದೀನದಯಾಳ್‌ಜೀ ಉಪಾಧ್ಯಾಯರ ಬಲಿದಾನದ ದಿನ) ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೈಸೂರಿನ ಹಿರಿಯ ಸ್ವಯಂಸೇವಕ ಅನಂತಪದ್ಮನಾಭರು. ಇಹಲೋಕವನ್ನು ತ್ಯಜಿಸಿ ಹೋದರು. ಅವರೊಡನೆ ನನ್ನ ಸಂಪರ್ಕ, ಸಂಬಂಧ 60 ವರ್ಷಗಳಷ್ಟು ಹಿಂದಿನದು. ಈ ಸಂಬಂಧವನ್ನು ಮೆಲಕು ಹಾಕುವಾಗ ಅನಂತರ ಜೀವನಯಾತ್ರೆಯ ನೆನಪಾಗುತ್ತದೆ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಲೌಕಿಕತೆಯ ಒಂದು ಮಗ್ಗುಲಿನ ಒಳದರುಶನವಾಗುತ್ತದೆ.
‘‘ಸಂಘಕ್ಕೆ ತನ್ನನ್ನು ಒಪ್ಪಿಸಿಕೊಂಡ ಸಾಮಾನ್ಯ ವ್ಯಕ್ತಿಯಲ್ಲಿಯೂ ಸಂಘವು ಅಮೋಘವಾದ ಆತ್ಮವಿಶ್ವಾಸವನ್ನು ಬೆಳೆಸುತ್ತದೆ ಮತ್ತು ತಾನೂ ಏನನ್ನಾದರೂ ಸಾಧಿಸಬಲ್ಲೆ ಎಂಬ ಸಾಮರ್ಥ್ಯವನ್ನು ಚಿಮ್ಮಿಸುತ್ತದೆ’’.
ಇದಕ್ಕೆ ನಮ್ಮ ಆತ್ಮೀಯ ಒಡನಾಡಿ ಅನಂತರು ಒಬ್ಬ ಸತ್ಯ ಸಾಕ್ಷಿ. ಅವರು ತಮ್ಮ ಜೀವನದ ಸಾಯಂಕಾಲದಲ್ಲಿ ತಮ್ಮ ಸಾಧನೆಯ ಸಮಾಧಾನವನ್ನು ಅನುಭವಿಸಿದರು. ಅನಂತ ವಿದ್ಯಾರ್ಥಿ ಜೀವನದಲ್ಲಿ ಮಿಂಚಿದವರಲ್ಲ. ಅವರು ಒಬ್ಬ ಸಾಧಾರಣ ಶ್ರೇಣಿಯ ವಿದ್ಯಾರ್ಥಿ. ದಾಷ್ಟಿಕತೆಯೂ ಅಷ್ಟಕ್ಕಷ್ಟೆ, ಎಂದು ಮುನ್ನುಗುತ್ತಿರಲಿಲ್ಲ. ಅಂತಹ ಮಾತುಗಾರನೂ ಅಲ್ಲ, ಆದರೆ ಸಂಘದ ಸ್ವಯಂಸೇವಕನಾಗಿ ಸಂಘಕ್ಕೆ ಕಾಯಾ ವಾಚಾ ಮನಸಾ ಒಪ್ಪಿಸಿಕೊಂಡ ಮೇಲೆ ಮೈಸೂರು ಶಾಖೆಯಲ್ಲಿ ಒಬ್ಬ ಸಂಪನ್ಮೂಲ ಕಾರ್ಯಕರ್ತನಾಗಿ ಬೆಳೆದರು. ಸಂಘದ ಕುರಿತಾಗಿ ನಂಬಿಕೆ – ನಡವಳಿಕೆಗಳಲ್ಲಿ ಪರಿಶ್ರಮ ಹಾಗೂ ಸಾತತ್ಯದಲ್ಲಿ ಹಿಂದೆ ಬೀಳಲಿಲ್ಲ. ಹೀಗಾಗಿ ಅಂದಿನ ಸಂಘದ ಕಾರ್ಯದಲ್ಲಿ ಒಬ್ಬ ವಿಶ್ವಾಸಾರ್ಹ ಕಾರ್ಯಕರ್ತನಾಗಿ ಗುರುತಿಸಿಕೊಂಡರು. ಮುಖ್ಯವಾಗಿ ಅವರ ಸಾಮರ್ಥ್ಯ ಅರಳಿದ್ದು ಸಂಘದ ಘೋಷ್ ವಿಭಾಗದಲ್ಲಿ, ಬ್ಯಾಂಡ್ ಅನಂತ ಎಂದೇ ಅವರ ‘ಪಹಚಾನ್’ (ಐಛ್ಞಿಠಿಜಿಠಿ) ಆಯಿತು. ವಿಶೇಷವಾಗಿ ಬ್ಯೂಗಲ್ ಊದುವಾಗ ಅವರು ನಿಜಕ್ಕೂ ಕಂಗೊಳಿಸುತ್ತಿದ್ದರು. ಸ್ವರಗಳ ಶುದ್ಧತೆ, ಏರಿಳಿತಗಳು, ನಿರಾಯಾಸ ವಾದನ ಎಲ್ಲದರಲ್ಲೂ ಅವರು ಮಿಂಚಿದ್ದರು. ನಮ್ಮ ಕರ್ನಾಟಕದಲ್ಲೇ ನಂ.1 ಶಂಖವಾದಕ ಎಂದರೆ ಅನಂತ ಅವರೇ. ಜತೆಜತೆಗೆ ಹಲವಾರು ಉತ್ತಮ ಘೋಷ್ ಪ್ರಮುಖ, ಘೋಷ್ ವಾದಕರನ್ನು ಅವರು ಬೆಳೆಸಿದರು. ಸಂಘದೊಳಗೆ ಮಾತ್ರವಲ್ಲದೆ, ಸಂಘದ ಹೊರಗೆ ಸಹ ಮೈಸೂರಿನ ಹಲವಾರು ಶಾಲೆಗಳಲ್ಲಿ ಘೋಷ್ ತಂಡಗಳನ್ನು ತಯಾರಿಸಿದ ಕೀರ್ತಿ ಅವರದು. ಘೋಷ್ ವಾದ್ಯಗಳನ್ನು ಹೊಸದಾಗಿ ತಯಾರಿಸಿ ದೇಶದ ಘೋಷ್ ವಿಭಾಗದ ಅಗತ್ಯತೆಯನ್ನು ಪೂರೈಸಿದರು.
ಅಖಿಲ ಭಾರತೀಯ ಘೋಷ್ ಪ್ರಮುಖರಾಗಿ, ದೇಶದ ಘೋಷ್ ವಿಭಾಗಕ್ಕೆ ಹೊಸ ಹೊಸ ಆಯಾಮಗಳನ್ನು ಜೋಡಿಸಿದ ಸುಬ್ಬು ಶ್ರೀನಿವಾಸರು ಅನಂತ ಪದ್ಮನಾಭರ ತಮ್ಮ. 1970-80ರ ದಶಕಗಳಲ್ಲಿ ಈ ಸಹೋದರ ಜೋಡಿಯನ್ನು ಆ ಕಾಲದಲ್ಲಿ ಸಿನಿಮಾ ಜಗತ್ತಿನಲ್ಲಿ ಬಹಳ ಪ್ರಸಿದ್ಧರಾಗಿದ್ದ ತುತ್ತೂರಿ ಊದುವ ಜೆಮಿನಿ ಸಹೋದರರ ಜೋಡಿಗೆ ನಾವು ಹೋಲಿಸುತ್ತಿದ್ದೆವು.
ಅನಂತ – ಸುಬ್ಬು ಸೋದರರು ಸ್ವಲ್ಪ ದೊಡ್ಡದೇ ಆದ ಅವಿಭಕ್ತ ಕುಟುಂಬಕ್ಕೆ ಸೇರಿದ್ದರು. ಮೈಸೂರಿನಲ್ಲಿ ಶ್ರೀಗಂಧ ಹಾಗೂ ದಂತದ ಕೆತ್ತನೆ ಚಿತ್ರಗಳ ವ್ಯಾಪಾರ ಆ ಕುಟುಂಬದ ವೃತ್ತಿ ಆಗಿತ್ತು. ವರ್ಷಕ್ಕೆ ಒಮ್ಮೆ ದಸರಾ ವಸ್ತು ಪ್ರದರ್ಶನದಲ್ಲಿ ಇವರ ಒಂದು ಸ್ಟಾಲ್ ಇರುತ್ತಿತ್ತು. ಸುಬ್ಬು – ಅನಂತರು ಸ್ಟಾಲ್‌ನಲ್ಲಿ ಕೆಲಸ ಮಾಡಿ ಅಣ್ಣಂದಿರಿಂದ ಒಂದಷ್ಟು ದುಡ್ಡು ಪಡೆದುಕೊಂಡು ಸಂಘ ಸಂಬಂಧೀ ಖರ್ಚುಗಳನ್ನು ಮಾಡುತ್ತಿದ್ದರು.
ಅನಂತ ಅವರ ಜೀವನಯಾತ್ರೆಯಲ್ಲಿ ಹಲವಾರು ಕಠಿಣವಾದ ಏರಿಳಿತಗಳು ಬಂದಿದ್ದವು. ಇವೆಲ್ಲವನ್ನು ದಾಟಿಕೊಂಡು ನೆಮ್ಮದಿಯ ಘಟ್ಟ ತಲುಪುವಲ್ಲಿ ಅನಂತರ ಕೈ ಹಿಡಿದ ಧರ್ಮಪತ್ನಿ ಪದ್ಮಕ್ಕ ಅವರ ಧೀರೋದಾತ್ತ ಭೂಮಿಕೆಯನ್ನು ಅಭಿಮಾನದಿಂದ ನೆನಪಿಸಿಕೊಳ್ಳಬೇಕು. ಅವರು ತುಂಬಾ ಜಾಣ್ಮೆಯಿಂದ ಸಂಸಾರವನ್ನು ನಿರ್ವಹಿಸುತ್ತಾ ಅನಂತ ಅವರಿಗೆ ಭದ್ರ ಬೆಂಬಲ ನೀಡಿದ್ದಲ್ಲದೆ ಸಮಿತಿ, ಸಂಸ್ಕಾರ ಭಾರತಿಯ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಂಡರು. ಅನಂತ ತಮ್ಮ ಜೀವನಯಾತ್ರೆಯ ಸಾಯಂಕಾಲದ ದಿನಗಳಲ್ಲಿ ವೃದ್ಧಾಪ್ಯ ಹಾಗೂ ಅನಾರೋಗ್ಯದ ಕಾರಣಗಳಿಂದ ಪ್ರತ್ಯಕ್ಷ ಸಂಘ ಕಾರ್ಯದಲ್ಲಿ ಭಾಗಿಯಾಗದಿದ್ದರೂ, ಸಂಘ ಕಾರ್ಯದಿಂದ ಪಡೆದ ಶಕ್ತಿ ಸಾಮರ್ಥ್ಯಗಳಿಗಾಗಿ ಸಂಘವನ್ನು ಕೃತಜ್ಞತೆಯಿಂದ ಸ್ಮರಿಸುತ್ತಾ, ತೃಪ್ತಿ ಸಮಾಧಾನಗಳನ್ನು ಅನುಭವಿಸುತ್ತಾ, ವಿಧಿಬರಹದಂತೆ ತಮ್ಮ 79ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿ ಹೋದರು. ನಿಧನರಾಗುವ ಮೊದಲು ಬೆಂಗಳೂರಿನಲ್ಲಿ ನಡೆದ ಶೃಂಗಘೋಷ್‌ನ ಐತಿಹಾಸಿಕ ಅಖಿಲ ಭಾರತೀಯ ಶಿಬಿರದಲ್ಲಿ ಹಾಜರಾಗಿ ಶಿಬಿರದ ವೈಭವವನ್ನು ತಮ್ಮ ಕಣ್ಣು, ಕಿವಿ, ಮನಗಳಲ್ಲಿ ತುಂಬಿಸಿಕೊಳ್ಳುವ ಭಾಗ್ಯವನ್ನು ದೇವರು ಅನಂತರಿಗೆ ಅನುಗ್ರಹಿಸಿದ್ದು ಒಂದು ವಿಶೇಷವೇ.
ಘೋಷ್ ಅನಂತರ ಸ್ಮೃತಿಯಲ್ಲಿ ಶತಶತ ನಮನಗಳು ಹಾಗೂ ಶ್ರದ್ಧಾಂಜಲಿಗಳು.

   

Leave a Reply