ಸಂಘ ಶಿಕ್ಷಾ ವರ್ಗ-2015 ಸಮಾರೋಪ

ಸೇವಾ ವಿಭಾಗ - 0 Comment
Issue Date :

ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಪಡದಿದ್ದರೆ ಇನ್ನಾರ ಬಗ್ಗೆ ಹೆಮ್ಮೆ ಪಡಬೇಕು – ಹಾಲ್ದೊಡ್ಡೇರಿ ಸುಧೀಂದ್ರ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ 20 ದಿನಗಳ ವಾರ್ಷಿಕ ಕಾರ್ಯಕರ್ತ ತರಬೇತಿ ಶಿಬಿರ ಸಂಘ ಶಿಕ್ಷಾ ವರ್ಗ-2015’ ಬೆಂಗಳೂರಿನ ಚನ್ನೇನಹಳ್ಳಿಯ ಜನಸೇವಾ ವಿದ್ಯಾಕೇಂದ್ರದ ಆವರಣದಲ್ಲಿ ಮೇ 9ರಂದು ಸಮಾರೋಪಗೊಂಡಿತು.
ಶಿಬಿರದ ವರದಿಯನ್ನು ನೀಡಿದ ಶಿಬಿರಾಧಿಕಾರಿ ವರದರಾಜನ್‌ರವರು ‘ಈ ಬಾರಿಯ ದ್ವಿತೀಯ ವರ್ಷದ ಪ್ರಶಿಕ್ಷಣ ವರ್ಗದಲ್ಲಿ 101 ಊರುಗಳಿಂದ 148 ಶಿಕ್ಷಾರ್ಥಿಗಳು ಹಾಗೂ ಪ್ರಥಮ ವರ್ಷದ ವರ್ಗದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತದ 329 ಊರುಗಳಿಂದ 642 ಶಿಕ್ಷಾರ್ಥಿಗಳು ಸೇರಿದಂತೆ ಒಟ್ಟು 780 ಶಿಕ್ಷಾರ್ಥಿಗಳು ಪಾಲ್ಗೊಂಡಿದ್ದಾರೆ. ಎಪ್ರಿಲ್ 19ರಿಂದ ಆರಂಭಗೊಂಡ 20 ದಿನಗಳ ಶಿಬಿರದಲ್ಲಿ 10ನೇ ತರಗತಿಯಿಂದ ಆರಂಭಗೊಂಡು ಪದವಿ, ಇಂಜಿನಿಯರಿಂಗ್, ಸ್ನಾತಕೋತ್ತರ ಶಿಕ್ಷಣ ಪೂರೈಸಿದ ಶಿಕ್ಷಾರ್ಥಿಗಳು ಸೇರಿದಂತೆ ಕೃಷಿಕರು, ಉದ್ಯೋಗಿಗಳು, ಕಾರ್ಮಿಕರು, ಇಂಜಿನಿಯರ್‌ಗಳು ಮೊದಲಾದ ವಿವಿಧ ವತ್ತಿಯಲ್ಲಿರುವವರು ಸಂಘ ಶಿಕ್ಷಣ ಪಡೆದಿದ್ದಾರೆ. ಪ್ರತಿನಿತ್ಯ ಮುಂಜಾನೆ 4:40ಕ್ಕೆ ಆರಂಭಗೊಂಡು ರಾತ್ರಿಯ 10 ಗಂಟೆಯವರೆಗೆ ನಡೆಯುವ ಶಿಬಿರದ ಚಟುವಟಿಕೆಯಲ್ಲಿ ದಂಡಯುದ್ಧ, ನಿಯುದ್ಧ, ಯೋಗಾಸನ, ಆಟಗಳು ಮೊದಲಾದ ಶಾರೀರಿಕ ಶಿಕ್ಷಣದ ಜೊತೆಗೆ ಗುಂಪು ಚರ್ಚೆ, ಭಾಷಣ, ಕಥೆಗಳ ಮೂಲಕ ದೇಶದ ಇತಿಹಾಸ, ವರ್ತಮಾನಗಳನ್ನು ಅರಿಯುವ ಪ್ರಯತ್ನವನ್ನು ಶಿಬಿರಾರ್ಥಿಗಳು ಮಾಡಿದ್ದಾರೆ. ಜೊತೆಗೆ ದೇಶ ಮತ್ತು ಸಮಾಜ ಇಂದು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿತು ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನ ಮಾಡಿದ್ದಾರೆ’ ಎಂದು ನುಡಿದರು.
‘ಆರೆಸ್ಸೆಸ್ ಸರಸಂಘಚಾಲಕ ಮೋಹನ್‌ರಾವ್ ಭಾಗವತ್, ಅಖಿಲ ಭಾರತೀಯ ಸಂಪರ್ಕ ಪ್ರಮುಖ್ ಅನಿರುದ್ಧ ದೇಶಪಾಂಡೆ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ್ ಭೇಂಡೆ, ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ ಮುಕುಂದ್, ಪರಿವಾರ ಪ್ರಬೋಧನ ಸಂಯೋಜಕ ಕಜಂಪಾಡಿ ಸುಬ್ರಮಣ್ಯ ಭಟ್, ಹಿರಿಯ ಪ್ರಚಾರಕರಾದ ಕೃ. ಸೂರ್ಯನಾರಾಯಣ ರಾವ್, ಮೈ.ಚ. ಜಯದೇವ, ಸು. ರಾಮಣ್ಣ ಮುಂತಾದವರು ಸೇರಿದಂತೆ ಆರೆಸ್ಸೆಸ್‌ನ ಕ್ಷೇತ್ರ ಹಾಗೂ ಪ್ರಾಂತದ ಹಲವಾರು ಪ್ರಮುಖರು ಶಿಬಿರಕ್ಕೆ ಭೇಟಿ ನೀಡಿ ಶಿಕ್ಷಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು’ ಎಂದು ಅವರು ವರದಿ ನೀಡಿದರು.
ರಾ.ಸ್ವ . ಸಂಘದ ಅಖಿಲ ಭಾರತ ಸಹಬೌದ್ಧಿಕ ಪ್ರಮುಖ ಮುಕುಂದರವರು ಸಮಾರೋಪ ಸಮಾರಂಭದ ಬೌದ್ಧಿಕ ವರ್ಗವನ್ನು ನಡೆಸಿಕೊಟ್ಟರು. ಮಾನ್ಯ ಮುಕುಂದರವರ ಬೌದ್ಧಿಕದ ಸಾರಾಂಶ:
ಜನಸೇವಾ ಸಂಸ್ಥೆಯ ಈ ಆವರಣದಲ್ಲಿ ಕಳೆದ 40 ವರ್ಷಗಳಿಂದ ಸಾವಿರಾರು ಸ್ವಯಂಸೇವಕರು ಶಿಕ್ಷಣವನ್ನು ಪಡೆದು ಸಂಘಕಾರ್ಯದ ಕೆಲಸದ ಸಂಕಲ್ಪ ಮಾಡಿ ಸಮಾಜಸೇವೆಯಲ್ಲಿ ತೊಡಗಿದ್ದಾರೆ. ಕೆಲವು ವರ್ಷಗಳ ಕೆಳಗೆ ಇಲ್ಲೇ ಸಂಘದ ಶಿಕ್ಷಣವನ್ನು ಪಡೆದ ಯುವಕ ಕೈತುಂಬ ಸಂಬಳದ ನೌಕರಿಯನ್ನು ಬಿಟ್ಟು ದೂರದ ಮಣಿಪುರದಲ್ಲಿ ಸಂಘದ ಕೆಲಸ ಮಾಡುತ್ತಿದ್ದಾನೆ. ಓರ್ವ ಸ್ವಯಂಸೇವಕ ಇಲ್ಲೇ ಬೆಂಗಳೂರಿನಲ್ಲಿ ಟ್ಯೂಶನ್ ಸೆಂಟರ್‌ನ್ನು ಪ್ರಾರಂಭಮಾಡಿದ್ದಾನೆ. ಅದರ ಪರಿಣಾಮವಾಗಿ ಅಲ್ಲಿನ ಸ್ಥಳೀಯ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದಲ್ಲದೇ ಅವರ ಶಿಕ್ಷಣ ಗುಣಮಟ್ಟ ಉತ್ತಮವಾಗಿದ್ದೇ ಅಲ್ಲದೇ ಅಲ್ಲಿನ ಮನೆಗಳಲ್ಲೂ ಸುಸಂಸ್ಕಾರ ಮೂಡಿದೆ.
ಇಲ್ಲಿ ಪಡೆದ ಶಿಕ್ಷಣ ನಮಗೆ ವ್ಯಕ್ತಿಗತ ಶಾರೀರಿಕ, ಬೌದ್ಧಿಕ ಸಾಮರ್ಥ್ಯವನ್ನು ಕೊಡುವುದರ ಜೊತೆಗೆ ಸಮಾಜ ಹಾಗೂ ದೇಶದ ಸೇವೆಯನ್ನು ಮಾಡಬೇಕು ಎನ್ನುವ ಪ್ರೇರಣೆ ನೀಡುತ್ತದೆ. ಉದಾಹರಣೆಗೆ ಸಂಘದ ಹಿರಿಯ ಸ್ವಯಂಸೇವಕರೊಬ್ಬರು ಬಹಳ ಹಣವಂತರೇನೂ ಅಲ್ಲದಿದ್ದರೂ ತಮ್ಮ ಮನೆಯ ಪಕ್ಕದಲ್ಲಿ ಐದು ಸೈಟುಗಳನ್ನು ಮಾಡಿ ಹಿಂದುಳಿದ ವರ್ಗದ ಜನರೆಂದು ದೂರತಳ್ಳಲ್ಪಟ್ಟ ಅಸ್ಪೃಶ್ಯರೆಂದು ಕರೆಯಲ್ಪಡುವ ವರ್ಗದ ಜನರಿಗೆ ನೀಡಿದರು. ಸಂಘದ ಶಿಕ್ಷಣ ಪಡೆದ ಶಿವಮೊಗ್ಗದ ಸ್ವಯಂಸೇವಕ ಕೆಲವು ವರ್ಷಗಳ ಹಿಂದೆ ಜೋಳಿಗೆ ಪುಸ್ತಕ ಯೋಜನೆಯನ್ನು ಆರಂಭಿಸಿದರು. ಜೋಳಿಗೆಯಲ್ಲಿನ ಪುಸ್ತಕವನ್ನು ಮನೆಗೆ ತೆಗೆದುಕೊಂಡು ಹೋಗಿ ಓದಿ ಮರಳಿ ಕೊಡುವುದು ಈ ಯೋಜನೆ. ಹೀಗೆ ಜೋಳಿಗೆಯ ಪುಸ್ತಕಗಳನ್ನು ಓದಿದ ಹಿಂದುಳಿದ ವರ್ಗದ ಹುಡುಗಿ ಇಂದು ಶಿಕ್ಷಕಿಯಾಗಿದ್ದಾಳೆ. ಹೀಗೆ ಸ್ವಯಂಸೇವಕರನ್ನು ಸಮಾಜಮುಖಿಯಾಗಿಸುವ ಶಿಕ್ಷಣವನ್ನು ಸಂಘದ ಶಾಖೆಗಳಲ್ಲಿ ನೀಡಲಾಗುತ್ತದೆ. ಜೀವನ ಪ್ರೀತಿಯನ್ನು, ರಾಷ್ಟ್ರಪ್ರೇಮ, ಸಾಮಾಜಿಕ ಬದ್ಧತೆಯನ್ನು ದೊಡ್ಡದೊಡ್ಡ ಶಬ್ದಗಳಲ್ಲಿ ಹೇಳದೇ ಸಾಮಾನ್ಯ ಜನರಲ್ಲಿ ಕಲಿಸುವುದು ಸಂಘದ ಪದ್ಧತಿ.
ಕಿಂಗ್ ಇಸ್ ನೇಕೆಡ್ ಎನ್ನುವ ಒಂದು ಇಂಗ್ಲೀಷ್ ಕತೆಯಲ್ಲಿ ನೇಕಾರನ ಸೋಗಿನಲ್ಲಿ ಬಂದ ಮೋಸಗಾರರು ರಾಜನನ್ನು ಬೆತ್ತಲೆ ಮೆರವಣಿಗೆ
ಮಾಡಿದಂತೆ ರಾಷ್ಟ್ರೀಯತೆ, ಹಿಂದುತ್ವದ ಬಗೆಗೆ ಮಾತನಾಡುವವರನ್ನು ಸಮಾಜ ವಿರೋಧಿಗಳು ಎಂದು ಬಿಂಬಿಸುವ ಪ್ರಯತ್ನ ಹಲವು ವರ್ಷಗಳಿಂದ ನಡುಯುತ್ತಿದೆ.
ನಮ್ಮ ದೇಶದಲ್ಲಿ ಹಿಂದುತ್ವದ ವಿಷಯವನ್ನು – ರಾಷ್ಟ್ರೀಯ ವಿಚಾರಗಳನ್ನು – ದೇಶಭಕ್ತಿಯನ್ನು ಕುರಿತು ಮಾತನಾಡುವವರನ್ನು ಕಮ್ಯೂನಲ್, ಪ್ರತಿಗಾಮಿಗಳು ಎನ್ನುತ್ತಾ ಸಂಘದ ಕುರಿತು ಕೃತಕ ಪರದೆಯನ್ನು ತಥಾಕಥಿತ ಬುದ್ಧಿಜೀವಿಗಳು ಬೆಳೆಸಿದ್ದಾರೆ. ಆದರೆ ಇಂದಿನ ಯುವಕರು ತಮ್ಮದೇ ಆದ ರೀತಿಯಲ್ಲಿ ಈ ಪರದೆಯನ್ನು ಕಳಚುತ್ತಿದ್ದಾರೆ. ದೇಶಕ್ಕೆ ಹಾಗೂ ಸಮಾಜಕ್ಕೆ ಅನುಕೂಲಕರವಾಗುವ ಕಾರ್ಯವನ್ನು ಇಂದಿನ ಯುವಕರು ಮಾಡುತ್ತಿದ್ದಾರೆ.
ಇಲ್ಲಿ ನಡೆದಿರುವಂತೆ ದೂರದ ಪಶ್ಚಿಮ ಬಂಗಾಳದ ನಕ್ಸಲ್‌ಬಾರಿ ಎಂಬ ಗ್ರಾಮದಲ್ಲಿಯೂ ಒಂದು ಸಂಘದ ಶಿಬಿರ ನಡೆಯುತ್ತಿದೆ. ಈ ಘಟನೆ ಸಣ್ಣದಾಗಿ ಕಾಣಬಹುದು. ಆದರೆ ರಾಷ್ಟ್ರೀಯತೆಯನ್ನು ವಿರೋಧಿಸುವ ನಕ್ಸಲ್ ಆಂದೋಲನ ಪ್ರಾರಂಭವಾದ ಈ ಪ್ರದೇಶದಲ್ಲಿ ಇಂದು ನಕ್ಸಲರಿಲ್ಲ. ಆದರೆ ರಾಷ್ಟ್ರವಾದಿ ಸಂಘದ ಚಟುವಟಿಕೆ ನಡೆಯುತ್ತಿದೆ. ಇತಿಹಾಸದ ರಾಷ್ಟ್ರೀಯ ಚಳುವಳಿಯನ್ನು ಸೂಕ್ಷ್ಮವಾಗಿ ನೋಡಿದಾಗ ಇಂದು ಅರಾಷ್ಟ್ರೀಯ ಆಂದೋಲನ ಮುಕ್ತಾಯದ ಹಂತ ತಲುಪಿದ್ದನ್ನು ನಾವು ಕಾಣಬಹುದು.
ಡಾಕ್ಟರ್‌ಜೀ ಹೇಳಿದಂತೆ ನಮ್ಮಲ್ಲಿ ಸಾಮಾಜಿಕ ಬದ್ಧತೆ ಮೂಡಬೇಕಾದರೆೆ ನಮ್ಮ ಸಮಾಜ ಯಾವುದು ಎನ್ನುವ ಅರಿವು ಮೊದಲು ಆಗಬೇಕು. ಆಗ ಸಮಾಜದ ಬಗ್ಗೆ ಅಭಿಮಾನ ಮೂಡಲು ಸಾಧ್ಯ. ಹಿಂದು ಸಮಾಜದ ಅಭಿಮಾನ ಮೂಡಿಸಲು ಯಾವ ಹೆಸರಿನಿಂದ ಕರೆದೆಬ್ಬಿಸಬೇಕಾಗಿತ್ತೋ ಆ ಕೆಲಸವನ್ನು ಡಾ ಹೆಡಗೇವಾರ್ ಮಾಡಿದರು.
ದೇಹದಲ್ಲಿ ಅನಾರೋಗ್ಯವಾದಾಗ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಯೋಚನೆ ಮನಸ್ಸಿನಲ್ಲಿ ಮೂಡಬೇಕು. ಅಂತೆಯೇ ಸಮಾಜದಲ್ಲಿರುವ ಅನಾರೋಗ್ಯವನ್ನು ಹೋಗಲಾಡಿಸಲು ಅಲ್ಲನ ಜನರಲ್ಲೇ ಸಾಮಾಜಿಕ ಬದ್ಧತೆಯನ್ನು ಹೆಚ್ಚಿಸುವುದೇ ಪರಿಹಾರ. ಸಮಾಜದ ಅಭಿಮಾನ ಜಾಗೃತವಾದಾಗ ಅದರ ನಿಜವಾದ ಶಕ್ತಿ ಹೊರಗೆ ಬರುತ್ತದೆ ಆ ಕಾರ್ಯವನ್ನು ಸಂಘ ಮಾಡುತ್ತಿದೆ.
ಹಿಂದು ಸಂಸ್ಕೃತಿಯ ಮೌಲ್ಯಗಳಲ್ಲಿ ಜಗತ್ತಿನ ಸಮಸ್ಯೆಗಳಿಗೆ ಪರಿಹಾರ ಕೊಡುವ ಸಾಮರ್ಥ್ಯವಿದೆ. ಇಂತಹ ಮೌಲ್ಯಗಳನ್ನು ಮೈಗೂಡಿಸಿಕೊಂಡ ವ್ಯಕ್ತಿಗಳು ಹೆಚ್ಚು ಬೇಕು. ಸಂಘ ಅಂತಹ ವ್ಯಕ್ತಿಗಳ ನಿರ್ಮಾಣ ಮಾಡುತ್ತಿದೆ. ಸಂಘದ ಕೆಲಸ ಹಿಂದೂ ಸಮಾಜದ ಚೌಕಟ್ಟನ್ನು ಬಲಪಡಿಸುವ ಕಾರ್ಯ.
ಇಲ್ಲಿ ಶಿಕ್ಷಣ ಪಡೆದ ಸ್ವಯಂಸೇವಕರು ತಮ್ಮ ತಮ್ಮ ಪ್ರದೇಶಗಳಲ್ಲಿ ಹಿಂದೂ ಸಮಾಜದ ಎಲ್ಲರನ್ನು ಜೊತೆಗೆ ಕೂಡಿಸಿ ಸಮಾಜ ಸಂಘಟನೆಯ ಕಾರ್ಯದಲ್ಲಿ ತೊಡಗಲಿದ್ದಾರೆ. ಭಾರತೀಯ ಸಮಾಜ ಯಾವ ದಿಕ್ಕಿನಲ್ಲಿ ಸಾಗಬೇಕೋ ಆ ನಿಟ್ಟಿನಲ್ಲಿ ಸಾಗುವ ಕಾರ್ಯವನ್ನು ಸಂಘ ಮಾಡುತ್ತಿದೆ. ಈ ಕಾರ್ಯಕ್ಕೆ ಇನ್ನೂ ಹೆಚ್ಚಿನ ವೇಗವನ್ನು ನೀಡಬೇಕಾದ ಅವಶ್ಯಕತೆಯಿದೆ. ಸಂಘದ ಈ ವಿಶಿಷ್ಟ ಪ್ರಯತ್ನದಲ್ಲಿ ಸಮಾಜ ಜೋಡಿಕೊಳ್ಳಬೇಕೆನ್ನುವುದು ಸಂಘದ ಕಳಕಳಿಯ ಅಪೇಕ್ಷೆ.
ಅಧ್ಯಕ್ಷೀಯ ಭಾಷಣ ಮಾಡಿದ ರಕ್ಷಣಾ ಸಂಶೋಧನಾ ಸಂಸ್ಥೆಯಲ್ಲಿ ಹಿರಿಯ ವಿಜ್ಞಾನಿಯಾಗಿದ್ದ ಪ್ರಸ್ತುತ ಅಲಾಯನ್ಸ್ ವಿಶ್ವವಿದ್ಯಾಲಯದ ವೈಮಾನಾಂತರಿಕ್ಷ ಇಂಜಿನಿಯರಿಂಗ್ ವಿಭಾಗದಲ್ಲಿ ಪ್ರಾಧ್ಯಾಪಕರಾದ ಹಾಲ್ದೊಡ್ಡೇರಿ ಸುಧೀಂದ್ರರವರು ‘‘ಈ ಎರಡು ಗಂಟೆಗಳ ಕಾಲ ವೇದಿಕೆಯಲ್ಲಿ ಕುರಿತು ನಾನು ನಿಮ್ಮ ಪರಿಚಯವನ್ನು ಮಾಡಿಕೊಳ್ಳುತ್ತಿದ್ದೆ. ನನ್ನ ವೃತ್ತಿಜೀವನದಲ್ಲಿ ದೇಶದ ಗಡಿ ರಕ್ಷಣೆಯ ಜವಾಬ್ದಾರಿಯನ್ನು ಹೊತ್ತ ಸೈನ್ಯದ ಉನ್ನತ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವ ಅವಕಾಶ ದೊರಕಿತ್ತು. ಆ ಅನುಭವವಿರುವ ನನಗೆ ಇಲ್ಲಿ ಕುಂಳಿತಾಗ ಮಿಲಿಟರಿ ಪರೇಡ್‌ನ್ನು ನೋಡಿದ ಅನುಭವವಾಯಿತು. ನಾನು ನನ್ನ ದೇಶದ ಬಗ್ಗೆ ಹೆಮ್ಮೆ ಪಡದಿದ್ದರೆ ಇನ್ನು ಯಾರ ಬಗ್ಗೆ ಹೆಮ್ಮೆ ಪಡಬಹುದು. ನಾನೇ ನನ್ನ ಹೆತ್ತಮ್ಮನ ಬಗ್ಗೆ ಹೆಮ್ಮೆ ಪಡದಿದ್ದರೆ ಇನ್ನು ಯಾರು ಹೆಮ್ಮೆಪಡಬಲ್ಲರು. ಶಿಸ್ತು, ದೇಶದ ಬಗ್ಗೆ ಹೆಮ್ಮೆಯನ್ನು ಮೂಡಿಸುವ ದೇಶ ಸೇವೆಯ ಬಗ್ಗೆ ಪ್ರೇರಣೆ ನೀಡಬಲ್ಲ ಸಂಘಟನೆ ಎಂದರೆ ರಾ ಸ್ವ ಸಂಘ ಎಂದು ಹೆಮ್ಮೆಯಿಂದ ಹೇಳಬಯಸುತ್ತೇನೆ’ ಎಂದು ನುಡಿದರು.
ರಕ್ಷಣಾ ತಂತ್ರಜ್ಞಾನ, ಬಾಹ್ಯಾಕಾಶ ಪರಮಾಣು ವಿಜ್ಞಾನ ಕ್ಷೇತ್ರದಲ್ಲಿ ನಮ್ಮ ದೇಶದ ಸಾಧನೆಯನ್ನು ವಿವರಿಸಿದ ಸುಧೀಂದ್ರರವರು ‘ನಮ್ಮ ದೇಶದ ಕುರಿತು ಹೆಮ್ಮೆ ಪಡುವ ಅನೇಕ ವಿಷಯಗಳಿವೆ. ಆದರೆ ನಾವು ನಮ್ಮಲ್ಲಿ ಇಲ್ಲದಿರುವುದರ ಕುರಿತು ಚಿಂತಿಸುತ್ತಿದ್ದೇವೆ. ರಾ.ಸ್ವ. ಸಂಘವು ಯುವಜನರನ್ನು ದೇಶಸೇವೆಗೆ ತೊಡಗಲು ಪ್ರೇರಣೆ ಕೊಡುವ, ದೇಶದ ಬಗ್ಗೆ ಹೆಮ್ಮೆ ಮೂಡುವ ಶಿಕ್ಷಣವನ್ನು ನೀಡುತ್ತಿದೆ. ಇಂತಹ ಯುವಜನರಿಂದ ಭಾರತ ಜಗತ್ತಿನ ಅತ್ಯಂತ ಪ್ರಬಲ – ಸಮರ್ಥ ದೇಶವಾಗುವುದರಲ್ಲಿ ಸಂದೇಹವಿಲ್ಲ’’ ಎಂದು ಅವರು ನುಡಿದರು.
ಸಮಾರಂಭದ ಪ್ರಾರಂಭದಲ್ಲಿ ಶಿಬಿರಾರ್ಥಿ ಸ್ವಯಂಸೇವಕರು ಆವರಣದಲ್ಲಿ ಧ್ವಜಪ್ರದಕ್ಷಿಣ (ಪಥಸಂಚಲನ) ನಡೆಸಿದರು. ನಂತರ ನಡೆದ ಶಾರೀರಿಕ ಪ್ರದರ್ಶನದಲ್ಲಿ ಶಿಬಿರದಲ್ಲಿ ಕಲಿತ ಸ್ವದೇಶೀ ಬ್ಯಾಂಡ್ (ಘೋಷ್), ನಿಯುದ್ಧ, ದಂಡಯುದ್ಧ, ಯೋಗಾಸನಗಳು, ವಿವಿಧ ಆಟಗಳ ಆಕರ್ಷಕ ಪ್ರದರ್ಶನ ನಡೆಯಿತು. ಒಬ್ಬರಿಗೊಬ್ಬರು ಹೆಗಲು ಕೊಟ್ಟು ಸಹಾಯ ಮಾಡುತ್ತ ಸ್ವಯಂಸೇವಕರು ನಿರ್ಮಿಸಿದ ಸಿಂಹಮುಖ, ಕೋಟೆ, ತಾವರೆ, ರಥ, ಮುಂತಾದ ಮಾನವ ಗೋಪುರ ರಚನೆ ನೆರೆದಿದ್ದ ಪ್ರೇಕ್ಷಕರ ಮನಗೆದ್ದಿತು. ಸ್ವಯಂಸೇವಕರ ಒಕ್ಕೊರಲಿನಿಂದ ಮೂಡಿಬಂದ ‘ಮುಂದೆ ಬರಲಿ ತರುಣ ಶಕ್ತಿ ಮನವನೊಂದುಗೂಡಿಸಿ’ ಎನ್ನುವ ಸಾಂಘಿಕ ಗೀತೆ ಆಗಸವನ್ನು ತಲುಪಿತು. ಸಾಮೂಹಿಕ ಸೂರ್ಯನಮಸ್ಕಾರ, ಸಮೂಹ ಅನುಶಾಸನ ಬಿಂಬಿಸುವ ತ್ರಿವಳಿ ವ್ಯಾಯಾಮ, ಸಮತಾ ಪ್ರದರ್ಶನ ಆಕರ್ಷಕವಾಗಿ ಮೂಡಿಬಂದವು.
ವೇದಿಕೆಯಲ್ಲಿ ಪ್ರಾಂತ ಸಂಘಚಾಲಕರಾದ ಮ. ವೆಂಕಟರಾಮು, ವರ್ಗಾಧಿಕಾರಿಗಳಾದ ಸಂಜೀವ ರೆಡ್ಡಿ ಹಾಗೂ ವರದರಾಜನ್‌ರವರು ಉಪಸ್ಥಿತರಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ಸಂಘದ ಹಿರಿಯರಾದ ಮೈ .ಚ .ಜಯದೇವ, ಚಂದ್ರಶೇಖರ ಭಂಢಾರಿ, ಮಂಗೇಶ ಭೇಂಡೆ, ದಾ.ಮ. ರವೀಂದ್ರ, ಡಾ. ಕಲ್ಲಡ್ಕ ಪ್ರಭಾಕರ ಭಟ್, ನಾ. ತಿಪ್ಪೇಸ್ವಾಮಿ ಮುಂತಾದವರು ಉಪಸ್ಥಿತರರಿದ್ದರು. ಪ್ರಥಮ ವರ್ಷ ವರ್ಗದ ಶಿಬಿರಾಧಿಕಾರಿ ಸಂಜೀವ ರೆಡ್ಡಿ ಸ್ವಾಗತಿಸಿ ಪರಿಚಯಿಸಿದರು.

   

Leave a Reply