ಸಂಚಾರಿ ನಿಯಮ ಪಾಲನೆ ಆಟ – 2

ಕ್ರೀಡೆ - 0 Comment
Issue Date : 29.06.2015

ಹಿಂದಿನ ವಾರದ ಅಂಕಣದಲ್ಲಿ ಪಾದಾಚಾರಿ ಮಾರ್ಗ ಇರುವ ರಸ್ತೆಗಳು ಹಾಗೂ ಪಾದಾಚಾರಿ ಇಲ್ಲದ ರಸ್ತೆಗಳ ಕುರಿತು ನಿಯಮ ಪಾಲನೆಗಳನ್ನು ಆಟದ ಮೂಲಕ ಯಾವ ರೀತಿ ಕಲಿಯಬಹುದು ಎಂಬ ಪರಿಚಯ ಮಾಡಿಕೊಂಡೆವು. ಈ ಆಟದ ನಿಯಮದಲ್ಲಿ ಪ್ರಥಮ ಚಿಕಿತ್ಸೆಯ ಮಾಡುವ ರೀತಿಯನ್ನು ಹೇಳಿಕೊಡಬೇಕು.
ಅಡ್ಡ ರಸ್ತೆಗಳ ಸಂಧಿಸ್ಥಾನ
ವಿಶೇಷವಾಗಿ ನಾಲ್ಕು ರಸ್ತೆಗಳು ಸೇರುವ ಸ್ಥಳದಲ್ಲಿ ರಸ್ತೆ ದಾಟುವುದು ಮಕ್ಕಳಿಗಷ್ಟೇ ಅಲ್ಲದೇ ದೊಡ್ಡವರಿಗೂ ತ್ರಾಸದಾಯಕ. ಈ ರೀತಿಯ ರಸ್ತೆಯಲ್ಲಿ ದಾಟುವುದು ಹೇಗೆ ಎಂಬುದನ್ನು ಆಟದ ಮೂಲಕ, ಗುಂಪುಗಳಲ್ಲಿ ನಿಯಮ ಪಾಲನೆ ಮಾಡುವುದರ ಮೂಲಕ ಅರಿಯಬಹುದು.
ಆಟದ ಮೈದಾನದಲ್ಲಿ ಒಂದು ನೇರವಾದ ರಸ್ತೆ. ಅದನ್ನು ಹಾದು ಹೋಗುವ ಅಡ್ಡರಸ್ತೆಗಳನ್ನು ಸುಣ್ಣದ ಪುಡಿಯಿಂದ ಗುರುತು ಮಾಡಬೇಕು. ಹಿಂದಿನ ವಾರದ ಅಂಕಣದಲ್ಲಿ ಹೇಳಿದಂತೆ ವಾಹನ ರಚನೆಗಳನ್ನು ಮೊದಲೇ ಮಾಡಿಕೊಳ್ಳಬೇಕು. ಪಾದಾಚಾರಿ ಮಾರ್ಗ, ರಸ್ತೆ ದಾಟುವ ಮಾರ್ಗದ ಗುರುತು ಮಾಡಿಕೊಳ್ಳಬೇಕು.
ಆಟವಾಡಲು ಕೆಳಕಂಡ ಗುಂಪುಗಳನ್ನು ಮಾಡಿ.
ಗುಂಪು 1:ಸರಿಯಾಗಿ ರಸ್ತೆ ದಾಟುವ ಗುಂಪುಗಳು, ಇದರ ನಿಯಮಗಳು ರಸ್ತೆ ದಾಟುವ ಮುಂಚೆ ನಿಂತು ಎಡ – ಬಲ ನೋಡಬೇಕು. ಕಣ್ಣು, ಕಿವಿಗಳನ್ನು ಉಪಯೋಗಿಸಿ ನಂತರ ಕಾಲುಗಳನ್ನು ಉಪಯೋಗಿಸಬೇಕು. ಬಲಕ್ಕೆ ರಸ್ತೆ ಬಿಡುವಾಗಿದ್ದರೆ ರಸ್ತೆಯ ಮಧ್ಯದವರೆಗೂ ಹೋಗಿ, ಅಲ್ಲಿ ಎಡಕ್ಕೆ ನೋಡಿ ವಾಹನಗಳಿಲ್ಲದಿದ್ದರೆ ಮುಂದೆ ರಸ್ತೆ ದಾಟಬೇಕು.
ರಸ್ತೆ ದಾಟುವಾಗ ನೇರವಾಗಿ ದಾಟಬೇಕು. ಓರೆಯಾಗಿ ದಾಟಬಾರದು.
ಗುಂಪು 2: ರಸ್ತೆಯಲ್ಲಿ ಓಡುವ ಒಂದು ತಂಡ. ಹೀಗೆ ಓಡುವಾಗ ತೊಡರಿಬೀಳುವ ನಟನೆ ಮಾಡಬೇಕು. ಅದೇ ಸಮಯದಲ್ಲಿ ವಾಹನ ಪ್ರತಿನಿಧಿಸುವ ಆಟಗಾರರ ಗುಂಪು ಅವನ ಮೇಲೆ ಹಾದು ಹೋಗಬೇಕು. ಇನ್ನೊಂದು ತಂಡ ಅಡ್ಡರಸ್ತೆಗಳ ನಡುವೆ ಹಾದು ಹೋಗಿ ವಾಹನಗಳನ್ನು ಪ್ರತಿನಿಧಿಸುವ ಗುಂಪಿನ ಮಧ್ಯೆ ಸಿಕ್ಕಿ ಹಾಕಿಕೊಳ್ಳಬೇಕು. ರಸ್ತೆಯನ್ನು ಓರೆಯಾಗಿ ದಾಟಿದಾಗ ಸಿಕ್ಕಿ ಹಾಕಿಕೊಳ್ಳುವ ಆಟಗಾರರ ಇಬ್ಬರ ತಂಡ. ಇನ್ನೊಂದು ಕಡೆ ಅಕಸ್ಮಾತ್ ವಾಹನಗಳು ರಸ್ತೆಯ ಮಧ್ಯದಲ್ಲಿ ಕದಲದೆ ನಿಂತು ನಂತರ ರಸ್ತೆಯನ್ನು ದಾಟುವುದು ಹೇಗೆ ಎಂದು ಮಾಡುವ ಒಂದು ತಂಡ.
ಈ ರೀತಿಯ ಗುಂಪುಗಳನ್ನು ಮಾಡಿ ಅವರವರ ಕೆಲಸಗಳನ್ನು ಸರಿಯಾಗಿ ನಿರ್ವಹಿಸುವಂತೆ ಮಾಡಬೇಕು. ಯಾವ ತಂಡ ಎಲ್ಲ ನಿಯಮಗಳನ್ನು ಸರಿಯಾಗಿ ಮಾಡುವುದೋ ಆ ತಂಡ ಗೆದ್ದ ಹಾಗೆ. ಆಟದ ನಂತರ ಎಲ್ಲರೂ ಕೂಡಿ ಈ ಕೆಳಗಿನ ಪದ್ಯವನ್ನು ಪ್ರಾಸಬದ್ಧವಾಗಿ ಹೇಳಿಸಬೇಕು.
ನಿಂತೆ… ನೋಡಿದೆ… ಆಲಿಸಿದೆ
ಬಲಕ್ಕೆ ನೋಡಿದೆ
ನಡೆದೆ, ನಡೆದೆ, ನಡೆದೆ, ಅಲ್ಲಿ
ನಾನು ಎಡಕ್ಕೆ ನೋಡಿದೆ
ನಡೆದೆ ನಡೆದೆ ನಡೆದೆ ಮುಂದೆ.
ಈ ರೀತಿಯಲ್ಲಿ ಎಲ್ಲರಿಗೂ ರಸ್ತೆಗಳು ಸೇರುವ ಜಾಗದಲ್ಲಿ ಪಾದಾಚಾರಿಗಳು ದಾಟುವ ರೀತಿಯನ್ನು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿಸಬೇಕು. ನಮ್ಮ ತಪ್ಪಿನಿಂದಲೋ ಅಥವಾ ಬೇರೆಯವರ ತಪ್ಪಿನಿಂದಲೋ ಆಗುವ ಅಪಘಾತಗಳ ಪರಿಣಾಮ ಆಗುವುದು ಪಾದಾಚಾರಿಗಳ ಮೇಲೆ ಹೊರತು ವಾಹನಗಳ ಮೇಲೆ ಅಲ್ಲ. ಇದನ್ನು ಅರಿತುಕೊಂಡು ರಸ್ತೆ ದಾಟುವ ಅಭ್ಯಾಸವನ್ನು ಮಕ್ಕಳು ಈ ಆಟದ ಮೂಲಕ ಕಲಿಯುವಂತೆ ಮಾಡಬೇಕು.
ವಾಹನ ನಿಯಂತ್ರಕರಿರುವ ಕಡೆ ರಸ್ತೆ ದಾಟುವ ರೀತಿ
ಹಿಂದಿನ ಆಟದಂತೆಯೇ ರಸ್ತೆಯ ಭಾಗಗಳನ್ನು ಗುರುತಿಸುವುದು. ಇದರಲ್ಲಿ ಮೂರು ಗುಂಪುಗಳು. ಒಂದು ವಾಹನಗಳನ್ನು ಪ್ರತಿನಿಧಿಸುವ ಗುಂಪು. ಎರಡು – ವಾಹನ ನಿಯಂತ್ರಕರ ಇಬ್ಬರ ತಂಡ. ಮೂರು – ರಸ್ತೆಯ ನಿಯಮಗಳು, ವಾಹನ ನಿಯಂತ್ರಕರ ಸೂಚನೆಗಳನ್ನು ಗಮನಿಸಿ ರಸ್ತೆ ದಾಟುವ ತಂಡ. ಈ ಮೂರು ತಂಡಗಳಿಗೂ ಅವರವರು ಪಾಲಿಸುವ ಆಟದ ನಿಯಮಗಳನ್ನು ಹೇಳಬೇಕು. ಉದಾಹರಣೆ ವಾಹನ ನಿಯಂತ್ರಕರ ಕೆಲಸ. ವಾಹನಗಳನ್ನು ನಿಲ್ಲಿಸುವ ಹಾಗೂ ಚಲಿಸುವ ಸಂಜ್ಞೆಗಳು. ಪಾದಾಚಾರಿಗಳಿಗೆ ಹೊಗಲು ಹಾಗೂ ನಿಲ್ಲುವ ಸೂಚನೆಗಳು, ಪಾದಾಚಾರಿಗಳು ಎಲ್ಲಿ, ಯಾವಾಗ ರಸ್ತೆ ದಾಟಬೇಕು ಎಂಬ ನಿಯಮಗಳು. ಎಂದಿನಂತೆ ಈ ಮೂರು ತಂಡದಲ್ಲಿ ಯಾವ ತಂಡ ಸರಿಯಾಗಿ ಎಲ್ಲ ನಿಯಮಗಳನ್ನು ಪಾಲಿಸುವುದೋ ಆ ತಂಡಕ್ಕೆ ಗೆಲುವು. ನಂತರ ಎಲ್ಲರನ್ನೂ ಸೇರಿಸಿ ವಾಹನ ನಿಯಂತ್ರಕರಿರುವ ರಸ್ತೆ ದಾಟುವುದು ಹೇಗೆ ಎಂಬುದನ್ನು ಸೂಕ್ತ ವಿವರಣೆಯೊಂದಿಗೆ ಹೇಳಬೇಕು.
D ರೀತಿ ಮಕ್ಕಳ ಮನಸ್ಸಿನಲ್ಲಿ ಆಟಗಳ ಮೂಲಕ ರಸ್ತೆಗಳನ್ನು ಸುರಕ್ಷಿತವಾಗಿ ದಾಟುವ ಕುರಿತು ತಿಳಿವಳಿಕೆಯನ್ನು ಮೂಡಿಸಬೇಕು.

– ಶಿ.ನಾ. ಚಂದ್ರಶೇಖರ

   

Leave a Reply