ಸಂಚಾರಿ ನಿಯಮ ಪಾಲನೆ ಆಟ

ಕ್ರೀಡೆ - 0 Comment
Issue Date : 25.06.2015

ಆಟವೆಂಬುದು ಕೇವಲ ಶಾರೀರಿಕ ವ್ಯಾಯಾಮಕ್ಕೆ ಮಾತ್ರವಲ್ಲ. ಆಟ ಆಡುವವರು ಹಲವು ಸಂಗತಿಗಳನ್ನು ಕಲಿಯುವರು. ಮಕ್ಕಳು ಒಳ್ಳೆಯ ಗುಣಗಳನ್ನು ಕಲಿಯುವ ಪ್ರಯತ್ನ ಮಾಡುತ್ತಾರೆ. ಗುಂಪಿನಲ್ಲಿ ತನ್ನ ಸ್ವಭಾವ ಹೇಗಿರಬೇಕು ಎಂಬುದನ್ನು ಕಲಿಯುತ್ತಾರೆ. ಸ್ನೇಹಿತರೊಂದಿಗಿನ ಸಂಬಂಧಗಳು ಉತ್ತಮಗೊಳ್ಳುತ್ತವೆ. ಜೊತೆಗೆ ಸಹಜವಾಗಿ ವ್ಯಾಯಾಮ ಆಗುವುದರಿಂದ ಅವರ ಆರೋಗ್ಯವು ಉತ್ತಮಗೊಳ್ಳುತ್ತದೆ. ಹೀಗೆ ಆಟಗಳು ವಿವಿಧ ಪರಿಣಾಮಗಳನ್ನು ಬೀರುವುದರಿಂದ ಮಕ್ಕಳ ಮನಸ್ಸಿನಲ್ಲಿ ಆಟದ ಪ್ರಸಂಗಗಳು ಹೆಚ್ಚಿನ ಕಾಲ ಉಳಿಯುತ್ತವೆ.
ಆಟಗಳು ಕಲಿಕೆಯ ಉತ್ತಮ ಸಂವಹನವಾಗಿಯೂ ಕೆಲಸ ಮಾಡುತ್ತವೆ. ಈ ವಾರದ ಅಂಕಣದಲ್ಲಿ ವಿದ್ಯಾರ್ಥಿಗಳು ಆಟಗಳ ಮೂಲಕ ನಗರಗಳಲ್ಲಿ ಹೆಚ್ಚು ಸಮಸ್ಯೆಯಾಗಿರುವ ರಸ್ತೆ ಸಂಚಾರದ ಮಾಹಿತಿಗಳನ್ನು ಕಲಿಯುವ ಕೆಲವು ಆಟದ ರೀತಿಯ ಚಟುವಟಿಕೆಗಳನ್ನು ತಿಳಿಸಲಾಗಿದೆ. ಆಟಗಳ ಮೂಲಕ ತಿಳಿಯುವ ಯಾವುದೇ ಕಲಿಕೆ ಹೆಚ್ಚು ದಿನಗಳ ಕಾಲ ಮಕ್ಕಳ ಮನಸ್ಸಿನಲ್ಲಿ ಉಳಿಯುತ್ತದೆ.
ಈ ರೀತಿಯ ಆಟಗಳನ್ನು ಆಡಿಸಲು ಮುಂಚಿತವಾಗಿಯೇ ತಯಾರಿ ನಡೆಸಬೇಕು. ಇದಕ್ಕಾಗಿ ಹೆಚ್ಚಿನ ಸಲಕರಣೆಗಳು ಬೇಕಾಗುವುದಿಲ್ಲವಾದರೂ ಕಾಗದದ ಟೋಪಿಗಳು, ತೋಳಿನ ಪಟ್ಟಿಗಳು, ನೆಲದ ಮೇಲೆ ಗೆರೆ ಗುರುತಿಸಲು ಸೀಮೆಸುಣ್ಣ ಬೇಕಾಗುತ್ತದೆ.
ಮಕ್ಕಳ ಸಂಖ್ಯೆಯ ಅನುಗುಣವಾಗಿ ಕೆಲವೊಂದು ಸಾಂಕೇತಿಕ ಚಿಹ್ನೆಗಳಾಗಿ ವಿಂಗಡಿಸಬೇಕು. ಒಂದು ಮಗುವು ಪಾದಚಾರಿಯನ್ನು ಪ್ರತಿನಿಧಿಸಿದರೆ, ಸಣ್ಣ ಬಾವುಟ ಹಿಡಿದಿರುವ ಮಗು ಬೈಸಿಕಲನ್ನು ಪ್ರತಿನಿಧಿಸಬಹುದು. ಎರಡು ಮಕ್ಕಳು ದ್ವಿಚಕ್ರಗಳನ್ನು ಪ್ರತಿನಿಧಿಸಿದರೆ, ಮೂರು ಮಕ್ಕಳು ಒಟ್ಟಿಗೆ ಅಗ್ನಿಶಾಮಕ ಯಂತ್ರವನ್ನು ಪ್ರತಿನಿಧಿಸುವರು. ನಾಲ್ವರು ಮಕ್ಕಳು ಲಾರಿ ಅಥವಾ ಬಸ್ಸನ್ನು ಪ್ರತಿನಿಧಿಸಿದರೆ, ಇಬ್ಬರು ಮಕ್ಕಳು ಹಾಗೂ ಒಂದು ಡೋಲಿ ಅಂಬ್ಯುಲೆನ್ಸ್ ಅನ್ನು ಪ್ರತಿನಿಧಿಸುವರು. ಕಾಗದದ ಟೋಪಿ, ತೋಳಿನ ಪಟ್ಟಿ ಇವುಗಳನ್ನು ಮಕ್ಕಳೇ ತಯಾರು ಮಾಡಲು ಉತ್ಸುಕರಾಗಿರುತ್ತಾರೆ. ಅವರಿಗೆ ಇದೊಂದು ಪ್ರಾಜೆಕ್ಟ್ ವರ್ಕ್ ಆಗಿಯೂ ಕೊಡಬಹುದು.
ವಾಹನಗಳನ್ನು ಸೂಚಿಸುವ ಮಕ್ಕಳು ರಸ್ತೆಯಲ್ಲಿ ಒಬ್ಬರ ಹಿಂದೆ ಒಬ್ಬರು ತಮ್ಮ ಕೈಗಳನ್ನು ಮುಂದಿನವರ ಭುಜದ ಮೇಲಿಟ್ಟು ಒಂದೇ ಸಾಲಿನಲ್ಲಿ ರಸ್ತೆಯಲ್ಲಿ ನಡೆಯಬೇಕು.
ಈ ವಿಧವಾದ ಆಟಗಳಿಗೆ ಗಾಡಿ ಅಥವಾ ವಾಹನ ಸಂಚಾರದ ಪ್ರಕ್ರಿಯೆ ಇರಲೇಬೇಕು. ಕಾಲುದಾರಿಯಿಲ್ಲದ ರಸ್ತೆಯ ಒಂದು ಭಾಗವನ್ನು ಆಟದ ಮೈದಾನದಲ್ಲಿ ಒಂದು ಕಡೆ ಸೀಮೆಸುಣ್ಣದಿಂದ ಗುರುತು ಮಾಡಬೇಕು. ಪಾದಚಾರಿ ವಿದ್ಯಾರ್ಥಿಗಳು ರಸ್ತೆಯ ಬಲಭಾಗದ ಅಂಚಿನಲ್ಲಿ ವಾಹನಗಳ ಎದುರಲ್ಲಿ ನಡೆದು ಹೋಗಬೇಕು. ಈ ರಾತ್ರಿ ವೇಳೆಯ ವಿದ್ಯಾರ್ಥಿ ಪಾದಚಾರಿಗಳು ಕೈಯಲ್ಲಿ ಟಾರ್ಚ್ ಹಿಡಿದುಕೊಂಡು ನಡೆಯಬೇಕು.
ಎಲ್ಲಿ ಕಾಲುದಾರಿ ಇರುವುದಿಲ್ಲವೋ ಅಲ್ಲಿ ಮಾತ್ರ ರಸ್ತೆಯ ಅಂಚಿನಲ್ಲಿ ನಡೆದು ಹೋಗಬೇಕು ಎಂಬುದನ್ನು ಮರೆಯಬಾರದು. ಪಾದಚಾರಿ ಮಾರ್ಗವಿದ್ದಲ್ಲಿ ಅದನ್ನೇ ಉಪಯೋಗಿಸಬೇಕು. ಪಾದಚಾರಿ ವಿದ್ಯಾರ್ಥಿಗಳು ರಸ್ತೆಯ ಬಲ ಪಾದಚಾರಿ ಮಾರ್ಗ ಅಥವಾ ರಸ್ತೆಯ ಅಂಚಿನಲ್ಲೇ ನಡೆಯಬೇಕು. ಹೀಗೆ ಮಾಡುವುದರಿಂದ ಪಾದಚಾರಿ ಮಾರ್ಗದಲ್ಲಿ ಎಲ್ಲರೂ ಒಂದೇ ದಿಕ್ಕಿನಲ್ಲೇ ನಡೆದಂತಾಗುತ್ತದೆ.
ಪ್ರತ್ಯೇಕ 2 – 4 ಜನರ ಆಟಗಾರ ಗುಂಪುಗಳನ್ನು ಮಾಡಿ ಅವರಿಗೆ ಅವರದೇ ಆದ ಕೆಳಕಂಡ ಆಟದ ನಿಯಮಗಳನ್ನು ಕೊಡಬೇಕು.
* ಪಾದಚಾರಿಗಳು ರಸ್ತೆಯ ಎಡಭಾಗದಲ್ಲಿ ನಡೆಯುವ ಗುಂಪು.
* ಮಳೆಗಾಲದ ಸಮಯದಲ್ಲಿ ಉಪಯೋಗಿಸುವ ಕೊಡೆಗಳನ್ನು ಹಿಡಿದಿ ರುವ ಒಂದು ಗುಂಪು. ಅವರಿಗೆ ಕೊಡೆಗಳನ್ನು ಮೇಲಕ್ಕೆತ್ತಿ ಹಿಡಿಯುವ ರೀತಿ (ಎದುರು ಬರುವವರು ಕಾಣಿಸುವಂತೆ)ಯನ್ನು ಹೇಳಬೇಕು.
* ಕಾಲುದಾರಿಯಲ್ಲಿ ಹಾಕಿರುವ ಒಡೆದ ಗಾಜು, ಹಣ್ಣಿನ ಸಿಪ್ಪೆ, ಇಟ್ಟಿಗೆ ಚೂರುಗಳು ಇವುಗಳನ್ನು ಎತ್ತಿ ಕಸದ ಬುಟ್ಟಿಗೆ ಹಾಕುವ ಗುಂಪು.
* ಆಂಬ್ಯುಲೆನ್ಸ್ ಪ್ರತಿನಿಧಿಸುವ ಗುಂಪು – ನಿಶ್ಚಿತ ವ್ಯಕ್ತಿಯನ್ನು ಈ ಗುಂಪು ಆಂಬ್ಯುಲೆನ್ಸ್‌ನಲ್ಲಿ ಕರೆದುಕೊಂಡು ಬರುವಂತೆ ಹೇಳಬೇಕು.
ಈ ರೀತಿ ಬೇರೆ ಬೇರೆ ಗುಂಪುಗಳನ್ನು ಮಾಡಿ ಈ ಎಲ್ಲಾ ನಿಯಮಗಳನ್ನು ಹೇಳಬೇಕು. ಯಾವ ಗುಂಪು ಈ ಎಲ್ಲಾ ನಿಯಮಗಳನ್ನು ಪಾಲಿಸುತ್ತದೋ ಆ ಗುಂಪು ವಿಜಯಿ ಗುಂಪು ಎಂದು ಘೋಷಿಸಬೇಕು. ಆಟದ ನಂತರ ಎಲ್ಲ ಗುಂಪುಗಳನ್ನು ಕರೆದು ಅವರ ಅನುಭವಗಳನ್ನು ಹೇಳಿಸಬೇಕು. ಇದೇ ರೀತಿ ಅವರು ಸಹ ಪಾದಚಾರಿ ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸಬೇಕು.
ಈ ವಿಧವಾದ ಆಟಗಳನ್ನು ಆಗಿಂದಾಗ ಸುವ್ಯಸ್ಥಿತ ರೀತಿಯಲ್ಲಿ ಆಡಿಸುವು ದರಿಂದ ಮಕ್ಕಳು ಅಗೋಚರವಾಗಿ ರಸ್ತೆಯ ನಿಯಮಗಳನ್ನು ಅನುಸರಿಸಿ ನಡೆಯುವಂತೆ ಅವರ ದಿನಚರಿಯಲ್ಲಿ ಅಭ್ಯಾಸವಾಗುತ್ತದೆ. ರಸ್ತೆಯಲ್ಲಿ ನಡೆಯುವ ಅಚಾತುರ್ಯಗಳನ್ನು ತಡೆಗಟ್ಟಬಹುದು. 7ರಿಂದ 12 ವಯಸ್ಸಿನ ಮಕ್ಕಳಿಗೆ ಅನುಕರಣೆಯ ಭಾವ ಹೆಚ್ಚಿರುವುದರಿಂದ ಅವರಿಗೆ ತುಂಬ ಆಸಕ್ತಿಯುತ ಆಟಗಳಾಗಿರುತ್ತವೆ.
ಮುಂದಿನ ವಾರದಲ್ಲಿ ಬೇರೆ ಬೇರೆ ರೀತಿಯ ವಾಹನ ಸಂಚಾರದ ಆಟಗಳನ್ನು ಪರಿಚಯ ಮಾಡಿಕೊಳ್ಳೋಣ. ಈ ರೀತಿಯ ಆಟಗಳನ್ನು ಕೇವಲ ಶಾಲೆಗಳಲ್ಲದೆ ಬಡಾವಣೆ, ಕ್ಷೇಮಾಭಿವೃದ್ಧಿ ಸೊಸೈಟಿಗಳು, ಅಪಾರ್ಟ್‌ಮೆಂಟಿನ ಕಮಿಟಿಗಳು, ಮಕ್ಕಳಿಗೆ ಕ್ರೀಡಾ ಚಟುವಟಿಕೆಗಳನ್ನು ನಡೆಸುವ ಸಂಸ್ಥೆಗಳು ತಮ್ಮ ಚಟುವಟಿಕೆಗಳ ಭಾಗವಾಗಿ ತೆಗೆದುಕೊಂಡಲ್ಲಿ ಮಕ್ಕಳಿಗೆ ರಸ್ತೆ ಸಂಚಾರದ ನಿಯಮಗಳು ಮನಸ್ಸಿನಲ್ಲಿ ಬಲವಾಗಿ ಅಚ್ಚೊತ್ತಿ, ರಸ್ತೆ ಅಪಘಾತಗಳು ಕಡಿಮೆಯಾಗುವಲ್ಲಿ ಸಹಕಾರಿಯಾಗುತ್ತದೆ.

– ಶಿ.ನಾ.ಚಂದ್ರಶೇಖರ

   

Leave a Reply