ಸತ್ಯಕ್ಕೆ ಅದೆಷ್ಟು ಮುಖಗಳು!

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

-ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

ರಾಜಧಾನಿ ಬೆಂಗಳೂರಿನ ಕೆ.ಜಿ. ಹಳ್ಳಿಯಲ್ಲಿ ಯುವತಿಯೊಬ್ಬಳ ಮೇಲೆ ನಡೆದ ದೌರ್ಜನ್ಯ ಪ್ರಕರಣದ ‘ಸತ್ಯ’ವನ್ನು ಪೊಲೀಸರು ಕೊನೆಗೂ ಭೇದಿಸಿದ್ದಾರೆ. ದೌರ್ಜನ್ಯಕ್ಕೊಳಗಾದ ಯುವತಿ ಹಾಗೂ ಬಂಧನಕ್ಕೊಳಗಾಗಿರುವ ಆರೋಪಿ ಇಬ್ಬರೂ ಸೇರಿ ನಡೆಸಿದ ಪೂರ್ವನಿಯೋಜಿತ ಕೃತ್ಯ ಇದು ಎಂಬುದು ಈಗ ಬಯಲಾಗಿರುವ ಸತ್ಯ.
ಜ.6ರಂದು ಬೆಳ್ಳಂಬೆಳಗ್ಗೆ 6.20ರ ವೇಳೆಗೆ ಗೋವಿಂದಪುರ ರಸ್ತೆಯಲ್ಲಿ ನಡೆದುಹೋಗುತ್ತಿರುವಾಗ ಅಪರಿಚಿತನೊಬ್ಬ ಲೈಂಗಿಕ ದೌರ್ಜನ್ಯ ಎಸಗಿ ಪರಾರಿಯಾದ ಎಂದು ಸಂತ್ರಸ್ತ ಯುವತಿ ದೂರು ನೀಡಿದ್ದರು. ಈ ಘಟನೆ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದು, ಬೆಂಗಳೂರು ಅತ್ಯಂತ ಅಸುರಕ್ಷಿತ ನಗರ, ಮಹಿಳೆಯರಿಗೆ ಇಲ್ಲಿ ಬದುಕುವುದೇ ಕಷ್ಟ ಎಂಬಂತಹ ವಾತಾವರಣ ನಿರ್ಮಾಣವಾಗಿತ್ತು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಬಗ್ಗೆ ಬಿಸಿಬಿಸಿ ಚರ್ಚೆ ಕೂಡ ನಡೆದಿತ್ತು. ಬೆಂಗಳೂರಿನಲ್ಲಿ ಸಂಭವಿಸಿದ ಆ ಘಟನೆಯ ಹಿನ್ನೆಲೆಯೇನು? ನಿಜಕ್ಕೂ ಅದೊಂದು ದೌರ್ಜನ್ಯದ ಘಟನೆಯಾಗಿತ್ತೆ? ಎಂಬುದನ್ನು ವಿಶ್ಲೇಷಿಸುವ ಗೋಜಿಗೆ ಯಾರೂ ಮನಸ್ಸು ಮಾಡದಿದ್ದುದು ಮಾತ್ರ ವಿಪರ್ಯಾಸ. ಒಟ್ಟಾರೆ ಈ ಘಟನೆಯಿಂದಾಗಿ ಬೆಂಗಳೂರಿನ ಮಾನ ಹರಾಜಾಗಿತ್ತು.
ಆದರೆ ನಡೆದದ್ದೇ ಬೇರೆ. ಜ. 6ರಂದು ಬೆಳಿಗ್ಗೆ ಯುವತಿಯೊಬ್ಬಳ ಮೇಲೆ ಅಪರಿಚಿತ ಯುವಕ ನಡೆಸಿದನೆನ್ನಲಾದ ದೌರ್ಜನ್ಯ ಒಂದು ನಾಟಕವಾಗಿತ್ತು. ಅದು ಭಾವ ಹಾಗೂ ನಾದಿನಿ ಇಬ್ಬರೂ ಸೇರಿ ಹೆಣೆದ ನಾಟಕ. ಆರೋಪಿ ಇರ್ಷಾದ್ ಸ್ನಾತಕೋತ್ತರ ಪದವೀಧರ. ಆಂಧ್ರಪ್ರದೇಶದ ಚಿತ್ತೂರು ಮೂಲದ ಇವರ ಕುಟುಂಬ ಕೆಲವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದೆ. ದೌರ್ಜನ್ಯಕ್ಕೀಡಾದಳೆಂದು ಹೇಳಲಾದ ಸಂತ್ರಸ್ತೆಯ ಕುಟುಂಬ ವಿನೋಬಾನಗರದಲ್ಲಿದೆ. ಆರೋಪಿಯು 6 ವರ್ಷಗಳ ಹಿಂದೆ ಸಂತ್ರಸ್ತೆಯ ಸಹೋದರಿಯನ್ನು ಪ್ರೀತಿಸಿ ವಿವಾಹವಾಗಿದ್ದ. ದಂಪತಿಗೆ ಮೂರೂವರೆ ವರ್ಷದ ಮಗುವಿದೆ. ಆತ ಖಾಸಗೀ ಕಂಪನಿಯೊಂದರಲ್ಲಿ ಮಾರಾಟ ಪ್ರತಿನಿಧಿ. ಕಳೆದ ಮೂರು ವರ್ಷಗಳಿಂದ ನಾದಿನಿಯನ್ನು ಪ್ರೀತಿಸುತ್ತಿದ್ದ. ಆ ಎರಡೂ ಕುಟುಂಬಗಳಿಗೆ ಈ ಪ್ರೀತಿಯ ವಿಚಾರ ಮಾತ್ರ ತಿಳಿದಿರಲಿಲ್ಲ. ಸಂತ್ರಸ್ತೆಯು ಆರೋಪಿಯ ಮನೆಯಲ್ಲೇ ಹೆಚ್ಚು ಸಮಯ ಕಳೆಯುತ್ತಿದ್ದಳು.
ತನ್ನ ನಾದಿನಿ ಬೇರೆ ಯಾರನ್ನೂ ಮದುವೆಯಾಗಕೂಡದು. ಆಕೆ ತನ್ನನ್ನೇ ಮದುವೆಯಾಗಬೇಕು. ಆದರೆ ಇದು ನಿಜವಾಗುವುದು ಹೇಗೆ? ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೆಂದು ಸುದ್ದಿಯಾದರೆ ಆಕೆಯನ್ನು ಮದುವೆಯಾಗಲು ಯಾರೂ ಮುಂದೆ ಬರಲಾರರು. ಆಗ ತಾನೇ ಆಕೆಯನ್ನು ವರಿಸಬಹುದು ಎಂಬುದು ಆರೋಪಿಯ ಲೆಕ್ಕಾಚಾರ. ಅದಕ್ಕೆ ತಕ್ಕಂತೆ ಆ ದಿನ ಬೆಳಿಗ್ಗೆ ಆಕೆಯ ಜೊತೆಗೆ ನಡೆದುಕೊಂಡುಹೋಗಿ, ಅನಂತರ ಆಕೆ ಮುಂದೆ ಹೋಗುತ್ತಿದ್ದಂತೆ ಹಿಂಬಾಲಿಸಿದಂತೆ ಮಾಡಿ ಆಕೆಯ ಮೇಲೆ ದೌರ್ಜನ್ಯ ನಡೆಯಿತೆಂಬಂತೆ ಕಥೆ ಕಟ್ಟಲಾಗಿದೆ. ಆದರೆ ಈ ಕಥೆ ಸ್ಥಳದಲ್ಲಿದ್ದ ಸಿಸಿ ಟಿವಿ ಕ್ಯಾಮೆರಾಗಳ ದೃಶ್ಯಾವಳಿ ಮೂಲಕ ಸುಳ್ಳೆಂದು ಸಾಬೀತಾಗಿದೆ. ಘಟನೆ ನಡೆದ ದಿನ ಸಂತ್ರಸ್ತೆ ತನ್ನ ಮೇಲೆ ದೌರ್ಜನ್ಯ ನಡೆಸಿದ ಅಪರಿಚಿತ ತನ್ನನ್ನು ಚುಂಬಿಸಿ, ನಾಲಗೆ, ತುಟಿಯನ್ನು ಕಚ್ಚಿದ್ದಾನೆ. ತಪ್ಪಿಸಿಕೊಳ್ಳಲೆತ್ನಿಸಿದಾಗ ತನ್ನ ಕಾಲಿಗೆ ಗಾಯವಾಗಿದೆ ಎಂದು ಮಾಧ್ಯಮಗಳ ಮುಂದೆ ಗಾಯವಾದ ತುಟಿ, ನಾಲಿಗೆ ಹಾಗೂ ಕಾಲುಗಳನ್ನು ಪ್ರದರ್ಶಿಸಿದ್ದಳು. ಎಲ್ಲರೂ ಅದನ್ನು ನಿಜವೆಂದೇ ನಂಬಿದ್ದರು. ಆದರೆ ಆ ಯುವತಿ ಘಟನೆಯ ತೀವ್ರತೆ ಹೆಚ್ಚಿಸಲು ತನ್ನ ನಾಲಿಗೆ, ತುಟಿಯನ್ನು ತಾನೇ ಕಚ್ಚಿಕೊಂಡಿದ್ದಳು. ಸೇಫ್ಟಿ ಪಿನ್‌ನಿಂದ ಕೈಗೆ ಚುಚ್ಚಿಕೊಂಡು, ಕಲ್ಲಿನಿಂದ ಕಾಲಿಗೆ ಗಾಯ ಮಾಡಿಕೊಂಡಿದ್ದಳು. ಬಳಿಕ ಆರೋಪಿಯೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದನೆಂಬುದು ಪೊಲೀಸರ ತನಿಖೆಯಿಂದ ಬಯಲಾಗಿರುವ ಸತ್ಯ. ಆರೋಪಿ ಮತ್ತು ಸಂತ್ರಸ್ತೆ ಪ್ರತಿನಿತ್ಯ ಗಂಟೆಗಟ್ಟಲೆ ಮೊಬೈಲ್ ಸಂಭಾಷಣೆ ನಡೆಸುತ್ತಿದ್ದರು. ಆರೋಪಿಯು ಮೂರು ಪ್ರತ್ಯೇಕ ಸಿಮ್ ಹೊಂದಿದ್ದು, ಆಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಎಂಬುದೂ ಈಗ ಬಯಲಾಗಿರುವ ಮತ್ತೊಂದು ಸತ್ಯ. ಆರೋಪಿ ಮತ್ತು ಸಂತ್ರಸ್ತೆ ಈ ಘಟನೆಯ ಬಗ್ಗೆ ಕಪೋಲಕಲ್ಪಿತ ಸುಳ್ಳು ಹೇಳಬಹುದು. ಆದರೆ ಮೊಬೈಲ್ ಸಿಮ್ ಸುಳ್ಳು ಹೇಳಲಾರದು. ಇವರಿಬ್ಬರ ನಡುವೆ ಪ್ರತಿನಿತ್ಯ ನಡೆಯುತ್ತಿದ್ದ ಸಂಭಾಷಣೆ ಅದರಲ್ಲಿ ದಾಖಲಾಗಿರುವುದು ಸುಳ್ಳಾಗಲು ಸಾಧ್ಯವೆ?
ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಆರೋಪಿಯು ಆಕೆಯನ್ನು ಹಿಂಬಾಲಿಸುವಾಗ ಎಡಗಾಲು ಎಳೆದುಕೊಂಡು ಹೆಜ್ಜೆ ಹಾಕುತ್ತಿದ್ದುದು ಕಂಡುಬಂದಿದೆ. ಇತರೆ ಕ್ಯಾಮೆರಾಗಳಲ್ಲಿ ಸೆರೆಯಾದ, ಇಬ್ಬರೂ ನಡೆದುಹೋಗುವ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಯು ಎಡಗಾಲನ್ನು ಎಳೆದುಕೊಂಡು ಹೆಜ್ಜೆ ಹಾಕುತ್ತಿರುವುದು ಪತ್ತೆಯಾಗಿದೆ. ಇವೆರಡೂ ದೃಶ್ಯಗಳನ್ನು ಹೊಂದಾಣಿಕೆ ಮಾಡಿ ನೋಡಿದಾಗ ಸಾಮ್ಯತೆ ಕಂಡುಬಂದಿದೆ. ಅಲ್ಲದೆ ಆರೋಪಿ ಸಂತ್ರಸ್ತೆಯ ಜೊತೆಗೆ ಠಾಣೆಗೆ ಬಂದಿದ್ದಾಗ ಆತನ ಕಾಲನ್ನು ಸೂಕ್ಷ್ಮವಾಗಿ ಗಮನಿಸಿದ ಅಧಿಕಾರಿಯೊಬ್ಬರಿಗೆ ಈತನ ಬಗ್ಗೆ ಅನುಮಾನ ಬಂದಿತ್ತು.
ಕೆ.ಜಿ. ಹಳ್ಳಿಯಲ್ಲಿ ನಡೆಯಿತೆನ್ನಲಾದ ಈ ಲೈಂಗಿಕ ದೌರ್ಜನ್ಯ ಪ್ರಕರಣ ಪಡೆದ ಪ್ರಚಾರ ಮಾತ್ರ ಅಚ್ಚರಿ ಹುಟ್ಟಿಸುವಂತಿತ್ತು. ಘಟನೆ ನಡೆದ ಸುದ್ದಿ ತಿಳಿದಾಕ್ಷಣ ಗೃಹಸಚಿವ ಪರಮೇಶ್ವರ್ ಹಿಂದೆ-ಮುಂದೆ ಯೋಚಿಸದೆ, ಮಹಿಳೆಯರು ತೊಡುವ ಪಾಶ್ಚಾತ್ಯ ರೀತಿಯ ಉಡುಗೆಗಳೇ ಇಂತಹ ದೌರ್ಜನ್ಯಕ್ಕೆ ಕಾರಣವೆಂದು ಬಾಲಿಶ ಹೇಳಿಕೆ ನೀಡಿದ್ದರು. ಕೆ.ಜಿ. ಹಳ್ಳಿಯಲ್ಲಿ ನಡೆದ ಒಂಟಿ ಮಹಿಳೆಯ ಮೇಲಿನ ಆ ದೌರ್ಜನ್ಯ ಪ್ರಕರಣದಲ್ಲಿ ಆ ಮಹಿಳೆ ಪಾಶ್ಚಾತ್ಯ ರೀತಿಯ ಉಡುಗೆ ತೊಟ್ಟಿರಲಿಲ್ಲ. ಶರೀರ ಪೂರ್ತಿ ಮುಚ್ಚುವಂತೆ ಬುರ್ಖಾ ಧರಿಸಿದ್ದರು. ಅಲ್ಲಿಗೆ ಗೃಹಸಚಿವರ ಹೇಳಿಕೆ ಅದೆಷ್ಟು ಬಾಲಿಶ ಎಂಬುದು ಬಯಲಾಗಿತ್ತು.
ಗೃಹಸಚಿವರಾಗಿ ಪರಮೇಶ್ವರ್ ಅವರಿಗೆ ಯಾವುದೇ ಘಟನೆಯ ಕುರಿತು ಖಚಿತ ವಿವರಗಳು ಲಭ್ಯವಿರುತ್ತವೆ. ಒಂದು ವೇಳೆ ತಕ್ಷಣವೇ ಲಭ್ಯವಿಲ್ಲದಿದ್ದರೂ ತಮ್ಮ ಅಧಿಕಾರ ಬಳಸಿ ನೈಜ ಮಾಹಿತಿಗಳನ್ನು ಪಡೆಯುವ ಅವಕಾಶ ಇದ್ದೇ ಇದೆ. ಹೀಗಿದ್ದರೂ ಅವರೇಕೆ ಬಾಲಿಶ ಹೇಳಿಕೆ ನೀಡಿದರು? ವಿವೇಚನಾ ಶಕ್ತಿಯ ಕೊರತೆಯೆ?
ಕೆ.ಜಿ. ಹಳ್ಳಿಯಲ್ಲಿ ನಡೆಯಿತೆಂದು ಪ್ರಚಾರ ಪಡೆದ ‘ಲೈಂಗಿಕ ದೌರ್ಜನ್ಯ’ ಘಟನೆಯಿಂದಾಗಿ ಬೆಂಗಳೂರಿನ ಮಾನವಂತೂ ಮುಕ್ಕಾಗಿದೆ. ಆದರೆ ಅಂತಹದೊಂದು ಘಟನೆಯೇ ನಡೆದಿಲ್ಲ ಎಂಬುದು ಈಗ ಪೊಲೀಸರ ತನಿಖೆಯಿಂದ ಬಯಲಾಗಿದೆ. ಘಟನೆ ನಡೆದ ತಕ್ಷಣ ಮಾಧ್ಯಮಗಳು ಹಾಗೂ ತನ್ಮೂಲಕ ಜನರು ನಂಬಿದ್ದ ಸತ್ಯ ಈಗ ಸುಳ್ಳಾಗಿದೆ. ಸತ್ಯದ ಇನ್ನೊಂದು ಮುಖ ಈಗ ಅನಾವರಣಗೊಂಡಿದೆ. ಆಗ ನಂಬಿದ್ದ ಸತ್ಯದ ಆವರಣ ಕಳಚಿಬಿದ್ದಿದೆ.
ಮಾಧ್ಯಮಗಳಿಗೊಂದು ಎಚ್ಚರಿಕೆಯ ಪಾಠ ಕೆ.ಜಿ. ಹಳ್ಳಿಯ ಪ್ರಕರಣದಲ್ಲಿ ಅಡಗಿದೆ. ಯಾವುದೇ ಪ್ರಕರಣ ನಡೆಯಲಿ, ಅದರ ನೈಜ ಹಿನ್ನೆಲೆಯೇನು ಎಂಬುದನ್ನು ಪತ್ತೆಮಾಡುವ ತನಕ, ಆ ಪ್ರಕರಣಕ್ಕೆ ತಾವಾಗಿಯೇ ‘ಇದಮಿತ್ಥಂ’ ಎಂದು ಷರಾ ಬರೆಯುವಂತಿಲ್ಲ. ತಾವೇ ತೀರ್ಪುಗಾರರಾಗುವಂತಿಲ್ಲ. ಸತ್ಯವನ್ನು ಅನಾವರಣಗೊಳಿಸುವುದಷ್ಟೇ ಮಾಧ್ಯಮಗಳ ಕೆಲಸವಾಗಬೇಕು. ಈ ಇತಿಮಿತಿಯನ್ನು ನೆನಪಿಟ್ಟುಕೊಂಡರೆ ಮಾತ್ರ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆ ಬಾರದು.

   

Leave a Reply