ಸತ್ಯಾಗ್ರಹಿಗಳಿಂದ ತುಂಬಿದ ಸೆರೆಮನೆಗಳು

ಚಂದ್ರಶೇಖರ ಭಂಡಾರಿ - 0 Comment
Issue Date : 30.05.2016

ಸತ್ಯಾಗ್ರಹದ ವ್ಯಾಪಕತೆ ಮತ್ತು ಸಾತತ್ಯದ ಮುಂದೆ ಸರಕಾರದ ದಮನ ನೀತಿಯ ದಂ ಎಲ್ಲ ಉಡುಗಿ ಹೋಗಿತ್ತು. ದಿಲ್ಲಿಯ ದೈನಿಕ ‘ವಿಶ್ವಮಿತ್ರ’ದಲ್ಲಿ ರಾಜಸ್ಥಾನದಲ್ಲಿನ ಸತ್ಯಾಗ್ರಹದ ಬಗ್ಗೆ
ದಿ. 17.12.1948ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ವರದಿ: ಬಿಕಾನೇರದ ಎಲ್ಲ ಭಾಗಗಳಲ್ಲೂ ಸತ್ಯಾಗ್ರಹವು ಬಿರುಸಾಗಿ ನಡೆದಿದೆ. ಕೈದಿಗಳಿಗೆ ಪ್ರತಿಯೊಬ್ಬರಿಗೂ 6 ತಿಂಗಳ ಸಶ್ರಮ ಸರೆವಾಸದ ಶಿಕ್ಷೆ ವಿಧಿಸಲಾಗಿದೆ. ಅಷ್ಟಾದರೂ ತಾಯಂದಿರೇ ತಮ್ಮ ಮಕ್ಕಳಿಗೆ ಸ್ವತಃ ಹಣೆಗೆ ತಿಲಕವಿಟ್ಟು, ಆರತಿ ಬೆಳಗಿ ಸತ್ಯಾಗ್ರಹಕ್ಕೆ ಕಳುಹಿಸಿಕೊಡುತ್ತಿದ್ದಾರೆ.
ಕೈದು ಅಸಾಧ್ಯ
ಉತ್ತರ ಪ್ರದೇಶದಲ್ಲಿನ ಎಲ್ಲ ಸೆರೆಮನೆಗಳು ಮೊದಲ ವಾರದಲ್ಲೆ ಪೂರ್ಣವಾಗಿ ಸತ್ಯಾಗ್ರಹಿಗಳಿಂದ ತುಂಬಿಕೊಂಡಿದ್ದವು. ಅಲ್ಲಿಂದ ಮುಂದೆ ಬಂಧಿಸುವುದೇ ಪೊಲೀಸರಿಗೆ ಕಠಿಣವಾಗತೊಡಗಿದುದರಿಂದ ಹಲವು ಕಡೆಗಳಲ್ಲಿ ಅವರು, ಏನಾದರೂ ಆಗಿಕೊಳ್ಳಲಿ, ನಮಗಂತೂ ಬಂಧಿಸಲು ಸಾಧ್ಯವೇ ಇಲ್ಲ ಎಂಬ ನಿಲುವನ್ನು ತಮ್ಮದಾಗಿಸಿಕೊಂಡರು. ಕಾರಣವೆಂದರೆ ಇಲ್ಲಿ ಇನ್ನು ವ್ಯವಸ್ಥೆ ಸಾಧ್ಯವಿಲ್ಲ. ಇನ್ನು ಮುಂದೆ ಬಂಧಿಸುವುದು ಬೇಡ. ಕೇವಲ ಪ್ರಮುಖರನ್ನಷ್ಟೇ ಬಂಧಿಸಿ ಉಳಿದವರನ್ನು ಬಿಟ್ಟುಬಿಡಿ ಎಂಬ ಆದೇಶ ಮೇಲಧಿಕಾರಿಗಳಿಂದ ಬಂದಿತ್ತು. ಬಂಧಿತ ಸತ್ಯಾಗ್ರಹಿಗಳ ಸಂಖ್ಯೆ ಏರುತ್ತಲೇ ಇದ್ದ ಕಾರಣದಿಂದಾಗಿ ಕಾನಪುರದ ಸೆರೆಮನೆ ಅಧಿಕಾರಿಗಳ ಮುಂದೆ ವಿಚಿತ್ರ ಸಮಸ್ಯೆಯೊಂದು ಧುತ್ತೆಂದು ಎದ್ದು ನಿಂತಿತ್ತು. ಆ ಸೆರೆಮನೆಯಲ್ಲಿದ್ದ ಅವಕಾಶ 500 ಕೈದಿಗಳಿಗೆ ಮಾತ್ರ. ಆದರೆ ಸೆರೆಮನೆಯಲ್ಲಿ ತುಂಬಿಸಲಾಗಿದ್ದ ಸತ್ಯಾಗ್ರಹಿಗಳು 1100ಕ್ಕಿಂತ ಅಧಿಕ. ಇಷ್ಟು ದೊಡ್ಡ ಸಂಖ್ಯೆಯಲ್ಲಿದ್ದ ರಾಜಕೀಯ ಕೈದಿಗಳನ್ನು ಇರಿಸುವುದೆಲ್ಲಿ ಎಂಬುದೇ ಅಧಿಕಾರಿಗಳನ್ನು ಸುಸ್ತು ಹೊಡಿಸಿದ್ದ ಸಮಸ್ಯೆ. ಸತ್ಯಾಗ್ರಹದ ವ್ಯಾಪಕತೆ ಮತ್ತು ಸರಕಾರಕ್ಕೆದುರಾದ ಫಜೀತಿ ಇವುಗಳ ಮೇಲೆ ಬೆಳಕು ಚೆಲ್ಲುವಂತಹ ವರದಿಯೊಂದನ್ನು ಆ ದಿನಗಳಲ್ಲಿ ‘ಹಿಂದುಸ್ಥಾನ ಸಮಾಚಾರ’ ಎಂಬ ಸುದ್ದಿ ಸಂಸ್ಥೆ ಪತ್ರಿಕೆಗಳಿಗೆ ಒದಗಿಸಿತ್ತು. ಆ ಸುದ್ದಿ ಇದ್ದುದು ಹೀಗೆ: ‘ಗೋರಖಪುರ, ಲಖೀಮಪುರ ಮತ್ತು ಫತ್ತೇಹಪುರಗಳಲ್ಲಿ ಸರಕಾರ ವಿಧಿಸಿರುವ ನಿಷೇಧವನ್ನು ಉಲ್ಲಂಘಿಸಿ ಶಾಖೆಗಳನ್ನು ಆರಂಭಿಸಿರುವವರ ಸಂಖ್ಯೆ ಅದೆಷ್ಟು ಹೆಚ್ಚಿದೆ ಎಂದರೆ, ಸರಕಾರಕ್ಕೀಗ ಯಾರನ್ನೂ ಬಂಧಿಸುವುದೇ ಸಾಧ್ಯವಾಗದ ಸ್ಥಿತಿ ಉಂಟಾಗಿದೆ. ಪ್ರತಿಯೊಂದು ಗಲ್ಲಿ, ಸಂದಿ ಗೊಂದಿಗಳಲ್ಲಿ ಸಂಘದ ಸತ್ಯಾಗ್ರಹ ನಡೆಯುತ್ತಿರುವುದರಿಂದಾಗಿ ಎಲ್ಲಿ ಯಾರನ್ನೆಂದು ಬಂಧಿಸೋಣ ಎಂದು ಪೋಲಿಸರು ತಲೆ ಚಚ್ಚಿಕೊಳ್ಳುವಂತಾಗಿದೆ. ಉತ್ತರ ಪ್ರದೇಶದ ಪಶ್ಚಿಮದ ಭಾಗದಲ್ಲಿನ ಹೆಚ್ಚಿನ ಸ್ಥಾನಗಳಲ್ಲಿ ಸಂಘದ ಶಾಖೆಗಳು ಮೊದಲಿನಂತೆ ನಡೆಯಲಾರಂಭವಾಗಿವೆ. ಅವುಗಳನ್ನು ತಡೆಯುವವರೇ ಇಲ್ಲ’.
ಬರಾರ್ ಪ್ರಾಂತದ ಎಲ್ಲ ಜೈಲುಗಳು ಮೊದಲ ವಾರದಲ್ಲೆ ತುಂಬಿ ತುಳುಕಲಾರಂಭವಾಗಿದ್ದವು. ಯವತಮಾಳದಲ್ಲಿ 52 ಕೈದಿಗಳಿಗೆ ಅವಕಾಶವಿರುವ ಸೆರೆಮನೆಯಲ್ಲಿ 170 ಮಂದಿಯನ್ನು ಸೇರಿಸಲಾಗಿತ್ತು. ಅಷ್ಟಾದರೂ ಈ ಸಂಖ್ಯೆ ಏರುತ್ತಲೇ ಇದ್ದುದು ಭಾರೀ ಸಮಸ್ಯೆಗೆ ಕಾರಣವಾಯಿತು. ಇದೇ ಸ್ಥಿತಿ ಅಕೋಲಾ ಹಾಗೂ ಇನ್ನಿತರ ಸೆರೆಮನೆಗಳದು ಸಹ. ನಾಗಪುರ ಸೆರೆಮನೆಯಲ್ಲಿ 70 ಕೈದಿಗಳಿರಬಹುದಾದಲ್ಲಿ 160 ಮಂದಿಯನ್ನು ತುಂಬಿಸಲಾಗಿತ್ತು.
ಪಂಜಾಬ್‌ನ ಹಿಸ್ಸಾರ್‌ನಲ್ಲಿರುವ ಬೋಸ್ಟ್ರಲ್ ಸೆರೆಮನೆಯಲ್ಲಿ ಅವಕಾಶವಿದ್ದುದು 500 ಕೈದಿಗಳಿಗೆ ಮಾತ್ರವಾದರೂ ಅಲ್ಲಿ ತಂದು ಸೇರಿಸಲಾಗಿದ್ದ ಸತ್ಯಾಗ್ರಹಿಗಳು 1350.
ಉತ್ಕಲ, ಅಸ್ಸಾಂ ಮತ್ತು ಬಂಗಾಲ ಪ್ರಾಂತಗಳನ್ನು ಹೊರತುಪಡಿಸಿ, ಸುಮಾರಾಗಿ ದೇಶದ ಎಲ್ಲ ಪ್ರಾಂತಗಳಲ್ಲೂ ಸೆರೆಮನೆಗಳಲ್ಲಿದ್ದ ಸ್ಥಿತಿ ಇದೇ. ಹೀಗಾಗಿ ಸಾಧ್ಯವಾದಷ್ಟು ಕಡಿಮೆ ಸತ್ಯಾಗ್ರಹಿಗಳನ್ನು ಬಂಧಿಸಬೇಕೆಂದು ಪೊಲೀಸರಿಗೆ ಕೇಂದ್ರದಿಂದ ಆದೇಶವೇ ಬಂತು. ಅದರ ನಂತರ ಪೊಲೀಸರು ತಂಡದಲ್ಲಿನ ಆಯ್ದ ಒಬ್ಬಿಬ್ಬರನ್ನು ಬಂಧಿಸಿ ಉಳಿದವರನ್ನು ಉಪೇಕ್ಷಿಸುವ ನೀತಿ ತಮ್ಮದಾಗಿಸಿದ್ದರು. ಆದರೆ ಬಂಧಿಸದಿದ್ದಲ್ಲಿ ಅದೇ ಅದೇ ಸತ್ಯಾಗ್ರಹಿಗಳು ಪುನಃ ಪುನಃ ಸತ್ಯಾಗ್ರಹ ಮಾಡುತಿದ್ದುದರಿಂದ ಅಂತಹವರನ್ನು ಬಂಧಿಸಿ ದೂರ ದೂರ ಒಯ್ದು ಅಲ್ಲಿ ಅವರನ್ನು ಬಿಟ್ಟು ಬರುವಂತಹ ಕ್ರಮ ಆರಂಭಿಸಿದರು. ಕೆಲವು ಸ್ವಯಂಸೇವಕರು 10-12 ಬಾರಿ ಸತ್ಯಾಗ್ರಹ ಮಾಡಿ ತಮ್ಮನ್ನು ಬಂಧಿಸುವಂತೆ ಪೋಲಿಸರನ್ನು ಆಗ್ರಹಪಡಿಸುತ್ತಿದ್ದರು. ಆದರೂ ಅವರು ಪ್ರಮುಖರಲ್ಲವೆಂದು ತಿಳಿಸಿ ಪೊಲೀಸರು ಅವರನ್ನು ಬಿಟ್ಟು ಬಿಡುವುದೇ ಮಾಮೂಲಿಯಾಗಿತ್ತು.
ಉಜ್ಜೈನಿಯಲ್ಲಿ ಸತ್ಯಾಗ್ರಹದ ಉತ್ಸಾಹ ಉಕ್ಕಿ ಹರಿಯುವಂತಿತ್ತು. ಪೊಲೀಸರು 144ನೇ ಸೆಕ್ಷನ್ ಜಾರಿಗೊಳಿಸಿದ್ದರು. ಆದರೆ ಅದಕ್ಕೆ ಕವಡೆ ಕಿಮ್ಮತ್ತೂ ಉಳಿದಿರಲಿಲ್ಲ. ಎರಡು ದಿನಗಳಲ್ಲಿ ಅಲ್ಲಿನ ಸೆರೆಮನೆ ತನ್ನ ಅವಕಾಶ ಮೀರಿ ತುಂಬಿಕೊಂಡಿತು. ಆದರೆ ಸತ್ಯಾಗ್ರಹ ಮಾಡಿ ಹೊಸಹೊಸಬರು ಮುಂದೆ ಬರುತ್ತಲೇ ಇದ್ದರು. ಕೊನೆಯಲ್ಲಿ ಬೇರೆ ಉಪಾಯ ಕಾಣದೆ ಪೊಲೀಸರು ಎಲ್ಲರನ್ನೂ ಬಂಧಿಸಿ ತಮ್ಮ ವಾಹನಗಳಲ್ಲಿ ತುಂಬಿ ದೂರದ ಕಾಡುಗಳಲ್ಲಿ ಬಿಟ್ಟು ಬರಲು ಆರಂಭಿಸಿದರು. ಆದರೆ ಸತ್ಯಾಗ್ರಹಿಗಳು ತಮ್ಮ ಛಲ ಬಿಡಲಿಲ್ಲ. ಅವರು ಮೈಲಿಗಟ್ಟಲೆ ನಡೆದುಕೊಂಡು ಬಂದು ಪುನ: ಸತ್ಯಾಗ್ರಹ ನಡೆಸಿ ಪೊಲೀಸರ ಮುಂದೆ ಹಾಜರಾಗುತ್ತಿದ್ದರು.
ಈ ರೀತಿಯಲ್ಲಿ ಸತ್ಯಾಗ್ರಹವು ಕೊನೆವರೆಗೆ, ಸ್ವಲ್ಪವೂ ಕ್ಷೀಣಿಸದೆ ಮುಂದುವರಿಯಿತು. ಯೋಜನೆಯಂತೆ ಅದನ್ನು ನಿಲ್ಲಿಸಲಾದಾಗ ಅಂತಿಮ ಸಂಖ್ಯೆ ದೇಶಾದ್ಯಂತ 77,000ದ್ದಾಗಿತ್ತು. ಸತ್ಯಾಗ್ರಹದಲ್ಲಿ ಪಾಲ್ಗೊಂಡು ತಮ್ಮನ್ನು ಬಂಧನಕ್ಕೊಳಪಡಿಸಲು ತಯಾರಾಗಿದ್ದವರ ಸಂಖ್ಯೆಯಂತೂ ಎರಡು ಲಕ್ಷದ ತನಕ ತಲಪಿತ್ತು.
ಒಟ್ಟು ದೇಶದಲ್ಲಿ ಬಂಧಿತರಾಗಿದ್ದವರು 77,090. ಪ್ರಾಂತಶಃ ವಿವರ ಇಲ್ಲಿದೆ.
1. ಉತ್ತರ ಪ್ರದೇಶ 13,210
2. ಬಿಹಾರ 4,651
3. ಮಧ್ಯಪ್ರದೇಶ ಮತ್ತು ಬರಾರ 8,822
4. ಮುಂಬಯಿ ಮತ್ತು ಗುಜರಾತ್ 13,500
5. ಮದ್ರಾಸ್ (ಕರ್ನಾಟಕ, ಆಂಧ್ರ,
ಕೇರಳ ಸೇರಿದಂತೆ) 15,583
6. ಪಂಜಾಬ್ 6,400
7. ಬಂಗಾಲ 2,910
8. ಅಸ್ಸಾಂ 732
9. ಉತ್ಕಲ 568
10. ರಾಜಸ್ಥಾನ 3,641
11. ಮಧ್ಯಭಾರತ 5,113
12. ದಿಲ್ಲಿ 1,960
ಒಟ್ಟು 77,090
ವಿರೋಧಿಗಳ ಭ್ರಮೆ
ಆರಂಭವಾದ ಎರಡು ವಾರಗಳೊಳಗೆ ಸತ್ಯಾಗ್ರಹದ ಪ್ರಭಾವ ಜನರ ಮನದ ಮೇಲೆ ಸೊಗಸಾಗಿಯೇ ಆಯಿತು. ಆದರೆ ಅದರಿಂದಾಗಿ ಚಿಂತಿತರಾದವರು ಸರಕಾರ ಮತ್ತು ಇನ್ನಿತರ ಸಂಘ ವಿರೋಧಿಗಳು. ಅವರಲ್ಲಿ ಅದು ಇನ್ನಷ್ಟು ಉಗ್ರ, ನಿಷ್ಠುರ ಮತ್ತು ಸೇಡಿನ ಭಾವನೆ ಬೆಳೆಸುವಂತಹದೇ ಆಯ್ತು. ಸರಕಾರವಂತೂ ಮೊದಲಿನಿಂದಲೂ ನಡೆಸುತ್ತಿದ್ದ ದಮನಕಾರಿ ಕ್ರಮಗಳನ್ನು ಇನ್ನೂ ತೀವ್ರಗೊಳಿಸಿತು. ಸರಕಾರದ ಜತೆ ಅದರ ಪಕ್ಷ ಸಹ ಈ ಕೆಲಸದಲ್ಲಿ ತನ್ನ ಕೈಜೋಡಿಸಿತು. ಇನ್ನಿತರ ಸಂಘ ವಿರೋಧಿ ಸಂಘಟನೆಗಳು ಮತ್ತು ಅದೇ ಮಾನಸಿಕತೆಯ ಪತ್ರಿಕೆಗಳೂ ಈ ಕೆಲಸದಲ್ಲಿ ಶಾಮೀಲಾದವು. ಇನ್ನೊಮ್ಮೆ ಸಭೆಗಳು, ರ‌್ಯಾಲಿಗಳು, ಮತ್ತು ಪ್ರದರ್ಶನಗಳು ನಡೆಸಲು ಅವರು ಆರಂಭಿಸಿದರು. ಅವುಗಳ ಮೂಲಕ ಪುನಃ ಘರ್ಷಣೆ ಸೃಷ್ಟಿಸುವುದು ಅವರ ಉದ್ದೇಶವಾಗಿತ್ತು. ಅವರು ನಡೆಸುತ್ತಿದ್ದ ಸಭೆಯಲ್ಲಿ ಸಂಘದ ವಿರುದ್ಧ ಜನರನ್ನು ಉದ್ರೇಕಿಸುವ ಭಾಷಣ, ಘೋಷಣೆಗಳನ್ನು ಬಿಟ್ಟಲ್ಲಿ ಬೇರೇನೂ ಇರುತ್ತಿರಲಿಲ್ಲ. ಹಿಂದೆ 1948ರ ಫೆಬ್ರವರಿಯಲ್ಲಿ ಗಾಂಧಿಜಿಯವರ ಹತ್ಯೆಯಾದ ಸಂದರ್ಭದಲ್ಲಿ ಮಾಡಲಾಗಿದ್ದ ಕೆಲಸಗಳ ಪುನರಾವರ್ತನೆಗಾಗಿ ಇನ್ನೊಮ್ಮೆ ಪ್ರಯತ್ನವಾಗಿತ್ತದು. ಸರಕಾರ ಮತ್ತು ಇನ್ನಿತರ ಎಲ್ಲ ಸಂಘ ವಿರೋಧಿಗಳೂ ಅತಿ ನೀಚಸ್ತರದ ಉದ್ರೇಕ ಸೃಷ್ಟಿಸಲು ಸಹ ಹೇಸಲಿಲ್ಲ. ಜಾತೀಯ, ಪ್ರಾಂತೀಯ, ಭಾವನೆಗಳನ್ನು ಕೆರಳಿಸಲು ಸಹ ಅವರು ಮುಂದಾದರು. ಎಲ್ಲಿವರೆಗೆಂದರೆ ಸತ್ಯಾಗ್ರಹಿಗಳಲ್ಲೂ ಈ ವಿಧದ ಒಡಕು ಕೆತ್ತಲು ಅವರು ಉದ್ಯುಕ್ತರಾದರು. ಸತ್ಯಾಗ್ರಹಿಗಳನ್ನು ಬಂಧಿಸಿ ಠಾಣೆಗೆ ಕರೆತಂದ ಮೇಲೆ ಅವರನ್ನು ಎರಡು ಗುಂಪುಗಳಾಗಿ ಮಾಡಲಾಗುತಿತ್ತು. ಒಂದು ಬ್ರಾಹ್ಮಣರದು, ಇನ್ನೊಂದು ಬ್ರಾಹ್ಮಣೇತರರದು. ಬ್ರಾಹ್ಮಣ ಸತ್ಯಾಗ್ರಹಿಗಳನ್ನಂತೂ ಚೆನ್ನಾಗಿ ಥಳಿಸಿ ಸೆರೆಮನೆಗೆ ಕಳುಹಿಸಲಾಗುತ್ತಿತ್ತು. ಅದರೆ ಬ್ರಾಹ್ಮಣೇತರರನ್ನು ಪ್ರತ್ಯೇಕವಾಗಿ ಕರೆಸಿ ಅವರ ಮನದಲ್ಲಿ ಜಾತೀಯತೆಯ, ಬ್ರಾಹ್ಮಣವಾದದ ನಂಜು ಬಿತ್ತಲು ಸ್ವತಃ ಪೊಲೀಸ್ ಅಧಿಕಾರಿಗಳೇ ಪ್ರಯತ್ನಿಸುತಿದ್ದರು. ಱಅರೆೆ, ನೀನ್ಯಾಕೆ ಇವರೊಂದಿಗೆ ಸೇರಿಕೊಂಡಿದ್ದಿ? ಸಂಘವೆಂದರೆ ಕೇವಲ ‘ಭಟ್ಟ’ ರುಗಳದ್ದೆಂದು ಗೊತ್ತಿಲ್ಲವೇ? ಅದರಲ್ಲಿ ನಡೆಯುವುದು ಕೇವಲ ಬೊಮ್ಮನ್‌ಗಳದ್ದೇ ಆಟ. ನಿನ್ನನ್ನವರು ಬಾಲಂಗೋಚಿಯಾಗಿ ಬಳಸಿಕೊಳ್ಳುತ್ತಾರೆ ಅಷ್ಟೆ, ಗೊತ್ತಿರಲಿ. ನಿನ್ನನ್ನು ಬಿಡುಗಡೆ ಮಾಡುತ್ತೇವೆ. ಆದರೆ ಹುಷಾರ್, ಮುಂದೆಂದೂ ಅವರ ಜತೆ ಸೇರಬಾರದೆಂಬ ಷರತ್ತಿನ ಮೇಲೆಱ-ಈ ರೀತಿಯ ಪ್ರಯತ್ನಗಳು ಠಾಣೆಯೊಳಗೆ ಆಗುತಿದ್ದವು. ಆದರೆ ಸತ್ಯಾಗ್ರಹಿಗಳು ಇಂತಹ ಮಾತುಗಳಿಗೆ ಬಲಿಯಾಗುತ್ತಿರಲಿಲ್ಲವೆಂಬುದು ಬೇರೆ ಮಾತು.
ಮುಖ್ಯವಾಗಿ ಜನರಿಗೆ ತಮ್ಮ ಅಸಲು ಬಣ್ಣ ಪೂರಾ ಪರಿಚಯವಾಗಿದ್ದುದೇ ಸಂಘ ವಿರೋಧಿಗಳು ಎದುರಿಸಬೇಕಾಗಿ ಬಂದಿದ್ದಂತಹ ಮುಖ್ಯ ಸಮಸ್ಯೆ. ಹಿಂದಿನ ಫೆಬ್ರವರಿಯಲ್ಲಿ ತಾವು ಎಬ್ಬಿಸಿರುವ ಸಮೂಹ ಸನ್ನಿಯನ್ನು ಪುನಃ ಸೃಷ್ಟಿಸುವುದು ಅವರಿಗೆ ಸಾಧ್ಯವಿರಲಿಲ್ಲ. ಕಾರಣವೆಂದರೆ ಸಂಘದ ಮತ್ತು ಅವರ ವಿರೋಧಿಗಳ ಯಥಾರ್ಥತೆ ಜನರಿಗೆ ಈಗ ಪರಿಚಯವಾಗಿತ್ತು.
ಎಂತೆಂತಹ ಮಸಲತ್ತು
ಸಂಘ ವಿರೋಧಿಗಳು ಎಂತೆಂತಹ ಮಸಲತ್ತು ನಡೆಸುತಿದ್ದರೆಂಬುದಕ್ಕೆ ನಾಗಪುರದ ಮರಾಠಿ ಸಾಪ್ತಾಹಿಕ ‘ಸಮಾಧಾನ’ದ ದಿ. 23.1.1948ರ ಸಂಚಿಕೆಯಲ್ಲಿ ಪ್ರಕಟವಾಗಿದ್ದ ಒಂದು ಸಣ್ಣ ಟಿಪ್ಪಣಿಯೇ ಸಾಕ್ಷಿ ಹೇಳುವಂತಿದೆ: ‘‘…..ಕೆಲವು ದಿನಗಳ ಹಿಂದೆ ಮುಂಬಯಿಯಲ್ಲಿ ಸಂಘ ವಿರೋಧಿ ಸಪ್ತಾಹವನ್ನು ಕೆಲವರು ಸೇರಿ ಆಚರಿಸಿದರು. ಅಂತಹ ಪ್ರಯತ್ನ ಅಮೃತಸರ, ಡಿಲ್ಲಿ ಮೊದಲಾದ ಕಡೆಗಳಲ್ಲೂ ನಡೆದಿರುವುದಾಗಿ ವರದಿಯಾಗಿದೆ. ಇದೀಗ ಎರಡು ದಿನಗಳ ಹಿಂದೆ ನಾಗಪುರದಲ್ಲೂ ಅಂತಹ ಒಂದು ಆಚರಣೆಯ ಧೂಳೆಬ್ಬಿಸಲಾಯಿತು. ಅದರಲ್ಲಿರುವವರು ಮಾಡಿದುದೇನು? ಅವರ ಸಭೆಗಳಲ್ಲಿ ಮಾಡಲಾಗಿರುವ ಭಾಷಣಗಳನ್ನು ಮತ್ತು ಘೋಷಣೆಗಳನ್ನು ಕೇಳಿದವರಿಗೆ ಅವರ ನಿಜವಾದ ಉದ್ದೇಶ ತಿಳಿಯಲು ಬೇರಾವ ಹೆಚ್ಚಿನ ವಿವರಗಳ ಅಗತ್ಯವೇ ಉಳಿಯುವುದಿಲ್ಲ…. ‘ಸಂಘದವರು ಅತ್ಯಾಚಾರಿಗಳು ‘… ಗಾಂಧಿಜಿಯವರ ಹಂತಕರು’, … ‘ಬ್ರಿಟಿಷರ ಬಾಲಬಡುಕರು’…. ಇಂತಹ ಆಧಾರರಹಿತ, ದ್ವೇಷಪೂರಿತ ಮಾತುಗಳನ್ನು ಬಿಟ್ಟಲ್ಲಿ ಇನ್ನೇನೂ ಅವರ ಬಳಿಯಿಲ್ಲ. ಸಂಘವನ್ನು ಪೂರಾ ನಾಶಮಾಡುವುದಾಗಿ ಪೌರುಷದ ಮಾತುಗಳನ್ನಷ್ಟೇ ಆಡುತ್ತಾರೆ ಅವರು. ಅಂತಹ ಪೊಳ್ಳು ಧಮಕಿ ಮತ್ತು ಆಕ್ಷೇಪಗಳನ್ನು ಬಿಟ್ಟಲ್ಲಿ ಇನ್ನೇನಿದೆ ಅವರ ಬಳಿ? ಈ ಸಭೆಗಳಲ್ಲಿ ಬ್ರಾಹ್ಮಣ ಇತ್ಯಾದಿ ಜಾತಿವಾದ ಎತ್ತಿ ಆಡಿ, ಜನರನ್ನು ಉದ್ರೇಕಗೊಳಿಸಿ ಹಿಂಸಾಚಾರದ ಪ್ರವೃತ್ತಿಯನ್ನು ಬೆಳೆಸಲಾಗುತ್ತದೆ.’
ದಿ. 12.1.1048ರ ‘ದೈನಿಕ ಮಹಾರಾಷ್ಟ್ರ’(ನಾಗಪುರ)ದಲ್ಲಿ ಪ್ರಕಟವಾದ ಲೇಖನದಲ್ಲಿ ‘‘ಸಂಘದ ಸತ್ಯಾಗ್ರಹ ಆರಂಭವಾಗಿ ಸುಮಾರಾಗಿ ಒಂದು ಕಾಲು ತಿಂಗಳು ಕಳೆಯಿತು. ಕನಿಷ್ಠ ಪಕ್ಷ ಒಂದು ಲಕ್ಷ ಮಂದಿಯಾದರೂ ಸೆರೆಮನೆ ಸೇರಿದ್ದಾರೆ. ಹಲವು ಕಡೆಗಳಲ್ಲಿ ಲಾಠಿಚಾರ್ಜ್ ಆಗಿದೆ. ಆದರೆ ಸ್ವಯಂಸೇವಕರು ಶಾಂತಿ ಭಂಗ, ಮಾಡಿರುವ ಒಂದಾದರೂ ಪ್ರಸಂಗವಿಲ್ಲ. ಆದರೆ ತದ್ವಿರುದ್ಧವಾಗಿ ಇತ್ತೀಚೆಗೆ ತಾನೇ ನಾಗಪುರದಲ್ಲಿ ಸಂಘವನ್ನು ವಿರೋಧಿಸಿ ಮೆರವಣಿಗೆಗಳು, ಸಭೆಗಳು ಆದವು. ಅದರಲ್ಲಿ ನಡೆದುದೆಲ್ಲವೂ ಅಸಭ್ಯ ನಡವಳಿಕೆ ಮತ್ತು ಉದ್ರೇಕಕಾರಿ ಭಾಷಣಗಳು ಮಾತ್ರ. ಇಷ್ಟಾದರೂ ಸ್ವಯಂಸೇವಕರು ಶಾಂತರಾಗಿಯೇ ಇರುವುದು ಅವರಿಗೆ ಶೋಭೆ ತಂದುಕೊಟ್ಟಿದೆ. ಆದರೆ ಇಂತಹ ಘಟನೆಗಳು ಮೇಲಿಂದ ಮೇಲೆ ನಡೆದಲ್ಲಿ ಸಾರ್ವಜನಿಕ ಶಾಂತಿಗೆ ಅಪಾಯ ತಟ್ಟುವ ಸಾಧ್ಯತೆಯಿದೆ. ಆಗ ಅದರ ಹೊಣೆಯೆಲ್ಲವೂ ಈ ಸಭೆ ಮತ್ತು ಮೆರವಣಿಗೆಗಳನ್ನು ಹಮ್ಮಿಕೊಂಡಿರುವ ಕಾಂಗ್ರೆಸ್ ಮತ್ತು ಅವುಗಳಿಗೆ ಅನುಮತಿ ನೀಡುವ ಸರಕಾರದ್ದೇ ಆಗುತ್ತದೆ’’.

ಸಶೇಷ

   

Leave a Reply