ಸದೃಢ ರಾಷ್ಟ್ರ ನಿರ್ಮಾಣಕ್ಕೆ ಭಾರತೀಯ ಶಿಕ್ಷಣ ವ್ಯವಸ್ಥೆ ಅಗತ್ಯ

ಹುಬ್ಬಳ್ಳಿ - 0 Comment
Issue Date : 30.12.2013


ಧಾರವಾಡ: ಸದೃಢ ಸಮಾಜ ಹಾಗೂ ರಾಷ್ಟ್ರದ ನಿರ್ಮಾಣಕ್ಕೆ ಭಾರತ ಕೇಂದ್ರಿತ ಶಿಕ್ಷಣ ವ್ಯವಸ್ಥೆಯ ಅಗತ್ಯತೆಯನ್ನು ಗುರುತಿಸಿದ್ದ ಸ್ವಾಮಿ ವಿವೇಕಾನಂದರ ಕಲ್ಪನೆಯನ್ನು ಸಾಕಾರಗೊಳಿಸುವಿಕೆಯ ಪ್ರಯತ್ನವನ್ನು ವಿದ್ಯಾಭಾರತಿ ತನ್ನ ಶಿಕ್ಷಣ ಸಂಸ್ಥೆಗಳ ಮೂಲಕ ನಡೆಸುತ್ತಿದೆ ಎಂದು ವಿದ್ಯಾಭಾರತಿಯ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕಾಶೀಪತಿ ಹೇಳಿದರು.
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ಡಿ.21ರಂದು ನಡೆದ ವಿದ್ಯಾಭಾರತಿಯ ಎರಡು ದಿನಗಳ ಪ್ರಾಂತೀಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಸ್ತಾವಿಕವಾಗಿ ಮಾತನಾಡಿದ ಅವರು, ಐರೋಪ್ಯ ಕೇಂದ್ರಿತ ಶಿಕ್ಷಣ ವ್ಯವಸ್ಥೆಯಿಂದ ಭಾರತ ಕೇಂದ್ರಿತ ಶಿಕ್ಷಣದತ್ತ ನಮ್ಮ ಶಿಕ್ಷಣ ಪದ್ಧತಿಯನ್ನು ಕೊಂಡೊಯ್ಯಬೇಕಿದೆ.ರಾಷ್ಟ್ರೀಯ ಸ್ವಯಂಸೇವಕ ಸಂಘ ದಪ್ರೇರಣೆಯಿಂದ ಪ್ರಾರಂಭವಾದ ವಿದ್ಯಾಭಾರತಿ ತನ್ನ ಚಿಂತನೆ ಹಾಗೂ ಪರಿವರ್ತನೆಯ ಮೂಲಕ ವಿಶ್ವಸನೀಯವಾದ ಯುಗಾನುಕೂಲ ಶಿಕ್ಷಣ ಪದ್ಧತಿಯ ಸ್ಥಾಪನೆಯತ್ತ ಹೆಜ್ಜೆ ಹಾಕುತ್ತಿದೆ ಎಂದು ಹೇಳಿದರು.

ಅಂಧಾನುಕರಣೆ
ಸಮಾರಂಭದಲ್ಲಿ ಆಶೀರ್ವಚನ ನೀಡಿದ ಧಾರವಾಡ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿಗಳು, ಭಾರತದ ನೆಲದಲ್ಲಿಯೇ ಉತ್ತಮ ಸಂಸ್ಕಾರಯುತ ವ್ಯಕ್ತಿಗಳ ನಿರ್ಮಾಣ ಮಾಡುವಂತಹ ಶಕ್ತಿ ಇದೆ. ಆದರೆ ಇದೆಲ್ಲವನ್ನು ಬಿಟ್ಟು ನಾವು ಇನ್ಯಾವುದೋ ಪದ್ಧತಿಯ ಅಂಧಾನುಕರಣೆ ಮಾಡುತ್ತಿರುವುದು ದುರ್ದೈವದ ಸಂಗತಿ. ಆತ್ಮಾಭಿಮಾನ, ರಾಷ್ಟ್ರಾಭಿಮಾನ ಮೂಡಿಸದ ಶಿಕ್ಷಣದಿಂದ ಸಮಾಜಕ್ಕೆ ಲಾಭವಿಲ್ಲ. ಇಂತಹ ನಿರುಪಯುಕ್ತ ಶಿಕ್ಷಣದಿಂದ ಸಮಾಜದಲ್ಲಿ ಎಲ್ಲಿಯೂ ವಿಶ್ವಾಸದ ವಾತಾವರಣ ನಿರ್ಮಾಣ ಸಾಧ್ಯವಿಲ್ಲ ಎಂದು ನುಡಿದರು.

ನೈತಿಕ ವೌಲ್ಯರಹಿತ ಶಿಕ್ಷಣದಿಂದ ಅಧಃಪತನ
ನಮ್ಮ ಸಮಾಜ ಅನುಭವಿಸುತ್ತಿರುವ ಸಾಮಾಜಿಕ ವಿಕಾರಗಳಿಗೆ ನಾವು ಅನುಸರಿಸುತ್ತಿರುವ ನೈತಿಕ ವೌಲ್ಯರಹಿತವಾದ ಶಿಕ್ಷಣ ಪದ್ಧತಿಯೇ ಪ್ರಮುಖ ಕಾರಣ ಎಂದು ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಖ್ಯಾತ ಬಾಹ್ಯಾಕಾಶ ವಿಜ್ಞಾನಿ, ಇಸ್ರೋದ ಮಾಜಿ ಅಧ್ಯಕ್ಷ ಡಾ. ಮಾಧವನ್ ನಾಯರ್ ಅಭಿಪ್ರಾಯಪಟ್ಟರು.
ನೈತಿಕ ವೌಲ್ಯಗಳ ಕೊರತೆಯಿಂದಾಗಿ ಆಸೆ, ಅಸೂಯೆಗಳ ಕಾರಣದಿಂದಾಗಿ ಎಲ್ಲರೂ ತ್ವರಿತ ಹಣ ಗಳಿಕೆಯ ಮಾರ್ಗಗಳತ್ತ ನೋಡುತ್ತಿದ್ದಾರೆ. ಇದು ಸಮಾಜದಲ್ಲಿ ಭ್ರಷ್ಟಾಚಾರ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ. ವಿದ್ಯಾರ್ಥಿ ಜೀವನದಲ್ಲಿಯೇ ನೈತಿಕ ವೌಲ್ಯಗಳ ಬಗ್ಗೆ ಶಿಕ್ಷಣ ನೀಡದಿದ್ದಲ್ಲಿ ಅದೇ ಸಾಮಾಜಿಕ ವಿಕಾರಗಳಿಗೆ ಕಾರಣವಾಗುತ್ತದೆ ಎಂದರು.
ಒಂದೆಡೆ ಪಾಶ್ಚಿಮಾತ್ಯ ದೇಶಗಳು ನಮ್ಮ ಪ್ರಾಚೀನ ಗುರು-ಶಿಷ್ಯ ಪರಂಪರೆಯತ್ತ ಸಾಗುತ್ತಿದ್ದರೆ ನಾವು ಅದರಿಂದ ವಿಮುಖರಾಗುತ್ತಿದ್ದೇವೆ. ನಮ್ಮ ಪ್ರಾಚೀನ ಶಿಕ್ಷಣ ಪದ್ಧತಿಯತ್ತ ಗಮನಹರಿಸುವುದು ಇಂದಿನ ಅವಶ್ಯಕತೆಯಾಗಿದೆ ಎಂದರು.
ಪರಮೇಶ್ವರ ಹೆಗಡೆ ಸ್ವಾಗತಿಸಿದರು. ತಾರಾಬಾಯಿ ವಂದಿಸಿದರು. ವೇದಿಕೆಯಲ್ಲಿ ಇಸ್ರೋ ಮಾಜಿ ಅಧ್ಯಕ್ಷ ಡಾ. ಮಾಧವನ್ ನಾಯರ್, ಶಾಸಕರಾದ ಅರವಿಂದ ಬೆಲ್ಲದ, ವಿದ್ಯಾಭಾರತಿ ರಾಜ್ಯ ಅಧ್ಯಕ್ಷರಾದ ಸುಂದರಂ, ಕಾರ್ಯದರ್ಶಿ ಭೀಮರೆಡ್ಡಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಆರೆಸ್ಸೆಸ್ ಕ್ಷೇತ್ರೀಯ ಪ್ರಚಾರಕ ಮಂಗೇಶ ಭೇಂಡೆ, ಕ್ಷೇತ್ರೀಯ ಸಂಪರ್ಕ ಪ್ರಮುಖ ಡಾ. ಕಲ್ಲಡ್ಕ ಪ್ರಭಾಕರ ಭಟ್, ರಾಜ್ಯಸಭಾ ಸದಸ್ಯ ಬಸವರಾಜ್ ಪಾಟೀಲ್ ಸೇಡಂ, ಸಂಘದ ಪ್ರಾಂತ ಪ್ರಚಾರಕರಾದ ಶಂಕರಾನಂದ, ಸಹ ಕಾರ್ಯವಾಹರಾದ ಶ್ರೀಧರ ನಾಡಿಗೇರ್, ಪ್ರಸನ್ನ, ಜನಸೇವಾ ವಿದ್ಯಾಕೇಂದ್ರದ ನಿರ್ಮಲ ಕುಮಾರ್, ಶ್ರೀನಿವಾಸಮೂರ್ತಿ, ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಆರ್. ಬಾಲಸುಬ್ರಹ್ಮಣ್ಯಂ, ವಿದ್ಯಾಭಾರತಿಯ ಜಿ.ಆರ್.ಜಗದೀಶ, ಸುಧಾಕರ ರೆಡ್ಡಿ, ಪ್ರೊ. ಮುಡಂಬಡಿತ್ತಾಯ ಮುಂತಾದವರು ಉಪಸ್ಥಿತರಿದ್ದರು.

   

Leave a Reply